ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ಯಾಸ್ಟ್ರೋಟ್ರೈಕ
ಗ್ಯಾಸ್ಟ್ರೋಟ್ರೈಕ - ಆಸ್ಕೆಲ್‍ಮಿಂಥೀಸ್ ದುಂಡುಹುಳು ವಿಭಾಗಕ್ಕೆ ಸೇರಿದ ಒಂದು ವರ್ಗ. ಇದರಲ್ಲಿ ಸುಮಾರು 200 ಪ್ರಭೇದಗಳಿವೆ. ಇವೆಲ್ಲವೂ ಸೂಕ್ಷ್ಮ ಗಾತ್ರದ ಅಕಶೇರುಕಗಳು. ಸಿಹಿನೀರು ಮತ್ತು ಉಪ್ಪು ನೀರಿನಲ್ಲಿ ಜೀವಿಸುತ್ತವೆ. ದೇಹ ನೀಳಾಕಾರದ್ದು. ಇದರಲ್ಲಿ ವಲಯವಿಭಜನೆಯಿಲ್ಲ. ದೇಹದ ಹಿಂಭಾಗದಲ್ಲಿ ಇಬ್ಭಾಗವಾದ ಬಾಲವಿದೆ. ಬಾಲದಲ್ಲಿರುವ ಗ್ರಂಥಿಗಳು ಸ್ರವಿಸುವ ದ್ರವದ ಸಹಾಯದಿಂದ ಈ ಪ್ರಾಣಿಗಳು ಆಸರೆಗಳಿಗೆ ಅಂಟುತ್ತವೆ. ದೇಹದ ಕೆಳಭಾಗದಲ್ಲಿ ನೀಳವಾದ ಶಿಲಕೆಗಳ ಪಟ್ಟೆಗಳಿವೆ. ಇವು ಪ್ರಾಣಿಗಳ ಚಲನೆಗೆ ನೆರವಾಗುತ್ತವೆ. ದೇಹದ ಮೇಲ್ಭಾಗದ ಪಾರದರ್ಶಕ ಕ್ಯೂಟಿಕಲ್ ಪೊರೆಯ ಮೇಲೆ ಅನೇಕ ಬಿರುಗೂದಲುಗಳಿವೆ. ದೇಹಾಂತರಾವಕಾಶ ಮಿಥ್ಯಾಸ್ವರೂಪದ್ದು. ದೇಹದ ಮುಂದಿನ ತುದಿಯಲ್ಲಿ ಬಾಯಿದೆ. ಇದರ ಸುತ್ತ ಸೂಕ್ಷ್ಮವಾದ ಮತ್ತು ಸಂವೇದನಶಕ್ತಿಯುಳ್ಳ ಕೂದಲಿನಂಥ ರಚನೆಗಳಿವೆ. ನೀರಿನಲ್ಲಿ ಬೆಳೆಯುವ ಸೂಕ್ಷ್ಮಜೀವಿಗಳೇ ಇವುಗಳ ಆಹಾರ. ಉಪ್ಪುನೀರಿನಲ್ಲಿ ವಾಸಿಸುವ ಪ್ರಭೇದಗಳು ದ್ವಿಲಿಂಗಿಗಳು. ಆದರೆ ಸಿಹಿನೀರುವಾಸಿಗಳು ಏಕಲಿಂಗಿಗಳು ಹಾಗೂ ಇವುಗಳಲ್ಲಿ ಹೆಣ್ಣುಗಳು ಮಾತ್ರ ಕಂಡುಬರುತ್ತವೆ. ಇದರಿಂದ ಇವುಗಳಲ್ಲಿ ಪಿತೃರಹಿತ ಪ್ರಜನನಕ್ರಿಯೆ ಮಾತ್ರ ನಡೆಯುತ್ತವೆ. ಈ ಗುಂಪಿನ ಪ್ರಾಣಿಗಳಲ್ಲಿನ ಮೊಟ್ಟೆಗಳ ಹೊರಕವಚ ಗಟ್ಟಿಯಾಗಿದ್ದು ಇತರ ವಸ್ತುಗಳಿಗೆ ಅಂಟಿಕೊಳ್ಳಲು ಸಹಾಯಕವಾಗುವ ರಚನೆಗಳನ್ನು ಪಡೆದಿವೆ. ಇವುಗಳ ಜೀವನಚರಿತ್ರೆಯಲ್ಲಿ ರೂಪಪರಿವರ್ತನೆಯಿಲ್ಲ.
ಗ್ಯಾಸ್ಟ್ರೋಟ್ರೈಕದಲ್ಲಿ ಮ್ಯಾಕ್ರೊಡಸಿಯಾಯ್ಡಿಯ ಮತ್ತು ಕೀಟೊನಾಯ್ಡಿಯ ಎಂಬ ಎರಡು ಉಪವರ್ಗಗಳಿವೆ. ಮ್ಯಾಕ್ರೊಡಸಿಸ್ ಮತ್ತು ಕೆಫಲೊಡಸಿಸ್ ಮೊದಲನೆಯ ಉಪವರ್ಗಕ್ಕೆ ಉದಾಹರಣೆಗಳಾದರೆ ಕೀಟೋನೋಟಸ್ ಮತ್ತು ನಿಯೋಡಸಿಸ್ ಎರಡನೆಯ ಉಪವರ್ಗಕ್ಕೆ ಉದಾಹರಣೆಗಳು. (ಪಿ.ಎಸ್.ಆರ್.)