ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಡ್ವಿನ್, ವಿಲಿಯಂ

ವಿಕಿಸೋರ್ಸ್ ಇಂದ
Jump to navigation Jump to search

ಗಾಡ್ವಿನ್, ವಿಲಿಯಂ[ಸಂಪಾದಿಸಿ]

1756-1836. ಇಂಗ್ಲಿಷ್ ಕಾದಂಬರಿಕಾರ ಮತ್ತು ತತ್ತ್ವಶಾಸ್ತ್ರಜ್ಞ. ಕೇಂಬ್ರಿಜ್ಷೈರಿನ ವಿಸ್ಬೆಕ್ ಎಂಬಲ್ಲಿ ಜನಿಸಿದ. ವ್ಯಾಸಂಗ ಮಾಡಿದ್ದು ನಾರ್ವಿಚ್ ಶಾಲೆಯಲ್ಲಿ. ತಂದೆ ಮಠಾಧಿಕಾರಿ, ಮಗನೂ ತನ್ನಂತೆ ಆಗಬೇಕೆಂದು ಆತನ ಬಯಕೆ. ಅದಕ್ಕಾಗಿ ಮಗ ಹಾಕ್ಸಟನ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಬೇಕಾಯಿತು. ವ್ಯಾಸಂಗಾನಂತರ ಗಾಡ್ವಿನ್ 1778 ರಿಂದ 1783 ರ ವರೆಗೆ ಕ್ರೈಸ್ತ ಪುರೋಹಿತನಾಗಿ ಕೆಲಸ ಮಾಡಿದ. 1782 ರಲ್ಲಿ ಲಂಡನ್ ನಗರಕ್ಕೆ ಬಂದು ನೆಲಸಿದ. ಮತಧರ್ಮದ ವಿಚಾರದಲ್ಲಿ ಬಗೆಹರಿಯದ ಶಂಕೆಗಳುಂಟಾಗಿ ಧರ್ಮದ ಬಗ್ಗೆ ಹೊಸ ಭಾವನೆಗಳು, ನಂಬಿಕೆಗಳು ಮೂಡಿದ್ದರಿಂದ ಪುರೋಹಿತ ಕೆಲಸಕ್ಕೆ ರಾಜೀನಾಮೆ ಇತ್ತು ಸಾಹಿತ್ಯದ ಕಡೆ ತಿರುಗಿದ. ಪ್ರಾರ್ಥನಾಸಭೆಯ ಉಪದೇಶ ಭಾಷಣಗಳ ಶೈಲಿಯಲ್ಲಿ ಈತ ಬರೆದ ಇತಿಹಾಸ ಚಿತ್ರಗಳ ಮೊದಲ ಪುಸ್ತಕ ಯಾರ ಗಮನವನ್ನೂ ಸೆಳೆಯಲಿಲ್ಲ. ಅನಂತರ ಗಾಡ್ವಿನ್ ನ್ಯೂ ಆನ್ಯುಯಲ್ ರಿಜಿಸ್ಟರಿನ ಪ್ರಮುಖ ಲೇಖಕರಲ್ಲಿ ಒಬ್ಬನಾಗಿ ರಾಜಕೀಯ ಮತ್ತು ಸಾಮಾಜಿಕ ಸುಧಾರಕನೆಂದು ಪ್ರಸಿದ್ಧಿ ಪಡೆದ. ಸರ್ಕಾರದಿಂದ ಅಧಿಕಾರದ ದುರುಪಯೋಗವಾಗುತ್ತದಾಗಿ ಅದರ ಅಗತ್ಯವಿಲ್ಲ. ಪರಸ್ಪರ ಗೌರವಯುತ ಸಂಬಂಧ ಮುಖ್ಯವಾದ್ದರಿಂದ ವಿವಾಹ ವಿಧಿಯ ಅಗತ್ಯವಿಲ್ಲ - ಮುಂತಾದ ಈತನ ತತ್ತ್ವಗಳನ್ನು ಇನ್ಕ್ವಯರಿ ಕನ್ಸರ್ನಿಂಗ್ ಪೊಲಿಟಿಕಲ್ ಜಸ್ಟೀಸ್ (1793) ಎಂಬ ಗ್ರಂಥದಲ್ಲಿ ಕಾಣುತ್ತೇವೆ. ಒಂದು ವರ್ಷದ ಅನಂತರ ಈತನ ಸಾಮಾಜಿಕ ಸಿದ್ಧಾಂತಗಳನ್ನೊಳಗೊಂಡ ಕಾಲೆಬ್ ವಿಲಿಯಂಸ್ ಎಂಬ ಪ್ರಸಿದ್ಧ ಕಾದಂಬರಿ ಹೊರಬಂತು. ಈತನ ಪ್ರಸಿದ್ಧ ಕಾದಂಬರಿಗಳಲ್ಲಿ ಎರಡನೆಯದು ಸೇಂಟ್ ಲಿಯಾನ್ (1799), ಫ್ಲೀಟ್ವುಡ್ (1804), ಮ್ಯಾಂಡೆವಿಲ್ (1817) ಮತ್ತು ಕ್ಲೌಡ್ಸ್ಲೇ (1830) ಈತನ ಇತರ ಕಾದಂಬರಿಗಳು. ಗಾಡ್ವಿನ್ 1803ರಲ್ಲಿ ಚಾಸರನ ಜೀವನ ಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಹೊರತಂದ. 1808 ರಲ್ಲಿ ಎನ್ ಎಸ್ಸೆ ಆನ್ ಸೆಪಲ್ಕರ್ಸ್ ಎಂಬುದೂ 1824-28ರಲ್ಲಿ ಹಿಸ್ಟರಿ ಆಫ್ ದಿ ಕಾಮನ್ವೆಲ್ತ್ ಆಫ್ ಇಂಗ್ಲೆಂಡ್ ಎಂಬುದೂ ಬೆಳಕು ಕಂಡವು. ಈತನ ಕೊನೆಯ ಕೃತಿ ಲೈವ್ಸ್ ಆಫ್ ದಿ ನೆಕ್ರೊಮ್ಯಾನ್ಸರ್ 1834ರಲ್ಲಿ ಪ್ರಕಟವಾಯಿತು. ಕೆಲವು ಕಾಲ ಗಾಡ್ವಿನ್ ಪುಸ್ತಕ ಪ್ರಕಟಣ ಉದ್ಯೋಗವನ್ನೂ ಕೈಗೊಂಡಿದ್ದ. ಗಾಡ್ವಿನ್ 1797ರಲ್ಲಿ ಮೇರಿ ಉಲ್ಸ್ಟನ್ಕ್ರ್ಯಾಫ್ಟ ಎಂಬಾಕೆಯನ್ನು ವಿವಾಹವಾದನಲ್ಲದೆ ಆಕೆಯ ಜೀವನಚರಿತ್ರೆಯೊಂದನ್ನು ಬರೆದಿದ್ದಾನೆ. ಆಕೆಯ ಮರಣಾನಂತರ 1801ರಲ್ಲಿ ಮೇರಿ ಜೇನ್ ಕ್ಲೈರ್ಮಾಂಟ್ ಎಂಬ ವಿಧವೆಯನ್ನು ಈತ ವಿವಾಹವಾದ. ಗಾಡ್ವಿನ್ಮೇರಿ ಮತ್ತು ಗಾಡ್ವಿನ್ ವಿಲಿಯಂ ಪುತ್ರಿ ಮೇರಿಯನ್ನು 1816ರಲ್ಲಿ ಷೆಲ್ಲಿ ವಿವಾಹವಾದ. ವುಡ್ಸ್ ವರ್ತ್ ಕೋಲ್ರಿಜ್ ಮತ್ತು ಷೆಲ್ಲಿ ಮೊದಲಾದವರು ಗಾಡ್ವಿನ್ನಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. * ಗಾಡ್ವಿನ್, ಹೆನ್ರಿ ಥಾಮಸ್ : 1784-1853. ಬ್ರಿಟಿಷ್ ಭಾರತ ಸೇನೆಯ ಒಬ್ಬ ಅಧಿಕಾರಿ. 1824-26ರಲ್ಲಿ ಒಂದನೆಯ ಬರ್ಮ ಯುದ್ಧದಲ್ಲಿ ಭಾಗವಹಿಸಿದ್ದ. 1846ರಲ್ಲಿ ಮೇಜರ್ ಜನರಲ್ ಆದ. 1852-53ರಲ್ಲಿ ನಡೆದ ಎರಡನೆಯ ಬರ್ಮ ಯುದ್ಧದಲ್ಲಿ ಗಾಡ್ವಿನ್ ನಾಯಕತ್ವದಲ್ಲಿ ಬ್ರಿಟಿಷ್ ಭೂಸೇನೆ ಕಾರ್ಯಾಚರಣೆ ನಡೆಸಿತು. ತನ್ನ ಸಾಹಸಕ್ಕಾಗಿ ನೈಟ್ ಪದವಿ ಪಡೆದಿದ್ದ ಗಾಡ್ವಿನ್ 1853ರಲ್ಲಿ ಸಿಮ್ಲಾದಲ್ಲಿ ತೀರಿಕೊಂಡ.