ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದಮಾಮ

ವಿಕಿಸೋರ್ಸ್ ಇಂದ
Jump to navigation Jump to search

ಚೆನ್ನೈನಿಂದ ಹೊರಡುವ ಮಕ್ಕಳ ಮಾಸಪತ್ರಿಕೆ. ಒಟ್ಟು ಓದುಗರ ಸಂಖ್ಯೆ ಸು. 200,000. ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ, ಗುಜರಾತಿ, ಇಂಗ್ಲಿಷ್, ಮಲಯಾಳಂ, ಬಂಗಾಲಿ, ಒರಿಯ ಮೊ. 13 ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ಕನ್ನಡ, ತೆಲುಗು, ಹಿಂದಿ, ಗುಜರಾತಿ, ಇಂಗ್ಲಿಷ್, ಬಂಗಾಲಿಗಳಲ್ಲಿ ಚಂದ ಮಾಮ, ತಮಿಳಿನಲ್ಲಿ ಅಂಬುಲಿ ಮಾಮ, ಮಲಯಾಳಂನಲ್ಲಿ ಅಂಬಿ ಅಮ್ಮಾವನ್, ಮರಾಠಿಯಲ್ಲಿ ಚಂದೋಬ, ಒರಿಯದಲ್ಲಿ ಜಹ್ನ ಮಾಮು ಎಂದು ಪತ್ರಿಕೆಯ ಹೆಸರು. ಪತ್ರಿಕೆ ತಮಿಳು ತೆಲುಗುಗಳಲ್ಲಿ 1947 ರಲ್ಲೂ, ಕನ್ನಡದಲ್ಲಿ 1948 ರಲ್ಲೂ, ಹಿಂದಿಯಲ್ಲಿ 1949ರಲ್ಲೂ, ಮರಾಠಿಯಲ್ಲಿ 1952 ರಲ್ಲೂ, ಗುಜರಾತಿಯಲ್ಲಿ 1954ರಲ್ಲೂ, ಇಂಗ್ಲಿಷ್, ಮಲಯಾಳಂಗಳಲ್ಲಿ 1970ರಲ್ಲೂ, ಬಂಗಾಲಿ, ಒರಿಯ ಗಳಲ್ಲಿ 1972ರಲ್ಲೂ ಆರಂಭ ವಾಯಿತು. ಇದರ ಸ್ಥಾಪಕರು ಬಿ ನಾಗಿರೆಡ್ಡಿ ಮತ್ತು ಚಕ್ರಪಾಣಿ. ಸಂಪಾದಕರು ಮತ್ತು ಪ್ರಕಾಶಕರು ಬಿ ವಿಶ್ವನಾಥರೆಡ್ಡಿ. 21 x 17ಸೆ.ಮೀ. ಆಕಾರದ ಬಿಡಿ ಪತ್ರಿಕೆಯ ಬೆಲೆ ರೂ.1 (ಫೆಬ್ರವರಿ 1974 ರಂದು) ಪ್ರತಿ ತಿಂಗಳ ಒಂದರಂದು ಪ್ರಕಟವಾಗುತ್ತದೆ.

ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸುವುದು, ದೇಶದ ಭವ್ಯಪರಂಪರೆಯನ್ನೂ ಪ್ರಾಚೀನ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನೂ ಕಥೆಗಳ ಮತ್ತು ಇತಿಹಾಸದ ವೃತ್ತಾಂತದ ನಿರೂಪಣೆಯ ಮೂಲಕ ಅವರಿಗೆ ಪರಿಚಯ ಮಾಡಿ ಕೊಡುವುದು ಚಂದಮಾಮದ ಉದ್ದೇಶಗಳು. ಬಣ್ಣ ಬಣ್ಣದ ಚಿತ್ರಗಳು, ದೇಶವಿದೇಶಗಳ ಕಥೆಗಳು, ಓದುಗರ ಇಂದ್ರಿಯ ಗ್ರಹಣಶಕ್ತಿಯನ್ನೂ ಕಲ್ಪನಾಶಕ್ತಿಯನ್ನೂ ಕುದುರಿಸುವ ದೃಷ್ಟಿಯಿಂದ ಏರ್ಪಡಿಸುವ ಛಾಯಾಚಿತ್ರ ಶೀರ್ಷಿಕೆ ಸ್ಪರ್ಧೆ-ಇವು ಚಂದಮಾಮದ ಕೆಲವು ವೈಶಿಷ್ಟ್ಯಗಳು. ಪತ್ರಿಕೆ ಮಕ್ಕಳ ವಿವಿಧ ರುಚಿಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲರಿಗೂ ಆಕರ್ಷಣೀಯವಾಗುವಂತೆ ಪ್ರಕಟವಾಗುತ್ತಿದೆ. ಬಹುರಾಷ್ಟ್ರೀಯ ಮೋರ್ಗನ್ ಸ್ಟಾನ್ಲಿ ಕಂಪನಿಯು 1999ರಲ್ಲಿ ಚಂದಮಾಮ ಪ್ರಕಾಶನ ಸಂಸ್ಥೆಯಲ್ಲಿ ಪಾಲುಗಾರಿಕೆ ಹೊಂದಿದೆ.

ಸಂಸ್ಕೃತ ಕೃತಿಯಾದ ವೇತಾಳ ಪಂಚವಿಂಶತಿ ಕೃತಿಯ ವಿಕ್ರಮ ಮತ್ತು ಬೇತಾಳ ಕಥೆ ಧಾರಾವಾಹಿಯಾಗಿ ಪ್ರಕಟವಾಗಿ ಈ ಪತ್ರಿಕೆ ತುಂಬ ಜನಪ್ರಿಯವಾಯಿತು. ಈಗ ಚಂದಮಾಮದ ಮಲ್ಟಿಮೀಡಿಯ ಸಿಡಿಗಳೂ ಪ್ರಕಟವಾಗಿವೆ; ಅಂತರ್ಜಾಲದಲ್ಲೂ ಪ್ರಕಟವಾಗುತ್ತಿದೆ. (ಟಿ.ಎಸ್.ಎಸ್.ಆರ್.ಎ.)