ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಲಾಪಗಸ್ ದ್ವೀಪಗಳು

ವಿಕಿಸೋರ್ಸ್ ಇಂದ
Jump to navigation Jump to search
ಉಪಗ್ರಹದ ಚಿತ್ರ-2002

ಸಮಭಾಜಕೀಯ ಪೆಸಿಫಿಕ್ ಸಾಗರದಲ್ಲಿ, ಈಕ್ವಡಾರಿನ ಪಶ್ಚಿಮಕ್ಕೆ 800 ಕಿಮೀಗಳಿಂದ 1320ಕಿಮೀಗಳ ವರೆಗೆ 57500ಚ.ಕಿಮೀ ಗಳಲ್ಲಿ ಹರಡಿರುವ 14 ದೊಡ್ಡ ಮತ್ತು ಹಲವಾರು ಸಣ್ಣ ದ್ವೀಪಗಳ ಗುಂಪು. ಇವುಗಳ ಒಟ್ಟು ವಿಸ್ತೀರ್ಣ 7570 ಚ.ಕಿಮೀ. ಇವುಗಳಲ್ಲಿ ಅತ್ಯಂತ ದೊಡ್ಡದೂ ಎತ್ತರವಾದದ್ದೂ ಆದ ದ್ವೀಪ ಆಲ್ಬೆಮಾರ್ಲ್.


ಈ ದ್ವೀಪಗಳ ಉಗಮ ಹೇಗಾಯಿತೆಂಬುದು ನಿರ್ವಿವಾದವಾಗಿ ಇನ್ನೂ ಸ್ಥಾಪಿತವಾಗಿಲ್ಲ. ಇವು ಅಮೆರಿಕ ಖಂಡದೊಂದಿಗೆ ಎಂದಿಗೂ ಸೇರಿರಲಿಲ್ಲವೆಂದು ಕಾಣುತ್ತದೆ. ಈಗ ಜೀವಂತವಾಗಿಲ್ಲದ ಅಗ್ನಿ ಪರ್ವತಗಳ ಲಾವದಿಂದ ಇವು ಬಹಳಮಟ್ಟಿಗೆ ಕೂಡಿವೆ. ಆಲ್ಬೆಮಾರ್ಲ್ನ ಒಂದು ಜ್ವಾಲಾಮುಖಿ 1948ರಿಂದ ಈಚೆಗೆ ಮೂರು ಬಾರಿ ಜ್ವಾಲೆ ಉಗುಳಿತ್ತು.


ಈ ದ್ವೀಪಸ್ತೋಮ ಉಷ್ಣವಲಯದಲ್ಲಿದ್ದರೂ ಇಲ್ಲಿಯ ವಾಯುಗುಣ ಅನೇಕ ವ್ಯತಿಕ್ರಮಗಳಿಂದ ಕೂಡಿದ್ದು, ತೀರಪ್ರದೇಶದಲ್ಲಿ ಮಳೆ ಬಹಳ ಕಡಿಮೆ. ಗಾಳಿಯ ಉಷ್ಣತೆ 70°-85°ಫ್ಯಾ. ಸಮುದ್ರದ ನೀರಿನ ಮೇಲ್ಭಾಗದ ಉಷ್ಣತೆಯೂ ಕಡಿಮೆ (63°-86°ಫ್ಯಾ.). ಇದಕ್ಕೆ ಕಾರಣವೆಂದರೆ, ಈ ದ್ವೀಪಸ್ತೋಮದ ಸುತ್ತ ಬುದ್ಬುದಿಸುವ ಶೀತೋದಕ ಪ್ರವಾಹ.


ಭಾರಿ ಮೊಂಡುಗಳ್ಳಿ, ಕುರುಚಲು ಮತ್ತು ಕುಳ್ಳಾದ ಪರ್ಣಪಾತಿ ವೃಕ್ಷಗಳು ಕರಾವಳಿಯಲ್ಲಿ ವಿಶೇಷವಾಗಿವೆ. ಒಳನಾಡಿನಲ್ಲಿ ಪೇರಲ ಮತ್ತು ಸೂರ್ಯಕಾಂತಿ ಬೆಳೆಯುತ್ತವೆ.

ಇಲ್ಲಿ ನಾನಾ ಜಾತಿಯ ಪಕ್ಷಿಗಳು ಮತ್ತು ಉರಗಗಳು ಉಂಟು. ರಾಕ್ಷಸಾಕಾರದ ಆಮೆ ಮತ್ತು ಇಗ್ವಾನ ಇಲ್ಲಿಯ ಮುಖ್ಯ ಪ್ರಾಣಿಗಳು. ಈ ದ್ವೀಪಗಳ ಪ್ರಾಣಿಗಳ ಸಂರಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಮೀನುಗಾರಿಕೆ ಮತ್ತು ಚರ್ಮ ಹದಮಾಡುವುದು ಇಲ್ಲಿಯ ಮುಖ್ಯ ಕಸುಬುಗಳು. ಚರ್ಮ, ವಸ್ತ್ರ, ಗಂಧಕ ಮತ್ತು ಮೀನು ಇಲ್ಲಿಯ ಮುಖ್ಯ ನಿರ್ಯಾತಗಳು.

ಗಲಾಪಗಸ್ ದ್ವೀಪಸ್ತೋಮವನ್ನು 1535ರಲ್ಲಿ ಪನಾಮಾದ ಬಿಷಪ್ ಟಾಮಸ್ ಡಿ ಬೆರ್ಲಾಂಗ್ ಕಂಡುಹಿಡಿದ. ಪ್ರಸಿದ್ಧ ಕಾದಂಬರಿಕಾರ ಹೆರ್ಮನ್ ಮೆಲ್ವಿಲ್ 1841ರಲ್ಲಿ ಈ ದ್ವೀಪಸ್ತೋಮವನ್ನು ಸಂದರ್ಶಿಸಿದ್ದ.

1835ರಲ್ಲಿ ಚಾರಲ್ಸ್ ಡಾರ್ವಿನ್ ಈ ದ್ವೀಪಗಳಿಗೆ ಭೇಟಿ ಕೊಟ್ಟು ಇಲ್ಲಿಯ ಅಸಾಧಾರಣ ಜೀವಿಗಳನ್ನು ಅಭ್ಯಸಿಸಿ ತನ್ನ ಸಿದ್ಧಾಂತಗಳಿಗೆ ಅನೇಕ ವಿವರಗಳನ್ನು ಪಡೆದುಕೊಂಡ. ಈತನ ಭೇಟಿಯ ಅನಂತರ ಈ ದ್ವೀಪಸ್ತೋಮ ವಿಜ್ಞಾನಿಗಳ ಗಮನ ಸೆಳೆಯಿತು.

1832ರಲ್ಲಿ ಈ ದ್ವೀಪಸ್ತೋಮವನ್ನು ಈಕ್ವಡಾರ್ ಅಧಿಕೃತವಾಗಿ ವಶಪಡಿಸಿ ಕೊಂಡಿತು. ಚಾರಲ್ಸ್ ದ್ವೀಪದಲ್ಲಿ ವಸತಿ ಆರಂಭವಾಯಿತು. 1920 ರಿಂದ ಕೆಲವು ಐರೋಪ್ಯರೂ ಇಲ್ಲಿ ಬಂದು ನೆಲೆಸಿದರು. ಎರಡನೆಯ ಮಹಾಯುದ್ಧ ಕಾಲದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಇಲ್ಲೊಂದು ವಿಮಾನ ನೆಲೆ ಸ್ಥಾಪಿಸಿತ್ತು. ಈಚೆಗೆ ಈಕ್ವಡಾರ್ ಜನ ಅಧಿಕ ಸಂಖ್ಯೆಯಲ್ಲಿ ಇಲ್ಲಿ ನೀರಿನ ಸೌಕರ್ಯ ಇರುವೆಡೆಗಳಲ್ಲಿ ನೆಲಸುತ್ತಿದ್ದಾರೆ.