ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖಾಸಿ ಮತ್ತು ಜೈಂತಿಯ ಬೆಟ್ಟಗಳ ಜಿಲ್ಲೆ
ಖಾಸಿ ಮತ್ತು ಜೈಂತಿಯ ಬೆಟ್ಟಗಳ ಜಿಲ್ಲೆ
ಭಾರತದಲ್ಲಿ ಬ್ರಹ್ಮಪುತ್ರಾ ಮತ್ತು ಸುರ್ಮಾ ಕಣಿವೆಗಳ ನಡುವೆ ಇರುವ ಎರಡು ಬೆಟ್ಟ ಪ್ರದೇಶಗಳನ್ನೊಳಗೊಂಡ ಜಿಲ್ಲೆ. ವಿಸ್ತೀರ್ಣ 5,540 ಚ. ಮೈ. ಜನಸಂಖ್ಯೆ 5,84,812 (1971). ಮೇಘಾಲಯ ರಾಜ್ಯದಲ್ಲಿದೆ. ಪೂರ್ವಪಶ್ಚಿಮವಾಗಿ ಹಬ್ಬಿದ ಕಡಿದಾದ ಬೆಟ್ಟಸಾಲುಗಳೂ ನಡುವೆ ಪ್ರಸ್ಥಭೂಮಿಗಳೂ ಈ ಪ್ರದೇಶದ ಲಕ್ಷಣಗಳು. ದಕ್ಷಿಣದಲ್ಲಿ ಸುರ್ಮಾ ಕಣಿವೆಯಿಂದ ಮೇಲೇರಿರುವ ಪರ್ವತಗಳು ಸಮುದ್ರಮಟ್ಟದಿಂದ 4000'-6,000'ಗಳ ಎತ್ತರವಿರುವ ಪ್ರಸ್ಥಭೂಮಿಯಾಗಿ ಪರಿಣಮಿಸುತ್ತವೆ. ಇದರ ಆಡಳಿತಕೇಂದ್ರವಾದ ಷಿಲಾಂಗ್ ಈ ಪ್ರಸ್ಥಭೂಮಿಯ ಮೇಲಿದೆ. ಹೆಚ್ಚು ಮಳೆಯಾಗುವ ಚಿರಾಪುಂಜಿ ಇರುವುದು ಈ ಜಿಲ್ಲೆಯಲ್ಲೇ. ಉತ್ತರದಲ್ಲೂ ಎರಡು ಪ್ರಸ್ಥಭೂಮಿಗಳಿವೆ. ಇವು ಸ್ವಲ್ಪ ತಗ್ಗು. ಒಟ್ಟಿನಲ್ಲಿ ಇಡೀ ಪ್ರಸ್ಥಭೂಮಿಪ್ರದೇಶ ಹುಲ್ಲಿನಿಂದ ತುಂಬಿ ಹಸಿರಾಗಿದೆ. ಸಸ್ಯ ಸಂಪತ್ತು ವೈವಿಧ್ಯಮಯವಾದ್ದು. ಆರ್ಕಿಡ್ಗಳು ವಿಶೇಷ. 3,000' ಎತ್ತರದಲ್ಲಿ ಪೀತದಾರು ಹೆಚ್ಚಾಗಿ ಬೆಳೆಯುತ್ತದೆ. ಇನ್ನೂ ಎತ್ತರದಲ್ಲಿ ಓಕ್ ಮತ್ತು ಚೆಸ್ ನಟ್ ಉಂಟು. ಕಬ್ಬಿಣದ ಅದುರು ಮತ್ತು ಕಲ್ಲಿದ್ದಲ ಕೆಲವು ಮಾದರಿಗಳು ಇಲ್ಲಿವೆ.
ಕೃಷಿ ಇಲ್ಲಿಯ ಮುಖ್ಯ ಕಸಬು. ಕೈಗಾರಿಕೆ, ಸೇವಾವೃತ್ತಿ, ವ್ಯಾಪಾರ, ಸರಕುಸಾರಿಗೆ ಮುಂತಾದವುಗಳಲ್ಲಿ ನಿರತರಾದವರೂ ಇದ್ದಾರೆ. ಅಕ್ಕಿ ಮುಖ್ಯ ಆಹಾರ. ಬೆಟ್ಟಗಳ ಪಕ್ಕಗಳಲ್ಲೂ ಕಣಿವೆಗಳ ಕೆಳ ಭೂಪ್ರದೇಶಗಳಲ್ಲೂ ಬತ್ತ ಬೆಳೆಯುತ್ತಾರೆ. ಕಾಡನ್ನು ಸುಟ್ಟು ನೆಲವನ್ನು ತೆರವು ಮಾಡಿ ಅಲ್ಲಿ ಒಂದೆರಡು ವರ್ಷ ಬೆಳೆ ತೆಗೆದು ಅನಂತರ ಅದನ್ನು ಬಿಟ್ಟು ಬೇರೆಡೆಯಲ್ಲಿ ಅದೇ ರೀತಿ ಬೆಳೆ ತೆಗೆಯುವ ಕ್ರಮವೇ ಈಗಲೂ ಹೆಚ್ಚಾಗಿ ವಾಡಿಕೆಯಲ್ಲಿದೆ. ಪ್ರಕೃತಿದತ್ತ ಕಾಡನ್ನು ಹಾಳುಮಾಡುವ ಈ ಪದ್ಧತಿಯನ್ನು ಬಿಟ್ಟು ಸುಧಾರಿತ ಕೃಷಿಪದ್ಧತಿಯನ್ನು ಕೈಗೊಳ್ಳುವಂತೆ ಇಲ್ಲಿಯ ಕೃಷಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ. ಹಿಂದೆ ಈ ಜಿಲ್ಲೆ ಕಿತ್ತಲೆಹಣ್ಣಿಗೆ ಪ್ರಸಿದ್ಧವಾಗಿತ್ತು. ಈಗ ಇದಕ್ಕೆ ಉತ್ತೇಜನ ಕಡಿಮೆಯಾಗಿದೆ ಜಿಲ್ಲೆಯ ನಿವಾಸಿಗಳಲ್ಲಿ ಖಾಸಿ, ಸಿಂಟಿಂಗ್ ಮತ್ತು ಪಾರ್ಗಳು ಮುಖ್ಯರಾದವರು ಕ್ರೈಸ್ತಮತ ಪ್ರಚಾರಕರಿಂದಾಗಿ ಇಲ್ಲಿ ಆ ಮತೀಯರ ಸಂಖ್ಯೆ ಹೆಚ್ಚಾಗಿದೆ. (ಬಿ.ಎಸ್.ಎಚ್.)