ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದ್ರಗಿರಿ2
ಉ.ಅ. 130 25' ಮತ್ತು ಪು.ರೇ. 790 19' ಮೇಲೆ ಇರುವ ಈ ಪಟ್ಟಣ ಆಂಧ್ರಪ್ರದೇಶದ ತಿರುಪತಿಯ ಸಮೀಪದಲ್ಲಿ, ಸ್ವರ್ಣಮುಖಿ ನದಿಯ ಬಲದಂಡೆಯ ಮೇಲೆ ಇದೆ. ಸುತ್ತಣ ಪ್ರದೇಶದಿಂದ ಸು. 180ಮೀ. ಎತ್ತರವಿರುವ ಗ್ರಾನೈಟ್ ಶಿಲೆಯ ಬೆಟ್ಟದ ಮೇಲೆ ಭದ್ರವಾದ ಕೋಟೆಯನ್ನು ಕಟ್ಟಲಾಗಿದೆ. ಈ ಕೋಟೆಯನ್ನು ಇಮ್ಮಡಿ ನರಸಿಂಹ (1491-1505) ಕಟ್ಟಿಸಿದನೆಂದು ಹೇಳಲಾಗಿದೆ. ವಿಜಯನಗರದ ಅರಸರು ಈ ಕೋಟೆಯನ್ನು ಉತ್ತಮಪಡಿಸಿ ಅಲ್ಲಿ ಇನ್ನು ಕೆಲವು ಕಟ್ಟಡಗಳನ್ನು ಹೊಸದಾಗಿ ಕಟ್ಟಿಸಿದರು. ರಾಜಕೀಯ ಖೈದಿಗಳನ್ನು ಬಂಧಿಸಿಡಲು ಈ ಕೋಟೆಯನ್ನು ಮೊದಲಿನಿಂದಲೂ ಬಳಸಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯವನ್ನು ಆಡಳಿತಾನುಕೂಲಕ್ಕಾಗಿ ಅನೇಕ ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿತ್ತು. ಚಂದ್ರಗಿರಿ ಪ್ರಾಂತ್ಯ ಅವುಗಳಲ್ಲೊಂದು. ಚಂದ್ರಗಿರಿ ಪಟ್ಟಣವೇ ಆ ಪ್ರಾಂತ್ಯದ ಅಧಿಕಾರಿಯ ಆಡಳಿತ ಕೇಂದ್ರವಾಗಿತ್ತು. 1565ರ ತಾಳಿಕೋಟೆ ಯುದ್ಧದಲ್ಲಿ ಸೋತ ವಿಜಯನಗರದ ಅರಸ ಚಂದ್ರಗಿರಿಗೆ ಓಡಿಬಂದು ಅಲ್ಲಿ ತನ್ನ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಿಸಿದ. 1586 ರಲ್ಲಿ ವಿಜಯನಗರದ ಸಿಂಹಾಸನವೇರಿದ ಮೊದಲನೆಯ ವೆಂಕಟ ತನ್ನ ಜೀವನದ ಬಹುಭಾಗವನ್ನು ಚಂದ್ರಗಿರಿಯಲ್ಲೇ ಕಳೆಯುತ್ತಿದ್ದ. 1592ರ ಆನಂತರ ಆತ ಚಂದ್ರಗಿರಿಯನ್ನೇ ತನ್ನ ರಾಜಧಾನಿಯಾಗಿ ಮಾಡಿಕೊಂಡನೆಂದು ಫಾದರ್ ಹೆರಾಸನ ಅಭಿಪ್ರಾಯ. ಮೊದಲನೆಯ ವೆಂಕಟ ಚಂದ್ರಗಿರಿ ಸೀಮೆಯನ್ನು ಆಳುತ್ತಿದ್ದನೆಂದು 1603ರ ವೈಕುಂಠ ಶಾಸನ ಮತ್ತು 1605 ರ ಸಿದ್ದೌಟ್ ಶಾಸನಗಳು ತಿಳಿಸುತ್ತವೆ. ಮುಂದೆ 6ನೆಯ ಶ್ರೀರಂಗನ ಕಾಲದವರೆಗೂ (1659) ಚಂದ್ರಗಿರಿ ವಿಜಯನಗರ ದೊರೆಗಳ ಮೆಚ್ಚಿನ ವಾಸಸ್ಥಾನವಾಗಿತ್ತು. ಅಂತೆಯೇ ವಿಜಯನಗರದ ಅರವೀಡು ಮನೆತನದ ದೊರೆಗಳನ್ನು ಚಂದ್ರಗಿರಿ ರಾಜರೆಂದು ಕರೆಯಲಾಗಿದೆ.
1646ರಲ್ಲಿ ಇದು ಗೋಲ್ಕೊಂಡ ಸುಲ್ತಾನನ ವಶವಾಯಿತು. 1758ರಲ್ಲಿ ಕರ್ನಾಟಕದ ನವಾಬನ ಸಹೋದರ ಅಬ್ದುಲ್ ವಹಾಬ್ ಖಾನನ ವಶಕ್ಕೆ ಬಂದ ಇದು 1782ರಲ್ಲಿ ಹೈದರ್ ಅಲಿಯ ಆಡಳಿತಕ್ಕೊಳಪಟ್ಟಿತು. ಮುಂದೆ 1792ರ ಶ್ರೀರಂಗಪಟ್ಟಣದ ಕೌಲಿನ ವರೆಗೂ ಇದು ಹೈದರ್ ಅಲಿಯ ವಶದಲ್ಲೇ ಇತ್ತು. (ಎ.ವಿ.ವಿ.)
ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಹುಟ್ಟಿ ಕಾಸರಗೋಡು ತಾಲ್ಲೂಕಿನಲ್ಲಿ ಹರಿದು ಕಾಸರಗೋಡಿನ ಬಳಿ ಅರಬ್ಬೀ ಸಮುದ್ರವನ್ನು ಸೇರುವ ಪಯಸ್ವಿನಿ ನದಿಗೂ ಚಂದ್ರಗಿರಿ ಎಂಬ ಹೆಸರಿದೆ. ಈ ನದಿಯ ದಂಡೆಯ ಮೇಲೆ ಚಂದ್ರಗಿರಿ ಎಂಬ ಕೋಟೆ ಇದೆ. ಇದನ್ನು ಉತ್ತಮಪಡಿಸಿದವ ವೆಂಕಟಪ್ಪನಾಯಕ, ಕುಂಬಳೆಯ ಅರಸನಾದ ಇಮ್ಮಡಿ ಜಯಸಿಂಹ ಪಾಂಡ್ಯರಾಜನನ್ನು ಸೋಲಿಸಿದ್ದು ಈ ಕೋಟೆಯ ಸಮೀಪದಲ್ಲಿಯೇ. *