ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಖಲೆ, ಗೋಪಾಲ ಕೃಷ್ಣ
ಗೋಖಲೆ, ಗೋಪಾಲ ಕೃಷ್ಣ - 1866-1915, ಭಾರತ ಬ್ರಿಟಿಷರ ಅಧೀನದಲ್ಲಿದ್ದಾಗ ಸ್ವರಾಜ್ಯ ಸಾಧನೆಗಾಗಿ ನಿಷ್ಠೆಯಿಂದಲೂ ನಿಸ್ವಾರ್ಥಮನೋಭಾವದಿಂದಲೂ ವಿಧಾಯಕ ಮಾರ್ಗದಲ್ಲಿ ಶ್ರಮಿಸಿದ ಪ್ರಮುಖ ಪ್ರತಿಭಾವಂತ ದೇಶಭಕ್ತ. ಜನನ 1866 -ಮೇ 9ರಂದು, ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಚಿಪ್ಲೂನ್ ತಾಲ್ಲೂಕಿನ ಕೋತಳೂಕ ಗ್ರಾಮದಲ್ಲಿ. ತಂದೆ ಕೃಷ್ಣರಾಯರು ಚಿತ್ಪಾವನ ಬ್ರಾಹ್ಮಣರು, ಅವರೊಬ್ಬ ಸಣ್ಣ ನೌಕರರಾಗಿದ್ದರು. ತಮ್ಮ ಹತ್ತನೆಯ ವರ್ಷದ ವರೆಗೂ ಗೋಖಲೆಯವರು ಹಳ್ಳಿಯಲ್ಲೇ ವಿದ್ಯಾಭ್ಯಾಸ ಪಡೆದರು. ಹಳ್ಳಿಯ ಜೀವನ, ರೈತರ ದಾರಿದ್ರ್ಯ ಇವುಗಳ ಪರಿಚಯ ಆ ಕಾಲದಲ್ಲಿ ಇವರಿಗೆ ಚೆನ್ನಾಗಿ ಉಂಟಾಯಿತು. ಅನಂತರ ತಮ್ಮ ಅಣ್ಣನಾದ ಗೋವಿಂದರಾಯರೊಂದಿಗೆ ವಿದ್ಯಾಭ್ಯಾಸ ಮುಂದುವರಿಸಲು ಕೊಲ್ಹಾಪುರಕ್ಕೆ ಹೋದರು. ಮೂರು ವರ್ಷಗಳ ಅನಂತರ ತಂದೆ ತೀರಿಕೊಂಡರು. ಗೋವಿಂದರಾಯರು ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿ ಒಂದು ಸಣ್ಣ ನೌಕರಿಗೆ ಸೇರಿ ಸಂಸಾರದ ನಿರ್ವಹಣೆಯ ಭಾರ ಹೊರಬೇಕಾಯಿತು. ಆದರೆ ತಮ್ಮನ ವಿದ್ಯಾಭ್ಯಾಸ ನಿಲ್ಲಬಾರದೆಂಬುದು ಅವರ ಇಚ್ಚೆ. ತಮ್ಮ ಅಲ್ಪ ಸಂಪಾದನೆಯಲ್ಲಿ ಅದಕ್ಕೆ ಮೀಸಲಾಗಿಟ್ಟರು. ಬಡ ವಿದ್ಯಾರ್ಥಿಗಳ ಕಷ್ಟಗಳೇನೆಂಬುದು ಗೋಖಲೆಯವರಿಗೆ ಚೆನ್ನಾಗಿ ಅರಿವಾಯಿತು. ಅಣ್ಣನ ತ್ಯಾಗವನ್ನೂ ಉಪಕಾರವನ್ನೂ ಅವರು ಎಂದೂ ಮರೆಯಲಿಲ್ಲ 1881ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅನಂತರ ಕೊಲ್ಹಾಪುರದ ರಾಜಾರಾಂ ವಿದ್ಯಾಶಾಲೆಯಲ್ಲಿ ಎಫ್. ಎ. ಮುಗಿಸಿ, ಮುಂಬಯಿಯ ಎಲ್ಪಿನ್ ಸ್ಪನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ 1884ರಲ್ಲಿ ಬಿ. ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು ಆ ವೇಳೆಗೆ ಅವರಿಗೆ ತಿಂಗಳಿಗೆ 20 ರೂಪಾಯಿ ವಿದ್ಯಾರ್ಥಿವೇತನ ದೊರೆಯುತ್ತಿದ್ದದ್ದರಿಂದ ಅವರ ಅಣ್ಣನವರ ಹೊರೆ ಬಹಳಮಟ್ಟಿಗೆ ಹಗುರವಾಗಿತ್ತು.
ವಿದ್ಯಾಭ್ಯಾಸ ಮುಗಿದ ಮೇಲೆ ಗೋಖಲೆಯವರು ಹೆಚ್ಚಿನ ಧನಾರ್ಜನೆಯ ಸರ್ಕಾರಿ ಉದ್ಯೋಗವನ್ನು ಸೇರದೆ, ಡೆಕ್ಕನ್ ಎಜ್ಯುಕೇಷನ್ ಸೊಸೈಟಿಯ ಫರ್ಗುಸನ್ ಕಾಲೇಜಿನ ಅಧ್ಯಾಪಕರಾದರು. ದಕ್ಷತೆಯಿಂದಲೂ ಮೇಧಾ ಮತ್ತು ಸ್ಮರಣ ಶಕ್ತಿಗಳಿಂದಲೂ ಸೌಜನ್ಯದಿಂದಲೂ ಶ್ರೇಷ್ಠ ಪ್ರಾಧ್ಯಾಪಕರೆಂಬ ಕೀರ್ತಿ ಸಂಪಾದಿಸಿದರು. ಕಾಲೇಜಿನಲ್ಲಿ ಇಂಗ್ಲಿಷ್, ಗಣಿತ, ಚರಿತ್ರೆ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳನ್ನು ಬೋಧಿಸುತ್ತಿದ್ದರು.
1887ರಲ್ಲಿ ಗೋಖಲೆಯವರಿಗೆ ಮಹಾದೇವ ಗೋವಿಂದ ರಾನಡೆಯವರ ಸಂಪರ್ಕವುಂಟಾಯಿತು. ಅವರು ಪುಣೆಯಲ್ಲಿ ನ್ಯಾಯಾಧೀಶರಾಗಿದ್ದರು. ತಮ್ಮ ಪಾಂಡಿತ್ಯ, ದೇಶಭಕ್ತಿ, ಸರಳ ಜೀವನ, ಆಧ್ಯಾತ್ಮಿಕಪ್ರವೃತ್ತಿಗಳಿಂದ ಇವರು ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಅತ್ಯಂತ ಪ್ರಭಾವಶಾಲಿಗಳಲ್ಲೊಬ್ಬರೆನಿಸಿದ್ದರು. ಸರ್ಕಾರದ ಉದ್ಯೋಗದಲ್ಲಿದ್ದಾಗ್ಯೂ ದೇಶಹಿತಕ್ಕಾಗಿ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿದವರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಪುಣೆಯಲ್ಲಿ ಇವರ ಸತ್ಪ್ರೇರಣಯಿಂದ ಸೇವೆ ಸಲ್ಲಿಸುತ್ತಿದ್ದ ಒಂದು ಸಂಘವಿತ್ತು. ಅದೇ ಸಾರ್ವಜನಿಕ ಸಭಾ. ಜನರ ಕುಂದಕೊರತೆಗಳನ್ನು ನಿಷ್ಪಕ್ಷಪಾತವಾಗಿ ವಿಮರ್ಶಿಸಿ ಅವುಗಳ ಬಗ್ಗೆ ಸರ್ಕಾರಕ್ಕೆ ಮನವಿಗಳನ್ನೊಪ್ಪಿಸುವುದು ಈ ಸಭೆಯ ಕಾರ್ಯಭಾರಗಳಲ್ಲೊಂದು. ಈ ಸಭೆ ಒಂದು ಪತ್ರಿಕೆಯನ್ನೂ ನಡೆಸುತ್ತಿತ್ತು. ಗೋಖಲೆಯವರು ಈ ಸಭೆಯ ಕಾರ್ಯದರ್ಶಿಯಾಗಿಯೂ ಇದರ ತ್ರೈಮಾಸಿಕೆಯ ಸಂಪಾದಕರಾಯೂ ನಿಯಮಿತರಾದರು. ಸಂಘದ ಮನವಿಗಳನ್ನು ಸಿದ್ಧಪಡಿಸುವುದರಲ್ಲಿ ಪತ್ರಿಕೆಯ ಸಂಪಾದನ ಕಾರ್ಯದಲ್ಲಿ ರಾನಡೆಯವರು ಗೋಖಲೆಯವರಿಗೆ ಒಳ್ಳೆಯ ತರಬೇತನ್ನು ಕೊಟ್ಟುರು. ಗೋಖಲೆಯವರ ಜೀವನದ ಮೇಲೆ ಪ್ರಭಾವ ಬೀರಿದ ಮತ್ತೊಬ್ಬ ವ್ಯಕ್ತಿ ದಾದಾಭಾಯಿ ನವರೋಜಿ. ಅವರು 1800ರಲ್ಲಿ ಲಾಹೋರಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಅಧ್ಯಕ್ಷರಾಗಲು ಇಂಗ್ಲೆಂಡಿನಿಂದ ಬಂದಿದ್ದರು. ಅವರು ಆ ಸಂದರ್ಭದಲ್ಲಿ ಪುಣೆಗೂ ಭೇಟಿ ಕೊಟ್ಟಾಗ ಅವರ ಸ್ವಾಗತ ಸಮಾರಂಭದಲ್ಲಿ ಮುಖ್ಯ ಪಾತ್ರ ವಹಿಸಿದ ಗೋಖಲೆಯವರು ಅವರನ್ನು ಪ್ರಥಮವಾಗಿ ಸಂದರ್ಶಿಸಿದರು. ಅವರಿಂದಲೂ ಗೋಖಲೆಯವರು ಸ್ಪೂರ್ತಿ ಪಡೆದರು.
ಭಾರತ ರಾಷ್ಟ್ರೀಯ ಕಾಂಗ್ರೆಸಿನೊಂದಿಗೆ ಗೋಖಲೆಯವರ ಸಂಪರ್ಕ 1880ರಲ್ಲಿ ಆರಂಭವಾಯಿತು. ತಮ್ಮ ವಾಕ್ಪಟುತ್ವದಿಂದಲೂ ವಿಷಯ ಪ್ರತಿಪಾದನ ಕೌಶಲದಿಂದಲೂ ಅವರು ಎಲ್ಲರ ಮೆಚ್ಚುಗೆ ಗಳಿಸಿದರು. ಮುಂಬಯಿ ಪ್ರಾಂತ್ರೀಯ ಸಮ್ಮೇಳನದ ಕಾರ್ಯದರ್ಶಿಯಾಗಿ 1803 ಮತ್ತು 1804ರಲ್ಲಿ ಸೇವೆ ಸಲ್ಲಿಸಿದರು. 1895ರಲ್ಲಿ ಪುಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧೀವೇಶನದ ಕಾರ್ಯದರ್ಶಿಯಾಗಿ ಆರಿಸಲ್ಪಟ್ಟರು.
ಭಾರತದ ರಾಜ್ಯಾದಾಯದ ವ್ಯಯ ಹೇಗಾಗುತ್ತಿದೆಯೆಂಬುದನ್ನು ಪರಿಶೀಲಿಸಿ ಅದರಲ್ಲಿ ಸುಧಾರಣೆಗಳನ್ನು ಸೂಚಿಸಲು ಬ್ರಿಟಿಷ್ ಸರ್ಕಾರ 1896ರಲ್ಲಿ ಲಾರ್ಡ್ ವೆಲ್ಬಿಯ ನೇತೃತ್ವದಲ್ಲಿ ಒಂದು ಆಯೋಗವನ್ನು ಲಂಡನ್ನಿನಲ್ಲಿ ನೇಮಿಸಿತು. ಇದರ ಮುಂದೆ ಸಾಕ್ಷ್ಯ ನೀಡಲು ಭಾರತೀಯ ಮುಖಂಡರನ್ನೂ ಸಂಸ್ಥೆಗಳನ್ನೂ ಆಹ್ವಾನಿಸಿತು. ಗೋಖಲೆಯವರಿಗೂ ಆಹ್ವಾನ ಬಂದಿತ್ತು. ಅವರು ಇಂಗ್ಲೆಂಡಿಗೆ ತೆರಳಬೇಕೆಂದು ರಾನಡೆಯವರು ಸಲಹೆಯಿತ್ತರು. ಗೋಖಲೆಯವರು ಸಾಕ್ಷ್ಯಕ್ಕೆ ಬೇಕಾದ ಅಂಕಿ ಅಂಶಗಳನ್ನು ಸಂಗ್ರಹಿಸಿ, ಭಾರತದ ಹಣಕಾಸಿನ ಸ್ಥಿತಿಯನ್ನೂ ಅದರಲ್ಲಿ ಮಾಡಬೇಕಾದ ಸುಧಾರಣೆಗಳನ್ನೂ ಆಯೋಗಕ್ಕೆ ವಿವರಿಸಿ ಎಲ್ಲರ ಪ್ರಶಂಸೆಗೂ ಪಾತ್ರರಾದರು.
ಗೋಖಲೆಯವರು 1897ರಲ್ಲಿ ಇಂಗ್ಲೆಂಡಿನಲ್ಲಿದ್ದಾಗ ಪುಣೆಯಲ್ಲಿ ಪ್ಲೇಗ್ ಜಾಡ್ಯ ಕಾಣಿಸಿಕೊಂಡಿತು. ಜನರನ್ನು ಶಿಬಿರಗಳಿಗೆ ಸಾಗಿಸಿ, ಅವರಿಗೆ ಆಗ ತೀರ ಅಪರಿಚಿತವಾಗಿದ್ದ ಇನಾಕ್ಯುಲೇಷನ್ ಮಾಡಿಸುವ ಏರ್ಪಾಡು ಮಾಡಲಾಯಿತು. ಇದು ವಿಳಂಬವಿಲ್ಲದೆ ನಡೆಯಬೇಕಾಗಿದ್ದ ಕಾರ್ಯ. ಸರ್ಕಾರ ಈ ವ್ಯವಸ್ಥೆಯನ್ನೆಲ್ಲ ಸೈನ್ಯಕ್ಕೆ ಒಪ್ಪಿಸಿತು. ಇದರಿಂದ ಕೆಲವು ಅಚಾತುರ್ಯಗಳಾದುವು. ಜನರ ಆಚಾರ ವ್ಯವಹಾರಗಳನ್ನು ಅರಿಯದ ಕೆಲವು ಸೈನಿಕರು ದರ್ಪದಿಂದ ವರ್ತಿಸಿದರೆಂಬ ದೂರು ಕೇಳಿಸಿತು. ಅತ್ಯಾಚಾರಗಳೂ ಆದುವೆಂದು ಜನರಲ್ಲಿ ಹಾಹಾಕಾರವೆದ್ದಿತು. ಈ ತರುಣದಲ್ಲಿ ಒಬ್ಬ ಮಹಾರಾಷ್ಟ್ರ ಯುವಕ ಒಬ್ಬ ಸೈನ್ಯಾಧಿಕಾರಿಯನ್ನು ಗುಂಡಿಟ್ಟು ಕೊಂದ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಇದಕ್ಕೆಲ್ಲ ಟಿಳಕರೇ ಮುಂತಾದ ತೀವ್ರವಾದಿಗಳು ಕಾರಣರೆಂಬುದಾಗಿ ಸರ್ಕಾರ ಆಪಾದಿಸಿತು. ದೇಶೀಯ ಪತ್ರಿಕೆಗಳು ಅದರ ಆಗ್ರಹಕ್ಕೆ ಪಾತ್ರವಾದುವು. ಗೋಖಲೆಯವರಿಗೆ ಈ ವಿದ್ಯಮಾನಗಳು ತಿಳಿದು ಸೈನಿಕರ ವರ್ತನೆಯನ್ನೂ ಸರ್ಕಾರದ ಧೋರಣೆಯನ್ನೂ ಖಂಡಿಸಿ ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಅವರು ಭಾರತಕ್ಕೆ ಮರಳಿದ ಮೇಲೆ ತಮ್ಮ ಆಕ್ಷೇಪಣೆಗಳಿಗೆ ರುಜುವಾತು ಒದಗಿಸಬೇಕಾಗಿ ಬಂದಾಗ ಇಂಗ್ಲೆಂಡಿನಲ್ಲಿದ್ದಾಗ ತಮಗೆ ಈ ಬಗ್ಗೆ ದೂರುಕೊಟ್ಟಿದ್ದ ಮಿತ್ರರು ಸಾಕ್ಷ್ಯ ನೀಡಲೊಲ್ಲದೆ ಹೋದರು. ತಾವು ಸತ್ಯವನ್ನರಿಯದೆ ವೃಥಾ ಅಧಿಕಾರಿಗಳ ಮೇಲೆ ಅಧಿಕಾರಿಗಳ ಮೇಲೆ ಅಪವಾದ ಹೊರಿಸಿದುದಾಗಿ ಗೋಖಲೆಯವರಿಗೆ ವಿಷಾದವಾಯಿತು. ಅವರು ತಮ್ಮಿಂದಾದ ಪ್ರಮಾಣದ ಬಗ್ಗೆ ಮೌನ ತಳೆದಿದ್ದರೂ ಆಗುತ್ತಿತ್ತು. ಆದರೆ ಸತ್ಯಪ್ರಿಯರಾದ ಅವರಿಗೆ ಅದು ಉಚಿತವೆನಿಸಲಿಲ್ಲ. ಅದರು ಬೇಷರತ್ತಾಗಿ ಸರ್ಕಾರಕ್ಕೆ ತಮ್ಮ ಪಶ್ಚಾತ್ತಾಪ ಸಲ್ಲಿಸಿ, ನೊಂದ ಅಧಿಕಾರಿಗಳ ಕ್ಷಮಾಪಣೆ ಕೇಳಿದರು. ಅವರ ಈ ವರ್ತನೆಯನ್ನು ಹಲವರು ಟೀಕಿಸಿದರು. ಅವರ ಸಹನೆಗೆ ಇದೊಂದು ಪರೀಕ್ಷೆಯಾಯಿತು. ಆದರೆ ತಮ್ಮ ಆತ್ಮಸಾಕ್ಷಿಗನುಸಾರವಾಗಿ ನಡೆದದ್ದಾಗಿ ಅವರಿಗೆ ಸಮಾಧಾನವಾಗಿತ್ತು.
1899ರಲ್ಲಿ ಮುಂಬಯಿ ವಿಧಾನಸಭೆಯಲ್ಲಿ ತೆರವಾದ ಸ್ಥಾನಕ್ಕೆ ಗೋಖಲೆಯವರನ್ನು ಕಳಿಸಬೇಕೆಂದು ಮಿತ್ರರು ನಿಶ್ಚಯಿಸಿದರು. ಆಗ ವಿಧಾನ ಸಭೆಗಳಲ್ಲಿ ಸರ್ಕಾರದ ಅಧಿಕಾರಿಗಳೂ ನಾಮಕರಣ ಸದಸ್ಯರೂ ಬಹುಸಂಖ್ಯೆಯಲ್ಲಿದ್ದರು ಚುನಾವಣಾ ಕ್ಷೇತ್ರಗಳು ಸಂಕುಚಿತವಾಗಿದ್ದುವು. ಪೌರಸಭಾ ಸದಸ್ಯರ ಕ್ಷೇತ್ರದಿಂದ ಗೋಖಲೆಯವರು ಚುನಾಯಿತರಾದರು. ತಮ್ಮ ಅಧ್ಯಯನಶೀಲತೆಯಿಂದಲೂ ವಾದದ ರೀತಿಯಿಂದಲೂ ಇವರು ಜನತೆಯ ಪ್ರತಿನಿಧಿಗಳು ಹೇಗೆ ವಾದಿಸಬೇಕೆಂಬುದಕ್ಕೆ ಉತ್ತಮ ನಿದರ್ಶನ ನೀಡಿದರು. 1902ರಲ್ಲಿ ಮುಂಬಯಿ ವಿಧಾನ ಮಂಡಲದಿಂದ ಒಬ್ಬ ಪ್ರತಿನಿಧಿಯನ್ನು ಕೇಂದ್ರ ವಿಧಾನ ಸಭೆಗೆ ಆರಿಸುವ ಅವಕಾಶವೊದಗಿದಾಗ ಗೋಖಲೆಯವರೇ ಆಯ್ಕೆಯಾದರು. ಕಲ್ಕತ್ತ ಭಾರತದ ಆಗಿನ ರಾಜಧಾನಿ. ಗೋಖಲೆಯವರು ಕೇಂದ್ರ ವಿಧಾನ ಸಭೆಗೆ ಪ್ರತಿಸಲವೂ ಚುನಾಯಿತರಾಗಿ ತಮ್ಮ ಅಂತಿಮ ಕಾಲದ ವರೆಗೂ ಸದಸ್ಯರಾಗಿದ್ದು ಉತ್ತಮ ಸೇವೆ ಸಲ್ಲಿಸಿದರು. ಸಲಹೆಗಳೂ ಪ್ರಸಿದ್ಧವಾದುವು. ಅನೇಕ ವಿಧೇಯಕಗಳ ಬಗ್ಗೆ ಇವರು ಮಾಡಿದ ಭಾಷಣಗಳೂ ಜನರ ಕುಂದುಕೊರತೆಗಳನ್ನು ಸರ್ಕಾರದ ಗಮನಕ್ಕೆ ತರಲು ಅಂಕಿ ಅಂಶಗಳ ಆಧಾರದೊಂದಿಗೆ ಇವರು ಮಾಡುತ್ತಿದ್ದ ವಾದವೂ ಸರ್ಕಾರದ ಮೆಚ್ಚುಗೆ ಗಳಿಸಿದುವು. ಇವರು ವಿಶೇಷವಾಗಿ ಪ್ರಸ್ತಾವಿಸಿದ ವಿಷಯಗಳೆಂದರೆ ಉಪ್ಪನ ತೆರಿಗೆ, ಸೈನ್ಯ ಶಾಖೆಯ ವೆಚ್ಚ, ಜವಳಿ ಗಿರಣಿಗಳ ಮೇಲಣ ಸುಂಕ, ವಿದ್ಯಾಪ್ರಸಾರ, ಸರ್ಕಾರದ ಉನ್ನತ ಉದ್ಯೋಗಗಳಿಗೆ ಭಾರತೀಯರ ನೇಮಕ, ದಕ್ಷಿಣ ಆಫ್ರಿಕದಲ್ಲಿ ನೆಲೆಸಿದ ಭಾರತೀಯರ ಕಷ್ಟಗಳು ಮುಂತಾದವು.
ಈ ಸಭೆಗಳ ಕಲಾಪಗಳಿಗಾಗಿ ಇವರು ಬಹಳ ಕಾಲವನ್ನು ವಿನಿಯೋಗಿಸಬೇಕಾದ್ದರಿಂದ ಇವರು ತಮ್ಮ ಪ್ರಾಧ್ಯಾಪಕ ವೃತ್ತಿಯಿಂದ. ಹದಿನೆಂಟು ವರ್ಷಗಳು ಸೇವೆ ಸಲ್ಲಿಸಿದ ಅನಂತರ, ನಿವೃತ್ತರಾದರು. ಅಂದಿನಿಂದ ಪೂರ್ಣವಾಗಿ ಸಾರ್ವಜನಿಕ ಸೇವೆಗಾಗಿಯೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಈ ಬಗೆಯ ಸೇವೆಗೆ ಭಾರತದ ಸುಶಿಕ್ಷತರಾದ ನಿಸ್ವಾರ್ಥ ಸೇವಕರನ್ನು ಸಿದ್ಧಮಾಡಿ ಸಂಘಟಿಸಲು ಅಗತ್ಯವಿದೆಯೆಂದು ಅವರು ಬಗೆದು 1905ರಲ್ಲಿ ಭಾರತ ಸೇವಕ ಸಂಘವನ್ನು ಸ್ಥಾಪಿಸಿದರು. ಅದೇ ವರ್ಷ ಅವರು ಇಂಗ್ಲೆಂಡಿಗೆ ಪ್ರಯಾಣ ಮಾಡಿ ರಾಷ್ಟ್ರೀಯ ಕಾಂಗ್ರೆಸಿನ ಪರವಾಗಿ ಪ್ರಚಾರ ಕೈಗೊಂಡರು. ಆ ವರ್ಷದ ಕೊನೆಯ ವಾರದಲ್ಲಿ ಕಾಶಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಅಧ್ಯಕ್ಷರಾದರು. ತಮ್ಮ ಅಧ್ಯಕ್ಷ ಭಾಷಣದಲ್ಲಿ ಲಾರ್ಡ್ ಕಜರ್óನನ ಸರ್ವಾಧಿಕಾರಿ ಆಡಳಿತವನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸಿದರು.
ಕಜರ್óನ್ ಬಂಗಾಳವನ್ನು ಇಬ್ಭಾಗವಾಗಿ ಮಾಡಿಹೋಗಿದ್ದ, ದೇಶಾದ್ಯಂತ ಇದನ್ನು ಪ್ರತಿಭಟಿಸಿ ಒಂದು ದೊಡ್ಡ ಆಂದೋಲನ ನಡೆದಿತ್ತು. ಕೆಲವು ತೀವ್ರವಾದಿಗಳು ಬ್ರಿಟಿಷ್ ಸಕಾರವನ್ನು ಕೊನೆಗೊಳಿಸಲು ಸರ್ವಪ್ರಯತ್ನವನ್ನೂ ಮಾಡಬೇಕೆಂದು ಬಯಸಿ ಹಿಂಸೆಯನ್ನೆಸಗಲೂ ಹಿಂಜರಿಯಲಿಲ್ಲ. ಆದರೆ ದೇಶದ ಸುಭದ್ರತೆಯ ದೃಷ್ಟಿಯಿಂದ ಈ ಬಗೆಯ ನೇರ ಬಂಡಾಯದ ಚಟುವಟಿಕೆಗಳನ್ನು ನಡೆಸುವಾಗ ಅಶಿಕ್ಷಿತರೂ ಶಿಸ್ತನ್ನು ಪಾಲಿಸುವ ಅಭ್ಯಾಸವಿಲ್ಲದವರೂ ಉದ್ರೇಕಗೊಳ್ಳುವುದರಿಂದ ದೇಶಕ್ಕೆ ಹಿತವಾಗುವುದಿಲ್ಲವೆಂದು ಅವರು ದೃಢವಾಗಿ ನಂಬಿದ್ದರು. ವಿಧಾಯಕ ರೀತಿಯಲ್ಲೇ ಚಳವಳಿಗಳನ್ನೂ ಪ್ರಚಾರ ಕಾರ್ಯವನ್ನೂ ಕೈಗೊಳ್ಳಬೇಕೆಂಬುದು ಅವರ ಬಯಕೆಯಾಗಿತ್ತು. ಈ ಬಗೆಯ ನಿಲುವು ತಳೆದವರು ಮಂದಗಾಮಿಗಳೆಂಬ ದೂರಿಗೆ ಗುರಿಯಾದರು. ಹೀಗೆ ಕಾಂಗ್ರೆಸಿನಲ್ಲಿ ಎರಡು ಪಂಗಡಗಳು ಬೆಳೆದು 1907ರಲ್ಲಿ ಸೂರತಿನಲ್ಲಿ ಸೇರಿದ ಅಧಿವೇಶನ ಗೊಂದಲದಲ್ಲಿ ಪರ್ಯವಸಾನವಾಯಿತು. ತೀವ್ರವಾದಿಗಳು ಮಹಾಸಭೆಯನ್ನು ಬಿಟ್ಟರು. ಈ ಎರಡು ಪಂಗಡಗಳ ಮಧ್ಯೆ ರಾಜಿ ಮಾಡಿಸುವುದೇ ಗೋಖಲೆಯವರ ಅಂತಿಮ ಕಾಲದ ಹಂಬಲವಾಗಿತ್ತು.
ದೇಶಾದ್ಯಂತ ಪ್ರಾಥಮಿಕ ವಿದ್ಯಾಭ್ಯಾಸ ವ್ಯಾಪಿಸಿ ಜನಸಾಮಾನ್ಯರ ತಿಳಿವಳಿಕೆ ಮತ್ತು ದಕ್ಷತೆ ಹೆಚ್ಚುವುದರಿಂದಲೇ ದೇಶದ ಸರ್ವತೋಮುಖವಾದ ಅಭ್ಯುದಯವಾದೀತೆಂಬುದು ಗೋಖಲೆಯವರ ದೃಢ ನಂಬಿಕೆ. ಇದಕ್ಕಾಗಿ ಅವರು 1911ರಲ್ಲಿ ಕೇಂದ್ರ ವಿಧಾನ ಮಂಡಲದಲ್ಲಿ ವಿಧೇಯಕವೊಂದನ್ನು ಮಂಡಿಸಿದರು. ಸ್ಥಳೀಯ ಆಡಳಿತ ಪ್ರದೇಶಗಳಲ್ಲಿ ಕಡ್ಡಾಯವೂ ಉಚಿತವೂ ಆದ ಪ್ರಾಥಮಿಕ ವಿದ್ಯಾಭ್ಯಾಸವನ್ನೊದಗಿಸುವ ಅವಕಾಶ, ಇದರ ವೆಚ್ಚದಲ್ಲಿ ಮೂರನೆಯ ಎರಡು ಅಂಶವನ್ನು ಸರ್ಕಾರ ಒದಗಿಸಬೇಕೆಂಬ ನಿರ್ಬಂಧ- ಇವೇ ಮುಂತಾದ ಸಲಹೆಗಳು ಈ ವಿಧೇಯಕದಲ್ಲಿದ್ದುವು. ಆದರೆ ಆಗಿನ ಸರ್ಕಾರ ಇದಕ್ಕೆ ಮನ್ನಣೆ ಕೊಡಲಿಲ್ಲ.
ಗಾಂಧೀಜಿಯವರ ಆಪೇಕ್ಷೆಯ ಮೇರೆಗೆ ಗೋಖಲೆಯವರು 1912ರಲ್ಲಿ ದಕ್ಷಿಣ ಆಫ್ರಿಕಕ್ಕೆ ಭೇಟಿಕೊಟ್ಟರು. ಅಲ್ಲಿದ್ದ ಭಾರತೀಯರು ಅನುಭವಿಸುತ್ತಿದ್ದ ತೊಂದರೆಗಳನ್ನು ಪ್ರತ್ಯಕ್ಷವಾಗಿ ಕಂಡರು. ಅಲ್ಲಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಭಾರತೀಯರ ಕಷ್ಟಗಳ ಪರಿಹಾರಕ್ಕಾಗಿ ಬಹಳ ಪ್ರಯತ್ನ ಮಾಡಿದರು. ಗಾಂಧೀಜಿಯವರೊಂದಿಗೆ ಮೊದಲೇ ಇದ್ದ ಅವರ ಸಂಬಂಧ ಮತ್ತಷ್ಟು ಗಾಢವಾಯಿತು. ಗೋಖಲೆಯವರನ್ನು ಗಾಂಧಿಯವರು ತಮ್ಮ ರಾಜಕೀಯ ಗುರುವೆಂದು ಭಾವಿಸಿದರು.
ವಿದ್ಯಾವಂತ ಭಾರತೀಯರಿಗೆ ಆಡಳಿತದಲ್ಲಿ ಹೆಚ್ಚು ಅವಕಾಶವನ್ನು ಕಲ್ಪಿಸುವ ಪ್ರಶ್ನೆ ಪರಿಶೀಲಿಸಿ ವರದಿ ನೀಡಲು ಬ್ರಿಟಿಷ್ ಸರ್ಕಾರದಿಂದ ನೇಮಿತವಾದ ಇಸ್ಲಿಂಗ್‍ಟನ್ ಆಯೋಗದಲ್ಲಿ (ನೋಡಿ- ಇಸ್ಲಿಂಗ್‍ಟನ್-ಆಯೋಗ) ಗೋಖಲೆಯವರೂ ಒಬ್ಬ ಸದಸ್ಯರಾಗಿದ್ದರು. ದೇಶದ ಮುಖ್ಯ ಪಟ್ಟಣಗಳಲ್ಲಿ ಸಂಚರಿಸಿ ಸಾಕ್ಷ್ಯವನ್ನು ಸಂಗ್ರಹಿಸಿದ ಈ ಆಯೋಗದ ಕಾರ್ಯದಲ್ಲಿ ಗೋಖಲೆಯವರು ಮುಖ್ಯಪಾತ್ರ ವಹಿಸಿದರು. ಅದಕ್ಕಾಗಿ ಬಹಳ ದುಡಿದರು. ಆ ವೇಳೆಗೆ ಹದಗೆಟ್ಟಿದ್ದ ಅವರ ಆರೋಗ್ಯ ಮತ್ತಷ್ಟು ಕೆಟ್ಟಿತು. ಅವರು 1915ರ ಫೆಬ್ರುವರಿ 19ರಂದು ಪುಣೆಯಲ್ಲಿ ತೀರಿಕೊಂಡರು. (ಕೆ,ಎಸ್.ಜಿ.ಆರ್.)
ರಾಜಕಾರಣದಲ್ಲಿ ಉದಾರಮತವಾದಿಯಾಗಿದ್ದ ಗೋಖಲೆಯವರು ತಮ್ಮ ವಿಚಾರಪ್ರತಿಪಾದನೆಗಾಗಿ ಪತ್ರಿಕಾ ಮಾಧ್ಯಮವನ್ನು ಅವರ ಸಮಕಾಲೀನ ಧುರೀಣ ಲೋಕಮಾನ್ಯ ಟಿಳಕರಷ್ಟು ಪ್ರಭಾವಕಾರಿಯಾಗಿ ಬಳಸಲಿಲ್ಲ. ಆದರೂ ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳ ಮೇಲೆ ಅಸಾಧಾರಣ ಪ್ರಭುತ್ವ ಹೊಂದಿದ್ದ ಇವರು ಪ್ರಮುಖ ಪತ್ರಿಕೆಗಳಿಗೆ ಪ್ರೌಢ ವಿಚಾರಪೂರ್ಣ ಲೇಖನಗಳನ್ನು ಬರೆಯುವುದರೊಂದಿಗೆ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದರು. ಲೋಕಮಾನ್ಯ ಟಿಳಕರ ಇಂಗ್ಲಿಷ್ ಸಾಪ್ತಾಹಿಕ ಮರಾಠಾದಲ್ಲಿ 1886-87ರಲ್ಲಿ ಯೂರೋಪಿನಲ್ಲಿಯ ಯುದ್ಧದವಿಷಯದಲ್ಲಿ ಇವರು ಬರೆದ ಲೇಖನಮಾಲೆ ತುಂಬ ಪ್ರಶಂಸೆ ಪಡೆಯಿತು. ಮರಾಠಾ. ಲೋಕಮಾನ್ಯ ಮರಾಠಿ ಪತ್ರಿಕೆಯಾದ ಕೇಸರಿ, ಇವುಗಳ ಪ್ರಾರಂಭಿಕ ವರ್ಷಗಳಲ್ಲಿ ಅವಕ್ಕಾಗಿ ಸಾಕಷ್ಟು ದುಡಿದರು. ಮಹಾರಾಷ್ಟದ ಪ್ರಸಿದ್ಧ ಸಮಾಜಸುಧಾರಕ ಗೋಪಾಲ ಗಣೇಶ ಅಗರಕರರು ಸುಧಾರಕ ಪತ್ರಿಕೆಯನ್ನು ಪ್ರಾರಂಭಿಸಿದಾಗ (1888) ಅದರ ಇಂಗ್ಲಿಷ್ ವಿಭಾಗದ ಸಂಪಾದಕತ್ವವನ್ನು ಗೋಖಲೆಯವರಿಗೆ ವಹಿಸಿಕೊಟ್ಟರು. ಅದೇ ವರ್ಷ ಸಾರ್ವಜನಿಕ ಸಭೆಯ ಕಾರ್ಯದರ್ಶಿಯಾಗಿ ನಿಯುಕ್ತರಾದ ಇವರು ಅದರ ತ್ರೈಮಾಸಿಕದ ಸಂಪಾದಕರೂ ಆದರು. ಮುಂದೆ ಎಂಟು ವರ್ಷಗಳ ಕಾಲ ಇವರು ಅದನ್ನು ನಿರ್ವಹಿಸಿದರು. 1895ರಲ್ಲಿ ರಾಷ್ಟ್ರ ಸಭಾ ಸಮಾಚಾರ ಪತ್ರಿಕೆಯ ಸಂಪಾದಕರೂ ಆಗಿದ್ದರು. ಭಾರತದ ರಾಷ್ಟ್ರೀಯ ಕಾಂಗ್ರೆಸ್ಸು ತನ್ನ ನಿಲುಮೆಯನ್ನು ಬ್ರಿಟಿಷ್ ಜನತೆಗೆ ಪರಿಣಾಮಕಾರಿಯಾಗಿ ತಿಳಿಸುವ ಉದ್ದೇಶದಿಂದ 1905ರಲ್ಲಿ ಇಂಡಿಯ ಎಂಬ ನಿಯತಕಾಲಿಕೆಯನ್ನು ಇಂಗ್ಲೆಂಡಿನಲ್ಲಿ ಪ್ರಕಟಿಸುತ್ತಿತ್ತು. ಅದರಲ್ಲಿ ಆಗ ಕಾಂಗ್ರೆಸ್ಸಿನ ಜೊತೆ ಕಾರ್ಯದಶಿಯಾಗಿದ್ದ ಗೋಖಲೆಯವರ ಪಾತ್ರ ಹಿರಿದಾಗಿತ್ತು.
ಭಾರತದ ಕೇಂದ್ರ ವಿಧಾನಮಂಡಳದ ಲೋಕನಿಯುಕ್ತ ಸದಸ್ಯರಾಗಿದ್ದಾಗ ಗೋಪಾಲಕೃಷ್ಣ ಗೋಖಲೆಯವರು ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಮಹತ್ತ್ವಪೂರ್ಣ ಕಾರ್ಯ ನಿರ್ವಹಿಸಿದರು. 1903ರಲ್ಲಿ ಎ. ಟಿ. ಅರುಂಡೇಲ್ ಅವರು 1889ರ ಗೋಪ್ಯಗೋಪನ ಕಾಯಿದೆಗೆ ತಿದ್ದುಪಡಿ ಮಂಡಿಸಿ ಅನೇಕ ನಾಗರಿಕ ವಿಷಯಗಳನ್ನು ಅದರಲ್ಲಿ ಸಮಾವೇಶಗೊಳಿಸಿದರು. ಯಾರಿಂದಲೊ ದೂರು ಬಂದಾಗಲೂ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪೊಲೀಸರಿಗೆ ದೊರಕಿಸಿಕೊಡುತ್ತಿದ್ದ ಇದನ್ನು ಗೋಖಲೆಯವರು ಕಟುವಾಗಿ ವಿರೋಧಿಸುತ್ತ, ಇದು ಪರಿಣಾಮತಃ ಪತ್ರಿಕಾ ಸ್ವಾತಂತ್ರ್ಯವನ್ನೇ ಹರಣ ಮಾಡುತ್ತದೆಂದರಲ್ಲದೆ, ವೃತ್ತಪತ್ತಿಕೆಗಳೂ ಒಂದು ಅರ್ಥದಲ್ಲಿ ಸಕಾರದಂತೆಯೇ ಲೋಕಹಿತದ ಹೊಣೆ ಹೊತ್ತ ವಿಶ್ವಸ್ತ ಎನ್ನಬಹುದೆಂದು ವಾದಿಸಿದರು. ಈ ದಬ್ಬಾಳಿಕೆಯ ಕಾಯಿದೆಯನ್ನು ಮನ್ನಿಸುವುದೆಂದರೆ ಪತ್ರಿಕೆಗಳ ಸ್ವಾತಂತ್ರ್ಯದ ಮೇಲೆ ಗದೆಯೆತ್ತಿದಂತೆ ಎಂದು ಅವರು ಎಚ್ಚರಿಸಿದರು. ಆದರೆ ವಿಧಾನ ಮಂಡಲದಲ್ಲಿ ಸರ್ಕಾರಕ್ಕೆ ಬಹುಮತವಿದ್ದುದರಿಂದ ತಿದ್ದುಪಡಿ ಸ್ವೀಕೃತವಾಯಿತು. ಮುಂದೆ 1910ರಲ್ಲಿ ಸರ್ಕಾರ ಪತ್ರಿಕಾ ವಿಧೇಯಕವನ್ನು ಮಂಡಿಸಿದಾಗ ಗೋಖಲೆಯವರು ಅದನ್ನು ಪ್ರತ್ಯಕ್ಷವಾಗಿ ವಿರೋಧಿಸಲಿಲ್ಲವಾದರೂ ತಮ್ಮ ವರ್ಚಸ್ಸನ್ನುಪಯೋಗಿಸಿ, ಮೂಲತಃ ಅದರಲ್ಲಿ ಅಡಕವಾಗಿದ್ದ ಕಠಿಣಕ್ರಮಗಳು ಹೆಚ್ಚು ಸೌಮ್ಯಗೊಳ್ಳುವಂತೆ ಮತ್ತು ಭಾರತೀಯರ ಒಡೆತನಕ್ಕೆ ಸೇರಿದ್ದ ಪತ್ರಿಕೆಗಳಿಗೆ ಮಾತ್ರ ಸೀಮಿತವಾಗಿದ್ದ ಅದರ ವ್ಯಾಪ್ತಿ ಬ್ರಿಟಿಷ್ ಒಡೆತನದಲ್ಲಿದ್ದವುಗಳನ್ನೊಳಗೊಂಡು ಎಲ್ಲ ಪತ್ರಿಕೆಗಳಿಗೂ ವಿಸ್ತರಿಸುವಂತೆ ಪ್ರಯತ್ನಿಸಿ ಯಶಸ್ವಿಯಾದರು. (ಎಂ.ಎನ್.ಎಂಎ.)