ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೀತಾ ನಾಗಭೂಷಣ
ಗೀತಾ ನಾಗಭೂಷಣ :- (1925- ) ಗೀತಾ ನಾಗಭೂಷಣ ತುಂಬ ಪರಿಣಾಮಕಾರಿಯಾಗಿ ಹಾಗೂ ಪ್ರಭಾವಯುತವಾಗಿ ದಲಿತ ಮಹಿಳೆಯರ ಶೋಷಣೆ ಕುರಿತು ಕಾದಂಬರಿಗಳನ್ನು ಬರೆದಿರುವ ಮತ್ತು ಬರೆಯುತ್ತಿರುವ ಲೇಖಕಿ. ಗುಲ್ಬರ್ಗ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಸಾವಿರದ ಒಂಬೈನೂರ ನಲವತ್ತೆರಡನೇ ಇಸವಿ 1942ರ ಮಾರ್ಚ್ 25ರಂದು ಜನಿಸಿದ ಗೀತಾ ಎಂ.ಎ, ಬಿ.ಎಡ್, ಪದವೀಧರರು, ಗುಲ್ಬರ್ಗದ ನಗರೇಶ್ವರ ಸಂಯುಕ್ತ ಕಿರಿಯ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ನಿವೃತ್ತರಾದರು. ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆ ನೀಡಿ ತಮ್ಮ ವಿಶಿಷ್ಟ ದಿಟ್ಟ ಬರಹದಿಂದ ದಲಿತರ ಧ್ವನಿಯಾದವರು.
ಆದರೆ ಅವರು ಈ ಮಟ್ಟ ಏರಲು ನಡೆದು ಬಂದ ದಾರಿ, ಪಟ್ಟ ಶ್ರಮವೇ ಹೆಣ್ಣಿನ ಹರಸಾಹಸದ ಒಂದು ಕಾದಂಬರಿಯಾಗಬಲ್ಲದು. ಸಿಟ್ಟು, ಸಿಡುಕು, ತಿರಸ್ಕಾರ, ಅಪಮಾನಗಳ ಮಧ್ಯೆಯೇ ಬೆಳೆದು ನಿಂತವರು. ಕಡುಬಡತನದಲ್ಲಿದ್ದ ತಳವಾರದಂಥ ಹಿಂದುಳಿದ ಜಾತಿಯ ಅನಕ್ಷರಸ್ಥ ಬಡಕುಟುಂಬದಲ್ಲಿ ಹುಟ್ಟಿದ್ದರೂ ನನ್ನ ಅಪ್ಪ ನನ್ನನ್ನು ಶಾಲೆಗೆ ಕಳಿಸಿದ್ದು ಸುದೈವ ಎಂದು ನೆನೆಯುತ್ತಾರೆ. ತಮ್ಮ ಬಾಲ್ಯ ಹಾಗೂ ಯೌವನದಲ್ಲಿ ಸಿಹಿಗಿಂತ ಕಹಿಯನ್ನೇ ಹೆಚ್ಚಾಗಿ ಕಂಡ ಗೀತಾ ಪರಿಸ್ಥಿತಿಯ ಒತ್ತಡದಿಂದಾಗಿ ಮೆಟ್ರಿಕ್ ಆದ ಕೂಡಲೇ ಸರ್ಕಾರಿ ಕಚೇರಿಯೊಂದರಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದರು. ಆದರೆ ಅವರ ಪುಸ್ತಕದ ಪ್ರೀತಿ ಮತ್ತು ಅಧ್ಯಯನದತ್ತ ಇದ್ದ ಒಲವು ಅವರಲ್ಲಿ ಶಕ್ತಿ ತುಂಬಿದವು. ಸಾಕಷ್ಟು ದೂರ ಗುಡ್ಡದ ಮೇಲಿದ್ದ ಕಾಲೇಜಿಗೆ ಸೇರಿ ಬೆಳಗ್ಗಿನ ತರಗತಿಗಳಿಗೆ ಮಾತ್ರ ಹಾಜರಾಗಿ ಆಫೀಸಿನ ಸಮಯದ ವೇಳೆಗೆ ಓಡು ನಡಿಗೆಯಲ್ಲಿ ಕಚೇರಿ ಮುಟ್ಟಿ ಎರಡನ್ನೂ ನಿಭಾಯಿಸಿದರು. ಬದುಕಿನೊಂದಿಗಿನ ಇಂತಹ ಸವಾಲು-ಹೋರಾಟಗಳನ್ನು ನಿಭಾಯಿಸಿರುವುದರಿಂದಲೇ ಅವರಿಗೆ ಕಷ್ಟದಲ್ಲಿರುವ ಹೆಣ್ಣುಮಕ್ಕಳ ತೀವ್ರತೆ ಚೆನ್ನಾಗಿ ಅರ್ಥವಾಗುತ್ತದೆ.
ಗುಲ್ಬರ್ಗ ಜಿಲ್ಲೆಯ ಚುಂಚೂರು ಮಾಪುರ ತಾಯಿಗೆ ಬೆತ್ತಲೆ ಸೇವೆ, ದೇವಿಯ ಹೆಸರಿನಲ್ಲಿ ನಡೆಸುವ ದೇವದಾಸಿ ಸೇವೆ, ಮುಗ್ಧ ನಿರ್ಗತಿಕ ಹೆಂಗಸರ ಮೇಲಿನ ದೌರ್ಜನ್ಯ, ಲೈಂಗಿಕ ಶೋಷಣೆ, ಮೂಢ ನಂಬಿಕೆಗಳ ವಿರುದ್ಧ ಮುಲಾಜಿಲ್ಲದೆ ಬರೆದವರು. ಗುಲ್ಬರ್ಗ ಜಿಲ್ಲೆಯ ಗ್ರಾಮೀಣ ಜವಾರಿ ಭಾಷೆಯನ್ನೇ ತಮ್ಮ ಬರಹದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡು ಮತ್ತಷ್ಟು ಕಸುವು ತುಂಬಿದರು. ಹೀಗೆ ವ್ಯವಸ್ಥೆಯ ವಿರುದ್ಧ ಬರೆಯಲಾರಂಭಿಸಿದ ಕಾರಣಕ್ಕಾಗಿ ಗೀತಾ ಸಮಾಜದಲ್ಲಿದ್ದ ಜಾತಿವಾದಿಗಳ ಹಾಗೂ ತಮ್ಮ ಕುಟುಂಬದ ಸದಸ್ಯರ ಕೋಪವನ್ನು ಎದುರಿಸಬೇಕಾಯಿತು. ಅವರ ವೈಯಕ್ತಿಕ ಬದುಕಿನ ನೋವೂ ಅವರನ್ನು ಕಾಡಿತು. ಮೊದಲ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡರೆ, ಎರಡನೆ ಮದುವೆಯಿಂದಲೂ ಭ್ರಮೆ ನಿರಸನವಾಗಿ ಕಾಡಿದ ನೋವು ಅವರ ಬರಹಕ್ಕೆ ಮತ್ತಷ್ಟು ತೀವ್ರತೆ ತಂದುಕೊಟ್ಟ ಸಂಗತಿಯಾಯಿತು. ನಿರ್ಭಿಡೆಯಿಂದ, ಧೈರ್ಯದಿಂದ ಹಳ್ಳಿಯ ಹಿಂದುಳಿದ ಅಮಾಯಕ ಹೆಂಗಸರ ಸ್ಥಿತಿಗತಿಗಳ ಬಗ್ಗೆ, ಪಟ್ಟಣ ಪ್ರದೇಶಗಳ ಕೊಳಚೆ ಪ್ರದೇಶಗಳ ಹೆಣ್ಣು ಮಕ್ಕಳ ಬಗ್ಗೆ, ಅವರ ಸಂಕಟ ಶೋಷಣೆಗಳ ಬಗ್ಗೆ ಓದುಗರ ಮನ ಕುದಿಯುವಂತೆ ಬರೆದರು. ಸತತವಾದ ಕ್ರೌರ್ಯ ಅನ್ಯಾಯ ಮತ್ತು ಹಿಂಸೆಗಳು ಅತಿ ಸಾಮಾನ್ಯ ಹಳ್ಳಿಯ ಹೆಂಗಸರನ್ನೂ ಸಿಡಿದೇಳುವಂತೆ ಮಾಡುತ್ತವೆ; ಸೇಡು ತೀರಿಸಿಕೊಳ್ಳುವಂತೆ ಪ್ರೇರೇಪಿಸುತ್ತವೆ ಎಂಬ ವಾಸ್ತವಿಕ ಸತ್ಯವನ್ನು ಗೀತಾ ನಾಗಭೂಷಣ ತಮ್ಮ ಕಾದಂಬರಿಗಳಲ್ಲಿ ತುಂಬ ಪರಿಣಾಮಕಾರಿಯಾಗಿ ಬಿಡಿಸಿ ಹೇಳಿದ್ದಾರೆ. ದಲಿತ ಮಹಿಳೆಯರು ಅನುಭವಿಸುವ ತುಳಿತ, ಭಯಂಕರ ದೌರ್ಜನ್ಯ ಹಿಂಸೆ. ಅನ್ಯಾಯ ಇವುಗಳನ್ನೆಲ್ಲ ದೇಸಿ ಸೊಗಡಿನ ಭಾಷೆಯಲ್ಲಿ ಗೀತಾ ಕಣ್ಣಿಗೆ ಕಾಣುವಂತೆ ಚಿತ್ರಿಸುತ್ತಾರೆ ಮತ್ತು ಈ ಬಗ್ಗೆ ಬರೆದ ಮೊದಲ ಲೇಖಕಿಯೂ ಆಗಿದ್ದಾರೆ. ಕುಡಿತ, ಹಸಿವು ಮತ್ತು ಕಾಮ ಬಡಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ; ಅವುಗಳನ್ನು ಆಧಾರವಾಗಿಟ್ಟುಕೊಂಡು ನನ್ನ ಕಾದಂಬರಿಗಳಲ್ಲಿ ಅವರ ನೋವು, ನಲಿವುಗಳನ್ನು ಬಿಂಬಿಸಲು ಹೆಣಗುತ್ತೇನೆ, ಕೂಲಿಕಾರನ ಮಗಳಾದ ನನಗೆ ಗ್ರಾಮೀಣ ಬಡಮಹಿಳೆಯರ ಬದುಕು ಮತ್ತು ಬವಣೆ ಗೊತ್ತು; ಅವರ ಕಷ್ಟಗಳನ್ನು ಸಾರಿ ಹೇಳಲು ನಾನು ಹಟದಿಂದ ಬರೆದಿದ್ದೇನೆ; ಚಟಕ್ಕಾಗಿ ಬರೆದುದಲ್ಲ” ಎಂದು ಹೇಳುವ ಅವರು ಝೋಪಡ ಪಟ್ಟಿಯ ದಲಿತ ಮತ್ತು ಶೂದ್ರ ಹೆಂಗಸರ ನೋವುಗಳು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಬೇಕಾದ ಜರೂರತ್ತು ಈ ದಿನಗಳ ಬೇಡಿಕೆಯಾಗಿದೆ ಅನ್ನುತ್ತಾರೆ. ಆರಂಭದಲ್ಲಿ ಮನರಂಜನಾತ್ಮಕ ಕಾದಂಬರಿಗಳನ್ನು ಅವರು ಬರೆದರೂ, ಬಹುಬೇಗ ತಾವು ಬರೆಯಬೇಕಾದದು ಬೇರೆಯೇ ಇದೆ ಎಂದು ಗುರುತಿಸಿಕೊಂಡು 1980ರ ದಶಕದಿಂದೀಚೆಗೆ ಬಂಡಾಯದ ಬರಹ ಆರಂಭಿಸಿದರು. ಗುಡಿಸಲಗೇರಿಯ ಹೆಂಗಸರ ಹೋರಾಟ, ಸಂಘರ್ಷಗಳ ಬದುಕನ್ನು ಅದರ ನೈಜ ಸತ್ಯ ನಿಷ್ಠೂರಗಳೊಂದಿಗೆ ಓದುಗರ ಮುಂದಿಟ್ಟರು.
=ಕಾದಂಬರಿಗಳು= ತಾವರೆಯ ಹೂವು, ಚಂದನದ ಚಿಗುರು, ಮಹಾಮನೆ, ಮರಳಿನ ಮನೆ, ಆಘಾತ, ನೀಲಗಂಗಾ, ಧುಮ್ಮಸ್ಸು, ದಂಗೆ, ಚಿಕ್ಕಿಯ ಹರೆಯದ ದಿನಗಳು, ಹಸಿಮಾಂಸ ಮತ್ತು ಹದ್ದುಗಳು, ಬದುಕು ಮುಂತಾಗಿ ಇಪ್ಪತ್ತಾರಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದರು.
ದುರುಗ ಮುರುಗಿಯರ ಸಂಸ್ಕøತಿ-ಸಂಶೋಧನಾ ಕೃತಿ ಪ್ರಕಟಿಸಿದರು. ಜ್ವಲಂತ ಹಾಗೂ ಅವ್ವ ಮತ್ತು ಇತರ ಕಥೆಗಳು ಅವರ ಪ್ರಕಟಿತ ಕಥಾ ಸಂಕಲನಗಳು. ಜೋಗಿಣಿ, ಅವ್ವ, ಸತ್ತ ಹೆಣ್ಣಿನ ಸುತ್ತ, ಜೀವನ ಚಕ್ರ, ನೀಲಗಂಗಾ ಮುಂತಾದ ಕೃತಿಗಳು ಕಿರುತೆರೆಯಲ್ಲಿ ನಾಟಕ-ಧಾರಾವಾಹಿಗಳಾಗಿ ಪ್ರಸಾರವಾಗಿವೆ. ಆಕಾಶವಾಣಿಯಲ್ಲಿ ಸುಮಾರು 50 ಕಥೆಗಳು, 15 ನಾಟಕಗಳು ವಿವಿಧ ಕೇಂದ್ರಗಳಿಂದ ಬಿತ್ತರಗೊಂಡಿವೆ. ಹಸಿಮಾಂಸ ಮತ್ತು ಹದ್ದುಗಳು ಕಾದಂಬರಿ ಹೆಣ್ಣಿನ ಕೂಗು ಎಂಬ ಹೆಸರಿನಲ್ಲಿ ಚಲನಚಿತ್ರವಾಗಿ ಜನಮೆಚ್ಚುಗೆ ಗಳಿಸಿತು, ಇವರ ಕೆಲವು ಕೃತಿಗಳು ಪದವಿ ತರಗತಿಗಳಿಗೆ ಪಠ್ಯವಾಗಿವೆ.
ಗೀತಾ ನಾಗಭೂಷಣ ಅವರಿಗೆ ಸಾರಸ್ವತ ಲೋಕದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳೂ ದೊರೆತಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ 1995ನೇ ಸಾಲಿನ ವಿಶೇಷ ಗೌರವ ಪ್ರಶಸ್ತಿ, 1998ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1996ರಲ್ಲಿ ಗುಲ್ಬರ್ಗ ವಿಭಾಗಮಟ್ಟದ ಉತ್ತಮ ಉಪನ್ಯಾಸಕಿ ಪ್ರಶಸ್ತಿ, 1998ರಲ್ಲಿ ಗುಲ್ಬರ್ಗಾದ ಎಸ್.ಆರ್.ಪಾಟೀಲ್ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, 2001ರಲ್ಲಿ ಗುಲ್ಬರ್ಗಾದ ಮಹಾಂತ, ಜ್ಯೋತಿ ಪ್ರತಿಷ್ಠಾನದ ಕಾಯಕ ರತ್ನ ಪ್ರಶಸ್ತಿ, 2001ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜದೇವಿ ಪ್ರಶಸ್ತಿ, 2002ರಲ್ಲಿ ರಾಜ್ಯದ ಅತ್ಯುನ್ನತ ದಾನ ಚಿಂತಾಮಣಿ ಪ್ರಶಸ್ತಿ ಮೊಟ್ಟ ಮೊದಲಿಗೆ ಕನ್ನಡದ ಲೇಖಕಿಯೊಬ್ಬರಿಗೆ ಇದೇ 2004ರಲ್ಲಿ ಸಂದ ಅವರ ಬೃಹತ್ ಕಾದಂಬರಿ ಬದುಕು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಪ್ರತಿಷ್ಠಿತ ಅನುಪಮಾ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದ ನಾಡೋಜ (ಗೌರವ ಡಾಕ್ಟರೇಟ್) ಪ್ರಶಸ್ತಿ-ಮುಂತಾದವು ಉಲ್ಲೇಖಿಸಲೇಬೇಕಾದ ಕೆಲವು ಪ್ರಶಸ್ತಿಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ 43 ವರ್ಷಗಳ ದಿರ್ಘ ಇತಿಹಾಸದಲ್ಲೇ ಅಧ್ಯಕ್ಷ ಗಾದಿಗೆ ನೇಮಕಗೊಂಡ ಮೊದಲ ಮಹಿಳೆಯಾಗಿಯೂ ಶ್ರೀಮತಿ ಗೀತಾ ನಾಗಭೂಷಣ ಅವರಿಗೆ ಗೌರವ ಸಂದಿದೆ. ಅಂತೆಯೇ ಅವರ ಅಧ್ಯಕ್ಷತೆಯ ಈ ಸಂದರ್ಭದಲ್ಲಿ ಯಾವುದೇ ಮೀಸಲಾತಿಯ ಬಲವಿಲ್ಲದೆ, ಅರ್ಹತೆಯೇ ಮಾನದಂಡವಾಗಿ ಅಕಾಡೆಮಿಯ ಹತ್ತು ಸದಸ್ಯರಲ್ಲಿ ಐವರು ಮಹಿಳಾ ಸದಸ್ಯರಾಗಿರುವುದೂ ಒಂದು ವಿಶೇಷ ದಾಖಲೆ.
ನಾಡೋಜ ಪದವಿ ಪಡೆದ ಪ್ರಥಮ ಮಹಿಳೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷಳಾದ ಪ್ರಥಮ ಮಹಿಳೆ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕರ್ನಾಟಕದ ಪ್ರಥಮ ಮಹಿಳೆ. ಹೀಗೆ ಹಲವಾರು ಪ್ರಥಮಗಳನ್ನು ತಮ್ಮದಾಗಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ಗೀತಾ ನಾಗಭೂಷಣ ಅವರದು.
ಗೀತಾ ನಾಗಭೂಷಣ ಹಲವಾರು ಪ್ರಮುಖ ಸಮಿತಿಗಳ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಡಾ. ಶಿವರಾಮ ಕಾರಂತ. ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯೆಯಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ, ಗುಲ್ಬರ್ಗ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯೆಯಾಗಿ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯೆಯಾಗಿ ಅವರ ಸೇವೆ ಸಾಂಸ್ಕøತಿಕ ಸಾಹಿತ್ಯ ಲೋಕಕ್ಕೆ ಸಂದಾಯವಾಗಿದೆ. (ನಾಗಮಣಿ ಎಸ್ ರಾವ್)