ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೊರಿಲ
ಗೊರಿಲ
ಮ್ಯಾಮೇಲಿಯ ವರ್ಗ ಹಾಗೂ ಪ್ರೈಮೇಟ್ ಗಣಗಳ ಪಾಂಗಿಡೀ ಕುಟುಂಬಕ್ಕೆ ಸೇರಿದ ಒಂದು ವನ್ಯವಾಸಿ ವಾನರ. ಇದರ ತವರು ಆಫ್ರಿಕದ ಉಷ್ಣವಲಯ, ಚಿಂಪ್ಯಾಂಜಿó ಮತ್ತು ಒರಾಂಗೂಟಾನ್‍ಗಳ ಸಂಬಂಧಿ. ಇದಕ್ಕೂ ಅವುಗಳಂತೆ ಬಾಲವಿಲ್ಲ. ಒರಾಂಗೂಟಾನ್‍ಗಿಂತ ಚಿಂಪ್ಯಾಂಜಿóಯೊಂದಿಗೇ ಇದರ ಸಂಬಂಧ ಹೆಚ್ಚು. ಗೊರಿಲವೂ ಚಿಂಪಾಂಜಿóಯೂ ಒಂದೇ ಪೂರ್ವಜ ಕಪಿಯಿಂದ ಉದ್ಭವಿಸಿದವು ಎಂದು ಹೇಳಲಾಗಿದೆ. ಗೊರಿಲದಲ್ಲಿ ಒಂದೇ ಒಂದು ಪ್ರಭೇದ ಉಂಟು. ಈ ಪ್ರಭೇದದ ವೈಜ್ಞಾನಿಕ ನಾಮ ಗೊರಿಲ ಗೊರಿಲ. ಇದರಲ್ಲಿ ಎರಡು ಉಪಪ್ರಭೇದಗಳಿವೆ: 1. ಸಮತಟ್ಟಾದ ಕಾಡು ಪ್ರದೇಶಗಳಲ್ಲಿ ವಾಸಿಸುವ ಗೊರಿಲ ಗೊರಿಲ ಗೊರಿಲ (ಲೋಲ್ಯಾಂಡ್ ಗೊರಿಲ), 2 ಪರ್ವತ ಪ್ರದೇಶಗಳಲ್ಲಿ ವಾಸಿಸುವ ಗೊರಿಲ ಗೊರಿಲ ಬೆರಿಂಗೈ (ಮೌಂಟನ್ ಗೊರಿಲ), ಮೊದಲನೆಯ ಉಪ್ರಭೇದ ಆಫ್ರಿಕದ ಸಮಭಾಜಕವೃತ್ತ ಪ್ರದೇಶಗಳ ಪಶ್ಚಿಮ ಭಾಗದಲ್ಲೂ (ಗಿನಿ ಖಾರಿಯ ಪ್ರದೇಶದ ದಟ್ಟ ಕಾಡುಗಳಲ್ಲಿ) ಎರಡನೆಯ ಉಪಪ್ರಭೇದ ಮಧ್ಯ ಆಫ್ರಿಕದಲ್ಲಿರುವ ಎಡ್ವರ್ಡ್ ಮತ್ತ ಕೀವಿ ಸರೋವರಗಳ ನಡುವೆ ಎರುವ ವಿರುಂಗ ಅಗ್ನಿಪರ್ವತಗಳ 3500 ಮೀ. ಎತ್ತರದವರೆಗಿನ ಪ್ರದೇಶಗಳಲ್ಲೂ ಕಾಣದೊರೆಯುತ್ತವೆ. ದೈಹಿಕ ಲಕ್ಷಣಗಳು: ಗೊರಿಲ ವಾನರಗಳಲ್ಲೆಲ್ಲ ಅತ್ಯಂತ ದೊಡ್ಡ ಪ್ರಾಣಿ. ಅಷ್ಟೇ ಅಲ್ಲ. ಇಂದು ಜೀವಿಸಿರುವ ಪ್ರೈಮೇಟುಗಳಲ್ಲೆ ಇದು ಅತ್ಯಂತ ಭಾರಿಯಾದುದು. ಪೂರ್ಣ ಬೆಳೆದ ಗಂಡು ಗೊದ ಎತ್ತರ 1.25-1.75 ಮೀ. ಮಂಡಿಯನ್ನು ನೆಟ್ಟಗೆ ಮಾಡಿದರೆ ಎತ್ತರ ಇನ್ನೂ ಹೆಚ್ಚಬಲ್ಲುದು. (ಸು. 2.30 ಮೀ. ವರೆಗೆ). ಗೊರಿಲದ ಕೈ ಹರವು 2.0-2.75 ಮೀ. ಎದೆಯಸುತ್ತಳತೆ 1,75 ಮೀ. ದೇಹದ ತೂಕ ಗಂಡಿನಲ್ಲಿ 135-275 ಕೆಜಿ. ಹೆಣ್ಣನಲ್ಲಿ 70-140 ಕೆಜಿ. ಪ್ರಾಣಿಸಂಗ್ರಹಾಲಯಗಳಲ್ಲಿನ ಗೊರಿಲಗಳಲ್ಲಿ 350 ಕೆಜಿ. ವರೆಗೂ ಇರಬಹುದು. ಗೊರಿಲದ ಮೈಮೇಲೆ ಕಪ್ಪುಬಣ್ಣದ ಇಲ್ಲವೆ ಬೂದು ಮಿಶ್ರಿತ ಕಪ್ಪು ಬಣ್ಣದ ದಟ್ಟವಾದ ಕೂದಲುಗಳಿವೆ. ನೆತ್ತಿಯ ಮೇಲೆ ಕಂಪು ಬಣ್ಣದ ಕೂದಲುಗಳಿರುವುದುಂಟು. ಗಂಡು ಗೊರಿಲಗಳಿಗೆ ಸುಮಾರು 10 ವರ್ಷ ವಯಸ್ಸಾದಾಗ ಅವುಗಳ ಬೆನ್ನಮೀಲಿನ ಕೂದಲುಗಳು ಬಿಳಿಯ ಬಣ್ಣಕ್ಕೆ ತಿರುಗುತ್ತವೆ. ಮುಖ, ಮುಂಗೈ ಮತ್ತು ಪಾದಗಳ ಮೇಲೆ ಕೂದಲಿರುವುದಿಲ್ಲ. ಹೆಚ್ಚು ವಯಸ್ಸಾದ ಗಂಡುಗಳ ಎದೆಯೂ ರೋಮರಹಿತವಾಗಿರುತ್ತದೆ. ಗೊರಿಲಗಳ ಕಿವಿಗಳ ಅಲಾಗಳು ಬಲು ಚಿಕ್ಕವು. ಮೂಗಿನ ಹೊಳ್ಳೆಗಳ ಸುತ್ತ ಉಬ್ಬುಗಳಿವೆ. ಕಣ್ಣುಗಳು ಚಿಕ್ಕವು: ಚೆನ್ನಾಗಿ ಉಬ್ಬಿಕೊಂಡಿರುವ ಹಣೆಯ ಮೂಳೆಗಳ ಕೆಳಗೆ ಹುದುಗಿದಂತಿವೆ.
ಗೊರಿಲ ಸಸ್ಯಾಹಾರಿ. ಹಲವಾರು ಬಗೆಯ ಗಿಡಗಳ ಎಳೆಯ ಕುಂಡ, ಎಲೆ, ಬಲಿತ ಕಾಂಡಗಳ ತಿರುಳು, ತೊಗಟೆ ಮುಂತಾದವೇ ಇದರ ಪ್ರಧಾನ ಆಹಾರ. ಹಣ್ಣು. ಬೀಜ ಇತ್ಯಾದಿಗಳನ್ನು ತಿನ್ನುವುದಿದೆಯಾದರೂ ಇವು ಗೊರಿಲಕ್ಕೆ ಅಷ್ಟಾಗಿ ಅಚ್ಚು ಮೆಚ್ಚಿನ ಆಹಾರಗಳಲ್ಲ. ಪ್ರಾಣಿಸಂಗ್ರಹಾಲಯಗಳಲ್ಲಿ ಗೊರಿಲ ಮಾಂಸವನ್ನು ತಿನ್ನುತ್ತದೆ. ಗೊರಿಲದ ಇನ್ನೊಂದು ವಿಚಿತ್ರ ಲಕ್ಷಣವೆಂದರೆ ನೀರೇ ಕುಡಿಯದಿರುವುದು. (ಬಿ.ಆರ್.ಸಿ.ಆರ್)
ಗೊರಿಲ ಸಮಾಜಜೀವಿ : 5-20 ಪ್ರಾಣಿಗಳನ್ನೊಳಗೊಂಡ ಸಣ್ಣ ಕುಟುಂಬ ಇಲ್ಲವೆ ಗುಂಪುಗಳಲ್ಲಿ ವಾಸಿಸುತ್ತವೆ. ಪ್ರತಿಯೊಂದು ಗುಂಪಿಗೆ ಬಿಳಿಯ ಬಣ್ಣದ ಬೆನ್ನಿನ ಗಂಡು ಗೊರಿಲವೇ ನಾಯಕ. ನಾಯಕನಿಗೆ ಗುಂಪಿನ ಎಲ್ಲ ಗೊರಿಲಗಳೂ ಅತ್ಯಂತ ವಿಧೇಯವಾಗಿ ನಡೆದುಕೊಳ್ಳುತ್ತವೆ. ತನಗೆ ಯಾವ ಬಗೆಯ ವಿರೋಧವಿಲ್ಲದಿದ್ದರೂ ನಾಯಕ ಮಾತ್ರ ಎಂದು ತನ್ನ ದರ್ಪವನ್ನು ಒರಟಾಗಿ ತೋರ್ಪಡಿಸುವುದಾಗಲೀ ಅಧಿಕಾರವನ್ನು ಚಲಾಯಿಸುವುದಾಗಲಿ ಇಲ್ಲ. ಯಾವಾಗಲೂ ಶಾಂತವಾಗಿ, ತಾಳ್ಮೆಯಿಂದ ಇರುತ್ತದೆ. ಹೀಗಾಗಿ ಗುಂಪಿನ ಇತರ ಪ್ರಾಣಿಗಳಿಗೆ ಅದು ಬಲು ಅಚ್ಚುಮೆಚ್ಚಾಗಿರುತ್ತದೆ. ಮರಿಗಳಂತೂ ನಾಯಕನ ಮೇಲೆ ಹತ್ತುವುದು, ಅದರ ತೊಡೆಯ ಮೇಲೆ ಕುಳಿತುಕೊಳ್ಳುವುದು ಮುಂತಾದವನ್ನೆಲ್ಲ ಮಾಡುತ್ತವೆ. ಇವೆಲ್ಲವನ್ನೂ ತಾಳ್ಮೆಯಿಂದ ಸಹಿಸುವ ಗಂಡು ಗಲಾಟೆ ವಿಪರೀತವಾದಾಗ ಮಾತ್ರ ಪ್ರತಿಕ್ರಿಯೆಯನ್ನು ತೋರುತ್ತದೆ. ಆಗಲೂ ಹೊಡೆಯುವುದಾಗಲಿ ಬಡಿಯುವುದಾಗಲಿ ಮಾಡದು; ಒಂದು ಸಲ ಮರಿಗಳನ್ನು ದುರುಗುಟ್ಟಿ ನೋಡುತ್ತದೆ ಅಷ್ಟೆ. ಮರಿಗಳ ಚೇಷ್ಟೆ ನಿಲ್ಲುತ್ತದೆ. ಗುಂಪಿನ ಮುಂದಾಳು ಇಷ್ಟು ಶಾಂತಸ್ವಭಾವದ್ದಾದರೂ ಗುಂಪಿಗೆ ಅಪಾಯವೊದಗಿದಾಗ, ಚಿರತೆ ಮುಂತಾದ ಶತ್ರುಗಳ ಮುತ್ತಿದಾಗ ರಕ್ಷಣೆಗೆ ಸಿದ್ಧವಾಗುತ್ತದೆ. ತನ್ನ ಎದೆಯನ್ನು ಬಲವಾಗಿ ಬಡಿದುಕೊಳ್ಳುತ್ತ, ಕೂಗುತ್ತ ಶತ್ರುಗಳನ್ನು ಹೆದರಿಸುತ್ತದೆ. ಒಂದೊಂದು ಗುಂಪಿನಲ್ಲಿ ಒಬ್ಬ ನಾಯಕ, ಕೆಲವು ಪ್ರೌಢ ವಯಸ್ಸಿನ ಗಂಡುಗಳು, ಹೆಣ್ಣುಗಳು, ಮತ್ತು ಮರಿಗಳು ಇರುತ್ತವೆ. ಕೆಲವೊಮ್ಮೆ ಬರಿಯ ಮುಂದಾಳು, ಹೆಣ್ಣುಗಳು ಮತ್ತು ಮರಿಗಳು ಮಾತ್ರ ಇರಬಹುದು. ಗುಂಪಿನ ಪ್ರತಿಯೊಂದು ಗೊರಿಲಕ್ಕೂ ಅದರದೇ ಆದ ಸ್ಥಾನಮಾನ ಇರುತ್ತದೆ. ಯಾವ ಪ್ರಾಣಿಯೂ ತನ್ನ ಸ್ಥಾನವನ್ನು ಮೀತಿ ವರ್ತಿಸುವುದಿಲ್ಲ. ಪ್ರತಿಯೊಂದು ಗುಂಪಿಗೂ ಅದರದೇ ಆದ ಅಧೀನ ಪ್ರಾಂತ್ಯವಿರುತ್ತದೆ. ಈ ಪ್ರಾಂತ್ಯದ ವಿಸ್ತೀರ್ಣ 25—40 ಚದರ ಕಿಮೀ. ಇರುವುದುಂಟು. ಕೆಲವು ಸಲ ಒಂದೇ ಪ್ರದೇಶದಲ್ಲಿ ಹಲವಾರು ಗುಂಪುಗಳಿರಬಹುದು. ಹೀಗಿರುವಾಗ ಗುಂಪುಗಳು ಎದುರುಬದುರು ಬರಬಹುದು. ಹೀಗೆ ಭೇಟಿಯಾದಾಗ ಅವುಗಳ ನಡುವೆ ಯಾವ ಬಗೆಯ ಘರ್ಷಣೆಯೂ ನಡೆಯುವುದಿಲ್ಲ. ಎರಡು ಗುಂಪುಗಳ ನಾಯಕ ಗೊರಿಲಗಳು ಮಾತ್ರ ಒಂದೇ ಸಮನೆ ಪರಸ್ಪರ ದೃಷ್ಟಿಸತೊಡಗುತ್ತವೆ. ನೆಲವನ್ನು ಕೈಗಳಿಂದ ಬಲವಾಗಿ ಹೊಡೆಯುವುದು. ಕಾಲುಗಳ ಮೇಲೆ ನಿಂತು ಮೈ, ಕೈಗಳನ್ನು ಚಾಚುವುದು, ಎದೆಯನ್ನು ಹಿಗ್ಗಿಸುವುದು - ಮೊದಲಾದವನ್ನೆಲ್ಲ ಮಾಡುತ್ತವೆ. ಆದರೆ ಕೈಕೈ ಮಿಲಾಯಿಸುವುದು ಮಾತ್ರ ಇಲ್ಲವೇ ಇಲ್ಲ. ಹೀಗೆ ಕೊಂಚ ಹೊತ್ತು ಮಾಡಿದ ಮೇಲೆ ಎರಡು ಗುಂಪುಗಳು ಬೇರೆ ಬೇರೆ ದಾರಿಯಲ್ಲಿ ಮುಂದೆ ಸಾಗುತ್ತವೆ. ಇದರಿಂದ ಗೊರಿಲಗಳು ಹೊರನೋಟಕ್ಕೆ ಎಷ್ಟು ಕ್ರೂರಿಗಳು ಕಾಣುತ್ತವೋ ಅಷ್ಟೇ ಶಾಂತ ಸ್ವಭಾವದವು ಎಂಬುದು ವ್ಯಕ್ತವಾಗುತ್ತದೆ. ಬೇರೆ ಪ್ರಾಣಿಗಳನ್ನೂ ಮನುಷ್ಯರನ್ನೂ ಕಂಡರೆ ಹೋಗುವುದೇ ಗೊರಿಲಗಳ ಸಾಮಾನ್ಯ ಕ್ರಮ. ಆದರೆ ಇತರ ಪ್ರಾಣಿಗಳಾಗಲಿ ಮನುಷ್ಯರಾಗಲಿ ಆಕ್ರಮಣ ಮಾಡಿದಾಗ ಮಾತ್ರ ಇವು ಉಗ್ರವಾಗಿ ಹೋರಾಡಬಲ್ಲವು.
ಗೊರಿಲಗಳಿಗೆ ಬಿಸಿಲೆಂದರೆ ಬಹಳ ಅಚ್ಚುಮೆಚ್ಚು. ಬಿಸಿಲಿನಲ್ಲಿ ಅಂಗಾತ ಮಲಗಿ ಗಂಟೆಗಟ್ಟಲೆ ಕಾಲಕಳೆಯುತ್ತವೆ. ಮೋಡ ಕವಿದರೆ, ಕತ್ತಲಾದರೆ ಮಾತ್ರ ಎಲ್ಲವೂ ಒಂದೆಡೆ ಸೇರಿಕೊಂಡು ಮೌನವಾಗಿಬಿಡುತ್ತವೆ. ಬಹುಶಃ ಇವಕ್ಕೆ ಕತ್ತಲು ಕಂಡರೆ ಹೆದರಿಕೆಯಿರಬೇಕು. ಗೊರಿಲಗಳ ಸಾಮಾನ್ಯವಾಗಿ ಸಂಜೆಯ ವೇಳೆ ಸೂಕ್ತವಾದ ಮರವೊಂದನ್ನು ಆರಿಸಿಕೊಂಡು ಅದರ ಮೇಲೆ ಅಥವಾ ನೆಲದ ಮೇಲೆ ಸೊಪ್ಪು ಸೆದೆ, ಹುಲ್ಲು ಮುಂತಾದವನ್ನು ಹಾಕಿ ಗೂಡನ್ನು ನಿರ್ಮಿಸಿಕೊಂಡು ಮಲಗುತ್ತವೆ. ರಾತ್ರಿಯೆಲ್ಲ ನಿದ್ದೆಯಲ್ಲಿ ಕಳೆದು ಬೆಳಗ್ಗೆ ಸೂರ್ಯ ಹುಟ್ಟಿದ ಒಂದು ಗಂಟೆಯ ಅನಂತರ ಎದ್ದು ಆಹಾರಸೇವನೆಯಲ್ಲಿ ತೊಡಗುತ್ತವೆ. 9-10 ಗಂಟೆಯ ಸುಮಾರಿಗೆ ತಿನ್ನುವುದನ್ನು ನಿಲ್ಲಿಸಿ ವಿಶ್ರಮಿಸುತ್ತವೆ. ಈ ಕಾಲದಲ್ಲಿ ನೆಲದ ಮೇಲೆ ಉರುಳಿಕೊಂಡು ಇಲ್ಲವೆ ಮರದ ಬೊಡ್ಡೆಗೆ ಒರಗಿಕೊಂಡು ಸಮಯ ಹರಣ ಮಾಡುತ್ತವೆ. ಮರಿಗಳು ಮಾತ್ರ ಆಟದಲ್ಲಿ ನಿರತವಾಗುತ್ತವೆ. ಕೆಲವು ಸಲ ಪರಸ್ಪರ ಮೈಯನ್ನು ಹೆಕ್ಕುವುದಿದೆಯಾದರೂ ಇದು ಅವಕ್ಕೆ ಅಷ್ಟಾಗಿ ಹಿಡಿಸುವುದಿಲ್ಲ. ಮಧ್ಯಾಹ್ನದಲ್ಲೂ ಕೊಂಚ ಹೊತ್ತು ತಿನ್ನುವುದರಲ್ಲಿ ತೊಡಗಿದ್ದು ಸಂಜೆಗೆ ಮಲಗುವ ಸಿದ್ಧತೆಯಲ್ಲಿ ನಿರತವಾಗುತ್ತವೆ. ಪ್ರತಿ ರಾತ್ರಿಗೂ ಒಂದೊಂದು ಹೊಸಗೂಡನ್ನು ನಿರ್ಮಿಸಿಕೊಂಡು ಮಲಗುವ ಕ್ರಮ ಇದೆ. ಗೊರಿಲಗಳ ದೃಷ್ಟಿ ಘ್ರಾಣ ಮತ್ತು ಶ್ರವಣಶಕ್ತಿಗಳು ಮಾನವನಲ್ಲಿರುವಷ್ಟೆ ಇವೆ. ಅವನಂತೆಯೆ ಆಕಳಿಸುವುದು, ಕೆಮ್ಮುವುದು, ಬಿಕ್ಕಳಿಸುವುದು ಮುಂತಾದವನ್ನೆಲ್ಲ ಮಾಡುತ್ತವೆ. ಇವಕ್ಕೆ ವಿಶಿಷ್ಟವಾದ ಭಾಷೆಯಿಲ್ಲವಾದರೂ ಗೊರಿಲಗಳು ಸುಮಾರು 22 ಬಗೆಯ ಶಬ್ದಗಳನ್ನು ಮಾಡಬಲ್ಲವು.
ಗೊರಿಲಗಳ ಆಯಸ್ಸು ಸ್ವಾಭಾವಿಕಸ್ಥಿತಿಯಲ್ಲಿ ಎಷ್ಟು ಎಂದು ಖಚಿತವಾಗಿ ಗೊತ್ತಿಲ್ಲವಾದರೂ ಪ್ರಾಣಿಸಂಗ್ರಹಾಲಯಗಳಲ್ಲಿ ಸುಮಾರು 36 ವರ್ಷ ಬದುಕಿರುವ ದಾಖಲೆಗಳುಂಟು. ಗೊರಿಲಗಳಿಗೆ ಖಚಿತವಾದ ಸಂತಾನೋತ್ಪತ್ತಿಯ ಕಾಲ ಇಲ್ಲ. ವರ್ಷದ ಯಾವ ಕಾಲದಲ್ಲಾದರೂ ಮರಿಗಳು ಹುಟ್ಟಬಹುದು. ಹೆಣ್ಣು ಗೊರಿಲ ಪ್ರತಿ 3 ಳಿ ಇಲ್ಲವೆ 4 ಳಿ ವರ್ಷಗಳಿಗೊಮ್ಮೆ ಮರಿಹಾಕುತ್ತದೆ. ಗರ್ಭಾವಸ್ಥೆಯ ಅವಧಿ 8 ಳಿ ತಿಂಗಳು. ಸಾಮಾನ್ಯವಾಗಿ ಒಂದ ಸಲಕ್ಕೆ ಒಂದೇಮರಿ ಹುಟ್ಟುತ್ತವೆ. ಮರಿಗಳು ಹುಟ್ಟಿದಾಗ ಬಹಳ ಅಸಹಾಯಕವಾಗಿರುವುವಾದರೂ ಬಲುಬೇಗ ಬೆಳೆದು ಸುಮಾರು 4-5 ತಿಂಗಳುಗಳಲ್ಲಿ ಆಹಾರವನ್ನು ತಾವೇ ಸ್ವತಃ ತಿನ್ನಲು ಸಮರ್ಥವಾಗುತ್ತವೆ. ಮರಿ ಚಿಕ್ಕದಿರುವಾಗ ತಾಯಿಯೇ ಅದನ್ನು ಹೊತ್ತುಕೊಂಡ ತಿರುಗಾಡುತ್ತದೆ. ಈ ಲಕ್ಷಣದಲ್ಲಿ ಗೊರಿಲಗಳ ಕೋತಿಗಳಿಂದ ಭಿನ್ನವೆನಿಸಿವೆ. ಹೆಣ್ಣು ಮರಿಗಳಿಗೆ 6-7 ವರ್ಷ ವಯಸ್ಸಾದಾಗಲೂ ಗಂಡುಮರಿಗಳಿಗೆ 9-10 ವರ್ಷ ವಯಸ್ಸಾದಾಗಲೂ ಲೈಂಗಿಕಪ್ರಬುದ್ಧತೆ ಬರುತ್ತದೆ.