ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರಹಣ, ಖಗೋಳೀಯ

ವಿಕಿಸೋರ್ಸ್ ಇಂದ
Jump to navigation Jump to search

ಗ್ರಹಣ, ಖಗೋಳೀಯ - ಒಂದು ಆಕಾಶಕಾಯ ಇನ್ನೊಂದು ಆಕಾಶ ಕಾಯದ ನೆರಳಿನಿಂದ ಆಂಶಿಕವಾಗಿ ಇಲ್ಲವೇ ಪೂರ್ಣವಾಗಿ ಅಸ್ಫುಟವಾಗುವಿಕೆ (ಎಕ್ಲಿಪ್ಸ್, ಸೆಲೆಸ್ಟಿಯಲ್). ಗ್ರಹಣಕ್ಕೆ ಒಳಗಾಗುವ ಕಾಯ ಸ್ವಯಂಪ್ರಭಾಯುತವಾಗಿದ್ದು ಅಪಾರ ಕಾಯವೊಂದರ ನೆರಳಿನಿಂದ ಅಸ್ಫುಟವಾಗುವುದು ಒಂದು ಬಗೆಯ ಗ್ರಹಣ; ಬದಲು ಅದು ಪ್ರತಿಫಲಿತ ಬೆಳಕಿನಿಂದ ಹೊಳೆಯುವುದಾಗಿದ್ದು ಅಪಾರ ಕಾಯವೊಂದು ಇದಕ್ಕೂ ಇದರ ಬೆಳಕಿನ ಆಕರಕ್ಕೂ ನಡುವೆ ಸರಿಯುವಾಗ ಅಸ್ಫುಟವಾಗುವುದು ಇನ್ನೊಂದು ಬಗೆಯ ಗ್ರಹಣ. ಮೊದಲನೆಯ ಪ್ರರೂಪದ ಗ್ರಹಣಕ್ಕೆ ಆಚ್ಛಾದನೆ (ಅಕ್ಕಲ್ಟೇಷನ್) ಎಂದು ಹೆಸರು. ಇದಕ್ಕೆ ಸೂರ್ಯಗ್ರಹಣ ಮತ್ತು ನಕ್ಷತ್ರಗ್ರಹಣ ನಿದರ್ಶನಗಳು. ಸೂರ್ಯಗ್ರಹಣದಲ್ಲಿ ವೀಕ್ಷಕನಿಗೂ ಸೂರ್ಯನಿಗೂ ನಡುವೆ ಚಂದ್ರ ಸರಿಯುತ್ತದೆ. ನಕ್ಷತ್ರಗ್ರಹಣದಲ್ಲಾದರೋ ವೀಕ್ಷಕನಿಗೂ ನಕ್ಷತ್ರಕ್ಕೂ ನಡುವೆ ಚಂದ್ರ ಇಲ್ಲವೇ ಒಂದು ಗ್ರಹ ಸರಿಯುತ್ತದೆ. ಗ್ರಹಣಕಾರಕ ಯಮಳ ನಕ್ಷತ್ರಗಳು (ಎಕ್ಲಿಪ್ಸಿಂಗ್ ಬೈನರಿ ಸ್ಟಾರ್ಸ್) ಕೂಡ ಈ ಬಗೆಯ ಗ್ರಹಣಕ್ಕೆ ನಿದರ್ಶನಗಳು. ಎರಡನೆಯ ಪ್ರರೂಪದ ಗ್ರಹಣಕ್ಕೆ ಚಂದ್ರ ಗ್ರಹಣ ಅದರಂತೆಯೇ ಗ್ರಹಗಳ ಉಪಗ್ರಹಗಳ ಗ್ರಹಣಗಳು ಕೂಡ ಉದಾಹರಣೆಗಳು. ರೂಢಿಯಲ್ಲಿ ಗ್ರಹಣ ಎನ್ನುವ ಪದದ ಬಳಕೆ ಭೂಮಿಯಿಂದ ಕಾಣುವಂತೆ ಸೂರ್ಯ ಮತ್ತು ಚಂದ್ರಗ್ರಹಣಗಳನ್ನು ಕುರಿತ ಉಂಟು. ಪ್ರಸಕ್ತ ಲೇಖನದಲ್ಲಿ ಇವೆರಡು ಗ್ರಹಣಗಳ ಸವಿವರ ನಿರೂಪಣೆ ಇದೆ. ಗ್ರಹಣಕಾರಕ ಯಮಳ ನಕ್ಷತ್ರಗಳನ್ನು ಕುರಿತ ವಿವರಣೆಗೆ (ನೋಡಿ- ಗ್ರಹಣಕಾರಕ-ಯಮಳ-ನಕ್ಷತ್ರಗಳು). ಇದಲ್ಲದೆ ಶುಕ್ರ ಮತ್ತು ಬುಧ, ಸೂರ್ಯನ ಮುಂದೆ ಹಾದುಹೋಗುವ ಅಪೂರ್ವ ಘಟನೆಗಳನ್ನು ಸಂಕ್ರಮ (ಖಿಡಿಚಿಟಿsiಣ) ಎಂದು ಕರೆಯಲಾಗಿದೆ.

ಸೂರ್ಯ ಮತ್ತು ಚಂದ್ರಗ್ರಹಣಗಳು : ಭೂಮಿ ಸ್ವಂತಾಕ್ಷದ ಸುತ್ತ ಆವರ್ತಿಸುತ್ತ ಮತ್ತು ಸೂರ್ಯನ ಸುತ್ತ ಪರಿಭ್ರಮಿಸುತ್ತ ಇರುವ ಒಂದು ಅಪಾರ ಕಾಯ ; ಚಂದ್ರ ಸ್ವಂತಾಕ್ಷದ ಸುತ್ತ ಆವರ್ತಿಸುತ್ತ ಮತ್ತು ಭೂಮಿಯ ಸುತ್ತ ಪರಿಭ್ರಮಿಸುತ್ತ ಇರುವ ಇನ್ನೊಂದು ಅಪಾರ ಕಾಯ. ಭೂಮಿ ಸಾಗುವ ಕಕ್ಷಾತಲ ಖಗೋಳವನ್ನು ಛೇದಿಸುವ ಮಹಾವೃತ್ತಕ್ಕೆ ಕ್ರಾಂತಿವೃತ್ತ (ನೋಡಿ- ಕ್ರಾಂತಿ-ವೃತ್ತ) ಎಂದು ಹೆಸರು. ಈ ಮಹಾವೃತ್ತದ ಮೇಲೆ ಭೂಮಿಯ ಸುತ್ತ ಸೂರ್ಯ ಪರಿಭ್ರಮಿಸುತ್ತಿರುವಂತೆ ಭೂಮಿಯ ಮೇಲಿನ ವೀಕ್ಷಕನಿಗೆ ಭಾಸವಾಗುವುದು. ಚಂದ್ರನ ಕಕ್ಷಾತಲ ಖಗೋಳವನ್ನು ಇನ್ನೊಂದು ಮಹಾವೃತ್ತದಲ್ಲಿ ಛೇದಿಸುತ್ತದೆ. ಈ ಮಹಾವೃತ್ತದ ಮೇಲೆ ಭೂಮಿಯ ಸುತ್ತ ಚಂದ್ರ ಪರಿಭ್ರಮಿಸುತ್ತಿರುವಂತೆ ಭೂಮಿಯ ಮೇಲಿನ ವೀಕ್ಷಕನಿಗೆ ಭಾಸವಾಗುವುದು. ಕ್ರಾಂತಿವೃತ್ತತಲವೂ ಚಂದ್ರಕಕ್ಷಾವೃತ್ತತಲವೂ ಎರಡು ಬಿಂದುಗಳಲ್ಲಿ (ಓ, ಓ) ಪರಸ್ಪರ ಸಂಧಿಸುತ್ತವೆ ; ಇವೆರಡು ತಲಗಳೂ ಪರಸ್ಪರ 50 8 ಗಳಷ್ಟು ಬಾಗಿಕೊಂಡಿವೆ. ಓ ಮತ್ತು ಓ ಬಿಂದುಗಳಿಗೆ ಪಾತ ಬಿಂದುಗಳು ಅಥವಾ ಸರಳವಾಗಿ ಪಾತಗಳು (ನೋಡ್ಸ್) ಎಂದು ಹೆಸರು. ಚಿತ್ರ(3)ರಲ್ಲಿ ಇ ಭೂಮಿ ; ಓಒಓಒಒ ಚಂದ್ರಕಕ್ಷೆ ; ಓSಓS ಕ್ರಾಂತಿವೃತ್ತ (ಸೂರ್ಯ ಕಕ್ಷೆ). ಚಂದ್ರ ಮತ್ತು ಸೂರ್ಯರು ಆಯಾ ಕಕ್ಷೆಯ ಮೇಲೆ ಅನುರೂಪ ಕಕ್ಷಾವೇಗಗಳಿಂದ ಸಂಚರಿಸುತ್ತಿರುವಾಗ ಭೂಮಿಯ ಮತ್ತು ಚಂದ್ರನ ನೆರಳುಗಳು ನಿರಂತರ ಚಲನೆಯಲ್ಲಿರುತ್ತವೆ. ಮಾತ್ರವಲ್ಲ ವಾಸ್ತವಿಕವಾಗಿ ಈ ಮೂರು ಕಾಯಗಳ ವಿನ್ಯಾಸಗಳೂ ನಡುವಿನ ಅಂತರಗಳೂ ಬದಲಾಗುತ್ತಲೇ ಇರುವುದರಿಂದ ನೆರಳುಗಳ ಗಾತ್ರಗಳು ಕೂಡ ಬದಲಾಗುತ್ತಲೇ ಇರುತ್ತವೆ. ನಿರಂತರವಾಗಿ ನಡೆಯುತ್ತಿರುವ ಈ ವಿದ್ಯಮಾನದಲ್ಲಿ ಚಂದ್ರನ ನೆರಳು ಭೂಮಿಯ ಮೇಲೆ ಪತನವಾದಾಗ ಸೂರ್ಯಗ್ರಹಣ ಸಂಭವಿಸುವುದು ; ಹಾಗೆಯೇ ಭೂಮಿಯ ನೆರಳು ಚಂದ್ರನ ಮೇಲೆ ಪತನವಾದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರಕಕ್ಷೆ ಕ್ರಾಂತಿವೃತ್ತಕ್ಕಿಂತ ಭಿನ್ನವಾಗಿರುವುದರಿಂದ ಹಾಗೂ ಚಂದ್ರ ಮತ್ತು ಸೂರ್ಯರ ಕಕ್ಷಾವೇಗಗಳು ಭಿನ್ನವಾಗಿರುವುದರಿಂದ ಗ್ರಹಣಗಳು ಪದೇ ಪದೇ ಸಂಭವಿಸುವ ಘಟನೆಗಳಲ್ಲ, ವಿರಳಘಟನೆಗಳು. ಚಿತ್ರ(1)ನ್ನು ಇಲ್ಲವೇ ಚಿತ್ರ(2)ನ್ನು ಗಮನಿಸಿ ಒಂದು ಅಂಶವನ್ನು ಖಾತ್ರಿ ಮಾಡಿಕೊಳ್ಳಬಹುದು: ಸೂರ್ಯ ಮತ್ತು ಚಂದ್ರ ಎರಡೂ ಪಾತಬಿಂದುಗಳ ಸನಿಹದಲ್ಲಿರುವಾಗ ಮಾತ್ರ ಗ್ರಹಣ ಸಂಭಾವ್ಯ. ಸೂರ್ಯ ಗ್ರಹಣವಾದರೆ ಚಂದ್ರ ಮತ್ತು ಸೂರ್ಯ ಭೂಮಿಯಿಂದ ಒಂದೇ ದಿಶೆಯಲ್ಲಿ ಇರುವುದರಿಂದ ಅವುಗಳ ರೇಖಾಂಶಗಳು ಸಮ. ಆದ್ದರಿಂದ ಅಂದು ಅಮಾವಾಸ್ಯೆಯೂ ಹೌದು. ಚಂದ್ರಗ್ರಹಣವಾದರೆ ಚಂದ್ರ ಮತ್ತು ಸೂರ್ಯ ಭೂಮಿಯಿಂದ ವಿರುದ್ಧ ದಿಶೆಗಳಲ್ಲಿ ಇರುವುದರಿಂದ ಅವುಗಳ ರೇಖಾಂಶ ವ್ಯತ್ಯಾಸ 1800 ಆದ್ದರಿಂದ ಅಂದು ಹುಣ್ಣಿಮೆಯೂ ಹೌದು. ಹೀಗೆ ಗ್ರಹಣಗಳು ಚಂದ್ರ ಮತ್ತು ಸೂರ್ಯರು ಪಾತ ಬಿಂದುಗಳ ಸಮೀಪವಿರುವ ಅಮಾವಾಸ್ಯೆ ಇಲ್ಲವೇ ಹುಣ್ಣಿಮೆ ದಿವಸಗಳಂದು ಮಾತ್ರ ಸಂಭವಿಸುತ್ತವೆ. ಈ ಷರತ್ತುಗಳ ಪೈಕಿ ಯಾವುದೇ ಒಂದು ಪೂರೈಕೆ ಆಗದಿದ್ದರೆ ಗ್ರಹಣ ಸಂಭವಿಸುವುದಿಲ್ಲ.

ಕ್ರಾಂತಿವೃತ್ತತಲದ ಮೇಲೆಯೇ ಚಂದ್ರಕಕ್ಷೆಯೂ ಇದ್ದಿದ್ದರೆ ಪ್ರತಿ ಅಮಾವಾಸ್ಯೆಯಂದು ಸೂರ್ಯಗ್ರಹಣವೂ ಪ್ರತಿ ಹುಣ್ಣಿಮೆಯಂದು ಚಂದ್ರಗ್ರಹಣವೂ ಆಗುತ್ತಿದ್ದುವು. ಹೀಗಾಗದಿರುವುದಕ್ಕೆ ಮುಖ್ಯಕಾರಣಗಳು ಎರಡು : ಒಂದು, ಚಂದ್ರಕಕ್ಷಾತಲ ಕ್ರಾಂತಿವೃತ್ತತಲಕ್ಕೆ ಬಾಗಿಕೊಂಡಿರುವುದು ; ಎರಡು, ಪಾತಬಿಂದುಗಳ ಹಿನ್ನಡೆ (ರಿಟ್ರೊಗ್ರೇಡ್ ಮೋಷನ್). ಇವು ವಾರ್ಷಿಕವಾಗಿ 200 ಗಳಷ್ಟು ಪ್ರದಕ್ಷಿಣ ದಿಶೆಯಲ್ಲಿ ಸಂಚರಿಸುತ್ತ ಸುಮಾರು 18 ವರ್ಷಗಳಿಗೊಮ್ಮೆ ಮೊದಲಿನ ಸ್ಥಾನಗಳನ್ನು ಐದುತ್ತವೆ. ಈ ಕಾರಣಗಳಿಂದಲೆ ಪ್ರತಿ ಅಮಾವಾಸ್ಯೆ (ಚಂದ್ರ ಮತ್ತು ಸೂರ್ಯರ ರೇಖಾಂಶ ವ್ಯತ್ಯಾಸ ಶೂನ್ಯವಾಗುವ ಘಟನೆ) ಮತ್ತು ಹುಣ್ಣಿಮೆಗಳಂದು (ರೇಖಾಂಶ ವ್ಯತ್ಯಾಸ 1800 ಆಗುವ ಘಟನೆ) ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದಿಲ್ಲ ಅಥವಾ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದಿಲ್ಲ ಮತ್ತು ಗ್ರಹಣಗಳು ಸಂಭವಿಸುವುದಿಲ್ಲ. ಇದರ ಪರಿಣಾಮವೆಂದರೆ ಯಾವುದಾದರೂ ಒಂದು ವರ್ಷದಲ್ಲಿ ಆಗಬಹುದಾದ ಗ್ರಹಣಗಳ ಒಟ್ಟು ಸಂಖ್ಯೆ ಏಳಕ್ಕಿಂತ ಹೆಚ್ಚಾಗಿರುವುದಿಲ್ಲ ಮತ್ತು ಎರಡೇ ಎರಡರಷ್ಟು ಕಡಿಮೆಯಾಗಿರಬಹುದು. ಗರಿಷ್ಠ ಸಂಖ್ಯೆಯಾದ ಏಳರಲ್ಲಿ ಐದು ಸೂರ್ಯ ಗ್ರಹಣಗಳು ಮತ್ತು ಎರಡು ಚಂದ್ರಗ್ರಹಣಗಳು ; ಇಲ್ಲವೇ ನಾಲ್ಕು ಸೂರ್ಯಗ್ರಹಣಗಳು ಮತ್ತು ಮೂರು ಚಂದ್ರಗ್ರಹಣಗಳು ಇವೆ. ಕನಿಷ್ಠ ಸಂಖ್ಯೆಯಾದ ಎರಡರಲ್ಲಿ ಎರಡೂ ಸೂರ್ಯಗ್ರಹಣಗಳೇ. ಅಂದಮಾತ್ರಕ್ಕೆ ಯಾವುದೇ ಒಂದು ಸ್ಥಳದಲ್ಲಿರುವ ವೀಕ್ಷಕನಿಗೆ ಇವೆಲ್ಲವೂ ಕಾಣಲೇಬೇಕೆಂದೇನೂ ಇಲ್ಲ. ಭೂಮಿಯ ಮೇಲಿನ ಒಂದು ಸ್ಥಳದಿಂದ ಕಾಣಬಹುದಾದ ಗ್ರಹಣ ಮತ್ತು ಅದರ ವಿನ್ಯಾಸ (ಆಂಶಿಕವೋ ಪೂರ್ಣವೋ ಎಂಬ ಅಂಶ) ಗ್ರಹಣ ಸಂಭವಿಸುವಾಗ ಆ ಸ್ಥಳದ ಸ್ಥಾನವನ್ನು (ಅಂದರೆ ಅಕ್ಷಾಂಶ ರೇಖಾಂಶಗಳನ್ನು) ಅವಲಂಬಿಸಿ ಇವೆ. ಚಂದ್ರಗ್ರಹಣ : ಭೂಮಿಯ ಸೂರ್ಯವಿಮುಖ ಪಾಶ್ರ್ವದಲ್ಲಿ ಶಂಕ್ವಾಕಾರದ ನೆರಳು ಉಂಟಾಗಿರುತ್ತದೆ. ಚಿತ್ರ(4)ರಲ್ಲಿ ಈ ದೃಶ್ಯದ ಅಡ್ಡಕೊಯ್ತವನ್ನು ಕಾಣಿಸಿದೆ. ಇಲ್ಲಿ S, ಇ, ಒ ಅನುಕ್ರಮವಾಗಿ ಸೂರ್ಯಕೇಂದ್ರ, ಭೂಮಿಕೇಂದ್ರ ಮತ್ತು ಚಂದ್ರಕೇಂದ್ರ. ಂಆ, ಃಅ ಸೂರ್ಯ ಮತ್ತು ಚಂದ್ರಬಿಂಬಗಳಿಗೆ ಎಳೆದ ನೇರ ಸಾಮಾನ್ಯ ಸ್ಪರ್ಶರೇಖೆಗಳು. ಅವು ಉಯಲ್ಲಿ ಸಂಧಿಸುತ್ತವೆ. ಂಅಏ, ಃಆಐ ಈ ಬಿಂಬಗಳಿಗೆ ಎಳೆದ ಅಡ್ಡ ಸಾಮಾನ್ಯ ಸ್ಪರ್ಶರೇಖೆಗಳು. ಅವು ಈನಲ್ಲಿ ಸಂಧಿಸುತ್ತವೆ. ಅಉಆ ಸೂರ್ಯನ ಬೆಳಕಿನಿಂದಾದ ಭೂಮಿಯ ನೆರಳಿನ ಶಂಕು. ಈ ಭಾಗದಲ್ಲಿ ಸೂರ್ಯನ ಬೆಳಕು ಸ್ವಲ್ಪವೂ ಕಾಣಿಸುವುದಿಲ್ಲ. ಇದಕ್ಕೆ ಭೂಮಿಯ ನೆರಳಿನ ಶಂಕು ಅಥವಾ ದಟ್ಟ ನೆರಳಿನ ಶಂಕು (ಅಂಬ್ರ) ಎಂದು ಹೆಸರು. ಏಅಉ ಮತ್ತು ಐಆಉ ವಲಯದಲ್ಲಿ ಭಾಗಶಃ ನೆರಳಿರುತ್ತದೆ. ಇದಕ್ಕೆ ಅರೆನೆರಳಿನ ಶಂಕು (ಪಿನಂಬ್ರ) ಎಂದು ಹೆಸರು. ಈ ವಲಯದಿಂದ ನೋಡುವಾತನಿಗೆ ಸೂರ್ಯನ ಕೆಲವು ಭಾಗ ಮಾತ್ರ ಕಾಣುವುದಷ್ಟೆ. ಉಳಿದ ಭಾಗವನ್ನು ಭೂಮಿ ಮರೆ ಮಾಡಿರುತ್ತದೆ. ಚಿಜಛಿb ವೃತ್ತ ಭೂಮಿಯ ಸುತ್ತು ಇರುವ ಚಂದ್ರನ ಕಕ್ಷೆಯನ್ನು ಸೂಚಿಸುವುದು.

ಸೂರ್ಯ, ಭೂಮಿ ವ್ಯಾಸಗಳನ್ನೂ ಅವುಗಳ ಕೇಂದ್ರಗಳ ನಡುವಿನ ಸರಾಸರಿ ಅಂತರವನ್ನೂ ತೆಗೆದುಕೊಂಡು ಲೆಕ್ಕ ಹಾಕಿದರೆ ಶಂಕ್ವಾಕಾರದ ದಟ್ಟ ನೆರಳಿನ ಉದ್ದ ಭೂವ್ಯಾಸದ ಸುಮಾರು 108 ಪಾಲು ದೊಡ್ಡದು ಎಂದು ತಿಳಿಯುವುದು. ಅಂದರೆ ದಟ್ಟ ನೆರಳಿನ ಶೃಂಗ ಉ ಭೂಕೇಂದ್ರದಿಂದ ಸರಾಸರಿ ಸುಮಾರು 858,000 ಮೈಲಿಗಳಷ್ಟು ದೂರದಲ್ಲಿರುತ್ತದೆ. ಚಂದ್ರ ಮತ್ತು ಭೂ ಕೇಂದ್ರಗಳ ನಡುವಿನ ಅಂತರ ಭೂ ವ್ಯಾಸದ ಸುಮಾರು 30 ರಷ್ಟು ಉಂಟು. ಇದು ಸರಾಸರಿ ಸುಮಾರು 239,000 ಮೈಲಿಗಳೆನ್ನಬಹುದು. ಆದ್ದರಿಂದ ಭೂಮಿಯ ಉಪಗ್ರಹವಾದ ಚಂದ್ರ ಭೂಮಿ ತನ್ನ ಹಿಂದ ಕೆಡೆಯುವ ದಟ್ಟ ನೆರಳಿನ ಶಂಕುವಿನ ಮೂಲಕ ಹಾದುಹೋಗುವ ಸಂಭಾವ್ಯತೆ ಉಂಟು. ದಟ್ಟ ನೆರಳಿನ ಭಾಗದ ಒತ್ತಿಗೆ ಅರೆನೆರಳಿನ ಭಾಗಗಳು ಇವೆ. ಆದ್ದರಿಂದ ಚಂದ್ರ ದಟ್ಟ ನೆರಳಿನ ಭಾಗವನ್ನು ಪ್ರವೇಶಿಸುವ ಮುನ್ನ ಮತ್ತು ಅದನ್ನು ಹಾದು ಹೋದ ತರುವಾಯ ಅರೆನೆರಳಿನ ಭಾಗದ ಮೂಲಕ ಹೋಗಲೇಬೇಕು.

ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತ ಸಂಚರಿಸುವಾಗ ಭೂಮಿಯ ನೆರಳಿನೊಳಕ್ಕೆ ಬಂದರೆ ಆಗ ಚಂದ್ರಗ್ರಹಣವಾಗುತ್ತದೆ. ಈ ಗ್ರಹಣವಾಗಬೇಕಾದರೆ ಸೂರ್ಯ ಭೂಮಿ ಮತ್ತು ಚಂದ್ರ ಇವು ಮೂರೂ ಸುಮಾರಾಗಿ ಒಂದೇ ಸರಳ ರೇಖೆಯಲ್ಲಿರಬೇಕು. ಚಂದ್ರ ತನ್ನ ಪಥದ ಒಂದು ಪಾತಬಿಂದುವಿನಲ್ಲೋ (ರಾಹು ಇಲ್ಲವೆ ಕೇತು) ಇಲ್ಲವೇ ಅದರ ಹತ್ತಿರವೋ ಇದ್ದು ಸೂರ್ಯನೊಂದಿಗೆ ವಿಯುತಿಯಲ್ಲಿದ್ದರೆ (ಅಪೊಸಿಷನ್) ಅಂದರೆ ಹುಣ್ಣಿಮೆಯಾಗಿದ್ದರೆ ಆಗ ಚಂದ್ರ ಗ್ರಹಣವಾಗುತ್ತದೆ. ಚಂದ್ರಪಥ ನೇರವಾಗಿ ದಟ್ಟ ನೆರಳಿನ ಮಧ್ಯೆ ಹಾದು ಹೋಗಬಹುದು ಇಲ್ಲವೇ ಸ್ವಲ್ಪ ಮೇಲೆ ಅಥವಾ ಕೆಳಗೆ ಹೋಗಬಹುದು. ಇವು ಪಾತರೇಖೆಯ ವಿನ್ಯಾಸವನ್ನು ಅವಲಂಬಿಸಿರುತ್ತವೆ. ಚಿತ್ರ(4)ರಲ್ಲಿ ಚಂದ್ರ ಭೂಮಿಯ ದಟ್ಟ ನೆರಳಿನೊಳಗಿದ್ದು ಪೂರ್ಣಚಂದ್ರಗ್ರಹಣವಾಗಿರುವುದನ್ನು ತೋರಿಸಲಾಗಿದೆ. ಅರೆನೆರಳಿನ ಮೂಲಕ ಚಂದ್ರ ಹಾದು ಹೋಗುವಾಗ ಚಂದ್ರ ಬಿಂಬಿಸುವ ಬೆಳಕು ಸ್ವಲ್ಪ ಮಂಕಾಗಬಹುದು. ದಟ್ಟ ನೆರಳಿನ ಹತ್ತಿರ ಹೋದ ಹಾಗೆಲ್ಲ ಈ ಬೆಳಕು ಕಡಿಮೆಯಾಗುತ್ತ ಹೋಗಿ ಆ ಭಾಗವನ್ನು ಪ್ರವೇಶಿಸುತ್ತಿರುವಾಗ ಚಂದ್ರನ ಸ್ವಲ್ಪ ಭಾಗಕ್ಕೆ ಬೆಳಕು ಕಡಿದುಹೋದ ಹಾಗಾಗುತ್ತದೆ. ಇದಕ್ಕೆ ಚಂದ್ರನ ಪಾಶ್ರ್ವಗ್ರಹಣ ಎಂದು ಹೆಸರು. ದಟ್ಟ ನೆರಳಿನ ಭಾಗದಲ್ಲಿ ಪೂರ್ತ ಮುಳುಗಿದರೆ ಚಂದ್ರನ ಪೂರ್ಣಗ್ರಹಣವಾಗುತ್ತದೆ. ಚಂದ್ರ್ರ ತನ್ನ ಪಥದಲ್ಲಿ ಮುಂದುವರಿದಂತೆ ಪೂರ್ಣ ಗ್ರಹಣವು ಪಾಶ್ರ್ವಗ್ರಹಣವಾಗಿ ಮೋಕ್ಷಗೊಂಡು ಅರೆನೆರಳಿನ ಭಾಗದಲ್ಲಿ ಮುಳುಗಿ ಹೊರಬರುತ್ತದೆ. ಪೂರ್ಣಗ್ರಹಣವಾಗುವುದಕ್ಕೆ ಮುಂಚೆ ಮತ್ತು ಆದ ಮೇಲೆ ಪಾಶ್ರ್ವಗ್ರಹಣವಾಗುತ್ತದೆ ಎಂಬುದನ್ನು ಗಮನಿಸಬೇಕು. ಭೂಮಿಯ ದಟ್ಟ ನೆರಳಿನ ಭಾಗವನ್ನು ಚಂದ್ರ ಸ್ಪರ್ಶಿಸಿ ಮುಂದಕ್ಕೆ ಸರಿದಾಗ ಮಾತ್ರ ಚಂದ್ರಗ್ರಹಣವಾಗಿದೆ ಎನ್ನುತ್ತಾರೆ. ಅರೆ ನೆರಳಿನ ಭಾಗದಲ್ಲಿದ್ದಾಗ ಆಗುವ ಗ್ರಹಣಕ್ಕೆ ಜನರು ಅಷ್ಟೇನೂ ಪ್ರಾಮುಖ್ಯ ನೀಡುವುದಿಲ್ಲ. ಅದನ್ನು ಆಸಕ್ತಿಯಿಂದ ವೀಕ್ಷಿಸುವುದೂ ಇಲ್ಲ. ಭೂಮಿಯನ್ನು ಚಂದ್ರ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತಿರುವುದರಿಂದ ಗ್ರಹಣವಾಗುವಾಗ ಚಂದ್ರನ ಪೂರ್ವಭಾಗದಲ್ಲಿ ಸ್ಪರ್ಶವೂ ಪಶ್ಚಿಮ ಭಾಗದಲ್ಲಿ ಮೋಕ್ಷವೂ ಆಗುತ್ತವೆ. ಭೂಮಿಯಿಂದಾದ ನೆರಳಿನ ಸೀಳ್ನೋಟವನ್ನು ಮತ್ತು ಗ್ರಹಣವಾಗುವಾಗ ಚಂದ್ರ ವಿವಿಧ ಭಾಗಗಳಲ್ಲಿರುವುದನ್ನು ಚಿತ್ರ(5)ರಲ್ಲಿ ತೋರಿಸಿದೆ. ಚಂದ್ರ ಕ್ಷಿತಿಜಕ್ಕಿಂತ ಮೇಲಿದ್ದಾಗ ಗ್ರಹಣವಾದರೆ ಅದನ್ನು ನೋಡಲು ಸಾಧ್ಯವಾಗುವ ಭೂಮಿಯ ಮೇಲಿನ ಭಾಗ ಹೆಚ್ಚು. ಇದು ಭೂಮಿಯ ಮೇಲ್ಮೈಯ ಸುಮಾರು ಅರ್ಧಕ್ಕಿಂತ ಹೆಚ್ಚು ಭಾಗಗಳಿಂದ ಕಾಣಿಸುತ್ತದೆ. ಅದೂ ಅಲ್ಲದೆ ಎಲ್ಲ ಕಡೆಗಳಿಂದಲೂ ಒಂದೇ ತರಹ ಗ್ರಹಣ ಕಾಣಿಸುತ್ತದೆ.

ಪಾತರೇಖೆಯ ವಿನ್ಯಾಸವನ್ನು ಅನುಸರಿಸಿ ಗ್ರಹಣವನ್ನು ವಿಭಾಗಿಸಬಹುದು.

1 ಅರೆನೆರಳಿನ ಗ್ರಹಣ : ಭೂಮಿಯ ದಟ್ಟ ನೆರಳಿನ ಭಾಗವನ್ನು ಮುಟ್ಟದೆಯೇ ಚಂದ್ರ ಹೊರಗೆ ಬರುವುದು. 2 ಪಾಶ್ರ್ವಗ್ರಹಣ : ಅರೆ ನೆರಳಿನ ಮೂಲಕ ಹೋಗಿ ದಟ್ಟ ನೆರಳಿನ ಕೆಲ ಭಾಗವನ್ನು ಹಾದು ಹೊರಕ್ಕೆ ಬರುವುದು.

ಪೂರ್ಣಗ್ರಹಣ : ದಟ್ಟ ನೆರಳಿನ ಮಧ್ಯೆ ಅಥವಾ ಅಂಚಿನಲ್ಲಿ ಪೂರ್ತಿ ಮುಳುಗಿ ಹೊರಗೆ ಬರುವುದು.

ದಟ್ಟ ನೆರಳಿನ ಮಧ್ಯೆ ನೇರ ಹಾದು ಹೋಗುವಾಗ ಚಂದ್ರಗ್ರಹಣ ಕಾಣಿಸುವ ಗರಿಷ್ಠ ಕಾಲಾವಧಿ ಸುಮಾರು 2 ಗಂಟೆಗಳು. ದಟ್ಟ ನೆರಳಿನ ಸುತ್ತ ಆವರಿಸಿರುವ ಅರೆ ನೆರಳಿನ ಭಾಗವನ್ನೂ ಗಣನೆಗೆ ತೆಗೆದುಕೊಂಡರೆ ಗ್ರಹಣದ ಗರಿಷ್ಠ ಕಾಲಾವಧಿ ಸುಮಾರು 4 ಗಂಟೆಗಳು. ಆದ್ದರಿಂದ ಚಂದ್ರಗ್ರಹಣವನ್ನು ಬಹಳ ಹೊತ್ತು ನೋಡವುದಕ್ಕಾಗುತ್ತದೆ. ಯಾವುದಾದರೂ ಒಂದು ವರ್ಷದಲ್ಲಾಗುವ ಒಟ್ಟು ಚಂದ್ರಗ್ರಹಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಅದರಲ್ಲಿ ಪೂರ್ಣ ಚಂದ್ರಗ್ರಹಣಗಳೇ ಹೆಚ್ಚಾಗಿ ಆಗುತ್ತವೆ. ಪೂರ್ಣ ಚಂದ್ರಗ್ರಹಣವಾದ ಕೆಲವು ಸಂದರ್ಭಗಳಲ್ಲಿ ಗ್ರಹಣವಾದ ಚಂದ್ರನ ಮೇಲ್ಮೈ ಹೊಳಪಿನಿಂದ ಇರಬೇಕಾಗಿದ್ದುದು ಭೂಮಿಯ ಮೇಲಾದ ವಿಪ್ಲವದಿಂದ ಮಂಕಾಗಿ ಕಂಡುದೂ ಉಂಟು. 1884ರ ಅಕ್ಟೋಬರ್ 4ರಲ್ಲಿ ಚಂದ್ರಗ್ರಹಣವಾದಾಗ ಜ್ವಾಲಾಮುಖಿ ಒಗೆದ ದೂಳು ಮತ್ತು ಬೂದಿಯಿಂದ ಭೂಮಿಯ ವಾತಾವರಣ ಆವರಿಸಲ್ಪಟ್ಟಿದ್ದರಿಂದ ಚಂದ್ರನ ಮೇಲೆ ಗ್ರಹಣ ಕಾಲದಲ್ಲಿ ಬಹಳ ಕತ್ತಲು ಮೂಡಿತ್ತು. ಇದೇ ರೀತಿಯಲ್ಲಿ 1902, 1913 ಮತ್ತು 1950 ರಲ್ಲೂ ಆಯಿತು.

ಸೂರ್ಯಗ್ರಹಣ : ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತ ಪರಿಭ್ರಮಿಸುತ್ತಿರುವಾಗ ಭೂಮಿಗೂ ಸೂರ್ಯನಿಗೂ ನಡುವೆ ಬಂದರೆ ಆಗ ಸೂರ್ಯ ಗ್ರಹಣವಾಗುತ್ತದೆ. ಇದು ಸಂಭವಿಸಬೇಕಾದರೆ ಸೂರ್ಯ, ಚಂದ್ರ, ಭೂಮಿ ಇವು ಮೂರು ಸುಮಾರಾಗಿ ಒಂದೇ ಸರಳರೇಖೆಯಲ್ಲಿರಬೇಕು. ಚಂದ್ರ ತನ್ನ ಕಕ್ಷೆಯ ಪಾತ ಬಿಂದುವಿನಲ್ಲೋ ಇಲ್ಲವೆ ಅದರ ಹತ್ತಿರವೋ ಇದ್ದು ಸೂರ್ಯನೊಂದಿಗೆ ಯುತಿಯಲ್ಲಿದ್ದರೆ (ಕಂಜಂಕ್ಷನ್) ಅಂದರೆ ಅಮಾವಾಸ್ಯೆಯಾಗಿದ್ದರೆ ಆಗ ಸೂರ್ಯಗ್ರಹಣವಾಗುತ್ತದೆ. ಸೂರ್ಯ ಮತ್ತು ಭೂಮಿಗಳಿಂದಾದ ಶಂಕುವಿನ (ಚಿತ್ರ 9) ಅಂಚಾದ bಛಿಯನ್ನೂ ಪಾತ ಬಿಂದುವಿನ ಹತ್ತಿರವಿರುವ ಅಮಾವಾಸ್ಯೆಯ ಚಂದ್ರ ಸ್ಪರ್ಶಿಸಿ ತನ್ನ ಕಕ್ಷೆಯಲ್ಲಿ ಮುಂದಕ್ಕೆ ಸರಿಯುವುದಕ್ಕೆ ಆರಂಭಿಸಿದರೆ ಸೂರ್ಯನಿಂದ ಬರುವ ಬೆಳಕಿಗೆ ಅಡ್ಡಿ ಬಂದು ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು ಸೂರ್ಯಗ್ರಹಣವಾಗುತ್ತದೆ. b ಯಿಂದ ಚಿಯ ವರೆಗಿರುವ ಕಕ್ಷಾ ಭಾಗದಲ್ಲಿ ಚಂದ್ರ ಪಶ್ವಿಮದಿಂದ ಪೂರ್ವಕ್ಕೆ ಚಲಿಸುವಾಗ ಸೂರ್ಯನ ಕಡೆಗಿರುವ ಭೂಮಿಯ ಮೇಲೆ ಕೆಲವು ಭಾಗಗಳಲ್ಲಿ ಒಂದಲ್ಲ ಒಂದು ವಿಧವಾದ ಸೂರ್ಯಗ್ರಹಣ ಕಾಣಿಸುತ್ತದೆ. ಸೂರ್ಯಗ್ರಹಣವಾಗುವಾಗ ಸೂರ್ಯನನ್ನು ಚಂದ್ರ ಪಶ್ಚಿಮ ಭಾಗದಿಂದ ಮುಚ್ಚಿ ಪೂರ್ವ ಭಾಗದಿಂದ ದೂರ ಸರಿಯುತ್ತದೆ. ಈಗ ಭೂಮಿ-ಸೂರ್ಯ ದೂರ (150,000,000 ಕಿ.ಮಿ) ಭೂಮಿ-ಚಂದ್ರ ದೂರದ (384,000 ಕಿ.ಮಿ) ಸುಮಾರು 390 ಪಟ್ಟು ದೊಡ್ಡದು. ಹೀಗಾಗಿ, ಗಾತ್ರದಲ್ಲಿ ಚಂದ್ರನಿಗಿಂತ ಅದೆಷ್ಟೋ ಪಟ್ಟು ದೊಡ್ಡದಾದ ಸೂರ್ಯ (ಸೂರ್ಯ ಚಂದ್ರರ ವ್ಯಾಸಗಳ ನಿಷ್ಪತ್ತಿ 400:1) ಸರಿಸುಮಾರಾಗಿ ಚಂದ್ರಬಿಂಬದಷ್ಟೇ ಗಾತ್ರದ ಬಿಂಬವಾಗಿ ತೋರುವುದು. ಸೂರ್ಯನ ಬೆಳಕನ್ನು ತಡೆಯುವ ಚಂದ್ರನ ಛಾಯಾ ಶಂಕು ಚಿತ್ರ(8)ರಲ್ಲಿ ತೋರಿಸುವಂತೆ ಬಲು ಕಿರಿದಾದದ್ದು, ಸೂರ್ಯ ಮತ್ತು ಚಂದ್ರರನ್ನು ಸೂಚಿಸುವ ಂಃ ಮತ್ತು Pಕಿ ಗಳಿಗೆ ಎಳೆದಿರುವ ಸ್ಪರ್ಶರೇಖೆಗಳು ದಟ್ಟ ನೆರಳಿನ ಶಂಕು ಮತ್ತು ಅರೆನೆರಳಿನ ಭಾಗಗಳನ್ನು ರಚಿಸುತ್ತವೆ. ಭೂಮಿಯ ಮೇಲಿರುವ ದಟ್ಟ ನೆರಳಿನ ಶೃಂಗವಾದ ಖಿ ಬಿಂದುವಿನಲ್ಲಿ ಚಂದ್ರನ ದೃಗ್ವ್ಯಾಸ (ಸುಮಾರು 0.50) ಸೂರ್ಯನ ದೃಗ್ವ್ಯಾಸದಷ್ಟೇ ಇರುವ ಹಾಗೆ ಕಾಣಿಸುತ್ತದೆ. ಆದ್ದರಿಂದ ಸೂರ್ಯನನ್ನು ಚಂದ್ರ ಪೂರ್ತಿ ಮುಚ್ಚಿ ಆ ಜಾಗಕ್ಕೆ ಸೂರ್ಯ ಕಾಣಿಸುವುದೇ ಇಲ್ಲ. ಅಲ್ಲಿ ಸೂರ್ಯನ ಪೂರ್ಣ ಗ್ರಹಣವಾಗಿರುತ್ತದೆ. ಆದರೆ ಅದೇ ಸಂದರ್ಭದಲ್ಲಿ ಚಂದ್ರನ ಅರೆನೆರಳಿನಲ್ಲಿರುವ ಭೂಮಿಯ ಮೇಲಿರುವ ಖ ಎಂಬ ಸ್ಥಳದಲ್ಲಿ ಸೂರ್ಯನನ್ನು ಚಂದ್ರ ಪಾಶ್ರ್ವವಾಗಿ ಮುಚ್ಚಿರುತ್ತದೆ. ಆದ್ದರಿಂದ ಅಂಥ ಸ್ಥಳಗಳಲ್ಲಿ ಸೂರ್ಯನ ಪಾಶ್ರ್ವಗ್ರಹಣವಾಗುವುದು. ಭೂಮಿಯ ಮೇಲಿರುವ ಐ ಮತ್ತು ಒ ಅಥವಾ ಅವುಗಳಾಚೆ ಇರುವ ಸ್ಥಳಗಳಿಂದ ನೋಡಿದರೆ ಸೂರ್ಯನ ಯಾವ ಭಾಗವೂ ಚಂದ್ರನಿಂದ ಅಡ್ಡಿಯಾಗುವುದಿಲ್ಲ. ಅಲ್ಲಿ ಗ್ರಹಣವೇ ಇಲ್ಲ. ಈ ಚಿತ್ರದಿಂದ ಒಂದು ವಿಷಯ ವ್ಯಕ್ತವಾಗುತ್ತದೆ. ಯಾವುದಾದರೂ ಒಂದು ಕಾಲದಲ್ಲಿ ಭೂಮಿಯ ವಿವಿಧ ಭಾಗಗಳಿಂದ ಚಂದ್ರ ಒಂದೇ ದೂರದಲ್ಲಿರುವುದಿಲ್ಲ. ಇದರಿಂದ ಚಂದ್ರನ ದೃಗ್ವ್ಯಾಸ ಒಂದೊಂದು ಕಡೆ ಒಂದೊಂದು ರೀತಿ ಇರುವುದು. ಪರಿಣಾಮವಾಗಿ ಗ್ರಹಣವಾಗುವ ರೀತಿಯಲ್ಲೂ ವ್ಯತ್ಯಾಸವಾಗುತ್ತದೆ. ಗ್ರಹಣವಾಗುವ ದಿಕ್ಕಿಗಿರುವ ಭೂಮಿಯ ಎಲ್ಲ ಸ್ಥಳಗಳಲ್ಲೂ ಗ್ರಹಣ ಕಾಣಿಸುವುದಿಲ್ಲ ಮತ್ತು ಕಂಡರೆ ಒಂದೇ ರೀತಿಯಾಗೂ ಕಾಣಿಸುವುದಿಲ್ಲ.

ಸೂರ್ಯಗ್ರಹಣವಾಗುವಾಗ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ದೂರದಲ್ಲಿದ್ದು ಭೂಮಿಗೆ ಸೂರ್ಯ ಅತ್ಯಂತ ಹತ್ತಿರದಲ್ಲಿದ್ದರೆ, ಆಗ ಚಂದ್ರನ ದಟ್ಟ ನೆರಳಿನ ಶಂಕುವಿನ ಶೃಂಗ ಭೂಮಿಯಿಂದ ಸುಮಾರು 20,000 ಮೈ, ಗಳ ದೂರದಲ್ಲಿದ್ದು ಭೂಮಿಯನ್ನು ಮುಟ್ಟುವುದೇ ಇಲ್ಲ. ಆ ಸಂದರ್ಭದಲ್ಲಿ ಚಂದ್ರನ ದೃಗ್ವ್ಯಾಸ ಸೂರ್ಯನಿಗಿಂತ ಸುಮಾರು 2 40" ಗಳಷ್ಟು ಕಡಿಮೆಯಾಗಿರುತ್ತದೆ. ಚಿತ್ರ(12)ರಲ್ಲಿ ದಟ್ಟ ನೆರಳಿನ ಶಂಕುವಿನ ಶೃಂಗ ಭೂಮಿಯಿಂದ ಹೊರಕ್ಕೆ ಇರುವ ದೃಶ್ಯವನ್ನು ಕಾಣಿಸಿದೆ. ಆಗ ಸೂರ್ಯ-ಚಂದ್ರ ರೇಖೆಯ ಮೇಲಿರುವ ಭೂಮಿಯ ಭಾಗದಿಂದ ನೋಡುವವರಿಗೆ ಸೂರ್ಯನ ಮಧ್ಯಗ್ರಹಣ ಕಾಲದಲ್ಲಿ ಸೂರ್ಯನ ಅಂಚಿನಲ್ಲಿರುವ ಭಾಗವನ್ನು ಚಂದ್ರನಿಗೆ ಮುಚ್ಚುವುದಕ್ಕಾಗದೆ ಮಧ್ಯ ಭಾಗವನ್ನೆಲ್ಲ ಮರೆಮಾಡಿ ಅಂಚಿನಲ್ಲಿ ಕಂಕಣ ಅಥವಾ ಉಂಗುರಾಕಾರದ ಬೆಳಕು ಪ್ರಕಾಶಿಸುತ್ತಿರುವುದು ಕಾಣುತ್ತದೆ. ಈ ವಿದ್ಯಮಾನಕ್ಕೆ ಸೂರ್ಯನ ಕಂಕಣ ಗ್ರಹಣ ಎಂದು ಹೆಸರು. ಕಂಕಣದ ಗಾತ್ರ ಭೂಮಿಯಿಂದ ಚಂದ್ರನಿಗಿರುವ ದೂರವನ್ನು ಅವಲಂಬಿಸಿ ಉಂಟು. ಭೂಮಿಯ ಮೇಲಿನ ಈ ಭಾಗವನ್ನು ಬಿಟ್ಟು ಉಳಿದ ಅರೆ ನೆರಳಿನ ಭಾಗದಿಂದ ನೋಡುವವರಿಗೆ ಸೂರ್ಯನ ಪಾಶ್ರ್ವಗ್ರಹಣ ಕಾಣಿಸುತ್ತದೆ. ಸೂರ್ಯಗ್ರಹಣವಾಗುವಾಗ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಹತ್ತಿರದಲ್ಲಿದ್ದು ಅದೇ ಸಂದರ್ಭದಲ್ಲಿ ಸೂರ್ಯ ಭೂಮಿಗೆ ಅತ್ಯಂತ ದೂರದಲ್ಲಿದ್ದರೆ ಚಂದ್ರನ ದೃಗ್ವ್ಯಾಸ ಸೂರ್ಯನಿಗಿಂತ ಸುಮಾರು 2 38"ಗಳಷ್ಟು ಹೆಚ್ಚಿರುತ್ತದೆ. ಇದು ಸೂರ್ಯನ ಪೂರ್ಣಗ್ರಹಣಕ್ಕೆ ಬಹಳ ಅನುಕೂಲ ಸಂದರ್ಭ. ಆಗ ಚಂದ್ರನ ದಟ್ಟ ನೆರಳಿನ ಶಂಕು ಭೂಮಿಯನ್ನು ವರ್ತುಳಾಕಾರವಾಗಿ ಛೇದಿಸುತ್ತದೆ. ಇದರೊಳಗಿರುವ ಭೂಮಿಯ ಮೇಲಿರುವ ಭಾಗಗಳಿಂದ ಸೂರ್ಯನ ಪೂರ್ಣ ಗ್ರಹಣವನ್ನು ನೋಡಬಹುದು (ಚಿತ್ರ 8). ಈ ಸಂದರ್ಭದಲ್ಲಿ ಸೂರ್ಯನಿಗಿಂತ ಚಂದ್ರ ದೊಡ್ಡದಾಗಿ ಕಂಡು ಅದು ಸೂರ್ಯನ ಬೆಳಕಿಗೆ ಪೂರ್ತಿ ಅಡ್ಡಿಮಾಡುತ್ತದೆ. ಈ ಜಾಗವನ್ನು ಬಿಟ್ಟು ಭೂಮಿಯ ಉಳಿದ ಭಾಗಗಳಲ್ಲಿ ಪಾಶ್ರ್ವಗ್ರಹಣ ಕಾಣಿಸುತ್ತದೆ. ಹಿಂದೆ ವಿವರಿಸಿರುವ ವಿಪರೀತ ಪಕ್ಷಗಳನ್ನು ಬಿಟ್ಟರೆ ಸಾಮಾನ್ಯವಾಗಿ ಸೂರ್ಯನ ಪಾಶ್ರ್ವಗ್ರಹಣವನ್ನು ಭೂಮಿಯ ಅನೇಕ ಭಾಗಗಳಿಂದ ನೋಡಬಹುದು. ಸೂರ್ಯನ ಪೂರ್ಣ ಗ್ರಹಣ ಅಥವಾ ಕಂಕಣ ಗ್ರಹಣವಾಗುವುದಕ್ಕಿಂತ ಹೆಚ್ಚಾಗಿ ಭೂಮಿಯ ಅನೇಕ ಭಾಗಗಳಲ್ಲಿ ಕಾಣಿಸುವಂತೆ ಪಾಶ್ರ್ವಗ್ರಹಣಗಳು ಆಗುತ್ತವೆ. ಪ್ರತಿ ಕ್ಷಣದಲ್ಲಿಯೂ ವ್ಯತ್ಯಾಸವಾಗುತ್ತಿರುವ ಚಂದ್ರ ಮತ್ತು ಭೂಮಿ ಸ್ಥಾನಗಳಿಂದಾಗಿ ಸೂರ್ಯನಿಗೆ ಸಂಬಂಧಿಸಿದಂತೆ ಎಲ್ಲವೂ ಬದಲಾವಣೆಯಾಗುತ್ತಿರುತ್ತವೆ. ಹೀಗಾಗಿ ಪೂರ್ಣ ಸೂರ್ಯಗ್ರಹಣವನ್ನು ಎಲ್ಲ ಸ್ಥಳಗಳಿಂದಲೂ ನೋಡಲು ಸಾಧ್ಯವಾಗುವುದಿಲ್ಲ; ಅಲ್ಲದೆ ಹೆಚ್ಚು ಹೊತ್ತು ನೋಡುವುದಕ್ಕೂ ಆಗುವುದಿಲ್ಲ.

ಭೂಮಿಯನ್ನು ಚಂದ್ರ ಪಶ್ಚಿಮದಿಂದ ಪೂರ್ವಕ್ಕೆ ಪರಿಭ್ರಮಿಸುತ್ತಿರುವುದರಿಂದ ಸೂರ್ಯಗ್ರಹಣವಾಗುವಾಗ ಸೂರ್ಯನನ್ನು ಚಂದ್ರ ಪಶ್ಚಿಮ ಭಾಗದಿಂದ ಮುಚ್ಚಲು ತೊಡಗುತ್ತದೆ. ಗ್ರಹಣ ಮುಂದುವರಿದು ಸೂರ್ಯನ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಮುಚ್ಚಿರುವಾಗ ಸೂರ್ಯನ ಅಂಚಿನಿಂದ ಕುಡುಗೋಲಿನಾಕಾರದಲ್ಲಿ ಪ್ರಕಾಶಮಾನವಾದ ಬೆಳಕು ಕಾಣಿಸುತ್ತದೆ. ಈ ತರಹ ಬೇರೆ ಬೇರೆ ಆಕೃತಿಗಳನ್ನು, ಒಂದು ಮರದ ಎಲೆಗಳ ನಡುವೆ ತೂರಿಬರುವ ಸೂರ್ಯರಶ್ಮಿ ನೆಲದ ಮೇಲೆ ಕೆಡೆಯುವ ಬಿಂಬದಿಂದ, ನೋಡಬಹುದು. ಚಂದ್ರನ ಮೇಲ್ಮೈ ಬಹಳ ಹಳ್ಳಕೊಳ್ಳಗಳಿಂದ ಕೂಡಿರುವುರಿಂದ, ಅದರ ಬಿಂಬದ ಅಂಚು ನುಣುಪಾಗಿರದೆ ಏರುಪೇರುಗಳಿಂದ ಕೂಡಿಬರುತ್ತದೆ. ಪೂರ್ಣ ಸೂರ್ಯಗ್ರಹಣವಾಗುವುದಕ್ಕೆ ಮುಂಚೆ ಏರುಪೇರು ಅಂಚಿನಿಂದ ಸೂರ್ಯನ ಬೆಳಕು ತೂರಿಬಂದು ಮಣಿಗಳನ್ನು ಜೋಡಿಸಿಟ್ಟ ಹಾಗೆ ಕಾಣಿಸುತ್ತದೆ. ಇದನ್ನು ಬೈಲಿಯ ಮಣಿಗಳು ಎನ್ನುತ್ತಾರೆ. (ಚಿತ್ರ 15) ತತ್‍ಕ್ಷಣವೇ ಮಣಿಗಳು ಮಾಯವಾಗಿ ಪೂರ್ಣಗ್ರಹಣವಾಗುತ್ತದೆ. ಅತ್ಯಂತ ಹೆಚ್ಚೆಂದರೆ ಐದಾರು ನಿಮಿಷಗಳ ಕಾಲ ಪೂರ್ಣ ಸೂರ್ಯ ಗ್ರಹಣವಿದ್ದು ಪುನಃ ಚಂದ್ರ ಪೂರ್ವಭಾಗಕ್ಕೆ ತನ್ನ ಪಥದಲ್ಲಿ ಸರಿಯುತ್ತ ಗ್ರಹಣ ಮೋಕ್ಷವಾಗುತ್ತದೆ. ಹಾಗೆ ಆಗುವಾಗ ಮೇಲೆ ವಿವರಿಸಿರುವ ಎಲ್ಲ ಸನ್ನಿವೇಶಗಳೂ ಕೊನೆಯಿಂದ ಮೊದಲಿಗೆ ಪುನರಾವರ್ತಿಸುತ್ತವೆ. ಪಾಶ್ರ್ವಗ್ರಹಣದಿಂದ ಆರಂಭವಾಗಿ ಪೂರ್ಣಗ್ರಹಣವಾಗಿ ಪುನಃ ಪಾಶ್ರ್ವಗ್ರಹಣದಿಂದ ಕೊನೆಗೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಸೂರ್ಯನ ಬಿಂಬವನ್ನು ಚಂದ್ರ ಪೂರ್ತಿಯಾಗಿ ಮುಚ್ಚದೆ ಅಂಚಿನಲ್ಲಿ ಬೈಲಿಯ ಮಣಿಗಳು ಕಾಣಿಸಿಕೊಳ್ಳಬಹುದು. ಯಾವ ತರಹ ಸೂರ್ಯಗ್ರಹಣವೇ ಆಗಲಿ ಬರಿಗಣ್ಣಿನಿಂದ ನೋಡಿದರೆ ಕಣ್ಣುಗಳಿಗೆ ಬಹಳ ಹಾನಿಯಾಗುತ್ತದೆ. ದಟ್ಟವಾಗಿ ಮಸಿ ಬಳಿದ ಗಾಜಿನ ಮೂಲಕ ಗ್ರಹಣದ ಪ್ರಗತಿಯನ್ನು ನೋಡಬೇಕು ಅಥವಾ ಮರದ ನೆರಳನ್ನು ಗಮನಿಸಿದರೂ ಸಾಕು.

ಚಂದ್ರ ತನ್ನ ಕಕ್ಷೆಂiÀಲ್ಲಿ ಚಲಿಸುವಾಗ ಅದರ ನೆರಳಿನ ಶಂಕು ಅಥವಾ ಕಂಕಣ ಶಂಕುವಿನ ಭಾಗ ಭೂಮಿಯ ಮೇಲ್ಮೈಯ ಮೇಲೆ ಹಾಯುವ ಕ್ಷೇತ್ರಕ್ಕೆ ಗ್ರಹಣದ ಪಥ ಎಂದು ಹೆಸರು. ಇದರ ಅಕ್ಕಪಕ್ಕದಲ್ಲಿರುವ ಭೂಭಾಗದಿಂದ ಗ್ರಹಣವನ್ನು ನೋಡಿದರೆ ಸೂರ್ಯನ ಪಾಶ್ರ್ವಗ್ರಹಣ ಕಾಣಿಸುತ್ತದೆ. ಈ ಪಥದ ಪ್ರಾರಂಭದಲ್ಲಿ ಕಂಕಣ ಗ್ರಹಣವಾಗಿದ್ದು, ಮಧ್ಯೆ ಪೂರ್ಣ ಗ್ರಹಣದ್ದಾಗಿ ಮತ್ತೆ ಕಂಕಣಗ್ರಹದ್ದಾಗಿ ಕೊನೆಗೊಳ್ಳಬಹುದು. ಸೂರ್ಯನ ಪೂರ್ಣ ಗ್ರಹಣವಾದಾಗ ಭೂಮಿಯ ಮೇಲೆ ಹಗಲಲ್ಲಿ ಕತ್ತಲು ಕವಿಯುತ್ತದೆ. ಈ ಘಟನೆ ಬಹಳ ಅಪರೂಪವಾಗಿ ಆಗುವುದರಿಂದ ಮೂಢ ನಂಬಿಕೆ ಇರುವ ಜನಗಳಿಗೆ ಸ್ವಲ್ಪ ಗಾಬರಿ ಹುಟ್ಟಿಸುವುದುಂಟು. ಸೂರ್ಯನ ಬೆಳಕಿಲ್ಲಾಗುವುದರಿಂದ ಸಂಜೆಗತ್ತಲು ಆದ ಹಾಗೆ ಪಕ್ಷಿಗಳೂ ಪ್ರಾಣಿಗಳೂ ತಮ್ಮ ವಾಸಸ್ಥಾನಗಳಿಗೆ ಧಾವಿಸುತ್ತವೆ. ಹಲವು ದೊಡ್ಡ ಪ್ರಾಣಿಗಳು ಗಾಬರಿಗೊಳ್ಳುತ್ತವೆ ಮತ್ತು ಸೂರ್ಯ ಸಾಮಾನ್ಯವಾಗಿ ಮುಳುಗಿದಾಗ ವರ್ತಿಸುವಂತೆ ಗಿಡಗಳು ವರ್ತಿಸುತ್ತವೆ. ಗೂಬೆ ಮುಂತಾದ ನಿಶಾಚರ ಪಕ್ಷಿಗಳು ಸಂಚಾರ ಹೊರಡುತ್ತವೆ. ಭೂಮಿಯ ಮೇಲೆ ಉಷ್ಣತೆಯಲ್ಲಿ ವ್ಯತ್ಯಾಸವಾಗಿ ಮಂಜು ಕೂಡ ಕವಿಯಬಹುದು. ಆಕಾಶದಲ್ಲಿರುವ ಪ್ರಕಾಶಮಾನವಾದ ನಕ್ಷತ್ರಗಳೂ ಗ್ರಹಗಳೂ ಕಾಣಿಸಿಕೊಳ್ಳುತ್ತವೆ. ಇಷ್ಟೆಲ್ಲ ನಡೆಯುವುದು ಕೇವಲ ಐದಾರು ನಿಮಿಷಗಳ ಕಾಲದಲ್ಲಿ. ರೇಡಿಯೋ ಅಲೆಗಳ ಪ್ರಸಾರದ ಮೇಲೆ ಪರಿಣಾಮವನ್ನು ಬೀರುತ್ತದೆ. ಪೂರ್ಣ ಸೂರ್ಯಗ್ರಹಣವಾದಾಗ ಸೂರ್ಯನ ಸ್ಪರ್ಶ ಮತ್ತು ಮೋಕ್ಷ ಕಾಲಗಳನ್ನು ಸರಿಯಾಗಿ ಗುರುತು ಹಾಕಿಕೊಂಡು ಚಂದ್ರನ ಚಲನೆಯವಿಚಾರವಾಗಿ ಖಚಿತಪಡಿಸಿಕೊಳ್ಳಲಾಗಿದೆ. ಕ್ರಮವಿಲ್ಲದ ಭೂಮಿಯ ಪರಿಭ್ರಮಣೆಯ ವಿಚಾರವಾಗಿಯೂ ತಿಳಿಯಬಹುದು. ಸೂರ್ಯನ ಪ್ರಭಾಗೋಲವನ್ನು ಚಂದ್ರನ ಬಿಲ್ಲೆ ಮುಚ್ಚುವುದರಿಂದ ಸೂರ್ಯನ ಹತ್ತಿರವಿರುವ ಹೆಚ್ಚು ಪ್ರಕಾಶವಿಲ್ಲದ ಆಕಾಶಕಾಯಗಳನ್ನು ನೋಡಬಹುದು. ಅಲ್ಲದೇ ಹತ್ತಿರವಿರುವ ಹೆಚ್ಚು ಗ್ರಹಗಳ ಉಪಗ್ರಹಗಳ ಶೋಧನೆ ಮೊದಲು ಇದರಿಂದ ನೆರವಾಗುತ್ತದೆ. ಸೂರ್ಯನ ವಾತಾವರಣದ ರಾಸಾಯನಿಕ ಸಂಯೋಜನೆ, ಉಷ್ಣತೆ ಮತ್ತು ಒತ್ತಡ ಇವುಗಳ ವಿಚಾರವಾಗಿ ತಿಳಿಯಲು ಸಾಧ್ಯ. ಸೂರ್ಯನ ಹೊರವಲಯದಲ್ಲಿರುವ ಪ್ರಭಾವಲಯವನ್ನು (ಕರೋನ) ನೋಡಬಹುದು. ಬೇರೆ ಸಂದರ್ಭಗಳಲ್ಲಿ ಸಾಧಾರಣವಾಗಿ ಇದನ್ನು ನೋಡುವುದು ಕಷ್ಟ. ಈ ವಲಯಕ್ಕೆ ಮುತ್ತಿನ ಬೆಳಕಿದೆ. ಇದು ಸೂರ್ಯನ ವ್ಯಾಸದ ಎರಡರಿಂದ ನಾಲ್ಕರಷ್ಟು ಕ್ಷೇತ್ರಕ್ಕೆ ಹರಡಿಕೊಂಡು ಪ್ರಕಾಶಿಸುತ್ತದೆ. ಇದರ ಆಕಾರವೂ ವ್ಯತ್ಯಾಸವಾಗುತ್ತದೆ. ಈಚೀಚಿನ ವರೆಗೆ ಹೊರವಲಯದ ಈ ಭಾಗವನ್ನು ಸೂರ್ಯನ ಪೂರ್ಣ ಗ್ರಹಣವಾದಾಗ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು. ಆದರೆ ಈಗ ಕರೋನಲೇಖ ಎಂಬ ಉಪಕರಣದ ಸಹಾಯದಿಂದ ಗ್ರಹಣವಿಲ್ಲದಾಗಲೂ ಹೊರವಲಯದ ವೀಕ್ಷಣೆ ಮತ್ತು ವಿಶ್ಲೇಷಣೆಗೆ ಅವಕಾಶ ಒದಗಿದೆ. ಪೂರ್ಣ ಸೂರ್ಯಗ್ರಹಣ ಕಾಲದಲ್ಲಿ ಸೂರ್ಯನ ಹೊರವಲಯವನ್ನು ನೋಡಿದರೆ ಲಕ್ಷಾಂತರ ಮೈಲಿಗಳಷ್ಟು ಮೇಲಕ್ಕೆ ಚಿಮ್ಮಿ ಬೀಳುವ ಜ್ವಾಲೋನ್ನತಿಗಳು ತೋರುವುವು. ಇವುಗಳಿಗೆ ಪ್ರಾಮಿನೆನ್ಸಸ್ ಎಂದು ಹೆಸರು. ಇವುಗಳ ಬಣ್ಣ ಗುಲಾಬಿ ಕೆಂಪು. ಪೂರ್ಣ ಸೂರ್ಯಗ್ರಹಣ ಕಾಲದಲ್ಲಿ ಸೂರ್ಯನ ಅಂಚಿನಲ್ಲಿ ಕಾಣಿಸುವ ಯಾವುದಾದರೂ ಒಂದು ನಕ್ಷತ್ರದ ಸ್ಥಾನವನ್ನು ಆಕಾಶದಲ್ಲಿ ಗುರ್ತಿಸಿ ಸೂರ್ಯನಿಲ್ಲದಾಗ ಅದೇ ನಕ್ಷತ್ರದ ಸ್ಥಾನವನ್ನು ನೋಡಿ ಅವುಗಳಲ್ಲಾಗುವ ಬದಲಾವಣೆಗೆ ನಕ್ಷತ್ರರಶ್ಮಿಯ ಮೇಲೆ ಸೂರ್ಯನ ಗುರುತ್ವಾಕರ್ಷಣೆ ಕಾರಣ ಎಂದು ಹೇಳಲು ಸಾಧ್ಯವಾಗುತ್ತದೆ. ಇದರಿಂದ ಬೆಳಕಿನ ಕಿರಣಗಳು ಕೂಡ ಗುರುತ್ವಾಕರ್ಷಣೆಗೆ ಒಪಳಪಡುತ್ತವೆ ಎಂಬ ಐನ್‍ಸ್ಟೈನನ ಹೇಳಿಕೆಯ ಸಮರ್ಥನೆ ಆಗುತ್ತದೆ.

ಗ್ರಹಣಗಳ ವಿಚಾರವಾಗಿ ಮುನ್ಸೂಚನೆ : ಮುಂದೆ ಆಗಲಿರುವ ಗ್ರಹಣಗಳ ವಿಚಾರವಾಗಿ ಕರಾರುವಾಕ್ಕಾಗಿ ಮುನ್ನುಡಿಯಬಹುದು. ಭೂಕೇಂದ್ರದಿಂದ ಸೂರ್ಯ ಮತ್ತು ಚಂದ್ರರ ಸ್ಥಾನಗಳು ಸರಿಯಾಗಿ ಗೊತ್ತಿದ್ದರೆ ಗ್ರಹಣಗಳಾಗುವುದನ್ನು ಲೆಕ್ಕ ಹಾಕಿ ಹೇಳಲು ಸಾಧ್ಯವಾಗುತ್ತದೆ. ಈಗಲೂ ಖಗೋಳಶಾಸ್ತ್ರಜ್ಞರು ಆಕಾಶಕಾಯಗಳ ಚಲನೆಗಳನ್ನು ಸರಿಯಾಗಿ ತಿಳಿದು ಯಾವ ಯಾವ ವಿಧವಾದ ಗ್ರಹಣಗಳು ಎಲ್ಲೆಲ್ಲಿ ಮತ್ತು ಯಾವ ಯಾವ ದಿವಸ ಎಷ್ಟು ಹೊತ್ತಿನಲ್ಲಿ ಆಗುತ್ತವೆ ಎಂದು ಪಟ್ಟಿಮಾಡಿ ಪ್ರಕಟಿಸಿದ್ದಾರೆ, ಗ್ರಹಣಗಳ ಸ್ಪರ್ಶ ಮತ್ತು ಮೋಕ್ಷ ಕಾಲಗಳು, ಮಧ್ಯಗ್ರಹಣ ಕಾಲ ಮುಂತಾದ ಎಲ್ಲ ವಿವರಗಳನ್ನು ಕೊಡುತ್ತಾರೆ. ಸೂರ್ಯ, ಭೂಮಿ ಮತ್ತು ಚಂದ್ರ ಇವುಗಳ ಅಸ್ಥಿರ ಮತ್ತು ಜಟಿಲ ಚಲನೆಗಳಿಂದಾಗಿ ಗ್ರಹಣಗಳಾಗುವ ಅಂತರಗಳು ಅಷ್ಟೇನೂ ಕ್ರಮಬದ್ಧವಾಗಿಲ್ಲ. ಅಲ್ಲದೆ ಗ್ರಹಣಗಳ ಬಗೆಗಳಲ್ಲೂ ವ್ಯತ್ಯಾಸವಾಗುತ್ತದೆ. ಮುಖ್ಯವಾಗಿ ಪಾತಬಿಂದುಗಳ ವಕ್ರಗತಿಯಿಂದ ಅಕ್ರಮತೆ ತಲೆದೋರುತ್ತದೆ. ಸರಿಸುಮಾರು 18 ವರ್ಷ 111/3 ದಿವಸಗಳಿಗೊಮ್ಮೆ ಗ್ರಹಣಗಳಾಗುವ ಚಕ್ರ ಪುನರಾವರ್ತನೆಯಾಗುವುದು. ಇದು ಚಾಲ್ಡಿಯಾದ ಖಗೋಳಶಾಸ್ತ್ರಜ್ಞರಿಗೆ ತಿಳಿದಿತ್ತು. ಈ ಪುನರಾವರ್ತನೆಯ ಕಾಲವಧಿಗೆ ಸಾರೋಸ್ ಎಂದು ಹೆಸರು. ಈ ಅವಧಿಯಲ್ಲಿ 223 ಚಾಂದ್ರಮಾಸಗಳಿವೆ. ಇದೇ ಅವಧಿಯಲ್ಲಿ ಸರಾಸರಿ 71 ಗ್ರಹಣಗಳಾಗುತ್ತವೆ. ಅವುಗಳಲ್ಲಿ ಸಾರೋಸ್ ಕಾಲಾವಧಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ವ್ಯತ್ಯಾಸಗಳಿಗೆ ಅವಕಾಶವಿಟ್ಟುಕೊಂಡರೆ 18 ವರ್ಷ 111/3 ದಿವಸಗಳಾದ ಬಳಿಕ ಗ್ರಹಣಗಳ ಕ್ರಮ ಮರುಕಳಿಸುತ್ತದೆ ಎನ್ನಬಹುದು. ಉದಾಹರಣೆಗೆ ಯಾವುದಾದರೂ ಒಂದು ದಿವಸದಲ್ಲಾಗುವ ಪಾಶ್ರ್ವ ಅಥವಾ ಪೂರ್ಣಗ್ರಹಣವನ್ನು ಗಣನೆಗೆ ತೆಗೆದುದೊಂಡರೆ ಅಂದಿನಿಂದ 18 ವರ್ಷ 111/3 ದಿವಸಗಳಾದ ತರುವಾಯ ಸ್ವಲ್ಪ ಹೆಚ್ಚು ಕಡಿಮೆ ಅದೇ ಹೊತ್ತಿಗೆ ಅದೇ ತರಹದ ಗ್ರಹಣವಾಗಬಹುದು; ಇಲ್ಲವೇ ಒಂದು ವಿಧವಾದ ಗ್ರಹಣವಂತೂ ಆಗುವುದು ಖರೆ. ಭೂಮಿಯ ಪರಿಭ್ರಮಣೆಯಿಂದ ಗ್ರಹಣವಾಗುವ ಸ್ಧಳದಲ್ಲೂ ವ್ಯತ್ಯಾಸವಾಗಬಹುದು. ಇವೆಲ್ಲಕ್ಕೂ ಅವಕಾಶವಿಟ್ಟುಕೊಂಡರೆ ಸಾರೋಸ್ ಸರಿಸುಮಾರಾಗಿ ಗ್ರಹಣದ ವಿಚಾರವಾಗಿ ಹೇಳಬಹುದಾದ ಒಂದು ಕಾಲಾವಧಿ. ಭೂಮಿಯ ಮೇಲೆ ಯಾವುದಾರೂ ಒಂದು ಸ್ಥಳದಲ್ಲಿ ಐವತ್ತು ವರ್ಷಗಳ ಕಾಲದಲ್ಲಿ ಸರಾಸರಿ 40 ಚಂದ್ರಗ್ರಹಣಗಳು, 20 ಪಾಶ್ರ್ವ ಸೂರ್ಯಗ್ರಹಣಗಳು ಕಾಣಿಸಬಹುದು. ಆದರೆ ಸುಮಾರು 350ರಿಂದ 400 ವರ್ಷಗಳಲ್ಲಿ ಒಂದು ಪೂರ್ಣ ಸೂರ್ಯಗ್ರಹಣ ಆ ಸ್ಥಳದಲ್ಲಿ ಕಾಣಿಸುತ್ತದೆ. ಭೂಮಿಯ ಮೇಲಿನ ಒಂದು ಸ್ಥಳವನ್ನು ತೆಗೆದುಕೊಳ್ಳದೆ ಒಂದು ಕಾಲಾವಧಿಯಲ್ಲಾಗಬಹುದಾದ ಗ್ರಹಣಗಳನ್ನು ಗಣಿಸಿದರೆ ಚಂದ್ರಗ್ರಹಣಗಳಿಗಿಂತ ಸೂರ್ಯಗ್ರಹಣಗಳೇ ಹೆಚ್ಚು.

ಗ್ರಹಣ ಪರಿಮಿತಿಗಳು : ಕ್ರಾಂತಿವೃತ್ತದ ಮೇಲೆ ಸೂರ್ಯ ನಿಧಾನವಾಗಿ (ದಿವಸಕ್ಕೆ ಸುಮಾರು ಒಂದು ಡಿಗ್ರಿಗಿಂತ ಕಡಿಮೆಯಷ್ಟು) ಚಲಿಸುತ್ತ ಒಂದು ವರ್ಷದಲ್ಲಿ ಭೂಮಿಯ ಸುತ್ತ ಪರಿಭ್ರಮಿಸುವ ಹಾಗೆ ಕ್ರಾಂತಿವೃತ್ತಕ್ಕೆ ಸುಮಾರು 50 8 ಗಳಷ್ಟು ಓರೆಯಾಗಿರುವ ಕಕ್ಷೆಯಲ್ಲಿ ಚಂದ್ರ ವೇಗವಾಗಿ ಚಲಿಸುತ್ತ ಒಂದು ತಿಂಗಳಲ್ಲಿ ಭೂಮಿಯ ಸುತ್ತ ಪರಿಭ್ರಮಣೆ ಮುಗಿಸುತ್ತದೆ. ಚಂದ್ರ ಹೀಗೆ ಸುತ್ತುತ್ತಿರುವಾಗ ನಿಧಾನವಾಗಿ ಚಲಿಸುತ್ತಿರುವ ಸೂರ್ಯನನ್ನು ಮರೆಮಾಡದೆ ಅದನ್ನು ಹಾದು ಮುಂದಕ್ಕೆ ಹೋಗುತ್ತದೆ. ಹಾಗೆ ಹಾಯುವಾಗ ಸೂರ್ಯ ಮತ್ತು ಚಂದ್ರರು ಯುತಿಯಲ್ಲಿದ್ದು ಅಮವಾಸ್ಯೆಯಾಗುತ್ತದೆ. ಇದಾದ ಸುಮಾರು 14 ಅಥವಾ 15 ದಿವಸಗಳಲ್ಲಿ ತನ್ನ ಕಕ್ಷೆಯಲ್ಲಿ ಮುಂದೆ ಹೋಗುತ್ತಿರುವ ಚಂದ್ರ ಸೂರ್ಯನಿಗೆ ಎದುರಾಗಿ ಬಂದು ಅಲ್ಲ್ಲಿ ಕಾಣಿಸುವ (ಎದುರಿಗಿರುವ ಸೂರ್ಯನ ಬೆಳಕಿನಿಂದಾದ) ಭೂಮಿಯ ನೆರಳಿನ ಮೂಲಕ ಹೋಗದೆ ಅದರಿಂದ ಸ್ವಲ್ಪ ಮೇಲಕ್ಕೋ ಅಥವಾ ಕೆಳಕ್ಕೋ ಇರುವ ತನ್ನ ಕಕ್ಷೆಯಲ್ಲಿ ಅದನ್ನು ಹಾದು ಚಲನೆಯನ್ನು ಮುಂದುವರಿಸುತ್ತದೆ. ಹೀಗೆ ಹಾಯುವಾಗ ಸೂರ್ಯ ಮತ್ತು ಚಂದ್ರರು ವಿಯುತಿಯಲ್ಲಿರುವುದರಿಂದ ಹುಣ್ಣಿಮೆಯಾಗುತ್ತದೆ. ಚಂದ್ರನ ಪ್ರತಿಯೊಂದು ತಿಂಗಳ ಚಲನೆಯಲ್ಲೂ ಇದೇ ರೀತಿ ಪುನರಾವರ್ತನೆಯಾಗುತ್ತದೆ. ಒಂದೊಂದು ಸಲ ಸೂರ್ಯ ತನ್ನ ಕಕ್ಷೆಗೂ ಚಂದ್ರಕಕ್ಷೆಗೂ ಸಾಮಾನ್ಯ ಬಿಂದುವಾದ ಒಂದು ಪಾತ ಬಿಂದು ಓ ನ ಹತ್ತಿರ ಇದ್ದಾಗ ಚಂದ್ರ ತನ್ನ ಕಕ್ಷೆಯಲ್ಲಿ ಅದೇ ಪಾತ ಬಿಂದುವಿನ ಹತ್ತಿರ ಬಂದು ಸೂರ್ಯನನ್ನು ಹಾಯುವ ಸಮಯದಲ್ಲಿ ಅಮಾವಾಸ್ಯೆಯಾಗಿ ಸೂರ್ಯನಿಂದ ಭೂಮಿಯ ಕಡೆಗೆ ಬರುವ ಬೆಳಕನ್ನು ಅಡ್ಡಿ ಮಾಡುವ ಸಾಧ್ಯತೆ ಉಂಟು. ಆಗ ಸೂರ್ಯಗ್ರಹಣ ಸಂಭವಿಸುವುದು. ಆದ್ದರಿಂದ ಚಂದ್ರ ಒಂದು ಪಾತಬಿಂದುವಿನ ಹತ್ತಿರ ಬಂದಾಗ ಸೂರ್ಯ ಕ್ರಾಂತಿವೃತ್ತದ ಮೇಲೆ ಅದೇ ಪಾತಬಿಂದುವಿನ ಎಷ್ಟು ದೂರ ಇದ್ದರೆ ಸೂರ್ಯಗ್ರಹಣ ಸಾಧ್ಯ ಎಂಬುದನ್ನು ಲೆಕ್ಕಹಾಕಿದ್ದಾರೆ. ಈ ದೂರ ಮಿತಿಗೆ ಸೂರ್ಯಗ್ರಹಣ ಪರಿಮಿತಿ ಎಂದು ಹೆಸರು. ಇದನ್ನು ಡಿಗ್ರಿ ಅಳತೆಯಲ್ಲಿ ಸೂಚಿಸುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಸೂರ್ಯ ಒಂದು ಪಾತಬಿಂದುವಿನ ಹತ್ತಿರವಿದ್ದಾಗ ಚಂದ್ರ ತನ್ನ ಕಕ್ಷೆಯಲ್ಲಿ ಈ ಪಾತಬಿಂದುವಿಗೆ ನೇರ ಎದುರಾಗಿರುವ ಮತ್ತೊಂದು ಪಾತಬಿಂದುವಿನ ಹತ್ತಿರ ಬಂದು ಅಲ್ಲಿರುವ ಭೂಮಿಯ ನೆರಳನ್ನು ಹಾಯುವಾಗ ಹುಣ್ಣಿಮೆಯಾಗಿ ಭೂಮಿಯ ನೆರಳಿನ ಮೂಲಕ ಹೋಗುವ ಸಾಧ್ಯತೆ ಇರುತ್ತದೆ. ಆಗ ಚಂದ್ರಗ್ರಹಣವಾಗುವುದು. ಚಂದ್ರ ಒಂದು ಪಾತಬಿಂದುವಿನ ಹತ್ತಿರ ಬಂದಾಗ, ಕ್ರಾಂತಿವೃತ್ತದ ಮೇಲೆ ಸೂರ್ಯ ಮತ್ತೊಂದು ಪಾತಬಿಂದುವಿನಿಂದ ಎಷ್ಟು ದೂರವಿದ್ದರೆ (ಅಥವಾ ಸೂರ್ಯನಿಂದಾದ ಭೂಮಿಯ ನೆರಳು ಮೊದಲನೆಯ ಪಾತಬಿಂದುವಿನಿಂದ ಎಷ್ಟು ದೂರ ಇದ್ದರೆ) ಚಂದ್ರಗ್ರಹಣವಾಗುವುದು ಸಾಧ್ಯ ಎಂಬುದನ್ನು ಲೆಕ್ಕಹಾಕಿದ್ದಾರೆ. ಈ ದೂರಮಿತಿಗೆ ಚಂದ್ರಗ್ರಹಣ ಪರಿಮಿತಿ ಎಂದು ಹೆಸರು. ಗ್ರಹಣ ಪರಿಮಿತಿಗಳ ಬೆಲೆಗಳು ಈ ರೀತಿ ಇವೆ: ಸೂರ್ಯಗ್ರಹಣ-ಪ್ರಧಾನ ಪರಿಮಿತಿ 180 31, ಲಘು ಪರಿಮಿತಿ 150 21 ಚಂದ್ರಗ್ರಹಣ-ಪ್ರಧಾನ ಪರಿಮಿತಿ 120 5 ಲಘು ಪರಿಮಿತಿ 90 39

ಇವುಗಳ ಅರ್ಥವಿಷ್ಟು: ಅಮಾವಾಸ್ಯೆಯಾದಾಗ ಸೂರ್ಯ ಒಂದು ಪಾತಬಿಂದುವಿನಿಂದ 180 31 ಕ್ಕಿಂತ ಹೆಚ್ಚು ದೂರದಲ್ಲಿದ್ದರೆ ಸೂರ್ಯಗ್ರಹಣ ಸಾಧ್ಯವಿಲ್ಲ; 150 21 ಮತ್ತು 180 31 ಇವುಗಳ ನಡುವೆ ಸೂರ್ಯಗ್ರಹಣವಾಗಬಹುದು.; 150 ಮತ್ತು 21 ಕ್ಕಿಂತ ಕಡಿಮೆ ಇದ್ದರೆ ಸೂರ್ಯಗ್ರಹಣ ಆಗಿಯೇ ಆಗುತ್ತದೆ. ಇದೇ ರೀತಿಯಲ್ಲಿ ಹುಣ್ಣಿಮೆಯಾದಾಗ ಸೂರ್ಯ ಒಂದು ಪಾತಬಿಂದುವಿನಿಂದ 120 5ಕ್ಕಿಂತ ಹೆಚ್ಚು ದೂರದಲ್ಲಿದ್ದರೆ ಚಂದ್ರಗ್ರಹಣ ಸಾಧ್ಯವಿಲ್ಲ. 120 5 ಮತ್ತು 90 39 ಇವುಗಳ ನಡುವೆ ಇದ್ದರೆ ಚಂದ್ರಗ್ರಹಣವಾಗಬಹುದು; 90 39ಕ್ಕಿಂತ ಕಡಿಮೆ ಇದ್ದರೆ ಚಂದ್ರಗ್ರಹಣ ಆಗಿಯೇ ಆಗುತ್ತದೆ.

ಚಂದ್ರನ ಪಾತಬಿಂದುಗಳು ಅಚಲ ಬಿಂದುಗಳಲ್ಲ. ಅವುಗಳಿಗೆ ಹಿನ್ನಡೆ ಉಂಟು. ಅವು ಕ್ರಾಂತಿವೃತ್ತದ ಮೇಲೆ ಸುಮಾರು 18 ವರ್ಷಗಳಲ್ಲಿ ಒಂದು ಸುತ್ತನ್ನು ಮುಗಿಸುತ್ತವೆ. ಕ್ರಾಂತಿವೃತ್ತದ ಮೇಲೆ ಚಲಿಸುವ ಸೂರ್ಯ, ಹಿನ್ನಡೆಯುತ್ತಿರುವ ಈ ಪಾತಬಿಂದುಗಳನ್ನು ಅವು ಅಚಲವಾಗಿದಿದ್ದರೆ ಹಾದು ಹೋಗುವ ಅವಧಿಗಿಂತ ಕಡಿಮೆ ಅವಧಿಯಲ್ಲಿ, ಹಾಯುತ್ತದೆ. ಒಂದು ಪಾತಬಿಂದುವನ್ನು ಗಣನೆಗೆ ತೆಗೆದುಕೊಂಡರೆ, ಮೊದಲು ಯುತಿಯಾದ ತರುವಾಯ ಪುನಃ ಅದೇ ಪಾತಬಿಂದುವಿನಲ್ಲಿ ಯುತಿಯಾಗಲು ಸೂರ್ಯನಿಗೆ ಬೇಕಾದ ಅವಧಿಯ ಕಾಲ 346.62 ದಿವಸಗಳು. ಇದಕ್ಕೆ ಗ್ರಹಣ ವರ್ಷ ಎಂದು ಹೆಸರು. ಪಾತ ಬಿಂದುಗಳ ಹಿನ್ನಡೆಯನ್ನೂ ಗ್ರಹಣ ಪರಿಮಿತಿಗಳನ್ನೂ ಉಪಯೋಗಿಸಿ ಯಾವುದಾದರೂ ಒಂದು ವರ್ಷದಲ್ಲಿ ಆಗಬಹುದಾದ ಗರಿಷ್ಠ ಸಂಖ್ಯೆಯ ಗ್ರಹಣಗಳು ಏಳೆಂದೂ ಅವುಗಳಲ್ಲಿ ಐದು ಸೂರ್ಯ ಗ್ರಹಣ ಮತ್ತು ಎರಡು ಚಂದ್ರಗ್ರಹಣ ಇಲ್ಲವೇ ನಾಲ್ಕು ಸೂರ್ಯಗ್ರಹಣ ಮತ್ತು ಮೂರು ಚಂದ್ರಗ್ರಹಣ ಎಂದೂ ಸಮರ್ಥಿಸಬಹುದು.

ಗುರುಗ್ರಹದ ಉಪಗ್ರಹಗಳ ಗ್ರಹಣಗಳು : ಸೌರವ್ಯೂಹದ ಒಂದು ಗ್ರಹವಾದ ಗುರುವಿಗೆ ಹನ್ನೆರಡು ಉಪಗ್ರಹಗಳಿವೆ. ಅವುಗಳಲ್ಲಿ ನಾಲ್ಕು ಉಪಗ್ರಹಗಳನ್ನು 1610ನೆಯ ಇಸವಿಯಲ್ಲಿ ಗೆಲಿಲಿಯೋ ಕಂಡುಹಿಡಿದ. ಆದ್ದರಿಂದ ಅವುಗಳಿಗೆ ಗೆಲಿಲಿಯೋ ಉಪಗ್ರಹಗಳೆಂದೇ ಹೆಸರಾಗಿದೆ. ಗೆಲಿಲಿಯೋ ಉಪಗ್ರಹಗಳು ಗುರುಗ್ರಹವನ್ನು ಸರಿಸುಮಾರಾಗಿ ಅದರ ಸಮಭಾಜಕ ರೇಖೆಯ ಸಮತಲದಲ್ಲಿಯೇ ಇರುವ ತಮ್ಮ ತಮ್ಮ ಕಕ್ಷೆಗಳಲ್ಲಿ ಪರಿಭ್ರಮಿಸುತ್ತಿವೆ. ಗುರೂಪಗ್ರಹಗಳನ್ನು ಬರಿಕಣ್ಣಿನಿಂದ ನೋಡಲು ಕಷ್ಟವಾಗುತ್ತದೆ. ಒಂದು ಸಾಧಾರಣ ದೂರದರ್ಶಕದಿಂದ ಅವುಗಳ ಚಲನೆಯನ್ನು ನೋಡಬಹುದು. ಇವು ಮಾತೃಗ್ರಹವನ್ನು ತಮ್ಮ ಕಕ್ಷೆಗಳಲ್ಲಿ ಸುತ್ತಿಬರುವ ಅವಧಿಕಾಲ ದಿವಸದಿಂದ ದಿವಸಗಳಷ್ಟಿದೆ. ಹೀಗೆ ಇವು ಬೇಗ ಬೇಗ ಪರಿಭ್ರಮಿಸುತ್ತಿರುವುದರಿಂದ ಗ್ರಹಣಗಳು ಪ್ರತಿದಿವಸವೂ ಆಗುತ್ತಿರುತ್ತವೆ. ಸೂರ್ಯನ ಬೆಳಕಿನಿಂದಾದ ಗುರುಗ್ರಹದ ಮಹಾಗಾತ್ರದ ನೆರಳಿನೊಳಕ್ಕೆ ಈ ಉಪಗ್ರಹಗಳು ಬಂದಾಗ ಅವು ಬೆಳಕನ್ನು ಕಳೆದುಕೊಂಡು ಗ್ರಹಣವಾಗುತ್ತವೆ. ಸೂರ್ಯನಿಗೂ ಗುರುಗ್ರಹಕ್ಕೂ ನಡುವೆ ಉಪಗ್ರಹಗಳು ಬಂದಾಗ ಅವುಗಳ ನೆರಳು ಗುರುಗ್ರಹದ ಮೇಲೆ ಸರಿಯುತ್ತಿರುವುದನ್ನು ಭೂಮಿಯ ಮೇಲಿಂದ ನೋಡಬಹುದು. ಆ ಸಮಯದಲ್ಲಿ ನೆರಳು ಬಿದ್ದ ಜಾಗಗಳಲ್ಲಿ ಗುರುಗ್ರಹದ ಮೇಲೆ ಸೂರ್ಯ ಗ್ರಹಣವಾಗುತ್ತದೆ. ಡೇನಿಶ್ ದೇಶದ ಖಗೋಳ ವಿಜ್ಞಾನಿ ರೋಮರ್ ಎಂಬಾತ 1675 ರಲ್ಲಿ ಗುರೂಪಗ್ರಹಗಳ ಗ್ರಹಣವನ್ನು ವೀಕ್ಷಿಸಿ ಗಣನೆಗಳಿಂದ ತಿಳಿದಿದ್ದ ಗ್ರಹಣ ಸಂಭವ ಕಾಲಕ್ಕೂ ಭೂಮಿಯಲ್ಲಿ ಗ್ರಹಣ ಕಂಡ ಕಾಲಕ್ಕೂ ಇದ್ದ ವ್ಯತ್ಯಾಸದಿಂದ ನಡುವಿನ ಅಂತರವನ್ನು ಭಾಗಿಸಿ ಬೆಳಕಿನ ವೇಗವನ್ನು ಸರಿಸುಮಾರಾಗಿ ಗಣಿಸಿದ. (ಬಿ.ವಿ; ಎಸ್.ಆರ್.)