ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೂರ್ಜರ ವಂಶ
ಸು. 6ನೆಯ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯ ಅಸ್ತಂಗತವಾದ ಸಮಯದಲ್ಲಿ ಜೋಧಪುರದ ಸುತ್ತಲಿನ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದ ಒಂದು ಸಣ್ಣ ರಾಜ್ಯದ ಅರಸರ ವಂಶ. ಈಗಿನ ರಾಜಸ್ತಾನದ ಬಹುಭಾಗ ಹಿಂದೆ ಗೂರ್ಜರಾತ್ರ ಅಥವಾ ಗುಜರಾತವೆಂದೇ ಕರೆಯಲ್ಪಡುತ್ತಿತ್ತು. ಗೂರ್ಜರರು ನೆಲಸಿದ ಸ್ಥಳವಾದ ಕಾರಣ ಇದಕ್ಕೆ ಗೂರ್ಜರಾತ್ರವೆಂದು ಹೆಸರಾಯಿತು. ಗೂರ್ಜರರಿಗೆ ಸಂಬಂಧಿಸಿದುದೆಂಬಂತೆ ಪಂಜಾಬಿನಲ್ಲಿ ಗುಜ್ರಾನ್ವಾಲ, ಗುಜರಾತ್, ಗುಜರ್ಖಾನ್ ಎಂಬ ಹೆಸರಿನ ಸ್ಥಳಗಳಿವೆ. ಅಲ್ಲಿಯ ಸಹಾರನ್ಪುರ ಜಿಲ್ಲೆಗೆ ಹಿಂದೆ ಗುಜರಾತ ಎಂದೇ ಹೆಸರಿತ್ತು. ಗೂರ್ಜರರು ಹಿಮಾಲಯದ ಪಶ್ಚಿಮ ಪ್ರದೇಶ, ಪಂಜಾಬು, ಉತ್ತರ ಪ್ರದೇಶ, ಪಶ್ಚಿಮ ರಾಜಪುಟಾಣ ಮತ್ತು ಸಿಂಧೂ ನದಿಯ ಆಚೆಗಿರುವ ಗುಡ್ಡಗಾಡುಗಳಲ್ಲೆಲ್ಲ ತಮ್ಮ ನೆಲೆಗಳನ್ನು ಏರ್ಪಡಿಸಿಕೊಂಡಿದ್ದರು.
ಗೂರ್ಜರರು ಯಾರು? ಎಂಬ ಬಗ್ಗೆ ಅನೇಕ ಊಹೆಗಳೂ ವಾದಗಳೂ ಇವೆ. ಹೂಣರೊಡನೆ ಭಾರತಕ್ಕೆ ವಲಸೆ ಬಂದ ಒಂದು ಪರಕೀಯ ಜನಾಂಗದವರಿವರೆಂದೂ ಇವರು ಹಾಗೆ ಬಂದಾಗ ಬೀಡು ಬಿಟ್ಟಿದ್ದ ಸ್ಥಳಗಳಿಗೆ ಇವರ ಹೆಸರೇ ಬಂತೆಂದೂ ಕೆಲವು ಇತಿಹಾಸಕಾರರ ಅಭಿಪ್ರಾಯ. ಗೂರ್ಜರ ಎಂಬುದು ಒಂದು ಪ್ರದೇಶದ ಹೆಸರಾಗಿದ್ದು, ಅಲ್ಲಿಯ ಜನರು ಗೂರ್ಜರರೆನಿಸಿಕೊಂಡರೆಂದೂ ಇನ್ನೊಂದು ವಾದವಿದೆ. ಆದರೆ ಈ ವಾದ ಅಷ್ಟೇನೂ ಸಮರ್ಪಕವಲ್ಲ. ಗೂರ್ಜರ ಎಂಬುದು ಮೂಲತಃ ಒಂದು ಜನಾಂಗದ ಹೆಸರೆಂಬ ವಾದವನ್ನು ಅಲ್ಲಗಳೆಯುವಂತಿಲ್ಲವಾದರೂ ಅವರು ಪರಕೀಯ ರೆಂದೂ ಹೂಣರೊಡನೆ ವಲಸೆ ಬಂದವರೆಂದೂ ಹೇಳಲು ಖಚಿತವಾದ ಆಧಾರಗಳಿಲ್ಲ.
ಗೂರ್ಜರ ಪ್ರತೀಹಾರರು
[ಸಂಪಾದಿಸಿ]6ನೆಯ ಶತಮಾನದಲ್ಲಿ ಮೊದಲು ಸ್ಥಾಪಿತವಾದ ಗೂರ್ಜರ ರಾಜ್ಯದ ಮೂಲಪುರುಷ ಹರಿಚಂದ್ರ. ವೇದವಿದ್ಯಾಪಾರಂಗತನಾಗಿದ್ದ ಈ ಬ್ರಾಹ್ಮಣನಿಗೆ ಇಬ್ಬರು ಪತ್ನಿಯರಿದ್ದರು. ಬ್ರಾಹ್ಮಣ ಪತ್ನಿಯಲ್ಲಿ ಜನಿಸಿದ ಮಕ್ಕಳು ಪ್ರತೀಹಾರ ಬ್ರಾಹ್ಮಣರೆನಿಸಿಕೊಂಡರು. ಕ್ಷತ್ರಿಯ ಕುಲದ ಪತ್ನಿಯ ಹೆಸರು ಭದ್ರಾ. ಶಾಸ್ತ್ರಪಾರಂಗತನಾಗಿದ್ದ ಹರಿಚಂದ್ರ ಮಾಲವದ ಯಶೋಧರ್ಮನ ರಾಜ್ಯ ಅಳಿದ ಬಳಿಕ ಉಂಟಾದ ರಾಜಕೀಯ ಅವ್ಯವಸ್ಥೆಯನ್ನು ನಿವಾರಿಸಲು ಶಸ್ತ್ರವನ್ನು ಹಿಡಿದು ರಾಜ್ಯವೊಂದನ್ನು ಕಟ್ಟಿದ. ಈತನ ರಾಣಿಯಾದ ಭದ್ರಾದೇವಿಗೆ ಭೋಗಭಟ, ಕಕ್ಕಲ, ರಜ್ಜಿಲ ಮತ್ತು ದದ್ದ ಎಂಬ ನಾಲ್ವರು ಮಕ್ಕಳಾದರು. ಅವರು ಮಾಂಡವ್ಯಪುರವನ್ನು ಗೆದ್ದು, ಅಲ್ಲಿ ಪ್ರಬಲವಾದ ಕೋಟೆಯನ್ನು ಕಟ್ಟಿದರು. ಇವರಲ್ಲಿ ಹಿರಿಯರಾದ ಇಬ್ಬರನ್ನು ಕುರಿತು ಹೆಚ್ಚಿನದೇನೂ ತಿಳಿಯದು. ಮೂರನೆಯವನಾದ ರಜ್ಜಿಲನ ಅನಂತರ ಕ್ರಮವಾಗಿ ಅವನ ಮಗ ನರಭಟ ಮತ್ತು ಮೊಮ್ಮಗ ನಾಗಭಟ ಆಳಿದರು. ಹರಿಚಂದ್ರನಿಂದ ಆರಂಭಿಸಿ ಇವರೆಲ್ಲ 550 ರಿಂದ 640ರ ವರೆಗೂ ಆಳಿದರು.
ನಾಗಭಟನ ಮಗನ ಹೆಸರು ತಾತ. ಗೂರ್ಜರದ ಅರಸ ಬೌದ್ಧಮತಾವಲಂಬಿ ಯಾಗಿದ್ದು, ಜ್ಞಾನಿಯೂ ಶೂರನೂ ಆಗಿದ್ದನೆಂದು ಯುವಾನ್ ಚಾಂಗ್ ಬರೆದಿದ್ದಾನೆ. ಈ ಅರಸ ನಾಗಭಟನ ಮಗನಾದ ತಾತನಾಗಿರಬಹುದೆಂದು ಹಲವರು ಊಹಿಸಿದ್ದಾರೆ. ಇವನ ರಾಜಧಾನಿ ಪಿಲೊಮೊಲೊ ಎಂದು ಹೇಳಿದೆ. ಇದು ಭಿಲ್ಲಮಾಲ (ಈಗಿನ ಭಿನ್ಮಾಲ) ಆಗಿರಬಹುದು. ತಾತನ ಬಳಿಕ ನಾಲ್ವರು ಅರಸರು ಆಳಿದರು. ಇವರಲ್ಲಿ ಕಡೆಯವನು ಶೀಲುಕ. ಈತನ ಕಾಲದಲ್ಲಿ ಅರಬರು ಗುಜರಾತನ್ನು ಮುತ್ತಿ ಉಜ್ಜಯಿನಿಯವರೆಗೂ ಬಂದು ಜೋಧಪುರದ ಗೂರ್ಜರರ ರಾಜ್ಯವನ್ನು ಆಕ್ರಮಿಸಿದರು. ಆದರೆ ಆ ವೇಳೆಗೆ ಆವಂತಿಯಲ್ಲಿ ಆಳುತಿದ್ದ ಗೂರ್ಜರರ ಇನ್ನೊಂದು ಮನೆತನದ ನಾಗಭಟ ಅರಬ್ಬರ ವಿರುದ್ಧ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ.
ಈ ಕುಲದ ಭಿನ್ನ ಭಿನ್ನ ಶಾಖೆಗಳಿಗೆ ಸೇರಿದ ಸಣ್ಣ ಅರಸು ಮನೆತನಗಳು 6-7ನೆಯ ಶತಮಾನಗಳ ಬಳಿಕ ತಲೆ ಎತ್ತಿದುವು. ಅವುಗಳಲ್ಲಿ ಭರುಕಚ್ಛದ ಗೂರ್ಜರರ ದೊಂದು ಶಾಖೆ. ಇವರನ್ನು ನಾಂದೀಪುರಿಯ ಗೂರ್ಜರರೆಂದೂ ಕರೆಯಲಾಗಿದೆ ಯಾದರೂ ಅದು ಸಮಂಜಸವಲ್ಲವೆಂದು ಇತ್ತೀಚೆಗೆ ಸಂಶೋಧಕರೊಬ್ಬರು ಹೇಳಿದ್ದಾರೆ. ಇವರು ಸ್ವತಂತ್ರವಾಗಿ ಆಳದೆ ಕೇವಲ ಮಾಂಡಲಿಕರಾಗಿದ್ದರಾದರೂ ಇವರ ಸಾರ್ವಭೌಮ ಯಾರು ಎಂಬುದು ಖಚಿತಗೊಂಡಿಲ್ಲ. ಈ ಮನೆತನದ ಮೊದಲ ಅರಸ ದದ್ದ. ಈತ ಹರಿಚಂದ್ರನ ಕೊನೆಯ ಮಗನಾದ ದದ್ದನೇ ಇರಬಹುದು. ಸು. 580-605 ರ ವರೆಗೆ ಆಳಿದ ಈತನ ಅನಂತರ ಕ್ರಮವಾಗಿ ಜಯಭಟ (ಶ್ರೀವೀತರಾಗ, 605-629), ಇಮ್ಮಡಿ ದದ್ದ (ಪ್ರಶಾಂತರಾಗ, 629-654), ಇಮ್ಮಡಿ ಜಯಭಟ (654-679), ಮುಮ್ಮಡಿ ದದ್ದ (ಬಾಹುಸಹಾಯ, 679-704) ಇವರು ಆಳಿದರು. ಅನಂತರ ಪಟ್ಟಕ್ಕೆ ಬಂದವನು ಮುಮ್ಮಡಿ ಜಯಭಟ (705-735). ಈತನ ಕಾಲದಲ್ಲಿ ಖಲೀಫನ ಸೇನಾನಿಯಾದ ಜುನೈದ ತನ್ನ ದಂಡಿನೊಡನೆ ಭರುಕಚ್ಛವನ್ನು ಮುತ್ತಿದ. ಇದು ಈ ಗೂರ್ಜರರಿಗೆ ತೀವ್ರವಾದ ಪೆಟ್ಟಾಗಿ ಇವರು ಕಣ್ಮರೆಯಾದರು.
ಇವರಲ್ಲದೆ ಮೇವಾರದ ಗುಹಿಲಪುತ್ರರು, ಅಣಹಿಲಪಾಟಕದ (ಈಗಿನ ಪಾಠಣ್) ಚಾಪೋತ್ಕಟರು ಸಹ ಇದೇ ಕುಲಕ್ಕೆ ಸೇರಿದವರು.
ಆವಂತಿಯ ಗೂರ್ಜರ ಪ್ರತೀಹಾರರು
[ಸಂಪಾದಿಸಿ]ನಾಗಭಟ
ಈತನ ಆಳ್ವಿಕೆಯ ಕಾಲ ನಿರ್ದಿಷ್ಟವಾಗಿ ತಿಳಿಯದು. 8ನೆಯ ಶತಮಾನದ ಮಧ್ಯದಲ್ಲಿ ಈತನ ಮನೆತನ ಖ್ಯಾತಿ ಪಡೆಯಿತು. ನಾಗಭಟನ ಪುರ್ವಿಕರ ವಿಷಯವಾಗಿಯೂ ನಮಗೇನೂ ತಿಳಿಯದು. ಗೂರ್ಜರ ಅರಸನನ್ನು ರಾಷ್ಟ್ರಕೂಟರ ದಂತಿದುರ್ಗ ಸೋಲಿಸಿ ತಾನು ಹಿರಣ್ಯಗರ್ಭದಾನ ವನ್ನು ಮಾಡುವ ಸಮಯದಲ್ಲಿ ಈತನನ್ನು ಪ್ರತೀಹಾರ ಎಂದರೆ ದ್ವಾರಪಾಲಕನಾಗಿ ನೇಮಿಸಿದನೆಂದು ಶಾಸನಗಳಲ್ಲಿ ಹೇಳಿದೆ. ಈತ ಲಾಟ (ದಕ್ಷಿಣ ಗುಜರಾತ್) ಮತ್ತು ಸಿಂಧ್ ಪ್ರದೇಶಗಳನ್ನು ಆಕ್ರಮಿಸಿದನಂತೆ. ದಂತಿದುರ್ಗ 755 ರವರೆಗೆ ಆಳಿದನೆಂದು ನಮಗೆ ತಿಳಿದಿದೆ. ಪ್ರತೀಹಾರ ನಾಗಭಟ ತನ್ನ ಸಾರ್ವಭೌಮನೆಂದು 756ರಲ್ಲಿ ಭರುಕಚ್ಛದ ಅರಸ ಹೇಳಿಕೊಂಡಿರುವ ವಿಷಯ ನಮಗೆ ಇತರ ಮೂಲಗಳಿಂದ ತಿಳಿದಿದೆ. ಆದಕಾರಣ ನಾಗಭಟ 756-758ರ ನಡುವೆ ದಂತಿದುರ್ಗನಿಂದ ಸೋಲಿಸಲ್ಪಟ್ಟಿರಬೇಕು. ಅಂದರೆ ಈತ ಸುಮಾರು 730 ರಿಂದ 752ರ ವರೆಗೆ ಆಳಿದನೆಂದು ಊಹಿಸಬಹುದು.
ವತ್ಸರಾಜ
ವತ್ಸರಾಜನು ಈ ವಂಶದ ನಾಲ್ಕನೆಯ ಅರಸ. ದಂತಿದುರ್ಗನ ವಿಜಯ ಅಲ್ಪಕಾಲದ್ದಾಗಿತ್ತು. ಆತ ಸ್ವದೇಶಕ್ಕೆ ಮರಳಿದೊಡನೆ ಪ್ರತೀಹಾರರು ಪುನಃ ಸ್ವತಂತ್ರರಾದರು. ನಾಗಭಟನ ಅನಂತರ ಆತನ ಸೋದರನ ಮಕ್ಕಳಾದ ಕಕ್ಕುಕ ಮತ್ತು ದೇವರಾಜರು ಕೆಲಕಾಲ ಆಳಿದರು. ಬಳಿಕ ಪಟ್ಟಕ್ಕೆ ಬಂದ ದೇವರಾಜನ ಮಗನಾದ ವತ್ಸರಾಜ ಪ್ರತೀಹಾರ ರಾಜ್ಯವನ್ನು ಬಲಪಡಿಸಿದ. 778ರಲ್ಲಿ ರಚಿತವಾದ್ದೆಂದು ಹೇಳಲಾದ ಕುವಲಯಮಾಲಾ ಎಂಬ ಜೈನ ಗ್ರಂಥದ ಕರ್ತೃ ಅದನ್ನು ಜಾವಾಲಿಪುರದಲ್ಲಿ (ಜಾಲೋರ) ರಣಹಸ್ತಿನ್ ವತ್ಸರಾಜ ಆಳುತ್ತಿದ್ದಾಗ ರಚಿಸಿದ್ದಾಗಿ ಹೇಳಿಕೊಂಡಿದ್ದಾನೆ. ಈ ವತ್ಸರಾಜ ಪ್ರತೀಹಾರ ವತ್ಸರಾಜನೆಂದು ಸಾಮಾನ್ಯವಾಗಿ ಒಪ್ಪಲಾಗಿದೆ. ಈತ 778ರಲ್ಲೇ ಪಟ್ಟಕ್ಕೆ ಬಂದ. ಮಾಳವ ಮತ್ತು ಪೂರ್ವ ರಾಜಪುಟಾಣಗಳನ್ನೊಳಗೊಂಡ ಇವನ ರಾಜ್ಯ ಕ್ರಮೇಣ ವಿಸ್ತಾರವಾಯಿತು. ಉತ್ತರ ಭಾರತದ ಹಲವು ಪ್ರದೇಶಗಳು ಈತನ ಆಳ್ವಿಕೆಗೊಳಪಟ್ಟುವು. ಪೂರ್ವಾಭಿಮುಖವಾಗಿ ರಾಜ್ಯವನ್ನು ವಿಸ್ತರಿಸುತ್ತಿದ್ದ ಈತ ಸಹಜವಾಗಿಯೇ ಬಂಗಾಲದ ಪಾಲ ವಂಶದ ಧರ್ಮಪಾಲನನ್ನು ರಣರಂಗದಲ್ಲಿ ಎದುರಿಸಬೇಕಾಯಿತು. ಪಶ್ಚಿಮಾಭಿಮುಖವಾಗಿ ನುಗ್ಗುತ್ತಿದ್ದ ಧರ್ಮಪಾಲ ವತ್ಸರಾಜನಿಂದ ಸೋತ. ಆದರೆ ಅಷ್ಟರಲ್ಲೇ ರಾಷ್ಟ್ರಕೂಟ ಧ್ರುವ ಉತ್ತರಕ್ಕೆ ದಂಡೆತ್ತಿ ಬಂದ. ಇದು ತ್ರಿಕೋಣ ಸ್ಪರ್ಧೆಯಾಗಿ ಮಾರ್ಪಟ್ಟಿತು.
ಈ ವೇಳೆಗೆ ಕನೌಜ್ ಉತ್ತರಭಾರತದ ರಾಜಕೀಯದಲ್ಲಿ ಪ್ರಮುಖ ಸ್ಥಾನ ಪಡೆದಿತ್ತು. ಹರ್ಷನ ಕಾಲದಲ್ಲಿ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಈ ನಗರವನ್ನು ಕೈವಶ ಮಾಡಿಕೊಳ್ಳುವುದು ಅಂದಿನ ಅರಸರಿಗೆ ಹೆಮ್ಮೆಯ ವಿಷಯವೆನಿಸಿತ್ತು. ಕನೌಜಿನಲ್ಲಿ 8ನೆಯ ಶತಮಾನದ ಉತ್ತರಾರ್ಧದಲ್ಲಿ ಆಯುಧ ಎಂದು ಅಂತ್ಯವಾಗುವ ಹೆಸರಿನ ಅರಸರು ಆಳುತ್ತಿದ್ದರು. 783ರಲ್ಲಿ ಇಂದ್ರಾಯುಧ ಇಲ್ಲಿಯ ಅರಸನಾಗಿದ್ದ. ಬಹುಶಃ ಈತನ ಸೋದರಸಂಬಂಧಿಯಾಗಿದ್ದ ಚಕ್ರಾಯುಧ ಇವನ ಪ್ರತಿಸ್ಪರ್ಧಿಯಾಗಿದ್ದ. ಇವರಿಬ್ಬರ ನಡುವಣ ವಿರಸದ ಪ್ರಯೋಜನವನ್ನು ಪಡೆದು ವತ್ಸರಾಜ ಇಂದ್ರಾಯುಧನನ್ನು ಸೋಲಿಸಿದ. ಆದರೂ ಆತನನ್ನು ತನ್ನ ಮಾಂಡಲಿಕನಾಗಿ ಕನೌಜಿನ ಸಿಂಹಾಸನದ ಮೇಲೆ ಕುಳ್ಳಿರಿಸಿದ. ಇಷ್ಟರಲ್ಲಿ ಧರ್ಮಪಾಲ ವತ್ಸರಾಜನ ಮೇಲೇರಿ ಬಂದ. ವತ್ಸರಾಜ ಅವನನ್ನು ಸೋಲಿಸಿದ. ಇವನಿಗೆ ಶಾಕಂಭರಿಯ ಚಾಹಮಾನ ವಂಶದ ದುರ್ಲಭರಾಜ ಸಹಾಯಕನಾಗಿ ನಿಂತು ಬಂಗಾಲದವರೆಗಿನ ಪ್ರದೇಶವನ್ನು ಆಕ್ರಮಿಸಿದನೆಂದು ಸಾಹಿತ್ಯದ ಆಧಾರಗಳಿಂದ ತಿಳಿದಿದೆ. ಆದರೆ ಆತ ಈ ವಿಜಯವನ್ನು ದೃಢಪಡಿಸಿಕೊಳ್ಳುವುದರೊಳ ಗಾಗಿಯೇ ರಾಷ್ಟ್ರಕೂಟ ಧ್ರುವ ಉತ್ತರಕ್ಕೆ ದಂಡೆತ್ತಿ ಬಂದು, ವತ್ಸರಾಜನನ್ನು ಸಂಪೂರ್ಣವಾಗಿ ಸೋಲಿಸಿದ. ತಾನು ಆಕ್ರಮಿಸಿದ್ದ ಪ್ರದೇಶಗಳನ್ನೆಲ್ಲ ಬಿಟ್ಟುಕೊಟ್ಟು ತನ್ನ ಮೂಲಸ್ಥಾನವನ್ನು ಉಳಿಸಿಕೊಳ್ಳಲು ವತ್ಸರಾಜ ಬಹಳ ಶ್ರಮಪಟ್ಟ. ಈ ಸಮಯದಲ್ಲಿ ಧರ್ಮಪಾಲ ಸಹ ಸೋಲನ್ನನುಭವಿಸಿದನಾದರೂ, ಅವನಿಗೆ ಹೆಚ್ಚಿನ ಹಾನಿಯುಂಟಾ ಗಲಿಲ್ಲ. ಅಲ್ಲದೆ, ಧ್ರುವ ಹಿಂದಿರುಗಿದ ಕೂಡಲೇ ಧರ್ಮಪಾಲ ವತ್ಸರಾಜನನ್ನು ಸೋಲಿಸಿ ತನ್ನ ಪ್ರತಿನಿಧಿ ಚಕ್ರಾಯುಧನನ್ನು ಕನೌಜಿನ ಸಿಂಹಾಸನದ ಮೇಲೆ ಕುಳ್ಳಿರಿಸಿದನು.
ಇಮ್ಮಡಿ ನಾಗಭಟ
ಧ್ರುವನಿಂದ ಸೋತ ಅನಂತರ ವತ್ಸರಾಜನ ಗತಿ ಏನಾಯಿತೆಂಬುದು ತಿಳಿಯದು. ರಾಜಪುಟಾಣದ ಕೆಲವು ಭಾಗಗಳನ್ನು ಮಾತ್ರ ಉಳಿಸಿಕೊಳ್ಳಲು ಶಕ್ತನಾದ ಈತ ಕೆಲವು ವರ್ಷಗಳವರೆಗೆ ಆಳಿರಬೇಕು. ಆದರೆ ಅವನ ಮಗನಾದ ಇಮ್ಮಡಿ ನಾಗಭಟ ಪುನಃ ತನ್ನ ರಾಜ್ಯವನ್ನು ಅಭಿವೃದ್ಧಿಗೊಳಿಸಿದ. ಈತನ ಮೊಮ್ಮಗನಾದ ಭೋಜನ ಗ್ವಾಲಿಯರ್ ಶಾಸನದಲ್ಲಿ ಈತ ಚಕ್ರಾಯುಧನನ್ನೂ ವಂಗಾಧಿಪತಿಯನ್ನೂ ಸೋಲಿಸಿದನೆಂದೂ ಆಂಧ್ರ, ಸೈಂಧವ, ವಿದರ್ಭ ಮತ್ತು ಕಳಿಂಗ ದೇಶಗಳ ಅರಸರು ಈತನಿಗೆ ಶರಣಾದರೆಂದೂ ಹೇಳಿದೆ. ಇವನ ಸಾಮಂತ ಅರಸರ ಶಾಸನಗಳಲ್ಲಿಯ ಹೇಳಿಕೆಗಳು ಈ ಸಂಗತಿಗಳನ್ನು ಬಹಳಮಟ್ಟಿಗೆ ದೃಢಪಡಿಸುತ್ತವೆ.
ಆನರ್ತ, ಮಾಳವ, ಕಿರಾತ, ತುರುಷ್ಕ, ವತ್ಸ ಮತ್ತು ಮತ್ಸ್ಯಾಧಿಪತಿಗಳಿಗೆ ಸೇರಿದ ಗಿರಿದುರ್ಗಗಳನ್ನು ಈತ ಕಸಿದುಕೊಂಡನೆಂದು ಹೇಳಲಾಗಿದೆ. ಬಹುಶಃ ಇವು ನಾಗಭಟನ ಆಳ್ವಿಕೆಯ ಮೊದಲ ವರ್ಷಗಳ ಸಾಧನೆಗಳಾಗಿರಬಹುದು. ಅನಂತರ ಈತ ಕನೌಜಿನ ಮೇಲೆ ಧಾಳಿಯಿಟ್ಟ. ಚಕ್ರಾಯುಧನನ್ನು ಸೋಲಿಸಿ ಕನೌಜನ್ನು ಸ್ವಾಧೀನಪಡಿಸಿಕೊಂಡ. ಅಂದಿನಿಂದ ಕನೌಜ್ ಪ್ರತೀಹಾರರ ರಾಜಧಾನಿಯಾಯಿತು. ಇದು ಧರ್ಮಪಾಲನೊಡನೆ ಯುದ್ಧಕ್ಕೆ ನಾಂದಿಯಾಯಿತು. ಈ ಸಲ ನಾಗಭಟನಿಗೆ ವಿಜಯ ದೊರಕಿತು.
ಆದರೆ ನಾಗಭಟನ ಅದೃಷ್ಟವೂ ಸರಿಯಾಗಿರಲಿಲ್ಲ. ಹಿಂದಿನ ತ್ರಿಕೋಣ ಸ್ವರ್ಧೆಯಲ್ಲಿ ಭಾಗಿಗಳಾಗಿದ್ದ ರಾಷ್ಟ್ರಕೂಟರು ಪುನಃ ಉತ್ತರಭಾರತದ ರಾಜಕೀಯದಲ್ಲಿ ತಲೆಹಾಕಿದರು. ಪ್ರತೀಹಾರರನ್ನರಂತೂ ಅವರು ಆಜನ್ಮಶತ್ರುಗಳಂತೆಯೆ ಕಂಡರು. ಮುಮ್ಮಡಿ ಗೋವಿಂದ ಪಟ್ಟಕ್ಕೆ ಬಂದಾಗ ಸು. 794-95ರಲ್ಲಿ ಒಂದು ಬಾರಿ ನಾಗಭಟ ರಾಷ್ಟ್ರಕೂಟರನ್ನು ಕೆಣಕಿದ. ದಕ್ಷಿಣದಲ್ಲಿಯ ತಲಕಾಡಿನ ಗಂಗರೊಡನೆ ಕಾದುತ್ತಿದ್ದ ಗೋವಿಂದನ ಪ್ರತಿನಿಧಿಗಳಾಗಿದ್ದ ಗುಜರಾತದ ರಾಷ್ಟ್ರಕೂಟ ಇಂದ್ರ ಮತ್ತು ಅವನ ಮಗ ಕರ್ಕರು ನಾಗಭಟನನ್ನೆದುರಿಸಿದರು. ಇದರಲ್ಲಿ ಯಾರು ವಿಜಯಿಗಳಾದರೆಂದು ಹೇಳುವುದು ಕಷ್ಟ. ಆದರೆ ರಾಷ್ಟ್ರಕೂಟರು ಪ್ರತೀಹಾರರನ್ನು ತಡೆಯುವುದರಲ್ಲಿ ಯಶಸ್ವಿಗಳಾದರೆನ್ನುವುದು ಸ್ಪಷ್ಟ.
ಪರಿಸ್ಥಿತಿ ಅನುಕೂಲಕರವಾದ ಕೂಡಲೆ, ಸು. 809-10ರಲ್ಲಿ ರಾಷ್ಟ್ರಕೂಟ ಗೋವಿಂದ ಉತ್ತರಕ್ಕೆ ಧಾಳಿಯಿಟ್ಟ. ಧರ್ಮಪಾಲ ಹಾಗೂ ಚಕ್ರಾಯುಧರು ತಾವಾಗಿಯೇ ಇವನಿಗೆ ಶರಣಾದರು. ಬಹುಶಃ ಇವರಿಬ್ಬರೂ ಗೋವಿಂದನನ್ನು ನಾಗಭಟನ ವಿರುದ್ಧ ಕದನಕ್ಕೆ ಆಹ್ವಾನಿಸಿದಂತೆ ತೋರುತ್ತದೆ. ಈ ಸಲ ನಾಗಭಟ ಸೋತ. ಸಾಮ್ರಾಜ್ಯ ಸ್ಥಾಪಕನಾಗ ಬೇಕೆಂಬ ಅವನ ಕನಸು ಛಿದ್ರವಾಯಿತು. ಆದರೆ ಯಥಾಪ್ರಕಾರ ಗೋವಿಂದ ರಾಜ್ಯಕ್ಕೆ ಹಿಂದಿರುಗಲೇಬೇಕಾಯಿತು. ಇದರ ಪ್ರಯೋಜನವನ್ನು ಪಡೆದು ಧರ್ಮಪಾಲ ಹಾಗೂ ಅವನ ಮಗ ದೇವಪಾಲರು ಪುನಃ ತಮ್ಮ ಪ್ರಾಬಲ್ಯವನ್ನು ಬೆಳೆಸಿಕೊಂಡರು. ಸ್ವಲ್ಪ ಕಾಲದವರೆಗೆ ಪ್ರತೀಹಾರರ ಪ್ರತಿಷ್ಠೆ ಕುಂದಿತು. ಆದರೆ ಕನೌಜ್, ಕಾಲಂಜರ ಕೋಟೆ, ಗ್ವಾಲಿಯರ್ಗಳನ್ನೊಳಗೊಂಡ ಪ್ರದೇಶಗಳೆಲ್ಲ ನಾಗಭಟನ ವಶದಲ್ಲೇ ಉಳಿದವು.
ಮಿಹಿರ ಭೋಜ
ನಾಗಭಟ 833 ರವರೆಗೆ ಆಳಿದನೆಂದು ಊಹಿಸಲಾಗಿದೆ. ಇವನ ಮಗನಾದ ರಾಮಭದ್ರ ಕೇವಲ 3 ವರ್ಷಗಳ ಕಾಲ ಆಳಿದ. ಈತನ ಕಾಲದಲ್ಲಿ ರಾಜ್ಯ ಶತ್ರುಗಳ ಧಾಳಿಗೆ ಈಡಾಗಿ ದುಸ್ಥಿತಿಗೆ ಬಂತು. ಬಂಗಾಲದ ದೇವಪಾಲ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದೂ ಅವನಿಗೆ ಸಮಾನವಾದ ಶಕ್ತಿ ಇವನಲ್ಲಿಲ್ಲದ್ದೂ ಇದಕ್ಕೆ ಕಾರಣಗಳು.
ರಾಮಭದ್ರನ ಮಗ ಭೋಜ. ಭಗವತೀ ಭಕ್ತನಾದ ಈತನಿಗೆ ಪ್ರಭಾಸ, ಆದಿ ವರಾಹ ಮತ್ತು ಮಿಹಿರ ಎಂಬ ಹೆಸರುಗಳು ಇದ್ದುವು. ಇವನು 836ರಲ್ಲಿ ಪಟ್ಟಕ್ಕೆ ಬಂದು 885ರವರೆಗೆ ಆಳಿದ. ಈತನ ಆಳ್ವಿಕೆಯ ಮೊದಲ ಭಾಗದಲ್ಲಿ ವಿಜಯದ ಸುಖವನ್ನೂ ಸೋಲಿನ ಕಹಿಯನ್ನೂ ಉಂಡ. ಇವನ ಯೋಜನೆಗಳು ಮಿಶ್ರಫಲವನ್ನು ನೀಡಿದುವು. ರಾಮಭದ್ರನ ಸಡಿಲವಾದ ಆಳ್ವಿಕೆಯಿಂದಾಗಿ ಜೋಧಪುರದ ಪ್ರತೀಹಾರರು ಸ್ವತಂತ್ರರಾದರು. ಹಿಂದೆ ಇಮ್ಮಡಿ ನಾಗಭಟನಿಗೆ ಈ ಮನೆತನದ ಕಕ್ಕ ನೆರವಾಗಿದ್ದನಾದರೂ ಈಗ ಸ್ವತಂತ್ರವಾಗಿ ಆಳತೊಡಗಿದ್ದ. 837ರ ಜೋಧಪುರದ ಶಾಸನದಲ್ಲಿ ಈತನ ಪತ್ನಿ ಯನ್ನು ಮಹಾರಾಜ್ಞಿ ಎಂದು ಕರೆಯಲಾಗಿದೆ. ಇವನ ಮಗನಾದ ಬಾಉಕ ಸಹ ಸ್ವತಂತ್ರ ನಾಗಿ ಸ್ವಲ್ಪಕಾಲ ಆಳಿದಂತೆ ತೋರುತ್ತದೆ. ಆದರೆ 843ರ ವೇಳೆಗೆ ಗೂರ್ಜರಾತ್ರದ ಮೇಲೆ ಭೋಜ ತನ್ನ ಅಧಿಕಾರವನ್ನು ಸ್ಥಾಪಿಸಿದ. ಇದು ಅವನ ಮುಖ್ಯ ಸಾಧನೆಗಳಲ್ಲಿ ಒಂದು.
ಮುಂದೆ ಅನುವಂಶಿಕ ಶತ್ರುಗಳೆನಿಸಿದ್ದ ರಾಷ್ಟ್ರಕೂಟರ ವಿರುದ್ಧ 860ಕ್ಕೆ ಮೊದಲು ಇವನು ದಂಡೆತ್ತಿಹೋದಾಗ ಗುಜರಾತ್ ರಾಷ್ಟ್ರಕೂಟರ ಧ್ರುವನಿಗೆ ಸೋತ. ಇದಕ್ಕೂ ಮೊದಲು ಪಾಲರ ದೇವಪಾಲನೂ ಇವನನ್ನು ಕದನದಲ್ಲಿ ಸೋಲಿಸಿದ್ದ. ಇದರಂತೆಯೇ ಕಳುಚುರಿ ಮನೆತನದ ಕೊಕ್ಕಲನಿಂದಲೂ ಇವನು ಸೋಲನ್ನನುಭವಿಸಿದ. ಜೋಧಪುರದ ಪ್ರತೀಹಾರರೂ ಪುನಃ ಗೂರ್ಜರಾತ್ರದ ಮೇಲೆ ತಮ್ಮ ಅಧಿಕಾರವನ್ನು ಸ್ಥಾಪಿಸಿದರೆಂದು 861ನೆಯ ವರ್ಷದ ಆ ಮನೆತನದ ಕಕ್ಕುಕನ ಎರಡು ಶಾಸನಗಳಿಂದ ವ್ಯಕ್ತವಾಗುತ್ತದೆ.
ತನ್ನ ಆಳ್ವಿಕೆಯ ದ್ವಿತೀಯ ಭಾಗದಲ್ಲಿ ಭೋಜನಿಗೆ ಕ್ರಮೇಣ ವಿಜಯಲಕ್ಷ್ಮಿ ಒಲಿದಳು. ಪಾಲರ ದೇವಪಾಲನ ಮರಣ ಇವನ ಹಾದಿಯನ್ನು ಸುಗಮಗೊಳಿಸಿತು. ದೇವಪಾಲನ ಅನಂತರ ಆಳಿದ ಇಬ್ಬರು ಅರಸರು ಅವನಷ್ಟು ಬಲಯುತವಾಗಿರಲಿಲ್ಲ. ಕರ್ನಾಟಕದಲ್ಲಿಯ ರಾಷ್ಟ್ರಕೂಟ ಅಮೋಘವರ್ಷ ಶಾಂತಿಪ್ರಿಯನಾಗಿದ್ದರೂ, ವೆಂಗಿಯನ್ನು ಜಯಿಸಿದ ಬಳಿಕ ಪಾಲರ ವಿರುದ್ಧ ದಂಡೆತ್ತಿಹೋದದ್ದು ಭೋಜನಿಗೆ ಮತ್ತಷ್ಟು ಸಹಾಯಕವಾಯಿತು. ಅವರ ದುಸ್ಥಿತಿಯನ್ನು ಲಕ್ಷಿಸಿ ಬಂಗಾಲದ ಮೇಲೆ ದಂಡೆತ್ತಿ ಹೋಗಿ ನಾರಾಯಣ ಪಾಲನನ್ನು ಸೋಲಿಸಿ, ಅವನ ರಾಜ್ಯಕ್ಕೆ ಸೇರಿದ್ದ, ಪಶ್ಚಿಮ ಭಾಗದ, ಹಲವಾರು ಪ್ರದೇಶಗಳನ್ನು ವಶಪಡಿಸಿಕೊಂಡ.
ಗುಜರಾತಿನ ರಾಷ್ಟ್ರಕೂಟ ಧ್ರುವನ ಕೈಯಲ್ಲಿ ಸೋಲನ್ನು ಅನುಭವಿಸಿದ್ದರೂ ಅವನ ಅನಂತರ ಬಂದ ಇಮ್ಮಡಿ ಕೃಷ್ಣನ ಕಾಲದಲ್ಲಿ ಪುನಃ ಅವರ ವಿರುದ್ಧ ದಂಡೆತ್ತಿ, ಹೋಗಿ ನರ್ಮದಾ ನದೀತೀರದಲ್ಲಿ ನಡೆದ ಕದನದಲ್ಲಿ ಅವರನ್ನು ಸೋಲಿಸಿ, ಮಾಳವ ಹಾಗೂ ಗುಜರಾತಿನ ಖೇಟಕವನ್ನು (ಈಗಿನ ಖೈರಾ ಜಿಲ್ಲೆ) ವಶಪಡಿಸಿಕೊಂಡ. ಇವೆರಡೂ ಬಹಳ ಕಾಲ ಇವನ ಅಧೀನದಲ್ಲಿ ಉಳಿಯದಿದ್ದರೂ ಕಾಠಿಯಾವಾಡದ ಪ್ರದೇಶ ಮಾತ್ರ ಸಂಪೂರ್ಣವಾಗಿ ಸ್ವಾಧೀನವಾಯಿತು. ಪಶ್ಚಿಮದ ಕಡೆ ಪಂಜಾಬಿನವರೆಗೂ ಪುರ್ವದಲ್ಲಿ ಅವಧದವರೆಗೂ ಹಬ್ಬಿದ ಇವನ ರಾಜ್ಯ ಉತ್ತರ ಭಾರತದಲ್ಲಿ ಆಗ ಪ್ರಬಲವೂ ವಿಸ್ತಾರವೂ ಆದ ಸಾಮ್ರಾಜ್ಯವೆನಿಸಿಕೊಂಡಿತು. ಕನೌಜ್ ಈ ರಾಜ್ಯದ ರಾಜಧಾನಿಯಾಗಿ ಮೆರೆಯಿತು. ಈ ರಾಜ್ಯ ಸಮೃದ್ಧಿಯಿಂದೊಡಗೂಡಿತ್ತೆಂದು ಸುಲೈಮಾನನೆಂಬ ಅರಬ್ ಲೇಖಕ ತನ್ನ ವರದಿಯಲ್ಲಿ ವರ್ಣಿಸಿ, ಇದರ ಅರಸ ಮಹಮ್ಮದೀಯರ ಪ್ರಬಲ ವಿರೋಧಿಯೆಂದು ತಿಳಿಸಿದ್ದಾನೆ. ಭೋಜ ರಾಜ್ಯವನ್ನು ಪರಕೀಯರ ಧಾಳಿಯಿಂದ ರಕ್ಷಿಸಿದನೆಂಬುದನ್ನು ಇದು ಸೂಚಿಸುತ್ತದೆ.
ಅನಂತರದ ಅರಸರು; 885 ರಲ್ಲಿ ಭೋಜನ ಮಗನಾದ ಮಹೇಂದ್ರಪಾಲ ರಾಜ್ಯಭಾರ ಮಾಡತೊಡಗಿದ. ಈತನಿಗೆ ನಿರ್ಭಯರಾಜ, ಮಹೇಂದ್ರಾಯುಧ ಎಂಬ ಹೆಸರುಗಳೂ ಇದ್ದುವು. ಪಿತ್ರಾರ್ಜಿತವಾದ ರಾಜ್ಯವನ್ನು ಕಾಪಾಡಿದ್ದಲ್ಲದೆ ಈತ ಅದನ್ನು ವಿಸ್ತರಿಸಿದ. ಮಗಧ ಹಾಗೂ ಉತ್ತರ ಬಂಗಾಲದ ಹಲವು ಭಾಗಗಳು ಇವನ ವಶವಾದುವು. ಈತನ ಸಮಕಾಲೀನನಾದ ರಾಜಶೇಖರ ಪ್ರಸಿದ್ಧನಾದ ನಾಟಕಕರ್ತೃವೂ ಕಾವ್ಯ ಶಾಸ್ತ್ರಜ್ಞನೂ ಆಗಿದ್ದ. ಬಾಲರಾಮಾಯಣ, ಬಾಲಭಾರತ, ವಿದ್ಧಶಾಲಭಂಜಿಕಾ, ಕರ್ಪುರ ಮಂಜರೀ ಇವು ಇವನು ರಚಿಸಿದ ನಾಟಕಗಳು. ಭುವನಕೋಶವೆಂಬುದು ಭೂಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ. ಈ ಗ್ರಂಥಗಳು ಅಂದಿನ ರಾಜಕೀಯ ಪರಿಸ್ಥಿತಿಗಳನ್ನು ತಿಳಿಯಲು ಸಹಾಯಕವಾಗದಿದ್ದರೂ, ಆ ಕಾಲದ ಸಾಮಾಜಿಕ, ಪರಿಸ್ಥಿತಿಗಳ ಮೇಲೆ ಬೆಳಕು ಬೀರುತ್ತವೆ; ಕನೌಜ್ ನಗರದ ಅಂದಿನ ವೈಭವವನ್ನು ಸಾರುತ್ತವೆ.
ಕಾವ್ಯ ಮೀಮಾಂಸೆಯನ್ನು ರಚಿಸಿದ ರಾಜಶೇಖರನ ಪತ್ನಿ ಆವಂತಿಸುಂದರಿ ಚಾಹಮಾನ ಕುಲಕ್ಕೆ ಸೇರಿದವಳು. ಕವಿ ನಿರ್ಭಯ ಅಥವಾ ಮಹೇಂದ್ರಪಾಲನ ಗುರುವಾಗಿದ್ದನೆಂದು ಹೇಳಿದೆ. ಈತ ಪ್ರತೀಹಾರ ಮಹೇಂದ್ರಪಾಲನೆಂದು ಗುರುತಿಸಲಾಗಿದೆ. ಬಾಲಭಾರತ ಆತನ ಮಗನಾದ ಮಹೀಪಾಲನಿಗಾಗಿ ರಚಿತವಾಯಿತು.
ಮಹೇಂದ್ರಪಾಲನಿಗೆ ಕನಿಷ್ಠ ಇಬ್ಬರಾದರೂ ಪತ್ನಿಯರಿದ್ದರು. ಹಿರಿಯಳ ಮಗ ಇಮ್ಮಡಿ ಭೋಜ. ಕಿರಿಯಳ ಮಗ ವಿನಾಯಕಪಾಲ. ಈತನಿಗೆ ಮಹೀಪಾಲನೆಂಬ ಇನ್ನೊಂದು ಹೆಸರೂ ಇತ್ತೆಂದು ಹಲವರು ಸೂಚಿಸಿದ್ದಾರೆ. ಇವರಿಬ್ಬರೂ ಭಿನ್ನರೆಂಬ ವಾದವೂ ಉಂಟು. ಮಹೇಂದ್ರಪಾಲನ ಬಳಿಕ ಸೋದರರಲ್ಲಿ ಅಧಿಕಾರಕ್ಕಾಗಿ ಜಗಳಗಳಾದುವು. 912ರಲ್ಲಿ ಮೊದಲನೆಯ ಮಹೀಪಾಲ ಸಿಂಹಾಸನವನ್ನೇರಿದ. ಈತ ಮುರಲ, ಮೇಕಲ, ಕಳಿಂಗ, ಕೇರಳ, ಕುಂತಲ ಮುಂತಾದವರನ್ನು ಸೋಲಿಸಿದನೆಂದು ರಾಜಶೇಖರ ಹೇಳಿದ್ದಾನೆ. ಇದು ಉತ್ಪ್ರೇಕ್ಷೆಯಾಗಿದ್ದಿರಬಹುದಾದರೂ ಈತ ತನಗೆ ಸ್ವಾಧೀನವಾದ ರಾಜ್ಯವನ್ನು ರಕ್ಷಿಸಿ, ಅದನ್ನು ಸ್ವಲ್ಪ ಮಟ್ಟಿಗಾದರೂ ವಿಸ್ತರಿಸಿರಬಹುದು. ಆದರೆ ಈತನ ಕಾಲದಲ್ಲೇ ರಾಷ್ಟ್ರಕೂಟರು ಪುನಃ ದಂಡೆತ್ತಿ ಬಂದು ಪ್ರತೀಹಾರ ಸಾಮ್ರಾಜ್ಯದ ಅಳಿವಿಗೆ ಕಾರಣರಾದರು. ರಾಷ್ಟ್ರಕೂಟ ಇಮ್ಮಡಿ ಕೃಷ್ಣ ಹಾಗೂ ಮುಮ್ಮಡಿ ಇಂದ್ರರು ಉತ್ತರದಲ್ಲಿಯ ರಾಜ್ಯಗಳ ಮೇಲೆ ಏರಿ ಹೋದರು. ಇಂದ್ರ 916-17ರಲ್ಲಿ ಮಾಳವದೇಶದ ಮೂಲಕ ಹಾಯ್ದು ಯಮುನಾ ನದಿಯನ್ನು ದಾಟಿ ಕನೌಜನ್ನು ಮುತ್ತಿ ಆ ನಗರವನ್ನು ಧ್ವಂಸ ಮಾಡಿದನೆಂದು ಶಾಸನವೊಂದರಲ್ಲಿ ಹೇಳಿದೆ. ಕನ್ನಡ ಕವಿಯಾದ ಪಂಪನೂ ತನ್ನ ಭಾರತದಲ್ಲಿ ಇದನ್ನು ಹೇಳಿದ್ದಾನೆ. ತನ್ನ ಸ್ವಾಮಿಯಾದ ರಾಷ್ಟ್ರಕೂಟರ ಸಾಮಂತನಾದ ಚಾಳುಕ್ಯ ನರಸಿಂಹ ಗೂರ್ಜರ ಮಹೀಪಾಲನನ್ನು ಸೋಲಿಸಿ ಗಂಗೆಯವರೆಗೂ ಅಟ್ಟಿಸಿಕೊಂಡು ಹೋದನೆಂದು ಹೇಳಿದ್ದಾನೆ.
ಇಷ್ಟಾದರೂ ಮಹೀಪಾಲ ಧೃತಿಗೆಡಲಿಲ್ಲ. ರಾಷ್ಟ್ರಕೂಟರು ಸ್ವದೇಶಕ್ಕೆ ಮರಳಿದ ಕೂಡಲೇ ಚೇತರಿಸಿಕೊಂಡು ತಾನು ಕಳೆದುಕೊಂಡಿದ್ದ ಪ್ರದೇಶದಲ್ಲಿಯ ಅನೇಕ ಭಾಗಗಳನ್ನು ಮರಳಿ ಪಡೆದ. 931ರ ವೇಳೆಗೆ ಅವನ ರಾಜ್ಯ ಪಶ್ಚಿಮದಲ್ಲಿ ಸೌರಾಷ್ಟ್ರ, ಪುರ್ವದಲ್ಲಿ ವಾರಾಣಸಿ ಮತ್ತು ದಕ್ಷಿಣದಲ್ಲಿ ಚಂದೇರಿಯವರೆಗೂ ಹಬ್ಬಿತ್ತು. ಮಾಳವವೂ ಈ ರಾಜ್ಯದ ಭಾಗವಾಗಿತ್ತು. ಆದರೆ ರಾಷ್ಟ್ರಕೂಟ ಮುಮ್ಮಡಿ ಕೃಷ್ಣ ಇನ್ನೊಮ್ಮೆ ಪ್ರತೀಹಾರನನ್ನು ಸೋಲಿಸಿದಂತೆ ಕಾಣುತ್ತದೆ. ಅಲ್ಲದೆ ಅದುವರೆಗೆ ಸಾಮಂತರಾಗಿದ್ದ ಚಂದೇಲ, ಚೇದಿ (ಅಥವಾ ಕಳಚುರಿ) ಮತ್ತು ಪರಮಾರರು 940ರ ವೇಳೆಗೆ ಸ್ವತಂತ್ರರಾದರು. ಇದು ಪ್ರತೀಹಾರ ರಾಜ್ಯಕ್ಕೆ ಬಲವಾದ ಪೆಟ್ಟಾಗಿ ಆ ರಾಜ್ಯದ ಅಳಿವಿಗೆ ಕಾರಣವಾಯಿತು.
ಮಹೀಪಾಲನ ಬಳಿಕ ಎರಡನೆಯ ಮಹೀಪಾಲ, ಎರಡನೆಯ ವತ್ಸರಾಜ ಮತ್ತು ವಿಜಯಪಾಲ ರಾಜ್ಯವಾಳಿದರೂ ಇವರ ಸರಿಯಾದ ಕಾಲ ನಮಗೆ ತಿಳಿದಿಲ್ಲ. ಅನಂತರ ರಾಜ್ಯಪಾಲನೆಂಬುವವನು ಗೂರ್ಜರ ರಾಜನಾದನು: ಇವನು 960 ಮತ್ತು 1018ರ ಮಧ್ಯದಲ್ಲಿ ಕನೌಜ್ನ ಸಿಂಹಾಸನವನ್ನೇರಿದನು. 1091ರ ಜನವರಿಯಲ್ಲಿ ಘಸ್ನಿ ಮಹಮ್ಮದ್ನು ಕನೌಜ್ನ ಮೇಲೆ ಧಾಳಿ ಮಾಡಿದನು. ಆಗ ರಾಜ್ಯಪಾಲನು ಯುದ್ಧ ಮಾಡದೆ ಶರಣಾಗತನಾದನು. ಮಹಮ್ಮದನು ಅಪಾರ ಧನ ಸಂಪತ್ತನ್ನು ಸೂರೆಗೊಂಡನು. ಅನಂತರ ಮಹಮ್ಮದ್ನ ವಿರುದ್ಧ ಹೋರಾಡದೆ ಶರಣಾದ ರಾಜ್ಯಪಾಲನ ವಿರುದ್ಧ ಕಾಲಿಂಜರ್ನ ರಾಜ ವಿದ್ಯಾಧರ ಮತ್ತಿತರ ರಜಪುತರು ಒಗ್ಗೂಡಿ ಅವನ ಮೇಲೆ ಧಾಳಿಮಾಡಿ ಕೊಂದರು. ಈ ರೀತಿ ಗೂರ್ಜರ ಸಾಮ್ರಾಜ್ಯ ದುರಂತವಾದ ಅಂತ್ಯವನ್ನು ಕಂಡಿತು.