ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖ್ವಾಜಾ ಇ ಜಹಾನ್

ವಿಕಿಸೋರ್ಸ್ದಿಂದ

ಖ್ವಾಜಾ ಇ ಜಹಾನ್ - ಮಧ್ಯಯುಗೀನ ಭಾರತದಲ್ಲಿ ಆಳಿದ ಮುಸ್ಲಿಂ ಅರಸರು ತಮ್ಮ ಪ್ರಧಾನಿಗಳಿಗೆ (ವಜೀóರ್) ಸಾಮಾನ್ಯವಾಗಿ ಕೊಡುತ್ತಿದ್ದ ಒಂದು ಬಿರುದು. ಆದರೆ ಈ ಬಿರುದಿನಿಂದಲೇ ಪ್ರಸಿದ್ಧರಾದ ಹಲವು ವ್ಯಕ್ತಿಗಳು ಇತಿಹಾಸದಲ್ಲಿ ಕಾಣಸಿಗುತ್ತಾರೆ. ಅವರಲ್ಲಿ ಪ್ರಮುಖರನ್ನು ಕುರಿತ ವಿವರಗಳನ್ನು ಮುಂದೆ ಕೊಡಲಾಗಿದೆ.

1 ಅಹ್ಮದ್ ಅಯಾಜ್ó: ತೊಗಲಕ್ ಮುಹಮ್ಮದ್ ದೆಹಲಿಯ ಸುಲ್ತಾನನಾಗಿ ಅಧಿಕಾರಕ್ಕೆ ಬಂದಾಗ ಮಲ್ಲಿಕ್ (ಅಹ್ಮದ್) ಅಯಾಜûನನ್ನು ಖ್ವಾಜಾ-ಇ-ಜಹಾನ್ ಎಂದು ನೇಮಿಸಿದ. ಈತನನ್ನು ಕುರಿತಾದ ಕೆಲವು ವಿವರಗಳು ನಮಗೆ ಇಬ್ನ್ ಬತೂತನ ಬರಹಗಳಿಂದ ತಿಳಿದಿವೆ. ಸುಮಾರು 1328ರಲ್ಲಿ ಸಿಂಧ್ ಪ್ರಾಂತ್ಯದ ಕಮಲಪುರದಲ್ಲಿ ಅಲ್ಲಿಯ ಕಾಜಿó ಮತ್ತು ಖತೀಬರ ನೇತೃತ್ವದಲ್ಲಿ ದಂಗೆಯುಂಟಾದಾಗ ಅದನ್ನು ಅಡಗಿಸಲು ಖ್ವಾಜಾ ಜಹಾನನನ್ನು ಸುಲ್ತಾನ ಅಲ್ಲಿಗೆ ಕಳುಹಿಸಿದ. ಆ ಸಮಯದಲ್ಲಿ ಆ ಆಧಿಕಾರಿ ದಂಗೆಕೋರರನ್ನು ಸೆರೆಹಿಡಿದು ಅವರ ಚರ್ಮ ಸುಲಿದು ಕೊಲ್ಲಬೇಕೆಂದು ಆಜ್ಞಾಪಿಸಿದ. ಚರ್ಮ ಸುಲಿಯುವ ಚಿತ್ತಹಿಂಸಿಗೊಳಪಡಿಸದೆ ಬೇರಾವ ವಿಧಾನದಲ್ಲಿಯಾದರೂ ಅವರನ್ನು ಕೊಲ್ಲಬೇಕೆಂದು ಆ ದಂಗೆಕೋರನಾಯಕರು ಖ್ವಾಜಾ ಜಹಾನನನ್ನು ಪ್ರಾರ್ಥಿಸಿದಾಗ. ಆತ ಅದಕ್ಕೆ ಒಪ್ಪದೆ ತಾನು ಸುಲ್ತಾನನ ಅಪ್ಪಣೆಯಂತೆಯೇ ನಡೆಯುವುದಾಗಿ ತಿಳಿಸಿದ. 1351ರಲ್ಲಿ ಮುಹಮ್ಮದ್ ಸಿಂಧೂ ನದೀತೀರದ ತಟ್ಟಾ ಎಂಬ ಸೇನಾಠಾಣ್ಯದಲ್ಲಿ ಮರಣ ಹೊಂದಿದ. ನಾಲ್ಕು ದಿನಗಳ ಅನಂತರ, ಮಾರ್ಚ್ 24ರಂದು, ಫಿರೋಜûನನ್ನು ಮುಹಮ್ಮದನ ಉತ್ತರಾಧಿಕಾರಿಯಾಗಿ ಆರಿಸಲಾಯಿತು. ಸುಲ್ತಾನನ ಸೈನ್ಯದ ನಾಯಕತ್ವವನ್ನು ಮತ್ತು ರಾಜ್ಯದ ಸೂತ್ರಗಳನ್ನು ವಹಿಸುವ ನೂತನ ಹೊಣೆಯೊಂದಿಗೆ ಫಿರೋಜ್ó ದೆಹಲಿಗೆ ಹಿಂದಿರುಗಿದ. ಆದರೆ ದೆಹಲಿಯಲ್ಲಿದ್ದ. ಈ ಬೆಳವಣಿಗೆಯನ್ನರಿಯದ ವಜೀóರ ಅಯಾಜ್ó ಮುಹಮ್ಮದನ ಮಗನೆಂದು ಹೇಳಲಾದ 6 ವರ್ಷ ವಯಸ್ಸಿನ ಹುಡುಗನೊಬ್ಬನನ್ನು ದೆಹಲಿಯ ಸಿಂಹಾಸನದ ಮೇಲೆ ಕುಳ್ಳಿರಿಸಿ ಅವನಿಗೆ ಘಿಯಾಸುದೀನ್ ಮಹಮ್ಮದ್ ಎಂದು ನಾಮಕರಣ ಮಾಡಿ ಅವನು ಮುಹಮ್ಮದನ ಉತ್ತರಾಧಿಕಾರಿಯೆಂದು ಘೋಷಿಸಿದ. ಫಿರೋಜûನ ವಿರುದ್ಧವಾಗಿ ಈತ ದಂಗೆ ಎದ್ದನೆಂಬ ಭಾವನೆಗೆ ಇದು ಕಾರಣವಾಯಿತು. ವಾಸ್ತವಾಗಿ ಅಯಾಜ್ó ಸುದ್ದಿ ಸಂಗ್ರಹಿಸಲು ಕಳುಹಿಸಿದ್ದ. ಆಪ್ತ ಗುಲಾಮ ಮಾಲಿ ತುತುನ್ ವಿವರಗಳನ್ನು ಸರಿಯಾಗಿ ತಿಳಿಯದೆ, ಮುಹಮ್ಮದ್ ಮರಣಿಸಿದನೆಂದೂ, ಮಂಗೋಲರು ತಟ್ಟಾವನ್ನು ಆಕ್ರಮಿಸಿರುವರೆಂದೂ ಫಿರೋಜûನ ಬಗ್ಗೆ ತನಗೆ ಏನೂ ತಿಳಿಯದೆಂದೂ ವರದಿ ಮಾಡಿದ್ದ. ಅಯಾಜ್ó ಕೈಗೊಂಡ ಮುಂದಿನ ಕ್ರಮಗಳಿಗೆ ಈ ವರದಿಯೇ ಆಧಾರವಾಗಿತ್ತು. ಒಮ್ಮೆ ತಪ್ಪು ಹೆಜ್ಚೆಯನ್ನಿಟ್ಟ ಇವನು ಅದನ್ನು ತಿದ್ದಿಕೊಳ್ಳಲಿಲ್ಲ. ಫಿರೋಜ್ó ಸುಲ್ತಾನನಾಗಿ ಆಯ್ಕೆಯಾದನೆಂಬುದು ತಿಳಿದಾಗ ಅವನಿಗೆ ವಿಧೇಯತೆಯನ್ನು ಸೂಚಿಸದೆ ಇವನು ತನ್ನ ವಿರುದ್ಧ ಏರಿರಬಹುದೆಂದು ಊಹಿಸಿ ಯುದ್ಧ ಸಿದ್ಧತೆಗಳನ್ನು ಮಾಡಿದ. ಇವನ ಈ ನಡವಳಿಕೆಗಳಿಗೆ ದೆಹಲಿಯ ಹಲವು ಮುಖಂಡರು ಬೆಂಬಲ ನೀಡಿದ್ದರು. ಆದರೆ ಫಿರೋಜ್ó ದೆಹಲಿಯನ್ನು ಸಮೀಪಿಸಿದಾಗ ಇವನ ಬೆಂಬಲಿಗರು ಫಿರೋಜ್óನ ಪಕ್ಷ ವಹಿಸಿದರು. ಕೊನೆಗೆ ಅಯಾಜ್ó ಫಿರೋಜûನಿಗೆ ಶರಣಾದ. ಈ ವೇಳೆಗೆ ಅಯಾಜûನಿಗೆ ಸುಮಾರು 84 ವರ್ಷ ವಯಸ್ಸಾಗಿತ್ತು. ಫಿರೋಜóನಿಗೆ ಈತನನ್ನು ಕ್ಷಮಿಸಬೇಕೆಂಬ ಆಸೆ ಬಹಳವಾಗಿತ್ತು. ಆದರೆ ಫಿರೋಜûನ ಅನುಯಾಯಿಗಳು ಇದಕ್ಕೆ ಸಮ್ಮತಿಸಲಿಲ್ಲ. ಅಯಾಜûನನ್ನು 'ಸಮಾನ್ ಪ್ರಾಂತ್ಯಾಧಿಕಾರಿಯಾಗಿ ನೇಮಿಸಲಾಗಿದೆಯೆಂದು ಸುಳ್ಳು ಹೇಳಿ, ಅವನು ಅಲ್ಲಿಗೆ ಹೊರಟಾಗ ಅವನ ಹಿಂದೆ ಷೇರ್ ಖಾನ್ ಎಂಬವನನ್ನು ಕಳಿಸಿದರು. ವಸ್ತುಸ್ಥಿತಿಯನ್ನು ಅರಿತ ಅಯಾಜ್ó ದೇವರಿಗೆ ಪ್ರಾರ್ಥನೆ ಸಲ್ಲಿಸಿ ಶಿರಸ್ಸನ್ನು ನೆಲಕ್ಕೆ ಬಾಗಿಸಿದಾಗ ಅವನ ಕೋರಿಕೆಯ ಪ್ರಕಾರ ಅವನ ಮಿತ್ರನೊಬ್ಬ ಅವನ ಶಿರಚ್ಛೇದ ಮಾಡಿದನೆಂದು ಹೇಳಲಾಗಿದೆ.

2 ನೂರುದ್ದೀನ್: ಮಹಮ್ಮದ್ ತೊಗಲಕನ ಕಾಲದಲ್ಲಿ ತಾತ್ಕಾಲಿಕವಾಗಿ ದಖನಿನ ಸುಲ್ತಾನನಾಗಿದ್ದ ಇಸ್ಮಾಯಿಲ್ ಮುಖ್‍ನಿಂದ ಖ್ವಾಜಾ ಇ ಜಹಾನ್ ಬಿರುದು ಪಡೆದಿದ್ದಾತ. ಮಹಮ್ಮದ್ ತೊಗಲಕ್ ತನ್ನ ರಾಜ್ಯದ ದಖನ್ ವಿಭಾಗಕ್ಕೆ ಅಧಿಕಾರಿಯಾಗಿ ನೇಮಿಸಿದ್ದ ಖ್ಮತ್ಲುಗ್‍ಖಾನನ ವಿರುದ್ಧವಾಗಿ ಅಲ್ಲಿಯ ರಾಜಕೀಯ ಪಕ್ಷ ಸುಲ್ತಾನನಲ್ಲಿ ದೂರಿಕೊಂಡಾಗ (1345) ಸುಲ್ತಾನ ಖ್ಮತ್ಲುಗನನ್ನು ಹಿಂದಕ್ಕೆ ಕರೆಸಿ ಕೊಂಡು ಅವನ ಸ್ಥಳದಲ್ಲಿ ಅವನ ತಮ್ಮನಾದ ಅಲೀಮುಲ್ ಮುಲ್ಕನನ್ನು ತಾತ್ಕಾಲಿಕವಾಗಿ ನೇಮಿಸಿದ್ದ. ಖುತ್ಲುಗ್ ದೆಹಲಿಗೆ ಹಿಂದಿರುಗಿದ ಮೇಲೆ ಇಮದುಲ್ ಮುಲ್ಕ್ ಸರ್ತೇ ಜ ದಖನಿನ ವೈಸ್‍ರಾಯ್ ಆಗಿ ನೇಮಕಗೊಂಡ. ಆದರೆ ಇವನೂ ಇವನೊಡನೆ ನೇಮಕಗೊಂಡ. ಇತರ ಅಧಿಕಾರಿಗಳೂ ಸದರ್ ಅಮೀರರಿಗೆ ಒಪ್ಪಿಗೆಯಾಗಲಿಲ್ಲ. ಅವರು ದಂಗೆಯೆದ್ದರು. ಇದನ್ನು ಅಡಗಿಸಲು ಸುಲ್ತಾನನೇ ಗುಜರಾತಿಗೆ ಬಂದ. ದೌಲತಾಬಾದಿಲನಲ್ಲಿ ದಂಗೆಯೆದ್ದಿದ್ದ ಸದರ್ ಅಮೀರರನ್ನು ವಿಚಾರಣೆಗೆ ಗುರಿಪಡಿಸಲು ಬ್ರೋಚ್‍ಗೆ ಕಳುಹಿಸಬೇಕೆಂದು ಅಜ್ಞಾಪಿಸಿದ. ಮಲಿಕ್ ಅಹ್ಮದ್ ಲಾಚಿನ್ ಮತ್ತು ಖಲ್ತಷ್ ಎಂಬ ಇಬ್ಬರು ಅಧಿಕಾರಿಗಳು ಇವರನ್ನು ಕರೆದೊಯ್ಯುತ್ತಿದ್ದಾಗ ಮಾರ್ಗದಲ್ಲಿ ಇವರು ಆ ಅಧಿಕಾರಿಗಳನ್ನು ಕೊಂದು ದೌಲತಾಬಾದಿಗೆ ಹಿಂದಿರುಗಿ, ಅಲ್ಲಿ ಪ್ರಾಂತ್ಯಾಧಿಕಾರಿಯಾಗಿದ್ದ ಅಲಿಮುಲ್ ಮುಲ್ಕನನ್ನು ಬದಿಗಿರಿಸಿ, ತಮ್ಮಲ್ಲಿ ಒಬ್ಬನಾದ ಇಲ್ಮಾಯಿಲ್ ಮುಖ್‍ನನ್ನು ತಾತ್ಕಾಲಿಕವಾಗಿ ದಖನಿನ ಸುಲ್ತಾನನೆಂದು ಆರಿಸಿದರು. ಈತ ನೂರುದ್ದೀನನನ್ನು ಖ್ವಾಜಾ ಇ ಜಹಾನನೆಂದು ನೇಮಿಸಿಕೊಂಡ. ಸುಲ್ತಾನನ ಉಳಿದ ಸೈನ್ಯವನ್ನು ಓಡಿಸಲು ಖ್ವಾಜಾ ಜಹಾನ್ ಗುಲ್ಬರ್ಗಕ್ಕೂ ಜಫರ್ ಖಾನ್ ಎಂಬ ಬಿರುದು ಪಡೆದಿದ್ದ ಹಸನ್ ಗಂಗು ಎಂಬವನು ಸಾಗರಕ್ಕೂ ಹೋಗಿ ಅಲ್ಲಿಯ ವಿರೋಧವನ್ನು ಅಡಗಿಸಿ ಹಿಂದಿರುಗಿದರು. ಆದರೆ ಈ ವೇಳೆಗೆ ಮಹಮ್ಮದ್ ಸ್ವತಃ ದೌಲತಾಬಾದಿಗೆ ಬಂದಿದ್ದ. ಇಸ್ಮಾಯಿಲನ ವಿರುದ್ಧವಾಗಿ ನೂರುದ್ದೀನ್ ಮತ್ತು ಜಫರ್ ಖಾನರು ಒಟ್ಟಿಗೆ ಕಾದಾಡಿದರು. ಯುದ್ಧದಲ್ಲಿ ನೂರುದ್ದೀನ್ ಖ್ವಾಜಾ ಜಹಾನನಿಗೆ ಬಾಣವೊಂದು ತಗುಲಿ ಆತ ಸತ್ತ. ಇದರ ಪರಿಣಾಮವಾಗಿ ಇಸ್ಮಾಯಿಲನ ಸೈನ್ಯ ಸೋಲನ್ನನುಭವಿಸಿತು. (ಜಿ.ಬಿ.ಆರ್.)

                                                                                               3 ಮಲಿಕ್ ಸರ್ವಾರ್: 1394ರಲ್ಲಿ ಅಸ್ತಿತ್ವಕ್ಕೆ ಬಂದ ಷಾರ್ಖಿ ಸ್ವತಂತ್ರ ರಾಜಮನೆತನದ ಸ್ಥಾಪಕ. ಈತ ನಪುಂಸಕ. ಮೊದಲು ಈತ ಫಿರೋeóï ಷಹ ತೊಗಲಕನ ಆಶ್ರಯದಲ್ಲಿ ಒಬ್ಬ ಅಧಿಕಾರಿಯಾಗಿದ್ದ. ಇವನ ಅಂದಿನ ಸ್ಥಾನಮಾನಗಳ ಬಗ್ಗೆ ಖಚಿತವಾಗಿ ಏನೂ ತಿಳಿಯದು. ಆದರೆ ಫಿರೋಜûನ ಮರಣದ ಬಳಿಕ ಸುಲ್ತಾನನ ಸಿಂಹಾಸನಕ್ಕಾಗಿ ನಡೆದ ಒಳಜಗಳದಲ್ಲಿ ಈತ ಪ್ರಮುಖ ಪಾತ್ರ ವಹಿಸಿದ. ಸುಲ್ತಾನ್ ಅಬು ಬಕರ್‍ನ ಕಾಲದಲ್ಲಿ ಷಹ್ನ ಇ ಷಹರ್ ಎಂಬ ಅಧಿಕಾರದಲ್ಲಿ ಈತ ಮುಂದುವರಿದ. ಫಿರೋಜûನ ಕಿರಿಯ ಮಗನಾದ ಮುಹಮ್ಮದ್ ಷಹನ ಬೆಂಬಲಿಗನಾಗಿದ್ದ. ಅಬು ಬಕರನ ವಿರುದ್ಧ ಮುಹಮ್ಮದ್ ಹೋರಾಡತೊಡಗಿದ. ಸರ್ವಾರ್ 50,000 ಸೈನ್ಯಬಲದೊಡನೆ ಮುಹಮ್ಮದನನ್ನು ಕೂಡಿಕೊಂಡ. ಇವನೊಂದಿಗೆ ಕೆಲವರು ಪ್ರಾಂತ್ಯಾಧಿಕಾರಿಗಳೂ ಸೇರಿದರು. ಇದರಿಂದ ತುಷ್ಟನಾದ ಮುಹಮ್ಮದ್ ಇವನನ್ನು ವಜಿûೀರನಾಗಿ ನೇಮಿಸಿಕೊಂಡು ಇವನಿಗೆ ಖ್ವಾಜಾ ಜಹಾನನೆಂಬ ಬಿರುದನ್ನಿತ್ತ. ಆದರೆ ಕುಂಡ್ಲಿಯ ಕದನದಲ್ಲಿ ಮುಹಮ್ಮದ್ ಸೋತು ಸರ್ವಾರನೊಂದಿಗೆ ಜಲೇಸರಕ್ಕೆ ಹಿಂದಿರುಗಿದ. ಒಂದು ವರ್ಷದೊಳಗೆ ದೆಹಲಿಯ ರಾಜಕೀಯ ಪರಿಸ್ಥಿತಿಗಳು ಮಹಮ್ಮದನಿಗೆ ಅನುಕೂಲಕರವಾಗಿ ಪರಿಣಮಿಸಿದುವು. ಅಲ್ಲಿಯ ಅಮೀರರು ಮುಹಮ್ಮದನನ್ನು ಸುಲ್ತಾನ್ ಪದವಿಗೇರಿಸಿದರು. ಅವರಲ್ಲಿ ಪ್ರಮುಖನಾದ ಮೀರ್ ಹಜಿûೀಬ್ ಸುಲ್ತಾನಿಯನ್ನು ಮುಹಮ್ಮದ್ ತನ್ನ ವಜಿûೀರನಾಗಿಯೂ ಸರ್ವಾರನನ್ನು ಅವನ ಸಹಾಯಕನಾಗಿಯೂ (ನಾಯಿಬ್) ನೇಮಿಸಿದ. ಇದು ಸರ್ವಾರನಿಗೆ ತೃಪ್ತಿ ನೀಡಲಿಲ್ಲ. ಮುಹಮ್ಮದ್ ಜಿಲೇಸರದಲ್ಲಿ ಮುಹಮ್ಮದಾಬಾದ್ ಕೋಟೆಯನ್ನು ಕಟ್ಟಿಸುತ್ತಿದ್ದಾಗ ವಜಿûೀರ ಆತನ ವಿರುದ್ಧ ದಂಗೆ ಎದ್ದಿರುವನೆಂದು ಸುಲ್ತಾನನಲ್ಲಿ ಆರೋಪಣೆ ಸಲ್ಲಿಸಿದ. ದೆಹಲಿಗೆ ಹಿಂದಿರುಗಿದ ಸುಲ್ತಾನ ಯಾವ ವಿಚಾರಣೆಯನ್ನೂ ಮಾಡದೆ ಸುಲ್ತಾನಿಯನ್ನು ಗಲ್ಲಿಗೇರಿಸಿ ಸರ್ವಾರನನ್ನು ವಜಿûೀರ್ ಖ್ವಾಜಾ ಜಹಾನನಾಗಿ ನೇಮಿಸಿದ. ಸರ್ವಾರ್ ಈ ಪದವಿಯಲ್ಲಿ 1394ರ ವರೆಗೂ ಮುಂದುವರಿದ. ಆ ವೇಳೆಗೆ ಮುಹಮ್ಮದ್ ಷಹ ತೀರಿಕೊಂಡು ಅಲ್ಲಾವುದ್ದೀನ್ ಸಿಕಂದರ್ ಷಹ ಸುಲ್ತಾನನಾದ. ಈತನ ಬಳಿಕ, 1394ರ ಮಾರ್ಚ್ ತಿಂಗಳಲ್ಲಿ ಸರ್ವಾರ್ ಅನೇಕರ ಮನವೊಲಿಸಿಕೊಂಡು ಮುಹಮ್ಮದನ ಕೊನೆಯ ಮಗನಾದ ಮಹಮೂದನನ್ನು ಪಟ್ಟಕ್ಕೇರಿಸಿದ.

ಇಷ್ಟರಲ್ಲಿ ಜೌನ್‍ಪುರದಲ್ಲಿ ಅಶಾಂತ ಪರಿಸ್ಥಿತಿ ತಲೆದೋರಿದ ಕಾರಣ ಮಹಮೂದ್ ಸರ್ವಾರನನ್ನು ಅಲ್ಲಿಗೆ ಕಳುಹಿಸಿದ. ಸುಲ್ತಾನಸ್ ಷಾರ್ಖ್ ಎಂಬ ಬಿರುದನ್ನು ಪಡೆದು ಅಲ್ಲಿಗೆ ಬಂದ ಸರ್ವಾರ್ ಎಟಾವ, ಕೋಲಿ, ಕನೌಜ್ ಮುಂತಾದ ಕಡೆಗಳಲ್ಲಿ ತಲೆದೋರಿದ್ದ ಗಲಭೆಗಳನ್ನು ಅಡಗಿಸಿ ಕ್ರಮೇಣ ಅಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡ. ಇಷ್ಟರಲ್ಲಿ ತೈಮೂರ ದೆಹಲಿಯ ಮೇಲೆ ದಂಡೆತ್ತಿ ಬಂದ. ತತ್ಪರಿಣಾಮವಾಗಿ ಉಂಟಾದ ಅನಿಶ್ಚಿತ ಪರಿಸ್ಥಿತಿಯ ಲಾಭ ಪಡೆದು ಸರ್ವಾರ್ ಜೌನ್‍ಪುರದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡು ಆ ಸುತ್ತಲಿನ, ಎಂದರೆ ಕನೌಜಿನಿಂದ ಬಿಹಾರದ ವರೆಗಿನ, ಪ್ರದೇಶದ ಸುಲ್ತಾನನಾದ. ಹೀಗೆ ಅಲ್ಲಿ ಷಾರ್ಖ್ ಮನೆತನ ಅಸ್ತಿತ್ವಕ್ಕೆ ಬಂತು. ಅನಂತರ ಇವನು ಈಗಿನ ಅಲೀಗಢ, ಮೊರಾದಾಬಾದ್, ಮೈನ್‍ಪುರಿ ಜಿಲ್ಲೆ ಮುಂತಾದವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಸುಮಾರು ಐದು ವರ್ಷಗಳ ಆಳ್ವಿಕೆಯ ಬಳಿಕ ಆಕಸ್ಮಿಕವಾಗಿ 1399ರಲ್ಲಿ ಸರ್ವಾರ್ ಮರಣಹೊಂದಿದ. ದೆಹಲಿಯ ಸುಲ್ತಾನನ ಕೈಕೆಳಗೆ ನುರುತ ಅಧಿಕಾರಿಯೂ ಸೇನಾನಿಯೂ ಆಗಿದ್ದ ಈತ ಶೀಘ್ರದಲ್ಲಿ ತನ್ನ ರಾಜ್ಯದಲ್ಲಿ ಸುವ್ಯವಸ್ಥಿತವಾದ ಆಡಳಿತ ರೂಪಿಸಿದ. ಅತೃಪ್ತರಾಗಿದ್ದ ಪ್ರಜೆಗಳನ್ನೂ ಭೂಮಾಲೀಕರನ್ನೂ ತನ್ನ ನಿಷ್ಠಾವಂತ ಪ್ರಜೆಗಳಾಗುವಂತೆ ಮನವೊಲಿಸಿಕೊಂಡ. ರಾಜಧಾನಿಯಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿ ಅದನ್ನು ಹೆಚ್ಚು ಸುಂದರವಾದ ನಗರವನ್ನಾಗಿ ಮಾಡಿದ. ಬಹು ಬೇಗ ಅದು ಸಾಹಿತ್ಯ ಸಂಸ್ಕøತಿಗಳ, ಸೌಂದರ್ಯದ ನೆಲೆವೀಡಾಗಿ ಅನೇಕರ ಮೆಚ್ಚುಗೆ ಪಡೆಯಿತು. (ಆರ್.ಜಿ.ಎಸ್.; ಜಿ.ಬಿ.ಆರ್.)

4 ಖ್ವಾಜಾ ಇ ಜಹಾನ್ ತುರ್ಕ್: ಬಹಮನಿ ರಾಜ್ಯದ ಸುಲ್ತಾನನಾಗಿದ್ದ ಹುಮಾಯೂನ್ ಷಹನ (1458-61) ಪ್ರಧಾನಿಯಾಗಿದ್ದ ಮಹಮ್ಮದ್ ಗವಾನನ ಸಹೋದ್ಯೋಗಿ. ಸುಲ್ತಾನನ ಪ್ರತಿಸ್ಪರ್ಧಿಯಾಗಿದ್ದ ಸಿಕಂದರನನ್ನು ಕದನದಲ್ಲಿ ಸೋಲಿಸುವುದರಲ್ಲಿ ಇವರಿಬ್ಬರೂ ಸುಲ್ತಾನನಿಗೆ ನೆರವಾದರು. ಸಿಕಂದರ್ ಪ್ರಾಣ ಕಳೆದುಕೊಂಡ. ಸಿಕಂದರನಿಗೆ ವೆಲಮವಂಶದ ಲಿಂಗ ಸಹಾಯ ಮಾಡಿದನೆಂಬ ಕಾರಣದಿಂದ ಇವರು ಆತನ ಮೇಲೆ ದಂಡೆತ್ತಿ ಹೋಗಿ ದೇವರಕೊಂಡ ಕೋಟೆಯನ್ನು ಮುತ್ತಿದರು. ಲಿಂಗನ ಸಹಾಯಕ್ಕೆ ಗಜಪತಿ ವಂಶದ ಹಮ್ಮೀರ ಧಾವಿಸಿ ಸುಲ್ತಾನನ ಸೈನ್ಯವನ್ನು ಸೋಲಿಸಿದ.

ಹುಮಾಯೂನ್ 1461ರಲ್ಲಿ ಮಡಿದ. ಆತನ ಅನಂತರ ಆತನ ಎಂಟು ವರ್ಷದ ಮಗನಾದ ಅಹ್ಮದ್‍ಖಾನ್ (3ನೆಯ ನಿಜಾಮುದ್ದೀನ್ ಅಹ್ಮದ್) ಪಟ್ಟಕ್ಕೆ ಬಂದ. ಈತ ಪ್ರಾಪ್ತವಯಸ್ಕನಾಗುವ ವರೆಗೂ ರಾಜ್ಯದ ಆಡಳಿತವನ್ನು ನಡೆಸಲು ವಿಧವೆಯಾದ ರಾಣಿ ಮಕ್ದುಮಾ-ಇ-ಜಹಾನ್ ನರ್ಗಿಸ್ ಬೇಗಂ ಒಂದು ಅಧಿಕಾರ ಮಂಡಳಿಯನ್ನು ನೇಮಿಸಿದಳು. ಆಕೆಯೂ ಖ್ವಾಜಾ ಜಹಾನ್ ತುರ್ಕ್, ಮಹಮ್ಮದ್ ಗವಾನ್ ಇವರೂ ಆ ಮಂಡಳಿಯಲ್ಲಿದ್ದರು. ಆ ವೇಳೆಗೆ ಬಹಮನಿಯಲ್ಲಿ ಹೊಸದಾಗಿ ಹೊರಗಿನಿಂದ ಬಂದ ಮಹಮ್ಮದೀಯರ ಒಂದು ಪಂಗಡವಾದ ಅಫಕಿಗೂ ಅಲ್ಲಿಯೇ ಇದ್ದ, ಹೆಚ್ಚಾಗಿ ಮತಾಂತರಗೊಂಡ, ಮಹಮ್ಮದೀಯರ ಇನ್ನೊಂದು ಪಂಗಡವಾದ ದಖನಿಗೂ ನಡುವೆ ಭಿನ್ನಾಪ್ರಾಯಗಳು ತಲೆದೋರಿದುವು. ಗವಾನ್ ಹೊರಗಿನಿಂದ ಬಂದವನೆಂದು ಪರಿಗಣಿತನಾಗಿದ್ದ ಕಾರಣ, ಆತ ರಾಜ್ಯದ ನೀತಿಯನ್ನು ಬಹಳ ಜಾಗರೂಕತೆಯಿಂದ ರೂಪಿಸಬೇಕಾಗುತ್ತಿತ್ತು. ಈ ನಾಯಕತ್ರಯರ ಆಡಳಿತ ದಕ್ಷರೀತಿಯಲ್ಲಿ ನಡೆಯುತ್ತಿತ್ತು. ಆಡಳಿತದ ಮೊದಲ ಹೆಜ್ಜೆಯಾಗಿ ಎಲ್ಲ ರಾಜಕೀಯ ಕೈದಿಗಳಿಗೂ ಕ್ಷಮಾದಾನವಿತ್ತು ಅದು ವರೆಗೆ ಸರ್ಕಾರಿ ಸೇವೆಯಲ್ಲಿಲ್ಲದಿದ್ದ ಪಂಡಿತರಿಗೂ ದಕ್ಷರಿಗೂ ಸೇವಾಸೌಕರ್ಯಗಳನ್ನು ಏರ್ಪಡಿಸಿದರು. ಇಷ್ಟಾದರೂ ಎರಡೂ ಪಂಗಡಗಳ ನಡುವೆ ದ್ವೇಷಭಾವನೆಗಳು ಹೊಗೆಯಾಡುತ್ತಲೇ ಇದ್ದುವು.

ಹುಡುಗನೊಬ್ಬ ಸಿಂಹಾಸನಾರೂಢನಾದುದನ್ನು ತಿಳಿದ ನೆರೆಯ ಅರಸರು ಬಹಮನಿ ರಾಜ್ಯದ ಮೇಲೆ ದಂಡೆತ್ತಿ ಬಂದರು. ಹಾಗೆ ಬಂದವರಲ್ಲಿ ಮೊದಲಿಗ ಒರಿಸ್ಸದ ಗಜಪತಿ ವಂಶದ ಕಪಿಲೇಶ್ವರ. ಆದರೆ ಈತ ರಾಜಧಾನಿಯ ವರೆಗೂ ನಿರಾಯಾಸವಾಗಿ ಬಂದರೂ, ಅಲ್ಲಿ ಸೋಲನ್ನನುಭವಿಸಿ ಓಡಿಹೋದ. ಖಾಂದೇಶದ ಸುಲ್ತಾನ ಹಾಗೂ ಕಪಿಲೇಶ್ವರರೊಡಗೂಡಿ ಮಾಲವದ ಮಹಮೂದ್ ಖಲ್ಜಿ ಈ ರಾಜ್ಯದ ಮೇಲೆ ದಂಡೆತ್ತಿ ಬಂದಾಗ ಖ್ವಾಜಾ ಇ ಜಹಾನ್ ಇತರರೊಡಗೂಡಿ ರೋಷಾವೇಶದಿಂದ ಹೋರಾಡಿದ. ಹುಡುಗನಾಗಿದ್ದ ಸುಲ್ತಾನನೂ ಇದರಲ್ಲಿ ಸ್ವತಃ ಪಾಲ್ಗೊಂಡಿದ್ದ. ಆದರೆ ಸೈನ್ಯದಲ್ಲಿದ್ದ ಒಂದು ಆನೆ ಒಮ್ಮೆ ರೊಚ್ಚಿಗೆದ್ದಾಗ ಸುಲ್ತಾನ ಕುಳಿತಿದ್ದು ಕುದುರೆ ಸಹ ದಿಕ್ಕೆಟ್ಟು ಓಡಿತು. ಆಗ ಸಿಕಂದರ್ ಖಾನ ಸುಲ್ತಾನನನ್ನು ಕಷ್ಟದಿಂದ ರಕ್ಷಿಸಿದ. ಖ್ವಾಜಾ ಇ ಜಹಾನ್, ಗವಾನ್ ಮತ್ತು ಇತರರು ದಿಗ್ಭ್ರಾಂತರಗಿ ಬಿದರೆಗೆ ಹಿಂದಿರುಗಿ ಸುಲ್ತಾನನ ಪ್ರಾಣವನ್ನು ಉಳಿಸಲು ಅಲ್ಲಿಂದ ಗುಲ್ಬರ್ಗದ ಸಮೀಪವಿರುವ ಫಿರೂಜಾಬಾದಿಗೆ ಓಡಿದರು. ಅಲ್ಲಿಂದ ಗುಜರಾತಿನ ಸುಲ್ತಾನನ ಸಹಾಯ ಪಡೆದು ಖಲ್ಜಿಯನ್ನು ಕೊನೆಗೂ ಹಿಮ್ಮೆಟ್ಟಿಸಿದರು. ಮಹಮೂದ್ ಖಲ್ಜಿಯನ್ನು ಖ್ವಾಜಾ ಇ ಜಹಾನ್ ಅಟ್ಟಿಸಿಕೊಂಡುಹೋದ (1462).

ಆದರೆ 1463ರಲ್ಲಿ ಸುಲ್ತಾನ್ ಅಹಮ್ಮದ್ ತನ್ನ ಮದುವೆಯ ರಾತ್ರಿ ಅಕಸ್ಮಾತ್ ಮರಣಹೊಂದಿದ. ಅವನ ಅನಂತರ ಆತನ ತಮ್ಮ ಮಹಮ್ಮದ್‍ಖಾನ್ 3ನೆಯ ಷಂಸುದ್ದೀನ್ ಮಹಮ್ಮದ್ ಎಂಬ ಬಿರುದಿನಿಂದ ಸಿಂಹಾಸನಾರೂಢನಾದ. ಇದಾದ ಕೆಲವೇ ದಿನಗಳಲ್ಲಿ ಖ್ವಾಜಾ ಇ ಜಹಾನ್ ತುಂಬಿದ ರಾಜಸಭೆಯಲ್ಲಿ ಕೊಲೆಗೆ ಈಡಾದ. ದುರಾದೃಷ್ಟವಶಾತ್ ಆ ವೇಳೆಗೆ ಈತ ತನ್ನ ದುಡುಕಿನ ಪ್ರವೃತ್ತಿಯಿಂದಾಗಿ ರಾಣಿಯ ವಿಶ್ವಾಸ ಕಳೆದುಕೊಂಡಿದ್ದ. ಹಿಂದಿನ ಸುಲ್ತಾನನನ್ನು ರಣರಂಗದಲ್ಲಿ ಕಾಪಾಡಿದ ಸಿಕಂದರನನ್ನು ಈತ ಸೆರೆಮನೆಗೆ ಕಳುಹಿಸಿದುದೂ ಒಂದು ಕಾರಣ. ಜೊತೆಗೆ, ಅಧಿಕಾರ ಮದದಿಂದ ಪ್ರಜಾಪೀಡಕನಾಗಿ ಜನತೆಯ ವಿಶ್ವಾಸವನ್ನೂ ಕಳೆದುಕೊಂಡಿದ್ದ. ಈ ಎಲ್ಲ ಕಾರಣಗಳಿಂದ ಇವನ ಸಾವು ಯಾರಿಗೂ ಖೇದವನ್ನುಂಟುಮಾಡಲಿಲ್ಲ.

ಖ್ವಾಜಾ ಇ ಜಹಾನ್ ತುರ್ಕನ ಮರಣದೊಂದಿಗೆ ನಾಯಕತ್ರಯರ ಆಡಳಿತ ಕೊನೆಗೊಂಡಿತು. ರಾಣಿ ರಾಜಕೀಯದಿಂದ ಹಿಂದೆ ಸರಿದಳು. ಮಹಮ್ಮದ್ ಗವಾನ್ ಪ್ರಧಾನಿಯಾಗಿ ನೇಮಕಗೊಂಡು ಸುಲ್ತಾನನಿಂದ ಖ್ವಾಜ ಇ ಜಹಾನನೆಂಬ ಬಿರುದನ್ನು ಪಡೆದ.

ಆದರೆ ಇತಿಹಾಸದಲ್ಲಿ ಈತ ಹೆಚ್ಚಾಗಿ ಗವಾನನೆಂದೇ ಪ್ರಸಿದ್ಧನಾಗಿದ್ದಾನೆ.

5 ಖ್ವಾಜಾ ಸುರೂರ್: ದಕ್ಷಿಣ ಭಾರತದ ಮಧುರೆಯಲ್ಲಿ 1344-45ರಿಂದ ಆಳತೊಡಗಿದ ಸುಲ್ತಾನ್ ನಸೀರುದ್ದೀನನ ವಜಿûೀರನಾಗಿದ್ದ ಬದ್ರುದ್ದೀನ್ ಮರಣ ಹೊಂದಿದಾಗ ಆತನ ಸ್ಥಾನಕ್ಕೆ ನೇಮಕಗೊಂಡಿದ್ದ ಖ್ವಾಜಾ ಸುರೂರನಿಗೆ (ನೌಕಾದಳದ ಅಧಿಪತಿ) ಖ್ವಾಜಾ ಇ ಜಹಾನ್ ಎಂಬ ಬಿರುದು ಕೊಡಲಾಗಿತ್ತು. ಯಾರೇ ಆಗಲಿ ತನ್ನನ್ನು ಬೇರಾವ ರೀತಿ ಸಂಬೋಧಿಸಿದರೂ ಅವರು ನಿಗದಿಯಾದ ದಿನಾರಗಳನ್ನು ದಂಡವಾಗಿ ಕೊಡಬೇಕೆಂದು ಆತ ವಿಧಿಸಿದ್ದ. ದೆಹಲಿಯ ಸುಲ್ತಾನನ ಪದ್ಧತಿಯನ್ನು ಅನುಸರಿಸಿದ್ದು ಇವನ ಇಂಥ ಪ್ರತಿಷ್ಠೆಗೆ ಕಾರಣವಾಗಿತ್ತು. (ಜಿ.ಬಿ.ಆರ್.)