ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೆಲ್ಡನರ್, ಕಾರ್ಲ್ ಫ್ರೀಡ್ರಿಕ್
ಗೋಚರ
1852-1929. ಜರ್ಮನ್ ಭಾಷಾತಜ್ಞ. ಋಗ್ವೇದವನ್ನು ಜರ್ಮನ್ ಭಾಷೆಗೆ ಅನುವಾದ ಮಾಡಿ ಅದರ ಸರಳ ಅರ್ಥವಿವರಣೆಗೆ ಹೆಸರಾದ ವಿದ್ವಾಂಸ. ಜರ್ಮನಿಯ ಮಾರ್ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನಾಗಿದ್ದ. ಈತ ಪ್ರಸಿದ್ಧ ತತ್ತ್ವಜ್ಞಾನಿ ರೊತನ ಶಿಷ್ಯ. ಅಮೆರಿಕನ್ ಓರಿಯಂಟಲ್ ಸೊಸೈಟಿ, ಅಮೆರಿಕನ್ ಅಕಾಡೆಮಿ ಆಫ್ ಆಟ್ರ್ಸ್ ಅಂಡ್ ಸೈನ್ಸಸ್ ಮುಂತಾದ ಸಂಸ್ಥೆಗಳ ಸದಸ್ಯನಾಗಿ ಕೆಲಸ ಮಾಡಿದ. 1875ರಲ್ಲಿ ಅಡಾಲ್ಫ್ ಕೇಗಿಯ ಜೊತೆಗೂಡಿ ಋಗ್ವೇದದ 70 ಸೂಕ್ತಗಳನ್ನು ಭಾಷಾಂತರಿಸಿ ಪ್ರಕಟಿಸಿದ. ಅನಂತರ ಋಗ್ವೇದವನ್ನು ಸಂಪುರ್ಣವಾಗಿ ಜರ್ಮನ್ ಭಾಷೆಗೆ ಅನುವಾದ ಮಾಡುವ ಕಾರ್ಯವನ್ನು ಕೈಗೊಂಡು, ಟಿಪ್ಪಣಿ ಸಹಿತ ಮೂರು ಭಾಗಗಳಲ್ಲಿ ಪ್ರಕಟಿಸಿದ. ರಿಚರ್ಡ್ ಪಿಶೆಲ್ನ ಸಹಾಯದಿಂದ ಪ್ರಕಟಿಸಿದ ವೇದಿಕ್ ಸ್ಟಡೀಸ್ ಎಂಬ ಗ್ರಂಥದಲ್ಲಿ ವೇದ ವಾಙ್ಮಯವನ್ನು ಕುರಿತ ಅನೇಕ ಲೇಖನಗಳನ್ನು ಪ್ರಕಟಿಸಿರುವುದಲ್ಲದೆ ಪಾರ್ಸಿ ಜನಾಂಗದ ಧರ್ಮಗ್ರಂಥವಾದ ಅವೆಸ್ತವನ್ನು ಈತ ಪುರ್ಣವಾಗಿ ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾನೆ (1889-1901).