ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರಾಮಕೈಗಾರಿಕೆಗಳು

ವಿಕಿಸೋರ್ಸ್ದಿಂದ

ಗ್ರಾಮಕೈಗಾರಿಕೆಗಳು - ಕೃಷಿಪ್ರಧಾನವಾದ ಗ್ರಾಮಗಳಲ್ಲಿ ರೈತರ ನಿತ್ಯಜೀವನಕ್ಕೆ ಪೂರಕವಾಗಿರುವ ಉಪಕಸಬುಗಳು, ಸಣ್ಣ ಕೈಗಾರಿಕೆಗಳೂ, ಭಾರತದಂಥ ಅಭಿವೃದ್ದಿಶೀಲ ರಾಷ್ಟ್ರಗಳ ಅನೇಕ ಕ್ಲಿಷ್ಟ ಸಮಸ್ಯೆಗಳಿಗೆ ಗ್ರಾಮ ಕೈಗಾರಿಕೆಗಳೂ ಉತ್ತಮವಾದ ಪರಿಹಾರಮಾರ್ಗಗಳಾಗಿವೆ. ಅಭಿವೃದ್ಧಿಶೀಲ ರಾಷ್ಟ್ರಗಳ ಬಹು ಪಾಲು ಜನರು ಜೀವನೋಪಾಯಕ್ಕಾಗಿ ವ್ಯವಸಾಯವನ್ನೇ ಆಶ್ರಯಿಸಿರುತ್ತಾರೆ. ಜನಸಂಖ್ಯೆ ಹೆಚ್ಚಿದಂತೆ ವ್ಯವಸಾಯದ ಮೇಲೆ ಜನರ ಒತ್ತಡವೂ ಹೆಚ್ಚುತ್ತದೆ. ಹೆಚ್ಚಿನ ಸಂಖ್ಯೆಯ ಜನಕ್ಕೆ ಬೇರೆ ಯಾವ ಕಸಬೂ ಲಭ್ಯವಿಲ್ಲದ್ದರಿಂದ ಈ ಒತ್ತಡ ಅನಿವಾರ್ಯವಾಗುತ್ತದೆ. ಇದನ್ನು ಕಡಿಮೆ ಮಾಡಲು ಗ್ರಾಮಕೈಗಾರಿಕೆಗಳನ್ನು ಸ್ಥಾಪಿಸುವುದು ಅವಶ್ಯಕವಾಗುತ್ತದೆ. ಅಲ್ಲದೆ, ಒಂದು ಆರ್ಥಿಕತೆಯಲ್ಲಿ ಸಮತೋಲ ಆರ್ಥಿಕ ಅಭಿವೃದ್ಧಿಯನ್ನೂ ರಾಷ್ಟ್ರೀಯ ಆದಾಯದ ಸಮಾನ ಹಂಚಿಕೆಯನ್ನೂ ಸಾಧಿಸಲು, ನಗರಗಳಲ್ಲಿ ಕೈಗಾರಿಕೆಗಳ ಕೇಂದ್ರಿಕರಣವಾಗುವುದನ್ನು ತಪ್ಪಿಸಲು ಗ್ರಾಮಕೈಗಾರಿಕೆಗಳು ಸಹಕಾರಿಯಾಗಿವೆ. ಗ್ರಾಮಗಳಲ್ಲಿ ನಿರುಪಯೋಗಿಯೆನಿಸಿದ ಕಾರ್ಮಿಕ ಶಕ್ತಿಯನ್ನು ರೂಢಿಸಲು, ಗ್ರಾಮದ ಸುಪ್ತ ಬಂಡವಾಳವನ್ನು ಹೊರಕ್ಕೆ ತರಲು, ನಿರುದ್ಯೋಗಿಗಳಾದ ಜನಕ್ಕೆ ಉದ್ಯೋಗ ದೊರಕಿಸಿಕೊಡಲು , ಪ್ರಾದೇಶಿಕ ಅಸಮತೆಯನ್ನು ಹೋಗಲಾಡಿಸಲು ಗ್ರಾಮ ಕೈಗಾರಿಕೆಗಳು ನೆರವಾಗುತ್ತವೆ. ಗ್ರಾಮಗಳಲ್ಲಿ ಕೈಗಾರಿಕೆಗಳ ಹಾಗೂ ಇತರ ಉಪಕಸಬುಗಳ ಅಭಾವದಿಂದಾಗಿ ಗ್ರಾಮವಾಸಿಗಳು ನೆರೆಯ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ವಸತಿ, ಆರೋಗ್ಯ ಮುಂತಾದ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಕೈಗಾರಿಕೆಗಳ ಸ್ಥಾಪನೆ ನೆರವಾಗುತ್ತದೆ. ಕೈಗಾರಿಗಳನ್ನು ಗ್ರಾಮಗಳಲ್ಲಿ ಸ್ಥಾಪಿಸುವುದರಿಂದ ಕಾರ್ಮಿಕ ಶಕ್ತಿಯ ಹಾಗೂ ಬಂಡವಾಳ ಸಂಘಟನೆಯ ಜೊತೆಗೆ ಗ್ರಾಮವಾಸಗಳಲ್ಲಿ ಸುಪ್ತವಾಗಿರುವ ಪ್ರತಿಭೆಯ ಪ್ರಕಾಶಕ್ಕೆ ಅತ್ಯುತ್ತಮ ಅವಕಾಶ ಒದಗಿಸುತ್ತದೆ. ವ್ಯವಸಾಯಕ್ಷೇತ್ರ ಎಷ್ಟೇ ಅಭಿವೃದ್ಧಿಯಾದರೂ, ಅದು ಒದಗಿಸುವ ಉದ್ಯೋಗಾವಕಾಶಗಳ ವ್ಯಾಪ್ತಿ ಗಣನೀಯವಾಗಿರುವುದಿಲ್ಲ. ಆದ್ದರಿಂದ ಗ್ರಾಮಾಂತರ ನಿರುದ್ಯೋಗ ಮತ್ತು ಅಪೂರ್ಣ ಉದ್ಯೋಗಗಳಿಗೆ ಶಾಶ್ವತವಾದ ಪರಿಹಾರ ಒದಗಿಬೇಕಾದರೆ, ಗ್ರಾಮಾಂತರ ಕೈಗಾರಿಕೆಗಳನ್ನು ಸ್ಥಾಪಿಸಬೇಕಾಗುತ್ತದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಪಡುವ ಕೈಗಾರಿಕೆಗಳಿಂದ ವ್ಯವಸಾಯಕ್ಕೆ ತೊಡಕಾಗುವಂತಿರಬಾರದು. ಈ ಕೈಗಾರಿಕೆಗಳು ಸಲುಲಭವಾಗಿಯೂ ಸರಳವಾಗಿಯೂ ಇದ್ದು. ಕುಟುಂಬಕ್ಕೆ ಸೇರಿದ ವ್ಯಕ್ತಿಗಳು ನಡೆಸುವಂತಿರಬೇಕು. ಕಡಿಮೆ ಬಂಡವಾಳದಲ್ಲಿ ಈ ಕೈಗಾರಿಕೆಗಳನ್ನು ಸ್ಥಾಪಿಸುವಂತಿರಬೇಕು. ಪ್ರಾದೇಶಿಕ ಸೌಲಭ್ಯಗಳು, ಕಚ್ಚಾಸಾಮಗ್ರಿಯ ಲಭ್ಯತೆ, ಮಾರುಕಟ್ಟೆಯ ಸಾಮೀಪ್ಯ ಮುಂತಾದವುಗಳ ಆಧಾರದ ಮೇಲೆ ಗ್ರಾಮ ಕೈಗಾರಿಕೆಗಳನ್ನು ಸ್ಥಾಪಿಸಡಲಾಗುವುದು. ಈ ಕೈಗಾರಿಕೆಗಳು ವ್ಯವಸಾಯಕ್ಕೆ ಪೂರಕವಾಗಿರಬೇಕಾದ್ದು ಅತ್ಯಾವಶ್ಯಕ, ಅಲ್ಲಿ ಕೆಲಸವಿಲ್ಲದಾಗ ಇವು ಕೆಲಸ ಒದಗಿಸುವಂತಿರಬೇಕು.

ಗ್ರಾಮಕೈಗಾರಿಕೆಗಳನ್ನು ಕೃಷಿ ಕೈಗಾರಿಕೆ, ಗುಡಿಸಿಲು ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳೆಂದು ವಿಂಗಡಿಸಬಹುದಾಗಿದೆ. ಆಹಾರದ ಕೈಗಾರಿಕೆ, ಹಣ್ಣು ತರಕಾರಿ, ಮಾಂಸ, ಮೀನು ಮುಂತಾದವುಗಳನ್ನು ಹದಗೊಳಿಸುವಿಕೆ ಮತ್ತು ಡಬ್ಬೀಕದರಣ, ಉಪಹಾರ ತಯಾರಿಕೆ, ರೊಟ್ಟಿ ತಯಾರಿಕೆ, ಪಶು, ಮತ್ತು ಕೋಳಿಗಳ ಆಹಾರ ತಯಾರಿಕೆ, ವ್ಯವಸಾಯ ಮತ್ತು ಇತರ ಕೃಷಿ ಕೈಗಾರಿಕೆಗಳಿಗೆ ಬೇಕಾದ ವಸ್ತುಗಳ ಉತ್ಪಾದನೆ, ಕೃಷಿಯಂತ್ರೋಪರಣಗಳ ಮತ್ತು ಕೋಳಿ ಸಾಕಣೆಗೆ ಬೇಕಾದ ಯಂತ್ರೋಪಕರಣಗಳ ತಯಾರಿಕೆ, ಕೀಟನಾಶಕಗಳ ತಯಾರಿಕೆ, ರಾಸಾಯನಿಕ ಗೊಬ್ಬರದ ತಯಾರಿಕೆ ಮುಂತಾದವು ವ್ಯವಸಾಯಕ್ಕೆ ಪೂರಕವಾದ ಹಾಗೂ ಗ್ರಾಮಪ್ರದೇಶಗಳಲ್ಲಿ ಸ್ಥಾಪಿಸಬಹುದಾದ ಕೈಗಾರಿಕೆಗಳಾಗಿವೆ. ಕೃಷಿ ಕೈಗಾರಿಕೆಗಳಲ್ಲಿ ಎರಡು ವಿಧಗಳನ್ನು ಕಾಣಬಹುದು. ಕೃಷಿಮೂಲ ವಸ್ತುಗಳನ್ನು ಕಚ್ಚಾ ಸಾಮಗ್ರಿಯಾಗಿ ಉಪಯೋಗಿಸುವ ಕೈಗಾರಿಕೆಗಳು (ಉದಾ: ಹಣ್ಣು ಮತ್ತು ತರಕಾರಿಗಳ ಸಂಸ್ಕ್ರಣ, ಅಕ್ಕಿ ಮತ್ತು ಬೇಳೆ ಗಿರಣಿಗಳು) ಕೃಷಿಗೆ ಬಳಸಲಾಗುವ ಯಂತ್ರೋಪಕರಣಗಳು, ರಾಸಾಯನಿಕ ಗೊಬ್ಬರದ ಮಿಶ್ರಣ, ಟ್ರ್ಯಾಕ್ಟರುಗಳ ರಿಪೇರಿ, ಕೋಳಿ, ಆಹಾರ ತಯಾರಿಕೆ-ಇವು ಮತ್ತೊಂದು ವಿಧದ ಕೃಷಿ ಕೈಗಾರಿಕೆಗಳಾಗಿವೆ.

ಗ್ರಾಮಕೈಗಾರಿಕೆಗಳಲ್ಲಿ ಕುಟುಂಬದ ಜನರೇ ನಡೆಸುವ ಕೈಗಾರಿಕೆಗಳನ್ನು ಗುಡಿಸಿಲು ಕೈಗಾರಿಕೆಗಳೆಂದು ಕರೆಯಲಾಗಿದೆ. (ನೋಡಿ- ಗುಡಿಸಿಲು-ಕೈಗಾರಿಕೆಗಳು) ಇವು ಪೂರ್ಣವೇಳೆಯ ಕೈಗಾರಿಕೆಗಳಾಗಿರಬಹುದು ಅಥವಾ ಅರೆವೇಳೆಯ ಕೈಗಾರಿಕೆಗಳಾಗಿರಬಹುದು. ಗುಡಿಸಲು ಕೈಗಾರಿಕೆಗೂ ಸಣ್ಣ ಕೈಗಾರಿಕೆಗೂ ಇರುವ ವ್ಯತ್ಯಾಸವೆಂದರೆ ಸಣ್ಣ ಕೈಗಾರಿಕೆಗಳಲ್ಲಿ ಕೂಲಿಗಾಗಿ ದುಡಿಯುವ ಕಾರ್ಮಿಕರಿರುತ್ತಾರೆ, ಅವುಗಳಲ್ಲಿ ಯಂತ್ರ ಮತ್ತು ವಿದ್ಯುಚ್ಛಕ್ತಿಗಳನ್ನು ಮಿತಪ್ರಮಾಣದಲ್ಲಿ ಉಪಯೋಗಿಸಲು ಅವಕಾಶವಿದೆ. ಆದರೆ ಗುಡಿಸಲು ಕೈಗಾರಿಕೆ ಸಾಮಾನ್ಯವಾಗಿ ಯಂತ್ರ ಮತ್ತು ವಿದ್ಯುತ್ತಿನ ಸಹಾಯ ಇರುವುದಿಲ್ಲ. (ಉದಾ: ಗೊಂಬೆಗಳ ತಯಾರಿಕೆ, ಕಸೂತಿ ಕೆಲಸ, ಬುಟ್ಟಿ ಹೆಣೆಯುವುದು).

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗ್ರಾಮಕೈಗಾರಿಕೆಗಳ ಸ್ಥಾಪನೆ ಅವಕಾಶಗಳು ಹೇರಳವಾಗಿವೆ. ಗ್ರಾಮಪ್ರದೇಶಗಳ ಸೌಲಭ್ಯಗಳಿಗೆ ಇವು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತವೆ. ಇವುಗಳಲ್ಲಿ ಕಡಿಮೆ ಬಂಡವಾಳಕ್ಕಿಂತ ಶ್ರಮಕ್ಕೆ ಹೆಚ್ಚಿನ ಪ್ರಾಧಾನ್ಯ, ಒದಗಿಸಬಹುದು. ಏಕೆಂದರೆ ಇಲ್ಲಿ ಬಂಡವಾಳಕ್ಕಿಂತ ಶ್ರಮಕ್ಕೆ ಹೆಚ್ಚಿನ ಪ್ರಾಧಾನ್ಯ. ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ಬಂಡವಾಳದ ಕೊರತೆಯನ್ನೂ ನಿರುದ್ಯೋಗ ಸಮಸ್ಯೆಯನ್ನೂ ಪರಿಹರಿಸಬಹುದು. ಕೃಷಿಕ್ಷೇತ್ರದಲ್ಲಿ ಕಡಿಮೆ ಕೆಲಸವಿರುವ ಕಾಲದಲ್ಲಿ ಹಾಗೂ ಸಂಪೂರ್ಣವಾಗಿ ಕೆಲಸವಿಲ್ಲದಿರುವ ಕಾಲದಲ್ಲಿ ರೈತರನ್ನು ಉತ್ಪಾದಕ ಕಾರ್ಯಗಳಲ್ಲಿ ತೊಡಗಿಸಲೂ ಆ ಮೂಲಕ ರೈತ ಜನ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲೂ ಗ್ರಾಮಕೈಗಾರಿಕೆಗಳೂ ನೆರವಾಗುತ್ತದೆ.

ಸಣ್ಣ ಕೈಗಾರಿಕೆಗಳಿಗೆ ಕಡಿಮೆ ಬಂಡವಾಳ ಬೇಕಾಗಿರುವುದರಿಂದ ಬಂಡವಾಳವನ್ನು ಭಾರಿ ಉದ್ಯಮಗಳ ಸ್ಥಾಪನೆಗೆ ಹೆಚ್ಚು ಲಾಭದಾಯಕವಾಗಿ ಉಪಯೋಗಿಸಿಕೊಳ್ಳಬಹುದಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಂಡವಾಳದ ಕೊರತೆಯಿರುವುದರಿಂದಲೂ ತೀರ ಅವಶ್ಯಕವಾದ ಭಾರಿ ಉದ್ಯಮಗಳ ಸ್ಥಾಪನೆಗೆ ಬಂಡವಾಳ ಅಧಿಕ ಗಾತ್ರದಲ್ಲಿ ಬೇಕಾಗುವುದರಿಂದಲೂ ಸಣ್ಣ ಕೈಗಾರಿಕೆಗೆ ಹೆಚ್ಚಿನ ಪ್ರಾಮುಖ್ಯ ಉಂಟಾಗಿದೆ. ಗ್ರಾಮಕೈಗಾರಿಕೆಗಳಿಂದ ಗ್ರಾಮವಾಸಿಗಳಲ್ಲಿ ಉಳಿತಾಯಕ್ಕೆ ಪ್ರೋತ್ಸಾಹ ಲಭ್ಯವಾಗುತ್ತದೆ. ಗ್ರಾಮಗಳಲ್ಲಿ ಅಡಗಿರುವ ಬಂಡವಾಳ ಹೊರಕ್ಕೆ ಬರಲು ಅವಕಾಶ ದೊರೆಯುತ್ತದೆ.

ಈ ಕೈಗಾರಿಕೆಗಳಿಗೆ ಹೆಚ್ಚು ನೈಪುಣ್ಯದ ಅವಶ್ಯಕತೆಯಲ್ಲ. ಭಾರಿ ಉದ್ಯಮಗಳಲ್ಲಿ ಮೇಲ್ವಿಚಾರಣೆಯ ಹಾಗೂ ಆಡಳಿತ ನಿರ್ವಹಣೆಯ ನೈಪುಣ್ಯ ಅತ್ಯಾವಶ್ಯಕ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಬಂಡವಾಳದಂತೆ ನೈಪುಣ್ಯಕ್ಕೂ ಕೊರತೆಯಿರುವುದರಿಂದ ಅದರ ಅವಶ್ಯಕತೆ ಹೆಚ್ಚಾಗಿರದ ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ, ವಿದೇಶಿ ನೈಪುಣ್ಯವನ್ನು ದುಬಾರಿ ಬೆಲೆ ತೆತ್ತು ಆಮದು ಮಾಡಿಕೊಳ್ಳುವುದು ತಪ್ಪುತ್ತದೆ.

ಗ್ರಾಮಕೈಗಾರಿಕೆಗಳಿಗಾಗಿ ವಿದೇಶಿ ಉಪಕರಣಗಳನ್ನಾಗಲಿ ಯಂತ್ರಗಳನ್ನಾಗಲಿ ಬಿಡಿಭಾಗಗಳನ್ನಾಗಲಿ ಆಮದು ಮಾಡಿಕೊಳ್ಳುವ ಆವಶ್ಯಕತೆಯಿರುವುದಿಲ್ಲ. ಇದರಿಂದ ವಿದೇಶಿ ವಿನಿಮಯದ ಕೊರತೆಯಾಗಲಿ ಪ್ರತಿಕೂಲ ಪಾವತಿ ಶಿಲ್ಕಿನ ಸಮಸ್ಯೆಯಾಗಲಿ ತೀವ್ರವಾಗುವುದಿಲ್ಲ. ಈ ಕೈಗಾರಿಕೆಗಳು ಶೀಘ್ರವಾಗಿ ಫಲ ಕೊಡುತ್ತವೆ. ಬಂಡವಾಳ ಹೂಡಿಕೆಗಳೂ ಉತ್ಪಾದಿತ ವಸ್ತುಗಳು ಮಾರಾಟಕ್ಕೆ ಬರುವುದಕ್ಕೂ ನಡುವಣ ಕಾಲ ತುಂಬ ಕಡಿಮೆ ಆದ್ದರಿಂದ ಬೆಲೆ ಏರಿಕೆಯನ್ನು ತಡೆಗಟ್ಟಲು ಇವು ಸಹಾಯಕವಾಗಿವೆ.

ಈ ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಪ್ರಾದೇಶಿಕ ಅಸಮತೆಗಳನ್ನು ಹೋಗಲಾಡಿಸಬಹುದಾಗಿದೆ. ಬೃಹತ್ ಕೈಗಾರಿಕೆಗಳು ಒಂದೆಡೆಯಲ್ಲೇ ಕೇಂದ್ರೀಕೃತವಾಗಿ, ಅವುಗಳ ಸುತ್ತಮುತ್ತಲಿನ ಪ್ರದೇಶಗಳು ಮಾತ್ರ ಬೆಳೆಯಬಲ್ಲವು. ಇದರಿಂದ ಇತರ ಪ್ರದೇಶಗಳು ಆರ್ಥಿಕ ಅಭಿವೃದ್ಧಿಯಲ್ಲಿ ಹಿಂದುಳಿದು, ಪ್ರಾದೇಶಿಕ ಅಸಮತೆಯುಂಟಾಗುತ್ತದೆ. ಹಣ ಮತ್ತು ಅಧಿಕಾರ ಕೆಲವರಲ್ಲೇ ಕೆಂದ್ರೀಕೃತವಾಗದಂತೆ ವರಮಾನ ಮತ್ತು ಸಂಪತ್ತಿನ ಹಂಚಿಕೆಯಲ್ಲಿ ಇವು ಸಮಾನತೆಯನ್ನು ತರಬಲ್ಲವು. ಬೃಹತ್ ಕೈಗಾರಿಕೆಗಳ ಸ್ಥಾಪನೆಯಿಂದುಂಟಾಗುವ ವಸತಿ ಮತ್ತು ಆಹಾರ ಸಮಸ್ಯೆ, ಕೊಳಚೆ ಪ್ರದೇಶಗಳ ನಿರ್ಮಾಣ, ರೋಗರುಜಿನುಗಳು ಈ ಕೈಗಾರಿಕೆಗಳ ಸ್ಥಾಪನೆಯಿಂದುಂಟಾಗುವುದಿಲ್ಲ. ಅಲ್ಲದೆ, ಇವು ಉದ್ಯೋಗವನ್ನು ಕಾರ್ಮಿಕನಿರುವಲ್ಲಿಗೆ ಕೊಂಡೊಯ್ಯುವುದರಿಂದ, ಕಾರ್ಮಿಕರು ಒಂದೆಡೆಯಿಂದ ಮತ್ತೊಂದೆಡೆಗೆ ಚಲಿಸುವ ಸಮಸ್ಯೆ ಏಳುವುದಿಲ್ಲ.

ಭಾರತದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಗ್ರಾಮಕೈಗಾರಿಕಾ ಯೋಜನೆಗಳನ್ನು ರೂಪಿಸಲಾಗಿದೆ. ಈ ಕೈಗಾರಿಕಾ ಯೋಜನೆಯಲ್ಲಿ ಅನೇಕ ಕೈಗಾರಿಕೆಗಳು ಸ್ಥಾಪಿತವಾಗಿವೆ. ಜೊತೆಗೆ ಆಯಾ ಪ್ರದೇಶಗಳಲ್ಲಿ ಪ್ರಸಿದ್ಧವಾಗಿರುವ ಕಲೆ ಮತ್ತು ಕೈಗಾರಿಕೆಗಳನ್ನು ಈ ಯೋಜನೆಯ ಮೂಲಕ ಪುನರುಜ್ಜೀವನಗೊಳಿಸಲಾಗಿದೆ. ಭಾರತದ ಮೊದಲನೆಯ ಪಂಚವಾರ್ಷಿಕ ಯೋಜನೆಯಲ್ಲಿ ಕೈಮಗ್ಗದ ಕೈಗಾರಿಕೆಗಳು, ಖಾದಿ, ಗುಡಿಕೈಗಾರಿಕೆಗಳು, ತೆಂಗಿನನಾರಿನ ಕೈಗಾರಿಕೆಗಳು ಮುಂತಾದವುಗಳ ಅಭಿವೃದ್ಧಿಯ ಬಗ್ಗೆ ಸಲಹೆ ಮತ್ತು ಸಹಾಯ ನೀಡಲು ಅಖಿಲ ಭಾರತ ಮಂಡಳಿಗಳನ್ನು ಸ್ಥಾಪಿಸಲಾಯಿತು. ಎರಡನೆಯ ಯೋಜನೆಯಲ್ಲಿ ಗ್ರಾಮಕೈಗಾರಿಕೆಗಳ ಯೋಜನೆಗಾಗಿ 180 ಕೋಟಿ ರೂ. ಗಳನ್ನೂ ಮೂರನೆಯ ಪಂಚವಾರ್ಷಿಕ ಯೋಜನೆಯಲ್ಲಿ 264 ಕೋಟಿ ರೂ. ಗಳನ್ನೂ ವಿನಿಯೋಗಿಸಲಾಯಿತು. ಗ್ರಾಮಕೈಗಾರಿಕೆಗಳು ಶೀಘ್ರ ಪ್ರಗತಿ ಹೊಂದುವಂತೆ ನೋಡಿಕೊಳ್ಳಲು ಉನ್ನತ ಮಟ್ಟದ ಗ್ರಾಮ ಕೈಗಾರಿಕಾ ಯೋಜನಾ ಮಂಡಳಿಯನ್ನು ಸ್ಥಾಪಿಸಲಾಗಿದೆ. ಕೈಮಗ್ಗದ ಕೈಗಾರಿಕೆ ಭಾರತದ ಗ್ರಾಮ ಕೈಗಾರಿಕೆಗಳಲ್ಲಿ ಪ್ರಮುಖವಾದ್ದು. ಈ ಕೈಗಾರಿಕದೆ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಒದಗಿಸಿದೆ. ರೇಷ್ಮೆ ಹುಳುಗಳ ಸಾಕಣೆಯಿಂದ ಉದ್ಯೋಗದ ಜೊತೆಗೆ ರೇಷ್ಮೆ ಕೈಗಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳೂ ಒದಗುತ್ತವೆ. ಕುಂಬಾರಿಕೆ, ಮರಗೆಲಸ, ಬಿದಿರು ಹೆಣಿಗೆ, ಜೇನು ಸಾಕಣೆ ಮುಂತಾದವು ಇತರೆ ಮುಖ್ಯ ಗ್ರಾಮ ಕೈಗಾರಿಕೆಗಳು.

ಭಾರತದ ವಿವಿಧ ಪ್ರದೇಶಗಳ ವಾಯುಗುಣಗಳಿಗೆ ಅನುಗುಣವಾಗಿ ಗ್ರಾಮ ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ನಿರುದ್ಯೋಗ ನಿವಾರಣೆಯ ಜೊತೆಗೆ, ಭೂಮಿಯ ಉತ್ಪಾದನ ಶಕ್ತಿಯನ್ನು ಹೆಚ್ಚಿಸಬಹುದು. ಇದರಿಂದ ಗ್ರಾಮಸ್ಥರ ಜೀವನ ಮಟ್ಟ ಸುಧಾರಿಸುತ್ತದೆ. ಹಿಮಾಲಯದ ತಪ್ಪಲು ಮತ್ತು ಪಶ್ಚಿಮ ಘಟ್ಟಗಳ ಪ್ರದೇಶಗಳ ಅರಣ್ಯಗಳಲ್ಲಿ ಬೆಲೆಬಾಳುವ ಮರಗಳು, ಬೊಂಬು, ಮೂಲಿಕೆ, ಬಿದಿರು, ನಾರು, ಹುಲ್ಲು ಮುಂತಾದ ಕಚ್ಚಾ ಸಾಮಗ್ರಿಗಳು ಪುಕ್ಕಟೆಯಾಗಿಯೂ ಹೇರಳವಾಗಿಯೂ ದೊರೆಯುವುದರಿಂದ ಬುಟ್ಟಿ ಹೆಣೆಯವುದು, ಹಗ್ಗ ಹೊಸೆಯುವುದು, ಚಾಪೆ ಹೆಣೆಯುವುದು, ತೆಂಗಿನ ಗರಿಗಳನ್ನು ಹೆಣೆಯುವುದು, ಬೀಸಣಿಗೆ ತಯಾರಿಸುವುದು, ಬೆತ್ತದ ಕುರ್ಚಿ ಮಾಡುವುದು ಮುಂತಾದ ಕೈಗಾರಿಕೆಗಳನ್ನು ಸುಲಭವಾಗಿ ಸ್ಥಾಪಿಸಬಹುದಾಗಿದೆ.

ಒಣ ಹವೆಯುಳ್ಳ ಪ್ರದೇಶಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ, ದಖನ್ ಮುಂತಾದ ಎಡೆಗಳಲ್ಲಿ ಸುವಾಸನಾ ತೈಲಗಳ ತಯಾರಿಕೆ, ಅರಗಿನ ಶುದ್ಧೀಕರಣ, ಡಬ್ಬಗಳ ತಯಾರಿಕೆ, ವನಸ್ಪತಿ ತಯಾರಿಕೆ, ಬಳೆ ಮತ್ತು ಆಟದ ಸಾಮಾನುಗಳ ತಯಾರಿಕೆಯ ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿದೆ. ಮಾರುಕಟ್ಟೆಯ ಸೌಲಭ್ಯಗಳಿದ್ದರೆ ದೊಡ್ಡ ದೊಡ್ಡ ಪಟ್ಟಣಗಳು ಕೋಳಿಸಾಕಾಣೆಯ ಕೇಂದ್ರಗಳಾಗಿ ಲಕ್ಷಾಂತರ ಕೃಷಿ ಕಾರ್ಮಿಕರಿಗೆ ಬಿಡುವಿನ ವೇಳೆಯಲ್ಲಿ ಉದ್ಯೋಗ ಒದಗಿಸಬಲ್ಲವು.

ಭಾರತದಲ್ಲಿ ವ್ಯವಸಾಯ ಪೂರ್ಣಕಾಲದ ಉದ್ಯೋಗವಲ್ಲ. ವರ್ಷದ ಕೆಲವು ತಿಂಗಳುಗಳಲ್ಲಿ ಮಾತ್ರ ಹೆಚ್ಚು ಕೆಲಸವಿದ್ದು ಉಳಿದ ಸಮಯದಲ್ಲಿ ಬಿಡುವು ಇರುತ್ತದೆ. ಆದ್ದರಿಂದ ಗ್ರಾಮಗಳಲ್ಲಿ ಸ್ಥಾಪಿತವಾಗುವ ಕೈಗಾರಿಕೆಗಳು ವ್ಯವಸಾಯಕ್ಕೆ ಪೂರಕವಾಗಿರಬೇಕು. ಅಂದರೆ ವ್ಯವಸಾಯ ಕ್ಷೇತ್ರದಲ್ಲಿ ಬಿಡುವು ದೊರೆತಾಗ, ಆ ಕ್ಷೇತ್ರದಿಂದ ಬಿಡುಗಡೆ ಹೊಂದುವ ಕಾರ್ಮಿಕ ಶಕ್ತಿಯನ್ನು ಮತ್ತೆ ಆ ಕೆಲಸದಲ್ಲಿ ಉದ್ಯುಕ್ತಗೊಳಿಸುವ ಸಮಯೋಚಿತ ರೀತಿಯಲ್ಲಿ ಗ್ರಾಮ ಕೈಗಾರಿಕೆಗಳು ಕೆಲಸ ನಿರ್ವಹಿಸಬೇಕು.

ಮರದ ಕೆತ್ತನೆ ಕೆಲಸ, ಹಿತ್ತಾಳೆ ಸಾಮಾನಿನ ಕುಸುರಿ ಕೆಲಸ, ಲೋಹ ಕೈಗಾರಿಕೆ, ಬಟ್ಟೆಗಳಿಗೆ ಬಣ್ಣ ಹಾಕುವುದು, ಕಂಬಳಿ ನೇಯುವುದು, ಕಾಗದ ಮತ್ತು ಸಾಬೂನಿನ ತಯಾರಿಕೆ, ಚರ್ಮ ಹದ ಮಾಡುವುದು, ಪಾದರಕ್ಷೆಯ ತಯಾರಿಕೆ ಮುಂತಾದ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಅಲ್ಪಾವಧಿಯ ತರಬೇತು ಮತ್ತು ನೈಪುಣ್ಯ ಅಗತ್ಯ. ಗ್ರಾಮ ಪ್ರದೇಶಗಳನ್ನು ವೃದ್ಧಿಗೊಳಿಸಲು ಈ ಕೈಗಾರಿಕೆಗಳು ಅತ್ಯಾವಶ್ಯಕವಾಗಿವೆ. (ಎನ್.ಎ.ಎಸ್.)