ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಂಟಕಲ್

ವಿಕಿಸೋರ್ಸ್ದಿಂದ

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುಟ್ಟಿ ತಾಲ್ಲೂಕಿನ ಒಂದು ಪಟ್ಟಣ. ಉ. ಅ. 15° 9' ಮತ್ತು ಪು. ರೇ. 72° 23' ಮೇಲೆ ಇದೆ. ಬಳ್ಳಾರಿ-ಗೂಟಿ ಹೆದ್ದಾರಿಯಲ್ಲಿರುವ ಈ ಪಟ್ಟಣ ದಕ್ಷಿಣ-ಮಧ್ಯ ರೈಲ್ವೆಯ ಪ್ರಮುಖ ಜಂಕ್ಷನ್. ಮುಂಬಯಿ, ಮದ್ರಾಸು, ಬೆಂಗಳೂರು, ಬಳ್ಳಾರಿ, ಸಿಕಂದರಬಾದ್, ಗುಂಟೂರು, ಹುಬ್ಬಳ್ಳಿಗಳ ರೈಲು ಮಾರ್ಗಗಳು ಇಲ್ಲಿ ಕೂಡುತ್ತವೆ. ಆದ್ದರಿಂದ ಈ ನಿಲ್ದಾಣ ಹಗಲು-ರಾತ್ರಿ ರೈಲುಗಳ ಓಡಾಟವೂ ಜನಸಂದಣಿಯೂ ಇರುತ್ತದೆ. ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಹೋಗುವ ಅಂಚೆ ಚೀಲಗಳನ್ನು ಕೊಡುವ ತೆಗೆದುಕೊಳ್ಳುವ ಕೆಲಸ ಸತತವಾಗಿ ನಡೆದಿರುತ್ತದೆ.


ರೈಲ್ವೆ ಬರುವುದಕ್ಕೆ ಮುಂಚೆ ಇದೊಂದು ಸಣ್ಣ ಹಳ್ಳಿಯಾಗಿತ್ತು. ಈಗ ಆ ಭಾಗ ಹಳೆ ಗುಂಟಕಲ್ ಎನಿಸಿಕೊಂಡಿದೆ. ಗುಂಟಕಲ್ ರಾಯಲಸೀಮೆ ಪ್ರದೇಶದ ಒಂದು ಮುಖ್ಯ ವ್ಯಾಪಾರ ಕೇಂದ್ರ. ಸುತ್ತಣ ಪ್ರದೇಶದಲ್ಲಿ ಬೇಳೆಯುವ ಹತ್ತಿ, ನೆಲಗಡಲೆ, ಎಣ್ಣೆಬೀಜ ಇಲ್ಲಿ ಸಂಗ್ರಹವಾಗುತ್ತವೆ. ಇಲ್ಲಿ ಅರಳೆ ಬಿತ್ತುವ ಮತ್ತು ಹಿಂಜುವ ಗಿರಣಿಗಳಿವೆ. ನೀರಿನ ಅಭಾವದಿಂದಾಗಿ ಇದರ ಬೆಳೆವಣಿಗೆ ಕುಂಠಿತವಾಗಿದೆ.


ಗುಂಟಕಲ್ಲಿನ ಸುತ್ತ ಅನೇಕ ಪ್ರಾಚೀನ ಅವಶೇಷಗಳುಂಟು. ಇಲ್ಲಿಂದ 8 ಕಿ.ಮೀ. ದೂರದಲ್ಲಿರುವ ಚಿಪ್ಪಗಿರಿಯಲ್ಲಿ ವಿಜಯದಾಸರು ತಪಸ್ಸು ಮಾಡಿದ ಸ್ಥಳವಿದೆ.