ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೌರಮ್ಮ, ಕೊಡಗಿನ

ವಿಕಿಸೋರ್ಸ್ದಿಂದ

ಕೊಡಗಿನ ಗೌರಮ್ಮ : - 1912-1939. ಕನ್ನಡದಲ್ಲಿ ಹೆಸರಾಂತ ಕಥೆಗಾರ್ತಿ. ಹುಟ್ಟಿದ್ದು, ಮಡಿಕೇರಿಯಲ್ಲಿ. ಮನೆತನ ಹವ್ಯಕ ಬ್ರಾಹ್ಮಣರದ್ದು. ತಂದೆ ರಾಮಯ್ಯ, ತಾಯಿ ನಂಜಕ್ಕ. ಗೌರಮ್ಮ ತುಂಬ ಜಾಣೆ. ಮಡಿಕೇರಿಯ ಶಾಲೆಯಲ್ಲಿ ಓದಿದಳು. ಆಗ ಅಲ್ಲಿ ಕಾಲೇಜು ಇರಲಿಲ್ಲವಾಗಿ ಓದು ಮುಂದಕ್ಕೆ ನಡೆಯಲಿಲ್ಲ. 1928 ರಲ್ಲಿ ಬಳಗದಲ್ಲೆ, ಬಿ.ಟಿ. ಗೋಪಾಲಕೃಷ್ಣ ಎಂಬುವರಿಗೆ ಕೊಟ್ಟು ಮದುವೆಯಾಯಿತು. ಈತ ತಮ್ಮ ಬುಂಧುಗಳಾದ ಮಂಜನಾಥಯ್ಯನವರ ಕಾಫಿ ತೋಟದಲ್ಲಿ ಮ್ಯಾನೇಜರಾಗಿದ್ದರು ; ಈಗಲೂ (1973)ಅಲ್ಲೇ ಇದ್ದಾರೆ. 1931ರಲ್ಲಿ ಈ ದಂಪತಿಗಳಿಗೆ ಒಂದು ಗಂಡು ಮಗು ಆಯಿತು. ಮನೆ ಕೆಲಸ ಯಾವುದನ್ನೂ ಅಲಕ್ಷ್ಯ ಮಾಡದೆ, ಬಿಡುವಿನ ವೇಳೆಯಲ್ಲೆಲ್ಲ ಗೌರಮ್ಮ ಪುಸ್ತಕಗಳನ್ನು ಓದತೊಡಗಿದಳು. ಕಥೆಗಳನ್ನು ಬರೆಯತೊಡಗಿದಳು. ಮೊದಲಲ್ಲಿ ಪ್ರಕಟವಾದ ಕಥೆಯಲ್ಲಿ ಲೇಖಕಿಯ ಹೆಸರು ಮಿಸೆಸ್ ಬಿ.ಟಿ.ಜಿ. ಕೃಷ್ಣ ಎಂದಿತ್ತು. ಮನುವಿನ ರಾಣಿ ಎಂಬ ಆ ಕಥೆ ಈಕೆ ಶ್ರೇಷ್ಠ ಕತೆಗಾರ್ತಿ ಎನ್ನುವುದನ್ನು ಸಿದ್ಧಾಂತ ಮಾಡಿತು. ಬಾಳನ್ನು ನೋಡಲು ಬಲ್ಲ ಕಣ್ಣು, ಸಹಾನುಭೂತಿಯ ಮನಸ್ಸು, ಸಹಜವಾದ ಕಥನ, ಸರಳವಾದ ಭಾಷೆ, ಕಥನದಲ್ಲಿ ಕ್ರಮ, ಮಿತ-ಇವೆಲ್ಲವನ್ನು ಅದರಲ್ಲಿ ಸಾಕಷ್ಟು ಗುರುತಿಸಬಹುದು. ಗೌರಮ್ಮನವರ ಆಮೇಲಣ ಕಥೆಗಳಲ್ಲಿ ಈ ಗುಣಗಳು ಬೆಳೆದವು. ಅಲ್ಲಿ ಇಲ್ಲಿ ಪ್ರಕಟವಾದ ಈ ಕಥೆಗಳನ್ನು ಸೇರಿಸಿ ಪುಸ್ತಕವಾಗಿ ಪ್ರಕಟಿಸಲು ಧಾರವಾಡದ ಪ್ರಕಾಶಕ ದತ್ತಾತ್ರೇಯ ಕುಲಕರ್ಣಿಯವರು ಹವಣಿಸಿದರು. ಆ ಪುಸ್ತಕ ಹೊರಬರುವ ಮುನ್ನವೇ ಗೌರಮ್ಮ ಒಂದು ದಿನ ತಮ್ಮ ಮನೆಯ ಬದಿಯ ಹೊಳೆಯಲ್ಲಿ ಈಜುಹೋಗಿದ್ದವರು ನೀರಲ್ಲಿ ಮುಳುಗಿ ತೀರಕೊಂಡರು. ಚಿಗುರು ಎಂಬ ಹೆಸರಿನಿಂದ ಪ್ರಕಟವಾಗಬೇಕೆಂದು ಉದ್ದೇಶಿಸಿ ಆಕೆಯ ಪುಸ್ತಕವನ್ನು ಮಿತ್ರರು ಕಂಬನಿ ಎಂದು ಹೆಸರಿಸಿ ಪ್ರಕಟಿಸಿದರು.

ಗೌರಮ್ಮನವರು ಹೊಸಕಾಲದ ಉನ್ನತ ಪ್ರೇರಣೆಗಳಿಗೆ ಮನತೆತ್ತ ಉದೀರ್ಣ ಚೇತನ. ಮಹಾತ್ಮ ಗಾಂಧೀ ಕೊಡಗಿನ ಪ್ರವಾಸದಲ್ಲಿ ಮಂಜನಾಥಯ್ಯನವರ ಅತಿಥಿಯಾಗಿ ಬಂದಾಗ, ಸತ್ಯಾಗ್ರಹಮಾಡಿ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇಶಸೇವೆಯ ನಿಧಿಗಾಗಿ ತಮ್ಮ ಒಡವೆಯನ್ನೆಲ್ಲ ಗೌರಮ್ಮ ಮುಡುಪಾಗಿ ಕೊಟ್ಟರು-ಎಂಬ ಸಂಗತಿಯನ್ನು ಇಲ್ಲಿ ನೆನೆಯಬಹುದು.

(ಎಂ.ವಿ.ಐ.)