ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಯಾ, ಇ ಲೂಸ್ಯಾನ್ ದಾ

ವಿಕಿಸೋರ್ಸ್ ಇಂದ
Jump to navigation Jump to search

1746-1828. ಸ್ಪೇನಿನ ವರ್ಣಚಿತ್ರ ಕಲಾವಿದ ಹಾಗೂ ಕೆತ್ತನೆ ಕಲೆಯಲ್ಲಿ ನಿಷ್ಣಾತನೆನಿಸಿದವ. ಸರಗೋಸ ಬಳಿಯ ಫ್ಯುನ್ಡೆ ಟೊಡೋಸ್ನಲ್ಲಿ 30 ಮಾರ್ಚ್ 1746ರಂದು ಜನಿಸಿದ. ಈತ ಚಿತ್ರಿಸಿರುವ ಬೃಹತ್ ಪ್ರಮಾಣದ ಚಿತ್ರಗಳು ಆ ಕಾಲದ ರಾಜಕೀಯ, ಸಾಮಾಜಿಕ ರಂಗಗಳಲ್ಲಿ ಉಂಟಾದ ಮಹತ್ತ್ವಪೂರ್ಣ ಬದಲಾವಣೆಗಳನ್ನು ರೂಪಿಸುತ್ತವೆಯಲ್ಲದೆ ಸಮಕಾಲೀನ ಜೀವನದ ನಾನಾ ಮುಖಗಳನ್ನು ಪ್ರತಿಮಿಸುತ್ತವೆ.


ಗೋಯಾ ಸರಗೋಸದಲ್ಲಿ ತನ್ನ ಚಿತ್ರ ಕಲೆಯನ್ನು ಆರಂಭಿಸಿದ. ಈತನ ಮೊದಲ ಗುರು ಜೋಸೆ ಲುಕ್ಸಾನ್. 1763ರಲ್ಲಿ ಮ್ಯಾಡ್ರಿಡ್ಗೆ ಹೋಗಿ ಅಲ್ಲಿ ಫ್ರಾನ್ಸಿಸ್ಕೊ ಬೇ ಎಂಬಾತನ ಬಳಿ ಶಿಷ್ಯವೃತ್ತಿ ಕೈಗೊಂಡ. ಅನಂತರ 1773ರಲ್ಲಿ ಆತನ ಸೋದರಿ ಜೋಸೆಫಳನ್ನು ವಿವಾಹವಾದ. ಅಲ್ಲಿಂದ ಮುಂದೆ ಇಟಲಿ, ರೋಮ್ಗಳಿಗೆ ಹೋದ. 1771ರಲ್ಲಿ ಸರಗೋಸದ ಕತೀಡ್ರಲಿನಲ್ಲಿ ಭಿತ್ತಿಚಿತ್ರಣವನ್ನು ಕೈಗೊಂಡ. ಇವು ಬರೋಖ್-ರೊಕೊಕೊ ಶೈಲಿಯಲ್ಲಿವೆ. ಮ್ಯಾಡ್ರಿಡ್ನಲ್ಲಿದ್ದ ಕಲಾವಿದ ಜಿ.ಬಿ.ಟೈಪೋಲೊನ ಕೃತಿಗಳ ಪ್ರಭಾವವನ್ನಿಲ್ಲಿ ಕಾಣಬಹುದು.


1780ರಲ್ಲಿ ಗೋಯಾ ಸಾನ್ ಫರ್ನಾಂಡೊ ಅಕಾಡೆಮಿಯ ಸದಸ್ಯನಾಗಿ ಅವಿರೋಧವಾಗಿ ಆಯ್ಕೆಗೊಂಡ. 1785ರಲ್ಲಿ ಅದೇ ಅಕಾಡೆಮಿಯ ಉಪನಿರ್ದೇಶಕನಾದ. ಮರುವರ್ಷ ಮೂರನೆಯ ಚಾಲ್ರ್ಸ್‌ನ ಆಸ್ಥಾನದಲ್ಲಿ ಚಿತ್ರಗಾರನಾಗಿ ನೇಮಕಗೊಂಡ. ಇದರಿಂದ ಹೆಚ್ಚಿನ ಕೀರ್ತಿಪ್ರತಿಷ್ಠೆಗಳು ಲಭಿಸಿದವು. 1788ರಲ್ಲಿ, ಎಂದರೆ ಫ್ರಾನ್ಸಿನ ಮಹಾಕ್ರಾಂತಿಗೆ ಕೆಲವು ತಿಂಗಳು ಮೊದಲೇ, ದೊರೆ ಮೂರನೆಯ ಚಾಲ್ರ್ಸ್‌ ತೀರಿಕೊಂಡ. 1795ರಲ್ಲಿ, ಹೊಸ ರಾಜನಾದ ನಾಲ್ಕನೆಯ ಚಾಲ್ರ್ಸ್‌ನ ಆಳಿಕೆಯಲ್ಲಿ, ಗೋಯಾ ಅಕಾಡೆಮಿಯ ನಿರ್ದೇಶಕನಾದ. ಎರಡು ವರ್ಷಗಳ ತರುವಾಯ ತನ್ನ ಅನಾರೋಗ್ಯದ ನಿಮಿತ್ತ ನಿರ್ದೇಶಕ ಪದವಿಗೆ ರಾಜೀನಾಮೆ ನೀಡಿದ.


1792ರಲ್ಲಿ ತೀವ್ರಸ್ವರೂಪದ ಕಾಯಿಲೆಗೆ ತುತ್ತಾದದ್ದರಿಂದ ಗೋಯಾನ ಶ್ರವಣ ಶಕ್ತಿ ತೀರ ಕುಂಠಿತವಾಯಿತು. ಆದರೂ ಈತನ ಕಲಾಪ್ರೌಢಿಮೆ ಮಾತ್ರ ಅತಿಶಯವಾಗಿ ಬೆಳೆಯಿತು. ಪ್ರತಿಭೆ ಮತ್ತು ವಿಮರ್ಶನ ಬುದ್ಧಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮೇಳೈಸಿದುವು. 1800ರ ಆರಂಭಿಕ ವರ್ಷದಲ್ಲಿ ಸ್ಪೇನ್ ದೇಶ ನೆಪೋಲಿಯನ್ ಯುದ್ಧಗಳಲ್ಲಿ ಭಾಗಿಯಾಗಿತ್ತು. ಆ ಕಾಲದಲ್ಲಿ ಸ್ಪೇನಿಗರು ಅನುಭವಿಸಿದ ಕಷ್ಟನಿಷ್ಠುರಗಳನ್ನು ತನ್ನ ಎರಡು ಮಹಾಚಿತ್ರಗಳಾದ ದಿ ಸೆಕೆಂಡ್ ಆಫ್ ಮೇ ಮತ್ತು ಷೂಟಿಂಗ್ಗಳಲ್ಲಿ ಗೋಯಾ ಅದ್ಭುತವಾಗಿ ಚಿತ್ರಿಸಿದ್ದಾನೆ. ಈ ಚಿತ್ರಗಳಲ್ಲಿ ಮಾನವನಿಂದ ಸಹಮಾನವನಿಗೆ ಆಗುತ್ತಿರುವ ಕ್ರೌರ್ಯಗಳ ಪ್ರಖರ ಚಿತ್ರಣವಿದೆ.


ಗೋಯಾನ ಇತರ ಕಲಾಕೃತಿಗಳಾದ ದಿ ಫ್ಯಾಮಿಲಿ ಆಫ್ ಚಾಲ್ರ್ಸ್‌ 4 (1800) ಹಾಗೂ ಏಕೈಕ ನಗ್ನಚಿತ್ರ ಮಜಾ (ಸು. 1800-05) ಎಂಬವು ಉಲ್ಲೇಖನಾರ್ಹವಾದವು. ಸ್ಪೇನಿನ ಮೇಲೆ ಫ್ರೆಂಚರು ನಡೆಸಿದ ದುರಾಕ್ರಮಣವನ್ನೂ ಯುದ್ಧದ ಕರಾಳ ಸ್ವರೂಪವನ್ನೂ ದಿ ಕ್ಯಾಪ್ರೈಸಿಸ್ (1799) ಮತ್ತು ಡಿಸಾಸ್ಟರ್ಸ್‌ ಆಫ್ ವಾರ್ಗಳಲ್ಲಿ (1810-20) ಅತ್ಯಂತ ಮನೋಜ್ಞವಾಗಿ ಚಿತ್ರಿಸಲಾಗಿದೆ.


ಏಳನೆಯ ಫರ್ಡಿನೆಂಡನ ಆಳ್ವಿಕೆಯಲ್ಲಿ ಗೋಯಾಗೆ ಸ್ಪೇನಿನಲ್ಲಿ ಜೀವನ ನಡೆಸುವುದೇ ಅಸಹ್ಯಕರವಾಗಿ ತೋರಿತು. ಹಾಗಾಗಿ ಈತ ರಾಜನ ಅಪ್ಪಣೆ ಪಡೆದು ಪ್ಯಾರಿಸಿಗೆ ಹೋದ. ಅಲ್ಲಿ ಈತನಿಗೆ ಯುಕ್ತ ಮನ್ನಣೆ ದೊರಕಿತು. ಕೆಲಕಾಲ ಅಲ್ಲಿದ್ದು ಅನಂತರ ಬೋರ್ಡೋಗೆ ಹೋಗಿ ನೆಲಸಿದ. ಏಪ್ರಿಲ್ 16, 1828ರಂದು ಅಲ್ಲೇ ತೀರಿಕೊಂಡ.