ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೀತಪ್ರಿ ಯ

ವಿಕಿಸೋರ್ಸ್ದಿಂದ

ಗೀತಪ್ರಿಯ

(1931- ). ಚಲನಚಿತ್ರಸಾಹಿತಿ, ನಿರ್ದೇಶಕ, ಗೀತರಚನಾಕಾರ, ಕತೆಗಾರ, ಸಂಭಾಷಣಾಕಾರ, ನಟ. ನಿರ್ದೇಶಿಸಿದ ಮೊದಲ ಚಿತ್ರಕ್ಕೆ, ರಾಜ್ಯಪ್ರಶಸ್ತಿ ರಾಷ್ಟ್ರಪ್ರಶಸ್ತಿ ಪಡೆದ ಹೆಗ್ಗಳಿಕೆ. ಗೀತಪ್ರಿಯ ಇವರ ಕಾವ್ಯನಾಮ. ಲಕ್ಷ್ಮಣ್‍ರಾವ್ ಮೋಹಿತೆ ಹುಟ್ಟಿದ್ದು ಬೆಂಗಳೂರಿನಲ್ಲಿ ಮುನಿರೆಡ್ಡಿ ಪಾಳ್ಯದ ಸವಾರ್ ಲೈನಿನಲ್ಲಿ, 1931ರ ಜೂನ್ 15ರಂದು. ತಾಯಿ ಲಕ್ಷ್ಮೀಬಾಯಿ. ತಂದೆ ರಾಮರಾವ್ ಮೋಹಿತೆ, ಮೈಸೂರು ಅಶ್ವದಳದಲ್ಲಿ ಸವಾರರಾಗಿದ್ದರು. ತಾತಾಮುತ್ತಾತಂದಿರೆಲ್ಲಾ ಯೋಧರಾಗಿದ್ದವರೇ. ಸೈನ್ಯದಲ್ಲಿ ಸೇವೆ ಮಾಡುವುದು ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲದ ಕೌಟುಂಬಿಕ ವಾತಾವರಣ. ಸವಾರ್ ಲೈನಿನ್ ಶಾಲೆಯಲ್ಲಿ ಓದುತ್ತಿದ್ದಾಗಲೇ ಮಿಲಿಟರಿ ಕ್ಯಾಂಪಿನಲ್ಲಿ ಲೆಕ್ಕಪತ್ರಾಧಿಕಾರಿಗಳಾಗಿದ್ದ ಪು.ತಿ.ನ ಮತ್ತು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಶಿಶು ಸಾಹಿತಿ ಹೊಯ್ಸಳರ ಸಂಪರ್ಕ. ಅದರ ಪ್ರಭಾವದಿಂದ, ಕತ್ತಿ ಹಿಡಿಯ ಬೇಕಾದ ಕೈ ಲೇಖಣಿ ಹಿಡಿಯಿತು. ಕತೆ, ಕವಿತೆ, ನಾಟಕಗಳಲ್ಲಿ ಅಭಿರುಚಿ ಹುಟ್ಟಿದ್ದು. ತಂದೆಯ ನಿಧನಾನಂತರ ಕುಟುಂಬದ ಅವಶ್ಯಕತೆ ಪೂರೈಸಲು ನೃತ್ಯ, ಸಿನಿಮಾದತ್ತ ಹೊರಳಬೇಕಾದ ಪರಿಸ್ಥಿತಿ.   ನರ್ತಕ, ನಟನಾಗುವ ಬಯಕೆಯಿಂದ ಮದರಾಸಿಗೆ ಹೋದರು. ಕೆಲವು ಕಾಲ ನೃತ್ಯ ನಿರ್ದೇಶಕ ಹೀರಾಲಾಲ್ ಅವರ ಶಿಷ್ಯರಾಗಿ ಕಥಕ್ ನೃತ್ಯ ಕಲಿತರು. ನಟನಾಗುವ ಆಸೆ ಈಡೇರಲಿಲ್ಲ. ಬೆಂಗಳೂರಿಗೆ ಮರಳಿದರು. 'ಜನ್ಮಭೂಮಿ', 'ಮದುವೆ ಮಾರ್ಕೆಟ್' ನಾಟಕಗಳನ್ನು ಬರೆದರು. ಪ್ರದರ್ಶಿಸಿದರು.

1954ರಲ್ಲಿ ಮೈಸೂರಿನಲ್ಲಿ ನವಜ್ಯೋತಿ ಸ್ಟುಡಿಯೋದಲ್ಲಿ ಚಿತ್ರಣಗೊಂಡ ಬಿ.ಆರ್.ಕೃಷ್ಣಮೂರ್ತಿ ಅವರ 'ಶ್ರೀರಾಮ ಪೂಜಾ' ಚಿತ್ರಕ್ಕೆ ಮೊದಲ ಗೀತೆ ಬರೆಯುವ ಅವಕಾಶ. 'ಶ್ರೀರಾಮ ಪೂಜಾ' ಯಶಸ್ವಿ ಚಿತ್ರಗಳ ಸಾಲಿಗೆ ಸೇರಲಿಲ್ಲ. ಆದರೆ ಆ ಚಿತ್ರದ ಮೂಲಕ ವಿಜಯಭಾಸ್ಕರ್, ಎನ್. ಲಕ್ಷ್ಮೀನಾರಾಯಣ, ಬಿ. ಸರೋಜಾದೇವಿ, ಗೀತಪ್ರಿಯ ಮೊದಲಾದ ಪ್ರತಿಭಾಶಾಲಿಗಳು ಕನ್ನಡ ತೆರೆಗೆ ಪರಿಚಿತರಾದರು.

ಐವತ್ತರ ದಶಕದಲ್ಲಿ ಇತರ ಭಾಷೆಯ ಚಿತ್ರಗಳು ಕನ್ನಡ ಭಾಷೆಯಲ್ಲಿ ಡಬ್ ಆಗುವುದು ಅಧಿಕವಾಗಿತ್ತು. ಆಗ ಗೀತಪ್ರಿಯ ಅನ್ಯಭಾಷಾ ಚಿತ್ರಗಳಿಗೆ ಕನ್ನಡ ಧ್ವನಿ ಜೋಡಿಸಲು ಅಗತ್ಯವಾದ ಸಾಹಿತ್ಯ ಬರೆದರು. ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅವರ ಕಥೆ ಆಧರಿಸಿ ಛಾಯಾಗ್ರಾಹಕ ಎನ್.ಜಿ.ರಾವ್ ಮತ್ತು ಮಿತ್ರರು ನಿರ್ಮಿಸಿದ ``ಭಾಗ್ಯಚಕ್ರ' ಚಿತ್ರದ ಸಂಭಾಷಣೆ-ಗೀತೆಗಳನ್ನು ಬರೆಯುವ ಮೂಲಕ ಪೂರ್ಣಪ್ರಮಾಣದ ಚಿತ್ರಸಾಹಿತಿಯಾದರು. ಈ ಸಂದರ್ಭದಲ್ಲಿ ಲಕ್ಷ್ಮಣ್‍ರಾವ್ ಮೊಹಿತೆಗೆ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಇಟ್ಟ ಹೆಸರು 'ಗೀತಪ್ರಿಯ'- ಆ ಹೆಸರು ಚಿತ್ರರಂಗದಲ್ಲಿ ಸ್ಥಿರವಾಯಿತು.  1968ರಲ್ಲಿ ಗೀತಪ್ರಿಯ ಮೊಟ್ಟಮೊದಲಿಗೆ ನಿರ್ದೇಶಿಸಿದ ``ಮಣ್ಣಿನ ಮಗ ರಾಷ್ಟ್ರ ಹಾಗೂ ರಾಜ್ಯಪ್ರಶಸ್ತಿಗಳನ್ನು ಗಳಿಸಿತಲ್ಲದೆ ಬೆಂಗಳೂರಿನ ಕಪಾಲಿ ಹಾಗೂ ಭಾರತ್ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು. ನಂತರ ``ಯಾವ ಜನ್ಮದ ಮೈತ್ರಿ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರ ರಾಜ್ಯ ಪ್ರಶಸ್ತಿ ಪಡೆದುದಲ್ಲದೆ, ತಮಿಳು-ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಮರು ನಿರ್ಮಾಣವಾಯಿತು. ಚಿತ್ರರಂಗದಲ್ಲಿ ಗೀತಪ್ರಿಯರ ಸ್ಥಾನ ಸ್ಥಿರವಾಯಿತು.

ಗೀತಪ್ರಿಯ ನಿರ್ದೇಶನದಲ್ಲಿ ತೆರೆಕಂಡ ಚಿತ್ರಗಳ ಸಂಖ್ಯೆ ಮೂವತ್ತೊಂದು. 'ಬೆಳುವಲದ ಮಡಿಲಲ್ಲಿ', 'ಬೆಸುಗೆ', 'ಹೊಂಬಿಸಿಲು', 'ಪ್ರೇಮಾಯಣ', 'ಪುಟಾಣಿ ಏಜೆಂಟ್ 1 2 3', 'ಮೌನಗೀತೆ', 'ಮಾನಸವೀಣೆ', 'ಭೂಪತಿರಂಗ' ಅವುಗಳಲ್ಲಿ ಪ್ರಮುಖವಾದವು. ಪುಟಾಣಿ ಏಜೆಂಟ್ 1 2 3 ತಮಿಳು, ತೆಲಗು, ಹಿಂದಿ ಭಾಷೆಗಳಲ್ಲಿ ಡಬ್ ಆಗಿ ಮೆಚ್ಚುಗೆಗಳಿಸಿತು. ಪ್ರಚಂಡ್ ಪುಟಾಣಿಗಳು 'ಅನ್‍ಮೋಲ್ ಸಿತಾರೆ'ಯಾಗಿ  ಹಿಂದಿ ತೆರೆಯ ಮೇಲೆ ರಾರಾಜಿಸಿತು. 'ಕಾಸದಾಯೆ ಕಂಡನೆ', 'ಯಾನ್ ಸನ್ಯಾಸಿ ಆಪೆ', 'ಸಾವಿರಡೊರ್ತಿ ಸಾವಿತ್ರಿ' ಈ ಮೂರು ತುಳು ಭಾಷಾ ಚಿತ್ರಗಳನ್ನು ಗೀತಪ್ರಿಯ ನಿರ್ದೇಶಿದ್ದಾರೆ.

ಭಾರತೀಯ ಸಂಸ್ಕøತಿ, ಪರಂಪರೆ, ಶ್ರಮಜೀವಿಗಳು, ಮಣ್ಣಿನ ಮಕ್ಕಳ ಬಗೆಗೆ ಅಪಾರ ಕಾಳಜಿ. ಸೈನಿಕ ಕುಟುಂಬದಿಂದ ಬಂದ ಕಾರಣ, 'ಜೈ ಜವಾನ್ ಜೈ ಕಿಸಾನ್' ಕಲ್ಪನೆಗೆ ಒತ್ತು ಕೊಡುವುದು ಇವರ ಚಿತ್ರಗಳಲ್ಲಿನ ವಿಶೇಷ. 'ಗೀತಪ್ರಿಯ' ಚಿತ್ರಗಳಲ್ಲಿನ ನಾಯಕ. ಉನ್ನತ ಭಾರತೀಯ ಮೌಲ್ಯಗಳ ಪ್ರತಿವಾದಕ, ಹಿಂಸೆಯಿಂದ ದೂರ, ನ್ಯಾಯಪರ, ನಾಯಕಿಯೂ ಅಷ್ಟೇ, ಆದರ್ಶ ನಾರಿ. ಉತ್ತಮ ಮೌಲ್ಯಗಳನ್ನು ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಕಾಪಾಡಿಕೊಂಡು ಬಂದಿದ್ದಾರೆ.  ತಮ್ಮ ಸಂಭಾಷಣೆ ಹಾಗೂ ಹಾಡುಗಳಲ್ಲಿ ಆಡುಭಾಷೆಯಲ್ಲಿನ ಸೊಗಸನ್ನು ತುಂಬಿದವರು. ``ಭಗವಂತ ಕೈಕೊಟ್ಟ-ಯಾಕೆ,? ದುಡಿಯೋಕಂತಾ....... ಅದನ್ಯಾಕೆ ಎತ್ತುವೆ ಹೊಡಿಯೋಕಂತಾ......... ಎಂಬಂಥ ಲಲಿತಶೈಲಿ ಅವರದು.  ಈ ಬಗೆಯ ಸಾಹಿತ್ಯದಿಂದಾಗಿ ಪ್ರೇಕ್ಷಕ ಸಮುದಾಯಕ್ಕೆ ತೀರ ಹತ್ತಿರವಾದರು. ಗೀತಪ್ರಿಯ ಅವರ ಸಾಹಿತ್ಯ, ವಿಜಯಭಾಸ್ಕರ್ ಅವರ ಸಂಗೀತ ಹಾಲು-ಜೇನಿನಂತೆ ಬೆರೆಯುತ್ತಿದ್ದುದು ವಿಶೇಷ. 300ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ.

ಹಿಂದಿ-ಉರ್ದು ಭಾಷೆಗಳಲ್ಲಿಯೂ ಪ್ರಾವಿಣ್ಯತೆ ಇರುವ ಗೀತಪ್ರಿಯ ಷಾಯರಿಗಳ ರಸಿಕರು. ಹಲವು ವರ್ಷಗಳಕಾಲ ವಿಜಯ ಫಿಲಂ ಇನ್‍ಸ್ಟಿಟ್ಯೂಟ್‍ನ ಪ್ರಾಂಶುಪಾಲರಾಗಿದ್ದರು. ಕನ್ನಡ ಚಿತ್ರರಂಗದಲ್ಲಿನ ವಿಶಿಷ್ಟ ಪರಿಶ್ರಮಕ್ಕಾಗಿ ಕರ್ನಾಟಕ ರಾಜ್ಯಸರ್ಕಾರ ಗೀತಪ್ರಿಯ ಅವರಿಗೆ 1993-94ರ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ.

 (ಎಂ.ಬಿ.ಎಸ್)