ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಬ್ಬಿ

ವಿಕಿಸೋರ್ಸ್ದಿಂದ

ಗುಬ್ಬಿ

ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು; ತಾಲ್ಲೂಕಿನ ಕೇಂದ್ರ. ತುಮಕೂರು ಉಪವಿಭಾಗದಲ್ಲಿರುವ ಗುಬ್ಬಿ ತಾಲ್ಲೂಕಿನ ಉತ್ತರದಲ್ಲಿ ಶಿರಾ ತಾಲ್ಲೂಕು. ಪೂರ್ವದಲ್ಲಿ ತುಮಕೂರು ತಾಲ್ಲೂಕು, ದಕ್ಷಿಣದಲ್ಲಿ ಕುಣಿಗಲ್ ತಾಲ್ಲೂಕು ಮತ್ತು ಪಶ್ಚಿಮದಲ್ಲಿ ಚಿಕ್ಕನಾಯಕನಹಳ್ಳಿ, ತಿಪಟೂರು ಮತ್ತು ತುರುವೇಕೆರೆ ತಾಲ್ಲೂಕುಗಳು ಇವೆ. ತಾಲ್ಲೂಕಿನ ವಿಸ್ತೀರ್ಣ 475.1 ಚ.ಮೈ ಜನಸಂಖ್ಯೆ 2,56,144 (2001). ಈ ಪಟ್ಟಣದ ಜನಸಂಖ್ಯೆ 16,802 (2001). ಗುಬ್ಬಿ ತಾಲ್ಲೂಕಿನಲ್ಲಿ ಗುಬ್ಬಿ, ಚಂದ್ರಶೇಖರಪುರ, ಚೇಳೂರು, ಹಾಗಲವಾಡಿ, ನಿಟ್ಟೂರು ಮತ್ತು ಕಡಬ ಹೋಬಳಿಗಳೂ 300 ಗ್ರಾಮಗಳೂ ಇವೆ. ಗುಬ್ಬಿಯೊಂದೇ ಈ ತಾಲ್ಲೂಕಿನಲ್ಲಿರುವ ಪಟ್ಟಣ. ಜಿಲ್ಲೆಯಲ್ಲಿ ಸಮುದ್ರಮಟ್ಟದಿಂದ ಸು.3,000' ಎತ್ತರದ ಕೆಲವು ಬೆಟ್ಟಗಳುಂಟು. ಮಳೆ ಕಡಿಮೆ. ವರ್ಷದ ಸರಾಸರಿ 771.6 ಮಿಮೀ. ದೇವರಾಯನದುರ್ಗದ ದಕ್ಷಿಣದಲ್ಲಿ ಹುಟ್ಟುವ ಶಿಂಷಾ ನದಿ ಈ ತಾಲ್ಲೂಕಿನ ಮೂಲಕ ಹರಿದು ಹೋಗುತ್ತದೆ. ತಾಲ್ಲೂಕಿನಲ್ಲಿ ಈ ನದಿಯ ಉದ್ದ 34 ಕಿ.ಮೀ. ತುಮಕೂರು ಪಟ್ಟಣಕ್ಕೆ ಪಶ್ಚಿಮಕ್ಕೆ 21 ಕಿ.ಮೀ. ದೂರದಲ್ಲಿರುವ ಗುಬ್ಬಿ ಪಟ್ಟಣದ ಶಿವಮೊಗ್ಗ ರಸ್ತೆಯೂ ಗುಬ್ಬಿಯ ಮೂಲಕ ಹಾದುಹೋಗುತ್ತವೆ. ಇದು ಸಮುದ್ರಮಟ್ಟದಿಂದ 2,544" ಎತ್ತರದಲ್ಲಿದೆ.

ಗುಬ್ಬಿ ಹಿಂದೆ ಅಮರಗೊಂಡ ಕ್ಷೇತ್ರವೆಂಬ ಹೆಸರಿನ ಪವಿತ್ರ ಸ್ಥಳವಾಗಿತ್ತೆಂದೂ ಇಲ್ಲಿ ಗೋಸಲ ಚನ್ನಬಸವೇಶ್ವರ, ಅಮರಗೊಂಡ ಮಲ್ಲಿಕಾರ್ಜುನ, ಮಲ್ಲಣಾರ್ಯ ಮುಂತಾದ ವೀರಶೈವಾಚಾರ್ಯರು ಇದ್ದರೆಂದೂ ಹೇಳಲಾಗಿದೆ. ಇಲ್ಲಿಯ ಮಲ್ಲಿಕಾರ್ಜುನ ದೇವಾಲಯದಲ್ಲಿ ಮಲ್ಲಣಾರ್ಯನ ಪ್ರವಚನವನ್ನು ನಿತ್ಯವೂ ಕೇಳುತ್ತಿದ್ದ ಎರಡು ಗುಬ್ಬಚ್ಚಿಗಳು ಆ ಪ್ರವಚನ ಪರಿಸಮಾಪ್ತಿಗೊಂಡಾಗ ದೇಹತ್ಯಾಗ ಮಾಡಿ ಸದ್ಗತಿ ಪಡೆದವೆಂದೂ, ಆದ್ದರಿಂದಲೇ ಈ ಸ್ಥಳಕ್ಕೆ ಗುಬ್ಬಿ ಎಂಬ ಹೆಸರು ಬಂತೆಂದೂ ಹೇಳುತ್ತಾರೆ. ಮಲ್ಲಕಾರ್ಜುನನ ದೇವಾಲಯದಲ್ಲಿ ಆ ಗುಬ್ಬಚ್ಚಿಗಳದೆನ್ನಲಾದ ಸಮಾಧಿಯೊಂದು ಇದೆ. ಗುಬ್ಬಿ ಒಂದು ವ್ಯಾಪಾರಸ್ಥಳ. ಇಲ್ಲಿ ವಾರಕ್ಕೊಮ್ಮೆ ಸೇರುವ ಸಂತೆಗೂ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೂ ಸುತ್ತಮುತ್ತಣ ಸ್ಥಳಗಳಿಂದ ವರ್ತಕರೂ, ಗ್ರಾಹಕರೂ ಬರುತ್ತಾರೆ. ಬಟ್ಟೆ, ಕಂಬಳಿ, ಅಡಕೆ, ತೆಂಗಿನಕಾಯಿ, ಬೆಲ್ಲ, ಹುಣಸೆಹಣ್ಣು, ಗೋಧಿ, ಬತ್ತ, ರಾಗಿ, ಅರಗು ಮುಂತಾದವು ಇದರ ಸುತ್ತಮುತ್ತ ಉತ್ಪಾದನೆಯಾಗುವ ಪದಾರ್ಥಗಳು. ಸುತ್ತಮುತ್ತಣ ಸ್ಥಳಗಳಿಗೆಲ್ಲ ಇದೊಂದು ವ್ಯಾಪಾರಸ್ಥಳ, ಇಲ್ಲೊಂದು ನಿಯಂತ್ರಿತ ಮಾರುಕಟ್ಟೆಯಿದೆ. ಗುಬ್ಬಿಯಲ್ಲಿ ಗಾಡಿಗಳು ತಯಾರಾಗುತ್ತವೆ.

ಗುಬ್ಬಿಗೆ 3 ಕಿ.ಮೀ. ದೂರದಲ್ಲಿರುವ ಹೊಸಹಳ್ಳಿಯ ಗೌಡ ಈ ಪಟ್ಟಣವನ್ನು 400 ವರ್ಷಗಳ ಹಿಂದೆ ಸ್ಥಾಪಿಸಿದನೆಂದೂ ಈತ 700 ವರ್ಷಗಳ ಹಿಂದೆ ಇದ್ದ ಹೊನ್ನಪ್ಪಗೌಡನೆಂಬ ನೊಣಬ ಮುಖಂಡ ವಂಶಸ್ಥನೆಂದೂ ಹೇಳಲಾಗಿದೆ. ಮೈಸೂರಿನ ದೊರೆಗಳಿಗೆ ಈ ಮನೆತನದವರು ಕಪ್ಪ ಒಪ್ಪಿಸುತ್ತಿದ್ದರು. ಹೈದರನ ಕಾಲದಲ್ಲಿ ಇದನ್ನು 500 ಪಗೋಡಗಳಿಂದ 2,500 ಪಗೋಡಗಳಿಗೆ ಹೆಚ್ಚಿಸಲಾಯಿತು. ಟಿಪ್ಪು ಇವರ ಅಧಿಕಾರವನ್ನು ಕಿತ್ತುಕೊಂಡ.

ಗುಬ್ಬಿಯಲ್ಲಿರುವ ದೇವಾಲಯಗಳಲ್ಲಿ ಅತ್ಯಂತ ಪ್ರಾಚೀನವಾದ್ದು ಗದ್ದೆ ಮಲ್ಲೇಶ್ವರನ ದೇವಸ್ಥಾನ. ಇದು ಮೊದಲು ಊರ ಹೊರಗಿನ ಗದ್ದೆಯಲ್ಲಿತ್ತೆಂದೂ ಕ್ರಮೇಣ ಇದರ ಸುತ್ತಲೂ ಊರು ಬೆಳೆಯಿತೆಂದೂ ಹೇಳುತ್ತಾರೆ. ದೇವಾಲಯದ ನವರಂಗದಲ್ಲಿ ದಕ್ಷಿಣಾಮೂರ್ತಿ, ಪಾರ್ವತಿ ಮತ್ತು ವೀರಭದ್ರ ಮೂರ್ತಿಗಳಿವೆ. ವೈಲಪ್ಪ ಅಥವಾ ಓಹಿಲಪ್ಪ ದೇವಸ್ಥಾನವೂ ಪ್ರಸಿದ್ಧವಾದ್ದು. ಇಲ್ಲಿ ಶೈವ ಭಕ್ತ ಓಹಿಲನ ವಿಗ್ರಹವಿದೆ. ಗುಬ್ಬಿಯಪ್ಪ ಅಥವಾ ಗುಬ್ಬಿ ಚನ್ನಬಸವೇಶ್ವರ ದೇವಾಲಯ ಬಹಳ ದೊಡ್ಡದು. ಹೊಸಹಳ್ಳಿಯ ಪಾಳೆಯಗಾರ ಮುಮ್ಮಡಿ ಹೊನ್ನಪ್ಪಗೌಡನ ಕಾಲದಲ್ಲಿದ್ದ ಗುಬ್ಬಿಯಪ್ಪ ಅಥವಾ ಚನ್ನಬಸವಯ್ಯ ಎಂಬ ವೀರಶೈವ ಗುರುವಿನ ಗದ್ದಿಗೆ ಇಲ್ಲಿದೆ. ಇದಕ್ಕೆ ಈಚೆಗೆ ಸುಂದರವಾದ ಗೋಪುರವೊಂದನ್ನು ಕಟ್ಟಲಾಗಿದೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಜನಾರ್ದನ ಮತ್ತು ಬ್ಯಾಟರಾಯಸ್ವಾಮಿ ದೇವಾಲಯಗಳೂ ಗುಬ್ಬಿಯಲ್ಲಿವೆ. ಗುಬ್ಬಿಗೆ ಒಂದು ಮೈಲು ದೂರದಲ್ಲಿ ಬಯಲ ಆಂಜನೇಯಸ್ವಾಮಿ ದೇವಾಲಯವಿದೆ. ಗುಬ್ಬಿ ರೈಲ್ವೆ ನಿಲ್ದಾಣದ ಬಳಿ ಇರುವ ಚಿದಂಬರಾಶ್ರಮದಲ್ಲಿ ದತ್ತಾತ್ರೇಯ ಮಂದಿರವೂ ಗುರುಕುಲವೂ ಇವೆ.

ಗುಬ್ಬಿಯಲ್ಲಿ ಶಾಲೆ, ಆಸ್ಪತ್ರೆಗಳುಂಟು. 1909ರಲ್ಲಿ ಗುಬ್ಬಿ ಪೌರಸಭೆ ಸ್ಥಾಪಿತವಾಯಿತು. ಪೌರಸಭೆಯ ವ್ಯಾಪ್ತಿಗೆ ಒಳಪಟ್ಟ ಪ್ರದೇಶ 2.10 ಚ.ಮೈ. ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲ. ನೀರಿನ ಕೊಳಾಯಿಗಳುಂಟು. 1934ರಲ್ಲಿ ವಿದ್ಯುದ್ದೀಪಗಳ ಸೌಲಭ್ಯ ಒದಗಿಸಲಾಯಿತು.

15 ಮತ್ತು 16ನೆಯ ಶತಮಾನಗಳಲ್ಲಿ ಗುಬ್ಬಿ ಪಟ್ಟಣ ಸಾಹಿತ್ಯ ಚಟುವಟಿಕೆಯ ಕೇಂದ್ರವಾಗಿತ್ತು. ವೀರಶೈವ ಧರ್ಮವನ್ನು ಕುರಿತ ಅನೇಕ ಗ್ರಂಥಗಳ ರಚನೆಯಾಯಿತು. ಗಣಭಾಷ್ಯರತ್ನಮಾಲೆಯೇ ಮುಂತಾದ ಅನೇಕ ಕೃತಿಗಳನ್ನು ರಚಿಸಿದ ಮಲ್ಲಣ್ಣ ಗುಬ್ಬಿಯವನು.ಈತ 15ನೆಯ ಶತಮಾನದ ಕೊನೆಯಲ್ಲಿದ್ದ. ಇವನ ಮೊಮ್ಮಗನಾದ ಗುಬ್ಬಿ ಮಲ್ಲಣಾರ್ಯ 1513 ಮತ್ತು 1530ರಲ್ಲಿ ಭಾವಚಿಂತಾರತ್ನ ಮತ್ತು ವೀರಶೈವಾಮೃತ ಪುರಾಣ ಎಂಬ ಎರಡು ಕಾವ್ಯಗಳನ್ನು ರಚಿಸಿದ. ಪ್ರಭುಗ, ಚೇರಮ ಇವರು ಮಲ್ಲಣಾರ್ಯನ ಶಿಷ್ಯರು. ಇವರೂ ಗ್ರಂಥಗಳನ್ನು ರಚಿಸಿದ್ದಾರೆ. ತೋಂಟದ ಸಿದ್ಧೇಶ್ವರ ಪುರಾಣವೆಂಬ ಗ್ರಂಥವನ್ನು ಮಲ್ಲಣಾರ್ಯನ ಮಗ ಶಾಂತೇಶ ರಚಿಸಿದ್ದು 1561ರಲ್ಲಿ. ಕನ್ನಡ ರಂಗಭೂಮಿಗೆ ಗುಬ್ಬಿಯ ಕೊಡುಗೆ ವಿಶಿಷ್ಟವಾದ್ದು. ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕಮಂಡಲಿಯ ಒಡೆಯರೂ ಸುಪ್ರಸಿದ್ಧ ನಟರೂ ಆಗಿದ್ದ ಜಿ.ಎಚ್.ವೀರಣ್ಣನವರು ಗುಬ್ಬಿಯವರು. ಗುಬ್ಬಿಯ ಇನ್ನೊಬ್ಬ ನಿವಾಸಿಯಾಗಿದ್ದ ಚಂದಣ್ಣ ಮತ್ತು ಅವರ ಮಿತ್ರರ ಪ್ರಯತ್ನದಿಂದ ಆರಂಭವಾದ ಈ ನಾಟಕ ಮಂಡಲಿಯನ್ನು ವೀರಣ್ಣನವರು ಅನಂತರ ವಹಿಸಿಕೊಂಡು ನಾಟಕ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ ಸಿದ್ಧಿ ಪಡೆದರು. (ಕೆ.ಆರ್.)