ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಂಗಾಧರರಾವ್, ಎಂ ಎನ್
ಗಂಗಾಧರರಾವ್, ಎಂ ಎನ್ (1888-1961). ಕನ್ನಡ ನಾಟಕರಂಗದಲ್ಲಿ ಪ್ರಸಿದ್ಧಿ ಗಳಿಸಿದ ಒಬ್ಬ ನಟ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು, ಮೂಕನ ಹಳ್ಳಿ ಪಟ್ಟಣದಲ್ಲಿ ಹುಟ್ಟಿದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿ, ಅಣ್ಣ, ಅತ್ತಿಗೆಯರ ಆಶ್ರಯದಲ್ಲಿ ಬೆಳೆದರು. ಇವರ ಜೀವನದ ಮೊದಲ ಹಾಗೂ ಕೊನೆಯ ದಿನಗಳು ಅಷ್ಟೇನೂ ಸುಖಮಯವಾಗಿರಲಿಲ್ಲ. ಎಪ್ಪತ್ತಮೂರು ವರ್ಷಗಳ ದೀರ್ಘಜೀವನ ನಡೆಸಿ, ಕನ್ನಡನಾಡಿನ ಹಾಗೂ ದಕ್ಷಿಣಭಾರತದ ವಿವಿಧ ಭಾಗಗಳಲ್ಲಿ ಸುತ್ತಿ ನಾಟಕ ಪ್ರದರ್ಶನಗಳನ್ನು ಅದ್ದೂರಿಯಾಗಿ ನಡೆಸಿ ಹುಟ್ಟಿದ ಊರಿಗೇ ಹಿಂತಿರುಗಿ ಅಸುನೀಗಿದರು.
ಗಂಗಾಧರರಾಯರಿಗೆ ವಿದ್ಯೆ ಹತ್ತಲಿಲ್ಲ. ಭಜನೆ, ಸಂಗೀತ, ಹರಿಕಥೆ, ನಾಟಕ ಮೊದಲಾದವುಗಳಲ್ಲಿ ಹೆಚ್ಚಿನ ಆಸಕ್ತಿ ಉಂಟಾಯಿತು. ಆತ್ಮೀಯ ಬಂಧು ವೆಂಕಟನಾರಾಯಣ ಜೋಯಿಸರಲ್ಲಿ ಸಂಗೀತ, ಗಮಕಗಳ ಅಭ್ಯಾಸ ಮಾಡಿದರು. ಪಿಟೀಲು ವಿದ್ವಾನ್ ಪುಟ್ಟಣ್ಣಯ್ಯನವರಿಂದಲೂ ಪಾಠವಾಯಿತು. ವಯಸ್ಸಿಗೆ ಬಂದಮೇಲೆ ಅಧ್ಯಾಪಕವೃತ್ತಿ ಹಿಡಿದರು. ಅನಂತರ ಪೋಲೀಸ್ ಕಚೇರಿಯಲ್ಲಿ ಗುಮಾಸ್ತರಾದರು. ಕೆಲಕಾಲ ವ್ಯವಸಾಯ ಮಾಡಿದರು. ಕೊನೆಗೆ ಮೂಕಿ ಸಿನಿಮಾ ನಡಸುವ ಉದ್ಯೋಗದಲ್ಲೂ ತೊಡಗಿದ್ದುಂಟು ಗುಬ್ಬಿ ಕಂಪನಿ ನಾಟಕಗಳಿಂದ ಪ್ರಭಾವಿತರಾಗಿ ಧರ್ಮ ಪಾಲಚರಿತ್ರೆಯೆಂಬ ನಾಟಕದಲ್ಲಿ ಧರ್ಮಪಾಲನ ಪಾತ್ರವಹಿಸಿದರು ಅದೇ ಸಮಯಕ್ಕೆ ಇವರ ಮದುವೆ ಆಯಿತು.
ನಾಟಕ ಗೀಳು ತಲೆಗೆ ಹತ್ತಿದುದರಿಂದ ರಾಯರು ತುಮಕೂರಿನಲ್ಲಿದ್ದ ಶ್ರೀ ಸೀತಾಮನೋಹರನಾಟಕ ಮಂಡಳಿಯನ್ನು ಸೇರಿದರು. ಅನಂತರ ಗುಬ್ಬಿ ಕಂಪನಿಯನ್ನು ಸೇರಿ ಅತಿ ಮುಖ್ಯಪಾತ್ರಗಳನ್ನು ವಹಿಸಿದರು. ರೌದ್ರ, ವೀರ, ಅದ್ಭುತ, ಭೀಭತ್ಸ ರಸಗಳನ್ನು ಪ್ರತಿಪಾದಿಸುವ ಪಾತ್ರಗಳನ್ನು ವಹಿಸಿ ಸೈ ಎನಿಸಿಕೊಂಡರು. ಈ ಪಾತ್ರಗಳಿಗೊಪ್ಪುವ ದೈತ್ಯ ದೇಹ, ದೊಡ್ಡಗಂಟಲು ರಾಯರಿಗೆ ದೈವದತ್ತವಾಗಿ ಬಂದ ವರಗಳಾಗಿದ್ದವು. ರಾಯರು ಹೆಚ್ಚಿನ ಕಾಲ ಗುಬ್ಬಿ ಕಂಪನಿಯಲ್ಲಿದ್ದರೂ ಶ್ರೀ ಭಾರತ ಜನಮನೋಲ್ಲಾಸಿನೀ ನಾಟಕ ಸಭಾ, ಶ್ರೀ ಲಕ್ಷೀಕಾಂತ ವಿಲಾಸ ನಾಟಕ ಸಭಾ, ಶ್ರೀ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ಲಲಿಕಲಾವರ್ಧಿನೀ ನಾಟಕಸಭಾ, ಶ್ರೀ ಶಾಂಭವೀ ಪ್ರಸಾದಿಕ ನಾಟಕಮಂಡಳಿ, ಶ್ರೀ ಕೃಷ್ಣಮನೋರಂಜನೀ ನಾಟಕಸಭಾ, ಗುಬ್ಬಿ ಬಾಲ ಕಲಾವರ್ಧಿನೀ ನಾಟಕ ಸಭಾ, ಆರು ಜನದ ಕಂಪನಿ, ಶ್ರೀ ಮಂಜುನಾಥೇಶ್ವರ ನಾಟಕಮಂಡಳಿ, ಶೇಷಕುಲ ಕಲಾಮಂಡಳಿ, ಶ್ರೀ ಚಾಮುಂಡೇಶ್ವರಿ ಕಂಪನಿಯ ಮಿತ್ರರು-ಇವೇ ಮೊದಲಾದ ಕಂಪನಿಗಳಲ್ಲಿ ಮಾಲೀಕರಾಗಿ, ಪಾಲುದಾರರಾಗಿ, ನಟರಾಗಿ ಬೇರೆಬೇರೆ ಸ್ಥಾನದಲ್ಲಿ ನಿಂತು ಕೆಲಸಮಾಡಿದರು.
ರಾಯರು ಪ್ರಹ್ಲಾದಚರಿತ್ರೆಯಲ್ಲಿ ಹಿರಣ್ಯಕಶಿಪು, ಶ್ರೀಕೃಷ್ಣಲೀಲಾ ಮತ್ತು ಕಂಸವಧಗಳಲ್ಲಿ ಕಂಸ, ಯಮವರ್ಗಭಂಗದಲ್ಲಿ ಯಮ, ಚಂದ್ರಹಾಸದಲ್ಲಿ ದುಷ್ಟಬುದ್ಧಿ-ಇವೇ ಮೊದಲಾದ ಪಾತ್ರಗಳನ್ನು ಬಹಳ ಉತ್ತಮರೀತಿಯಲ್ಲಿ ನಿರ್ವಹಿಸುತ್ತಿದ್ದರು. ಇವರ ಅಭಿನಯ ಕೇವಲ ವೀರ ಅದ್ಭುತ ರಸಗಳ ಪಾತ್ರಚಿತ್ತಣಕ್ಕೆ ಮೀಸಲಾಗಿರಲಿಲ್ಲ. ಇತರ ರಸಗಳನ್ನು ಪ್ರತಿಪಾದಿಸುವ ಪಾತ್ರಗಳನ್ನೂ ಇವರು ಸಮರ್ಪಕವಾಗಿ ನಿರ್ವಹಿಸುತ್ತಿದ್ದರು. ಉತ್ತಮ ಅಭಿನಯವನ್ನು ಮೆಚ್ಚಿ ಅಂದಿನ ಜನತೆ ರಾಯರಿಗೆ ಅಭಿನಯಕಂಠೀರವ, ನಟಭಯಂಕರ, ಅಭಿನಯಸಾಮ್ರಾಟ ಮೊದಲಾದ ಬಿರುದುಗಳನ್ನೂ ವಿವಿಧಬಗೆಯ ಉಡುಗೊರೆಗಳನ್ನೂ ಕೊಟ್ಟಿತು. ರಾಯರ ರೌದ್ರಾಭಿನಯ ಕೆಲವು ವೇಳೆ ರಸಿಕರನ್ನು ರಂಗಮಂದಿರಲ್ಲೇ ಮೂರ್ಛೆಗೊಳಿಸಿದ್ದೂ ಉಂಟು. ಕಂಪನಿಗಳನ್ನು ನಡೆಸಿದ ರಾಯರು ರಂಗಸಜ್ಜಿಕೆ, ದೀಪಾಲಂಕಾರ, ರಂಗಸಂಗೀತ, ಉತ್ತಮ ಅಭಿಯನ ಇವೇ ಮೊದಲಾದವುಗಳಿಗೆ ಹೆಚ್ಚಿನ ಗಮನ ನೀಡಿದರು ಸ್ವಭಾವತಃ ರಾಯರು ಬಹಳ ಉದಾರಿಗಳು. ಒಮ್ಮೆ ಇವರು ಬಡ ಬ್ರಾಹ್ಮಣನೊಬ್ಬನಿಗೆ ಏಳೆಂಟು ತೊಲ ಚಿನ್ನದ ಆಭರಣವನ್ನು ದಾನವಾಗಿ ಕೊಟ್ಟಿದ್ದುಂಟು. ಧಾರ್ಮಿಕ ಕಾರ್ಯಗಳಿಗಾಗಿ ಯಾಚಿಸಿ ಬಂದವರಿಗೆ ರಾಯರು ಸಹಾಯದ ಹಸ್ತವನ್ನು ನೀಡಿದರು. ರಂಗಭೂಮಿಯಲ್ಲಿ ಬಹಳ ವರ್ಷ ರಾರಾಜಿಸಿದರೂ ರಾಯರು ಸ್ವಂತಜೀವನ ಅಷ್ಟುಸುಖಮಯವಾಗಿರಲಿಲ್ಲ. ಕೊನೆಯ ದಿನಗಳಲ್ಲಂತೂ ರಾಯರ ತುಂಬ ಕಷ್ಟಗಳನ್ನನುಭವಿಸಿದರೆಂದು ಹೇಳಲಾಗಿದೆ. (ಎಸ್.ಎ.ಎಂ.)