ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖಾಕಿ ಪಂಥದವರು
ಖಾಕಿ ಪಂಥದವರು
ಉತ್ತರಭಾರತದ ವೈಷ್ಣವಪಂಥದವರು. ಪಾರ್ಸಿ ಭಾಷೆಯಲ್ಲಿ ಖಾಕಿ ಎಂದರೆ ಬೂದಿ ಎಂದರ್ಥ. ಈ ಜನ ಬೂದಿಯನ್ನು ಧಾರಣೆ ಮಾಡುತ್ತಾರಾಗಿ ಇವರಿಗೆ ಖಾಕಿ ಪಂಥದವರೆಂದು ಹೆಸರು ಬಂತು. ಇವರು ವೈಷ್ಣವರಾದರೂ ಕೆಲವು ಶೈವಪದ್ಧತಿಗಳನ್ನು ಅನುಸರಿಸುತ್ತಾರೆ. ಶೈವರಂತೆ ತಲೆಯ ಕೂದಲನ್ನು ಜಟೆಯಾಗಿ ಕಟ್ಟಿಕೊಳ್ಳುತ್ತಾರೆ. ಮೈಗೆಲ್ಲ ಬೂದಿ ಬಳಿದುಕೊಂಡು ಒಂದು ಲಂಗೋಟಿ ವಿನಾ ಬೇರೇನನ್ನೂ ಧರಿಸದೆ ಬರಿಮೈಯಲ್ಲಿ ತಿರುಗಾಡುತ್ತಾರೆ; ಲಕ್ಷ್ಮಣನ ಅನುಯಾಯಿಗಳೆಂದು ಹೇಳಿಕೊಳ್ಳುತ್ತಾರೆ. ರಾಮ ವನವಾಸ ಕೈಗೊಂಡಾಗ ಲಕ್ಷ್ಮಣ ಶೋಕಗೊಂಡು ಮೈಗೆಲ್ಲ ಬೂದಿ ಬಳಿದುಕೊಂಡನೆಂದೂ ಅವನ ಅನುಯಾಯಿಗಳಾದವರು ಅಂದಿನಿಂದ ಭಸ್ಮಧಾರಣೆ ಮಾಡುತ್ತ ಬಂದರೆಂದೂ ಈ ಪಂಥದವರು ಹೇಳಿಕೊಳ್ಳುತ್ತಾರೆ.
ಇವರ ಪಂಥ ಹದಿನಾರನೆಯ ಶತಮಾನದಲ್ಲಿ ಹುಟ್ಟಿಕೊಂಡಿತು. ಕೃಷ್ಣದಾಸನ ಶಿಷ್ಯನಾದ ಕಿಷ್ ಎಂಬಾತ ಇದರ ಸ್ಥಾಪಕ. ರಮಾನಂದನ ಶಿಷ್ಯ ಅನಂತಾನಂದ ಈ ಪಂಥವನ್ನು ಬೆಳೆಸಲು ಶ್ರಮಿಸಿದ. ಈ ಪಂಥದ ಮುಖ್ಯ ಕೇಂದ್ರ ಅಯೋಧ್ಯೆ. ಇಲ್ಲಿ ದಯಾರಾಮನೆಂಬುವನಿಂದ ಸ್ಥಾಪಿತವಾದ ಒಂದು ಮಠವಿದೆ. ಅಯೋಧ್ಯೆಯ ಹನುಮಾನ್ ದೇವಸ್ಥಾನದ ಅರ್ಚಕರು ಖಾಕಿಗಳು. ಗುಜರಾತಿನ ಲವಾವಾಡ ಎಂಬ ಸ್ಥಳದಲ್ಲೂ ಅಹಮದಾಬಾದಿನಲ್ಲೂ ಖಾಕಿಗಳ ಮಠಗಳಿವೆ. (ಜಿ.ಎಚ್.)