ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರಿಮಾಲ್ಡಿ ಫಾಸಿಲುಗಳು
ಗ್ರಿಮಾಲ್ಡಿ ಫಾಸಿಲುಗಳು- ಇಟಲಿ ದೇಶದ ಮೆಂಟೋನಿನ ಪೂರ್ವ ಭಾಗದಲ್ಲಿನ ಗ್ರಿಮಾಲ್ಡಿ ಎಂಬಲ್ಲಿರುವ ನಾಲ್ಕು ಗುಹೆಗಳಲ್ಲಿ ದೊರೆತ ಮಾನವ ಅವಶೇಷಗಳು. ಹದಿನಾರು ವ್ಯಕ್ತಿಗಳ ಫಾಸಿಲುಗಳು ಇಲ್ಲಿ ದೊರೆತಿವೆ. ಮೇಲಿನ ಪೇಲಿಯೊಲಿಥಿಕ್ ನಿಕ್ಷೇಪಗಳಲ್ಲಿ ಇವನ್ನು ಕಾಣಲಾಗಿದೆ. ಈ ಫಾಸಿಲುಗಳ ಸಂವಾದೀ ಮಾನವರು ಹಿಮಕಾಲದ (ಗ್ಲೇಶಿಯಲ್) ಉತ್ತರಾರ್ಧದಲ್ಲಿದ್ದರೆಂದು ಹೇಳಲಾಗಿದೆ. ಅಂದರೆ ಈಗ್ಗೆ ಸುಮಾರು 30,000-40,000 ವರ್ಷಗಳ ಹಿಂದೆ ಗ್ರಿಮಾಲ್ಡಿ ಗವಿಗಳಲ್ಲಿ ಅವರು ವಾಸವಾಗಿದ್ದರೆಂದು ತರ್ಕಿಸಬಹುದು. ಅಲ್ಲಿ ಒಲೆ, ಹತ್ಯಾರುಗಳ ಮುಂತಾದವುಗಳು ಕುರುಹಗಳು ಸಹ ಇವೆ. ಇವೆಲ್ಲವೂ ಪ್ಲೀಸ್ಟೊಸಿನ್ ಕಾಲದವು. ಈ ಫಾಸಿಲುಗಳ ಜೊತೆಯ ವಸ್ತುಗಳು ಔರಿಗ್ನೇಸಿಯನ್ ಸಂಸ್ಕøತಿಯವು. ಇಲ್ಲಿ ಸಿಕ್ಕಿರುವ ಫಾಸಿಲುಗಳಲ್ಲಿ ಕ್ರೋಮ್ಯಾಗ್ನನ್ ಬುಡಕಟ್ಟಿನ ಮಾನವರ ಕಂಕಾಲಗಳು ಹೆಚ್ಚಾಗಿವೆ. (ನೋಡಿ- ಕ್ರೋಮ್ಯಾಗ್ನನ್-ಮಾನವ). ಇದೇ ತರಹದ ಫಾಸಿಲುಗಳು ಯುರೋಪಿನಲ್ಲಿ ಸಹ ದೊರೆತಿವೆ. ಆ ಮಾನವರು ಈಗಿನ ಕೆಲವು ಯುರೋಪಿಯನ್ನರ ಪೂರ್ವಜರು. ಅವುಗಳ ತಲೆಬುರುಡೆಗಳ ಉದ್ದ, ಹಣೆಯ ಭಾಗ ತಗ್ಗು, ಮುಖ ಚಿಕ್ಕದ್ದು; ಪುಷ್ಟವಾದ ಎಲುಬುಗಳು ಇದ್ದವು. ಗೊಟ್ಟಿ ಡಿ ಎನ್ ಪ್ಯಾಂಟ್ ಗವಿಯ ಅತಿ ಕೆಳಭಾಗದಲ್ಲಿ ಸಿಕ್ಕಿದ ಎರಡು ಕಂಕಾಲುಗಳು ಮಾತ್ರ ಬೇರೆಯಾಗಿದ್ದವು. ಇವು ಕುಳ್ಳ ಗಾತ್ರದವು. ಮುಖದಲ್ಲಿ ಚಾಚುದವಡೆಗಳಿದ್ದವು. ಗ್ರಿಮಾಲ್ಡಿ ಬುಡಕಟ್ಟಿನ ಮಾನವರು ನೀಗ್ರೋ ಬುಡಕಟ್ಟಿನವರೆಂದೂ ಅವರು ಕ್ರೋಮ್ಯಾಗ್ನನ್ ಮಾನವರಿಗಿಂತ ಹಿಂದಿನವರೆಂದೂ ವರ್ನ್ ಎಂಬ ವಿದ್ವಾಂಸನ ಅಭಿಪ್ರಾಯ. ಆದರೆ ಬೇರಾವ ನೀಗ್ರೊ ಫಾಸಿಲುಗಳು ಯುರೋಪಿನಲ್ಲಿ ದೊರೆಯದಿದ್ದರಿಂದ ಈ ಅಭಿಪ್ರಾಯ ಸಾಕಷ್ಟು ವಿವಾದವನ್ನು ಎಬ್ಬಿಸಿತು. (1960), ನೀಗ್ರ್ರೊ ರೀತಿಯದು ಎನ್ನುವ ಫಾಸಿಲುಗಳಲ್ಲಿನ ಚಾಚುದವಡೆಗಳು ಮುಖ್ಯವಾಗಿ ಆ ಮಾನವರ ಮರೋಣತ್ತರ ವಿಕೃತಿಗಳಿರಬಹುದೆಂದೂ ಹಾಗಿಲ್ಲದೇ ಇದ್ದರೆ ಅವು ಪ್ರಾಚೀನ ಕ್ರೋಮ್ಯಾಗ್ನನ್ ಮಾನವರದೇ ಆಗಿರಬಹುದೆಂದೂ ಪರಿಗಣಿಸಬಹುದು. (ಎನ್.ವಿ.ಎ.) (ಪಿ.ಆರ್.ಎಂ.)