ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರಾಮ್ಋಣ ಡಿಪ್ಲೊಕಾಕೈ
ಗ್ರಾಮ್ಋಣ ಡಿಪ್ಲೊಕಾಕೈ -
ನೈಸೀರಿಯೇಸೀ ಕುಟುಂಬದ ಮೂರು ಬ್ಯಾಕ್ಟೀರಿಯ ಜಾತಿಗಳ ವಿವರಣಾತ್ಮಕ ಹೆಸರು. ಇವುಗಳ ಪೈಕಿ ಜಮೆಲ್ಲ ಮತ್ತು ವೈಲೊನೆಲ್ಲ ಎಂಬ ಎರಡು ಜಾತಿಗಳು ಮನುಷ್ಯ ಮತ್ತು ಇತರ ಪ್ರಾಣಿಗಳಲ್ಲಿ ವಾಸಿಸುತ್ತವೆ. ಇವು ಕೊಳೆತಿನಿಗಳು (ಮೃತೋಪಜೀವಿಗಳು, ಸ್ಯಾಪ್ರೊಫೈಟ್ಸ್). 3ನೆಯ ಜಾತಿಯಾದ ನೈಸೀರಿಯದಲ್ಲಿ ಎರಡು ಪ್ರಭೇದಗಳಿವೆ: ನೈ.ಗಾನನೇರಿಯೆ, ನೈ. ಮೆನಿಂಜೈಟಿಡಿಸ್. ಇವುಗಳ ಸಾಮಾನ್ಯ ಗಾನೊಕಾಕಸ್ ಮತ್ತು ಮೆನಿಂಗೊಕಾಸ್. ಇವೆಲ್ಲ ಬ್ಯಾಕ್ಟೀರಿಯಗಳು ಗೋಳಾಕಾರವಾಗಿಯೂ (ಕಾಕೈ) ಜೊತೆ ಜೊತೆಯಾಗಿಯೂ (ಡಿಪ್ಲಾ) ಇರುವುದರಿಂದ ಡಿಪ್ಲೊಕಾಕೈ ಎಂಬ ಹೆಸರಿನಿಂದ ಕರೆಯಲ್ಪಡುತ್ತವೆ. ಗಾನೊಕಾಕಸ್ ಮತ್ತು ಮೆನಿಂಗೊಕಾಕಸುಗಳನ್ನು ಆಮೂಲಾಗ್ರವಾಗಿ ಅಭ್ಯಸಿಸಿದ್ದರೂ ನೈಸೀರಿಯ ಪ್ರಭೇದದ ಗುಣಲಕ್ಷಣಗಳು ಇನ್ನೂ ಪೂರ್ಣವಾಗಿ ಅರ್ಥವಾಗಿಲ್ಲ. ಅದರಂತೆಯೆ ಮೈಲೊನೆಲ್ಲ ಜಾತಿಯ ಬ್ಯಾಕ್ಟೀರಿಯಗಳ ಗುಣಲಕ್ಷಣಗಳು ಕೂಡ.
ಜಮೆಲ್ಲವನ್ನು ಮೊದಲಿಗೆ ನೈಸೀರಿಯದೊಡನೆ ವರ್ಗೀಕರಿಸಿ ಇದಕ್ಕೆ ನೈ.ಹಿಮೊಲೈಸಾನ್ಸ್ ಎಂದು ಹೆಸರಿಟ್ಟಿದ್ದರು. ಜಮೆಲ್ಲ ಉಪದ್ರವಕಾರಿಯಲ್ಲದ ಜೀವಿ. ಸಾಧಾರಣವಾಗಿ ಮನುಷ್ಯನ ಗಂಟಲಿನ ಭಾಗದಲ್ಲಿ ವಾಸಿಸುತ್ತದೆ. ಜೀವರಸಾಯನ ಕ್ರಿಯಾವಿಧಾನಗಳಲ್ಲಿ ಈ ಜೀವಿಗೂ ನೈಸೀರಿಯ ಜೀವಿಗಳಿಗೂ ವ್ಯತ್ಯಾಸವಿದೆಯಾದ್ದರಿಂದ ಇದನ್ನು ಬೇರೆ ಜಾತಿಯ ಸೂಕ್ಷ್ಮಜೀವಿ ಎಂದು ಗುರುತಿಸಬೇಕಾಯಿತು.
ವೈಲೊನೆಲ್ಲ ಜಾತಿಯ ಬ್ಯಾಕ್ಟೀರಿಯಗಳು ಚಿಕ್ಕ ಜೋಡಿಯ ಜೀವಿಗಳು. ಇವು ಇತರ ಡಿಪ್ಲೊಕಾಕೈಗಳಿಗಿಂತ ವಿಭಿನ್ನವಾಗಿವೆ. ಇವು ಅವಾಯುಶ್ವಸನ (ಅನೇರೋಬಿಕ್) ಉಸಿರಾಟವನ್ನು ಮಾಡಬಲ್ಲವು. ಮನುಷ್ಯ ಹಾಗೂ ಪ್ರಾಣಿಗಳ ಬಾಯಿ, ಕರುಳು ಮತ್ತು ಶುದ್ಧೀಕರಣಾಂಗಗಳ ಮತ್ತು ಜನನೇಂದ್ರಿಯಗಳ ನಾಳಗಳಲ್ಲಿ ಇವು ವಾಸಿಸುತ್ತವೆ. ಈ ಜಾತಿಯ ಸುಮಾರು ಮೂವತ್ತು ಪ್ರಭೇದಗಳನ್ನು ಗುರುತಿಸಿ ವಿವರಿಸಲಾಗಿದೆ. ಇವುಗಳ ಬಾಹ್ಯಲಕ್ಷಣಗಳಲ್ಲಿಯೂ ಶರೀರ ಕ್ರಿಯಾವಿಧಾನ ಲಕ್ಷಣಗಳಲ್ಲಿಯೂ ಬಹಳ ವ್ಯತ್ಯಾಸಗಳು ಇವೆ. ಉಪಯೋಗಿಸಿದ ಒಂದೊಂದು ರೀತಿಯ ಪೌಷ್ಠಿಕ ಮಾಧ್ಯಮದಲ್ಲೂ ಈ ಗುಣಲಕ್ಷಣಗಳು ವ್ಯತ್ಯಾಸಗೊಳ್ಳುವುದರಿಂದ ಈ ಜಾತಿಯಲ್ಲಿ ನಿಖರವಾಗಿ ಎಷ್ಟು ಪ್ರಭೇದಗಳಿವೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ನೈಸೀರಿಯ ಜಾತಿಗೆ ಸೇರಿದ ಎಲ್ಲ ಜೀವಿಗಳೂ ಪೂರ್ಣ ಪರತಂತ್ರ ಜೀವಿಗಳು. ಮನುಷ್ಯ ಮತ್ತು ಪ್ರಾಣಿಗಳು ಇವುಗಳ ಆಶ್ರಯದಾತ ಜೀವಿಗಳು. ಇವು ವಾಯುಶ್ವಸನ (ಏರೋಬಿಕ್) ಉಸಿರಾಟವನ್ನು ನಡೆಸುತ್ತವೆ. ಕೆಲವು ಬಾರಿ ಸನ್ನಿವೇಶಕ್ಕೆ ಅನುಗುಣವಾಗಿ ಅವಾಯುಶ್ವಸನ ಉಸಿರಾಟವನ್ನೂ ಮಾಡಬಲ್ಲವು. ಇವುಗಳ ಕೃಷಿ ಅಷ್ಟೊಂದು ಸುಲಭವಲ್ಲ. ಆದ್ದರಿಂದ ಇವುಗಳ ಬೆಳೆವಣಿಗೆ ಸಾಮಾನ್ಯ ಆಹಾರವಸ್ತುಗಳಿರುವ ಕೃಷಿ ತಟ್ಟೆಗಳಲ್ಲಿ ಸಾಧ್ಯವಿಲ್ಲ. ಸಾಧಾರಣವಾಗಿ ಇವುಗಳ ಎಲ್ಲ ಪ್ರಭೇದಗಳಿಗೂ ಆಕ್ಸಿಡೇಸ್ ಧನಾತ್ಮಕ ಮತ್ತು ಇಂಡೋಲ್ ಋಣಾತ್ಮಕ ಗುಣಗಳಿವೆ. ಬಹು ಉಪದ್ರವಕಾರಿಗಳಲ್ಲದ ಪ್ರಭೇದಗಳಿವು. ಒಂದು ರೀತಿಯ ಹಳದಿ ಬಣ್ಣದ ವರ್ಣದ್ರವ್ಯವನ್ನು (ಪಿಗ್ಮೆಂಟ್) ಉತ್ಪಾದಿಸುತ್ತವೆ. ಸ್ವಾಭಾವಿಕವಾಗಿ ಸಕ್ಕರೆಯ ಹುದುಗುಕ್ರಿಯೆಯ (ಫರ್ಮೆಂಟೇಷನ್) ಆಧಾರದ ಮೇಲೆ ಇವುಗಳ ವಿವಿಧ ಬಗೆಗಳನ್ನು ವರ್ಗೀಕರಿಸಲಾಗಿದೆ. ಮನುಷ್ಯನಿಂದ ಬೇರ್ಪಡಿಸಿದ ಕೆಲವು ಮುಖ್ಯ ಪ್ರಭೇದಗಳು ನಿರ್ದಿಷ್ಟ ರೀತಿಯ ಹುದುಗು ಕ್ರಿಯಾ ವಿಧಾನಗಳನ್ನು ತೋರಿಸುತ್ತವೆ. ಗಾನೊಕಾಕಸುಗಳು ಕೇವಲ ಗ್ಲೂಕೋಸನ್ನು ಮಾತ್ರ ಹುದುಗಿಸಿದರೆ ಮೆನಿಂಗೊಕಾಕಸುಗಳು ಗ್ಲೂಕೋಸ್ ಮತ್ತು ಮಾಲ್ಟೋಸುಗಳೆರಡನ್ನೂ ಹುದುಗಿಸುವುವು. ನೈಸೀರಿಯ ಕ್ಯಟರಾಲಿಸ್ ಗ್ಲೂಕೋಸನ್ನಾಗಲಿ ಮಾಲ್ಟೋಸನ್ನಾಗಲಿ ಹುದುಗಿಸಲಾರದು.
ಹೊಸ ಸ್ರಾವಕಗಳಲ್ಲಿ ದೊರೆಯುವ ಈ ಬ್ಯಾಕ್ಟೀರಿಯಗಳಲ್ಲಿ ಮಾದರಿ ಡಿಪ್ಲೊಕಾಕೈನಲ್ಲಿರುವ ಜೋಡಿ ರಚನೆಯನ್ನೂ ಚಪ್ಪಟೆಯಾದ ಅಥವಾ ಸ್ವಲ್ಪ ಒಳಬಾಗುಳ್ಳ (ಕಾನ್‍ಕೇವ್) ಅಂಚುಗಳುಳ್ಳ ಬಾಹ್ಯಲಕ್ಷಣಗಳನ್ನೂ ಗ್ರಾಮ್ ವರ್ಣೀಕರಿಸಿದ ಒರಸುಗಳಲ್ಲಿ (ಸ್ಮಿಯರ್ಸ್) ಕಾಣಬಹುದು. ಆದರೆ ಈ ರೀತಿಯ ರಚನೆಗಳು ಸಾಮಾನ್ಯವಾಗಿ ಕೃಷಿಮಾಡಿದ ಬ್ಯಾಕ್ಟೀರಿಯಗಳಲ್ಲಿ ಕಾಣಬರುವುದಿಲ್ಲ. ಆದರೆ ಇಲ್ಲಿ ಇವು ಜೊತೆಯಾಗಿ ಅಥವಾ ನಾಲ್ಕರ ಗುಂಪುಗಳಂತೆ ಅಥವಾ ಅಂಡಾಕಾರದ ಅಥವಾ ದುಂಡಗಿರುವ ಗುಂಪುಗಳಂತೆ ಕಂಡುಬರುತ್ತವೆ.
ಗಾನೊಕಾಕಸ್ ಒಂದನ್ನು ಬಿಟ್ಟು ಇನ್ನುಳಿದ ನೈಸೀರಿಯಗಳು ಮೂಗು ಗಂಟಲಿನಲ್ಲಿ ವಾಸಿಸುವುವು. ನೈಸೀರಿಯ ಕ್ಯಾವಿಯೆ ಮತ್ತು ನೈ. ಅನಿಮ್ಯಾಲಿಸ್ ಎಂಬ ಎರಡು ಪ್ರಭೇದಗಳನ್ನು ಗಿನಿಹಂದಿಯಿಂದ ಬೇರ್ಪಡಿಸಲಾಗಿದೆ. ನೈ. ಓವಿನ್ ಎಂಬುದನ್ನು ಕೆರಾಟೋಕಂಜಂಕ್ವಿವೈಟಿಸ್ ರೋಗದಿಂದ ನರಳುವ ಕುರಿಗಳ ಕಣ್ಣಿನಿಂದ ಪ್ರತ್ಯೇಕಿಸಲಾಗಿದೆ. ನೈ. ಕ್ಯಾಟರ್ಯಾಲಿಸ್, ನೈ. ಫ್ಲಾವೆಸೆನ್ಸ್ ಮತ್ತು ನೈ. ಸಬ್ ಫ್ಲಾವಗಳನ್ನು ಮೆನಿಂಜೈಟಿಸ್ ರೋಗಿಯ ಮಿದುಳುಬಳ್ಳಿಯ ರಸದಿಂದ ಪ್ರತ್ಯೇಕಿಸಲಾಗಿದೆ. ಆದರೆ ಇವುಗಳ ಇರುವಿಕೆ ಬಹಳ ಅಪರೂಪ.
ನೈಸೀರಿಯ ಜಾತಿಯಲ್ಲಿ ಪ್ರಪ್ರಥಮವಾಗಿ ಕಂಡುಹಿಡಿದ ಜೀವಿ ಎಂದರೆ ಗಾನೊಕಾಕಸ್, ಆಲ್ಬರ್ಟ್ ನೈಸರ್ ಎಂಬಾತ ಗಾನರೀಯ ರೋಗಿಗಳಿಂದ ಗಾನೊಕಾಕೈಗಳನ್ನು ಪ್ರಥಮವಾಗಿ ಪ್ರತ್ಯೇಕಿಸಿದ(1879). ಈ ಬ್ಯಾಕ್ಟೀರಿಯ ಆಫ್ತಾಲ್ಮಿಯ ನಿಯೋನೆಟೋರಮ್ ಎಂಬ ರೋಗವನ್ನು ಉಂಟುಮಾಡುವುದು. ಆ್ಯಂಟನ್ ವೀಶಲ್ ಬಾಮ್ ಎಂಬಾತ ಆರು ಜನ ಮೆನಿಂಜೈಟಿಸ್ ರೋಗಿಗಳ ಮಿದುಳುಬಳ್ಳಿ ರಸದಿಂದ ಮೆನಿಂಗೋಕಾಕಸ್ ಬ್ಯಾಕ್ಟೀರಿಯಗಳನ್ನು ಪ್ರತ್ಯೇಕಿಸಿದ (1887).
ನೈಸೀರಿಯ ಮೆನಿಂಜೈಟಿಡಿಸ್ ಬ್ಯಾಕ್ಟೀರಿಯ ಕೇವಲ ಮನುಷ್ಯನಲ್ಲಿ ಮಾತ್ರ ಜೀವಿಸಬಲ್ಲದು. ಸುಮಾರು 5%ರಷ್ಟು ಜನರಲ್ಲಿ ಇವು ಮೂಗು ಗಂಟಲು ಇರುವುದು ಕಂಡುಬಂದಿದೆ. ಮೆನಿಂಗೊಕಾಕಸ್ ಆಗಾಗ ಸಾಂಕ್ರಾಮಿಕ ಮೆನಿಂಜೈಟಿಸ್ ರೋಗವನ್ನು ಉಂಟುಮಾಡುತ್ತದೆ. ಇದು ಬಹುಮಟ್ಟಿಗೆ ನಿರ್ಬಂಧಿತ ಜನಸಂದಣಿಗಳಲ್ಲಿ ಕಂಡುಬರುವುದುಂಟು. ಉದಾಹರಣೆಗೆ ಸೈನಿಕ ಶಿಬಿರಗಳಲ್ಲಿ ಇಂಥ ತೀವ್ರತರವಾದ ರೋಗ ಶೀಘ್ರವಾಗಿ ಹರಡುವುದು ತಿಳಿದಿದೆ. ಮೆನಿಂಗೊಕಾಕೈನಲ್ಲಿ 4 ವಿವಿಧ ಬಗೆಯ ಆ್ಯಂಟಿಜೆನಿಕ್ ಗುಣಲಕ್ಷಣಗಳುಳ್ಳ ಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಿಗೆ ಂ, ಃ, ಅಮತ್ತು ಆಗಳೆಂದು ಹೆಸರು. ಸಾಂಕ್ರಾಮಿಕ ರೋಗಗಳಲ್ಲಿ ಸಾಮಾನ್ಯವಾಗಿ ಃ ಬಗೆಯ ಮೆನಿಂಗೊಕಾಕೈಗಳಿರುವುವು. ಆದರೆ ಅಲ್ಲಲ್ಲಿ ಒಂಟೊಂಟಿಯಾಗಿ ಸೋಂಕು ತಗಲಿದ ರೋಗಿಗಳಲ್ಲಿ ಇಂಥ ವಿಭೇದಗಳನ್ನು ಗುರುತಿಸುವುದು ಸಾಧ್ಯವಿಲ್ಲ. ಈ ಮುಂಚೆ ನಿರುಪದ್ರವಿಗಳಾಗಿಯೇ ಇದ್ದಜೀವಿಗಳು ಬಹುಶ: ಉಸಿರಾಡುವ ಹಾದಿಯ ದುಗ್ಧನಾಳಗಳಿಗೆ ಪ್ರವೇಶಿಸಿ ಅಲ್ಲಿ ಬ್ಯಾಕ್ಟೀರಿಮಿಯವನ್ನು ಉಂಟುಮಾಡುತ್ತವೆ. ಅನಂತರ ಇವುಗಳಿಗೆ ಹೇಗೆ ಉಪದ್ರವಕಾರಕಶಕ್ತಿ ಬಂದು ಅವು ದಾಳಿಯನ್ನು ಪ್ರಾರಂಭಿಸುತ್ತವೆ ಎಂಬುದು ಇನ್ನೂ ಅರ್ಥವಾಗಿಲ್ಲ. ಜೀವಿಗಳು ರೋಗಿಯ ಮೆನಿಂಜಸ್, ಚರ್ಮ, ಕೀಲುಗಳು ಕಣ್ಣು ಮತ್ತು ಇತರ ಅಂಗಗಳಲ್ಲಿ ಆಶ್ರಯ ಪಡೆಯಬಹುದು. ಈ ರೋಗಗಳಲ್ಲಿ ತೀವ್ರತರವಾದ ತಲೆನೋವು, ಜ್ವರ, ಚಳಿ, ಮೈಕೈನೋವು ಮುಂತಾದವು ಕಂಡುಬರುತ್ತವೆ. ಇದರಿಂದ ರೋಗಿಯ ಮೇಲೆ ಅತಿತೀವ್ರವಾದ ಆಘಾತವಾಗುವುದು. ಚರ್ಮದ ರಕ್ತನಾಳಗಳಲ್ಲಿ ವಾಸಿಸುವ ಈ ಬ್ಯಾಕ್ಟೀರಿಯಗಳಿಂದ ರಕ್ತಕರಣೆ, ರಕ್ತೋದ್ರೇಕ ಚರ್ಮದಲ್ಲಿ ಬೊಕ್ಕೆಗಳಂಥ ರಚನೆಗಳು ಹುಟ್ಟಿಕೊಳ್ಳುತ್ತವೆ.
ಜೀವಿಪ್ರತಿರೋಧಕಗಳ ಸಂಶೋಧನೆಯಾದ ಮೇಲೆ ಇವುಗಳ ಹಾವಳಿ ಸ್ವಲ್ಪ ಕಡಿಮೆಯಾಗಿದೆ. ಹಿಂದಿನ ವರ್ಷಗಳಲ್ಲಿ ಮೆನಿಂಗೊಕಾಕೈಗಳಿಂದಾದ ರೋಗಗಳಿಗೆ ಸಲ್ಪೊನಮೈಡುಗಳು ಮತ್ತು ಪೆನಿಸಿಲಿನುಗಳಿಂದ ಚಿಕಿತ್ಸೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಬಹಳ ಮೆನಿಂಗೊಕಾಕೈಗಳು ಪೂರ್ಣವಾಗಿ ಸಲ್ಫೂನಮೈಡುಗಳನ್ನು ನಿರೋಧಿಸಬಲ್ಲ ಸಾಮಥ್ರ್ಯವನ್ನು ಗಳಿಸಿಕೊಂಡಿವೆ. ಇವನ್ನು ಕೊಲ್ಲಲು ಪೆನಿಸಿಲಿನ್ ಅತಿ ಹೆಚ್ಚಿನ ಮೊತ್ತದಲ್ಲಿ ಬೇಕು. ಇಲ್ಲವೆ ಬೇರೆ ಜೀವಿಪ್ರತಿರೋಧಕಗಳನ್ನು ಚಿಕಿತ್ಸೆಗೆ ಉಪಯೋಗಿಸಬೇಕು. (ಎನ್.ವಿ.ಎ.)
ನೈಸೀರಿಯ ಗಾನೊರೀಯೇ ಎಂಬ ಬ್ಯಾಕ್ಟೀರಿಯ ಮಾನವನಲ್ಲಿ ಗಾನರೀಯ ಎಂಬ ಲೈಂಗಿಕ ರೋಗವನ್ನು ಉಂಟುಮಾಡುತ್ತದೆ. ಮಾನವನ ಮೂಗು ಗಂಟಲಿನಲ್ಲಿ ಇಲ್ಲದಿರುವ ಗ್ರಾಮ್‍ಋಣ ಡಿಪ್ಲೋಕಾಕಸ್ ಇದೊಂದೇ. ಪೂರ್ಣ ಪರಾವಲಂಬಿ. ಸಾಮಾನ್ಯವಾಗಿ ಮಾನವರ ದೇಹದಲ್ಲಿ ಮಾತ್ರ ಜೀವಿಸಬಲ್ಲುದು ಮತ್ತು ಹಾಗೆ ಇದ್ದಾಗ ರೋಗವನ್ನು ಉಂಟುಮಾಡಿಯೇ ತೀರುತ್ತದೆ. ಲೈಂಗಿಕ ಸಂಪರ್ಕದಿಂದ ವ್ಯಕ್ತಿಯಿಂದ ವ್ಯಕ್ತಿಗೆ ಇದು ಹಬ್ಬುತ್ತದೆ. ಅಪರೂಪವಾಗಿ ರೋಗಿಯ ಕೀವಿನಿಂದ ಸೋಂಕು ಉಂಟಾಗಬಹುದು. ಈ ರೋಗದಿಂದ ಪೀಡಿತಳಾದ ಗರ್ಭಿಣಿ ಪ್ರಸವಿಸುವಾಗ ಹುಟ್ಟುವ ಮಗುವಿನ ಕಣ್ಣುಗಳಿಗೆ ಸೋಂಕು ತಗುಲಿ ಜನನಕಾಲದ ಕಣ್ಣುನೋವು (ಆಫ್ತಾಲ್ಮಿಯ ನಿಯೋನೆಟೋರಮ್) ಉಂಟಾಗುವುದು ಸಾಮಾನ್ಯ . ಮಿಲಿಮೀಟಿರಿನ ಸಾವಿರದಲ್ಲಿ ಒಂದು ಭಾಗಕ್ಕಿಂತಲೂ ಸಣ್ಣದಾಗಿರುವ ನೈಸೀರಿಯ ಗಾನೊಕಾಕೈಗಳು ಜೊತೆ ಜೊತೆಯಾಗಿಯೇ ಒಂದಕ್ಕೊಂದು ಒತ್ತಿಕೊಂಡು ಇರುವುದರಿಂದ ಇವುಗಳ ಆಕಾರ ಹೆಚ್ಚು ಕಡಿಮೆ ಅವರೆ ಕಾಳಿನಂತಿರುತ್ತದೆ. ಅನೇಕ ವೇಳೆ ಇವು ನ್ಯೂಟ್ರೊಫಿಲ್ ಎಂಬ ರೀತಿಯ ಬಿಳಿಯ ರಕ್ತಕಣಗಳೊಳಗೆ ಇರುವುವು. ಒಂದೊಂದು ಬಿಳಿರಕ್ತಕಣದಲ್ಲೂ ಸುಮಾರು 20ರಿಂದ 50 ಜೊತೆ ಕಾಕೈಗಳು ಕಂಡುಬರಬಹುದು. ಆದರೆ ಬಿಳಿರಕ್ತಕಣಗಳು ಒಳಗೆ ಇರಬೇಕೆಂಬ ನಿಯಮವಿಲ್ಲ, ಸೂಕ್ಷ್ಮಜೀವಿಗಳಿಗೆ ಆಮ್ಲಜನಕ ಅವಶ್ಯ. ಇವನ್ನು ಸಾಮಾನ್ಯ ಕೃಷಿ ತಟ್ಟೆಗಳಲ್ಲಿ ಬೆಳೆಸಲಾಗುವುದಿಲ್ಲ. ಪೌಷ್ಟಿಕ ಮಾಧ್ಯಮ ರಕ್ತ ಅಥವಾ ರಕ್ತದಿಂದ ಉತ್ಪನ್ನವಾದ ದ್ರವವಾಗಿದ್ದರೆ ಮಾತ್ರ ಇವನ್ನು ಕೃಷಿ ಮಾಡಬಹುದು. ಇಲ್ಲವೇ ಚಾಕೊಲೇಟ್ ಅಗಾರ್ ಎಂಬ ವಿಶೇಷ ಮಾಧ್ಯಮವನ್ನು ಉಪಯೋಗಿಸಬೇಕು. ಇವು 550 ಸೆಂ. ನಷ್ಟು ಉಷ್ಣತೆಯನ್ನು 5 ಮಿನಿಟುಗಳ ಕಾಲ ಕೂಡ ತಡಯಲಾಗದೆ ನಾಶವಾಗಿ ಹೋಗುತ್ತವೆ ; ಹಾಗೆಯೇ ನಿರ್ಜಲೀಕರಿಸಿದರೂ 2 ಗಂಟೆಗಳ ಕಾಲದಲ್ಲಿ ನಾಶವಾಗಿ ಹೋಗುತ್ತವೆ; ಆದರೂ ಕೀವು ಸೋಕಿದ ರೋಗಿಗಳ ಬಟ್ಟೆಬರೆಗಳಲ್ಲಿ ಕೆಲವು ದಿವಸ ಪರ್ಯಂತ ಬದುಕಿರಬಲ್ಲವು. ಆದ್ದರಿಂದ ಇವುಗಳ ಸಂಪರ್ಕದ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು. ಗಾನೊಕಾಕೈಗಳಲ್ಲಿ ಎರಡು ಪಂಗಡಗಳನ್ನು ಗುರುತಿಸಬಹುದು. ಮೊದಲನೆಯದು ಸಾಮಾನ್ಯವಾಗಿ ರೋಗದ ತಾರುಣ್ಯದಲ್ಲೂ ಎರಡನೆಯದು ನಿಡುಗಾರಿದ ರೋಗಿಗಳಲ್ಲೂ ಕಂಡು ಬರುತ್ತವೆ. ರಾಸಾಯನಿಕ ಚಿಕಿತ್ಸೆಯ (ಕೀಮೋಥಿರಪಿ) ಯುಗಕ್ಕೆ ಮುಂಚೆ ಈ ಜೀವಿಗಳ ಉಷ್ಣಸೂಕ್ಷ್ಮತೆಯನ್ನು ಉಪಯೋಗಿಸಿಕೊಂಡು ರೋಗಿಗಳಿಗೆ ಕೃತಕವಾಗಿ ತೀವ್ರಜ್ವರವನ್ನು ಉಂಟುಮಾಡಲಾಗುತ್ತಿತ್ತು. ಆದರೆ ಸುಮಾರು 1930ರಿಂದೀಚೆಗೆ ಸಲ್ಫೊನಮೈಡುಗಳಿಂದ ಇವುಗಳ ಸೋಂಕಿಗೆ ಚಿಕಿತ್ಸೆ ನಡೆಯುತ್ತಿತ್ತು. 1942-43ರಲ್ಲಿ ಪೆನಿಸಿಲಿನ್ ಬಳಕೆ ಬಂದ ಬಳಿಕ ಗಾನೊಕಾಕೈಗಳ ಸೋಂಕಿಗೆ ಅದೇ ಎತ್ತಿದ ಮದ್ದಾಗಿದೆ. ಒಂದೇ ಪೆನಿಸಿಲಿನ್ ಚುಚ್ಚುಮದ್ದು ಗಾನರೀಯ ಚಿಕಿತ್ಸೆಗೆ ಸಾಕಾದರೂ ಅದೇ ರೋಗಿಯಲ್ಲಿ ಅದೇ ಕಾಲದಲ್ಲಿರಬಹುದಾದ ಇನ್ನೊಂದು ಲೈಂಗಿಕರೊಗವಾದ ಸಿಫಲಿಸಿಗೆ ಸಾಲದಾದ್ದರಿಂದ ಮತ್ತು ಈ ಚಚ್ಚುಮದ್ದು ತಾತ್ಕಾಲಿಕವಾಗಿ ಶಮನ ಮಾಡಿ ರೋಗ ಗುಣವಾಯಿತೆಂಬ ಭ್ರಾಂತಿಯನ್ನು ಉಂಟುಮಾಡುವುದರಿಂದ ಈಚೆಗೆ ಗಾನೊಕಾಕೈಗಳ ಸೋಂಕಿಗೆ ಸಿಪ್ರೊಫ್ಲಾಕ್ಸಿನನ್ನು ಓಪ್ಲಾಕ್ಸಿಸಿನ್, ಆಂಪಿಸಿಲಿನ್ ಉಪಯುಕ್ತವೆನಿಸಿವೆ.
ಗ್ರಾಮ್‍ಋಣ ಬ್ಯಾಸಿಲ್ಲೈಗಳು : ಆಕಾರದಲ್ಲಿ ಕಡ್ಡಿಯ ಚೂರಿನಂತೆ ಇರುವುದರಿಂದ ಇವನ್ನು ಬ್ಯಾಸಿಲ್ಲೈಗಳೆಂದು ಕರೆಯಲಾಗಿದೆ. ಇಂಥ ಬ್ಯಾಸಿಲ್ಲೈಗಳಲ್ಲಿ ಮುಖ್ಯವಾದವು ಮಾನವರಲ್ಲಿ ತೀವ್ರವಾದ ರೋಗಗಳನ್ನು ಉಂಟುಮಾಡುವ ಟೈಫಾಯಿಡ್, ಕಾಲರ, ಆಮಶಂಕೆಗಳ ಕಾರಕಗಳಾದ ಬ್ಯಾಕ್ಟೀರಿಯಗಳ ಗುಂಪು, ಇನ್‍ಫ್ಲೂಯೆಂಜû ಕಾರಕ ಬ್ಯಾಕ್ಟೀರಿಯ, ಪ್ಲೇಗ್ ವಿಷಾಣು ಇತ್ಯಾದಿ. ಕಾಲರ, ಟೈಫಾಯಿಡ್ ಆಮಶಂಕೆಗಳ ಬ್ಯಾಕ್ಟೀರಿಯಗಳನ್ನು ಅವುಗಳ ಕೃಷಿವಿಧಾನ ವೈವಿಧ್ಯ, ಹುದುಗು ಕ್ರಿಯೆಯ ವ್ಯತ್ಯಾಸ. ಅಂಟುಜನಕ ಸ್ವಭಾವ ಇತ್ಯಾದಿಗಳಿಂದ ಗುರುತಿಸಿ ವಿಂಗಡಿಸಲಾಗುತ್ತದೆ. ಪ್ಲೇಗ್ ವಿಷಾಣು, ಇನ್‍ಫ್ಲೂಯೆಂಜû ವಿಷಾಣುಗಳನ್ನೂ ಇದೇ ರೀತಿ ಗುರುತಿಸಲಾಗುತ್ತದೆ.
ಗ್ರಾಮ್‍ಧನಕಾಕೈಗಳು : ಇವು ಮಾನವರಲ್ಲಿ ಬಹುವಿಧವಾದ ರೋಗಗಳನ್ನು ಉಂಟುಮಾಡುತ್ತವೆ. ಬ್ಯಾಕ್ಟೀರಿಯಗಳು ಗುಂಡಗಿರುವುದರಿಂದ ಕಾಕೈಗಳೆಂದು ಕರೆಯಲಾಗಿದೆ. ಇವು ಒಂದಕ್ಕೊಂದು ಅಂಟಿಕೊಂಡು ಸರಮಣಿಪೋಣಿಸಿದಂತಿದ್ದರೆ ಸ್ಟ್ರೆಪ್ಟೊಕಾಕೈಗಳೆಂದೂ ದ್ರಾಕ್ಷಿಗೊಂಚಲಿನಂತೆ ಗುಂಪಾಗಿದ್ದರೆ ಸ್ಟಫಿಲೊಕಾಕೈಗಳೆಂದೂ ಹೆಸರು. ಸಾಮಾನ್ಯ ಗಂಟಲು ನೋವಿನಿಂದ ಹಿಡಿದು ತೀವ್ರಮಾರಕ ರೋಗಗಳವರೆಗೂ ಸ್ಟ್ರೆಪ್ಟೊಕಾಕೈಗಳು ಉಂಟುಮಾಡುವ ರೋಗಗಳ ಪ್ರಾಬಲ್ಯ ಹರಡಿರುತ್ತದೆ. ಪ್ರಸವಾನಂತರ ಜ್ವರ ಮತ್ತು ಬಾಲ್ಯಾವಸ್ಥೆಯ ಸಂಧಿವಾತರೋಗಗಳನ್ನು ಸ್ಟ್ರೆಪ್ಟೊಕಾಕೈಗಳಿಂದ ಉಂಟಾದ ರೋಗಗಳೆಂದು ಉದಾಹರಿಸಬಹುದು. ಸುಮಾರು 1930ರ ತನಕ ಇಂಥ ರೋಗಗಳಿಗೆ ಮದ್ದೇ ಇರುತ್ತಿರಲಿಲ್ಲ. ಅಂದಿಗೆ ಇವು ಸಾಮಾನ್ಯವಾಗಿ ಮಾರಕಗಳು ಆಗಿದ್ದುವು. ಸಲ್ಫೂನಮೈಡುಗಳು ಇಂಥ ರೋಗಗಳ ರೋಗಗಳಿಗೆ ಮದ್ದಾಗಬಲ್ಲವು ಎಂಬುದನ್ನು ತಿಳಿದ ಬಳಿಕ ಸ್ಟ್ರೆಪ್ಟೊಕಾಕೈಜನಿತ ರೋಗಗಳ ಚಿಕಿತ್ಸೆ ತಕ್ಕಮಟ್ಟಿಗೆ ಹಿಡಿತಕ್ಕೆ ಬಂದಿತು. ಜೀವಿಪ್ರತಿರೋಧಕಗಳ ಉಪಯೋಗ ಪ್ರಾರಂಭವಾದ ತರುವಾಯ ಸ್ಥಿತಿ ಇನ್ನೂ ಅನುಕೂಲವಾಯಿತು. ಸ್ಟಫಿಲೊಕಾಕೈಗಳು ಬೆನ್ನುಫಣಿ ಮುಂತಾದ ರೋಗಗಳನ್ನು ಉಂಟುಮಾಡುತ್ತವೆ. ಇವು ಸಾಮಾನ್ಯವಾಗಿ ಸಲ್ಫೊನಮೈಡುಗಳ ಚಿಕಿತ್ಸೆಗೆ ಮಣಿಯದಿದ್ದುದರಿಂದ ಸ್ಟಫಿಲೊಕಾಕೈಗಳು ಬೆನ್ನುಫಣಿ ಮುಂತಾದ ರೋಗಗಳನ್ನು ಉಂಟುಮಾಡುತ್ತವೆ. ಇವು ಸಾಮಾನ್ಯವಾಗಿ ಸಲ್ಫೊನಮೈಡುಗಳ ಚಿಕಿತ್ಸೆಗೆ ಮಣಿಯದಿದ್ದುದರಿಂದ ಸ್ಟಫಿಲೊಕಾಕೈಗಳ ಸೋಂಕಿನ ಭಯ ಜೀವಿಪ್ರತಿರೋಧಕಗಳು ಬರುವ ವರೆಗೂ ಇದ್ದೇ ಇತ್ತು. ಸ್ಟ್ರೆಪ್ಟೊಕಾಕೈಗಳು. ಅವಕ್ಕಿಂತಲೂ ಸ್ಟಫಿಲೊಕಾಕೈಗಳು, ಎಲ್ಲವೂ ರೋಗಕಾರಕಗಳಲ್ಲದೆ ನಿರುಪದ್ರವಿಗಳಾಗಿಯೂ ಇರುವ ವಿಧಗಳು ಅನೇಕವಿದೆ. ನ್ಯೂಮೊಕಾಕೈಗಳು ಒಂದು ರೀತಿ ಡಿಪ್ಲೊಕಾಕೈಗಳಂತೆ ಇರುತ್ತವೆ. ಆದರೆ ಗ್ರಾಮ್‍ಧನ ಗುಣವುಳ್ಳವು. ಇವುಗಳಲ್ಲಿ ಮುಖ್ಯವಾಗಿ ಮೂರುವಿಧಗಳನ್ನು ಗುರುತಿಸಬಹುದಾಗಿದೆ. ನ್ಯೂಮೊಕಾಕೈಗಳಿಂದ ನ್ಯೂಮೊನಿಯ ರೋಗ ಉಂಟಾಗುತ್ತದೆ.
ಗ್ರಾಮ್‍ಧನ ಬ್ಯಾಸಿಲ್ಲೈಗಳು ಡಿಫ್ತೀರಿಯ, ಟೆಟೆನಸ್, ಗ್ಯಾಸ್‍ಗ್ಯಾಂಗ್ರೀನ್ (ದೇಹಭಾಗಗಳು ಕೊಳೆತುಕೊಂಡು ಬರುವ ರೋಗ), ಬಾಟ್ಯುಲಿಸಮ್ ರೋಗ ಇವೇ ಮುಂತಾದ ತೀವ್ರರೋಗಗಳನ್ನು ಉಂಟುಮಾಡುತ್ತವೆ. ಕೆಲವಕ್ಕೆ ಆಮ್ಲಜನಕ ಅಭಾವ ಅವಶ್ಯಕವಾಗಿದ್ದು ಅವು ದೇಹದ ಒಳಗಡೆ ಅವ್ಯಕ್ತವಾಗಿ ಸೋಂಕುಂಟು ಮಾಡಿ ಪ್ರವರ್ಧಿಸುತ್ತವೆ. (ಎಸ್.ಆರ್.ಆರ್.)