ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಳೇದಗುಡ್ಡ

ವಿಕಿಸೋರ್ಸ್ದಿಂದ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಒಂದು ಪಟ್ಟಣ; ಹೋಬಳಿ ಕೇಂದ್ರ ಉ.ಅ. 160 3' ಮತ್ತು ಪು.ರೇ 750 47' ಮೇಲೆ ಬಾದಾಮಿಯಿಂದ ಈಶ್ಯಾನಕ್ಕೆ 15 ಕಿಮೀ ದೂರದಲ್ಲಿದೆ; ಗುಳೇದಗುಡ್ಡ ರೋಡ್ ರೈಲು ನಿಲ್ದಾಣಕ್ಕೆ ಈ ಸ್ಥಳದಿಂದ 10 ಕಿಮೀ ದೂರ.


ಗುಳೇದಗುಡ್ಡ ಪಟ್ಟಣ ಹಿಂದೆ ಇಲ್ಲಿರುವ ಬೆಟ್ಟದ ಮೇಲಿತ್ತು. ಈಗಲೂ ಅಲ್ಲಿ ಪಟ್ಟಣದ ಅವಶೇಷಗಳನ್ನು ಕಾಣಬಹುದು. 1580ರಲ್ಲಿ ಬಿಜಾಪುರದ ಎರಡನೆಯ ಇಬ್ರಾಹಿಂ ಆದಿಲ್ಶಹ ಇಲ್ಲಿ ಒಂದು ಕೋಟೆ ಕಟ್ಟಿಸಿದ. 1706ರಲ್ಲಿ ಒಂದು ಸುಂದರ ಜಲಾಶಯದ ದಂಡೆಯ ಮೇಲೆ ಈ ಪಟ್ಟಣದ ಸ್ಥಾಪನೆಯಾಯಿತು. 1750ರಲ್ಲಿ ಈ ಪಟ್ಟಣ ಲೂಟಿಗೆ ಒಳಗಾಯಿತು. 1787ರಲ್ಲಿ ಇದು ಟಿಪ್ಪುವಿನ ಅಧೀನಕ್ಕೆ ಬಂತು. ಅನಂತರ ಮರಾಠರು ಇದನ್ನು ಲೂಟಿ ಮಾಡಿದಾಗ ಇಲ್ಲಿಯ ನಿವಾಸಿಗಳನೇಕರು ಇಲ್ಲಿಂದ ಓಡಿಹೋದರು. ದೇಸಾಯಿ ಮನೆತನದ ಪ್ರಭಾವದಿಂದಾಗಿ ಅವರು ಮತ್ತೆ ಇಲ್ಲಿಗೆ ಬಂದು ನೆಲೆಸಿದರು. ಮತ್ತೆ ನರಸಿಂಹನೆಂಬವನು ಈ ನಗರವನ್ನು ಲೂಟಿ ಮಾಡಿದ. ಜನ ಪುನಃ ಓಡಿಹೋದರು. 1818ರಲ್ಲಿ ದೇಸಾಯಿ ಪರಿವಾರದವರ ಒತ್ತಾಯ ಮತ್ತು ಸಹಯೋಗದಿಂದಾಗಿ ಜನರಲ್ ಮನ್ರೋ ಈ ಜನ ಪುನಃ ಇಲ್ಲಿಯೇ ವಾಸ ಮಾಡಲು ಅನುಕೂಲ ಮಾಡಿಕೊಟ್ಟ.


ಬಾದಾಮಿ ತಾಲ್ಲೂಕಿನಲ್ಲಿ ಗುಳೇದಗುಡ್ಡ ಅಭಿವೃದ್ದಿ ಹೊಂದುತ್ತಿರುವ ಒಂದು ಪಟ್ಟಣ. ಇಲ್ಲಿ ತಯಾರಾಗುವ ಕುಪ್ಪುಸದ ಕಣಗಳು ಭಾರತದಲ್ಲೆಲ್ಲ ಪ್ರಸಿದ್ಧಿ ಪಡೆದಿವೆ. ಇಳಕಲ್ಲ ಸೀರೆ, ಅಮೀನಗಡದ ಕರದಂಟು, ಗುಳೆದಗುಡ್ಡದ ಕಣ-ಇದು ಉತ್ತರ ಕರ್ನಾಟಕದಲ್ಲಿ ಮನೆಮಾತು. ಇಲ್ಲಿ ತಯಾರಾಗುವ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು ಸೊಲ್ಲಾಪುರ, ಮುಂಬಯಿ, ಪುಣೆ, ಅಹ್ಮದ್ನಗರಗಳಿಗೆ ಸಾಗುತ್ತವೆ. ಗುಳೇದಗುಡ್ಡದ ಹತ್ತಿರ ಬೆಲೆಬಾಳುವ ಕಲ್ಲುಗಣಿಗಳುಂಟು.