ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದ್ರಶೇಖರ್, ಎಂ ಎಸ್

ವಿಕಿಸೋರ್ಸ್ದಿಂದ

ಚಂದ್ರಶೇಖರ್, ಎಂ ಎಸ್ - (ಕ್ರಿ.ಶ.1924). ಮೈಸೂರು ಸುಬ್ರಹ್ಮಣ್ಯ ಶಾಸ್ತ್ರಿ ಚಂದ್ರಶೇಖರ್ ಅವರು ಮೈಸೂರಿನಲ್ಲಿ 16.4.1924ರಂದು ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದರು. ಇವರ ಅಜ್ಜಂದಿರ ಹಿರೀಕರೊಬ್ಬರು ಚಿತ್ರಿತ ಹಸ್ತ ಪ್ರತಿಗಳನ್ನು ರಚಿಸುತ್ತಿದ್ದರೆಂದು ತಿಳಿದು ಬರುತ್ತದೆಯಾದರೂ ಅವು ಯಾವುದೂ ಉಳಿದು ಬಂದಿಲ್ಲ. ಎಳವೆಯಲ್ಲಿ ಕೆಲಕಾಲ ನಂಜನಗೂಡಿನಲ್ಲಿ ವಾಸ್ತವ್ಯವಿದ್ದ ಚಂದ್ರಶೇಖರ್ ಅವರಿಗೆ ಅಲ್ಲಿಯ ಪ್ರಕೃತಿ, ಗ್ರಾಮೀಣ ಪರಿಸರಗಳು ಸ್ಫೂರ್ತಿ ನೀಡಿ ಚಿತ್ರ ರಚಿಸಲು ಪ್ರೇರೇಪಿಸುವಂತಾಯಿತು. ಪ್ರೌಢಶಾಲಾ ವಿದ್ಯಾಭ್ಯಾಸದ ನಂತರ ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಶಾಲೆಗೆ ಸೇರಿ ಪಾವಂಜೆ, ಸ್ವಾಮಿ, ಟಂಕಸಾಲೆ, ಸುಬ್ರಹ್ಮಣ್ಯರಾಜು ಮುಂತಾದವರಲ್ಲಿ ಕಲಾಭ್ಯಾಸಮಾಡಿ ಡಿಪ್ಲೊಮಾ ಪದವಿ ಪಡೆದರು (ಕ್ರಿ.ಶ.1942). ನಂತರ ಚನ್ನಪಟ್ಟಣದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಲಾವಿದ ರಾಗಿದ್ದರು. ಅಂದಿನ ಕೈಗಾರಿಕಾ ಮಂತ್ರಿ ಹಾಗೂ ಕಲಾಪ್ರೇಮಿ ಎಂ.ಎ.ಶ್ರೀನಿವಾಸನ್ ಅವರು ಕಲಾಪೋಷಕರಿಗೆ ಕಲಾಕೃತಿಗಳನ್ನು ಕೊಳ್ಳಲು ಚಂದ್ರಶೇಖರ್ ಅವರ ಹೆಸರನ್ನೂ ಶಿಫಾರಸ್ಸು ಮಾಡಿದ್ದಲ್ಲದೆ, ಕೋಲಾರದ ಚಿನ್ನದ ಗಣಿ ಹಾಗೂ ಮತ್ತಿತರ ಕಡೆಗಳಲ್ಲಿದ್ದ ಕಲಾಕೃತಿ ಗ್ರಾಹಕರಿಗೆ ಚಂದ್ರಶೇಖರ್ ಅವರು ಹಾಗೂ ಅವರ ಕೃತಿಗಳ ಪರಿಚಯ ಮಾಡಿಸಿ ಕೃತಿಗಳನ್ನೂ ಕೊಂಡು ಪ್ರೋತ್ಸಾಹಿಸುವಂತೆ ಮಾಡಿದರು. ಆ ವೇಳೆಗೆ ಚಂದ್ರಶೇಖರ್ ಅವರು ದೇಶೀಯ ಹಾಗೂ ಪಾಶ್ಚಾತ್ಯ ನಿಸರ್ಗ ಚಿತ್ರ ಕಲಾವಿದರ ಹಾಗೂ ಕಲಾಕೃತಿಗಳಿಂದ ಪ್ರೇರಣೆ ಪಡೆದು `ಭೂದೃಶ್ಯ (ಲ್ಯಾಂಡ್‍ಸ್ಕೇಪ್) ರಚನೆಯನ್ನೇ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದರು. ಅಂದಿಗೆ ಬೆಂಗಳೂರು ಪ್ರದೇಶ ದಲ್ಲಿದ್ದ ಐರೋಪ್ಯ ಅಧಿಕಾರಿಗಳು ಇನ್ನಿತರ ದೇಶೀಯ (ಸ್ಥಳೀಯ) ಭೂದೃಶ್ಯ ಕಲಾವಿದರಿಗೆ ನೀಡುವುದಕ್ಕಿಂತ ಹೆಚ್ಚಿನ ಸಂಭಾವನೆ, ಗೌರವಾದರಗಳನ್ನು ನೀಡಿ ಚಂದ್ರಶೇಖರ್ ಅವರ ಕೃತಿಗಳನ್ನು ಸಂಗ್ರಹಿಸಿದರು. ಇದರೊಂದಿಗೆ ರಾಷ್ಟ್ರದ ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದ ಕಲಾ ಪ್ರದರ್ಶನ, ಸ್ಪರ್ಧೆಗಳಿಗೆ ಕೃತಿಗಳನ್ನು ಕಳಿಸುತ್ತಿದ್ದು ಪಾರಿತೋಷಕ ದೊರೆತುದಲ್ಲದೆ ಕೃತಿಗಳ ಮಾರಾಟವೂ ಆಗುತ್ತಿತ್ತು. ಇದರಿಂದಾಗಿ ಚಂದ್ರಶೇಖರ ಅವರ ಹೆಸರು ಪ್ರಸಿದ್ಧವಾಗಿ ಕೇಂದ್ರ ಪ್ರಾಚ್ಯವಸ್ತು ಇಲಾಖೆಯಲ್ಲಿ ಕಲಾವಿದರಾಗಿ ಸೇರಲು ನೆರವಾಯಿತು.

ಕ್ರಿ.ಶ.1953ರಲ್ಲಿ ಕೇಂದ್ರ ಸೇವೆಗೆ (ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ) ಅಜಂತೆಯ ಕಲಾಕೃತಿಗಳನ್ನು ಪ್ರತಿಮಾಡುವ ಕಾರ್ಯಕ್ಕೆ ನೇಮಕವಾಗಿದ್ದು 1982ರಲ್ಲಿ ನಿವೃತ್ತರಾಗುವವರೆಗೆ ಅಜಂತೆಯ ಹಲವಾರು ಕೃತಿಗಳನ್ನು ಪ್ರತಿಕೃತಿ ಮಾಡಿ ಇಲಾಖೆಗೆ ನೀಡಿದ್ದಲ್ಲದೆ ಖಾಸಗಿಯವರಿಗೂ ಮರುಪ್ರತಿ ಚಿತ್ರಿಸಿ ನೀಡುವಂತಾಯಿತು. ಅದೇ ವೇಳೆಯಲ್ಲಿ ಬಾದಾಮಿಯ ಗುಹಾದೇವಾಲಯದ ಕೆಲವು ಚಿತ್ರಗಳನ್ನು ಪ್ರತಿಮಾಡಿದರು. ಇವಲ್ಲದೆ ಬೆಂಗಳೂರಿನ ವಿಧಾನಸೌಧದಲ್ಲಿ ಪ್ರದರ್ಶಿಸಲು ತೈಲವರ್ಣ ಭಾವಚಿತ್ರಗಳನ್ನೂ ದೆಹಲಿಯ ಪಾರ್ಲಿಮೆಂಟ್ ಭವನದಲ್ಲಿ ಪ್ರದರ್ಶಿಸಲು ವಿಜಯನಗರದ ಕೃಷ್ಣದೇವರಾಯನ ಚಿತ್ರವನ್ನೂ ರಚಿಸಿದ್ದಾರೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಶತಮಾನೋತ್ಸವ ಸಮಾರಂಭ, ಬೆಂಗಳೂರಿನ ತಾತಾ ವಿಜ್ಞಾನಮಂದಿರದ ವಜ್ರಮಹೋತ್ಸವ ಸಮಾರಂಭ, ಉದಕಮಂಡಲದ ಸಂಶೋಧನಾಲಯಗಳಲ್ಲಿ ಹಲವಾರು ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ದೆಹಲಿಯ ಅಖಿಲಭಾರತ ಕಲೆ ಹಾಗೂ ಕರಕುಶಲ ಕಲಾಸಂಸ್ಥೆಯ ವತಿಯಿಂದ ದೇಶ ಹೊರದೇಶಗಳಲ್ಲಿ ನಡೆದ ಗುಂಪು ಪ್ರದರ್ಶನ, ಕೇಂದ್ರ ವಿದ್ಯಾಇಲಾಖೆಯವರು ಏರ್ಪಡಿಸಿದ್ದ ಕಲ್ಕತ್ತಾ ಹಾಗು ಅಮೆರಿಕೆ ಯಲ್ಲಿ ನಡೆದ ಗುಂಪು ಪ್ರದರ್ಶನ ಕೇಂದ್ರ ಲಲಿತ ಕಲಾ ಅಕಾಡೆಮಿಯ ಪ್ರದರ್ಶನಗಳಲ್ಲಿ ಪಾಲುಗೊಂಡಿದ್ದಾರೆ. ಬೆಂಗಳೂರಿನ ಚಿತ್ರಕಲಾ ಪರಿಷತ್‍ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಚಂದ್ರಶೇಖರ್ ಅವರು ಅಲ್ಲಿಯೂ ಸೇರಿದಂತೆ ವೆಂಕಟಪ್ಪ ಕಲಾ ಶಾಲೆ ಇತ್ಯಾದಿಗಳಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ. ಟಿ ಪಿ ಇಸ್ಸಾರ್ ಅವರ `ಬ್ಲಾಸಮ್ ಸಿಟಿ ಸೇರಿದಂತೆ ಅನೇಕ ಗ್ರಂಥಗಳಲ್ಲಿ ಶ್ರೀಯುತರ ಚಿತ್ರಗಳು ಸೇರ್ಪಡೆಯಾಗಿವೆ. ಚಂದ್ರಶೇಖರ್ ಅವರಿಗೆ ಕ್ರಿ.ಶ. 1992ರಲ್ಲಿ ರಾಜ್ಯ ಲಲಿತಕಲಾ ಅಕಾಡೆಮಿಯಿಂದ ದಾವಣಗೆರೆಯ ಶಂಕರ ಪಾಟೀಲ್ ಸ್ಮರಣಾರ್ಥ ಗೌರವ ಪ್ರಶಸ್ತಿ ಇತ್ಯಾದಿಗಳು ಬಂದಿವೆ. ಕ್ರಿ.ಶ.2000 ಸಾಲಿನ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ. (ಎ.ಎಲ್.ನರಸಿಂಹನ್)