ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖರ 1
ಗೋಚರ
ಖರ 1
ರಾವಣನ ಬಲತಾಯ ಮಗ. ವಿಶ್ರವಸನೆಂಬ ಋಷಿಯಿಂದ ರಾಕಾ ಎಂಬ ರಾಕ್ಷಸಿಯಲ್ಲಿ ಜನಿಸಿದವ. ಶೂರ್ಪಣಖಿ ಮತ್ತು ದೂಷಣರು ಈತನ ಒಡಹುಟ್ಟಿದವರು. ದಿಗ್ವಿಜಯ ಸಮಯದಲ್ಲಿ ತನಗೆ ಎದುರಾದ ಶೂರ್ಪಣಖಿಯ ಗಂಡ ವಿದ್ಯುಜ್ಜಿಹ್ವನನ್ನು ರಾವಣ ಕೊಂದಾಗ ದುಃಖಿತಳಾದ ಶೂರ್ಪಣಖಿ ರಾವಣನನ್ನು ನಿಂದಿಸಿದಳು. ಆಗ ರಾವಣ ಆಕೆಗೆ ಅಭಯ ನೀಡಿ ಆಕೆಯನ್ನು ಖರದೂಷಣರ ವಶದಲ್ಲಿರಿಸಿ ಖರನಿಗೆ ದಂಡಕಾರಣ್ಯ ರಾಜ್ಯ ಮತ್ತು 14,000 ಮಂದಿ ರಾಕ್ಷಸರನ್ನು ಕೊಟ್ಟ. ರಾಮ ಪಂಚವಟಿಯಲ್ಲಿ ಸೀತಾಲಕ್ಷ್ಮಣರೊಂದಿಗಿದ್ದಾಗ ಶೂರ್ಪಣಖಿ ರಾಮನನ್ನು ಮೋಹಿಸಿ ಲಕ್ಷ್ಮಣನಿಂದ ಕಿವಿಮೂಗುಗಳನ್ನು ಕುಯಿಸಿಕೊಂಡು ಹಿಂದಿರುಗಿ ಖರನನ್ನು ಮೊರೆಹೊಕ್ಕಳು. ಖರ ತನ್ನ 14,000 ಸೇನೆಯೊಂದಿಗೆ ರಾಮನನ್ನು ಇದಿರಿಸಿ ಸೇನಾಸಮೇತ ಹತನಾದ. ಈ ವೃತ್ತಾಂತ ರಾಮಾಯಣ, ಭಾರತಗಳಲ್ಲಿದೆ. *