ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರೀನ್, ಜಾನ್ ರಿಚರ್ಡ್

ವಿಕಿಸೋರ್ಸ್ದಿಂದ

ಗ್ರೀನ್, ಜಾನ್ ರಿಚರ್ಡ್ - 1837-1883. ಇಂಗ್ಲಿಷ್ ಇತಿಹಾಸಕಾರ. ಆಕ್ಸ್‍ಫರ್ಡಿನಲ್ಲಿ ಜನಿಸಿದ. ಅಲ್ಲೇ-ಮ್ಯಾಗ್ಡಲೀನ್ ಕಾಲೇಜ್ ಶಾಲೆ ಮತ್ತು ಜೀಸಸ್ ಕಾಲೇಜಿನಲ್ಲಿ-ವಿದ್ಯೆ ಗಳಿಸಿದ. ಚಿಕ್ಕಂದಿನಲ್ಲೇ ಈತನಿಗೆ ಇತಿಹಾಸದಲ್ಲಿ ಆಸಕ್ತಿ ಮೂಡಿತು. ಆಕ್ಸ್‍ಫರ್ಡ್‍ನ್ನು ಬಿಟ್ಟ ಮೇಲೆ (1860) ಈತ ಕ್ರೈಸ್ತ ಪುರೋಹಿತ ದೀಕ್ಷೆ ಪಡೆದನಾದರೂ ಇತಿಹಾಸ ವಿಷಯಕ ಲೇಖನಗಳ ಬರೆಹವನ್ನು ಬಿಡಲಿಲ್ಲ. 1868 ರಲ್ಲಿ ಲ್ಯಾಂಬೆತಿನಲ್ಲಿ ಗ್ರಂಥಪಾಲನಾದ. ಒಂದು ವರ್ಷ ಕಳೆಯುವುದರಲ್ಲಿ ಇವನು ತೀವ್ರ ಕ್ಷಯವ್ಯಾಧಿಗೆ ತುತ್ತಾದ. ಆದ್ದರಿಂದ ಆ ಕೆಲಸ ಬಿಡಬೇಕಾಯಿತು. ಆಗ ಇತಿಹಾಸವೇ ಇವನ ಸರ್ವಕಾಲದ ಕಾಳಜಿಯಾಯಿತು. ಈತ ಷಾರ್ಟ್ ಹಿಸ್ಟೊರಿ ಆಫ್ ದಿ ಇಂಗ್ಲಿಷ್ ಫಿಪಲ್ ಎಂಬ ಗ್ರಂಥವನ್ನು ಬರೆಯ ತೊಡಗಿದ. 1874ರಲ್ಲಿ ಅದು ಪ್ರಕಟವಾದೊಡನೆಯೇ ವಿಶೇಷ ಜನಪ್ರಿಯವಾಯಿತು. 1877-80ರಲ್ಲಿ ಈತನ ಎ ಹಿಸ್ಟೊರಿ ಆಫ್ ದಿ ಇಂಗ್ಲಿಷ್ ಪೀಪಲ್ ಎಂಬ ನಾಲ್ಕು ಸಂಪುಟಗಳ ಬೃಹತ್ ಗ್ರಂಥ ಹೊರಬಿತ್ತು. ವಿದ್ವಾಂಸರಿಗಾಗಿ ಪ್ರಾಚೀನ ಇಂಗ್ಲೆಂಡಿನ ಇತಿಹಾಸ ಕುರಿತ ಗ್ರಂಥವೊಂದನ್ನು ಬರೆಯುವುದು ಇವನ ಇಚ್ಚೆಯಾಗಿತ್ತು. ಮೇಕಿಂಗ್ ಆಫ್ ಇಂಗ್ಲೆಂಡ್ ಮತ್ತು ಕಾನ್‍ಕ್ವೆಸ್ಟ್ ಆಫ್ ಇಂಗ್ಲೆಂಡ್ ಎಂಬ ಗ್ರಂಥಗಳು ಆ ಉದ್ದೇಶಿತ ಗ್ರಂಥಗಳ ಕೆಲವು ಭಾಗಗಳು. ಮೊದಲನೆಯ ಗ್ರಂಥ 1881 ರಲ್ಲೂ ಎರಡನೆಯದು ಗ್ರೀನನ ಮರಣಾನಂತರವೂ 1883ರಲ್ಲೂ ಪ್ರಕಟವಾದವು. ಆಧುನಿಕ ವಿಮರ್ಶಾತ್ಮಕ ದೃಷ್ಟಿ ಬೆಳೆಯುವ ಮುನ್ನ ಬರೆಯಲಾದ ಆ ಗ್ರಂಥಗಳು ಅವುಗಳ ಸಾಹಿತ್ಯ ಗುಣದಿಂದಾಗಿ ಇಂದಿಗೂ ವಿದ್ವಾಂಸರ ಮೆಚ್ಚುಗೆ ಗಳಿಸಿವೆ. ಷಾರ್ಟ್ ಹಿಸ್ಟೊರಿ ಆಫ್ ಇಂಗ್ಲೆಂಡ್ ಒಂದು ಜನಪ್ರಿಯ ಗ್ರಂಥ. ರಾಜಕೀಯಕ್ಕಿಂತ ಇಂಗ್ಲೆಂಡಿನ ಸಾಮಾಜಿಕ ಇತಿಹಾಸಕ್ಕೆ ಅದು ಪ್ರಾಧಾನ್ಯ ನೀಡುತ್ತದೆ. ಇದರಲ್ಲಿ ಮಿಂಚುವ ರಿಚರ್ಡನ ಮಾನವೀಯ ದೃಷ್ಟಿ ಹಾಗೂ ಕೌಶಲ್ಯದಿಂದಾಗಿ ಇಂದಿಗೂ ಅದು ಹೊಸದಾಗಿ ತೋರುತ್ತದೆ. (ಆರ್.ಆರ್.ಎ.)