ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದ್ರಶೇಖರ್, ಸುಬ್ರಹ್ಮಣ್ಯನ್

ವಿಕಿಸೋರ್ಸ್ದಿಂದ

ಚಂದ್ರಶೇಖರ್, ಸುಬ್ರಹ್ಮಣ್ಯನ್ - 1910 - 1995. ಭಾರತ ಸಂಜಾತ ಅಮೇರಿಕ ಖಭೌತವಿಜ್ಞಾನಿ. ನೊಬಲ್ ಪ್ರಶಸ್ತಿ ವಿಜೇತ. 1910ರ ಅಕ್ಟೋಬರ್ 10ರಂದು ಲಾಹೋರಿನಲ್ಲಿ ಜನನ. ತಂದೆ ಚಂದ್ರಶೇಖರ ಸುಬ್ರಮಣ್ಯನ್ ಅಯ್ಯರ್. ತಾಯಿ ಸೀತಾಲಕ್ಷ್ಮಿ. ಚಂದ್ರಶೇಖರ್ ಇಬ್ಬರು ಅಕ್ಕಂದಿರು, ಮೂವರು ತಮ್ಮಂದಿರು ಮತ್ತು ನಾಲ್ವರು ತಂಗಿಯರ ತುಂಬು ಮನೆಯಲ್ಲಿ ಬೆಳೆದರು. ತಂದೆ ತಾಯಿಯರೇ ಇವರ ಮೊದಲ ಗುರುಗಳು. ಇವರು ಹುಟ್ಟುವ ವೇಳೆಗಾಗಲೇ ಇವರ ಚಿಕ್ಕಪ್ಪ ಸಿ.ವಿ. ರಾಮನ್ ವಿಜ್ಞಾನ ಕ್ಷೇತ್ರದಲ್ಲಿ ತಾರೆಯಾಗಿದ್ದರು. ಬಾಲ್ಯದಿಂದಲೇ ಇವರದು ವಿಜ್ಞಾನದತ್ತ ಒಲವು, ಎಲ್ಲ ತರಗತಿಗಳಲ್ಲಿಯೂ ಮೊದಲಿಗರಾಗಿಯೇ ಉತ್ತೀರ್ಣರಾದರು. ಇವರ ಮೊದಲನೆಯ ಸಂಶೋಧನ ಲೇಖನವಾದ `ಕಾಂಪ್ಟನ್ ಸ್ಕ್ಯಾಟರಿಂಗ್ ಅಂಡ್ ದಿ ನ್ಯೂ ಸ್ಟ್ಯಾಟಿ ಸ್ಟಿಕ್ಸ್ ಪ್ರಕಟವಾದಾಗ (ಪ್ರೋಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ, 1928) ಇವರಿಗಿನ್ನೂ 18 ವರ್ಷ ವಯಸ್ಸು. ಆಗತಾನೇ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎಸ್.ಸಿ.ಯ ಮೆಟ್ಟಿಲನ್ನು ಹತ್ತಿದ್ದರು. 1930 ರಲ್ಲಿ ತಮ್ಮ ಆನರ್ಸ್ ಪದವಿಯನ್ನು ಪಡೆದರು. ಅದರಲ್ಲಿ ಇವರು ಅತಿ ಹೆಚ್ಚು ಅಂಕಗಳ ದಾಖಲೆಯನ್ನು ಸ್ಥಾಪಿಸಿದ್ದು ಅನಿರೀಕ್ಷಿತವಾಗಿರಲಿಲ್ಲ. ತರುವಾಯ ಮದ್ರಾಸ್ ಸರ್ಕಾರದ ವಿದ್ಯಾರ್ಥಿವೇತನದ ಸಹಾಯದಿಂದ ಕೇಂಬ್ರಿಜಿನ ಟ್ರಿನಿಟಿ ಕಾಲೇಜಿಗೆ ಉನ್ನತ ವ್ಯಾಸಂಗಕ್ಕಾಗಿ ತೆರಳಿದರು. ಅಲ್ಲಿ ಆರ್. ಎಚ್. ಫೌಲರ್ ಹಾಗೂ ಪಿ.ಎ.ಎಂ.ಡಿರಾಕರ ನೇತೃತ್ವದಲ್ಲಿ ಸಂಶೋಧನೆ ನಡೆಸಿ 1933ರಲ್ಲಿ ಸೈದ್ಧಾಂತಿಕ ಭೌತವಿಜ್ಞಾನದಲ್ಲಿ ಪಿ.ಎಚ್.ಡಿ.ಯನ್ನು ಗಳಿಸಿದರು. ಮುಂದಕ್ಕೆ ಸುಮಾರು ನಾಲ್ಕು ವರ್ಷಗಳ ಕಾಲ ಇವರು ಟ್ರಿನಿಟಿ ಕಾಲೇಜಿನ ಫೆಲೋ ಆಗಿದ್ದರು. ಕೇಂಬ್ರಿಜಿನ ವಿದ್ಯಾರ್ಥಿ ಜೀವನದಲ್ಲಿ ಇವರಿಗೆ ದೊರಕಿದ ಇತರ ಸನ್ಮಾನಗಳಲ್ಲಿ ಐಸಾಕ್ ನ್ಯೂಟನ್ ವಿದ್ಯಾರ್ಥಿವೇತನ ಹಾಗೂ ಷೀಪ್ ಷಾಂಕ್ಸ್ ಬಹುಮಾನ ಮುಖ್ಯವಾದವು.

ಚಂದ್ರಶೇಖರರ ಸಂಶೋಧಕ-ವಿದ್ಯಾರ್ಥಿ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಅವರ ಪಾಂಡಿತ್ಯ ಹಾಗೂ ಆತ್ಮವಿಶ್ವಾಸಗಳಿಗೆ ಸಾಕ್ಷಿಯಾಗಿ ಇಲ್ಲಿ ಉದಾಹರಿಸಬಹುದು. ಆ್ಯಸ್ಟ್ರೋಫಿಸಿಕಲ್ ಜರ್ನಲ್ ಎಂಬ ಪ್ರಸಿದ್ಧ ಖಗೋಳವಿಜ್ಞಾನ ಪತ್ರಿಕೆಗೆ ಇವರೊಂದು ಲೇಖನವನ್ನು ಮುದ್ರಣಕ್ಕಾಗಿ ಕಳಿಸಿದರು. ಹಿರಿಯ ವಿಜ್ಞಾನಿಗಳೊಬ್ಬರು ಅದನ್ನು ಪರಾಮರ್ಶಿಸಿ ಮುದ್ರಣಕ್ಕೆ ಯೋಗ್ಯವಲ್ಲ ಎಂದು ನಿರಾಕರಿಸಿದರು. ಆಗ ಚಂದ್ರಶೇಖರರು ಪತ್ರಿಕೆಯ ಸಂಪಾದಕರಿಗೆ ಒಂದು ಪತ್ರ ಬರೆದರು. ಲೇಖನವನ್ನು ಸ್ವೀಕರಿಸಲು ಇಲ್ಲವೇ ನಿರಾಕರಿಸಲು ಸಂಪಾದಕರಿಗೆ ಇರುವ ಹಕ್ಕನ್ನು ಮೊದಲು ಒಪ್ಪಿಕೊಂಡು ವಿಮರ್ಶಕರ ಆಕ್ಷೇಪ ತಪ್ಪು ಎಂದು ಸಕಾರಣವಾಗಿ ಅದರಲ್ಲಿ ವಿವರಿಸಿದ್ದರು; ಆದ್ದರಿಂದ ತಾನು ಲೇಖನದಲ್ಲಿ ಮಂಡಿಸಿದ ವಾದ ಸರಿಯೆಂದು ಸಾಧಿಸಿದರು ಕೂಡ. ಲೇಖನ ಪ್ರಕಟವಾಯಿತೆಂದು ಬೇರೆ ಹೇಳಬೇಕಿಲ್ಲ. (ಮುಂದೆ ಇದೇ ಪತ್ರಿಕೆಯ ಸಂಪಾದಕತ್ವವನ್ನು ಚಂದ್ರಶೇಖರರು ಸುಮಾರು ಎರಡು ದಶಕಗಳ ಕಾಲ ವಹಿಸಿಕೊಂಡಿದ್ದರು (1952-67).

ಕೇಂಬ್ರಿಜಿನಿಂದ ಚಂದ್ರಶೇಖರರು ತಮ್ಮ ನವವಿವಾಹಿತ ಪತ್ನಿ ಲಲಿತ ಚಂದ್ರಶೇಖರೊಡನೆ 1936ರಲ್ಲಿ ಅಮೆರಿಕಕ್ಕೆ ಬಂದರು. ಹಾರ್ವರ್ಡಿನಲ್ಲಿ ಅಲ್ಪಕಾಲದ ವಾಸದ ತರುವಾಯ ಷಿಕಾಗೋ ವಿಶ್ವವಿದ್ಯಾಲಯದ ಯಕ್ರ್ಸ್ ವೇಧಶಾಲೆಗೆ 1937ರಲ್ಲಿ ಬಂದು ಸುಪ್ರಸಿದ್ಧ ಖಗೋಳವಿಜ್ಞಾನಿ ಸ್ಟ್ರುವೆ ಅವರ ನೇತೃತ್ವದಲ್ಲಿ ತಮ್ಮ ಸಂಶೋಧನೆಯನ್ನು ಮುಂದುವರಿಸಿದರು. 1953ರಲ್ಲಿ ಅಮೆರಿಕದ ಪೌರತ್ವವನ್ನು ಪಡೆದು ಆ ದೇಶದಲ್ಲೇ ನೆಲೆಸಿದರು.

ಚಂದ್ರಶೇಖರರ ಅಪೂರ್ವ ವಿಶ್ಲೇಷಣ ಸಾಮಥ್ರ್ಯದ ಹಾಗೂ ಖಗೋಳ ವಿಜ್ಞಾನವೇ ಅಲ್ಲದೆ ಸಮಗ್ರ ಭೌತವಿಜ್ಞಾನಕ್ಕೆ ಸಂಬಂಧಿಸಿದಂತೆ ಅಮೋಘ ಗಣಿತ ಗ್ರಹಣ ಸಾಮಥ್ರ್ಯದ ಪರಿಚಯ ಹಿರಿಯ ವಿಜ್ಞಾನಿಗಳಿಗಾಗಲು ಬಹಳ ಕಾಲ ಬೇಕಾಗಲಿಲ್ಲ. ತಮ್ಮ ಸರಳ ಹಾಗೂ ಕ್ರಮಬದ್ಧ ಜೀವನ ಮತ್ತು ಅಸಾಧಾರಣ ಪಾಂಡಿತ್ಯದಿಂದ ಸುತ್ತಲಿನ ವಿಜ್ಞಾನಿಗಳಿಗಾಗಲು ಬೆರಗುಗೊಳಿಸುವ ವ್ಯಕ್ತಿತ್ವ ಇವರದು. ಮಾತನಾಡಬೇಕಾದರೂ ಅಷ್ಟೆ. ಹೇಳಬೇಕಾದ್ದನ್ನು ದೃಢವಿಶ್ವಾಸದಿಂದ ನಿಖರವಾಗಿ, ಸ್ಪಷ್ಟವಾಗಿ ಹೇಳುವ ಸ್ವಭಾವ. ಪ್ರಪಂಚದ ಅನೇಕ ಕಡೆಗಳಲ್ಲಿ ಸುತ್ತಿ ಭೌತವಿಜ್ಞಾನ ಹಾಗೂ ಖಭೌತವಿಜ್ಞಾನಕ್ಕೆ ಸಂಬಂಧಿಸಿದಂತೆ ಉಪನ್ಯಾಸಗಳನ್ನು ಇವರು ನೀಡಿದ್ದಾರೆ. ಕಾಂತಕ್ಷೇತ್ರಗಳಲ್ಲಿ ದ್ರವಾನಿಲಗಳ ನಾನಾ ಬಗೆಯ ಗತಿವಿನ್ಯಾಸ, ಪ್ರಕ್ಷೋಭೆ ಮತ್ತು ಸ್ಥಿರತೆಯ (ಸ್ಟೆಬಿಲಿಟಿ) ಬಗ್ಗೆ ನೀಡಿದ ಡಾರ್ವಿನ್ ಉಪನ್ಯಾಸಗಳು ಮತ್ತು ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ಲಾಸ್ಮಾ ಭೌತವಿಜ್ಞಾನದ ಮೇಲೆ ನೀಡಿದ ಉಪನ್ಯಾಸಮಾಲಿಕೆ ಇವುಗಳ ಪೈಕಿ ಬಹಳ ಪ್ರಸಿದ್ಧವಾದವು. ಎರಡೂ ಕ್ಷೇತ್ರಗಳಲ್ಲಿ ಅವರ ಮೂಲಭೂತ ಕೊಡುಗೆಗಳು ಅನೇಕ ಉಂಟು.

ಚಂದ್ರಶೇಖರರ ಕ್ಷೇತ್ರ ಇಂಥದ್ದೇ ಎಂದು ಕರಾರುವಾಕ್ಕಾಗಿ ಹೇಳುವುದು ಬಹಳ ಕಷ್ಟ. ಅವರ ಸಂಶೋಧನೆಗಳ ಬಹುಪಾಲು ನಕ್ಷತ್ರಗಳನ್ನೂ ಎಲೆಕ್ಟ್ರಾನುಗಳನ್ನೂ ಕುರಿತವು; ಭೌತ, ಖಭೌತ ಹಾಗೂ ಗಣಿತ ವಿಜ್ಞಾನಗಳಲ್ಲಿ ಅವರ ಪಾಂಡಿತ್ಯ ಉನ್ನತಮಟ್ಟದ್ದು. ಸ್ವತಃ ಸ್ಟ್ರುವೆಯವರೇ ಒಮ್ಮೆ ಉದ್ಗರಿಸಿದರು ಚಂದ್ರಶೇಖರ್ ಒಬ್ಬ ಖಗೋಳವಿಜ್ಞಾನಿಯೋ ಭೌತವಿಜ್ಞಾನಿಯೋ ಅಥವಾ ಗಣಿತವಿಜ್ಞಾನಿಯೋ ಖಚಿತವಾಗಿ ನಿರ್ಧರಿಸುವಂತಿಲ್ಲ. ಚಂದ್ರಶೇಖರ್ ಅವರು ತಮ್ಮನ್ನು ಒಬ್ಬ ಖಗೋಳವಿಜ್ಞಾನಿಯೆಂದು ಹೇಳಿಕೊಂಡಿದ್ದಾರೆ.

ಷಿಕಾಗೋದಲ್ಲಿ ಚಂದ್ರಶೇಖರರ ಒಲವು ಮೊದಲು ಹತ್ತು ವರ್ಷಗಳಲ್ಲಿ ನಕ್ಷತ್ರ ರಚನೆ ಹಾಗೂ ಅವುಗಳ ಗತಿವಿಜ್ಞಾನದ ಕಡೆಗೆ ಒಲಿದಿತ್ತು. ನಕ್ಷತ್ರ ರಚನೆಗೆ ಸಂಬಂಧಿಸಿದಂತೆ ಅವರು ಅನೇಕ ಹೊಸ ಸಿದ್ಧಾಂತಗಳನ್ನು ತೋರಿಸಿಕೊಟ್ಟರು. ನಕ್ಷತ್ರಗಳ ದ್ರವ್ಯರಾಶಿ ಹಾಗೂ ಕಾಂತಿಗಳ (ಮಾಸ್ ಅಂಡ್ ಲ್ಯೂಮಿನಾಸಿಟಿ) ಸಂಬಂಧವನ್ನು ಕುರಿತ ಅವರ ಕೊಡುಗೆ ಗಣನೀಯವಾದದ್ದು. ಶ್ವೇತಕುಬ್ಜ ನಕ್ಷತ್ರಗಳನ್ನು ಕುರಿತು ಗಮನಾರ್ಹ ಸಂಶೋಧನೆ ನಡೆಸಿದ್ದಾರೆ. ನಕ್ಷತ್ರವಿಕಾಸದ ಅಂತಿಮ ಹಂತ ಶ್ವೇತಕುಬ್ಜ. ಒಂದು ನಕ್ಷತ್ರದಲ್ಲಿರುವ ಹೈಡ್ರೋಜನ್ ಮತ್ತು ಹೀಲಿಯಮ್ ನ್ಯೂಕ್ಲಿಯರ್ ಪ್ರಕ್ರಿಯೆಗಳಿಂದ ತೀರಿಹೋದಂತೆ (ಅಂದರೆ ಭಾರ ಅಣುಗಳಾಗಿ ಮಾರ್ಪಾಡಾದಂತೆ) ನಕ್ಷತ್ರ ತಣ್ಣಗಾಗುತ್ತ ಕುಗ್ಗುತ್ತ ಸಾಗುತ್ತದೆ. ಅದರೊಳಗಿನ ಒತ್ತಡ ಈ ಕುಗ್ಗುವಿಕೆಯನ್ನು ವಿರೋಧಿಸಲು ಶಕ್ಯವಾಗುವ ದೇಹಲಿ ಸ್ಥಿತಿಗೆ ನಕ್ಷತ್ರ ಬಂದಾಗ ಆ ನಕ್ಷತ್ರಕ್ಕೆ ಶ್ವೇತಕುಬ್ಜವೆಂದು ಹೆಸರು. ಹೀಗಾಗಬೇಕಾದರೆ ಒಂದು ನಕ್ಷತ್ರದ ದ್ರವ್ಯರಾಶಿ ಸೂರ್ಯ ದ್ರವ್ಯರಾಶಿಯ 1.44 ಕ್ಕಿಂತ ಕಡಿಮೆ ಆಗಿರಬೇಕೆಂದು ಚಂದ್ರಶೇಖರ್ ತೋರಿಸಿಕೊಟ್ಟಿದ್ದಾರೆ. ಇಲ್ಲವಾದಲ್ಲಿ, ಒಂದು ಭಯಂಕರ ಆಸ್ಫೋಟದಿಂದಲೋ ಇಲ್ಲವೇ ನಿರಂತರವಾಗಿ ಕುಗ್ಗಿ ಕುಸಿಯುವುದರಿಂದಲೋ ಇಲ್ಲವೇ ಈ ಎರಡೂ ಬಗೆಯಿಂದಲೋ ನಕ್ಷತ್ರ ತನ್ನ ಅವಸಾನವನ್ನು ಕಾಣಬೇಕಾಗುತ್ತದೆ. ಶ್ವೇತಕುಬ್ಜಗಳ ದ್ರವ್ಯರಾಶಿಗೆ ಇರುವ ಈ ಪರಿಮಿತಿಗೆ (1.44 ಸೂರ್ಯ ದ್ರವ್ಯರಾಶಿಯಷ್ಟು) ಚಂದ್ರಶೇಖರ್ ಪರಿಮಿತಿ ಎಂದು ಹೆಸರು. ಇದನ್ನೂ ನಕ್ಷತ್ರಗಳ ಗತಿ ವಿಜ್ಞಾನದಲ್ಲಿ ಅವರು ಆವಿಷ್ಕರಿಸಿದ ಅನೇಕ ಸಿದ್ಧಾಂತಗಳನ್ನೂ ಗಮನಿಸಿದ ಷಿಕಾಗೋ ವಿಶ್ವವಿದ್ಯಾಲಯ 1942ರಲ್ಲಿ ಚಂದ್ರಶೇಖರರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು.

ನಕ್ಷತ್ರಗಳ ಒಳರಚನೆ, ವಾಯುಮಂಡಲ ಹಾಗೂ ಅವುಗಳ ವಿಕಾಸದ ಬಗ್ಗೆ ಮತ್ತು ನಕ್ಷತಮಂಡಲಗಳಲ್ಲಿ ಗುರುತ್ವಾಕರ್ಷಣೆಯಿಂದಾಗಿ ನಡೆಯುವ ಅನೇಕ ಕ್ರಿಯೆಗಳನ್ನು ಅರಿಯುವಲ್ಲಿ ಚಂದ್ರಶೇಖರರ ಕಾರ್ಯ ಬೆಳಕನ್ನು ಬೀರಿದೆ. ಭೌತ ವಿಜ್ಞಾನಕ್ಕೆ ಅವರ ಪ್ರಮುಖ ಕಾಣಿಕೆ ಕಾಂತಕ್ಷೇತ್ರಗಳಲ್ಲಿ ಅಯಾನೀಕೃತ ಅನಿಲಗಳ ಚಲನೆಯನ್ನು ಕುರಿತಾದದ್ದು. ಈಚೆಗೆ ಇವರು ಸಾರ್ವತ್ರಿಕ ರಿಲೆಟಿವಿಟಿ ಸಿದ್ಧಾಂತದ ಹಲ ವಿಷಯಗಳ ಕಡೆಗೂ ತಮ್ಮ ಗಮನವನ್ನು ಹರಿಸಿದ್ದಾರೆ. ಚಂದ್ರಶೇಖರರ ಅನೇಕ ಸಂಶೋಧನ ಲೇಖನಗಳು ಪ್ರಮುಖ ವಿಜ್ಞಾನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬ್ರೌನಿಯನ್ ಚಲನೆ ಮೊದಲಾದವುಗಳಿಗೆ ಸಂಬಂಧಪಟ್ಟ ಸ್ಟೊಕ್ಯಾಸ್ಟಿಕ್ ನಿಯಮಗಳ ಬಗ್ಗೆ ಇವರು ಬರೆದ ಸುದೀರ್ಘ ಹಾಗೂ ಸವಿವರ ಲೇಖನ ಬಹಳ ಪ್ರಾಮುಖ್ಯ ಪಡೆದಿದೆ. ಅಣುಗಳ ಪ್ರಪಂಚದಲ್ಲಿ ಉಷ್ಣಕ್ರಿಯೆಗಳನ್ನು ನಿಯಂತ್ರಿಸುವ ನಿಯಮಗಳ ವ್ಯಾಪ್ತಿಯನ್ನು ವಿಶ್ವಪ್ರಮಾಣಕ್ಕೆ (ಅಂದರೆ ನಕ್ಷತ್ರಗಳೇ ಮೊದಲಾದ ಬೃಹತ್ ಕಾಯಗಳಿಗೆ) ವಿಸ್ತರಿಸಿದುದಕ್ಕಾಗಿಯೂ ವಿಕಿರಣ ಸಮತೋಲನದ (ರೇಡಿಯೇಟಿವ್ ಈಕ್ವಿಲಿಬ್ರಿಯಮ್) ಬಗ್ಗೆ ಇವರು ಬರೆದ ಕೃತಿಗಾಗಿಯೂ ಇವರಿಗೆ ರಮ್‍ಫರ್ಡ್ ಪದಕವನ್ನು ನೀಡಿ ಅಮೆರಿಕದ ವಿಜ್ಞಾನ ಹಾಗೂ ಕಲಾಸಮಿತಿ ಗೌರವಿಸಿದೆ. ಬೆಳಕಿನ ರೂಪದಲ್ಲಿ ಉಷ್ಣ ಪ್ರಸಾರವಾಗಿ, ಆ ಬೆಳಕು ವಸ್ತುವಿಗೆ ಆಧಾರವಾಗಿ ಮತ್ತೆ ವಸ್ತು ಉಷ್ಣದ ಪ್ರಸಾರವಾಗಿ, ಆ ಬೆಳಕು ವಸ್ತುವಿಗೆ ಆಧಾರವಾಗಿ ಮತ್ತೆ ವಸ್ತು ಉಷ್ಣದ ಮೂಲವಾಗುವಂಥ ಸಮತೋಲನ ಸ್ಥಿತಿಯನ್ನು ಚಂದ್ರಶೇಖರರು ವಿವರಿಸಿದರು. ಚಂದ್ರಶೇಖರರ ವೈಜ್ಞಾನಿಕ ಜೀವನದ ವ್ಯಾಪ್ತಿ ಎಷ್ಟು ದೊಡ್ಡದೋ ಅಷ್ಟೇ ಚಿಕ್ಕದು ಅವರ ಸಾಮಾಜಿಕ ಜೀವನದ ವ್ಯಾಪ್ತಿ. ಮನರಂಜನೆಗಾಗಿ ಒಮ್ಮೊಮ್ಮೆ ಪತ್ನಿಯೊಡನೆ ಸಂಗೀತ ಕಚೇರಿಗಳಿಗೆ ಹೋಗುವ ಹವ್ಯಾಸವಿತ್ತು. ಕರ್ನಾಟಕ ಸಂಗೀತದಲ್ಲಿ ಇವರಿಗೆ ವಿಶೇಷ ಆಸಕ್ತಿ. ಅಮೆರಿಕಕ್ಕೆ ಹೋದ ಹೊಸತರಲ್ಲಿ ತಮ್ಮ ಪತ್ನಿಯ ವೀಣಾವಾದನದ ಮೂಲಕ ಅಲ್ಲಿನವರಿಗೂ ನಮ್ಮ ಸಂಗೀತದ ಕಡೆಗೆ ಒಲವನ್ನು ಉಂಟುಮಾಡಲು ಪ್ರಯತ್ನಿಸಿದ್ದರಂತೆ.

ಚಂದ್ರಶೇಖರರಿಗೆ ಸಂದಿರುವ ಸನ್ಮಾನಗಳಲ್ಲಿ ಮುಖ್ಯವಾದವನ್ನು ಇಲ್ಲಿ ಉಲ್ಲೇಖಿಸಬಹುದು; 1944ರಲ್ಲಿ ರಾಯಲ್ ಸೊಸೈಟಿಯ ಫೆಲೋ (ಎಫ್.ಆರ್.ಎಸ್.); 1952ರಲ್ಲಿ ಅಸ್ಟ್ರನಾಮಿಕಲ್ ಸೊಸೈಟಿ ಆಫ್ ಪೆಸಿಫೀಕಿನ ಬ್ರೂಸ್ ಸುವರ್ಣಪದಕ; 1953ರಲ್ಲಿ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯ ಸ್ವರ್ಣಪದಕ 1957ರಲ್ಲಿ ಅಮೆರಿಕದ ವಿಜ್ಞಾನ ಹಾಗೂ ಕಲಾ ಅಕಾಡೆಮಿಯ ಸ್ವರ್ಣಪದಕ (ರಮ್‍ಫರ್ಡ್ ಮೆಡಲ್); 1962ರಲ್ಲಿ ರಾಯಲ್ ಸೊಸೈಟಿಯ ರಾಯಲ್ ಪದಕ; 1966ರಲ್ಲಿ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪದಕ; 1971ರಲ್ಲಿ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಹೆನ್ರಿ ಡೇಪರ್ ಪದಕ. ಭಾರತ ಸರ್ಕಾರ ಇವರನ್ನು 1968ರಲ್ಲಿ ನೆಹರು ಸ್ಮಾರಕ ಉಪನ್ಯಾಸಕ್ಕೆ ಕರೆಸಿ ಗೌರವಿಸಿದೆ. ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ರಾಮಾನುಜನ್ ಪದಕ ಆಗ ಇವರಿಗೆ ದೊರಕಿತು. ಮುಂಬಯಿಯ ತಾತಾ ಮೂಲಭೂತ ಅನುಸಂಧಾನ ಕೇಂದ್ರ (ಟಿ.ಐ.ಎಫ್.ಆರ್.) 1971ರಲ್ಲಿ ತನ್ನ ರಜತ ಮಹೋತ್ಸವದ ಸಂದರ್ಭದಲ್ಲಿ ಇವರನ್ನು ಗೌರವ ಫೆಲೋ ಆಗಿ ಆಯ್ದು ಸನ್ಮಾನಿಸಿದೆ. 1983ರ ನೊಬೆಲ್ ಪಾರಿತೋಷಿಕವನ್ನು ಚಂದ್ರಶೇಖರ್ ಮತ್ತು ವಿಲಿಯಂ ಎ. ಫೌಲರ್ ಇವರುಗಳಿಗೆ ಸಮವಾಗಿ ಪ್ರದಾನಿಸಲಾಯಿತು.

1937ರಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಷಿಕಾಗೋ ವಿಶ್ವವಿದ್ಯಾಲಯದ ಯಕ್ರ್ಸ್ ವೇಧಶಾಲೆಗೆ ಬಂದ ಚಂದ್ರಶೇಖರರು (1974) ಅಲ್ಲಿಯೇ. 1938ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ 1942ರಲ್ಲಿ ಅಸೋಸಿಯೇಟ್ ಪ್ರೊಫೆಸರರಾಗಿಯೂ 1944ರಲ್ಲಿ ಪ್ರೊಫೆಸರರಾಗಿಯೂ ನೇಮಕವಾಗಿ 1952ರಿಂದ ಘನತೆವೆತ್ತ ಸೇವಾ ಪ್ರಾಧ್ಯಾಪಕರಾಗಿದ್ದರು. (ಡಿಸ್ಟಿಂಗವಿಷ್ಡ್ ಸರ್ವಿಸ್ ಪ್ರೊಫೆಸರ್).

ಚಂದ್ರಶೇಖರರು ವಿಜ್ಞಾನಕ್ಕೆ ನೀಡಿರುವ ಅಮೂಲ್ಯ ಕಾಣಿಕೆಗಳಲ್ಲಿ ಈ ಕೆಳಗಿನ ಗ್ರಂಥಗಳು ಸೇರಿವೆ. ಆ್ಯನ್ ಇನ್‍ಟ್ರಡಕ್ಷನ್ ಟು ದಿ ಥಿಯರಿ ಆಫ್ ಸ್ಟೆಲ್ಲಾರ್ ಸ್ಟ್ರಕ್ಚರ್ (1939), ಪ್ರಿನ್ಸಿಪಲ್ಸ್ ಆಫ್ ಸ್ಟೆಲ್ಲಾರ್ ಡೈನಮಿಕ್ಸ್ (1942), ರೇಡಿಯೇಟಿವ್ ಟ್ರಾನ್ಸ್‍ಫರ್ (1950), ಹೈಡ್ರೋಡೈನಮಿಕ್ ಅಂಡ್ ಹೈಡ್ರೋ ಮ್ಯಾಗ್ನಟಿಕ್ ಸ್ಟೆಬಿಲಿಟಿ (1961), ಎಲ್ಲಿಪ್ಸಾಯಿಡಲ್ ಫಿಗರ್ಸ್‍ಆಫ್ ಈಕ್ವಿಲಿಬ್ರಿಯಮ್ (1969), ಕೇಂಬ್ರಿಜ್ ವಿಶ್ವವಿದ್ಯಾಲಯದ ಅತ್ಯುಚ್ಚ ಪುರಸ್ಕಾರವಾದ ಆ್ಯಡಮ್ ಬಹುಮಾನ ಚಂದ್ರಶೇಖರರ ರೇಡಿಯೇಟಿವ್ ಟ್ರಾನ್ಸ್‍ಫರ್ ಎಂಬ ಗ್ರಂಥಕ್ಕೆ ಲಭಿಸಿದೆ. ಈ ಗ್ರಂಥಗಳ ಹೆಸರುಗಳೇ ಚಂದ್ರಶೇಖರರ ಪಾಂಡಿತ್ಯ ವೈಶಾಲ್ಯಕ್ಕೆ ಸೂಚಕವಾಗಿವೆ. ಪ್ರತಿಯೊಂದು ಗ್ರಂಥದಲ್ಲಿಯೂ ಇವರು ತಮ್ಮದೇ ಆದ ಕೆಲವು ಹೊಸ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. "ಟ್ರೂಥ್ ಅಂಡ್ ಬ್ಯೂಟಿ" ಎಂಬ ಉಪನ್ಯಾಸ ಸಂಕಲನ ಪ್ರಕಟವಾಗಿದೆ. ಇವಲ್ಲದೆ "ನ್ಯೂಟನ್ಸ್ ಪಿನ್ಖಿಪಿಯಾ ಫಾರ್ ದ ಕಾಮನ್ ರೀಡರ್" ಎಂಬ ಪುಸ್ತಕವನ್ನು 1995ರಲ್ಲಿ ಹೊರತಂದರು. ಚಂದ್ರಶೇಖರರ ಜೀವನ ಚರಿತ್ರೆ ಇಂಗ್ಲಿಷ್‍ನಲ್ಲಿ (ಚಂದ್ರ - ಎ ಬಯೋಗ್ರಫಿ ಆಫ್ó ಚಂದ್ರಶೇಖರ್, ಲೇಖಕರು ಶ್ರೀ ಕಾಮೇಶ್ವರ ಸಿ. ವಾಲಿ, ಚಿಕಾಗೋ ವಿಶ್ವವಿದ್ಯಾನಿಲಯ,1990-91) ಮತ್ತು ಕನ್ನಡದಲ್ಲಿ (ಸುಬ್ರಮಣ್ಯನ್ ಚಂದ್ರಶೇಖರ್, ಲೇಖಕರು ಶ್ರೀ ಜಿ.ಟಿ. ನಾರಾಯಣ ರಾವ್, ಅತ್ರಿ ಬುಕ್ ಸೆಂಟರ್, ಮಂಗಳೂರು, 1995) ಪ್ರಕಟವಾಗಿದೆ.

ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯ ಸುವರ್ಣಪದಕವನ್ನು ನೀಡುವ ಸಂದರ್ಭದಲ್ಲಿ ಅಧ್ಯಕ್ಷರು ಚಂದ್ರಶೇಖರರ ಕಾಣಿಕೆಯನ್ನು ಪ್ರಶಂಸಿಸುತ್ತ ಅದು ಬೃಹತ್ಪ್ರಮಾಣದಲ್ಲಿದ್ದು, ಪರಿಣತರಿಗೂ ಸಂಕ್ಷೇಪಿಸಲು ಅಸಾಧ್ಯವೆಂದು ತೋರುವಷ್ಟು ಹೆಚ್ಚಿನದು ಎಂದು ಹೇಳಿ, ಅವರನ್ನು ಗೌರವಿಸುವುದರ ಮೂಲಕ ಸೊಸೈಟಿ ತನ್ನನ್ನು ತಾನೇ ಗೌರವಿಸಿಕೊಂಡಿದೆಯೆಂದು ನುಡಿದರು. ಚಂದ್ರಶೇಖರರ ವೈಜ್ಞಾನಿಕ ಜೀವನದ ದಾರಿಯನ್ನೂ ಅವರ ಅಭ್ಯಾಸ ಕ್ರಮವನ್ನೂ ತಿಳಿಯಲು ಅವರೇ ಈ ವಿಷಯಗಳ ಮೇಲೆ ಸೂಚಿಸಿದ ಹಲವು ಮಾತುಗಳ ಕಡೆ ಗಮನ ಹರಿಸಬಹುದು. ಅವರ ಪ್ರಕಾರ ವಿಜ್ಞಾನವೆಂಬುದು ನಿರಂತರವಾಗಿ ಸಂಭವಿಸುತ್ತಿರುವ ವಿದ್ಯಮಾನ. ಅದರ ಮೌಲ್ಯಗಳನ್ನು ಪಡೆಯಲು ಅದರಲ್ಲಿ ಭಾಗವಹಿಸುವವರೆಲ್ಲರೂ ತಮ್ಮ ಒಟ್ಟಾದ ಉದ್ಯಮದಿಂದ ಅದರ ಮುನ್ನಡೆಯಲ್ಲಿ ಸಹಭಾಗಿಗಳಾಗಬೇಕು. ಯಾವುದೇ ಒಂದು ವಿಷಯದ ವೈಜ್ಞಾನಿಕ ಅಭ್ಯಾಸಕ್ರಮ ಹೀಗಿರಬೇಕು; ಮೊದಲು ಆ ವಿಷಯದ ಬಗ್ಗೆ ಗೊತ್ತಿರುವ ಅಂಶಗಳನ್ನೆಲ್ಲ ತಿಳಿಯುವುದು; ಇವುಗಳಲ್ಲಿ ಪ್ರತಿಯೊಂದರ ಪರಿಪಕ್ವತೆ, ತರ್ಕಬದ್ಧತೆ ಮತ್ತು ಪರಿಪೂರ್ಣತೆಗಳನ್ನು ಒರೆಗೆ ಹಚ್ಚಲು ನಾವು ಕೇಳಬಹುದಾದ ಪ್ರಶ್ನೆಗಳಿಗೆಲ್ಲ ಇವು ಸಮರ್ಪಕ ಉತ್ತರ ನೀಡಬಲ್ಲವೇ ಎಂದು ನೋಡುವುದು; ಒಂದು ವೇಳೆ ಸರಿಯಾದ ಸಮಾಧಾನ ಸಿಗದಿದ್ದಲ್ಲಿ ಅದನ್ನು ದೊರಕಿಸಿಕೊಳ್ಳುವೆಡೆ ಪ್ರಯತ್ನ ನಡೆಸುವುದು. ಹೀಗೆ ಮಾಡಿದಲ್ಲಿ ಒಂದು ಸುಖಕರ ವಾತಾವರಣವುಂಟಾಗಿ ಅದರಲ್ಲಿ ವಿಜ್ಞಾನದ ಹಾದಿಯನ್ನು ನಿರ್ದೇಶಿಸಿದರೆ ಅದರ ಮೌಲ್ಯಗಳನ್ನು ನಾವು ಪಡೆದುಕೊಳ್ಳಬಲ್ಲ ಭರವಸೆ ಸಿಗುತ್ತದೆ.

ವಿಶ್ವದ ಅತಿ ಸುಂದರ ವಸ್ತು ಎಂದರೆ "ಕೃಷ್ಣವಿವರ" (ಬ್ಲಾಕ್ ಹೋಲ್) ಎನ್ನುತಿದ್ದ ಚಂದ್ರಶೇಖರ್ ನಿಧನರಾಗಿದ್ದು 22 ಆಗಸ್ಟ್ 1995ರಂದು ಶಿಕಾಗೋದಲ್ಲಿ. ಇವರ ಗೌರವಾರ್ಥ ನಾಸಾ ಹಾರಿಬಿಟ್ಟ ಕ್ಷ-ಕಿರಣ ವೇಧಶಾಲೆಗೆ ಚಂದ್ರ ಎಂದು ನಾಮಕರಣ ಮಾಡಿದ್ದಾರೆ (ಸಿ.ಆರ್.ಎಸ್.) (ಪರಿಷ್ಕರಣೆ: ಕೆ.ಎಸ್.ಎನ್)