ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೆರಾರ್ಡ್, ಕ್ರಿಮೊನಾದ

ವಿಕಿಸೋರ್ಸ್ದಿಂದ

ಸು. 1114-87. ಇಟಲಿಯ ಲೊಂಬಾರ್ಡಿಯಲ್ಲಿ ಹುಟ್ಟಿ, ಅರಬ್ಬೀ ಮತ್ತು ಗ್ರೀಕ್ ಗ್ರಂಥಗಳನ್ನು ಲ್ಯಾಟಿನಿಗೆ ತಂದ ಅನುವಾದಕ. ಟಾಲೆಮಿಯ ಅಲ್ಮಾಜೆಸ್ಟ್‌ ಗ್ರಂಥವನ್ನು ಓದಲೋಸ್ಕರ ಅರಬ್ಬೀ ನುಡಿ ಕಲಿಯಲೆಂದು ಟೋಲಿಡೋಗೆ ಹೋಗಿ ಅಲ್ಲೇ ನೆಲೆಸಿದ. ಸುಮಾರು 92 ಗ್ರಂಥಗಳನ್ನು ಈತ ಅನುವಾದಿಸಿರುವನೆಂದು ಹೇಳಿಕೆ. ಇವನು ಕೇವಲ ಅನುವಾದಕ ತಂಡದ ನಾಯಕನಾಗಿದ್ದ ಎನ್ನುವ ಶಂಕೆ ಸಹ ಉಂಟು. ಈ ಅನುವಾದಗಳಲ್ಲಿ 21 ವೈದ್ಯಶಾಸ್ತ್ರದವು. ಇವನು 1175ರಲ್ಲಿ ಬರೆದು ಮುಗಿಸಿದ ಅಲ್ಮಾಜೆಸ್ಟ್‌ನ ಅನುವಾದ 1515ರಲ್ಲಿ ಅಚ್ಚಾಗಿ ಗ್ರೀಕ್ ಮೂಲದ ಅನುವಾದಕ್ಕಿಂತ ಹೆಚ್ಚು ಜನಪ್ರಿಯವಾಯಿತು. ಟಾಲೆಮಿಯದೇ ಅಲ್ಲದೆ ಅರಿಸ್ಟಾಟಲ್, ಯೂಕ್ಲಿಡ್, ಗೇಲೆನರ ಅರಬ್ಬೀ ಅನುವಾದಗಳನ್ನೂ ಈತ ಲ್ಯಾಟಿನಿಗೆ ತಂದ. ಇವನು ಅನುವಾದಿಸಿದ ಮೂಲ ಅರಬ್ಬೀ ಗ್ರಂಥಗಳಲ್ಲಿ ಆವಿಸೆನ್ನನ ವೈದ್ಯಗ್ರಂಥಗಳು, ಗಣಿತ, ಖಗೋಳಶಾಸ್ತ್ರ, ಜ್ಯೋತಿಷಶಾಸ್ತ್ರ ರಸತಂತ್ರದ ಗ್ರಂಥಗಳೂ ಇದ್ದುವು.