ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದ್ರಕೀರ್ತಿ1
ಪರಮಾಗಮಸಾರ ಎಂಬ ಕಂದವೃತ್ತಗಳನ್ನೊಳಗೊಂಡ ಕನ್ನಡ ಗ್ರಂಥದ ಕರ್ತೃ. ಜೈನ. ಈತನ ಕಾಲನಿರ್ಣಯಕ್ಕೆ ಯಾವುದೇ ಆಧಾರ ದೊರೆಯುವುದಿಲ್ಲ. ಕವಿಚರಿತೆಕಾರರು ಈತ ಸುಮಾರು 1400ರಲ್ಲಿದ್ದಿರಬಹುದೆಂದು ಹೇಳುತ್ತಾರೆ. ಈತನ ಗ್ರಂಥ ಆತ್ಮಸ್ವರೂಪ, ವೈರಾಗ್ಯ ಮುಂತಾದ ವಿಷಯಗಳನ್ನೊಳಗೊಂಡಿದೆ. ಇದರಲ್ಲಿ 132 ಕಂದವೃತ್ತಗಳಿವೆ. ತನ್ನ ಗ್ರಂಥಕ್ಕೆ ಆ ಹೆಸರು ಬರಲು ಕಾರಣವನ್ನು ಕವಿ ಹೀಗೆ ವಿವರಿಸುತ್ತಾನೆ. ಪರಮಜಿನೇಶ್ವರ ಮತದೊಳ್ | ಪರಿಕಿಸಿ ಸಾರಾಯಮಪ್ಪುವಂ ಕೊಂಡು ಕರಂ || ವಿರಚಿಸಿತಪ್ಪುದ¾Âಂದಂ | ಪರಮಾಗಮಸಾರಮಾದುದೀ ಕೃತಿಯಂದಂ||
ಮುನಿಪತಿ ದರ್ಶನಶುದ್ಧಂ |
ವಿನುತಯಶಂ ಶೀಲರತ್ನನಚಳಿತಧೈರ್ಯಂ ||
ಮನಸಿಜಮದಕರಿಸಿಂಹಂ |
ವಿನಯನಿಧಾನಂ ಸರಸ್ವತೀಮುಖತಿಲಕಂ ||
ಯಮನಿಯಮಧ್ಯಾನಯುತಂ |
ಸಮಚಿತ್ತಂ ತತ್ತ್ವವೇದಿ ವೈರಾಗ್ಯಯುತಂ|
ಶಮಿತ ಕಷಾಯಂ ನಿಸ್ಪೃಹ |
ನಮಲಂ ಭವ್ಯಂ ಸರಸ್ವತೀಮುಖತಿಲಕಂ ||
ಎಂಬೀ ಎರಡು ಪದ್ಯಗಳಲ್ಲಿ ಕವಿ ತನ್ನ ಗುಣಾತಿಶಯಗಳನ್ನು ಹೇಳಿಕೊಂಡಿದ್ದಾನೆ. ಸರಸ್ವತೀಮುಖತಿಲಕಂ, ಕವಿಜನಮಿತ್ರ ಎಂಬುವು ಈತನ ಬಿರುದುಗಳಿದ್ದಿರಬಹುದು. (ಎಸ್.ಬಿ.ಎಸ್.)