ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖುದೀರಾಮ್ ಬೋಸ್

ವಿಕಿಸೋರ್ಸ್ದಿಂದ

ಖುದೀರಾಮ್ ಬೋಸ್ - 1890-1908. ಒಬ್ಬ ಬಂಗಾಲೀ ಕ್ರಾಂತಿಕಾರ. ತಂದೆ ತ್ರೈಲೋಕ್ಯನಾಥ ದೊಡ್ಡ ರಾಜಕೀಯ ನಾಯಕನಾಗಿದ್ದ. ಖುದೀರಾಮ್ ಚಿಕ್ಕವನಿರುವಾಗಲೇ ತಂದೆ ತೀರಿಹೋದ್ದರಿಂದ ಈತ ಸೋದರತ್ತೆಯ ಆಶ್ರಯದಲ್ಲಿ ಬೆಳೆದ. ಬಂಗಾಲದಲ್ಲಿ ಅರವಿಂದ ಘೋಷ್ ನೇತೃತ್ವದಲ್ಲಿ ಸ್ಥಾಪನೆಯಾದ ಯುಗಾಂತರ ಎಂಬ ಕ್ರಾಂತಿಕಾರಕ ಗುಪ್ತಸಂಸ್ಥೆಯ ಸಭಾಸದನಾದ. ಮುಝುಫರಪುರದಲ್ಲಿ ಜಿಲ್ಲಾ ನ್ಯಾಯಾಧೀಶನಾಗಿದ್ದ ಕಿಂಗ್ಸ್‍ಫರ್ಡನ ಮೇಲೆ ಬಾಂಬೆಸೆದು ಕೊಲ್ಲುವ ಉದ್ದೇಶದಿಂದ 1908ರ ಏಪ್ರಿಲ್ 30ರಂದು ಕಿಂಗ್ಸ್‍ಫರ್ಡ್ ಪ್ರವಾಸ ಮಾಡುತ್ತಿದ್ದನೆಂದು ಭಾವಿಸಲಾದ ರೈಲಿನ ಮೇಲೆ ಖುದೀರಾಮ್ ಬಾಂಬನ್ನೆಸೆದ. ಆದರೆ ಆ ಗಾಡಿಯಲ್ಲಿ ಕಿಂಗ್ಸ್‍ಫರ್ಡ್ ಇದ್ದಿರಲಿಲ್ಲ. ಅದರಲ್ಲಿ ಐರೋಪ್ಯ ವಕೀಲನೊಬ್ಬನೂ ಅವನ ಹೆಂಡತಿ ಮತ್ತು ಮಗಳೂ ಇದ್ದರು. ವಕೀಲನ ಹೆಂಡತಿಯೂ ಮಗಳೂ ಸಾವಿಗೆ ಈಡಾದರು. ಹಿಂದಿನ ಗಾಡಿಯಲ್ಲಿ ಬರುತ್ತಿದ್ದ ಕಿಂಗ್ಸ್‍ಫರ್ಡ್ ಉಳಿದುಕೊಂಡ. ಬಾಂಬೆಸೆದ ಮೇಲೆ ಖುದೀರಾಮ್ ಇಡೀ ರಾತ್ರಿ ಓಡಿ ಇಪ್ಪತ್ತು ಮೈಲು ದೂರ ಹೋದ. ಗುಪ್ತಪೋಲೀಸ್ ವಿಭಾಗದ ಸಬ್-ಇನ್ಸ್‍ಪೆಕ್ಟರ್ ನಂದಲಾಲ್ ಬ್ಯಾನರ್ಜಿ ಬೆನ್ನಟ್ಟಿ ಇವನನ್ನು ಹಿಡಿದ. ಇತರ ಕ್ರಾಂತಿಕಾರರು ನಂದಲಾಲನನ್ನು ಗುಂಡಿಕ್ಕಿ ಕೊಂದರು. ಕಾನೂನಿನ ಪ್ರಕಾರ ಖುದೀರಾಮನ ವಿಚಾರಣೆ ನಡೆದು ಇವನಿಗೆ ಫಾಸಿ ಶಿಕ್ಷೆ ವಿಧಿಸಲಾಯಿತು. 1908ರ ಆಗಸ್ಟ್ 11ರಂದು ಖುದೀರಾಮ್ ಕೈಯಲ್ಲಿ ಭಗವದ್ಗೀತೆಯನ್ನು ಹಿಡಿದು ನಗುನಗುತ್ತ ವಧಸ್ಥಳವನ್ನೇರಿ ಸಾವನ್ನಪ್ಪಿದ. ಆಗ ಈತನ ವಯಸ್ಸು 18 ಮಾತ್ರ. ಈತ ಬಾಂಬ್ ಎಸೆದ ಸ್ಥಳದಲ್ಲಿ ಈತನ ಪ್ರತಿಮೆಯನ್ನು ನಿಲ್ಲಿಸಿದ್ದಾರೆ. ಆ ಕಾಲದ ತರುಣರನೇಕರಿಗೆ ಈತ ಆದರ್ಶಪ್ರಾಯನಾಗಿದ್ದ. *