ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಟ್ಷೆಡ್ ಯೋಹಾನ್ ಕ್ರಿಸ್ಟಾಫರ್

ವಿಕಿಸೋರ್ಸ್ದಿಂದ

ಗಾಟ್ಷೆಡ್ ಯೋಹಾನ್ ಕ್ರಿಸ್ಟಾಫರ್[ಸಂಪಾದಿಸಿ]

1700-1766. ಯುರೋಪಿನ ಸಾಂಸ್ಕೃತಿಕ ಚರಿತ್ರೆಯಲ್ಲೂ ಜರ್ಮನ್ ಸಾಹಿತ್ಯ ಚರಿತ್ರೆಯಲ್ಲೂ ಪ್ರಬುದ್ಧಯುಗ ಎಂದು ಕರೆಯಲ್ಪಟ್ಟಿರುವ 18ನೆಯ ಶತಮಾನದ ಪ್ರಮುಖ ಜರ್ಮನ್ ಲೇಖಕರಲ್ಲಿ ಮೊದಲಿಗ, ಈತನನ್ನು ಯುಗಪ್ರವರ್ತಕನೆಂದೇ ಕರೆದಿದ್ದಾರೆ. ಕೋನಿಗ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಮೊದಲು ದೇವತಾಶಾಸ್ತ್ರವನ್ನು ವ್ಯಾಸಂಗ ಮಾಡುತ್ತಿದ್ದ ಗಾಟ್ಷೆಡ್ ಕೆಲಕಾಲಾನಂತರ ಸಾಹಿತ್ಯ ಹಾಗೂ ಸೌಂದರ್ಯ ಮೀಮಾಂಸೆಯತ್ತ ಹೊರಳಿದ. ಕಡೆಗೆ ಅದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾದರೂ ಆ ಹುದ್ದೆಯಲ್ಲಿ ಹೆಚ್ಚು ಕಾಲ ಇರಲಿಲ್ಲ. ಬಲವಂತ ವಾಗಿ ಅರಸನ ಸಿಡಿಗುಂಡು ಸೈನ್ಯಕ್ಕೆ ತನ್ನನ್ನು ಎಳೆದೊಯ್ಯುವರೆಂಬ ಭೀತಿ ತಲೆದೋರಿತಾಗಿ ಕೂಡಲೇ ಬಿಟ್ಟು ಲೀಪ್ಜಿಗ್ ನಗರಕ್ಕೆ ಪಲಾಯನ ಮಾಡಿದ.

ಲೀಪ್ಜಿಗ್ ನಗರದಲ್ಲಿ ಹೆಸರಾಂತ ವಿಶ್ವವಿದ್ಯಾಲಯವಿತ್ತು; ಮೇಲಿಂದಮೇಲೆ ಅಲ್ಲಿ ದೊಡ್ಡ ದೊಡ್ಡ ಜಾತ್ರೆಗಳು ನಡೆಯುತ್ತಿದ್ದುವು. ಜರ್ಮನಿಯ ಪುಸ್ತಕ ವ್ಯಾಪಾರ ಕುದುರಿದ್ದಕ್ಕೆ ಈ ನಗರ ಬಹುಪಾಲು ಕಾರಣವೆನ್ನಲಾಗಿದೆ. ಈ ಎಲ್ಲ ಕಾರಣಗಳಿಂದ ಲೀಪ್ಜಿಗ್ ನಗರ ಇಡೀ ಉತ್ತರ ಯುರೋಪಿನಲ್ಲೇ ಒಂದು ಪ್ರಮುಖ ಕೇಂದ್ರವಾಗಿತ್ತು. ಲೀಪ್ಜಿಗ್ ಮುಟ್ಟಿದ ಕೂಡಲೇ ಗಾಟ್ಷೆಡ್ ಮತ್ತೆ ತಮ್ಮ ಅಧ್ಯಯನ ಪ್ರವಚನಗಳನ್ನು ಆರಂಭಿಸಿ 1730 ರಲ್ಲಿ ಕಾವ್ಯಕಲೆಯ ಪ್ರಾಧ್ಯಾಪಕನಾದ ನಲ್ಲದೆ ಡಾಯಿಷ್ಬಂದ್ ಗೆಸ್ಸಲ್ಷಾಫ್್ಟ ಎಂಬ ಸಂಘಕ್ಕೆ ಸದಸ್ಯನಾಗಿ ಆಯ್ಕೆಯಾದ; ಕೆಲವು ವರ್ಷಗಳ ಅನಂತರ ಈ ಸಂಘದ ಹಿರಿಯನಾದ ಕಾರಣ ಸಾಹಿತ್ಯ ಪ್ರಪಂಚದಲ್ಲಿ ಒಂದು ಮಹಾಶಕ್ತಿಯೇ ಆದ. ವ್ಯಕ್ತಿವಾದ ಮತ್ತು ವಿಚಾರವಾದಗಳು ಸಂಗಮಿಸಿ ಉಕ್ಕೇರುತ್ತಿದ್ದ ಕಾಲವದು. ಈ ಪ್ರವಾಹಕ್ಕೆ ದುಮುಕಿ ಗಾಟ್ಷೆಡ್ ತನ್ನ ಸರ್ವಶಕ್ತಿಯಿಂದಲೂ ಲೀಫ್ಜಿಗ್ ನಗರವನ್ನು ಜರ್ಮನಿಯ ಬೌದ್ಧಿಕ ಕೇಂದ್ರವನ್ನಾಗಿ ಮಾಡಲು ಶ್ರಮಿಸಿದ. ಅಡಿಸನ್ನನ ಸ್ಪೆಕ್ಟೇಟರ್ ಪತ್ರಿಕೆಯ ಮಾದರಿಯಲ್ಲಿ ಡೀ ವರ್ನೂನ್ಫ್ತಿಗನ್ ಟ್ಯಾಡ್ಲೆರಿನ್ನನ್ ಎಂಬ ಪತ್ರಿಕೆಯನ್ನು ಆರಂಭಿಸಿದ. ಇದಾಗಲೀ 1727ರಲ್ಲಿ ಈತ ಹೊರಡಿಸಿದ ಡರ್ ಬೀಡರ್ಮನ್ ಎಂಬ ಪತ್ರಿಕೆಯಾಗಲೀ ಊರ್ಜಿತವಾಗಲಿಲ್ಲ . ಗಾಟ್ಷೆಡ್ಡನ ಮೊಟ್ಟಮೊದಲ ಮುಖ್ಯ ಕೃತಿಯೆಂದರೆ ಫರ್ಸೂಕ್ ಐನೆರ್ ಕ್ರಿಟಿಷೆನ್ ಡಿಕ್ಸ್ಟಕುನ್ಸ್ಸ್ಟ ಫಾರ್ ಡೀ ಡಾಯ್ಟ್ಯನ್ ಎಂಬ ಕಾವ್ಯಮೀಮಾಂಸೆಯನ್ನು ಕುರಿತ ಗ್ರಂಥ (1730). ಈ ಕೃತಿಯಿಂದಾಗಿ ಅದುವರೆಗೂ ಪ್ರಸಿದ್ಧವಾಗಿದ್ದ ಓಪಿಟ್ಜನ ಕಾವ್ಯ ಮೀಮಾಂಸಾ ಗ್ರಂಥ ಬುಕ್ ಫಾನ್ ಡೇರ್ ಡಾಯ್ ಟ್ಶೆನ್ ಪೊಯೆಟೆರೀ (1624) ತನ್ನ ಪ್ರಾಶಸ್ತ್ಯವನ್ನು ಕಳೆದುಕೊಂಡಿತು. ಅಲ್ಲದೆ ಅದುವರೆಗೂ ಪ್ರಚಾರದಲ್ಲಿ ತೀರ ಕೃತಕವಾದ ಬರೋಕ್ ಶೈಲಿಗೆ ಗಾಟ್ಷೆಡ್ಡನ ಗ್ರಂಥ ಕೊಡಲಿಪೆಟ್ಟು ಹಾಕಿ ಜರ್ಮನ್ ಸಾಹಿತ್ಯಕ್ಕೆ ದೊಡ್ಡ ಉಪಕಾರವೆಸಗಿತು. ಇದು ಕಾವ್ಯರಚನೆಗೆ ಕೈಗನ್ನಡಿಯಾಗ ಬೇಕೆಂದೇ ಬರೆದ ಶಾಸ್ತ್ರ ಗ್ರಂಥ. ಇದರಲ್ಲಿ ಗಾಟ್ಷೆಡ್ ಬಹುವಾಗಿ ಫ್ರೆಂಚ್ ಮೂಲಗಳಿಂದ, ಅದರಲ್ಲೂ ವಿಶೇಷವಾಗಿ ಲೀ ಬಾಸು ಮತ್ತು ದಾಬಿಗ್ನಾಕ್ ಎಂಬ ಲೇಖಕರ ಕೃತಿಗಳಿಂದ ವಿಷಯವನ್ನು ಸಂಗ್ರಹಿಸಿ ಅಳವಡಿಸಿಕೊಂಡಿದ್ದಾನೆ. ಕಾವ್ಯವೆಂದರೆ ಕೇವಲ ಛಂದೋಬದ್ಧವಾದ ಪಂಕ್ತಿಗಳನ್ನು ನಿರ್ಮಿಸುವ ಯಾಂತ್ರಿಕ ಚಮತ್ಕಾರ ಅಲ್ಲ; ಅದು ನಿಸರ್ಗದ ಅನುಕರಣವಾಗಬೇಕು ಎಂದು ಗಾಟ್ಷೆಡ್ ಒತ್ತಾಯವಾಗಿ ನಿರೂಪಿಸಿದ. ಕಾವ್ಯ ಕೃತಕವಾಗಬಾರದು. ಸಹಜವಾಗಿರಬೇಕು. ಸ್ವಾಭಾವಿಕವಾಗಿರಬೇಕು. ಎಂದವನು ಮೇಲಿಂದಮೇಲೆ ಘೋಷಿಸುತ್ತಾನಾದರೂ ಅವನಿಗೆ ಕಾವ್ಯದ ಮರ್ಮ ತಿಳಿದಿಲ್ಲವೆನಿಸುತ್ತದೆ. ಫ್ರೆಂಚ್ ಲೇಖಕರ ಪ್ರಭಾವಕ್ಕೆ ಅತಿಯಾಗಿ ಒಳಪಟ್ಟುದರಿಂದ ಆತ ಕಾವ್ಯದ ಶರೀರಕ್ಕೆ ಹೆಚ್ಚು ಪ್ರಾಮುಖ್ಯಕೊಟ್ಟನಾಗಿ ಕಾವ್ಯದ ಆತ್ಮ ಆತನಿಗೆ ಕಾಣದಾಯಿತು. ಫ್ರೆಂಚ್ ಲೇಖಕರಂತೆ ಅವನೂ ಸಾಹಿತ್ಯವನ್ನು ಕೃತಕವಾಗಿ ವರ್ಗೀಕರಿಸಿದ. ಕಾವ್ಯಾನುಭವದಲ್ಲಿ ಉತ್ತಮ ಅಭಿರುಚಿ ಎಂದರೇನು ಎಂಬುದನ್ನು ವಿವರಿಸಲು ಒಂದು ದೊಡ್ಡ ಸೂತ್ರಾವಳಿಯನ್ನೇ ನಿರ್ಮಿಸಿದ. ಕಾವ್ಯರಚನೆಯಲ್ಲಿ ವಿಚಾರ ಮತ್ತು ಭಾವನಾಶಕ್ತಿಗಳ ಪರಸ್ಪರ ಪಾತ್ರವೇನು ಎಂಬುದನ್ನು ವಿಸ್ತಾರವಾಗಿ ವಿವೇಚಿಸಿದ. ಈ ಪ್ರಯತ್ನ ನಿಜಕ್ಕೂ ಮೆಚ್ಚತಕ್ಕದ್ದು. ಆದರೆ ಕಾವ್ಯರಚನೆಯಾಗಲಿ ಕಾವ್ಯನುಭವವಾಗಲಿ ಬರಿಯ ನಿಯಮ-ನಿರ್ಬಂಧಗಳಿಗೊಳಪಟ್ಟದ್ದಲ್ಲ ಎಂಬುದನ್ನು ಗಾಟ್ಷೆಡ್ ಅರಿಯದೆ ಹೋದುದು ದುರ್ದೈವ. ಕಾವ್ಯವು ನಿಸರ್ಗವನ್ನೂ ಮಾನವ ಸ್ವಭಾವವನ್ನೂ ಅನುಸರಿಸಬೇಕೆಂದು ನಿರೂಪಿಸಹೊರಟವನು ಅದರೊಡನೆ ಫ್ರಾನ್ಸಿನ ಅಭಿಜಾತ ಸಾಹಿತ್ಯ ಲೇಖಕರು ಸೃಷ್ಟಿಸಿದ ನಿಯಮಗಳನ್ನೂ ಅವರು ಅನುಸರಿಸಿದ ವಿಧಾನಗಳನ್ನು ಬೆರಸಿದ. ಇದರಿಂದ ಇವನ ನಿರೂಪಣೆಯಲ್ಲಿ ಪುನಃ ಪುನಃ ಪುರ್ವಾಪರ ವಿರೋಧಗಳೂ ಅಸಾಂಗತ್ಯಗಳೂ ಹುಟ್ಟಿದುವು.

ತನ್ನ ಮೂಲತತ್ತ್ವಕ್ಕೂ ಫ್ರೆಂಚ್ ಲೇಖಕರ ಕಟ್ಟುಪಾಡುಗಳಿಗೂ ಪರಸ್ಪರ ಸಾಮಂಜಸ್ಯವಿಲ್ಲದಿರುವುದರಿಂದಲೇ ತನ್ನ ನಿರೂಪಣೆಯಲ್ಲೂ ಪರಸ್ಪರ ವಿರೋಧಗಳು ಉಂಟಾಗುತ್ತಿವೆಯೆಂಬುದು ಅವನಿಗೇ ಅರಿವಾಗಿತ್ತು. ಅವನ ನಿರೂಪಣೆಯಲ್ಲೇ ಇದು ಸ್ಪಷ್ಟವಾಗಿ ಕಂಡುಬರುತ್ತದೆ. ಆದರೂ ಕಾವ್ಯದ ವಿವಿಧ ರೂಪಗಳ ಸೃಷ್ಟಿಗೆ ಆವಶ್ಯಕವೆಂದು ತೋರಿದ ನಿಯಮಗಳನ್ನು ಪ್ರತಿಪಾದಿಸುವುದು, ಹಾಗೂ ವಿಚಾರ ಮತ್ತು ಸಾಮಾನ್ಯಾನುಭವಗಳಿಗೆ ವಿರುದ್ಧವಾಗಿವೆ ಯೆಂದು ಅನ್ನಿಸಿದ ಕಾವ್ಯಕೃತಿಗಳನ್ನು ಖಂಡಿಸುವುದು ಇವೇ ಗಾಟ್ಷೆಡ್ಡನ ಮುಖ್ಯ ಗುರಿಗಳಾದುವು. ತನ್ನ ಈ ಹೆಗ್ಗುರುತುಗಳ ದೃಷ್ಟಿಯಿಂದಲೇ ಈತ ಮಿಲ್ಟನ್ ಮಹಾಕವಿಯ ಪ್ಯಾರಡೈಸ್ ಲಾಸ್ಟ್ ಮಹಾಕಾವ್ಯವನ್ನು ಕಟುವಾಗಿ ಟೀಕಿಸಿದ. ಈ ಟೀಕೆಯಿಂದಲೇ ಗಾಟ್ಷೆಡ್ಡನಿಗೂ ಬಾಡ್ಮರ್ ಮತ್ತು ಬ್ರೀಟಿನ್ಗರ್ ಎಂಬ ಸ್ವಿಟ್ಜರ್ಲೆಂಡಿನ ಲೇಖಕರಿಗೂ ಭಿನ್ನಾಭಿಪ್ರಾಯ ಆರಂಭವಾದದ್ದು. ಈ ಭಿನ್ನಾಭಿಪ್ರಾಯ ಮುಂದೆ ಬಲವಾಗಿ ಬೆಳೆದು ಕಡೆಗೆ ಗಾಟ್ಷೆಡ್ಡನ ಪ್ರತಿಷ್ಠೆ, ಪ್ರಭಾವಗಳು ಇಳಿಮುಖವಾಗಲು ಕಾರಣವಾಯಿತು.

ಆದರೂ ಗಾಟ್ಷೆಡ್ ಸಮಕಾಲೀನ ಸಾಹಿತ್ಯದಲ್ಲಿ ತೀವ್ರಾಸಕ್ತಿ ತಳೆದದ್ದು ಮೆಚ್ಚತಕ್ಕ ವಿಷಯ. ಅವನ ತಿದ್ದುಪಾಟುಗಳಿಂದ ಉಳಿದೆಲ್ಲ ಸಾಹಿತ್ಯರೂಪಗಳಿಗಿಂತ ನಾಟಕ ಸಾಹಿತ್ಯಕ್ಕೆ ಆದ ಉಪಕಾರ ಹೆಚ್ಚು. ಆ ಕಾಲದಲ್ಲಿ ನಾಟಕ ಸಾಹಿತ್ಯಕ್ಕೂ ನಾಟಕರಂಗಕ್ಕೂ ಸಂಬಂಧವೇ ಇಲ್ಲದಂತಾಗಿದ್ದುದು ಅವನಿಗೆ ಕಂಡಬಂತು. ಜನಪ್ರಿಯ ನಾಟಕಗಳು ಸುಸಂಸ್ಕೃತರ ಮುಂದೆ ಪ್ರದರ್ಶಿಸಲು ಯೋಗ್ಯವಾಗಿರಲಿಲ್ಲ. ಗಾಟ್ಷೆಡ್ ಉತ್ತಮ ಸಾಹಿತ್ಯ ಕೃತಿಗಳಾದ ನಾಟಕಗಳನ್ನು ರಂಗಭೂಮಿಗೆ ತಂದು ನಾಟಕಕ್ಕೂ ರಂಗಭೂಮಿಗೂ ನಡುವೆ ಕತ್ತರಿಸಿಹೋಗಿದ್ದ ಸಂಬಂಧವನ್ನು ಪುನಃ ಬೆಸೆದ. ಯೋಹಾನ್ ನ್ಯೂಬರ್ ಮತ್ತು ಅವನ ಪತ್ನಿ ಕ್ಯಾರೊಲಿನ್ (1697-1760) ಇವರ ನೇತೃತ್ವದಲ್ಲಿ ನಡೆಯುತ್ತಿದ್ದ ಒಂದು ನಾಟಕ ಮಂಡಲಿಯ ಸಹಾಯದಿಂದ ಗಾಟ್ಷೆಡ್ ಫ್ರೆಂಚ್ ಅಭಿಜಾತ ನಾಟಕದ ಅತ್ಯುತ್ತಮ ಕೃತಿಗಳನ್ನು ಜರ್ಮನ್ ರಂಗಭೂಮಿಯಲ್ಲಿ ಪ್ರತಿಷ್ಠಾಪಿಸಿದ. ಇದರ ಪರಿಣಾಮವಾಗಿ ರಂಗಭೂಮಿ ಸುಶಿಕ್ಷಿತ ವರ್ಗಗಳಿಗೆ ಆಕರ್ಷಕವಾಯಿತು.

ಒಂದು ವಿಷಯವನ್ನು ನೆನಪಿಡಬೇಕು. ಇಂಗ್ಲಿಷ್ ಸಾಹಿತಿಗಳು ಹಾಗೂ ವಿಮರ್ಶಕರಂತೆ ಗಾಟ್ಷೆಡ್ಡನೂ ನಾಟಕ ವಾಸ್ತವಿಕವಾಗಿರಬೇಕೆಂದು ಪದೇ ಪದೇ ಎಚ್ಚರಿಸಿದ, ರಂಗಭೂಮಿಯಲ್ಲಿ ನಟನಟಿಯರ ವೇಷಭೂಷಣಗಳು ಐತಿಹಾಸಿಕ ದೃಷ್ಟಿಯಿಂದ ವಾಸ್ತವಿಕವಾಗಿರಬೇಕೆಂದು ಒತ್ತಾಯಪಡಿಸಿದ. ಆಡಂಬರವೂ ಕೃತಕವೂ ಆದ ಭಾಷಣಶೈಲಿಯನ್ನೂ ಕೆಳದರ್ಜೆಯ ಹಾಸ್ಯವನ್ನೂ ಸಂಪುರ್ಣವಾಗಿ ನಾಟಕದಿಂದ ತೊಡೆದುಹಾಕಿದ. ಜೊತೆಗೆ ನಾಟಕದ ಸಹಜತೆಗೆ ಮೂಲಕಾರಣಗಳಾಗಿರುವ ಕಾಲ, ದೇಶ ಮತ್ತು ಕ್ರಿಯೆಗಳ ಐಕ್ಯಕ್ಕೆ ಪ್ರಾಧಾನ್ಯ ಕೊಟ್ಟ. ಈ ಸುಧಾರಣೆಗಳಲ್ಲಿ ಕೊನೆಯದರಿಂದ ಏನು ಒಳ್ಳೆಯದಾಯಿತು ಎಂಬುದು ಚರ್ಚಾಸ್ಪದವಾದ ವಿಷಯ. ರಂಗಭೂಮಿಯನ್ನು ಸುಧಾರಿಸಿದ ಮೆಲೆ ಅಭಿನಯಯೋಗ್ಯ ನಾಟಕಗಳನ್ನು ಒದಗಿಸುವ ಭಾರವೂ ಗಾಟ್ಷೆಡ್ಡನ ಮೇಲೆಯೇ ಬಿತ್ತು. ಅವನೂ ಅವನ ಮಿತ್ರರೂ ಸೇರಿ ಒಂದು ನಾಟಕ ಭಂಡಾರವನ್ನೇ ಕೂಡಿಸಲು ಯತ್ನಿಸಿದರು. ಇದರಲ್ಲಿ ಹೆಚ್ಚು ಪಾಲು ಭಾಷಾಂತರಗಳು. 1740 ರಿಂದ 1745ರ ವರೆಗಿನ ಅವಧಿಯಲ್ಲಿ ಗಾಟ್ಷೆಡ್ಡನೂ ಅವನ ಸಹೋದ್ಯೋಗಿಗಳೂ ನಾಟಕಗಳ ದೊಡ್ಡ ಸಂಕಲವೊಂದನ್ನು ಆರು ಸಂಪುಟಗಳಲ್ಲಿ ಪ್ರಕಟಿಸಿದರು. ಇದರ ಹೆಸರು ಡಾಯಿಟ್ಶೆ ಷಾನ್ಬ್ಯೂನೆ ನಾಹ್ ಡೇನ್ ರೆಗೆಲ್ಸ್ ನ ಡೀರ್ ಆಲ್ಟೆನ್ ಗ್ರೀಕೆನ್ ಉಂಟ್ ರೋಮರ್ ಐನ್ಗೆರಿಕ್ಟೆಟ್ ಎಂದು. ಈ ಸಂಕಲನಕ್ಕೆ ನಾಟಕಗಳನ್ನು ಒದಗಿಸಿದವರಲ್ಲಿ ಗಾಟ್ಷೆಡ್ಡನ ಪತ್ನಿ ಲೂಯಿಸ ಅಡೆಲ್ಗುಂಡ್ ವಿಕ್ಟೋರಿಯ (1713 - 62) ಒಬ್ಬಳು. ಈಕೆಗೆ ಕಾಮಿಡಿಗಳನ್ನು ಭಾಷಾಂತರಿಸುವ ಕೆಲಸ ಕೊಡಲಾಗಿತ್ತು. ಈಕೆ ರಚಿಸಿದ ಎರಡು ಮೂರು ಸ್ವತಂತ್ರ್ಯ ನಾಟಕಗಳು ಗಾಟ್ಷೆಡ್ಡನು ಬರೆದು ಹೆಸರುಗಳಿಸಿದ ಡೇರ್ ಸ್ಟರ್ಬೆಂಡೆ ಕಾಟೊ ಎಂಬ ಟ್ರ್ಯಾಜಡಿಗಿಂತ ಉತ್ತಮವಾಗಿವೆ. ಕಾಟೋ ಪ್ರಕಟವಾದದ್ದು 1731 ರಲ್ಲಿ. ಇದು ಬಹುಮಟ್ಟಿಗೆ ಫ್ರೆಂಚ್ ನಾಟಕಕಾರ ದೇ ಚಾಮ್ ರಚಿಸಿದ ಕೇತನ್ ದೂ ತೀಕ್ (1715) ಎಂಬ ಟ್ರ್ಯಾಜಡಿಯ ಭಾಷಾಂತರ. ಮುಕ್ತಾಯಕ್ಕೆ ಅಡಿಸನ್ನನ ನಾಟಕದ ಮುಕ್ತಾಯವನ್ನು ಹೊಂದಿಸಿಕೊಳಲಾಗಿದೆ. ಗಾಟ್ಷೆಡ್ಡನ ಈ ಟ್ರ್ಯಾಜಡಿಯಲ್ಲಿ ಸೂತ್ರರೂಪದಲ್ಲಿರುವ ಅಸಂಖ್ಯ ಸೂಕ್ತಿಗಳೂ ಪ್ರಭಾವಪುರ್ಣವಾದ ಒಂದೆರಡು ದೃಶ್ಯಗಳೂ ಇವೆ. ಆದ್ದರಿಂದಲೇ ಈ ನಾಟಕ ಜರ್ಮನ್ ರಂಗ ಭೂಮಿಯಲ್ಲಿ ಇಪ್ಪತ್ತು ವರ್ಷಗಳಷ್ಟು ದೀರ್ಘಕಾಲ ಜನಪ್ರಿಯವಾಗಿ ಉಳಿಯಿತು.

ರಂಗಭೂಮಿಯಲ್ಲಿ ಗಾಟ್ಷೆಡ್ ಮಾಡಿದ ಸುಧಾರಣೆಗಳು ಬಹುಮಟ್ಟಿಗೆ ಸಫಲಗೊಂಡುವು. ಅವನ ಅಧ್ಯಕ್ಷತೆಯಲ್ಲಿ ಜರ್ಮನ್ ಸಂಘ ಏಳಿಗೆ ಪಡೆಯಿತು. 1732 ರಲ್ಲಿ ಈತ ಸ್ಥಾಪಿಸಿದ ಸಾಹಿತ್ಯ ಪತ್ರಿಕೆ ಅವಿಚ್ಛಿನ್ನವಾಗಿ ಹನ್ನೆರಡು ವರ್ಷಕಾಲ ನಡೆಯಿತು. ಅದರ ಹೆಸರು ಬ್ರೈಟೇಗೆ ಟ್ಸುರ್ ಕ್ರಿಟಿಷೆನ್ ಹಿಸ್ಟಾರಿಯಿ ಡೇರ್ ಡಾಯಿ ಟ್ಯೆನ್ ಶ್ಪ್ರಾಕೆ ಪೊಯೆಸೀ ಉಂಟ್ ಬೆರೆಡ್ಸಾóಮ್ಕೈಟ್. ಈ ಎಲ್ಲ ಕಾರಣಗಳಿಂದ ಗಾಟ್ಷೆಡ್ಡನ ಗೌರವ ಅತ್ಯುನ್ನತ ಮಟ್ಟಕ್ಕೇರಿತು. ಅವನ ಮಾತು ಅಧಿಕಾರವಾಣಿ ಯಾಯಿತು. ಸಾಹಿತ್ಯಪ್ರಪಂಚದಲ್ಲಿ ಈತ 1738 ರವರೆಗೂ ಪ್ರತಿವಾದಿಭಯಂಕರನಾಗಿದ್ದ. ಆದರೆ ಆ ವರ್ಷ ಇವನಿಗೂ ಇವನ ಅನುಯಾಯಿಗಳಿಗೂ ವಿರಸದ ಮುನ್ಸೂಚನೆ ಕಾಣಿಸಿಕೊಂಡಿತು. ಮಿಲ್ಟನ್ ಮಹಾಕವಿಯ ಪ್ಯಾರಡೈಸ್ ಲಾಸ್ಟ್ ಮಹಾಕಾವ್ಯವನ್ನು ಗಾಟ್ಷೆಡ್ ಕಟುವಾಗಿ ಟೀಕಿಸಿದ್ದನೆಂದು ಹಿಂದೆಯೇ ಹೇಳಲಾಗಿದೆ. 1732 ರಲ್ಲಿ ಬೋಡ್ಮರ್ ಎಂಬ ಸ್ವಿಸ್ ಲೇಖಕ ಆ ಮಹಾಕಾವ್ಯವನ್ನು ಜರ್ಮನ್ ಭಾಷೆಗೆ ಪರಿವರ್ತಿಸಿದನಲ್ಲದೆ 1738 ರಲ್ಲಿ ಆತನೂ ಆತನ ಸ್ವಿಸ್ ಮಿತ್ರ ಬ್ರೀಟಿಂಗರ್ ಇಬ್ಬರೂ ಗಾಟ್ಷೆಡ್ಡನ ಅಭಿಪ್ರಾಯಗಳನ್ನು ಪ್ರತ್ಯಕ್ಷವಾಗಿ ಟೀಕಿಸತೊಡಗಿದರು. 1740 ರಲ್ಲಿ ಬ್ರೀಟಿಂಗರನ ಕ್ರಿಟಿಷೆ ಡಿಕ್ಟಕುನ್ಸ್ಟ ಮತ್ತು ಬೋಡ್ಮರನ ಕ್ರಿಟಿಷೆ ಅಭಾಂಡ್ಲೂಂಗ್ ಫಾನ್ ಡೇಮ್ ವುಂಡರ್ಬಾರೆನ್ ಇನ್ ಡೇರ್ ಪೊಯೆಸೀ ಎಂಬ ವಿಮರ್ಶನ ಗ್ರಂಥಗಳು ಪ್ರಕಟವಾದುವು. ಇವೆರಡರಲ್ಲೂ ಗಾಟ್ಷೆಡ್ಡನ ಅಭಿಪ್ರಾಯಗಳನ್ನು ಬಲವಾಗಿ ಟೀಕಿಸಲಾಗಿತ್ತು. ಈ ಟೀಕೆಯನ್ನು ಅಪಮಾನವೆಂದು ಭಾವಿಸಿ ಗಾಟ್ಷೆಡ್ ಕೆರಳಿಬಿದ್ದ. ಇವನು ಮತ್ತು ಇವನ ಅನುಯಾಯಿಗಳಾದ ಲೀಪ್ಜಿಗ್ ಪಂಥದವರಿಗೂ ಬೋಡ್ಮರ್ ಹಾಗೂ ಬ್ರೀಟಿಂಗರ್ರವರ ಪ್ರಭಾವಕ್ಕೊಳಪಟ್ಟ ಸ್ವಿಸ್ ಪಂಥದವರಿಗೂ ಒಂದು ಕಾಳಗವೇ ಆರಂಭವಾಯಿತು. ಕಾವ್ಯದ ನಿಜವಾದ ಹೃದಯ ಏನೆಂಬುದನ್ನು ಸ್ಪಷ್ಟಪಡಿಸಹೊರಟ ಸ್ವಿಸ್ ಪಂಥದವರಿಗೆ ಕಾವ್ಯದ ಮರ್ಮ ಗಾಟ್ಷೆಡ್ಡನಿಗಿಂತ ಚೆನ್ನಾಗಿ ಅರಿವಾಗಿತ್ತೆಂಬುದು ಸ್ಪಷ್ಟ. ಆದುದರಿಂದ ಈ ವಾದ - ವಿವಾದದಲ್ಲಿ ಗಾಟ್ಷೆಡ್ ಸೋತದ್ದು ಸಹಜವೇ ಆಗಿದೆ.

ಗಾಟ್ಷೆಡ್ ಮಾಡಿದ ಉಗ್ರ ಟೀಕೆಯಿಂದ ಕೆರಳಿ ಆತ್ಮಸಮರ್ಥನೆ ಮಾಡಿಕೊಳ್ಳು ವುದಕ್ಕಾಗಿಯೇ ಬೋಡ್ಮರ್ ಕ್ರಿಟಿಷ್ ಬೆಟ್ರಾಕ್ಟೂಂಗೆನ್ ವ್ಯೂಬರ್ ಡೀ ಪೊಯೆಟಿಷನ್ ಗೆಮಾಲ್ಡೆ ಡೇರ್ ಡಿಕ್ಟರ್ ಎಂಬ ಗ್ರಂಥ ಬರೆದು ಅದರಲ್ಲಿ ಗಾಟ್ಷೆಡ್ಡನ ಅಭಿಪ್ರಾಯವನ್ನು ಖಂಡತುಂಡ ಮಾಡಿದ. ಬಳಿಕ ಉಭಯಪಂಥದ ಹಿಂಬಾಲಕರೂ ಪರಸ್ಪರ ಅಣಕ, ವಿಕಟಹಾಸ್ಯ, ವ್ಯಂಗ್ಯ, ವಿಡಂಬನ ಮುಂತಾದ ಎಲ್ಲ ಬಗೆಯ ಅಸ್ತ್ರಶಸ್ತ್ರ ಗಳನ್ನೂ ಪ್ರಯೋಗಿಸಿದರು. ಅಸಂಖ್ಯ ಕಿರುಹೊತ್ತಿಗೆಗಳು ಹಾಗೂ ನಿಯತಕಾಲಿಕೆಗಳೆಲ್ಲ ಈ ವಿವಾದಕ್ಕೆ ಮೀಸಲಾದುವು. ಗಾಟ್ಷೆಡ್ಡನ ಅನುಯಾಯಿಗಳೆಲ್ಲ ಒಬ್ಬೊಬ್ಬರಾಗಿ ಅವನನ್ನು ಬಿಟ್ಟು ಹೋದರು. ಕ್ಯಾರೊಲಿನ್ ನ್ಯೂಬರ್ಗೂ ಇವನಿಗೂ ಜಗಳವುಂಟಾಗಿ ಆಕೆಯ ನಾಟಕಮಂಡಲಿ ಗಾಟ್ಷೆಡ್ನನ್ನು ರಂಗಭೂಮಿಯ ಮೇಲೆಯೇ ಅಪಹಾಸ್ಯ ಮಾಡಿತು (1741). ಸ್ವಿಸ್ ಪಂಥದವರು ಬ್ರೇಮರ್ ಬೈಟ್ರೇಗೆ ಎಂಬ ಪತ್ರಿಕೆಯನ್ನು ತಮ್ಮ ಸಿದ್ಧಾಂತಗಳ ಪ್ರತಿಪಾದನೆಗಾಗಿಯೇ ಸ್ಥಾಪಿಸಿಕೊಂಡಿದ್ದರು. ಇದನ್ನು ನಡೆಸುತ್ತಿದ್ದವರಲ್ಲಿ ಬಹುಪಾಲು ಮಂದಿ ಹಿಂದೆ ಗಾಟ್ಷೆಡ್ಡನ ನಿಷ್ಠೆ ಅನುಯಾಯಿಗಳಾಗಿದ್ದು ಆಮೇಲೆ ಇವನನ್ನು ತ್ಯಜಿಸಿಹೋದವರು. ಗಾಟ್ಷೆಡ್ ತನ್ನ ಶಿಷ್ಯನಾದ ಕ್ರಿಸ್ಟಾಫ್ ಆಟೋಫಾನ್ ಷ್ಯೋನೇಕ್ ಎಂಬಾತ ಬರೆದ ಹರ್ಮನ್ ಓಡರ್ ಡಾಸ್ ಬೀಫ್ರೇóಟ್ ಡಾಯಿಟ್್ಯಲಂಡ್ ಎಂಬ ನೀರಸ ಕಾವ್ಯವನ್ನು ಆ ಯುಗಕ್ಕೇ ಕಿರೀಟಪ್ರಾಯವಾದ ಸಾಧನೆಯೆಂದು ಹೊಗಳಿದ. ಇದರಿಂದ ಅವನು ಇನ್ನೂ ನಗೆಗೀಡಾದ. ಹೀಗೆ ಗಾಟ್ಷೆಡ್ಡನ ಜೀವಿತದ ಕಡೆಯ ಇಪ್ಪತ್ತು ವರ್ಷಗಳಲ್ಲಿ ಆತನ ಪ್ರತಿಷ್ಠೆ ಗೌರವಗಳು ಒಂದೇ ಸಮನೆ ಕುಗ್ಗುತ್ತ ಹೋದವು. ಆದರೂ ಎದೆಗೆಡದೆ ಆತ 1748 ರಲ್ಲಿ ಗ್ರೂಂಡಲ್ ಗೂಂಗ್ ಐನರ್ ಡಾಯಿಟ್ ಟ್ಶೆನ್ಶ್ಪ್ರಾಕ್ಕೂನ್್ಸ್ಟ ಎಂಬ ಗ್ರಂಥವನ್ನು ಪ್ರಕಟಿಸಿದ. ಈತ ಮೊಟ್ಟಮೊದಲು ಬರೆದ ಕಾವ್ಯಮೀಮಾಂಸಾ ಗ್ರಂಥದಿಂದ ಪದ್ಯಕಾವ್ಯಕ್ಕಾದ ಉಪಕಾರಕ್ಕಿಂತ ಈ ಹೊಸ ಗ್ರಂಥದಿಂದ ಜರ್ಮನ್ ಗದ್ಯಕ್ಕೆ ಹೆಚ್ಚು ಉಪಕಾರವಾಯಿತು. ಇದಲ್ಲದೆ ಈತ ಜರ್ಮನ್ ಸಾಹಿತ್ಯದ ಸ್ಮರಣೀಯ ಕೃತಿಗಳನ್ನೆಲ್ಲ ವ್ಯಾಸಂಗ ಮಾಡಿ, ಸಂಕಲನ ಮಾಡಿ, ಅನುವಾದಿಸಿದ. ಎಲ್ಲಕ್ಕಿಂತ ಮೇಲಾಗಿ ನ್ಯೋಥಿಂಗರ್ ಘೊರಾತ್ಟ್ಸುರ್ ಗೆಸಿಕ್ಟೆ ಡೇರ್ ಡಾಯಿಟ್ಶೆನ್ ಡ್ರಾಮಾಟಿಶೆನ್ ಕೂನ್್ಸ್ಟ ಎಂಬ ಹೆಸರಿನಲ್ಲ್ಲಿ. 1757 ರಿಂದ ಮೊದಲು ಮಾಡಿ 1765 ರ (ಅವನು ತೀರಿಕೊಳ್ಳುವುದಕ್ಕೆ ಮುಂಚೆ ಒಂದು ವರ್ಷದ) ವರೆಗೂ ಜರ್ಮನ್ ನಾಟಕ ಸಾಹಿತ್ಯದ ದೊಡ್ಡ ಗ್ರಂಥ ಸೂಚಿಯೊಂದನ್ನು ರಚಿಸಿದ. ಈಗಲೂ ಇದು ಜರ್ಮನ್ ಸಾಹಿತ್ಯದ ಇತಿಹಾಸಕಾರನಿಗೆ ಒಂದು ಅಮೂಲ್ಯವಾದ ಗಣಿಯಾಗಿದೆ. ಲೀಪ್ಜಿಗ್ನಲ್ಲಿ ತನಗೆ ಶಿಷ್ಯರಾಗಿದ್ದವರೇ ತನ್ನನ್ನು ಬಿಟ್ಟುಹೋಗಿ ತನಗೆ ಎದುರಾಗಿ ನಿಂತದ್ದು ಗಾಟ್ಷೆಡ್ಡನಿಗೆ ಕಟುವಾದ ವೇದನೆಯನ್ನುಂಟುಮಾಡಿತು. ಈ ದುಃಖದಲ್ಲಿಯೇ ಅವನು ಮೃತನಾದ.

ಬ್ರೀಮರ್ ಬೀತ್ರೇಜ್ ಪತ್ರಿಕೆಯಲ್ಲಿ ಲೇಖನ ಬರೆಯುತ್ತಿದ್ದ ಗಾಟ್ಷೆಡ್ಡನ ಎದುರಾಳಿ ಗಳು ಕ್ರಾಂತಿಕಾರಕ ಸುಧಾರಕರೇನೂ ಆಗಿರಲಿಲ್ಲ. ಗಾಟ್ಷೆಡ್ಡನ ಪ್ರಮುಖಸೂತ್ರಗಳಲ್ಲಿ ಅವರಿಗೂ ನಂಬಿಕೆ ಇತ್ತು. ವ್ಯತ್ಯಾಸವೇನೆಂದರೆ ಅವನ ಅತಿರೇಕಗಳನ್ನು ಬದಿಗೊತ್ತಿ ಅವನ ಸಿದ್ಧಾಂತಗಳಲ್ಲಿದ್ದ ಉತ್ತಮಾಂಶಗಳನ್ನು ಮಾತ್ರ ಅವರು ಅನುಷ್ಠಾನಕ್ಕೆ ತರಲು ಯತ್ನಿಸಿದರು. ಅವರ ಕವಿತೆಗಳೂ ವಿಚಾರ ಪ್ರಧಾನವಾಗಿದ್ದುವೇ ಹೊರತು ಭಾವಪ್ರಧಾನವೂ ಆಗಿರಲಿಲ್ಲ. ಆದರೂ ಕಾವ್ಯಸೃಷ್ಟಿ ಕವಿಹೃದಯದಲ್ಲಿ ಹೇಗಾಗುವುದೆಂದು ಅರಿತರೆ ಮಾತ್ರ ಕಾವ್ಯದ ಅಂತರಂಗವನ್ನು ಹೋಗಬಹುದೆಂದು ಅವರು ಗುರುತಿಸಿದುದು ಜರ್ಮನ್ ಸಾಹಿತ್ಯದ ಮುನ್ನಡೆಯಲ್ಲಿ ಒಂದು ದೊಡ್ಡ ಹೆಜ್ಜೆ, ಮುಂದಿನ ಯುಗದ ರೊಮ್ಯಾಂಟಿಕ್ ಸಾಹಿತ್ಯಕ್ಕೆ ಒಂದು ಮೊದಲ ಸೂಚನೆ.