ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರ್ಯಾಕಲ್

ವಿಕಿಸೋರ್ಸ್ದಿಂದ

ಗ್ರ್ಯಾಕಲ್ - ಪ್ಯಾಸೆರಿಫಾರ್ಮಿಸ್ ಗಣದ ಇಕ್ಟೆರಿಡೀ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಹಕ್ಕಿಗಳ ಸಾಮಾನ್ಯ ಹೆಸರು. ಇವುಗಳಲ್ಲಿ ಮುಖ್ಯವಾದವು - ಉತ್ತರ ಅಮೆರಿಕದ ಕ್ವಿಸ್‍ಕೇಲಸ್ ಕ್ವಿಸ್‍ಕ್ಯುಲ (ಕಾಮನ್ ಗ್ರ್ಯಾಕಲ್), ವೆನಿಜ್ವೇಲ, ಪೆರು ಅಥವಾ ಅಮೆರಿಕದ ಸಂಯುಕ್ತಸಂಸ್ಥಾನಗಳ ದಕ್ಷಿಣ ಭಾಗದ ಕ್ಯಾಸಿಡಿಕ್ಸ್ ಮೆಕ್ಸಿಕಾನಸ್ (ಬೋಟ್ ಟೇಲ್ಡ್ ಗ್ರ್ಯಾಕಲ್) ಮತ್ತು ಮಧ್ಯ ಹಾಗೂ ದಕ್ಷಿಣ ಅಮೆರಿಕಗಳ ಸ್ಕೇಫಿಡ್ಯೂರ ಒರೈಜಿûವೋರ (ರೈಸ್ ಗ್ರ್ಯಾಕಲ್). ಭಾರತದ ಬೆಟ್ಟಗಾಡುಗಳಲ್ಲಿ ಕಾಣಬರುವ ಗ್ರ್ಯಾಕ್ಯುಲ ಅಥವಾ ಯೂಲೇಬಿಸ್ ರಿಲಿಜಿಯೋಸಕ್ಕೂ (ಹಿಲ್ ಮೈನ) ರೂಢಿಯಲ್ಲಿ ಗ್ರ್ಯಾಕಲ್ ಎಂಬ ಹೆಸರೇ ಇದೆ. ಇದರ ವಿವರಗಳಿಗೆ (ನೋಡಿ- ಮೈನಾ).

ಅಮೆರಿಕದಲ್ಲಿ ಕಾಣಸಿಗುವ ಗ್ರ್ಯಾಕಲ್ ಹಕ್ಕಿಗಳೆಲ್ಲ ಕಪ್ಪು ಬಣ್ಣದ ಹೊಳೆಯುವ ದೇಹ, ಉದ್ದವಾದ ರೆಕ್ಕೆಗಳು, ದೃಢವಾದ ಕಾಲುಗಳು, ನಸುಬಾಗಿದ ಕೊಕ್ಕು - ಈ ಲಕ್ಷಣಗಳನ್ನು ತೋರುತ್ತವೆ. ಇವುಗಳ ವಾಸ ಸಾಮಾನ್ಯವಾಗಿ ಮರಗಳಲ್ಲಿ, ಗ್ರ್ಯಾಕಲುಗಳು ಸರ್ವಭಕ್ಷಿಗಳು. ಕೀಟ, ಕಾಳು ಮುಂತಾದವನ್ನು ಮಾತ್ರವಲ್ಲದೆ ಬೇರೆ ಹಕ್ಕಿಗಳ ಗೂಡನ್ನು ಕೂಡ ಕೊಳ್ಳೆ ಹೊಡೆದು ಮೊಟ್ಟೆಗಳನ್ನು ಕಬಳಿಸುವುದುಂಟು. ಸಣ್ಣ ಪುಟ್ಟ ಹಲ್ಲಿ, ಓತಿಕೇತ, ಕಪ್ಪೆ ಮುಂತಾದವನ್ನೂ ತಿನ್ನುವುದಿದೆ. ಕೆಲವು ಬಗೆಯವು ಮೀನನ್ನೂ ತಿನ್ನುತ್ತವೆ. ಇವು ಸಾಮಾನ್ಯವಾಗಿ ಗುಂಪು ಗುಂಪಾಗಿದ್ದು ಒಂದು ನಿರ್ದಿಷ್ಟ ನೆಲೆಯಲ್ಲಿ ಒಟ್ಟಾಗಿ ಗೂಡುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತವೆ. ಗೂಡು ಕಟ್ಟುವ ಕೆಲಸ ಹೆಣ್ಣಿನದು. ಕ್ಯಾಸಿಡಿಕ್ಸ್ ಮೆಕ್ಸಿಕಾನಸ್ ಪ್ರಭೇದದ ಗ್ರ್ಯಾಕಲುಗಳಲ್ಲಿ ಒಂದು ಗಂಡು ಹಕ್ಕಿ ಹಲವಾರು ಹೆಣ್ಣುಗಳೊಂದಿಗೆ ಜೀವಿಸುತ್ತದೆ. ಬಹುಪಾಲು ಗ್ರ್ಯಾಕಲುಗಳು ತಾವು ನಿರ್ಮಿಸಿದ ಗೂಡುಗಳಲ್ಲಿ ಮೊಟ್ಟೆಯಿಡುವುವಾದರೂ ಸ್ಕೇಫಿಡ್ಯೂರ ಬಗೆಯದು ಮಾತ್ರ ಬೇರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುತ್ತದೆ. (ಕೆ.ಎಂ.ವಿ.) (ಪರಿಷ್ಕರಣೆ : ಕೆ ಎಸ್ ನವೀನ್) (ಪಿ.ಆರ್.ಎಂ.)