ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುರುಶಾಂತಶಾಸ್ತ್ರಿ, ಶಿರಸಿ

ವಿಕಿಸೋರ್ಸ್ದಿಂದ

ಗುರುಶಾಂತಶಾಸ್ತ್ರಿ, ಶಿರಸಿ ಸು. 1881-1961. ಕನ್ನಡ ಮತ್ತು ಸಂಸ್ಕøತ ಭಾಷಾಸಾಹಿತ್ಯಗಳಲ್ಲೂ ಅನೇಕ ಶಾಸ್ತ್ರಗಳಲ್ಲೂ ಪಂಡಿತರು. ವಿದ್ಯಾಭ್ಯಾಸಕ್ಕಾಗಿ ಇವರು ಈ ಶತಮಾನದ ಆರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಮೈಸೂರಿಗೆ ಬಂದರು. ಪಿ. ಆರ್. ಕರಬಸವಶಾಸ್ತ್ರಿಗಳ ಹತ್ತಿರ ಕಲಿತು ಉಭಯಭಾಷಾಪಂಡಿತರಾಗಿ ವೇದಾಧ್ಯಯನದಲ್ಲಿ ಬಲ್ಲಿದರೆನಸಿಕೊಂಡು ಪ್ರಖ್ಯಾತರಾದರು. ವಿಶೇಷವಾಗಿ ಶ್ರೀಕಂಠಭಾಷ್ಯ, ಶ್ರೀಕರಭಾಷ್ಯ, ಸಿದ್ಧಾಂತ ಶಿಖಾಮಣಿ, ಕ್ರಿಯಾಸಾರ, ಲಿಂಗಧಾರಣಚಂದ್ರಿಕೆ, ವೀರಶೈವಾನಂದಚಂದ್ರಿಕೆ, ಅನುಭವಸಾರ, ಶಿವಾದ್ವೈತಮಂಜರಿ, ಧರ್ಮಶಿರೋಮಣಿ, ಶತಕತ್ರಯ ಮೊದಲಾದ ವೀರಶೈವ ಮತಗ್ರಂಥಗಳು ಇವರಿಗೆ ಮುಖೋದ್ಗತವಾಗಿದ್ದುವು.

1930ರಲ್ಲಿ ರೇಣುಕ ವಿಜಯವನ್ನೂ 1951ರಲ್ಲಿ ನಂದಿಕೇಶ್ವರ ಶಿವಾಚಾರ್ಯನ ಲಿಂಗಧಾರಣಚಂದ್ರಿಕೆಯನ್ನೂ 1960ರಲ್ಲಿ ವೀರಶೈವಾನಂದಚಂದ್ರಿಕೆಯನ್ನೂ ಇವರು ಕನ್ನಡದಲ್ಲಿ ಬರೆದು ಪ್ರಕಟಿಸಿದರು; ವಿದ್ವಾಂಸರುಗಳ ಭಾಷಣ ಸಂಗ್ರಹವಾದ ಉಪನ್ಯಾಸ ಸಂಗ್ರಹ, ಲಿಂಗಾರ್ಚನ ಪ್ರಯೋಗ (ಶಿವಪೂಜಾವಿಧಿ), ನ್ಯಾಯಶತಕದ ಟೀಕೆ ಟಿಪ್ಪಣಿ, ಈಶಾವಾಸ್ಯ, ಕೇನ, ಸಿದ್ಧಾಂತ ಶಿಖೋಪನಿಷತ್ತುಗಳ ಶಾಂಕರೀ ವ್ಯಾಖ್ಯಾನದ ತಾತ್ಪರ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಲ್ಲದೆ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತದ ಮೇಲೆ ಒಂದು ಪುಸ್ತಕ ಬರೆದರು.

ಶಾಸ್ತ್ರಿಗಳು ಪಂಚಾಚಾರ್ಯಪ್ರಭಾ, ಶರಣಸಾಹಿತ್ಯ ಮುಂತಾದ ಮಾನಸಿಕಗಳಲ್ಲಿ ವಿದ್ವತ್‍ಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಕೆಲಕಾಲ ಪಂಚಾಚಾರ್ಯ ಪ್ರಭಾದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶಾಸ್ತ್ರಿಗಳು ಹಲವು ವರ್ಷ ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಸಂಸ್ಕøತ ಕಾಲೇಜಿನಲ್ಲಿ ಶಕ್ತಿವಿಶಿಷ್ಟಾದ್ವೈತದ ಪ್ರಾಧ್ಯಾಪಕರಾಗಿದ್ದರು. ಮುಡುಕತೊರೆ ವೀರಶೈವ ಮತಸಂವರ್ಧಿನೀ ಸಭೆಯ ಪುರೋಭಿವೃದ್ಧಿಗೆ ಶ್ರಮಿಸಿದವರಲ್ಲಿ ಶಾಸ್ತ್ರಿಗಳೂ ಒಬ್ಬರು. ಆ ಸಭೆಯ ಆಶ್ರಯದಲ್ಲಿ ನಡೆದ ವಿದ್ವಾಂಸರ ಭಾಷಣಗಳನ್ನು ಶಾಸ್ತ್ರಿಗಳು ಸಂಗ್ರಹಿಸಿ ಪ್ರಕಟಪಡಿಸಿದ್ದಾರೆ. (ಬಿ.ಎಸ್.)