ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಮಕ ಕಲೆ

ವಿಕಿಸೋರ್ಸ್ ಇಂದ
Jump to navigation Jump to search

ಸಾಹಿತ್ಯಕ್ಕೆ ಸಂಗೀತವನ್ನು ಬೆರೆಸಿ ಅದರ ಮಾಧುರ್ಯವನ್ನು ಇಮ್ಮಡಿಗೊಳಿಸುವ ಕಲೆ. ಒಂದರ್ಥದಲ್ಲಿ ಕಾವ್ಯರಸ-ಗಾನರಸಗಳ ಮೈತ್ರಿಯುಳ್ಳದ್ದು. ಇದನ್ನರಿತ ಕಲೆಗಾರನೇ ಗಮಕಿ ಅಥವಾ ಕಾವ್ಯವಾಚಕ.


ಗಮಕ ಕಲಾಪ್ರಕಾರವು ಸಾಕಷ್ಟು ಪ್ರಾಚೀನವಾದದ್ದು. ಆದಿಕಾವ್ಯಮಿದಂ ಪ್ರೋಕ್ತಂ ಪುರಾವಾಲ್ಮೀಕಿನಾಕೃತಮ್ ಎನ್ನುವ ರಾಮಾಯಣದ ಕಾವ್ಯ ಕರ್ತೃ ವಾಲ್ಮೀಕಿಯಾದಂತೆ, ಆತ ರಾಮಾಯಣವನ್ನು ಹಾಡಿಸಿದ ಲವಕುಶರು ಆದಿಗಮಕಿಗಳು. ಗ್ರಾಮೀಣ ಪರಿಸರವೇ ಪ್ರಮುಖವಾಗಿ ಇರುವ ಕರ್ನಾಟಕದಲ್ಲಿ ಕಾವ್ಯದ ಜತೆಜತೆಗೇ ಅರಳಿದ ಜಾನಪದ, ಜನಪದ ಸಾಹಿತ್ಯ ಆ ಮೂಲಕ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್.... ಎಂಬುದಾಗಿ ಕವಿರಾಜಮಾರ್ಗ ಕರ್ತೃ ಅಭಿವ್ಯಕ್ತಿಸಿರುವಂತೆ, ಕೋಲುಹುಯ್ಯೋಪದವೊ, ಗೀಗೀಪದ-ಕಂಸಾಳೆ-ಹರಿಕಥೆ-ಶಿವಕಥೆ, ವೀರರ ಬದುಕಿನ ಗಾಥೆ ಹಾಡುವ ಲಾವಣಿ, ಪ್ರಸಂಗ-ಯಕ್ಷಗಾನ-ತಾಳಮದ್ದಳೆ, ಬಯಲಾಟ ಈ ಎಲ್ಲ ಜನಪದ ಕಾವ್ಯಪ್ರಕಾರಗಳಲ್ಲಿಯೂ ಗಮಕ ಕಲೆ ತನ್ನದೇ ವಿಶಿಷ್ಟ ಶೈಲಿಯಲ್ಲಿ, ಅನನುಕರಣೀಯ ರೀತಿಯಲ್ಲಿ ಹಾಸುಹೊಕ್ಕಾಗಿರುವುದೂ ಗಮನೀಯ. ಅದರಂತೆಯೇ ಆದಿಕವಿ ಪಂಪನಿಂದ ಕುವೆಂಪು ಅವರವರೆಗೆ ಹಾಗೂ ನಮ್ಮ ನಾಡಿನ ಇತಿಹಾಸ-ಸಾಹಿತ್ಯ-ಸಂಸ್ಕೃತಿಗಳ ದಾಖಲೆಗಳಾಗಿ ಇರುವ ಶಾಸನಗಳತನಕ - ಗಮಕದ ವ್ಯಾಪ್ತಿಯನ್ನು ಗುರುತಿಸಬಹುದು. ಹಿನ್ನೆಲೆ :


ಶ್ರೀ ವಾಗ್ದೇವಿ ಚತುರ್ಮುಖಾಸ್ಯ ಕಮಲಶ್ರೀಹಂಸೆ ವೀಣಾರವ


  • ಸ್ರಾವಾಸಕ್ತೆ ಸಪುಸ್ತಕಾನ್ವಿತೆ ಲಸತ್ ಸಾಹಿತ್ಯ ಸಂಗೀತ ಸ |

ದ್ಭಾವಸ್ರೂ ಕವಿವಾದಿ ವಾಗ್ಮಿ ಗಮಕ ವ್ಯಾಖ್ಯಾತೃ ಚಿತ್ತೋಲ್ಲಸತ್

ಪ್ರಾವೀಣ್ಯಪ್ರದೆಯಿಂ ಕಲೋದ್ಧರಣಮಕ್ಕೀ ನಾಡಿನೊಳ್ ನಾಡೆಯೂ ||

(ಪ್ರಾಚೀನಶಾಸನೋಕ್ತ-ಶಾಸನಮಂಜರಿ-ರಾ. ನರಸಿಂಹಾಚಾರ್ಯ)

  • ಅವರಗ್ರತನಯನಾತಂ |

ವಿವೇಕ ಥ್‍ಥ್‍ಥ್ ಸರೋವರ ಹಂಸ |

ಕವಿಗಮಕಿ ವಾಗ್ಮಿಗಮವನೀತಳದೊಳೊಗೆದಾ |

ಸುಗಂ ಕಳ್ಪಕುಜಂ ||

ಇ.I ಗಿoಟ. Iಘಿ, ಅ.ಇ. 1040 ( ಥ್‍ಥ್‍ಥ್ - ಶಾಸನದ ಕಲ್ಲು ಕೆತ್ತಿಹೋಗಿದೆ-ಲಿಪಿ ಇಲ್ಲ)

  • ಕವಿಗಮಕಿ ವಾದಿ ವಾಗ್ಮಿಗ |

ಳವಿವೇಕದ ದೆಸೆಯನರಿಯರಾಶ್ರಿತ ಜನಮು ||

ತ್ಸವದಿಂ ಬೇಡಲ್ಕೀವರ್ |

ಸವಿಲಾಸಿಗಳ್ತೆ ಶಿವೆಯಗೇರಿಯನೂರ್ವರ್

(ಶಾಸನ ಪದ್ಯಮಂಜರಿ-ಪುಟ 147, ಪದ್ಯ 862)

  • ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ |

ಬಾದಿಪ್ಪ ಕಲಿಗೆ ಕಲಿಯುಗ |

ವಿಪರೀತನ್ ಮಾಧವನೀತನ್ ಪೆರನಲ್ಲ ||

(ಕಪ್ಪೆಅರಭಟ್ಟನ ಶಾಸನ - ತ್ರಿಪದಿ - ಬಾದಾಮಿ; ಸು. 8ನೆಯ ಶತಮಾನ)

  • ನುಡಿದು ತಲೆದೂಗಿಸುವಮರೆಗ |

ನ್ನಡಕೆ ಹಾಹಾಯೆನಿಸಿ ಮೆಚ್ಚನು

ಪಡೆವ ವಾಗ್ಮಿಗಳೋದಿ ಹೊಗಳಿಸಿಕೊಂಬ ಗಮಕಿಗಳು ||

ಕೊಡುವ ಪದ್ಯಕೆ ಸುಪ್ರಮೇಯದ |

(ಕುಮಾರವ್ಯಾಸಭಾರತ - ಸಂಧಿ 8 - ಪದ್ಯ 38)

ಪ್ರಾಚೀನ ಸಂಗೀತಶಾಸ್ತ್ರಜ್ಞನಾದ ಶಾರ್ಙ್ಗದೇವನು (1230) ತನ್ನ ಸಂಗೀತರತ್ನಾಕರ ಗ್ರಂಥದಲ್ಲಿ ತಿಳಿಸಿರುವಂತೆ, “ಕೇಳುಗರಿಗೆ ಸುಖವೀಯುವ ರೀತಿಯಲ್ಲಿ ಸ್ವರಗಳನ್ನು ಕಂಪಿಸುವುದೇ ಗಮಕ, ವಾಚಸ್ಪತ್ಯ ಕೋಶದ ಪ್ರಕಾರ, ಸ್ಪಷ್ಟಪಡಿಸುತ್ತ, ಯಾವುದು ಮೂರ್ಛನಾದಿ ಲಕ್ಷಣಗಳಿಂದ ತನ್ನನ್ನೇ ಹೊಂದಿಸುವುದೋ ಅದು ಗಮಕ’’.


“ಗಮಯತೀತಿ ಗಮಕ, ಗಮಯತಿ=ಪ್ರಾಪಯತಿ, ಬೋಧಯನೆ ವಾ’’


(ಇಲ್ಲಿ ಮೂರ್ಛನಾ ಎಂದರೆ ಸಂಗೀತದಲ್ಲಿ ಹಾಡುವಿಕೆಯಲ್ಲಿ ಸಪ್ತಸ್ವರಗಳ ಏರಿಳಿತಗಳ ಆಲಾಪನೆ. ಗಮಕ ಕಲೆಯಲ್ಲಿ ಪದ್ಯಗಳನ್ನು ಹಾಡುವಾಗ, ಆಯಾ ಸನ್ನಿವೇಶ-ರಸ-ಧ್ವನಿಗಳಿಗೆ ಸಂಬಂಧಿಸಿದಂತೆ ಆಯಾ ರಾಗಗಳಲ್ಲಿ ವಾಚಿಸುವುದರಿಂದ ಅದ್ಭುತ ಪರಿಣಾಮ ಮನದ ಮೇಲಾಗುವುದೆಂಬುವ ಅಂಶ ಕೇಳುವ ಸಹೃದಯರಿಗೆ ಸುವಿದಿತ).


ಗಮಕ ವಿದ್ಯೆಯ ಪ್ರಾಚೀನತೆಯನ್ನು ಸಾರುವ ಮತ್ತಷ್ಟು ವಿಚಾರಗಳಿವು : ಪ್ರ.ಶ.ಪು. 1ನೆಯ ಶತಕದ ಲಲಿತ ವಿಸ್ತರ ಎಂಬ ಗ್ರಂಥದಲ್ಲಿ 64 (ಚತುಶ್ಶಷ್ಟಿ) ಕಲೆಗಳನ್ನು ಬಲ್ಲವನಾಗಿದ್ದ ಗೌತಮ ಬುದ್ಧನು 38ನೆಯ ಕಲೆಯಾಗಿ ಗಮಕ ಕಲೆಯನ್ನು ಸೂಚಿಸಿರುವುದು ಗಮನಾರ್ಹ. ಹಾಗೆಯೇ 1ನೆಯ ಶತಮಾನದ ಸುಮಾರಿನಲ್ಲಿದ್ದ ವಾತ್ಸಾಯನನಿಂದ (ಕಾಮಶಾಸ್ತ್ರ ಬರೆದವನಲ್ಲ) ರಚಿತವಾದ ಗೀತಪಠಿತಂ ಎಂಬ ಕೃತಿಯಲ್ಲಿ ಗಮಕವೆಂದರೆ “ಪುಸ್ತಕ ವಾಚನ”ವೆಂದು ತಿಳಿಸಿರುವುದು ಉಲ್ಲೇಖನೀಯ. ಇವೆಲ್ಲವೂ ಗಮಕಕಲೆಯ ಪ್ರಾಚೀನತೆಯನ್ನು ಸಾರುತ್ತವೆ. ಹೀಗೆ ಶಾಸನ, ಕಾವ್ಯಶಾಸ್ತ್ರ ಎಲ್ಲದರಲ್ಲಿಯೂ ಈ ಕಲೆಯ ಪ್ರಾಚೀನತೆಯನ್ನು ಕುರಿತ ಮಾಹಿತಿಯನ್ನು ನಾವು ಗಮನಿಸಬಹುದಾಗಿದೆ. ಒಡೆಯರ ಕಾಲದ ಗೋವಿಂದ ವೈದ್ಯನೆಂಬುವ ಕವಿ ತನ್ನ ಚಂಪುಕೃತಿ ಕಂಠೀರವನರಸರಾಜವಿಜಯದಲ್ಲಿ ಭಾರತಿಗಳು ರಂಜಿಸಿದರು ಎನ್ನುತ್ತಾನೆ. ಅಂದರೆ, ಅವನ ಕಾಲಕ್ಕೆ ಹಾಡುವ ಗಮಕಿಗಳಿದ್ದರು ಎಂಬುದು ಇದರ ಸೂಚನೆ. ಭಾರತಿನಂಜನ ಮೂಲಕ ರಾಜ ಇಡೀ ಕಾವ್ಯವನ್ನೆ ಹಾಡಿಸಿದನಂತೆ. ಹೀಗೆಯೇ ರತ್ನಾಕರವರ್ಣಿಯ ಭರತೇಶ ವೈಭವದಲ್ಲಿಯೂ ದಂಡಿಗೆ ಮಿಡಿಯುತ್ತ ಗಮಕಿ ಹಾಡಿದಳೆಂಬುವ ಅಂಶವು ಧ್ವನಿತಗೊಂಡಿದೆ. ಬತ್ತೀಸರಾಗದೊಳೋದಿಭೂಪಾಲನ ಚಿತ್ತಕೆ ಬಂದವಳೇವೇಳ್ವೆ ಎಂಬುವ ಪ್ರಶಂಸೆಯೂ ಇದ್ದು, ಬಸವೇಶ್ವರಾದಿ ವಚನಕಾರರಲ್ಲಿಯೂ ಗಮಕ ಕಲೆಯ ಪ್ರಸ್ತಾಪವಿರುವುದು ಗಮನೀಯ:


ತಾಳಮಾನಸರಿಸವ ನಾನರಿಯೆ,

ಓಜೆ ಬಜಾವಣೆ ಲೆಕ್ಕವನರಿಯೆ,

ಅಮೃತಗಣ ದೇವಗಣವನರಿಯೆ

ಕೂಡಲಸಂಗಮದೇವ, ನಿನಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ - (ಬಸವಣ್ಣ)

ಪ್ರಮುಖವಾಗಿ ಗಮಕವೆಂದರೆ ಕಾವ್ಯವಾಚನ, ಸಾಹಿತ್ಯ ಸಾರವನ್ನು ಬದುಕಿನ ಮೌಲ್ಯಗಳನ್ನು ಜನತೆಗೆ ಮುಟ್ಟಿಸುವ ಸುಲಭ ಮಾಧ್ಯಮ. ಅಂದರೆ, ಕೇಳುಗರಿಗೆ ರಸಾನುಭವ-ಬದುಕಿನ ಬಗ್ಗೆ ಉತ್ತಮಿಕೆಯನ್ನು ಒಡಮೂಡಿಸುವ ಹಾಗೆ ಕಾವ್ಯಗಳನ್ನು ವಾಚಿಸುವ (ಹಾಡುವ)ವರನ್ನು ಗಮಕಿ ಎನ್ನುವುದು ರೂಢಿ. ಹಾಗೆಯೆ ಕಾವ್ಯದ ಅಂತರಾರ್ಥದ ಸೊಗಸು-ಸೊಬಗು-ಸೊಗಡನ್ನು ಅರ್ಥಯಿಸಿ ಬಿತ್ತರಿಸುವವರು ವ್ಯಾಖ್ಯಾತರು ಯಾ ವ್ಯಾಖ್ಯಾನಕಾರರು (ಕಾಮೆಂಟೇಟರ್) ಎಂದು ಕರೆಯಿಸಿಕೊಳ್ಳುತ್ತಾರೆ. ಬಹು ಹಿಂದೆ ರಾಜರ ಆಸ್ಥಾನಗಳಲ್ಲಿ ಕವಿಗಳು, ಸಂಗೀತಗಾರರು, ನೃತ್ಯಕಲಾವಿದರು - ಇಂತಹವರಿಗೆ ಮಾನ್ಯತೆಗಳಿದ್ದಂತೆಯೇ ಗಮಕಿಗಳಿಗೂ ಅತ್ಯುತ್ತಮ ಸ್ಥಾನಗಳಿದ್ದವು.


ಕನ್ನಡ, ತಮಿಳು, ತೆಲುಗು ಮೊದಲಾದ ಅನೇಕ ಭಾಷಾ ಸಾಹಿತ್ಯ ಇತಿಹಾಸದಲ್ಲಿ ಕವಿ, ಗಮಕಿ, ವಾದಿ ಹಾಗೂ ವಾಗ್ಮಿ - ಇಂತಹ ನಾಲ್ಕು ವಿಭಾಗಗಳಲ್ಲಿ ಪಾಂಡಿತ್ಯವನ್ನು ಗುರುತಿಸಿರುವುದನ್ನು ಗಮನಿಸಬಹುದು. ಇದರಿಂದ, ಗಮಕದ ವಿಶೇಷತೆ, ಇದೊಂದು ಸರ್ವಮಾನ್ಯತೆ ಗಳಿಸಿದ್ದ ಕಲೆ ಎಂಬ ಅಂಶ ಮನವರಿಕೆಯಾಗುತ್ತದೆ. ಈ ವಿಚಾರಗಳಿಗೆ ಪೋಷಕವಾಗಿ ಪ್ರಾಚೀನ ಕಾವ್ಯಶಾಸ್ತ್ರಾದಿ ಕೃತಿಗಳಲ್ಲಿ ಈ ಕಲೆಯನ್ನು ಕುರಿತಂತೆ ಕಂಡುಬರುವ ಕೆಲವು ವಿಷಯಗಳನ್ನು ಉಲ್ಲೇಖಿಸಬಹುದು:


ವಾಲ್ಮೀಕಿ ಈ ಕಲೆಯನ್ನು ಲಯ ಸಮನ್ವಿತಾಂ.... ಎಂದೂ ಮಂಗರಾಜ ನಿಘಂಟುಕಾರ ವಾಚಕ, ಲಿಪಿಯನೋದುವಂ.... (ಪದ್ಯ 360) ಎಂದೂ ನಿಜಗುಣಶಿವಯೋಗಿ ತನ್ನ ವಿವೇಕ ಚಿಂತಾಮಣಿ ಕೃತಿಯಲ್ಲಿ ತಾನಮಾನಂದೋಱಿ ವಿಶ್ರಮಣನನಱಿದು ಪದನಂ ವ್ಯಕ್ತಿಗೈದು ಕೇಳ್ವರ ಕಿವಿಗೊಳಿಸಿ ಮೃದುಮಧುರ ವರ್ಣೋಚ್ಚಾರಣಂ ಮಾಳ್ಪರ್ ಗಮಕಿಗಳ್ ಎಂದೂ ತಮಿಳಲ್ಲಿ ಅರುಂಬೊರುಳೈ ಚ್ಚೆಂಬೊರುಳ್ | ನಡೈಯಾಯ್ಕ್ಕಾಟ್ಟಿಪಾಡುವೋನ್ ಗಮಕನ್ (ಗೂಢವಾದ ಅರ್ಥಗಳನ್ನು ಸ್ಫುಟವಾಗಿ ಗೊತ್ತಾಗುವ ಹಾಗೆ ಬಿಡಿಬಿಡಿಸಿ ಹಾಡುವಾತ ಗಮಕಿ) ಎಂದೂ ನೀತಿಪಾಠದಲ್ಲಿ -


ಎಡರದೆ ತಡೆಯದೆ ತಲೆಯಂ |

ಕೊಡಹದೆ ಕಡುವಹಿಲ ಜಾಡ್ಯವೆನಿಸದೆ ರಸಮಂ |

ಕೆಡಿಸದೆ ಸರ್ವರ ಚಿತ್ತ |

ಕ್ಕೊಡಬಡಮೋದುವನೆಗಮಕಿ ಕನ್ನಡ ಜಾಣಾ||

ಎಂದರೆ, ಕಾವ್ಯವೋದುವಲ್ಲಿ (ಹಾಡುವಲ್ಲಿ) ಎಡವದಂತೆ, ತೊಡರಿಸದಂತೆ, ಹರಿವ ಸಲಿಲದಂತೆ ನಿರರ್ಗಳವಾಗಿ ಸಾಗುವಂತೆ ತಲೆಕೊಡವದಂತೆ, ರಸ ಕೆಡಿಸದಂತೆ, ಎಲ್ಲರ ಮನರಂಜಿಸುವಂತೆ ವಾಚಿಸಬಲ್ಲವ - ಗಮಕಿ ಎಂದೂ ಹೇಳಿದೆ. ಕನ್ನಡದ ಆದಿಕವಿ ಪಂಪನ ವಿಕ್ರಮಾರ್ಜುನವಿಜಯ (ಪಂಪಭಾರತ) ಕಾವ್ಯದಲ್ಲಿ:


ಕವಿ ಗಮಕಿ ವಾದಿ ವಾಗ್ಮಿ

ಪ್ರವರರ ಪಂಡಿತರ ನೆಗೞ್ದ ಮಾತಱಿವರ ಸ |

ಬ್ಬವದವರೊಡನಂತೆಸೆದ

ನ್ನವಾಸದೋಲಗದೊಳಿರ್ಪನಾಗಳ್ ಹರಿಗಂ || ಎಂದು ಹೇಳಿದೆ.

ಪೊನ್ನ ತನ್ನ ಶಾಂತಿಪುರಾಣ ಕಾವ್ಯದಲ್ಲಿ ತನ್ನನ್ನು ಪ್ರಶಂಸೆ ಮಾಡಿಕೊಂಡಿರುವ ಸಂದರ್ಭದ ಪದ್ಯವೊಂದರಲ್ಲಿ ಗಮಕಿಯ ವಿಚಾರ ಹೀಗೆ ನಿರೂಪಣೆಗೊಂಡಿದೆ :


ಇದಿರ್ಗೆ ಬರೆ ಪೊನ್ನಿಗಂ ಕಿಡಿ

ಸದಿರಂ ಕವಿ ಗಮಕಿ ವಾದಿ ವಾಗ್ಮಿಗಳ ಕವಿ

ತ್ವದ ಗಮಕಿತ್ವದ ವಾದಿ

ತ್ವದ ವಾಗ್ಮಿತ್ವದ ಪೊಡರ್ಪುಮಂದರ್ಪಮುಮಂ ||


ಹರಿಹರ ತನ್ನ ನಂಬಿಯಣ್ಣನ ರಗಳೆಯಲ್ಲಿ ಗೇಯಗೋಷ್ಠಿ, ಗಮಕಿತ್ವದ ವಾಗ್ಮಿವೃಂದದೊಳ್ ನಂಬಿಯಣ್ಣನು ಕವಿಗಮಕಿ ವಾದಿ ವಾಗ್ಮಿಗಳನ್ನು ಉಪಚರಿಸಿ, ಗೌರವಿಸುತ್ತಿದ್ದ ಪರಿ ತಿಳಿಯಬರುತ್ತದೆ. ಇನ್ನು ಲಕ್ಷ್ಮೀಶನಲ್ಲಿ ಸ್ಪಷ್ಟವಾಗಿ ಕವಿಗಮಕಿಗಳ ಕುರಿತ ಚಿತ್ರಣ ನಮಗೆ ದೊರೆಯುತ್ತದೆ. ದುರ್ಗಸಿಂಹ ತನ್ನ ಕನ್ನಡ ಪಂಚತಂತ್ರದಲ್ಲಿಯೂ ಶ್ರೀಮಾದಿರಾಜ ಎಂಬುವ ಮುನಿಯ ಕವಿಗಮಕಿವಾದಿ ವಾಗ್ಮಿ ಪ್ರವರನೆಂದಿದ್ದಾನೆ. ಕಬ್ಬದ ಸೃಜನೆಯಲ್ಲಿ ವಿಶಿಷ್ಟರೆನಿಸುವ ಕನಕದಾಸರಂತೂ ತಮ್ಮ ಮೋಹನತರಂಗಿಣಿ ಹಾಡುಗಬ್ಬದಲ್ಲಿ (3-40) ಶ್ರೀಕೃಷ್ಣನಿದ್ದ ದ್ವಾರಕೆಯನ್ನು ಬಣ್ಣಿಸುವಲ್ಲಿ ಹೀಗೆ ಹಾಡಿದ್ದಾರೆ:


ರವಿ ಸಿದ್ಧಾನ್ತ ಪಾಠಕರಷ್ಟಭಾಷಾ | ಕವಿ ಗಮಕಿಗಳು ತಾರ್ಕಿಕರು |

ವಿವಿಧ ವಿದ್ವತ್ಸಭೆ ನೆಱೆದುದು ಲಲಿತಾ ಭಾರ್ಗವಿಯ

ಕಾಂತನ ಪುರದೊಳಗೆ ಎನ್ನುವಲ್ಲಿ ಜ್ಯೋತಿಷಿಗಳ ಕುರಿತ ಅಂಶವೂ ಬಿತ್ತರಗೊಂಡಿದೆ.

ಶಿವ ಪಾರಮ್ಯವನ್ನು ಮೆರೆದ ಭೀಮಕವಿಯ ಬಸವಪುರಾಣದಲ್ಲಿ ಕವಿಗಮಕಿವಾದಿ ವಾಗ್ಮಿಗಳ ಸಂಪುರ್ಣ ಚಿತ್ರಣ ದೊರೆಯುತ್ತದೆ.

ಗಮಕ ಕಲೆಯ ವಿಷಯವಾಗಿ ಪುರಂದರದಾಸರ ಒಂದು ಕೀರ್ತನೆ ಬಹಳ ಮುಖ್ಯವಾದ ಕೆಲವು ವಿಷಯಗಳನ್ನು ತಿಳಿಸುತ್ತದೆ.

ತಾಳ ಬೇಕು | ತಕ್ಕ ಮೇಳ ಬೇಕು

ಶಾಂತ ವೇಳೆ ಬೇಕು-ಗಾನವ ಕೇಳಬೇಕೆನ್ನುವಗೆ ||ಪ||

||ಚ|| ಯತಿಪ್ರಾಸವಿರಬೇಕು | ಗತಿಗೆ ನಿಲ್ಲಿಸಬೇಕು

ರತಿಪಿತನೊಳು ಅತಿಪ್ರೇಮವಿರಬೇಕು ||1||

ಗಳ ಶುದ್ಧವಿರಬೇಕು-ತಿಳಿದು ಪೇಳಲಿ ಬೇಕು

ಕಳವಳ ಬಿಡಬೇಕು-ಕಳೆ ಮುಖವಿರಬೇಕು ||2||

ಅರಿತವರಿರಬೇಕು-ಹರುಷ ಹೆಚ್ಚಲಿ ಬೇಕು

ಪುರಂದರ ವಿಠಲನ-ಪರದೈವವೆನಬೇಕು ||3||

ಈ ಎಲ್ಲ ಅಂಶಗಳನ್ನೂ ಗಮನಿಸಿ, ಶ್ರದ್ಧಾಭಕ್ತಿಯಿಂದ ಕವಿಕೃತಿಯನ್ನು ಚೆನ್ನಾಗಿ ಅಭ್ಯಾಸ ಮಾಡಿ ಅದರ ಸಂಪುರ್ಣ ರಸಭಾವಗಳು ಶ್ರೋತೃಗಳಲ್ಲಿ ಉದ್ಬೋಧವಾಗುವಂತೆ ಮಾಡುವ ಗಮಕಿ ನಿಜವಾಗಿ ಆ ಹೆಸರಿಗೆ ತಕ್ಕವನಾಗುತ್ತಾನೆ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತವೇ ಮೊದಲಾದ ನವರಸಗಳೂ ಮೂಡಿಬರುವಂತೆ ಮಾಡುವುದು ನಿಜವಾದ ವಾಚನ ವೈಖರಿಯ ಅಗ್ಗಳಿಕೆ. ಯತಿ, ಗಣ, ಪ್ರಾಸ ಇತ್ಯಾದಿಗಳನ್ನೂ ಷಟ್ಪದಿ, ಸಾಂಗತ್ಯ, ರಗಳೆ, ಶತಕ, ತ್ರಿಪದಿ, ಕಂದ ಮೊದಲಾದ ಛಂದೋವೈವಿಧ್ಯವನ್ನೂ ಗಮಕಿ ಅರಿತಿರಬೇಕು.

ಸುಶ್ರಾವ್ಯವಾಗಿ ವಾಚನ ಮಾಡಲು ಶ್ರುತಿ, ಗತಿಗಳನ್ನು ಅನುಸರಿಸಬೇಕು. ಸುಕಂಠದಿಂದ ಸ್ಫುಟವಾಗಿ ಕಾವ್ಯದ ನುಡಿಯನ್ನು ನಾಲಗೆಯಲ್ಲಿ ಕುಣಿಸಬೇಕು. ತಾನು ಆನಂದಪಟ್ಟು ವಾಚಿಸಿದಲ್ಲಿ ಕೇಳುವವರಿಗೂ ಆನಂದವಾಗುವುದು. ಅವರ ಹೃದಯವೂ ಮಿಡಿಯುವುದು. ಶ್ರುತಿಭೇದ, ರಾಗಭೇದ, ಸಂಗೀತದ ಸ್ವರಸ್ಥಾಯಿ, ಗಮಕ, ವರ್ಣ, ಕೃತಿಯ ಜೀವಾಳ - ಇವನ್ನು ತಿಳಿದುಕೊಳ್ಳದಿದ್ದರೆ ಗಮಕ ಹಿತವಾಗಿರುವುದಿಲ್ಲ. ಇನ್ನು ತಾಳದ ವಿಷಯ. ಪದ್ಯದ ಸಹಜವಾದ ಗತಿ, ಲಯ, ಏರಿಳಿತಗಳ ಕಡೆ ಗಮನವಿರಬೇಕು. ಎಲ್ಲಿ ಮುರಿಯಬೇಕು, ಎಲ್ಲಿ ನಿಲ್ಲಿಸಬೇಕು, ಎಲ್ಲಿ ನೆರವಲು ಮಾಡಬೇಕು ಎಂಬುದನ್ನರಿತು ಅರ್ಥವಾಗುವಂತೆ ಜಾಗೃತಿಯಿಂದ ಪದಗಳ ಜಾಡು ಹಿಡಿಯಬೇಕು. ವಾಚಿಸುವಾಗಲೇ ಅರ್ಥ ಮೂಡಬೇಕು. ಅಭಿನಯದ ಮುದ್ರೆಗಳ ಪರಿಚಯ ಪಡೆದುಕೊಂಡು ಸಮಯವರಿತು ಅವನ್ನು ಪ್ರಯೋಗ ಮಾಡುವುದು ಲೇಸು.

ಸರಾಗದಿಂದ ಸುಮ್ಮನೆ ವಾಚನ ಮಾಡುವುದೂ ಗಮಕವೇ. ಗದ್ಯಕೃತಿಗಳನ್ನು, ನಾಟಕ ಭಾಗಗಳನ್ನು, ಅನೇಕ ಹೊಸಗನ್ನಡ ಕವಿತೆಗಳನ್ನು-ಅದರಲ್ಲೂ ಹೆಚ್ಚಿನ ನವ್ಯಕತೆಗಳನ್ನು ಹಾಡಲಾಗದು. ಅವನ್ನು ಭಾವಪುರ್ಣವಾಗಿ ಅಭಿನಯ ಸಹಿತವಾಗಿ ಓದುವುದನ್ನು ಅಭ್ಯಾಸ ಮಾಡಬೇಕು. ಕನ್ನಡ ಸಾಹಿತ್ಯದಲ್ಲಿ ಬಗೆಬಗೆಯ ಕಾವ್ಯ ರಚನೆಯಾಗಿರುವುದರಿಂದ ಅವನ್ನು ಗಮಕಿಸುವ ರೀತಿಯೂ ಬಗೆಬಗೆಯಾಗಿದೆ. ಅದರ ಪ್ರಯೋಗವನ್ನು ಗಮಕಿಯಾದವನು ಸಾಧಿಸಬೇಕಾಗಿದೆ. ಮೊದಲು ಹಳೆಯ ಚಂಪುಕಾವ್ಯವನ್ನು ನೋಡಬಹುದು. ಅದರಲ್ಲಿ ಗದ್ಯ, ಪದ್ಯ ಮಿಶ್ರವಾಗಿರುತ್ತದೆ; ಕಂದ, ವೃತ್ತಗಳಿರುತ್ತವೆ. ಗದ್ಯವನ್ನು ಸ್ಫುಟವಾಗಿ ಸರಾಗವಾಗಿ ಓದಬೇಕು. ಅನೇಕ ವೃತ್ತಗಳಿಗೆ ಹಾಗೂ ಕಂದಕ್ಕೆ ತಾಳವಿಲ್ಲ. ಲಯವುಂಟು. ಅರ್ಥ ಕೆಡದಂತೆ, ನಿಲುಗಡೆ ಅರಿತು ಸೂಕ್ತ ರಾಗಗಳನ್ನು ಸಂಯೋಜಿಸಿ ಹಾಡಿದಾಗ ಮನರಂಜನೆಯಾಗುವುದು. ಆದಿಕವಿ ಪಂಪನ ಸಮಸ್ತಭಾರತವನ್ನೂ ಮಹಾಕವಿ ರನ್ನನ ಗದಾಯುದ್ಧವನ್ನೂ ವಾಚಿಸುವ ಬಗೆಯನ್ನು ಅರಿತುಕೊಳ್ಳಬೇಕು; ಜನ್ನನ ಯಶೋಧರ ಚರಿತೆ ಬರಿ ಕಂದಗಳಲ್ಲಿ ಬಂದಿದೆಯಾದರೂ ಸುಲಲಿತವಾಗಿದೆ, ಸುನಾದಮಯವಾಗಿದೆ. ವಿವಿಧ ರಾಗಗಳಲ್ಲಿ ಅದನ್ನು ಗಮಕಿಸಬಹುದು.


ಷಟ್ಪದಿ ಕಾವ್ಯಗಳಲ್ಲಿ ಕುಮಾರವ್ಯಾಸನ ಮಹಾಭಾರತ ಗಮಕಿಗಳ ಭಾಗ್ಯನಿಧಿ ಎನಿಸಿದೆ. ಕುಮಾರವಾಲ್ಮೀಕಿಯ ತೊರವೆ ರಾಮಾಯಣಕ್ಕೆ ಅನಂತರದ ಸ್ಥಾನ. ಇವೆರಡೂ ತುಂಬ ಜನಪ್ರಿಯವಾಗಿವೆ. ಭಾರತ ಬಿಂದೂರಾಯರು, ಕೃಷ್ಣಗಿರಿ ಕೃಷ್ಣರಾಯರು ವಾಚನ ಮಾಡಿ ನಾಡಿನಾದ್ಯಂತ ಇವನ್ನು ಪ್ರಚಾರ ಮಾಡಿದ್ದಾರೆ. ಜನಸಾಮಾನ್ಯರು ಗುರುತಿಸಬಲ್ಲ ನವರಾಗಗಳೇ ಸಾಕು. ಆದ್ದರಿಂದ ಗಮಕಿಗೂ ಸಂಗೀತಾಭ್ಯಾಸ ಬಹಳ ಮುಖ್ಯ. ರಾಗಗಳ ಪರಿಚಯ, ಅವುಗಳನ್ನು ಇಂಪಾಗಿ ಹಾಡುವ ಯೋಗ್ಯತೆ ಅವನಿಗಿರಬೇಕಾಗುತ್ತದೆ. ಸಾಹಿತ್ಯದಲ್ಲಿ ಅಡಗಿರುವ ನವರಸಗಳನ್ನು ಗುರುತಿಸಿ ಅದನ್ನು ಪೋಷಿಸುವ ರಾಗಶಕ್ತಿಯನ್ನು ಗಮಕಿ ಗಳಿಸಿರಬೇಕಾಗುತ್ತದೆ.


ಛಂದಸ್ಸಿನ ವಿಚಾರಕ್ಕೆ ಬಂದರೆ ಕವಿಯು ತನ್ನ ಕೃತಿಯ ಪದ್ಯಗಳನ್ನು ಯಾವ ತಾಳಗತಿಯಲ್ಲಿ ನಡೆಸಿದ್ದಾನೆಂಬ ಅರಿವು ಗಮಕಿಗೆ ಅಗತ್ಯ. ತಾಳಯುತವಾಗಿ ವಾಚಿಸುವುದು ರೂಢಿಯಲಿಲ್ಲದಿದ್ದರೂ ಕವಿಕೃತಿಯನ್ನು ವಾಚಿಸುವಾಗ ತಾಳಕ್ಕೆ ಆಧಾರವಾದ ಗತಿಯನ್ನು ಗುರುತಿಸಿ ಆ ಗತಿಯನ್ನು ಮೆರೆಸಬೇಕು. ಕವಿಗೆ ಸ್ಫೂರ್ತಿ, ಆವೇಶ ಬಂದಾಗ ಅವನ ಮಾತೂ ಲಯಬದ್ಧವಾಗುತ್ತದೆ, ರಾಗಬದ್ಧವಾಗುತ್ತದೆ. ಆಗ ಅವನ ಪದ್ಯಗಳು ಒಂದು ಗತಿಯಲ್ಲಿ ಅಳವಡುವಂತಾಗುತ್ತದೆ. ಅದನ್ನರಿತು ಗಮಕಿ ವಾಚಿಸಿದರೆ ವಾಚನದ ವೈಶಿಷ್ಟ್ಯ ಹೆಚ್ಚಾಗುವುದರೊಂದಿಗೆ ಕೃತಿಯ ಆಸ್ವಾದವೂ ಹೆಚ್ಚುತ್ತದೆ. ಗಮಕ ಕಲೆಯು ಬಹು ಪ್ರತಿಭೆಗಳನ್ನು ಅಂತರ್ಗತಗೊಳಿಸಿಕೊಂಡಿರುವ ಅದ್ಭುತ ಕಲಾಪ್ರಕಾರ. ಸುಶ್ರಾವ್ಯತೆ, ಕಾವ್ಯದ ಅರ್ಥವಂತಿಕೆ, ರಸಾನುಭವ, ಭಾಷಾಸೌಂದರ್ಯ ಇವೆಲ್ಲದರ ಸಮರ್ಥ ಅಭಿವ್ಯಕ್ತಿಗೆ ಪುರಕವಾದ ರಾಗ ಭಾವಗಳ ರಹಸ್ಯ ಇತ್ಯಾದಿಗಳೆಲ್ಲವೂ ಈ ಕಲೆಯಲ್ಲಿ ಅಡಗಿದೆ. ಗಮಕಿ ಎಂಬ ಹೆಸರಿಗೆ ಪಾತ್ರನಾದವನು ಕಾವ್ಯ ವಾಚಿಸುವಾಗ ಈ ಎಲ್ಲ ಅಂಶಗಳ ಸಮರ್ಥ ನಿರ್ವಹಣೆಯ ಜವಾಬ್ದಾರಿಯುಳ್ಳವನಾಗಿರಬೇಕು.


ಗಮಕವೆಂದರೆ ಸಂಸ್ಕೃತದಲ್ಲಿ ನಡೆ, ಗತಿ ಎಂದರ್ಥವಾಗುವುದು. ಗಮನದ ಭಾವವೆಂತಲೂ ಅರ್ಥ. ಸಂಗೀತ ಶಾಸ್ತ್ರದ ರೀತಿ ಗಮಕವೆಂದರೆ ಸ್ವರವಿನ್ಯಾಸ, ಧ್ವನಿ ವಿಶೇಷ ಎಂದರ್ಥ. ಆರೋಹಣ, ಅವರೋಹಣ, ಢಾಲು, ಸ್ಫುರಿತ, ಕಂಪನ, ಆಹತ, ಪ್ರತ್ಯಾಹತ, ತ್ರಿಪುಚ್ಛ, ಆಂದೋಳ, ಮೂರ್ಛನಾ ಎಂದು ಹತ್ತು ವಿಧವಾದ ಗಮಕಗಳು ಸಂಗೀತದಲ್ಲಿವೆ. ಗಮಕಿಯ ಗಮಕಕ್ಕೆ ಕಾಕು ಎಂದೂ ಸಂಸ್ಕೃತದಲ್ಲಿ ಕರೆಯುವರು.


19-20ನೆಯ ಶತಮಾನದ ಅವಧಿಯಲ್ಲಿ ಕರ್ನಾಟಕದಲ್ಲಿ ಗಮಕಕಲೆ, ಕಾವ್ಯವಾಚನ ಕ್ಷೇತ್ರದಲ್ಲಿ ಶ್ರಮಿಸುತ್ತ ಈ ಪ್ರಾಚೀನ ಕಲೆಯನ್ನು ನಾಡಿನಾದ್ಯಂತ ಪ್ರಸಾರ ಮಾಡಿದ ಹಿರಿಯರನೇಕರು ಆಗಿಹೋಗಿದ್ದಾರೆ, ಇನ್ನು ಹಲವು ಹಿರಿಯರು ನಮ್ಮೊಡನಿದ್ದು ಗಮಕ ಪ್ರಸಾರ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ. ಅಭಿನವ ಕಾಳಿದಾಸರೆಂದು ಪ್ರಸಿದ್ಧರಾಗಿದ್ದ ಬಸವಪ್ಪಶಾಸ್ತ್ರಿಗಳು (1843-91) ಗಮಕ ಕಲಾಕ್ಷೇತ್ರದಲ್ಲಿ ಪ್ರಥಮ ಸ್ಮರಣೀಯರು. ಇವರು ಸ್ವತಃ ಕವಿಗಳೂ ವಿದ್ವಾಂಸರೂ ಪಂಡಿತರೂ ಆಗಿದ್ದುದು ಇವರ ಗಮಕ ಕಲೆಗೆ ಅದ್ಭುತವಾಗಿ ವಿಶಿಷ್ಟ ಆಯಾಮಗಳನ್ನು ಒದಗಿಸಿತ್ತು. ಸಂಗೀತ-ಸಾಹಿತ್ಯ-ಭಾಷೆಗಳಲ್ಲಿನ ಪಾಂಡಿತ್ಯಪುರ್ಣತೆ ಇವರ ಗಮಕ ಕಲೆಯ ಶ್ರೀಮಂತಿಕೆಯಾಗಿತ್ತು. ಇವರ ಗಮಕ ವಾಚನವನ್ನು ಕುರಿತಂತೆ ಹಿರಿಯ ವಿದ್ವಾಂಸರಾದ ಆರ್. ನರಸಿಂಹಾಚಾರ್ಯರ ನುಡಿಗಳು ಇಲ್ಲಿ ಉಲ್ಲೇಖನೀಯ: ನನಗೆ ತಿಳಿದ ಹಾಗೆ ಭಾರತವನ್ನು ಈಚೆಗೆ ಚೆನ್ನಾಗಿ ಓದುತ್ತಿದ್ದವರು ಮೈಸೂರಿನಲ್ಲಿದ್ದ ಸುಪ್ರಸಿದ್ಧ ಬಸವಪ್ಪಶಾಸ್ತ್ರಿಗಳು. ಇವರು ಮೈಸೂರು ಶ್ರೀಮನ್ಮಹಾರಾಜರ ಆಸ್ಥಾನದಲ್ಲಿ ಕವಿಗಳಾಗಿದ್ದು ಅಭಿನವ ಕಾಳಿದಾಸ ಎಂಬುವ ಬಿರುದು ಪಡೆದಿದ್ದವರು. ಇವರಷ್ಟು ಚೆನ್ನಾಗಿ ಭಾರತವನ್ನು ಓದಿದವರನ್ನು ನಾನು ಕಂಡಿಲ್ಲ. ಈ ಮಾತುಗಳಿಂದ ಇವರ ಅವಧಿಯಲ್ಲಿ ಗಮಕಕಲೆ ಸಾಕಷ್ಟು ವ್ಯಾಪ್ತಿಯನ್ನುಳ್ಳದ್ದಾಗಿತ್ತು ಎಂಬುದು ತಿಳಿದುಬರುತ್ತದೆ. ಬಸವಪ್ಪಶಾಸ್ತ್ರಿಗಳ ಸಾಕ್ಷಾತ್ ಶಿಷ್ಯೆ ಹಾಡಿನ ನಾಗಮ್ಮ ಉತ್ತಮ ಗಮಕಿಯೆನಿಸಿಕೊಂಡಿದ್ದರು. ಇನ್ನೂ ಎಷ್ಟು ಶಿಷ್ಯರನ್ನು ಶಾಸ್ತ್ರಿಗಳು ತಯಾರು ಮಾಡಿದ್ದರೆಂಬುದು ಸ್ಪಷ್ಟವಾಗಿ ತಿಳಿಯುವುದಿಲ್ಲ. ಹಿರಿಯರಾಗಿದ್ದ ನಿಟ್ಟೂರು ಶ್ರೀನಿವಾಸರಾಯರೂ ಬಸವಪ್ಪಶಾಸ್ತ್ರಿಗಳನ್ನು ಕಂಡುಕೇಳಿದುದನ್ನು ತಿಳಿಸಿದ್ದಾರೆ (ಸಾಚ್ಯಗಮಕ ಸಂಮೇಳನದ ಗಮಕಮಂದಾರ ಎಂಬುವ ಸ್ಮರಣ ಸಂಚಿಕೆಯಲ್ಲಿ). ಅನಂತರದಲ್ಲಿ ಬೆಳೆದು ಬಂದ ಗಮಕ ಕಲೆಯಲ್ಲಿ ಕೆಲವು ಅಂಶಗಳೇ ಕಾಣಬಂದವು. ಸಾಹಿತ್ಯ ಪ್ರಧಾನವೇ, ಸಂಗೀತವೇ ಕಾವ್ಯವೋದುವಲ್ಲಿ ಗಮಕಿಗೆ ವ್ಯಾಖ್ಯಾನದ ಅಗತ್ಯವಿದೆಯೇ ಎಂಬುವ ಅನಿಸಿಕೆಯೂ ಮೂಡಿತು.


ಹಿರಿಯ ಗಮಕಿಗಳಲ್ಲಿ ಹೆಸರಾದವರು ಸಂಗೋಬಿಂದೂರಾಯರು (1877-1969) ಅಥವಾ ಭಾರತದ ಬಿಂದೂರಾಯರೆಂದೇ ಪ್ರಸಿದ್ಧರಾದವರು. ಸಾಹಿತ್ಯಕ್ಕೆ ಒತ್ತುಗೊಟ್ಟು ಸಂಗೀತ ರಸಭಾವಕ್ಕಾಗಿ ಮಾತ್ರ ಅಳವಡಿಸಿಕೊಳ್ಳುತ್ತ ಕಾವ್ಯವನ್ನು ಕೇಳುಗರಿಗೆ ಮುಟ್ಟಿಸುತ್ತಿದ್ದ ಬಿಂದೂರಾಯರ ಕುಮಾರವ್ಯಾಸ ಭಾರತ ಸಾರೋದ್ಧಾರ ಎಂಬುವ ಮೇರು ಕೃತಿ ಇಂದು ಆಕರ ಗ್ರಂಥವೆನಿಸಿದೆ. ರಾಯರ ಗಮಕ ಶುದ್ಧಗಮಕಪದ್ಧತಿಯೆಂದೇ ಪ್ರಸಿದ್ಧ. ಅವರ ಶಿಷ್ಯ-ಶಿಷ್ಯೆಯರು - ಮೈಸೂರಿನ ಭಾರತದ ಕೃಷ್ಣರಾಯರು, ಶಕುಂತಲಾಬಾಯಿ, ಪಾಂಡುರಂಗರಾವ್, ಎಂ.ಎಸ್. ಚಂದ್ರಶೇಖರಯ್ಯ, ಧಾರವಾಡದ ಸುಪ್ರಸಿದ್ಧ ಗವಾಯ್ ಗುರುರಾವ್ ದೇಶಪಾಂಡೆ ಮೊದಲಾದವರು.


ಹೀಗೆಯೇ ಮೈಸೂರಿನಲ್ಲಿದ್ದ ತಲಕಾಡು ಮಾಯಿಗೌಡರು, ಜವಳಿ ಅಂಗಡಿ ತಮ್ಮಯ್ಯ - ಇವರ ಸುಪ್ರಸಿದ್ಧ ಶಿಷ್ಯರು. ಅನೇಕ ಗ್ರಂಥ ರಚನೆಯನ್ನು ಮಾಡಿದ ಮೈಸೂರು ರಾಘವೇಂದ್ರರಾಯರು, ಕಳಲೆ ಸಂಪತ್ಕುಮಾರಾಚಾರ್ಯರ ಗಮ್ಮತ್ತಿನ ಗಮಕ ಹಾಗೂ ಅವರ ಶ್ಲೋಕ ಸಂಗೀತ, ಗೌರೀದೇವುಡು ನರಸಿಂಹಶಾಸ್ತ್ರೀ ಅವರು (1878-1933), ಮೈ.ಶೇ. ಅನಂತಪದ್ಮನಾಭರಾವ್ (1903-87), ಜೋಳದರಾಶಿ ದೊಡ್ಡನಗೌಡರು (1919-94), ಅನಂತಪದ್ಮನಾಭಯ್ಯ, ಕೆ.ಎ. ವೆಂಕಟಸುಬ್ಬಯ್ಯ ವ್ಯಾಖ್ಯಾನಕಾರ ಕ.ಲಿ. ವೈದ್ಯನಾಥನ್ (1928-2013), ಮಾಲೂರಿನ ಟಿ. ವೆಂಕಟಪ್ಪನವರು (1915-95), ಗಮಕ ರೂಪಕಗಳೆಂಬುವ ಹೊಸ ಪ್ರಕಾರವನ್ನು ಸೃಜಿಸಿದ ಹು.ಮ. ರಾಮಾರಾಧ್ಯರು (1907-73), ಸರೋಜಮ್ಮ ಅನಂತರಾಮಯ್ಯ (1918-93), ಮತ್ತೂರಿನ ರಾಮಾಶಾಸ್ತ್ರಿಗಳು ಹಾಗೂ ಲಕ್ಷ್ಮೀಕೇಶವಶಾಸ್ತ್ರಿಯವರು, ಮತ್ತೂರು ಕೃಷ್ಣಮೂರ್ತಿಯವರು ಹೀಗೆ ನಮಗೆ ದೊರಕುವ ದಾಖಲೆಗಳಿಂದ 500ಕ್ಕೂ ಹೆಚ್ಚು ಗಮಕಿಗಳು ವ್ಯಾಖ್ಯಾನಕಾರರು ಇದ್ದಾರೆ.


ಎಂ. ರಾಘವೇಂದ್ರರಾಯರು ಕುಮಾರವ್ಯಾಸ ಗುರುಕುಲ, ಕಾವ್ಯರಂಜನೀ ಸಭಾ ಮುಂತಾದ ಗಮಕ ಬೋಧನ ಶಾಲೆಗಳನ್ನು ತೆರೆದು ನೂರಾರು ಶಿಷ್ಯರನ್ನು ತಯಾರು ಮಾಡಿದರು ಹಾಗೂ ಕರ್ನಾಟಕ ಸರ್ಕಾರದಿಂದ ಕನಕಪುರಂದರ ಪ್ರಶಸ್ತಿಗೆ ಭಾಜನರಾದರು.


ಮೈಸೂರಿನಲ್ಲಿದ್ದ ಭಾರತದ ಕೃಷ್ಣರಾಯರೆಂದೇ ಹೆಸರಾದ ಹಿರಿಯ ಕೃಷ್ಣರಾಯರ ಗಮಕ ಶೈಲಿಯೇ ವಿಭಿನ್ನ. ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದ ಜೆ.ಸಿ. ರಾಲೋ ಅವರಿಗೆ ರಾಯರ ಗಮಕ ವಾಚನವೆಂದರೆ ಅತ್ಯಂತ ಪ್ರೀತಿ. ಹಾಗೆಯೆ ರಾಷ್ಟ್ರಕವಿ ಕುವೆಂಪು ಅವರ ಮಹಾ ಛಂದಸ್ಸಿನ ಪ್ರಸಿದ್ಧ ಕಾವ್ಯಗಳಾದ ಶ್ರೀರಾಮಾಯಣದರ್ಶನಂ, ಚಿತ್ರಾಂಗದಾ - ಇವುಗಳನ್ನು ಹಸ್ತಪ್ರತಿಯಲ್ಲೇ ವಾಚಿಸಿ, ಆಚಾರ್ಯ ವೆಂಕಣ್ಣಯ್ಯ, ಕೃಷ್ಣಶಾಸ್ತ್ರೀ ಮೊದಲಾದವರ ಪ್ರೀತಿಯನ್ನು ಗಳಿಸಿದವರು ಕೃಷ್ಣರಾಯರು. ಹಾಡಿದನು ಗಮಕಿ, ನಾಡು ನಲಿದುದು ರಸದ ಕಡಲಿನಲಿ ಧುಮುಕಿ ಎಂದೇ ಕವಿ ಕುವೆಂಪು ಅವರು ರಾಯರ ಗಮಕವನ್ನು ಪ್ರಶಂಸಿಸಿದ್ದಾರೆ. ಗಮಕ ಕಲೆಯನ್ನು ಹಾಗೂ ಕಾವ್ಯ-ಕಾವ್ಯಾಂತರಂಗ ಕುರಿತು ಕೆ.ಟಿ. ರಾಮಸ್ವಾಮೈಯ್ಯಂಗಾರ್ ರಂತಹ ಅನೇಕ ಹಿರಿಯ ಗಮಕಿಗಳೇ ಗಮಕಕಲೆ ಎಂಬಿತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇಂದಿಗೂ ಮೈಸೂರಿನ ಗಮಕ ಶೈಲಿ, ಧಾರವಾಡ-ಉತ್ತರಕರ್ನಾಟಕದ ಗಮಕಶೈಲಿ, ಶಿವಮೊಗ್ಗ-ಸಾಗರ ಪರಿಸರಗಳ-ಹೊಸಹಳ್ಳಿ ಮತ್ತೂರು ಶೈಲಿ - ಹೀಗೆ ಸ್ವತಂತ್ರ ವಿಭಿನ್ನಶೈಲಿಗಳಲ್ಲಿ ಗಮಕ ಕಲೆ ಬೆಳೆದುಬಂದಿದೆ. ಹೊಸಬರಲ್ಲಿ ಕೃ. ರಾಮಚಂದ್ರರು, ಮತ್ತೂರು ಹೊಸಹಳ್ಳಿಗಳ ಕೇಶವಮೂರ್ತಿಯವರು ಹಾಗೂ ಅವರ ಶಿಷ್ಯ ಪರಂಪರೆ, ನಿರ್ಮಲಾಪ್ರಸನ್ನ, ರಾಘವೇಂದ್ರರಾಯರ ಮಗ ಎಂ.ಆರ್. ಸತ್ಯನಾರಾಯಣ, ಗಂಗಮ್ಮ ಕೇಶವಮೂರ್ತಿ, ಅನ್ನಪುರ್ಣಮ್ಮ ರಘುಪತಿಶಾಸ್ತ್ರೀ, ಎನ್.ಕೆ. ಶ್ರೀರಂಗಮ್ಮ, ಹೀಗೆ ಅನೇಕ ಗಮಕಿಗಳು ಪ್ರಸಿದ್ಧರಾಗಿದ್ದಾರೆ.


ಕರ್ನಾಟಕ ಸರ್ಕಾರ ಹೊಸದಾಗಿ ಸ್ಥಾಪಿಸಿರುವ ಗಣ್ಯ ಪ್ರಶಸ್ತಿಯೆಂದರೆ ಕುಮಾರವ್ಯಾಸಪ್ರಶಸ್ತಿ. ಹಿರಿಯರಾದ ಹೊಸಹಳ್ಳಿ ಕೇಶವಮೂರ್ತಿಯವರು, ಗಮಕಿ ಬಿ.ಎಸ್.ಎಸ್. ಕೌಶಿಕ್, ವ್ಯಾಖ್ಯಾತರಾದ ರಘುಪತಿಶಾಸ್ತ್ರೀ, ಹಿರಿಯ ಸುಪ್ರಸಿದ್ಧ ಗಮಕಿ ಎಚ್.ಕೆ. ರಾಮಸ್ವಾಮಿ ಮೊದಲಾದ ಗಣ್ಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮತ್ತೂರಿನ ಹಿರಿಯ ಮಾರ್ಕಂಡೇಯ ಅವಧಾನಿಗಳು ಸುಪ್ರಸಿದ್ಧ ವ್ಯಾಖ್ಯಾತರಾಗಿರುವಂತೆಯೇ ಗಮಕಿ ಜಯರಾಮರಾವ್, ವ್ಯಾಖ್ಯಾನಕಾರರಾದ ಎ.ವಿ. ಪ್ರಸನ್ನ, ಎನ್.ಕೆ. ರಾಮಶೇಷನ್, ಗಮಕಿ ಹೊಸಬಾಳೆ ಸೀತಾರಾಮರಾವ್ - ಹೀಗೆ ಇನ್ನೂ ಅನೇಕ ಗಣ್ಯರು ಕನ್ನಡ ನಾಡಿನ ವಿಶಿಷ್ಟ ಕಲೆಯಾದ ಗಮಕ ಕಲೆಯ ಪ್ರಸಾರಕಾರ್ಯ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗುರುತಿಸಬಹುದಾದ ಸಂಘ-ಸಂಸ್ಥೆಗಳೆಂದರೆ ಕೆಂಗೇರಿ ಉಪನಗರದ ಶ್ರೀ ಹೈಮವತಮ್ಮನವರು ನಡೆಸುತ್ತಿರುವ ಸಂಸ್ಥೆ, ರಾಜಾಜಿನಗರದ ಕುಮಾರವ್ಯಾಸ ಮಂಟಪ, ಹೊಸಹಳ್ಳಿ ಗಮಕಗ್ರಾಮದ ಗಮಕ ಪರಿಷತ್ತು, ಕರ್ನಾಟಕ ಗಮಕ ಕಲಾ ಪರಿಷತ್ತು ಮೊದಲಾದವು.