ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗನ್‍ಚೆರಾಫ್, ಇವ್ಯಾನ್ ಅಲಿಕ್ಸಾನ್‍ಡ್ರವಿಚ್

ವಿಕಿಸೋರ್ಸ್ ಇಂದ
Jump to navigation Jump to search

1812-1891. ರಷ್ಯದ ಪ್ರಸಿದ್ಧ ಕಾದಂಬರಿಕಾರ. ಗಣ್ಯ ವರ್ತಕನೊಬ್ಬನ ಮಗ. ಹುಟ್ಟಿದ್ದು ಸಿಂಬಿರ್ಸ್ಕ್ ನಲ್ಲಿ. ಮಾಸ್ಕೊ ವಿಶ್ವವಿದ್ಯಾಲಯದ ಪದವೀಧರನಾದ ಈತ ಸಿವಿಲ್ ಪರೀಕ್ಷೆಯನ್ನು ಮುಗಿಸಿ ಸಿಂಬಿರ್ಸ್ಕ್ ನಗರದಲ್ಲಿ ಗವರ್ನರನ ಕಾರ್ಯದರ್ಶಿಯಾದ. ಅನಂತರ ಸೇಂಟ್ ಪೀಟರ್ಸ್ಬರ್ಗ್ನಲ್ಲಿ (ಈಗಿನ ಲೆನಿನ್ಗ್ರಾಡ್) ಅರ್ಥಶಾಖಾ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ. 1856ರಲ್ಲಿ ಅಡ್ಮಿರಲ್ ಪುಟಿಯಾಟಿನ್ರ ಆಪ್ತಕಾರ್ಯದರ್ಶಿಯಾಗಿ ಜಪಾನ್ ಪ್ರವಾಸಮಾಡಿ ಬಂದ. ಅಲ್ಲಿನ ಅನುಭವಗಳು ದಿ ಫ್ರಿಗಟ್ ಪಲ್ಲಾಡ್ (1858) ಎಂಬ ಪ್ರವಾಸ ಕಥನದಲ್ಲಿವೆ. ನಿವೃತ್ತಿಗೆ ಮುನ್ನ ಈತ ಸಾಹಿತ್ಯದ ದೋಷ ವಿಮರ್ಶಕನಾಗಿ (ಸೆನ್ಸಾರ್) ಸರ್ಕಾರದಿಂದ ನೇಮಕಗೊಂಡಿದ್ದ.


30 ವರ್ಷಗಳ ಸರ್ಕಾರಿ ನೌಕರಿಯ ಅವಧಿಯಲ್ಲಿ ಮೂರು ಶ್ರೇಷ್ಠವಾದ ಕಾದಂಬರಿಗಳನ್ನು ಬರೆದುದೇ ಈತನ ಮಹತ್ತರ ಸಾಧನೆ. ಮೊದಲ ಕಾದಂಬರಿ ಓಬಿಕ್ನೊವೆನ್ನಯ ಇಸ್ಟೋರಿಯಾ (1847) ಪ್ರಕಟವಾದುದು ಈತನ 35ನೆಯ ವಯಸ್ಸಿನಲ್ಲಿ. ಇದು ಈತನ ಉತ್ಕೃಷ್ಟ ಕೃತಿಯಲ್ಲವಾದರೂ ವಿಸ್ಸಾರಿಯೊನ್ ಬೆಲಿನ್ ಸ್ಕಿ ಎಂಬ ವಿಮರ್ಶಕನಿಂದ ಮನ್ನಣೆ ಪಡೆದು ಸಾಹಿತ್ಯಲೋಕದಲ್ಲಿ ಈತನ ಕೀರ್ತಿಯನ್ನು ಹೆಚ್ಚಿಸಿತು. ಆದರ್ಶವಾದಿ ಯುವಕನೊಬ್ಬ ಮಧುರವಾದ ಗ್ರಾಮ ಜೀವನವನ್ನು ತ್ಯಜಿಸಿ ನಗರಜೀವನವನ್ನು ಅಪ್ಪುವ ಕಥೆ ಈ ಕಾದಂಬರಿಯ ವಸ್ತು. 1849ರಲ್ಲಿ ಓಬ್ಲಮೊವ್ನ ಕನಸು ಎಂಬ ಕವನ ಪ್ರಕಟವಾಯಿತು. ಬಾಲ್ಯದ ಸವಿಯನ್ನೂ ಜಮೀನ್ದಾರಿ ಬದುಕಿನ ಸ್ವರ್ಗವನ್ನೂ ಕಳೆದುಕೊಂಡ ವೇದನೆ ಈ ಕವನದಲ್ಲಿ ವ್ಯಕ್ತವಾಗಿದೆ.


1857ರಲ್ಲಿ ಈತನ ಅಮರಕೃತಿ ಎನಿಸಿದ ಓಬ್ಲಮೊವ್ ಪ್ರಕಟವಾಯಿತು. ಇದೊಂದು ಚಿರಂತನ ಕೃತಿ ಎಂದು ಜನರ ಮೆಚ್ಚಿಕೆ ಪಡೆದು ಪ್ರಖ್ಯಾತವಾಯಿತು. ಈಗಲೂ ಇದು ರಷ್ಯನ್ ಸಾಹಿತ್ಯದ ಅತ್ಯಂತ ಶ್ರೇಷ್ಠವಾದ ಆರು ಕಾದಂಬರಿಗಳಲ್ಲಿ ಒಂದೆನಿಸಿದೆ. ಮರ್ಸ್ಕಿ, ಡೊಬ್ರೊಲುಬೊವ್, ಪೀಸಾರೆವ್ ಮೊದಲಾದ ಹೆಸರಾಂತ ವಿಮರ್ಶಕರು ಈ ಕಾದಂಬರಿಯ ಗುಣವೈಶಿಷ್ಟ್ಯಗಳನ್ನು ಎತ್ತಿಹಿಡಿದು ಕೊಂಡಾಡಿದ್ದಾರೆ. ಇದರಲ್ಲಿ ರಷ್ಯದ ಯಥಾವತ್ತಾದ ಸಾಮಾಜಿಕ ಚಿತ್ರವಿದ್ದು ಗುಣ-ದೋಷಗಳೆರಡರ ಸಹಜ ನಿರೂಪಣೆಯಿದೆ. ಓಬ್ಲಮೊವ್ ಒಬ್ಬ ಸುಸಂಸ್ಕೃತ ಯುವಕ. ಬಹಳ ಬುದ್ದಿವಂತ. ಸದ್ಭಾವನೆಗಳಿಂದ ಕೂಡಿದ ಉದಾರ ಹೃದಯಿ. ಅಲಸಿಕೆಯೊಂದೆ ಈತನ ದೌರ್ಬಲ್ಯ. ಯಾವುದನ್ನೂ ಸಾಧಿಸಲಾರದ ನಿಷ್ಕ್ರಿಯತೆ, ಸದಾ ಹಾಯಾಗಿ ಮೈಚಾಚಿಕೊಂಡು ಮಲಗಿರುವ ಈತನ ಸುಖಜೀವನದ ವರ್ಣನೆ ಪುಟಗಟ್ಟಲೆ ಬೆಳೆದಿದೆ. ತಾನು ಪ್ರೀತಿಸುತ್ತಿದ್ದ ಚೆಲುವೆಯನ್ನು ಮದುವೆಯಾಗುವುದಕ್ಕೂ ಆಗದಷ್ಟು ಸೋಮಾರಿಯಾಗಿದ್ದ ಈತ ಕ್ರಮೇಣ ಓಬ್ಲಮೊವಿಸಮ್ ಎಂಬ ತನ್ನದೇ ಆದ ಸಿದ್ಧಾಂತದಲ್ಲಿ ಮುಳುಗಿ ಹೋಗುತ್ತಾನೆ. ರಷ್ಯದಲ್ಲಿ ಈ ಸಿದ್ಧಾಂತ ಸೋಮಾರಿತನಕ್ಕೆ ಇನ್ನೊಂದು ಹೆಸರಾಯಿತು. ಸ್ಲಾವೊನಿಕ್ ಸುಖಾಪೇಕ್ಷೆಯ ಸ್ವಭಾವ ಮತ್ತು ರಷ್ಯದ ಸಾಮಾಜಿಕ ವ್ಯವಸ್ಥೆಗಳ ಸಮ್ಮಿಲನದಿಂದ ಜನಿಸಿದ ಜಾಡ್ಯ ಇದು. ಓಬ್ಲಮೊವ್ನ ಈ ಸ್ವಭಾವಕ್ಕೆ ಕಾರಣ ಜೀವನ ವಿಮುಖತೆಯೂ ಅಲ್ಲ; ಔದಾಸೀನ್ಯವೂ ಅಲ್ಲ. ಸರಿ ಯಾವುದು ತಪ್ಪು ಯಾವುದು ಎಂದು ನಿಷ್ಕರ್ಷೆಯಾದ ಹೊರತು ಯಾವ ಮಾರ್ಗವನ್ನೂ ಅನುಸರಿಸಬಾರದೆಂಬ ನೀತಿ, ಅಷ್ಟೆ. ಹೀಗೆ ಈ ಕಾದಂಬರಿಯಲ್ಲಿ ಅನಿಶ್ಚತೆಯಲ್ಲಿ ನಿಷ್ಕ್ರಿಯನಾಗಿ ಕೂತ ಓಬ್ಲಮೊವ್ ನಿರಂತರವಾಗಿ ಚಲಿಸುತ್ತ ಹೋಗುವ ಜಗತ್ತಿನ ಸಂಬಂಧವನ್ನು ಕಡಿದುಕೊಂಡ ಚಿತ್ರಣವಿದೆ.


ಈತನ ಮೂರನೆಯ ಕಾದಂಬರಿ ಓಬ್ರಿವ್ (1869). ಇದರ ಇಂಗ್ಲಿಷ್ ಭಾಷಾಂತರ ದಿ ಪ್ರೆಸಿಪಿಸ್ (1915). ಇದು ರಷ್ಯದ ಒಂದು ಹಿರಿಯಮನೆತನದ ಸುಂದರವಾದ ಕಥೆ. ಮನೆಯ ವಹಿವಾಟನ್ನೆಲ್ಲ ದರ್ಪದಿಂದ ನಡೆಸಿಕೊಂಡು ಬರುವ ಸಹೃದಯಿ ಅಜ್ಜಿಯ ಪಾತ್ರ ಇಲ್ಲಿ ಸ್ಮರಣೀಯವಾಗಿ ಮೂಡಿದೆ. ತನ್ನ ಆಧುನಿಕತೆಯನ್ನೂ ರಸವಂತಿಕೆಯನ್ನೂ ಬಿಡಲಾರದೆ ಹಳೆಯ ಮತ್ತು ಹೊಸ ಮೌಲ್ಯಗಳ ದ್ವಂದ್ವದಲ್ಲಿ ಸಿಕ್ಕಿ ಪೇಚಾಡುವ ಯುವಕನ ಬದುಕೂ ಇಲ್ಲಿ ಚಿತ್ರಿತವಾಗಿದೆ. ಸಂಪ್ರದಾಯದ ಸಂಕೇತದಂತಿರುವ ಅಜ್ಜಿಯ ಪಾತ್ರವನ್ನು ಅಭಿಮಾನಪುರ್ವಕವಾಗಿಯೂ ಆಧುನಿಕ ನೇತಿವಾದಿಯೋರ್ವನನ್ನು ಹೀಯಾಳಿಸಿಯೂ ಚಿತ್ರಿಸಿರುವುದನ್ನು ಹೊಸ ಪೀಳಿಗೆಯ ಹಲವರು ಖಂಡಿಸಿದ್ದಾರೆ.


ಗನ್‍ಚೆರಾಫ್ ಹಲವು ಸಣ್ಣ ಕಥೆಗಳನ್ನು ಬರೆದಿದ್ದಾನೆ. ವಿಶ್ರಾಂತನಾದ ಬಳಿಕ ಹಳೆಯ ನೆನಪುಗಳನ್ನೂ ಕೆಲವು ವಿಮರ್ಶಾ ಲೇಖನಗಳನ್ನೂ ಈತ ಬರೆದ. 1870ರಲ್ಲಿ ಪ್ರಕಟವಾದ ಎನ್ ಅನ್ಕಾಮನ್ ಸ್ಟೋರಿ ಸ್ವಲ್ಪ ವಿಚಿತ್ರವಾದುದೆಂದೇ ಹೇಳಬೇಕು.


ತುರ್ಗೆನ್ಯೆಫ್ ಮೊದಲಾದವರು ತನ್ನ ಬರೆಹಗಳನ್ನು ಕದ್ದಿದ್ದಾರೆಂಬ ಭ್ರಮೆಗೊಳಗಾಗಿ ಈತ ಅವರ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾನೆ. ಈತ 1891ರಲ್ಲಿ ನಿಧನನಾದ ಸೇಂಟ್ ಪೀಟರ್ಸ್ಬ ಬರ್ಗ್ನಲ್ಲಿ . ಸಾಹಿತ್ಯ ಪ್ರತಿಭೆಯುಳ್ಳ ಈತ ಆಡಳಿತ ಕಾರ್ಯಗಳಲ್ಲೇ ಮಗ್ನನಾಗಿದ್ದುದರಿಂದ ಸಾಮಾಜಿಕ ಸಮಸ್ಯೆಗಳ ಕಡೆ ಅಷ್ಟಾಗಿ ಗಮನ ಹರಿಸಲಿಲ್ಲವೆಂಬುದೂ ಸಮಕಾಲೀನ ಬುದ್ದಿಜೀವಿಗಳಿಗಿದ್ದಂಥ ಬೌದ್ಧಿಕ ಕುತೂಹಲ ಈತನಲ್ಲಿರಲಿಲ್ಲವೆಂಬುದೂ ಈತನ ಮೇಲಿರುವ ಎರಡು ಮುಖ್ಯ ಆಕ್ಷೇಪಗಳು.