ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೆಕ್ಕೊ (ಹಲ್ಲಿ)

ವಿಕಿಸೋರ್ಸ್ ಇಂದ
Jump to navigation Jump to search

ಸ್ಕ್ವಾಮೇಟ ಗಣದ ಗೆಕ್ಕೊನಿಡೆ ಕುಟುಂಬಕ್ಕೆ ಸೇರಿದ ಕೆಲವು ಸರೀಸೃಪಗಳಿಗಿರುವ ಸಾಮಾನ್ಯ ಹೆಸರು. ಉಷ್ಣವಲಯದಲ್ಲೆಲ್ಲಾ ಹರಡಿದೆ. ಭಾರತ, ದಕ್ಷಿಣ ಯುರೋಪ್, ಏಷ್ಯ, ಆಫ್ರಿಕ ಮತ್ತು ಅಮೆರಿಕಗಳಲ್ಲಿ 140ಕ್ಕೂ ಹೆಚ್ಚು ಪ್ರಭೇದಗಳು ಕಂಡುಬರುತ್ತವೆ. ಗೆಕೊ ಗೆಕೊ, ಫೆಲ್ಸುಮೊ ವಿನ್ಸೋನಿ, ಥಿಕಾಡ್ಯಾಕ್ಟೈಲಸ್ ರ್ಯಾಪಿಕಾಡಸ್, ಟರಂಟೊಲ ಮ್ಯಾನ್ರಿಟಾನಿಕ ಇವುಗಳಲ್ಲಿ ಕೆಲವು. ಅತಿ ಸಣ್ಣದಾದ ಹಲ್ಲಿಯ ಉದ್ದ 4 ಸೆಂಮೀ. ಟೋಕೆ ಹಲ್ಲಿ ಉಳಿದೆಲ್ಲವುದಕ್ಕಿಂತ ದೊಡ್ಡದು. ಸುಮಾರು 35 ಸೆಂಮೀ ಉದ್ದವಿದೆ.


ಮನೆಯ ಗೋಡೆ ಮೇಲೆಲ್ಲಾ ಹರಿದಾಡುವ ಸಾಮಾನ್ಯ ಹಲ್ಲಿಯ ವೈಜ್ಞಾನಿಕ ನಾಮ ಹೆಮಿಡ್ಯಾಕ್ಟೈಲಸ್ ಟರ್ಸಿಯಸ್. ಉದ್ದ ಸು. 10-12 ಸೆಂಮೀ. ತಲೆ ಗಿಡ್ಡ, ಮೂತಿ ಕೊಂಚ ಚೂಪು, ಬೆರಳುಗಳಲ್ಲಿ ನಖಗಳಿವೆ. ಅಷ್ಟೇ ಅಲ್ಲದೆ ಗೋಡೆಯ ಮೇಲೆ ಹರಿದಾಡಲು ಸಹಕರಿಸುವ ಅಂಟುತಟ್ಟೆಗಳೂ (ಅಡೆಸಿವ್ ಡಿಸ್ಕ್‌) ಇವೆ. ದೇಹದ ಮೇಲ್ಭಾಗ ಹಳದಿ ಮಿಶ್ರಿತ ಕಂದು. ಉದರ ಭಾಗ ಮಾಸಲು ಬಣ್ಣದ್ದು. ದೇಹ ಹುರುಪೆಗಳಿಂದ ಆವೃತವಾಗಿದೆ. ಬಾಲದ ಬುಡ ಕೊಂಚ ಉಬ್ಬಿಕೊಂಡಿದೆ. ಕಣ್ಣುಗಳು ಚಲಿಸುವ ರೆಪ್ಪೆಗಳಿಂದ ರಕ್ಷಿಸಲ್ಪಟ್ಟಿವೆ. ಕಶೇರುಕಮಣಿಗಳು ಆಂಫಿಸೀಲಸ್ ರೀತಿಯವು. ಇದು ಮಾಂಸಾಹಾರಿ. ಹುಳುಹುಪ್ಪಟೆಗಳು, ಕೀಟಗಳು, ಜೇಡಗಳು ಇತ್ಯಾದಿ ಇದರ ಆಹಾರ ಪ್ರಾಣಿಗಳು. ಶತ್ರುಗಳೆದುರಾದಾಗ ತನ್ನ ಬಾಲವನ್ನು ಕಡಿದುಕೊಳ್ಳುತ್ತದೆ (ಸ್ವಾಂಗೋಚ್ಛೇದನ-ಆಟೋಟೋಮಿ). ಶತ್ರುವಿನ ಗಮನವನ್ನು ತನ್ನಿಂದ ದೂರ ಸೆಳೆಯಲು ಈ ಪ್ರವೃತ್ತಿಯಿರಬೇಕು.

ಪೋಟೋ ಫ್ರೇಮಿನ ಹಿಂದೆಯೋ ಸಂಧಿಗಳಲ್ಲೋ ಸುಮಾರು 0.5-1 ಸೆಂಮೀ ವ್ಯಾಸದ ದುಂಡಾದ ಬಿಳಿಯ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯೊಡೆದು ಮರಿ ಹೊರಬರಲು ತಿಂಗಳುಗಳೇ ಬೇಕು.