ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದ್ರಗುಪ್ತ 2
ಚಂದ್ರಗುಪ್ತ 2
ಆಳ್ವಿಕೆ ಸು. 376-413. ಗುಪ್ತದೊರೆಗಳಲ್ಲೊಬ್ಬ. ಸಮುದ್ರಗುಪ್ತನ ತರುವಾಯ ಸಿಂಹಾಸನವನ್ನೇರಿದನೆಂಬುದು ತತ್ಕಾಲೀನ ಶಾಸನಾಧಾರಗಳಿಂದ ತಿಳಿದುಬರುತ್ತದೆ. ಚಂದ್ರಗುಪ್ತನಿಗೆ ದೇವಗುಪ್ತ, ದೇವರಾಜ, ದೇವಶ್ರೀ ಎಂಬ ಹೆಸರುಗಳೂ ಇದ್ದುವು. ದತ್ತಾದೇವಿಯ ಮಗನಾದ ಈತನಿಗೆ ಧ್ರುವದೇವಿ ಮತ್ತು ಕುಬೇರನಾಗಾ ಎಂಬ ಇಬ್ಬರು ಪತ್ನಿಯರು ಇದ್ದಿದ್ದು ತಿಳಿದಿದೆ. ಸಮುದ್ರಗುಪ್ತನಂತೆ ಈತನೂ ತನ್ನ ತಂದೆಯಿಂದ ಸಿಂಹಾಸನಕ್ಕೆ ಆರಿಸಲ್ಪಟ್ಟನೆಂದೂ ಇವನಿಗೆ ರಾಮಗುಪ್ತನೆಂಬ ಹಿರಿಯ ಸಹೋದರ ಇದ್ದನೆಂದೂ ಆತ ಒಂದೆರಡು ವರ್ಷಗಳಾದರೂ ತನ್ನ ಹಕ್ಕನ್ನು ಸ್ಥಾಪಿಸಿ ರಾಜ್ಯವಾಳಿರಬಹುದೆಂದೂ ಹೇಳಲಾಗಿದೆ. ರಾಮಗುಪ್ತನವನೆಂದು ಹೇಳಲಾದ ಒಂದೆರಡು ಶಾಸನಗಳು ಇತ್ತೀಚಿಗೆ ಲಭ್ಯವಾಗಿವೆ. ವಿಶಾಖದತ್ತನ ದೇವಿಚಂದ್ರಗುಪ್ತವೆಂಬ ನಾಟಕ ಇಮ್ಮಡಿ ಚಂದ್ರಗುಪ್ತನ ಜೀವನಕ್ಕೆ ಸಂಬಂಧಿಸಿದುದೆಂದು ಊಹಿಸಲಾಗಿದೆ. ರಾಮಗುಪ್ತ ಶಕರ ದಾಳಿಯನ್ನು ತಡೆಯಲಾಗದೆ ರಾಜ್ಯವನ್ನೂ ರಾಣಿಯನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಚಂದ್ರಗುಪ್ತ ಯುಕ್ತಿ ಹಾಗೂ ಸಾಮಥ್ರ್ಯಗಳಿಂದ ರಕ್ಷಿಸದನೆಂದೂ, ಆನಂತರ ಅಣ್ಣನ ಹೆಂಡತಿಯನ್ನು ತಾನೇ ಮದುವೆಯಾದನೆಂದೂ ಹೇಳಲಾಗಿದೆ. ಇವು ಎಷ್ಟರಮಟ್ಟಿಗೆ ಸತ್ಯವೆಂದು ಹೇಳಲಾಗದಾದರೂ ರಾಮಗುಪ್ತನ ಕೆಲವು ನಾಣ್ಯಗಳು, ಇತ್ತೀಚೆಗೆ ದೊರೆತ ಶಾಸನಗಳು, ಚಂದ್ರಗುಪ್ತ ಶಕರನ್ನು ಸೋಲಿಸಿ ಶಿಕಾರಿ ಎಂಬ ವಿಶಿಷ್ಟವಾದ ಬಿರುದನ್ನು ಧರಿಸಿದ್ದು-ಇವು ಮೇಲಿನ ಊಹೆಗಳಿಗೆ ಸ್ವಲ್ಪ ಮಟ್ಟಿಗೆ ಪುಷ್ಟಿನೀಡಿವೆ. ತಂದೆಯಂತೆಯೇ ಈತನಿಗೂ ಸಾಮ್ರಾಜ್ಯವನ್ನು ವಿಸ್ತರಿಸಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ಅದನ್ನು ಈಡೇರಿಸಲು ಈತ ತನ್ನ ಪ್ರಬಲವಾದ ಸೈನ್ಯವನ್ನೂ ವಿವಾಹ ಸಂಬಂಧಗಳನ್ನೂ ಸಾಧನಗಳಾಗಿ ಬಳಸಿಕೊಂಡ ಕರ್ನಾಟಕದಲ್ಲಿ ಆಳಿದ ಕದಂಬ ಕಾಕುಸ್ಥವರ್ಮ ತನ್ನ ಮಗಳನ್ನು ಈತನಿಗೆ ಅಥವಾ ಈತನ ಮಗನಿಗೆ ಮದುವೆ ಮಾಡಿಕೊಟ್ಟನೆನ್ನಲು ಶಾಸನಾಧಾರವಿದೆ. ಆರಂಭದಿಂದಲೂ ಗುಪ್ತ ಮನೆತನಕ್ಕೆ ಹಗೆಯಾಗಿದ್ದ ನಾಗ ಮನೆತನದ ರಾಜಕುಮಾರಿ ಕುಬೇರನಾಗಾ ಎಂಬವಳನ್ನು ಈತ ಮದುವೆಯಾಗಿ ಆ ಮನೆತನದೊಂದಿಗೆ ಸ್ನೇಹ ಬೆಳೆಸಿದ. ಕುಬೇರನಾಗಾಳಲ್ಲಿ ಜನಿಸಿದ ಪ್ರಭಾವತಿ ಗುಪ್ತಳನ್ನು ದಕ್ಷಿಣದ ಪ್ರಬಲ ಮನೆತನಗಳಲ್ಲೊಂದಾಗಿದ್ದ ವಾಕಾಟಕ ವಂಶದ ಇಮ್ಮಡಿ ರುದ್ರಸೇನನಿಗೆ ಮದುವೆ ಮಾಡಿಕೊಟ್ಟು ಆ ಮನೆತನದೊಡನೆಯೂ ಸ್ನೇಹ ಬೆಳೆಸಿದ. ಈ ರೀತಿ ಸಾಮ್ರಾಜ್ಯದ ಉತ್ತರ ಹಾಗೂ ದಕ್ಷಿಣದ ಮೇರೆಗಳನ್ನು ನಿರಾತಂಕಗೊಳಿಸಿ ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಆನಂತರ ಶಕರ ಅರಸನಾದ ಮುಮ್ಮಡಿ ರುದ್ರಸಿಂಹನ ವಿರುದ್ಧ ದಂಡೆತ್ತಿಹೋದ. ಅವನನ್ನು ಸೋಲಿಸಿದ್ದೇ ಅಲ್ಲದೇ ಅವನ ರಾಜ್ಯವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಕುಷಾಣರೂ ಇವನಿಗೆ ಸೋತರು. ಮಾಳವ, ಗುಜರಾತ್, ಕಾಠಿಯಾವಾಡ ಪ್ರದೇಶಗಳು ಇವನ ಸ್ವಾಧೀನಕ್ಕೆ ಬಂದುವು. ಶಕ ಅರಸರನ್ನು ಸೋಲಿಸಿದ್ದರ ಸ್ಮರಣಾರ್ಥ ಈತ ಶಕಾರಿ ಹಾಗೂ ಸಾಹಸಾಂಕ ಎಂಬ ಬಿರುದುಗಳನ್ನು ಧರಿಸಿದ ದೆಹಲಿಯ ಬಳಿ ಮೆಹರೂಲಿ ಎಂಬಲ್ಲಿಯ ಕಬ್ಬಿಣದ ಸ್ತಂಭ ಶಾಸನದಲ್ಲಿ ಉಕ್ತನಾದ ಚಂದ್ರ ಈತನೇ ಎಂಬುದನ್ನೂ ಅದರಲ್ಲಿ ಹೇಳಿರುವಂತೆ ವಾಲ್ಹಿಕಾ (ಬ್ಯಾಕ್ಟ್ರಿಯಾ) ಮತ್ತು ವಂಗ (ಪೂರ್ವಬಂಗಾಲ) ಪ್ರದೇಶಗಳನ್ನು ಈತ ವಶಪಡಿಸಿಕೊಂಡನೆಂಬುದನ್ನೂ ಈಗ ಒಪ್ಪಲಾಗಿದೆ.
ಸಮುದ್ರಗುಪ್ತ ಹಾಕಿದ ಅಡಿಪಾಯದ ಮೇಲೆ ಭವ್ಯವಾದ ಗುಪ್ತ ಸಾಮ್ರಾಜ್ಯವೆಂಬ ಕಟ್ಟಡವನ್ನು ಕಟ್ಟಿದ ಕೀರ್ತಿ ಈತನದು. ಪಾಟಲೀಪುತ್ರ ಇವನ ರಾಜಧಾನಿಯಾಗಿ ಮುಂದುವರಿದರೂ ಉಜ್ಜಯಿನಿಯೂ ಅಷ್ಟೇ ಪ್ರಾಮುಖ್ಯವನ್ನು ಪಡೆಯಿತು. ವಿಕ್ರಮಾದಿತ್ಯನೆಂಬ ಬಿರುದಾಂಕಿತನಾದ ಈತನೇ ಪೌರಾಣಿಕ ಖ್ಯಾತಿ ಪಡೆದ ಉಜ್ಜಯಿನಿಯ ಅರಸನಾದ ವಿಕ್ರಮಾದಿತ್ಯನೆಂದು ಹೇಳಲಾಗಿದೆ. ಅಯೋಧ್ಯೆ ಇವನ ಇನ್ನೊಂದು ನೆಲವೀಡಾಗಿತ್ತು.
ಈತನ ದೀರ್ಘಕಾಲದ ಆಳ್ವಿಕೆಯಲ್ಲಿ ಶಾಂತಿ, ಸಮೃದ್ಧಿಗಳು ನೆಲೆಸಿದವು. ನವರತ್ನಗಳೆನಿಸಿದ ಕವಿಗಳು, ಪಂಡಿತರು ಈತನ ಆಸ್ಥಾನವನ್ನು ಬೆಳಗಿದರೆಂದು ಹೇಳಿದೆ. ಕಾಳಿದಾಸ, ಶೂದ್ರಕ, ಭಾಸ, ಭವಭೂತಿ, ವಿಶಾಖದತ್ತ, ದಂಡಿ, ಸುಬಂಧು, ವರಾಹಮಿಹಿರ, ಆರ್ಯಭಟ, ದಿಜ್ನಾಗ, ಅಮರ ಮುಂತಾದ ಕವಿಗಳು, ನಾಟಕಕಾರರು, ಲೇಖಕರು, ಗಣಿತಜ್ಞರು ಖಗೋಳಶಾಸ್ತ್ರಜ್ಞರು, ತತ್ತ್ವಜ್ಞಾನಿಗಳು, ವೈಯಾಕರಣರು ಇವನ ಕಾಲದಲ್ಲಿದ್ದವರೆನ್ನಲಾಗಿದೆ. ಚಿತ್ರಕಲೆ, ಮೂರ್ತಿಶಿಲ್ಪ , ವಾಸ್ತುಶಿಲ್ಪ ಹಾಗೂ ಸಂಗೀತ ಕಲೆಗಳೂ ಅಭಿವೃದ್ಧಿ ಹೊಂದಿದವು. ಈತ ಹೊರಡಿಸಿದ ಸುವರ್ಣ ನಾಣ್ಯಗಳು ಇವನ ಕಾಲದ ಸುಖಸಮೃದ್ಧಿಗೆ ನಿರ್ದಶನಗಳಾಗಿವೆ. ಸುಮಾರು 7 ಭಿನ್ನಮಾದರಿಗಳ ನಾಣ್ಯಗಳನ್ನು ಈತ ಅಚ್ಚು ಹಾಕಿಸಿದ. ಧ್ವಜ, ಬಿಲ್ಲುಗಾರ, ಸಿಂಹಸಂಹಾರಿ ಮುಂತಾದ ಚಿತ್ರಗಳು ಅವುಗಳ ಮೇಲಿದ್ದವು. ಸಿಂಹಸಂಹಾರಿ ನಾಣ್ಯದ ಮೇಲೆ ವಂಶಸ್ಥ ವೃತ್ತದಲ್ಲಿ "ನರೇಂದ್ರಚಂದ್ರಃ ಪ್ರಥಿತರಣೋರಣೇ ಜಯತ್ಯಜೇಯೋ ಭುವಿ ಸಿಂಹವಿಕ್ರಮಃ" ಎಂಬ ಆಲೇಖ ಇದೆ. ಈತ ಬೆಳ್ಳಿಯ ಹಾಗೂ ತಾಮ್ರದ ನಾಣ್ಯಗಳನ್ನೂ ಚಲಾವಣೆಗೆ ತಂದ. 2ನೆಯ ಚಂದ್ರಗುಪ್ತನ ಕಾಲದಲ್ಲಿ ಗುಪ್ತಕಾಲದ ಸುವರ್ಣಯುಗ ತನ್ನ ಪರಾಕಾಷ್ಠೆಯನ್ನು ಮುಟ್ಟಿತ್ತು. ಚೀನ ದೇಶದ ಬೌದ್ಧ ಪ್ರವಾಸಿ ಫಾಹಿಯಾನ್ ಭಾರತಕ್ಕೆ ಭೇಟಿ ಕೊಟ್ಟಿದ್ದು ಈತನ ಕಾಲದಲ್ಲೇ. ಪಾಟಲೀಪುತ್ರದ ಅರಮನೆಗಳನ್ನೂ ದಾನಶಾಲೆ ಹಾಗೂ ಆಸ್ಪತ್ರೆಗಳನ್ನೂ ಆತ ಮನಮುಟ್ಟುವಂತೆ ಹೊಗಳಿದ್ದಾನೆ. (ಜಿ.ಬಿ.ಆರ್.; ಕೆ.ಆರ್.ಬಿ.)