ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರೇಪ್ ಹಣ್ಣು

ವಿಕಿಸೋರ್ಸ್ ಇಂದ
Jump to navigation Jump to search

ಗ್ರೇಪ್ ಹಣ್ಣು - ರೂಟೇಸೀ (ಕಿತ್ತಳೆ) ಕುಟುಂಬಕ್ಕೆ ಸೇರಿದ ಒಂದು ಮರದ ಹಣ್ಣು. ವೃಕ್ಷದ ವೈಜ್ಞಾನಿಕ ಹೆಸರು ಸಿಟ್ರಸ್ ಪ್ಯಾರಡಿಸಿ. ಇದು ಚಕ್ಕೋತ ಹಣ್ಣಿನ ಮರಕ್ಕೆ (ಸಿಟ್ರಸ್ ಗ್ರ್ಯಾಂಡಿಸ್) ಬಲು ಹತ್ತಿರ ಸಂಬಂಧಿ. ಹಲವರ ಅಭಿಪ್ರಾಯದಂತೆ ಇದು ಚಕ್ಕೋತ ಮರದಿಂದ ವ್ಯತ್ಯಯದ (ಮ್ಯುಟೇಷನ್) ಮೂಲಕ ಉದ್ಭವಿಸಿದೆ. ಗ್ರೇಪ್ ಹಣ್ಣಿನ ಮರ ವೆಸ್ಟ ಇಂಡೀಸಿನ ಮೂಲನಿವಾಸಿ. ಇದರ ರುಚಿಯಾದ ಹಣ್ಣುಗಳಿಗಾಗಿ ಇದನ್ನು ಬೇರೆ ದೇಶಗಳಲ್ಲಿ ಮುಖ್ಯವಾಗಿ ಅಮೆರಿಕದ ಸಂಯುಕ್ತಸಂಸ್ಥಾನಗಳ ಫ್ಲಾರಿಡ, ಆರಿeóÉೂೀನ, ಕ್ಯಾಲಿಫೋರ್ನಿಯಗಳಲ್ಲೂ ಇಸ್ರೇಲಿನಲ್ಲೂ ದಕ್ಷಿಣ ಆಫ್ರಿಕದಲ್ಲೂ ಭೂರಿ ಗಾತ್ರದಲ್ಲಿ ಬೆಳೆಸಲಾಗುತ್ತದೆ. ಅಮೆರಿಕದ ಫ್ಲಾರಿಡ ರಾಜ್ಯವೊಂದರಲ್ಲಿ ಇದರ ವಾರ್ಷಿಕ ಇಳುವರಿ ಒಂದು ಮಿಲಿಯನ್ ಟನ್ನುಗಳಷ್ಟಿದೆ. ಭಾರತದಲ್ಲಿ ಪಂಜಾಬ್, ಹರಿಯಾನಗಳಲ್ಲಿ ದೊಡ್ಡ ಮೊತ್ತದಲ್ಲೂ ದಕ್ಷಿಣ ಭಾರತದಲ್ಲಿ ಲಘು ಮೊತ್ತದಲ್ಲೂ ಇದರ ಬೇಸಾಯ ಉಂಟು.

ಇದು 7 - 12 ಮೀ. ಎತ್ತರಕ್ಕೆ ಬೆಳೆಯುವ ಮರ. ಎಲೆಗಳು ಚಕ್ಕೋತದ ಎಲೆಗಳಿಗಿಂತ ಸ್ವಲ್ಪ ಚಿಕ್ಕವು. ತೊಟ್ಟಿನ ಆಚೀಚೆಯ ಭಾಗ ರೆಕ್ಕೆಯಂತೆ ಅಗಲವಾಗಿ ಹರಡಿದೆ. ಹೂಗಳು ಎಲೆಗಳ ಕಂಕುಳಲ್ಲಿ ಒಂಟೊಂಟಿಯಾಗಿ ಇಲ್ಲವೆ ಗೊಂಚಲುಗಳಲ್ಲಿ ಹುಟ್ಟುತ್ತವೆ. ಹಣ್ಣು ಮೋಸಂಬಿ ಹಣ್ಣಿಗಿಂತ ಎರಡರಷ್ಟು ಗಾತ್ರದ್ದು. ಮಾಗಿದ ಹಣ್ಣಿನ ಬಣ್ಣ ಹಳದಿ. ತಿರುಳು ರಸಭರಿತವಾಗೂ ಮೃದುವಾಗೂ ಇದೆ. ಅದರ ಬಣ್ಣ ಕೆಲವು ಬಗೆಗಳಲ್ಲಿ ತಿಳಿಹಳದಿ. ಇನ್ನು ಕೆಲವು ಬಗೆಗಳಲ್ಲಿ ನಸುಗೆಂಪು ಅಥವಾ ಕೆಂಪು. ಹಣ್ಣಿಗೆ ಒಂದು ವಿಶೇಷ ರೀತಿಯ ಮಧುರವಾಸನೆಯೂ ಕೊಂಚ ಹುಳಿ ಮಿಶ್ರಿತ ಸಿಹಿರುಚಿಯೂ ಇದೆ.

ಗ್ರೇಪ್ ಹಣ್ಣಿನ ಮರದ ಬೇಸಾಯಕ್ಕೆ ಮರಳಿನ ಪ್ರಮಾಣ ಹೆಚ್ಚಾಗಿರುವ ನೆಲ ಉತ್ತಮ. ಬೆಳೆ ಹುಲುಸಾಗಿರಲು ಸಾಕಷ್ಟು ಪರಿಮಾಣದಲ್ಲಿ ನೈಟ್ರೋಜನ್, ರಂಜಕ ಮತ್ತು ಪೊಟ್ಯಾಸಿಯಮುಗಳಲ್ಲದೆ ಲಘು ಪ್ರಮಾಣದಲ್ಲಿ ತಾಮ್ರ, ಮ್ಯಾಂಗನೀಸ್, ಸತು ಕಬ್ಬಿಣ ಮತ್ತು ಬೋರಾನುಗಳನ್ನೂ ಹಾಕಬೇಕು. ಮರಗಳನ್ನು ಬೀಜಗಳಿಂದ ವೃದ್ಧಿಸಬಹುದಾದರೂ ಹೀಗೆ ಪಡೆದ ಗಿಡಗಳಲ್ಲಿ ಹಣ್ಣಿನ ಗುಣ ಮತ್ತು ಗಾತ್ರಗಳು ವ್ಯತ್ಯಾಸವನ್ನು ತೋರುವುದರಿಂದ ಉತ್ತಮ ದರ್ಜೆಯ ಮರವೊಂದನ್ನು ಆರಿಸಿಕೊಂಡು ಅದರಿಂದ ಕಣ್ಣು ಕಸಿಯ ಮೂಲಕ ಸಸಿಗಳನ್ನು ಪಡೆದು ವೃದ್ಧಿಸುವುದೇ ಹೆಚ್ಚು ವಾಡಿಕೆಯಲ್ಲಿರುವ ಕ್ರಮ. ಮರ 4 - 6 ವರ್ಷ ವಯಸ್ಸಾದ ಅನಂತರ ಫಲ ಬಿಡಲು ಆರಂಭಿಸುತ್ತದೆ. ಗ್ರೇಪ್ ಹಣ್ಣಿನ ಇಳವರಿಯ ಮೊತ್ತ ಅಧಿಕ. ಹುಲುಸಾಗಿ ಬೆಳೆದ ಒಂದು ಮರ ವರ್ಷಕ್ಕೆ 1300 - 1500 ಪೌಂ. ಹಣ್ಣನ್ನು ಕೊಡಬಲ್ಲದು.

ಗ್ರೇಪ್ ಹಣ್ಣಿನಲ್ಲಿ ಸುಮಾರು 25ಕ್ಕೂ ಹೆಚ್ಚು ಬಗೆಗಳಿವೆ. ಇವುಗಳಲ್ಲಿ ಬಹುಪಾಲು ಹಳದಿ ಬಣ್ಣದ ತೊಳೆಗಳುಳ್ಳವು. ಉದಾಹರಣೆಗೆ ಮಾರ್ಷ್, ಡಂಕನ್, ಟ್ರಯಂಫ್, ಹಾಲ್ (ಸಿಲ್ವರ್ ಕ್ಲಸ್ಟರ್) ಇತ್ಯಾದಿ. ಇನ್ನು ಕೆಲವು ರೀತಿಯವು ಕೆಂಪು ಅಥವಾ ನಸುಗೆಂಪು ಬಣ್ಣದ ತೊಳೆಗಳುಳ್ಳವು. ಉದಾಹರಣೆಗೆ ರೂಬಿ, ವೆಬ್, ಫಾಸ್ಟರ್ ಮುಂತಾದವು. ಗ್ರೇಪ್ ಹಣ್ಣಿನ ಮರವನ್ನು ಸಿಟ್ರಸ್ ಜಾತಿಯ ಇತರ ಪ್ರಭೇದಗಳೊಂದಿಗೆ ಅಡ್ಡತಳಿಯೆಬ್ಬಿಸಿ ಕೆಲವು ಮಿಶ್ರಬಗೆಯ ಹಣ್ಣಿನ ಮರಗಳನ್ನು ಪಡೆಯಲಾಗಿದೆ. ಉದಾಹರಣೆಗೆ ಸ್ವಿಗಂಲ್ ಎಂಬಾತ 1897ರಲ್ಲಿ ಗ್ರೇಪ್ ಹಣ್ಣಿನ ಮರವನ್ನೂ ಕಿತ್ತಲೆಯನ್ನೂ ಅಡ್ಡಹಾಯಿಸಿ ಟ್ಯಾಂಜಲೊ ಎಂಬ ಮಿಶ್ರತಳಿಯೊಂದನ್ನು ಉತ್ಪಾದಿಸಿದ.

ಗ್ರೇಪ್ ಹಣ್ಣು ಹಲವಾರು ಪೌಷ್ಟಿಕಾಂಶಗಳ ಆಗರ ಎನಿಸಿದೆ. ಇದರಲ್ಲಿ ಅಧಿಕ ಮೊತ್ತದಲ್ಲಿ ಸಿ ವಿಟಮಿನ್ (ಕಿತ್ತಳೆ ಮತ್ತು ನಿಂಬೆ ಹಣ್ಣುಗಳನ್ನು ಬಿಟ್ಟರೆ ಸಿ ವಿಟಮಿನ್ ಪರಿಮಾಣ ಇದರಲ್ಲಿ ಅತಿ ಹೆಚ್ಚು) ಮತ್ತು ಸಾಕಷ್ಟು ಪರಿಮಾಣದಲ್ಲಿ ಬಿ ವಿಟಮಿನ್ ಹಾಗೂ 5% - 12% ಸಕ್ಕರೆಯ ಅಂಶ ಇವೆ. ಗ್ರೇಪ್ ಹಣ್ಣಿನ ರಸ ಒಂದು ಉತ್ತಮ ಬಗೆಯ ಕ್ಷುಧಾಕಾರಕವೆಂದು ಹೆಸರಾಗಿದೆ. ಇದನ್ನು ಕಿತ್ತಳೆಹಣ್ಣಿನ ರಸದಂತೆ ಬೆಳಗಿನ ಉಪಾಹಾರದ ಜೊತೆಗೆ ಬಳಸುವುದುಂಟು. ರಸವನ್ನು ಕೊಂಚ ಪರಿಮಾಣದಲ್ಲಿ ವೈನ್, ಬ್ರ್ಯಾಂಡಿ ಮುಂತಾದ ಪಾನೀಯಗಳಿಗೆ ರುಚಿಕೊಡಲು ಬಳಸುತ್ತಾರೆ. ಸಿಪ್ಪೆಯಿಂದ ಪೆಕ್ಟಿನ್ ಎಂಬ ವಸ್ತುವನ್ನು ಬೇರ್ಪಡಿಸಿ ಜೆಲ್ಲಿ ತಯಾರಿಕೆಯಲ್ಲಿ ಉಪಯೋಗಿಸುವುದಿದೆ. (ಎಂ.ಎಚ್.ಎಂ.)