ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರೀಸ್
ಗ್ರೀಸ್ - ದಕ್ಷಿಣ ಯೂರೋಪಿನ ಬಾಲ್ಕನ್ ಪರ್ಯಾಯದ್ವೀಪದ ದಕ್ಷಿಣ ಭಾಗವನ್ನೊಳಗೊಂಡಿರುವ ದೇಶ. ಮೆಡಿಟರೇನಿಯನ್ ಮತ್ತು ಇಜೀಯನ್ ಸಮುದ್ರಗಳ ನಡುವೆ ಇದೆ. ಗ್ರೀಸಿನ ಉತ್ತರದಲ್ಲಿ ಆಲ್ಬೇನಿಯ, ಯೂಗೊಸ್ಲಾವಿಯ ಮತ್ತು ಬಲ್ಗೇರಿಯವೂ ಪೂರ್ವದಲ್ಲಿ ತುರ್ಕಿಯೂ ಇವೆ. ದಕ್ಷಿಣ ಹಾಗೂ ಆಗ್ನೇಯದಲ್ಲಿ ಗ್ರೀಸಿಗೆ ಸೇರಿದ ಅನೇಕ ದ್ವೀಪಗಳಿವೆ. ಮುಖ್ಯ ಭೂಭಾಗ ಹಾಗೂ ದ್ವೀಪಗಳನ್ನೊಳಗೊಂಡಂತೆ ಗ್ರೀಸಿನ ವಿಸ್ತೀರ್ಣ 1,31,944ಚ.ಕಿಮೀ. ದ್ವೀಪಗಳ ವಿಸ್ತೀರ್ಣವೇ ಇದರ ರಷ್ಟಿದೆ. ಜನಸಂಖ್ಯೆ 87,16,441(1967). ರಾಜಧಾನಿ ಆಥೆನ್ಸ್.
ಭೌತಲಕ್ಷಣ : ದ್ವೀಪಭಾಗಗಳನ್ನೊಳಗೊಂಡು ಗ್ರೀಸಿನ ರಷ್ಟು ಭಾಗ ಪರ್ವತಪ್ರದೇಶ. ಪ್ರಮುಖ ಪಕ್ಷೀಕೃತ ಪರ್ವತಶ್ರೇಣಿ ಪಿಂಡಸ್. ಗ್ರೀಸಿನ ಮಧ್ಯದಲ್ಲಿ ದಕ್ಷಿಣೋತ್ತರವಾಗಿ ಹಬ್ಬಿರುವ ಈ ಶ್ರೇಣಿಯ ಅತ್ಯುನ್ನತ ಶಿಖರ ಒಲಿಂಪಸ್ (9,570'). ಉತ್ತರ ಗ್ರೀಸಿನಲ್ಲಿ ಪಿಂಡಸ್ ಪರ್ವತಶ್ರೇಣಿ ಹೆಚ್ಚು ಮಳೆ ಬೀಳುವ ಪರ್ವತಮಯ ಪಶ್ಚಿಮ ಭಾಗವನ್ನೂ ಕಡಿಮೆ ಎತ್ತರದ ಬೆಟ್ಟಗಳನ್ನುಳ್ಳ ಪೂರ್ವದ ಶುಷ್ಕ ಮೈದಾನ ಪ್ರದೇಶವನ್ನೂ ಬೇರ್ಪಡಿಸುತ್ತದೆ. ಈ ಪರ್ವತಶ್ರೇಣಿ ತೀರಕ್ಕೆ ಸಮಾಂತರವಾಗಿ ಹಬ್ಬಿದೆ. ಪಶ್ಚಿಮದ ಮೈದಾನ ನೇರ ಮತ್ತು ಕಿರಿದು. ಆದರೆ ಪೂರ್ವಭಾಗದಲ್ಲಿ ಬೆಟ್ಟಗಳ ಸಾಲು ಸಮುದ್ರತೀರಕ್ಕೆ ಲಂಬವಾಗಿ ಹಬ್ಬಿರುವುದರಿಂದ ಅಂಕುಡೊಂಕಾದ ಕಡಲಕರೆ ಸಂಭವಿಸಿ ಅನೇಕ ಸ್ವಾಭಾವಿಕ ಬಂದರುಗಳು ಉಂಟಾಗಿವೆ. ಪೂರ್ವದ ಇಜೀಯನ್ ಸಮುದ್ರದಲ್ಲಿ ಸುಮಾರು 2,000 ದ್ವೀಪಗಳುಂಟು. ಇವು ಯೂರೋಪ್ ಮತ್ತು ಏಷ್ಯ ಖಂಡಗಳ ನಡುವಣ ಸೇತುವೆಗಳಂತಿವೆ. ಈ ಉತ್ತರ ಗ್ರೀಸಿನ ಪೂರ್ವಭಾಗ ತೆಸಲಿ, ಮ್ಯಾಸಿಡೋನಿಯ ಮತ್ತು ತ್ರೇಸ್ ಮೈದಾನಗಳನ್ನು ಒಳಗೊಂಡಿದೆ. ತೆಸಲಿಯ ಮತ್ತು ಪಶ್ಚಿಮ ಮ್ಯಾಸಿಡೋನಿಯದ ಕೆಲವು ಭಾಗ ವಿನಾ ದೇಶದ ಯಾವ ಭಾಗವೂ ಸಮುದ್ರದಿಂದ 70 ಮೈಲಿಗಳಿಗಿಂತ ಹೆಚ್ಚು ದೂರದಲ್ಲಿಲ್ಲ. ಮಧ್ಯ ಗ್ರೀಸು ಮುಖ್ಯ ಭೂಭಾಗದ ಆಗ್ನೇಯ ವಿಸ್ತರಣ. ಪರ್ವತಪಂಕ್ತಿಗಳಿಂದ ಬೇರ್ಪಟ್ಟಂತಿರುವ ತೀಬ್ಸ್ ಮೈದಾನ ಪ್ರದೇಶ ಪ್ರಾಚೀನ ಗ್ರೀಸಿನ ನಗರರಾಜ್ಯಗಳ ತೊಟ್ಟಿಲಾಗಿತ್ತು. ದಕ್ಷಿಣ ಗ್ರೀಸ್ ಪರ್ವತಮಯವಾದ್ದು. ಇದು ಕಾರಿಂತ್ ಖಾರಿಯಿಂದಾಗಿ ಮುಖ್ಯ ಭೂಭಾಗದಿಂದ ಬೇರ್ಪಟ್ಟು. ನಾಲ್ಕು ಬೆರಳುಗಳಂತೆ ಚಾಚಿರುವ ಪೆಲೊಪಾನೀಸಸ್ ಪರ್ಯಾಯದ್ವೀಪವನ್ನೊಳಗೊಂಡಿದೆ. ಇದು ಮುಖ್ಯ ಭೂಭಾಗದಿಂದ 3-5 ಮೈಲಿಗಳ ದೂರದಲ್ಲಿದೆ. ಇಜೀಯನ್ ಸಮುದ್ರದಲ್ಲಿ ಸಿಕ್ಲಡೀಸ್ ಡೊಡೆಕನೀಸ್ ದ್ವೀಪಸ್ತೋಮಗಳೂ ಯುಬೀಯ ದ್ವೀಪವೂ ದಕ್ಷಿಣದಲ್ಲಿ ಕ್ರೀಟ್ ದ್ವೀಪವೂ ಪಶ್ಚಿಮ ತೀರದಲ್ಲಿ ಐಯೋನಿಯನ್ ದ್ವೀಪಗಳೂ ಇವೆ.
ಗ್ರೀಕ್ ನದಿಗಳು ನೌಕಾಯಾನಕ್ಕೆ ಯೋಗ್ಯವಾಗಿಲ್ಲ. ಇವು ಬೇಸಿಗೆಯಲ್ಲಿ ಬತ್ತಿ ಮಳೆಗಾಲದಲ್ಲಿ ಬಿರುಸಿನಿಂದ ಹರಿಯುತ್ತವೆ. ನೀರಾವರಿಗೂ ಇವು ಹೆಚ್ಚು ಉಪಯುಕ್ತವಲ್ಲ. ತಕ್ಕಮಟ್ಟಿನ ಪ್ರವಾಹದಿಂದೊಡಗೂಡಿದ ಪ್ರಮುಖ ಜೀವನದಿಗಳು ವಾರ್ಡಾರ್ ಮತ್ತು ಸ್ಟ್ರೂಮ. ಇವುಗಳ ಕೆಳಭಾಗಗಳು ಮಾತ್ರ ಗ್ರೀಸಿನಲ್ಲಿವೆ. ಗ್ರೀಸಿನ ಇತರ ನದಿಗಳಲ್ಲಿ ಮುಖ್ಯವಾದವು ನೆಸ್ಟಾನ್, ಆಲಿಯಾಕ್ಮಾನ್, ಪಿನಿಯೋಸ್, ಸ್ಪರ್ಕಿಯೋಸ್, ಇವ್ರೋಟಾಸ್, ಆಕರ್ನೇನೀಯ ಮತ್ತು ಇಪೈರಸ್.
ವಾಯುಗುಣ : ಗ್ರೀಸಿನದು ವೈವಿಧ್ಯಮಯವಾದ ವಾಯುಗುಣ. ದಕ್ಷಿಣ ಗ್ರೀಸ್ ಮತ್ತು ದ್ವೀಪಭಾಗಗಳದು ಬೆಚ್ಚನೆಯ ಶುಷ್ಕ ಬೇಸಗೆ ಮತ್ತು ಮಳೆಯಿಂದ ಕೂಡಿದ ತಂಪಾದ ಚಳಿಗಾಲವನ್ನುಳ್ಳ ಮೆಡಿಟರೇನಿಯನ್ ವಾಯುಗುಣ. ಉತ್ತರ ಮತ್ತು ಮಧ್ಯ ಗ್ರೀಸ್‍ಗಳದು ಬೇಸಗೆ ಮತ್ತು ಚಳಿಗಾಲಗಳ ಉಷ್ಣತೆಗಳಲ್ಲಿ ವಿಶೇಷ ಅಂತರವುಳ್ಳ ಖಂಡಾಂತರವಾಯುಗುಣ. ಆದರೆ ಪರ್ವತಪ್ರದೇಶದಲ್ಲಿ ಆಲ್ಪೈನ್ ಮಾದರಿಯ ವಾಯುಗುಣವಿದೆ. ಉತ್ತರದ ಪರ್ವತ ಪ್ರದೇಶದಲ್ಲಿ ಚಳಿಗಾಲದಲ್ಲಿ ವಿಷೇಷ ಚಳಿ ಇರುತ್ತದೆ. ಬೇಸಗೆಯಲ್ಲಿ ಕಡಲ್ಗಾಳಿ ಬೀಸುವುದರಿಂದ ವಾಯುಗುಣ ಹಿತಕರವಾಗಿರುತ್ತದೆ. ಉತ್ತರ ಮತ್ತು ಪಶ್ಚಿಮ ಪರ್ವತಭಾಗಗಳಲ್ಲಿ ಮಳೆ ಅಧಿಕ. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪಶ್ಚಿಮದಿಂದ ಪೂರ್ವಕ್ಕೆ ಹೋದಂತೆ ಮಳೆ ಕಡಿಮೆಯಾಗುತ್ತದೆ. ವಾರ್ಷಿಕ ಸರಾಸರಿ ಮಳೆ ಉತ್ತರದಲ್ಲಿ 20” - 48” ದಕ್ಷಿಣದಲ್ಲಿ 15” - 32” . ಆಥೆನ್ಸ್ ನಗರದಲ್ಲಿ ಬೇಸಗೆಯಲ್ಲಿ ಗರಿಷ್ಠ ಉಷ್ಣತೆ 990 ಫ್ಯಾ. ಚಳಿಗಾಲದಲ್ಲಿ 350 ಫ್ಯಾ. ಸರಾಸರಿ 630 ಫ್ಯಾ. ಉತ್ತರ ಗ್ರೀಸಿನಲ್ಲಿ ಉಷ್ಣತೆ 160 - 950 ದಕ್ಷಿಣದಲ್ಲಿ 350 - 1060 ಫ್ಯಾ.
ಸ್ವಾಭಾವಿಕ ವಿಭಾಗಗಳು: 1 ತ್ರೇಸ್ ಮತ್ತು ಮ್ಯಾಸಿಡೋನಿಯ : ತ್ರೇಸ್ ಗ್ರೀಸಿನ ವಾಯುವ್ಯಭಾಗದಲ್ಲೂ ಮ್ಯಾಸಿಡೋನಿಯದ ಉತ್ತರ ಭಾಗದಲ್ಲಿ ತ್ರೇಸಿನ ಪಶ್ಚಿಮಕ್ಕೂ ಇವೆ. ಮ್ಯಾಸಿಡೋನಿಯದ ವಾಯುವ್ಯ ಭಾಗವೂ ತ್ರೇಸಿನ ಉತ್ತರ ಭಾಗವೂ ಪೂರ್ಣವಾಗಿ ಪರ್ವತಮಯ ಪ್ರದೇಶ. ಪರ್ವತ ಪಂಕ್ತಿಗಳು ಉತ್ತರಕ್ಕೆ ಅಲ್ಬೇನಿಯ. ಯೂಗೋಸ್ಲಾವಿಯ ಮತ್ತು ಬಲ್ಗೇರಿಯಗಳಿಗೆ ಹಬ್ಬಿವೆ. ಇವು ನಾಲ್ಕು ನದೀ ಕಣಿವೆಗಳಿಂದ ಸೀಳಲ್ಪಟ್ಟಿವೆ. ವಾರ್ಡಾರ್, ಸ್ಟ್ರೂಮ, ನೆಸ್ಟಾಸ್ ಮತ್ತು ಮೆರಿಟ್ಸ್ ನದಿಗಳ ಮುಖಜಭೂಮಿ ಪ್ರದೇಶಗಳಲ್ಲಿರುವ ಮೈದಾನಗಳಲ್ಲಿ ವ್ಯವಸಾಯ ಅಭಿವ್ಥದ್ಧಿ ಹೊಂದಿದೆ. ಮ್ಯಾಸಿಡೋನಿಯ ಮತ್ತು ತ್ರೇಸಿನ ಈ ಭಾಗದಲ್ಲಿ ಆಹಾರದ ಬೆಳೆಗಳನ್ನೂ ಹೊಗೆಸೊಪ್ಪನ್ನೂ ಬೆಳೆಯುತ್ತಾರೆ. ಪಶ್ಚಿಮ ಮ್ಯಾಡಸಿಡೋನಿಯದಲ್ಲಿ ಹಣ್ಣು ಬೆಳೆಗಳು. ಮುಖ್ಯ. ಈ ಭಾಗದ ಪ್ರಮುಖ ಬಂದರುಗಳೆಂದರೆ ಆಲೆಗ್ಸಾಂಡ್ರೂಪಾಲ್ಯೀಸ್, ಇಜೀಯನ್ ತೀರದ ಕವ್ಯಾಲ; ಮತ್ತು ವಾರ್ಡಾರ್ ನದಿಯ ಮುಖದಲ್ಲಿ ಮ್ಯಾಸಿಡೋನಿಯದ ಹೆಬ್ಬಾಗಿಲಿನಂತಿರುವ ಸ್ಯಾಲೋನಿಕ.
2 ಎಪಿರಸ್: ಪಿಂಡಸ್ ಪರ್ವತದ ಪಶ್ಚಿಮಕ್ಕೆ ಇರುವ ಭಾಗ ಎಪಿರಸ್ ಏಡ್ರಿಯಾಟಿಕ್ ಸಮುದ್ರತೀರದುದ್ದಕ್ಕೂ ಅನೇಕ ಪುಟ್ಟ ಮೈದಾನ ಪ್ರದೇಶಗಳುಂಟು. ಎಪಿರಸಿನ ಹೆಚ್ಚು ಭಾಗ ಪರ್ವತಗಳಿಂದ ಕೂಡಿದ್ದು ಕೆಲವೇ ರಸ್ತೆಗಳೀವೆ. ಇಲ್ಲಿ ಅಲ್ಪ ಸ್ವಲ್ಪ ಧಾನ್ಯ ಬೇಳೆದರೂ ಪರ್ವತ ಪ್ರದೇಶದ ಜನರ ಮುಖ್ಯ ಕಸುಬು ಕುರಿಸಾಕಣೆ. ಪಿಂಡಸ್ ಪರ್ವತದ ಇಕ್ಕೆಲದ ಪ್ರದೇಶಗಳಲ್ಲಿರುವ ಮುಖ್ಯ ವ್ಯತ್ಯಾಸವೆಂದರೆ ವಿಭಿನ್ನ ವಾಯುಗುಣ ಪರಿಸ್ಥಿತಿ, ಪಿಂಡಸ್‍ನ ಪಶ್ಚಿಮ ಭಾಗಕ್ಕಿರುವ ಎಪಿರಸ್‍ನಲ್ಲಿ ಪೂರ್ವದಲ್ಲಿ ಬೀಳುವುದಕ್ಕಿಂತ ಹೆಚ್ಚು. ಮಳೆ ಆಗುವುದರಿಂದ ಆಲಿವ್ ಬೆಳೆಗೆ ಅನುಕೂಲವಾಗಿದೆ.
3 ತೆಸಲಿ: ಮಧ್ಯ ಗ್ರೀಸಿನ ಪೂರ್ವ ಭಾಗದಲ್ಲಿ ಇಜೀಯನ್ ಸಮುದ್ರಕ್ಕೆ ಹೊಂದಿಕೊಂಡಂತಿದೆ. ಇದು ಪಿಂಡಸ್ ಪರ್ವತಪಂಕ್ತಿಗಳಿಂದಾಗಿ ಎಪಿರಸಿನಿಂದಲೂ ಒಲಿಂಪಸ್ ಪರ್ವತದಿಂದಾಗಿ ಮ್ಯಾಸಿಡೋನಿಯದಿಂದಲೂ ಪ್ರತ್ಯೇಕಿಸಲ್ಪಟ್ಟಿದೆ. ತೆಸಲಿಯ ಮೈದಾನಗಳು ಮ್ಯಾಸಿಡೋನಿಯದಂತೆ ಫಲವತ್ತಾಗಿ ವಿಸ್ತಾರವಾಗಿವೆ. ಗ್ರೀಸಿನ ಇತರ ಭಾಗಗಳಿಗಿಂತ ಇಲ್ಲಿ ಹೆಚ್ಚು ಭೂಮಿ ಬೇಸಾಯಕ್ಕೆ ಒದಗಿಬಂದಿದೆ. ಗೋದಿ, ಬಾರ್ಲಿ, ಮತ್ತು ಹತ್ತಿ ಮುಖ್ಯ ಬೆಳೆಗಳು. ಸಲ್ಯಾಂಬ್ರಿಯ ನದಿಯ ದಡದಲ್ಲಿರುವ ಲರಿಸ ಈ ಪ್ರದೇಶದ ಮುಖ್ಯ ಬಂದರು.
4 ಮಧ್ಯ ಗ್ರೀಸ್ : ತೆಸಲಿ ಮತ್ತು ಎಪಿರಸ್‍ಗಳ ದಕ್ಷಿಣಕ್ಕೆ ಮತ್ತು ಕಾರಿಂತ್ ಖಾರಿಯ ಉತ್ತರಕ್ಕೆ ಇರುವ ಪ್ರದೇಶವಿದು. ಗ್ರೀಸಿನ ರಾಜಧಾನಿ ಆಥೆನ್ಸ್ ಮತ್ತು ಅದರ ರೇವುಪಟ್ಟಣವಾದ ಪೈರೀಯಸ್ ಇರುವುದು ಈ ಭಾಗದಲ್ಲಿ. ಪರ್ವತ ಪಂಕ್ತಿಗಳಿಂದ, ಬೇರ್ಪಟ್ಟ ಅನೇಕ ಮೈದಾನಗಳಿವೆ. ಅವುಗಳಲ್ಲಿ ತೀಬ್ಸ್, ಲೆಬಾಡಿಯ ಮತ್ತು ಲ್ಯಾಮಿಯ ಮುಖ್ಯವಾದವು. ಈ ಮೈದಾನಗಳಲ್ಲೆ ಪ್ರಾಚೀನ ಗ್ರೀಕ್ ಚಕ್ರಾಧಿಪತ್ಯದ ನಗರ ರಾಜ್ಯಗಳು ಹುಟ್ಟಿ ಬೆಳೆದದ್ದು. ಇಲ್ಲಿಯ ವಾಯುಗುಣ ಶುಷ್ಕವಾದ್ದು. ಮೆಡಿಟರೇನಿಯನ್ ಮಾದರಿಯ ಬೆಳೆಗಳು-ಮುಖ್ಯವಾಗಿ ಧಾನ್ಯಗಳು, ದಾಕ್ಷಿ, ಆಲಿವ್ ಮುಂತಾದವು - ಇಲ್ಲಿ ಬೆಳೆಯುತ್ತವೆ. ಪೈರೀಯಸ್ ಈ ಪ್ರದೇಶದ ಮುಖ್ಯ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರ ಹಾಗೂ ಪ್ರಮುಖ ಬಂದರು.
5 ಪೆಲೋಪಾನಿಸಸ್ : ಕಾರಿಂತ್ ಕೊಲ್ಲಿಯಿಂದಾಗಿ ಇದು ಮುಖ್ಯ ಭೂಭಾಗದಿಂದ ಬೇರ್ಪಟ್ಟಿದೆ. ಈ ಪ್ರದೇಶದ ವಾಯುವ್ಯ ಭಾಗ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ. ಇದು ಗ್ರೀಸಿನ ಅಧಿಕ ಉತ್ಪಾದನೆಯ ಪ್ರದೇಶ. ಪೆಲೊಪಾನೀಸಸಿನ ಅತ್ಯಂತ ದೊಡ್ಡ ಪಟ್ಟಣವಾದ ಪಟ್ರ್ಯಾಸ್ ಪ್ರಮುಖ ರಫ್ತು ವ್ಯಾಪಾರ ಕೇಂದ್ರ. ಈ ಪ್ರದೇಶದ ಪೂರ್ವ ಭಾಗ ಶಿಲಾಮಯವಾದ, ಹಳ್ಳ ತಿಟ್ಟುಗಳಿಂದ ಕೂಡಿದ ಗುಡ್ಡ ಸೀಮೆ. ಕುರಿ ಮೇಕೆಗಳ ಸಾಕಣೆ ಇಲ್ಲಿಯ ಮುಖ್ಯ ವೃತ್ತಿ. ಈ ಭಾಗ ಉಣ್ಣೆ ಮತ್ತು ಮೇಕೆ ಚರ್ಮಕ್ಕೆ ಪ್ರಸಿದ್ಧ. ದಕ್ಷಿಣದ ಮೆಸೀನಿ ಪ್ರದೇಶದ ಫಲವತ್ತಾದ ಮಣ್ಣಿನಲ್ಲಿ ದ್ವೀಪದ್ರಾಕ್ಷಿ. ಅಂಜೂರ, ಕಿತ್ತಲೆ, ನಿಂಬೆ, ಖರ್ಜೂರ, ಆಲಿವ್, ದ್ರಾಕ್ಷಿ ಮುಂತಾದವು ಬೆಳೆಯುತ್ತದೆ.
6 ದ್ವೀಪಗಳು: ಗ್ರೀಸಿನ ದ್ವೀಪಗಳದು ಒಂದು ಪ್ರತ್ಯೇಕ ವಿಭಾಗ. ಐಯೋನೀಯನ್ ದ್ವೀಪಗಳು ಹೆಚ್ಚು ಜನಸಾಂದ್ರತೆಯಿಂದ ಕೂಡಿವೆ. ದ್ರಾಕ್ಷಿ, ನಿಂಬೆ, ತರಕಾರಿ ಮುಂತಾದ ಬೆಳೆಗಳಿಗೆ ಅವುಗಳ ವಾಯುಗುಣ ಅನುಕೂಲವಾಗಿದೆ. ಗ್ರೀಸ್ ದ್ವೀಪಗಳಲ್ಲೆಲ್ಲ ಅತ್ಯಂತ ದೊಡ್ಡದಾದ ಕ್ರೀಟ್ ಸು. 160 ಮೈಲಿ ಉದ್ದ, 235 ಮೈ. ಗರಿಷ್ಠ ಅಗಲ ಉಳ್ಳದ್ದಾಗಿದೆ. ಇದರ ಜನಸಂಖ್ಯೆ ಸು. 5 ಲಕ್ಷ. ಇದರ ಹೆಚ್ಚುಭಾಗ ಪರ್ವತ ಪ್ರದೇಶ. ತೀರದಲ್ಲಿ ಕಿರಿದಾದ ಮೆಕ್ಕಲು ಮೈದಾನಗಳಿವೆ. ದ್ರಾಕ್ಷಿ, ಆಲಿವ್ ಮತ್ತು ತರಕಾರಿ ಮತ್ತು ಮುಖ್ಯ ಬೆಳೆಗಳು. ಇಜೀಯನ್ ಸಮುದ್ರದ ಹೆಚ್ಚು ದ್ವೀಪಗಳು ಸ್ವಪರಿಪೂರ್ಣತೆ ಪಡೆದಿಲ್ಲ. ಅಲ್ಲಿಯ ಹೆಚ್ಚು ಜನ ಮೀನುಗಾರರಾಗಿ, ನಾವಿಕರಾಗಿ ಕೆಲಸಮಾಡುತ್ತಾರೆ. ಕೆಲವರು ನೆರೆಯ ಪ್ರಾಂತ್ಯಗಳಿಗೆ ವಲಸೆ ಹೋಗಿದ್ದಾರೆ.
ಸಸ್ಯ ಪ್ರಾಣಿಜೀವನ: ಸಸ್ಯ ಜೀವನ ಎತ್ತರಕ್ಕನುಸಾರವಾಗಿ ವ್ಯತ್ಯಾಸವಾಗುತ್ತದೆ. ಸಮುದ್ರ ಮಟ್ಟದಿಂದ 1,500' ವರೆಗಿನ ಎತ್ತರದ ಪ್ರದೇಶಗಳಲ್ಲಿ ಕಿತ್ತಲೆ, ಆಲಿವ್, ಖರ್ಜೂರ, ಬಾದಾಮಿ, ದಾಳಿಂಬೆ ಅಂಜೂರ, ದ್ರಾಕ್ಷಿ, ಹೊಗೆಸೊಪ್ಪು, ಹತ್ತಿ , ಮತ್ತು ಬತ್ತ ಬೆಳೆಯುತ್ತವೆ. ಹೂವು ಮತ್ತು ಕಂಪಿನ ಬಳ್ಳಿಗಳು ಸಮೃದ್ಧ. 1,500' - 3,500' ಎತ್ತರದಲ್ಲಿ ಓಕ್, ಚೆಸ್‍ನಟ್, ಮತ್ತು ಪೈನ್ ಮರಗಳ ಕಾಡುಗಳುಂಟು. 3,500' ಗಿಂತ ಎತ್ತರದಲ್ಲಿ ಸಾಮಾನ್ಯವಾಗಿ ಬೀಚ್ ಮತ್ತು ಫರ್ ಮರಗಳಿವೆ. ಅಲ್ಲಿರುವ ಸುಮಾರು 5,000 ಬಗೆಯ ಸಸ್ಯಗಳಲ್ಲಿ 569 ಆ ದೇಶದವೇ ಆಗಿವೆ.
ಗ್ರೀಸಿನಲ್ಲಿ ವನ್ಯಸಂಪತ್ತು ಅಷ್ಟಾಗಿ ಇಲ್ಲ. ಕರಡಿ, ಕಾಡು ಬೆಕ್ಕು, ತೋಳ, ನರಿ, ಷ್ಯಾಮಾಯ್ ಮುಂತಾದ ಪ್ರಾಣಿಗಳು ಜನಸಂಖ್ಯೆ ಕಡಿಮೆಯಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಪರ್ವತ ಪ್ರದೇಶಗಳಲ್ಲಿ ತೋಳವುಂಟು. ಯೂರೋಪಿನ ಇತರ ಭಾಗಗಳಲ್ಲಿ ಅಳಿದು ಹೋಗಿರುವ ಕಾಡು ಮೇಕೆ ಗ್ರೀಸಿನ ಕೆಲವು ಕಡೆಗಳಲ್ಲೂ ಕ್ರೀಟ್ ದ್ವೀಪದಲ್ಲೂ ಇನ್ನೂ ಉಳಿದಿವೆ. ಗ್ರೀಸಿಗೆ ವಲಸೆ ಬರುವ ಮತ್ತು ಸ್ಥಳೀಯವಾದ ಪಕ್ಷಿಸಂಪತ್ತು ಯಥೇಚ್ಛವಾಗಿದೆ. ಸುಮಾರು 250 ಕ್ಕೂ ಹೆಚ್ಚು ಸಾಗರ ಜನ್ಯಸರಕುಗಳಿವೆ. ಸ್ಪಾಂಜು ಪ್ರಮುಖ ರಫ್ತುಗಳಲ್ಲೊಂದು. ಸಾಕು ಪ್ರಾಣಿಗಳಲ್ಲಿ ಕುರಿ ಮತ್ತು ಮೇಕೆ ಮುಖ್ಯ. ಕತ್ತೆ ಒಂದು ಹೇರು ಪ್ರಾಣಿ.
ಜನಜೀವನ : ಗ್ರೀಸಿನ ಸರಾಸರಿ ಜನಸಾಂದ್ರತೆ ಚ.ಮೈಗೆ. 168 (1964). ಪ್ರತಿ ಸಾವಿರಕ್ಕೆ ಜನನ ದರ 190 (1964). ಮರಣ ದರ ಪ್ರತಿ ಸಾವಿರಕ್ಕೆ 72 1961 ರ ಜನಗಣತಿಯ ಪ್ರಕಾರ ಗ್ರೀಸಿನ ಜನಸಂಖ್ಯೆಯ 22% ರಾಜಧಾನಿ ಪ್ರದೇಶದಲ್ಲೂ 21.4% ಇತರ ನಗರಗಳಲ್ಲೂ 13% ಪಟ್ಟಣಪ್ರದೇಶಗಳಲ್ಲೂ 43.6% ಗ್ರಾಮ ಪ್ರದೇಶದಲ್ಲೂ ವಾಸಿಸುತ್ತಿದ್ದರು. ಗ್ರೀಸಿನ ಗರಿಷ್ಟ ಜನಸಾಂದ್ರತೆ ಚ. ಮೈ. ಗೆ 400. ಜನಸಂಖ್ಯೆಯ 92.8% ಗ್ರೀಕರು; ತುರ್ಕರು 3.8% ಮ್ಯಾಸಿಡೋನಿಯನ್ ಸ್ಲಾವರು 1.3% , ಯೆಹೂದ್ಯರು 1%, ಇತರರು 1.1%.
ಗ್ರೀಸಿನ ಅಧಿಕೃತ ಭಾಷೆ ಆಧುನಿಕ ಗ್ರೀಕ್, ಇದನ್ನು ಸೇ. 98 ಜನ ಮಾತಾಡುತ್ತಾರೆ. ಇಂಗ್ಲೀಷ್ ಮತ್ತು ಫ್ರೆಂಚ್ ಕೂಡ ಬಳಕೆಯಲ್ಲಿವೆ. ತುರ್ಕಿ ಭಾಷೆ ಅಲ್ಪ ಸಂಖ್ಯಾತರಾದ ತುರ್ಕಿ ಜನರಲ್ಲಿ ಬಳಕೆಯಲ್ಲಿದೆ. 1951 ರ ಜನಗಣತಿ ಪ್ರಕಾರ ಸೇ. 90 ಜನ ಆರ್ತೋಡಾಕ್ಸ್ ಚರ್ಚಿಗೆ ಸೇರಿದವರು. ಇಲ್ಲಿ ಮುಸ್ಲಿಮರೂ ರೋಮನ್ ಕ್ಯಾತೊಲಿಕರೂ ಹಿಬ್ರೂಗಳೂ ಇದ್ದಾರೆ.
ಸಾರಿಗೆ : ಗ್ರೀಸಿನ ರೈಲ್ವೆ ವ್ಯವಸ್ಥೆಯೂ ಬಂದರುಗಳೂ ಸೇತುವೆಗಳೂ ಎರಡನೆಯ ಮಹಾಯುದ್ಧದಲ್ಲಿ ನಷ್ಟಗೊಂಡಿದ್ದುವು. ಅವನ್ನು ಇತ್ತೀಚೆಗೆ ಪುನರ್ ನಿರ್ಮಿಲಾಗಿದೆ. 1961 ರಲ್ಲಿ ಗ್ರೀಸಿನ ರಸ್ತೆಗಳ ಉದ್ದ 24,000 ಮೈ. ರಾಷ್ಟ್ರೀಯ ಹೆದ್ದಾರಿಗಳು 8,720 ಮೈ. ಮಣ್ಣಿನ ರಸ್ತೆಗಳ ಉದ್ದ ಒಟ್ಟು ಉದ್ದದ ಸೇ. 60. 1957 ರಲ್ಲಿ 2,502 ಕಿಮೀ. (1,555 ಮೈ) ರೈಲುಮಾರ್ಗಗಳಿದ್ದುವು.
ರಾಜಧಾನಿ ಆಥೆನ್ಸಿನ ರೇವು ಪಟ್ಟಣವಾದ ಪೈರೀಯಸ್ ಮೂಲಕ ಗ್ರೀಸಿನ ಒಟ್ಟು ಆಮದಿನ ಸೇ. 70 ರಫ್ತಿನ, ಸೇ. 40 ಸಾಗುತ್ತವೆ. ಮ್ಯಾಸಿಡೋನಿಯದ ಸ್ಯಾಲೊನೀಕ, ಪೆಲೊಪಾನೀಸಸಿನ ಪಟ್ರ್ಯಾಸ್ ಅನುಕ್ರಮವಾಗಿ ಗ್ರೀಸಿನ ಎರಡನೆಯ ಮತ್ತು ಮೂರನೆಯ ದೊಡ್ಡ ಬಂದರುಗಳು. ಗ್ರೀಸಿನ ವಾಣಿಜ್ಯ ನೌಕಾಬಲ ಜಗತ್ತಿನಲ್ಲೆ ಮೂರನೆಯದು. ಅದರಲ್ಲಿ 1,570 ಹಡಗುಗಳಿವೆ.
ಆಥೆನ್ಸ್ 5 ಮೈ. ದೂರದಲ್ಲಿರುವ ಹೆತಿನಿಕೊನ್ ವಿಮಾನನಿಲ್ದಾಣ ಜಗತ್ತಿನ 37 ನಗರಗಳೊಡನೆ ನೇರ ವಿಮಾನ ಸಂಪರ್ಕ ಹೊಂದಿದೆ. ಗ್ರೀಸಿನಲ್ಲಿ ಸು. 20 ಅಂತರ ರಾಷ್ಟ್ರೀಯ ವಿಮಾನ ಮಾರ್ಗಗಳಿವೆ.
ಆರ್ಥಿಕತೆ: ಗ್ರೀಸಿನ ಒಟ್ಟು ವಿಸ್ತೀರ್ಣದಲ್ಲಿ ಸೇ. 29 ಭಾಗ ಮಾತ್ರ ವ್ಯವಸಾಯ ಯೋಗ್ಯವಾಗಿದ್ದರೂ ಕೃಷಿಯೇ ಗ್ರೀಸಿನ ಆರ್ಥಿಕತೆಯ ಅಡಿಪಾಯ. ಇದು ಸ್ಥೂಲ ರಾಷ್ಟ್ರೀಯ ಉತ್ಪನ್ನದ ಸೇ. 27 ನ್ನು ಒದಗಿಸುತ್ತದೆ; ಒಟ್ಟು ಕಾರ್ಮಿಕ ಬಲದ ಸುಮಾರು ಅರ್ಧದಷ್ಟು ಜನರಿಗೆ ಜೀವನೋಪಾಯವನೊದಗಿಸುತ್ತದೆ. ಸ್ಥೂಲ ರಾಷ್ಟ್ರೀಯ ಉತ್ಪನ್ನದ ಸೇ. 17 ಕೈಗಾರಿಕೆಗಳದು. ಅವು ಸೇ. 13 ರಷ್ಟು ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಿವೆ.
ಹೊಗೆಸೊಪ್ಪು, ಧಾನ್ಯಗಳು, ದ್ವೀಪದ್ರಾಕ್ಷಿ, ಚಪ್ಪರದ್ರಾಕ್ಷಿ, ಆಲಿವ್, ಹತ್ತಿ, ಬತ್ತ, ಆಲೂಗಡ್ಡೆ, ಪೀಚ್, ಪೇರು ಹಣ್ಣು, ಸೇಬು, ತರಕಾರಿ , ಬೀಟ್‍ರೂಟ, ನಿಂಬೆ, ಒಣ ಅಂಜೂರ ಇವು ಮುಖ್ಯ ವ್ಯಸಾಯೋತ್ಪನ್ನಗಳು. ಹೊಗೆಸೊಪ್ಪಿನ ಬೇಸಾಯಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದೆ. ರಫ್ತಿನ ಸೇ. 40 ಹೊಗೆ ಸೊಪ್ಪು ರಫ್ತಿನಲ್ಲಿ ಗ್ರೀಸಿನದು 5 ನೆಯ ಸ್ಥಾನ.
1964 ರಲ್ಲಿ ಮೀನಿನ ಉತ್ಪಾದನೆ ಸುಮಾರು 1,20,000 ರನ್ನುಗಳು. ಒಟ್ಡು ಸುಮಾರು 16,730 ದೋಣಿಗಳಿವೆ. ಅವುಗಳಲ್ಲಿ 6,730 ಯಂತ್ರಚಾಲಿತ. 1964 ರಲ್ಲಿ ಸುಮಾರು 55,000 ಜನ ಮೀನುಗಾರಿಕೆಯಲ್ಲಿ ತೊಡಗಿದ್ದರು. ಸ್ಪಾಂಜು ಶೇಖರಣೆಯಲ್ಲಿ ಇನ್ನೊಂದು ಉದ್ಯೋಗ.
ದೇಶದ ವಿಸ್ತೀರ್ಣದ ಸೇ. 21.4 ರಷ್ಟು ಪ್ರದೇಶದಲ್ಲಿ ಅರಣ್ಯಗಳಿವೆ. ಅವುಗಳಲ್ಲಿ ಸುಮಾರು 4/5 ಭಾಗ ಸರ್ಕಾರಕ್ಕೆ ಸೇರಿದೆ. ಪೈನ್, ಫರ್ ಮತ್ತು ಓಕ್ ವರಗಳೇ ವಿಶೇಷ ಗೋಂದು ಮತ್ತು ಟರ್ಪೆಂಡೈನ್ ಮುಖ್ಯ ಸಾಮಗ್ರಿಗಳು.
ಗ್ರೀಸಿನಲ್ಲಿ ಅನೇಕ ಖನಿಜಗಳ ನಿಕ್ಷೇಪಗಳೀವೆ. ಕಬ್ಬಿಣ ಅದಿರು, ಬಾಕ್ಸೈಟ್, ಕ್ರೋಮೈಟ್ ಇವು ಒಟ್ಟು ಖನಿಜಗಳ ಉತ್ಪಾದನೆಯ ಸೇ. 75 ರಷ್ಟಿದೆ. ಇಲತರ ಖನಿಜಗಳಲ್ಲಿ ಲಿಗ್ನೈಟ್, ಆಂಟಿಮೋನಿ, ನಿಕ್ಕಲ್, ಚಿನ್ನ, ಗಂಧಕ, ಅಮೃತ ಶಿಲೆ, ಜಿಪ್ಸ್‍ಂ, ಮತ್ತು ಸುಣ್ಣಕಲ್ಲು ಮುಖ್ಯವಾದವು. ಉತ್ತಮದರ್ಜೆಯ ಕಲ್ಲಿದ್ದಲಿನ ಕೊರತೆ ಇದೆ. ಅನೇಕ ಗಣಿಗಳನ್ನು ಸರ್ಕಾರ ನಿರ್ವಹಿಸುತ್ತದೆ. ಗ್ರೀಸ್ ಅನೇಕ ಖನಿಜಗಳನ್ನ ಅವುಗಳ ನೈಜ ಸ್ಥಿತಿಯಲ್ಲೇ ರಫ್ತು ಮಾಡುತ್ತದೆ. ಕಲ್ಲಲಿದ್ದಲು ಮತ್ತು ಪೆಟ್ರೋಲಿಯಮನ್ನು ಆಮದು ಮಾಡಿಕೊಳ್ಳುತ್ತದೆ. ಗ್ರೀಸಿನ ಒಟ್ಟು ವಿದ್ಯುದುತ್ಪಾದನೆ 42,000 ಲಕ್ಷ ಕಿವಾ. (1965).
ಆಹಾರ, ಪಾನೀಯಗಳು, ಹೊಗೆಸೊಪ್ಪು - ಇವು ಗ್ರೀಸನ ಮುಖ್ಯ ಕೈಗಾರಿಕೆಗಳು. ಇತರ ಸಿದ್ಧ ವಸ್ತುಗಳ ಕೈಗಾರಿಕೆಗಳು ಶೀಘ್ರ ಪ್ರಗತಿ ಹೊಂದುತ್ತವೆ. ಹತಿ, ಗಿರಣಿ, ಎಂಜಿನಿಯರಿಂಗ್, ವಿದ್ಯತ್, ಸಾಮಗ್ರಿ, ರಾಸಾಯನಿಕ , ಪೆಟ್ರೋಲ್ ಶುದ್ಧೀಕರಣ ಮುಂತಾದವು ಇತರ ಕೈಗಾರಿಕೆಗಳು. ಈಚೆಗೆ ಮೋಟಾರು, ಹಡಗು ನಿರ್ಮಾಣ ಸಿಮೆಂಟ್ ಕೈಗಾರಿಕೆಗಳು ಸ್ಥಾಪಿತವಾಗಿವೆ. 2 ನೆಯ ಮಹಾಯುದ್ಧದಿಂದೀಚೆಗೆ ಪ್ರವಾಸೋದ್ಯಮ ಹೆಚ್ಚು ಅಭಿವೃದ್ಧಿಗೊಂಡಿದೆ.
ಆಥೆನ್ಸ್, ಪೈರೀಯಸ್, ಸ್ಯಾಲೊನೀಕ ಮುಖ್ಯ ವಾಣಿಜ್ಯ ಕೇಂದ್ರಗಳು.
ಗ್ರೀಸಿನ ರಫ್ತಿಗಿಂತ ಆಮದು ಅಧಿಕ. ವಿದೇಶಿ ವ್ಯಾಪಾರ ಪ್ರತಿಕೂಲಕರ. ಆಮದುಗಳಲ್ಲಿ ಯಂತ್ರ ಸಾಮಗ್ರಿ, ಪೆಟ್ರೋಲಿಯಂ ಪದಾರ್ಥಗಳು. ಗಿರಣಿ ಸರಕು , ಖನಿಜಗಳು ಮತ್ತು ಲೋಹಗಳು, ಮರದ ದಿಮ್ಮಿಗಳು ಮತ್ತು ಸಿದ್ಧವಸ್ತುಗಳು ಮುಖ್ಯವಾದವು. ಹೊಗೆಸೊಪ್ಪು, ಒಣಹುಲ್ಲು, ಹತ್ತಿ ಮುಂತಾದವು. ರಫ್ತುಗಳು.
ಗ್ರೀಸಿನ ಮುಖ್ಯ ನಗರಗಳಿವು (1961 ರ ಜನಸಂಖ್ಯೆಗಳನ್ನು ಆವರಣಗಳೊಳಗೆ ಕೊಟ್ಟಿದೆ. ); ಆಥೆನ್ಸ್ (ರಾಜಧಾನಿ) (6,27,564); ಸ್ಯಾಲೊನೀಕ (ತೇಸಾಲಾನ್ಯೀ) (2,50,920), ಪೈರೀಯಸ್ (1,83,877), ಪಟ್ರ್ಯಾಸ್ (95,364) ಇರಾಕ್ಲಿಯಾನ್ (63,458) , ಲರಿಸ (55,391), ವೋಲಾಸ್ (49,221), ಕ್ಯಾವಲ (44,517) ಕಾರ್ಪೂ (26,991), ಕೈಯಾಸ್ (24,053)
ಗ್ರೀಸಿನ ನಾಣ್ಯ ಡ್ರಾಕ್ಮ. ಇದನ್ನು 100 ಲೆಪ್ಟಾಗಳಾಗಿ ವಿಂಗಡಿಸಿದೆ.
ವಿಧ್ಯಾಭಾಸ: 1965 ರಲ್ಲಿ 17.7 ಮಂದಿ ಅನಕ್ಷರಸ್ಥರಿದ್ದರು. 6 ರಿಂದ 15 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸ ಕಡ್ಡಾಯ ಹಾಗೂ ಉಚಿತ. ಸ್ಥಳೀಯ ಮತ್ತು ರಾಜ್ಯ ಸರ್ಕಾರಗಳು ಶಾಲೆಗಳ ವೆಚ್ಚವನ್ನು ವಹಿಸಿಕೊಳ್ಳುತ್ತವೆ. ಖಾಸಗಿ ಶಾಲೆಗಳು ರಾಜ್ಯ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿವೆ. 1965 - 66 ರಲ್ಲಿ 10,158 ಪ್ರಾಥಮಿಕ ಶಾಲೆಗಳಿದ್ದುವು. ಅವುಗಳಲ್ಲಿ 9,63,805 ವಿದ್ಯಾರ್ಥಿಗಳೂ 26,989 ಉಪಾಧ್ಯಾಯರೂ ಇದ್ದರು. 11,405 ಅಧ್ಯಾಪಕರು ಮತ್ತು 3, 68,884 ವಿದ್ಯಾರ್ಥಿಗಳಿಂದ ಕೂಡಿದ 359 ಸೆಕೆಂಡರಿ ಶಾಲೆಗೂ 52,567 ವಿದ್ಯಾರ್ಥಿಗಳುಳ್ಳ 589 ತಾಂತ್ರಿಕ ಶಾಲೆಗಳು ಇದ್ದುವು. ಗ್ರೀಸಿನಲ್ಲಿರುವ ವಿಶ್ವವಿದ್ಯಾಲಯಗಳಿವು: ಆಥಿನಿಸಸಿನ್ ಎತ್ನಕಾನ್ ಕೈ ಕಾಪೊಡಿಸ್ಟ್ರಿಯಕಾನ್ ಪನೆಪಿಸ್ಟಿಮಿಯಾನ್, ಆಥೆನ್ಸ್ (500 ಅಧ್ಯಾಪಕರು 19,000 ವಿದ್ಯಾರ್ಥಿಗಳು), ಆರಿಸ್ಟಾಟೀಲಿಯನ್ ಪನೆಪಿಸ್ಟಿಮಿಯಾನ್ ತೆಸಲೊನಿಕಸ್, ಆಥೆನ್ಸ (152 ಪ್ರಾಧ್ಯಾಪಕರೂ , 20,000 ವಿದ್ಯಾರ್ಥಿಗಳು), ಎತ್ನಿಕಾನ್ ಮೆಟ್ಸೊಮಿಯಾನ್ ಪಾಲಿಟೆಕ್ನಿಯಾನ್, ಆಥೆನ್ಸ್ (450 ಅಧ್ಯಾಪಕರು, 3,800 ವಿದ್ಯಾರ್ಥಿಗಳು) ಜಾನಿನ ವಿಶ್ವ ವಿದ್ಯಾನಿಲಯ, ಜಾನಿನ, ಪಟ್ರ್ಯಾಸ್ ವಿಶ್ವವಿದ್ಯಾಲಯ, ಪಟ್ರ್ಯಾಸ್. (ಕೆ.ಆರ್.) (ಆರ್.ಆರ್.ಎ.)