ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರೇವ್ಸ್, ರಾಬರ್ಟ್ ರ್ಯಾಂಕ
ಗ್ರೇವ್ಸ್, ರಾಬರ್ಟ್ ರ್ಯಾಂಕ - 1895 - . ಇಂಗ್ಲಿಷ್ ಕವಿ. ಕದಂಬರಿಕಾರ, ವಿಮರ್ಶಕ ಮತ್ತು ಗ್ರೀಕ್ ವಿದ್ವಾಂಸ, ಪ್ರಸಿದ್ಧ ಜರ್ಮನ್ ಇತಿಹಾಸಕಾರ ಘನ್ ರ್ಯಾಂಕನ ವಂಶಕ್ಕೆ ಸೇರಿದವ. ವಿಂಬಲ್‍ಡನ್‍ನಲ್ಲಿ ಜುಲೈ 26ರಂದು ಹುಟ್ಟಿದ. ತಂದೆ ಎ. ಪಿ. ಗ್ರೇವ್ಸ್ (1864 - 1931). ರಾಯಲ್ ವೆಲ್ಷ್ ಫ್ಯುಸಿಲಿಯರ್ಸ್ ವಿಭಾಗಕ್ಕೆ ಸೇರಿ ಒಂದನೆಯ ಮಹಾಯುದ್ಧದಲ್ಲಿ ಭಾಗವಹಿಸಿದ. ಯುದ್ಧಾನಂತರ ಆಕ್ಸ್‍ಫರ್ಡಿಗೆ ತೆರಳಿ ಆಧುನಿಕ ಕಾವ್ಯದ ಮೇಲೆ ಫ್ರೌಢ ಪ್ರಬಂಧ ಬರೆದು ಪದವಿ ಪಡೆದ. ಪ್ರಪ್ರಥಮವಾಗಿ ಈತ ಜಾರ್ಜಿಯನ್ ಕವಿಗಳ ಧಾಟಿಯನ್ನು ಅನುಸರಿಸಿ ಕೆಲವು ಕವನಗಳನ್ನು ಬರೆದ. ಆದರೆ ಯುದ್ಧ ಕಾಲದಲ್ಲಿ ಪಟ್ಟ ಕಟು ಅನುಭವಗಳಿಂದ ಅಂತರಂಗದ ತೊಳಲಾಟಕ್ಕೆ ಸಿಕ್ಕಬೇಕಾಯಿತಾಗಿ ಈತನ ಅನಂತರದ ಕಾವ್ಯ ಹೆಚ್ಚು ಅರ್ಥಪೂರ್ಣವಾಗಿ ಮೂಡಿ ಬಂತು. ತನ್ನ ಇಡೀ ಜೀವಮಾನ ಕಾಲದಲ್ಲಿ ಈತ ತನ್ನ ಕಾವ್ಯಶೈಲಿಯನ್ನು ನಿರಂತರವಾಗಿ ಪರಿಷ್ಕರಿಸುತ್ತ, ಆತ್ಮಪರಿಶೋಧನೆಗೆ ಒಳಪಡಿಸುತ್ತ, ಪ್ರಯೋಗಗಳ ಮೂಲಕ ಅತ್ಯಂತ ವೈಯಕ್ತಿಕವಾದ ಅಭಿವ್ಯಕ್ತಿಯನ್ನು ರೂಪಿಸಿಕೊಂಡ. ಆಧುನಿಕ ಪ್ರಜ್ಞೆಯನ್ನು ಈತ ಅನನ್ಯವಾದ ರೀತಿಯಲ್ಲಿ ಮೈಗೂಡಿಸಿಕೊಂಡಿದ್ದರೂ ಯಾವ ಕಾವ್ಯ ಪಂಥವನ್ನಾಗಲೀ ಯಾವನೊಬ್ಬ ಕವಿಯ ವಿಶಿಷ್ಟ ಮಾದರಿಯನ್ನಾಗಲಿ ಅನುಸರಿಸದೆ, ಸಾಂಪ್ರದಾಯಿಕವೆನ್ನಬಹುದಾದ ಮಾರ್ಗದಲ್ಲಿ ಬೆರಗುಗೊಳಿಸುವಂಥ ಹೊಸತನವನ್ನು ಪ್ರದಶಿಸಿದ್ದಾನೆ. `ಕಾವ್ಯ ಸಂಗೀತಮಯವಾಗಿ ಜೋಡಿಸಿದ ಶಬ್ದಗಳನ್ನು ಮೀರಿದಂಥದು. ಕಾವ್ಯವೆಂದರೆ ಸಂವೇದನೆ, ವಿವೇಕ ; ಅನೇಕ ವೇಳೆ ಹೃದಯ ಬಿರಿಯುವಂಥ ಸಂವೇದನೆ ಎಂಬ ಈತನ ಮಾತುಗಳು ಈತನ ಕಾವ್ಯಕ್ಕೂ ಔಚಿತ್ಯಮಯವಾಗಿ ಅನ್ವಯವಾಗುತ್ತವೆ. ಆಧುನಿಕ ಕವಿಗಳಲ್ಲಿ ಈತನದು ಗಣ್ಯ ಸ್ಥಾನ. ಈತ ಲಾವಣಿ (ಬ್ಯಾಲಡ್) ಮಾದರಿಯ ಸರಳ ಕಥನಕವನಗಳನ್ನೂ ಶಿಶುಗೀತೆಗಳನ್ನೂ ಬರೆದಿದ್ದಾನೆ. ಆಧ್ಯಾತ್ಮಿಕ ಕವನಗಳನ್ನೂ ವಿಲಿಯಂ ಬ್ಲೇಕನ ಪುರಾಣಕಥಾಶೈಲಿಯನ್ನು ನೆನೆಪು ಮಾಡುವಂಥ ಸಂಕೀರ್ಣ, ಕ್ಲಿಷ್ಟ, ವೈಚಾರಿಕ ಕವನಗಳನ್ನೂ ಬರೆದಿದ್ದಾನೆ. ಪ್ರಣಯದ ದುರಂತ ಅನುಭವಗಳು, ಬಾಲ್ಯದ ಮುಗ್ಧ ಹಂಬಲ, ಅದ್ಭುತ ಘಟನೆಗಳಿಂದ ಕೂಡಿದ ಅಲೌಕಿಕ ಸನ್ನಿವೇಶಗಳು - ಇವು ಇವನ ಕಾವ್ಯಕ್ಕೆ ವೈವಿಧ್ಯಮಯ ವಸ್ತುವನ್ನು ಒದಗಿಸಿವೆ.
ಗ್ರೇವ್ಸ್ ಮುಖ್ಯವಾಗಿ ಕವಿಯೆಂದು ಪ್ರಸಿದ್ಧನಾಗಿದ್ದರೂ ಈತನ ಐತಿಹಾಸಿಕ ಕಾದಂಬರಿಗಳು, ವೈಚಾರಿಕ ಗದ್ಯಗ್ರಂಥಗಳು ಈತನಿಗೆ ಅಪಾರ ಖ್ಯಾತಿ ತಂದಿವೆ. ಈತನ ಆತ್ಮ ಕಥೆ ಗುಡ್‍ಬೈ ಟು ಆಲ್ ದಟ್ (1929) - ಒಂದು ಶ್ರೇಷ್ಠ ಗ್ರಂಥ. ಇದರಲ್ಲಿ ಸಮಕಾಲೀನ ಸಾಹಿತಿಗಳನ್ನು ಕುರಿತ ನಿಷ್ಠುರ, ವ್ಯಂಗ್ಯ ಟೀಕೆ ಇದೆ. ಯುದ್ಧಕಾಲದಲ್ಲಿ ತಾನು ಕಂಡುಂಡ ವ್ಯಾಕುಲಗಳ ಪರಿಯನ್ನು ತುಂಬ ಸೊಗಸಾಗಿ (ಇದರಲ್ಲಿ ವರ್ಣಿಸಿದ್ದಾನೆ. ಈ ಗ್ರಂಥಕ್ಕೆ ಉತ್ತರ ರೂಪವಾಗಿ ಟು ರಿಟರ್ನ್ ಟು) ಆಲ್ ದಟ್ (1930) ಎಂಬ ಆತ್ಮಕಥಾ ಕವನವನ್ನು ಈತನ ತಂದೆ ಎ. ಪಿ. ಗ್ರೇವ್ಸ್ ಬರೆದಿದ್ದಾನೆಂಬುದನ್ನು ಇಲ್ಲಿ ನೆನೆಯಬಹುದು.
`ನಾನು ಕಾದಂಬರಿಗಳನ್ನು ಬರೆದದ್ದು ಕೇವಲ ಹಣ ಸಂಪದನೆಗಾಗಿಯೇ ವಿನಾ ಕಿರ್ತಿಗಾಗಿಯಲ್ಲ ಎಂದು ಹೇಳಿಕೊಂಡಿದ್ದರೂ ಗ್ರೇವ್ಸ್ ನಿಜವಾಗಿ ಬೆಲೆ ಬಾಳುವಂಥ ಐತಿಹಸಿಕ ಕಾದಂಬರಿಗಳನ್ನು ಬರೆದಿದ್ದಾನೆ. ಚಿಕ್ಕಂದಿನಿಂದಲೂ ಈತ ಬೆಳೆಸಿಕೊಂಡ ಕುತೂಹಲ ದೃಷ್ಟಿ, ಅನಂತರ ಗಳಿಸಿದ ಅಭಿಜಾತ ಪಾಂಡಿತ್ಯ, ಐತಿಹಾಸಿಕ ಪ್ರಜ್ಞೆ - ಈತನ ಕಾದಂಬರೀ ರಚನೆಗೆ ಸ್ಫೂರ್ತಿ ನೀಡಿವೆ. ಕಳೆದು ಹೋದ ಇತಿಹಾಸದ ಯಾವುದೋ ಕಾಲದೇಶಗಳಲ್ಲಿನ ಘಟನಾವಳಿಗಳು, ಪಾತ್ರಗಳು, ಪರಿಸರ - ಎಲ್ಲವನ್ನೂ ತನ್ನ ಕಾವ್ಯಾತ್ಮಕವಾದ ವಿಭಾವನೆಯ ಮೂಲಕ ಸಂಘಟಿಸಿ, ರಸಭರಿತ ಕಾದಂಬರಿಗಳನ್ನು ಈತ ನೇಯ್ದಿದ್ದಾನೆ. ಪುರಾತನ, ಸೀಜûರೋತ್ತರ ರೋಮನ್ ಇತಿಹಾಸವನ್ನು ಚಿತ್ರಿಸುವ ಐ, ಕ್ಲಾಡಿಯಸ್ (1934), ಕ್ಲಾಡಿಯಸ್‍ದಿ ಗಾಡ್ ಇವುಗಳ ಒಟ್ಟು ಒಂದು ಕಲಾಪರಿಪೂರ್ಣವಾದ ಕಾದಂಬರೀ ಚಕ್ರ. ಮೊದಲ ಕಾದಂಬರಿಗೆ ಹಾತಾರನ್‍ಡನ್ ಮತ್ತು ವೇಟ್ ಬ್ಲ್ಯಾಕ್ ಬಹುಮಾನಗಳು ಬಂದಿವೆ (1934). ಇವಲ್ಲದೆ ಈಗ ಬಿeóÁಂಟಿಯಮ್ಮಿನ ಚರಿತ್ರೆಯನ್ನು ಆಧರಿಸಿ ಬರೆದ ಕೌಂಟ್ ಬೆಲಿಸೇರಿಯಸ್, ಮಿಲ್ಟನ್ ಕವಿಯ ಜೀವನವನ್ನು ಕುರಿತ ವೈಫ್ ಟು ಮಿಲ್ಟನ್, ಹೋಮರನನ್ನು ಕುರಿತ ಹೋಮರ್ಸ್ ಡಾಟರ್ - ಮುಂತಾದ ಕಾದಂಬರಿಗಳನ್ನೂ ಬರೆದಿದ್ದಾನೆ. ಕಿಂಗ್ ಜೀಸಸ್ (1946), ಸೆವೆನ್ ಡೇಸ್ ಇನ್ ನ್ಯೂ ಕ್ರೀಟ್ (1949), ದಿ ಹ್ವೈಟ್ ಗಾಡೆಸ್ (1947) ಮುಂತಾದ ಕೃತಿಗಳಲ್ಲಿ ಈತನ ಗ್ರೀಕ್ ಪಾಂಡಿತ್ಯ ವ್ಯಕ್ತವಾಗಿದೆ. ತನ್ನ ದಿ ಹ್ವೈಟ್ ಗಾಡೆಸ್ ಎಂಬುದು ಕಾವ್ಯೈತಿಹ್ಯಕ್ಕೆ ಬರೆದ ಒಂದು ಐತಿಹಾಸಿಕ ವ್ಯಾಕರಣ - ಎಂದು ಗ್ರೇವ್ಸ್ ಹೇಳಿಕೊಂಡಿದ್ದಾನೆ. ಕ್ರಿಶ್ಚನ್ ಪುರಾಣೇತಿಹಾಸಗಳಿಗೆ ಸಂಬಂಧಿಸಿದ ಈತನ ವೈದುಷ್ಯಪೂರ್ಣ, ವೈಚಾರಿಕ ಗ್ರಂಥಗಳೂ ಉಜ್ವಲ ಗ್ರೀಕ್ ಭಾಷಾಂತರಗಳೂ ಇವನ ಬಹುಮುಖ ಪ್ರತಿಭೆಯ ಪ್ರತೀಕಗಳಾಗಿವೆ. ಪೊಯೆಟಿಕ್ ಅನ್‍ರೀಸನ್ (1925), ಕ್ರೌನಿಂಗ್ ಪ್ರಿವಿಲೆಜ್ (1955) - ಇವು ಈತನ ಪ್ರಸಿದ್ಧ ವಿಮರ್ಶನ ಗ್ರಂಥಗಳು. ಈತನ ಸಮಗ್ರ ಕವನಗಳ ಸಂಕಲನ 1959ರಲ್ಲಿ ಬೆಳಕು ಕಂಡಿತು.
ಡಬ್ಲೂ. ಎಚ್. ಆಡೆನ್ನನ ಅನಂತರ ಈತ 1961ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಾವ್ಯ ಪ್ರಾಧ್ಯಾಪಕನಾದ. (ಎಚ್.ಕೆ.ಆರ್.)