ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಪಾಲನಾಯಕ
ಗೋಚರ
ಗೋಪಾಲನಾಯಕ - 1295 - 1315 ಅಲ್ಲಾವುದ್ದೀನನ ದರ್ಬಾರಿನಲ್ಲಿದ್ದ ಸುಪ್ರಸಿದ್ಧ ಗಾಯಕ ಮತ್ತು ಕವಿ. ಮೂಲತಃ ದೇವಗಿರಿಯವ. ಅಲ್ಲಾವುದ್ದೀನನ ಸೇನಾಪತಿ ಮಲಿಕ್ ಕಾಫೂರ್ ದಕ್ಷಿಣದ ದಂಡಯಾತ್ರೆ ಕೈಕೊಂಡ ಸಮಯದಲ್ಲಿ ಈತನ ಸಂಗೀತಕ್ಕೆ ಮನಸೋತು ದೆಹಲಿಗೆ ಮರಳುವಾಗ ಈತನನ್ನು ತನ್ನ ಜೊತೆ ಕರೆದುಕೊಂಡು ಹೋದನೆನ್ನಲಾಗಿದೆ.
ನಾಯಕ ಕದಂಭಕಮ್ ರಾಗದಲ್ಲಿನ ತಾಲವರ್ಣಗಳ ಮತ್ತು ಗ್ರಹಸ್ವರ ಪ್ರಬಂಧಮ್‍ಗಳ ಕರ್ತೃ. ದಾಕ್ಷಿಣಾತ್ಯ ಸಂಗೀತದಲ್ಲಿ ಮಹಾವಿದ್ವಾಂಸನೆಂದು ಈತನನ್ನು ಸಂಗೀತ ಶಾಸ್ತ್ರಜ್ಞನಾದ ವೆಂಕಟಮುಖಿ ಹೊಗಳಿದ್ದಾನೆ. ಪರ್ಷಿಯನ್ ಸಂಗೀತಜ್ಞ ಅಮೀರ್ ಖುಸ್ರು ಈತನ ಸಂಗೀತ ನೈಪುಣ್ಯವನ್ನು ಕಂಡು ಬೆರಗಾದನಂತೆ, ಒಂದು ವಾರ ಪರ್ಯಂತ ಬಿಡದೆ ಗೋಪಾಲನಾಯಕನ ಹಿಂದೆ ಅವಿತುಕೊಂಡು ಸಂಗೀತವನ್ನು ಆಲಿಸಿದ ಖುಸ್ರು ಎಂಟನೆಯ ದಿನ ಹುಬೇಹೂದ್ ಆತನಂತೆಯೇ ಹಾಡಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದನೆಂದು ಪ್ರತೀತಿ. ಅನಂತರ ಅಮೀರ್ ಖುಸ್ರು ಮತ್ತು ಗೋಪಾಲನಾಯಕರಿಬ್ಬರೂ ಪರಮ ಮಿತ್ರರಾದರು. *