ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಂಧೀ, ದೇವದಾಸ್
ಗಾಂಧೀ, ದೇವದಾಸ್ 1900-1958. ಮಹಾತ್ಮ ಗಾಂಧೀ ಮತ್ತು ಕಸ್ತೂರಬಾ ಗಾಂಧೀಯರ ಕೊನೆಯ ಮಗ. ಗಾಂಧೀಯವರ ಇತರ ಮಕ್ಕಳಂತೆ ಇವರಿಗೂ ಸಾಮಾನ್ಯ ರೀತಿಯ ಶಾಲಾ-ಕಾಲೇಜ್ ಶಿಕ್ಷಣ ದೊರಕಲಿಲ್ಲ. ಇವರು ಗಾಂಧಿಯವರೊಂದಿಗೆ ಇದ್ದುದೇ ದೊಡ್ಡ ಶಿಕ್ಷಣವಾಯಿತು. ಇವರು ಯಂಗ್ ಇಂಡಿಯ ಪತ್ರಿಕೆಯಲ್ಲಿ ಕೆಲಸ ಮಾಡಿ, ಪತ್ರಿಕೋದ್ಯಮದ ಅನುಭವ ಪಡೆದರು.
1923ರಲ್ಲಿ ದೆಹಲಿಯಲ್ಲಿ ಸ್ಥಾಪಿತವಾದ ಹಿಂದೂಸ್ಥಾನ್ ಟೈಮ್ಸ್ ಎಂಬ ಇಂಗ್ಲಿಷ್ ದಿನಪತ್ರಿಕೆಗೆ 1940ರಲ್ಲಿ ದೇವದಾಸ್ ಗಾಂಧಿಯವರು ಕಾರ್ಯನಿರ್ವಾಹಕ ಸಂಪಾದಕರಾಗಿ ನೇಮಕಗೊಂಡರು. ಆಗ ಇವರ ಅನುಭವ ಒಳ್ಳೆಯ ಪ್ರಯೋಜನಕ್ಕೆ ಬಂತು. ಸಹ ಸಂಪಾದಕರಾಗಿದ್ದ ದುರ್ಗಾದಾಸ್ ಅವರ ನೆರವಿನಿಂದ ಪತ್ರಿಕೆಯನ್ನು ಹೆಚ್ಚು ಜನಪ್ರಿಯವನ್ನಾಗಿ ಮಾಡಲು ಪ್ರಯತ್ನಿಸಿದರು. ಸ್ವಾತಂತ್ರ್ಯ ಹೋರಾಟ, ಕಾಂಗ್ರೆಸ್ ಧ್ಯೇಯ ಇವನ್ನು ಪ್ರತಿಪಾದಿಸುತ್ತಿದ್ದ ಈ ಪತ್ರಿಕೆ 1947ರಲ್ಲಿ, ರಾಷ್ಟ್ರಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದ ಮೇಲೆ, ಸರ್ಕಾರದ ನೀತಿ-ಧೋರಣೆಗಳ ವಾಣಿಯಾಯಿತು. ಇದರ ಹಿಂದೀ ಅವತಾರಗಳಾದ ಹಿಂದೂಸ್ತಾನ್, ಹಿಂದೂಸ್ತಾನ್ ಸಾಪ್ತಾಹಿಕ ಇವೂ ಜನಪ್ರಿಯತೆ ಗಳಿಸಿದುವು. ಇದರ ಸಾಗರೋತ್ತರ ಆವೃತ್ತಿ ವಿದೇಶಗಳಲ್ಲಿಯ ರಾಷ್ಟ್ರೀಯರ ಪ್ರೀತಿಗೆ ಪಾತ್ರವಾಯಿತು. ದೇವದಾಸ್ ಗಾಂಧಿಯವರು 1947ರಲ್ಲಿ ಅಖಿಲಭಾರತ ಪತ್ರಕರ್ತರ ಸಮ್ಮೇಳನದ ಅಧ್ಯಕ್ಷರಾಗಿದ್ದರು. (ಜಿ.ವಿ.ಎನ್.)