ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರೇಟಿಯಸ್ ಫಾಲಿಸ್ಕಸ್
ಗ್ರೇಟಿಯಸ್ ಫಾಲಿಸ್ಕಸ್ - ರೋಮನ್ ಕವಿ. ವರ್ಜಿಲ್ ಮತ್ತು ಓವಿಡ್ ಕವಿಗಳ ಸಮಕಾಲೀನ. ಕಾಲ ಕ್ರಿ.ಶ. ಸು.8. ಈತನ ಜನ್ಮಸ್ಥಳ ಫಾಲಿರೀ ಎಂದು ಊಹಿಸಲಾಗಿದೆ. ಬೇಟೆಯಾಡುವುದರ ಬಗ್ಗೆ ಸೈನೆಜಿûಟಿಕ ಎಂಬ ಕವನದಲ್ಲಿ ಬರುವ 536 ವಾಕ್ಯಗಳನ್ನು ಬಿಟ್ಟರೆ ಈತನ ಸಾಹಿತ್ಯ ಚಟುವಟಿಕೆಯ ಬಗ್ಗೆಯಾಗಲಿ ಅಥವಾ ವೈಯಕ್ತಿಕ ಜೀವನದ ಬಗ್ಗೆಯಾಗಲಿ ಯಾವ ಮಾಹಿತಿಯೂ ದೊರೆಯುವುದಿಲ್ಲ. ಓವಿಡ್ ತನ್ನ ಕೃತಿಯೊಂದರಲ್ಲಿ ಆಕಸ್ಮಿಕವಾಗಿ ಮಾಡಿರುವ ಉಲ್ಲೇಖನವನ್ನು ಬಿಟ್ಟರೆ ಓದುಗರು ಈತನ ಕೃತಿಯನ್ನು ಮರೆತಿದ್ದರೆಂದೇ ತೋರುತ್ತದೆ. ಈ ಕೃತಿಯಲ್ಲಿ ಗ್ರೇಟಿಯಸ್ ಹೆಚ್ಚು ಕಡಿಮೆ ಜಿನೊಫನನ ರೀತಿಯಲ್ಲಿ ಬೇಟೆಯ ಆಟವನ್ನು, ಅದರ ರೀತಿನೀತಿಗಳನ್ನು, ಅದಕ್ಕೆ ಬಳಸುವ ಕುದುರೆ, ನಾಯಿಗಳನ್ನು ಮತ್ತು ಅವುಗಳ ತಳಿಗಳನ್ನು ಕುರಿತು ವಿವೇಚಿಸಿದ್ದಾನೆ. ಕವಿಯ ಮೇಲೆ ವರ್ಜಿಲನ ಪ್ರಭಾವವಿರುವುದಾದರೂ ವಿವರಣೆ ಅಲ್ಲಲ್ಲಿ ಮಂಕಾಗಿ ಶೈಲಿ ಭಾರವಾಗಿದೆ ಎನಿಸುತ್ತದೆ. ಆದರೆ ತನ್ನ ಸಾಮಗ್ರಿಗಳ ಜೋಡಣೆಯಲ್ಲಿ, ಅದನ್ನು ಬಳಸುವಲ್ಲಿ ತುಂಬ ಚತುರತೆಯನ್ನು ವ್ಯಕ್ತಪಡಿಸಿದ್ದಾನೆ. ಇಡೀ ಕವನ ಬೋಧಕನ ಶೈಲಿಯಲ್ಲಿದೆ. (ಎನ್.ಎಸ್.ಆರ್.ಎ.)