ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದ್ರ1
ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ; ಭೂಮಿಗೆ ನೆರೆ ಆಕಾಶಕಾಯ; ಇತರ ಲೋಕಗಳಿಗೆ ಪ್ರಯಾಣ ಮಾಡುವ ಪ್ರಯತ್ನಗಳಲ್ಲಿ ಮನುಷ್ಯ ಕಾಲೂರಿದ ಪ್ರಥಮ ಆಕಾಶಕಾಯ ಉಪಗ್ರಹ (ಸ್ಯಾಟೆಲೈಟ್) ಮತ್ತು ಚಂದ್ರ ಪದಗಳನ್ನು ಸಮಾನಾರ್ಥದಲ್ಲಿ ಬಳಸುವುದು ಕೂಡ ಉಂಟು. ಉದಾಹರಣೆಗೆ, ಗುರುವಿಗೆ 50ಕ್ಕೂ ಹೆಚ್ಚು ಚಂದ್ರಗಳಿವೆ.
ಪ್ರಸಕ್ತ ಲೇಖನವನ್ನು ಈ ಕೆಳಗಿನ ಮುಖ್ಯ ಶೀರ್ಷಿಕೆಗಳ ಅಡಿಯಲ್ಲಿ ಅಳವಡಿಸಿದೆ: I ಚಂದ್ರನ ಉಗಮ II ಭೌತ ಸ್ವರೂಪ 1. ದ್ರವ್ಯರಾಶಿ 2. ಗಾತ್ರ 3. ಸಾಂದ್ರತೆ 4. ಗುರುತ್ವ ಬಲ 5. ವಿಮೋಚನ ವೇಗ 6. ವಾಯುಮಂಡಲ ಮತ್ತು ಜಲರಾಶಿ 7. ನೈಸರ್ಗಿಕ ಬಲಗಳು 8. ಪ್ರಾಕೃತಿಕ ಸ್ಥಿತಿ 9. ಸಮುದ್ರಗಳು 10. ಕೂಪಗಳು 11. ಪರ್ವತಗಳು 12. ಮ್ಯಾsಸ್ಕಾನುಗಳು 13. ಚಂದ್ರಸ್ಮಾರಕಗಳು 14. ಚಂದ್ರತಲದಲ್ಲಿನ ರಾಸಾಯನಿಕಗಳು 15. ಚಂದ್ರನ ಅದೃಶ್ಯ ಭಾಗ
III ಚಲನೆಗಳು 1 ಆವರ್ತನೆ, ಪರಿಭ್ರಮಣೆ 2 ದೋಲನಗಳು 3 ಕಕ್ಷೆ 4 ಆಕಾಶದಲ್ಲಿ ಚಂದ್ರನ ಚಲನೆ 5. ಶರಚ್ಚಂದ್ರ Iಗಿ ಕಲೆಗಳು ಗಿ ತಿಂಗಳ ಬೆಳಕು ಗಿI ಕೆಲವು ಉಪಯುಕ್ತ ಮಾಹಿತಿಗಳು ಗಿII ಭಾರತೀಯ ಖಗೋಳವಿಜ್ಞಾನದಲ್ಲಿ ಚಂದ್ರ ಗಿIII ಮಾನವ, ಚಂದ್ರನ ಮೇಲೆ
I ಚಂದ್ರನ ಉಗಮ : ಐದು ಮುಖ್ಯ ಊಹೆಗಳು (ಹೈಪಾಥಿsಸಸ್) ಇವೆ:
ಮೊದಲನೆಯದು ಅನುರಣನ (ರೆಸೊನೆನ್ಸ್) ಊಹೆ: ಇದನ್ನು ಮಂಡಿಸಿದಾತ ಜಾರ್ಜ್ ಹೊವಾರ್ಡ್ ಡಾರ್ವಿನ್ (1845-1912). ಇದರ ಸಾರವಿಷ್ಟು, ಚಂದ್ರ-ಭೂಮಿ ನಡುವೆ ಪರಸ್ಪರ ಗುರುತ್ವಾಕರ್ಷಣಬಲ ವರ್ತಿಸುತ್ತಿರುವುದು ಸರಿಯಷ್ಟೆ. ಭೂಮಿಯ ಮೇಲೆ ಚಂದ್ರನ ಆಕರ್ಷಣೆಯ ಪರಿಣಾಮವನ್ನು ಸಮುದ್ರದ ಭರತ ಇಳಿತಗಳಲ್ಲಿ ಚೆನ್ನಾಗಿ ಗುರುತಿಸಬಹುದು. 24 ಗಂಟೆಗಳ ದಿವಸವೊಂದಕ್ಕೆ ಒಂದು ಸುತ್ತಿನಂತೆ ಸತತವಾಗಿ ಆವರ್ತಿಸುತ್ತಿರುವ ಭೂಮಿಯ ವೇಗದ ವಿರುದ್ಧ ಬಿರಿಗಳಂತೆ (ಬ್ರೇಕ್ಸ್) ಈ ಭರತ-ಇಳಿತಗಳು ವರ್ತಿಸುತ್ತವೆ. ತತ್ಪರಿಣಾಮವಾಗಿ ಭೂಮಿಯ ಆವರ್ತನವೇಗ ಲಕ್ಷಾಂತರ ವರ್ಷಗಳಲ್ಲಿ ಕ್ರಮೇಣ ಕುಂಠಿತವಾಗುತ್ತದೆ. ಅದೇ ವೇಳೆಯಲ್ಲಿ, ಗತಿವೈಜ್ಞಾನಿಕ ನಿಯಮಗಳು ತಿಳಿಸುವಂತೆ, ಚಂದ್ರ-ಭೂಮಿ ಅತಿ ಸಮೀಪವಾಗಿದ್ದ ಕಾಲ ಒಂದಿರಬೇಕು, ಅದಕ್ಕೂ ಹಿಂದೆ ಅವೆರಡೂ ಕೂಡಿಕೊಂಡು ಅಖಂಡವಾದ ಒಂದೇ ವಸ್ತು ಇದ್ದಿರಬೇಕು ಎಂಬ ಅಂಶ ಸ್ಪಷ್ಟವಾಗುತ್ತದೆ. ಆ ದಿವಸಗಳಲ್ಲಿ ಚಂದ್ರ-ಭೂಮಿಯ ಆವರ್ತನವೇಗ ಈಗಿನದರ ಆರುಪಟ್ಟು ಜಾಸ್ತಿ-ಅಂದರೆ ಅಂದಿನ ಆವರ್ತನಾವಧಿ ಅಥವಾ ದಿವಸದ ಉದ್ದ 4 ಗಂಟೆಗಳು-ಇದ್ದಿರಬೇಕು. ಈಗ ಕಲ್ಪನೆಯನ್ನು ಇನ್ನಷ್ಟು ಗತಕಾಲಕ್ಕೆ, ಎಂದರೆ ಭೂಮಿಯ ಉಗಮದ ವೇಳೆಗೆ, ಹರಿಸಬೇಕು. ಮೊದಲು ಅನಿಲರೂಪದಲ್ಲಿದ್ದ ಭೂಮಿಯ ಹೊರ ಮೈ ವಿಸ್ತರಣೆಯಿಂದ (ರೇಡಿಯೇಷನ್) ಉಷ್ಣವನ್ನು ಕಳೆದುಕೊಂಡು ದ್ರವರೂಪಕ್ಕೆ ಇಳಿಯಿತು. ಆಗ ನೀರು ಹಬೆಯ ರೂಪದಲ್ಲಿ ಭೂಮಿಯನ್ನು ಆವರಿಸಿತ್ತು. ಇನ್ನಷ್ಟು ಉಷ್ಣ ನಷ್ಟವಾದಂತೆ ಭೂಮಿಯ ಮೇಲು ಭಾಗ ಘನೀಭವಿಸಿತು ಮತ್ತು ಮುಂದೊಂದು ದಿವಸ ಮೊದಲ ಮಳೆ ಮುಸಲಧಾರೆಯಲ್ಲಿ ಸಹಸ್ರಾರು ವರ್ಷಗಳ ಕಾಲ ಸುರಿಯಿತು. ಇದು ನಡೆದದ್ದು ಒಂದು ಒಂದೂವರೆ ಬಿಲಿಯನ್ ವರ್ಷಗಳಿಗೂ ಹಿಂದೆ (1 ಬಿಲಿಯನ್ = 100 ಕೋಟಿ). ಕಮರಿ ಕೊರಕಲುಗಳೆಲ್ಲ ನೀರಿನಿಂದ ತುಂಬಿ ಸಮುದ್ರ ಸರೋವರಗಳಾದುವು. ಇವುಗಳ ಮೇಲೆ ಸೂರ್ಯಾಕರ್ಷಣೆಯ ಪರಿಣಾಮವಾಗಿ ಉಬ್ಬರವಿಳಿತಗಳು ತಲೆದೋರಿದ್ದವು. ಭೂಮಿಯ ಆವರ್ತನೆಯ ಅವಧಿಯಲ್ಲಿ (ಅಂದು 4 ಗಂಟೆಗಳು) ಉಬ್ಬರವಿಳಿತಗಳು ಎರಡು ಸಲ ಕಾಣಿಸಿಕೊಳ್ಳುತ್ತಿದ್ದವು. ಅವುಗಳ ಅವಧಿಕಾಲ 2 ಗಂಟೆಗಳು. ಅಂದರೆ ಆವರ್ತನಾವಧಿಗೂ ಉಬ್ಬರವಿಳಿತಗಳ ಅವಧಿಕಾಲಕ್ಕೂ ಒಂದು ನಿರ್ದಿಷ್ಟ ಪುರ್ಣಾಂಕ ಸಂಬಂಧ ಏರ್ಪಟ್ಟಿತ್ತು. ಹೀಗಾಗಿ ಪ್ರತಿ ಒಂದು ಆವರ್ತನೆಯಲ್ಲೂ ಉಬ್ಬರವಿಳಿತಗಳು ಭೂಮಿಗೆ ಹೆಚ್ಚಿನ ಬಲವನ್ನು ಒದಗಿಸುವ ನೂಕುಬಲಗಳಾಗಿ ಪರಿಣಮಿಸಿದುವು (ಉಯ್ಯಾಲೆಯ ಒಂದು ತುಯ್ತ ಮುಗಿದು ಮುಂದಿನದು ತೊಡಗುವಾಗ ಅದನ್ನು ತಳ್ಳಿದರೆ, ಅಂದರೆ ಅದಕ್ಕೆ ಬಲವನ್ನು ಒದಗಿಸಿದರೆ, ತುಯ್ತ ಏರುವ ವಿದ್ಯಮಾನವನ್ನು ಗಮನಿಸಬಹುದು). ಇದೇ ಅನುರಣನ ಸಿದ್ಧಾಂತ. ಭೂಮಿಯ ಮೇಲ್ಮೈ ಇನ್ನೂ ಮೆದುವೇ ಆಗಿದ್ದುದರಿಂದ, ಅನುರಣನೆ ಉಂಟುಮಾಡಿದ ಕುಲುಕಾಟದಿಂದ, ಭೂತಲದಲ್ಲಿ ಭಾರೀ ಬಿರುಕು ತಲೆದೋರಿ, ಕ್ರಮೇಣ ಅದರಿಂದ ಭೂಮಿಯ ಒಂದು ಅಂಶ ಕಳಚಿಕೊಂಡು ಆಕಾಶಕ್ಕೆ ಸಿಡಿದು ಹೋಯಿತು. ಇದೇ ಚಂದ್ರ. ಈ ಘಟನೆ ಸಂಭವಿಸಲು ಕನಿಷ್ಠ ಪಕ್ಷ 500 ವರ್ಷಗಳಾದರೂ ತೆಗೆದುಕೊಂಡಿರಬೇಕು. ಚಂದ್ರ ಜನನದಿಂದ ಉಂಟಾದ ಗಾಯ ಪೆಸಿಫಿಕ್ ಸಾಗರ. ಚಂದ್ರನ ಮೇಲೆ ಭೂಮಿ-ಸೂರ್ಯರ ಆಕರ್ಷಣೆ, ಭೂಮಿಯ ಆವರ್ತನವೇಗ ಹಾಗೂ ಅದರ ಮೇಲೆ ಉಬ್ಬರವಿಳಿತಗಳ ಪರಿಣಾಮ ಇವೆಲ್ಲವುಗಳ ಸಮಗ್ರ ಫಲಿತವಾಗಿ ಚಂದ್ರ ಭೂಮಿಯಿಂದ ಕ್ರಮೇಣ ದೂರ ಸರಿಯುತ್ತ ಇಂದಿನ ಸ್ಥಾನಕ್ಕೆ ಬಂದಿದೆ. ಅನುರಣನ ಸಿದ್ಧಾಂತಕ್ಕೆ ಐತಿಹಾಸಿಕ ಪ್ರಾಧಾನ್ಯ ಮಾತ್ರ ಉಂಟಷ್ಟೆ. ಏಕೆಂದರೆ ಈ ಊಹೆಯನ್ನು ಸಮರ್ಥಿಸುವ ಪುರಾವೆಗಳ ತೂಕ ಇವನ್ನು ವಿರೋಧಿಸುವ ಪುರಾವೆಗಳ ತೂಕವನ್ನು ಸಮತೋಲಿಸಲು ಶಕ್ತವಾಗಿಲ್ಲ.
ಎರಡನೆಯದು ಸ್ಫೋಟನೆ ಊಹೆ. ಇದನ್ನಿಂದು ವಿಜ್ಞಾನಿಗಳು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಇದರ ಪ್ರಕಾರ ಮೊದಲಿನದ್ದದ್ದು ಭೂಮಿ-ಚಂದ್ರ-ಮಂಗಳ ಒಂದುಗೂಡಿದ್ದ ಸಂಯುಕ್ತ ವಸ್ತು. ಆವರ್ತನೆಯನ್ನೂ ಸೂರ್ಯ ಪರಿಭ್ರಮಣೆಯನ್ನೂ ಮಾಡುತ್ತಿದ್ದ ಆ ವಸ್ತುವಿಗೆ ಸಮತೋಲನವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಅದರ ರೂಪ ಉದ್ದುದ್ದವಾಗಿ ವಿಕಾರಗೊಂಡು ಕ್ರಮೇಣ ನಡುವಿನ ತೆಳುಭಾಗದಲ್ಲಿ ತುಂಡಾಯಿತು. ಈ ಕ್ರಿಯೆಯಲ್ಲಿ ‘ಕೊಸರಾ’ಗಿ ಮೂರನೆಯ ಒಂದು ತುಣುಕು ಉಳಿಯಿತು. ಅದೇ ಚಂದ್ರ, ದೊಡ್ಡ ಭಾಗ ಭೂಮಿ, ಚಿಕ್ಕ ಭಾಗ ಮಂಗಳ. ಭೂಮಿಯ ಗುರುತ್ವಾಕರ್ಷಣ ಬಲ ಅಧಿಕ. ಅದ್ದರಿಂದ ಚಂದ್ರನನ್ನು ಅದು ತನ್ನ ಕ್ಷೇತ್ರದಲ್ಲೇ ಉಳಿಸಿಕೊಂಡಿತು. ಭೂಮಿ, ಚಂದ್ರ, ಮಂಗಳ ಏಕಕಾಲದಲ್ಲಿ ಜನಿಸಿದುದರಿಂದ ಚಂದ್ರನನ್ನು ಭೂಮಿಯ ತಮ್ಮ ಎಂದೂ ಮಂಗಳವನ್ನು ಭೂಮಿಯ ಅವಳಿ ಎಂದೂ ಕರೆಯುವುದುಂಟು. ಚಂದ್ರನಿಂದ ತಂದಿರುವ ಶಿಲೆಗಳ ಪರೀಕ್ಷೆಯಿಂದ ಭೂಮಿ ಹಾಗೂ ಚಂದ್ರ ಎರಡೂ ಸಮಾನ ವಯಸ್ಸಿನ ಕಾಯಗಳು (ಸುಮಾರು 5 x 109 ವರ್ಷಗಳು) ಎಂಬುದು ಸ್ಥಿರಪಟ್ಟಿದೆ.
ಮೂರನೆಯದು ಅಪಹರಣ ಊಹೆ. ಇದರ ಪ್ರಕಾರ ಚಂದ್ರ ಮತ್ತು ಭೂಮಿಗೆ ಮೂಲತಃ ಯಾವುದೇ ಸಂಬಂಧವಿರಲಿಲ್ಲ. ಅಂದು ಚಂದ್ರ ಕ್ಷುದ್ರ ಗ್ರಹಗಳ ಹೊನಲಿನಲ್ಲಿ ಇದ್ದ ಒಂದು ಕಾಯ. ಯಾವುದೋ ಗಳಿಗೆಯಲ್ಲಿ ಚಂದ್ರ ಸ್ವಂತ ಕಕ್ಷೆಯಿಂದ ವಿಚಲಿತವಾಗಿ ಭೂಕಕ್ಷೆಯ ತೀರ ಸಮೀಪ ಹಾಯುತ್ತಿದ್ದಿರಬಹುದು. ಆಗ ಭೂಮ್ಯಾಕರ್ಷಣೆಯಿಂದ ಬಂಧಿತವಾಗಿ ಭೂಮಿಯ ಸುತ್ತ ಪರಿಭ್ರಮಿಸುವ ಉಪಗ್ರಹವಾಯಿತು. ಆದ್ದರಿಂದ ಭೂಮಿಗೆ ಚಂದ್ರ ಪ್ರಾಪ್ತವಾದದ್ದು ಭೂಮಿಯ ಉಗಮದ ಬಹುಕಾಲಾನಂತರದಲ್ಲಿ. ಭೂಮಿ ಸೆರೆಹಿಡಿದದ್ದು ದಕ್ಕಿಸಿಕೊಳ್ಳಲು ಕಷ್ಟವಾಗುವಂಥ ಒಂದು ಮಹಾಗಾತ್ರವನ್ನೇ. ಇದರಿಂದ ಭೂಮಿಯ ಮೇಲೆ ಚಂದ್ರನಿಂದ (ಅದೇ ರೀತಿ ಚಂದ್ರನ ಮೇಲೆ ಭೂಮಿಯಿಂದ) ವಿಪ್ಲವ ಪರಂಪರೆಗಳೇ ಸಂಭವಿಸಿರಬೇಕು. ಭೂತೊಗಟೆಯ ವಿವಿಧ ಪ್ರದೇಶಗಳ ವಿವಿಧ ಸ್ತರಗಳ ಪ್ರತಿಚಯಗಳನ್ನು ತರಿಸಿ ಅಭ್ಯಸಿಸಿದ್ದಾರೆ. ಇದರ ಪ್ರಕಾರ ಲಭ್ಯವಾಗಿರುವ ಸಂಗತಿ ಇಷ್ಟು.. ಭೂಮಿಯ ವಯಸ್ಸು ಸುಮಾರು 5 x 109 ವರ್ಷಗಳು. ಸುಮಾರು 4 x 109 ವರ್ಷಗಳ ಹಿಂದೆ (ಎಂದರೆ ಭೂಮಿ ಹುಟ್ಟಿ ಸುಮಾರು 100 ಕೋಟಿ ವರ್ಷಗಳ ತರುವಾಯ) ಒಂದು ಭೀಕರ ಘಟನೆ ಅಂತರಿಕ್ಷದಲ್ಲಿ ಸಂಭವಿಸಿದುದಕ್ಕೆ ಪುರಾವೆಗಳು ದೊರೆತಿವೆ. ಇದು ಚಂದ್ರನನ್ನು ಸೆರೆ ಹಿಡಿದಿದ್ದರಿಂದ ಆಗಿರಬಹುದೇ ಅಥವಾ ಬೇರೆ ಯಾವುದೋ ಕಾರಣದಿಂದ ಆಗಿರಬಹುದೇ ಎಂಬುದು ಇನ್ನೂ ತಿಳಿದಿಲ್ಲ. ಈ ಊಹೆಗೆ ಇಂದು ವಿಜ್ಞಾನಲೋಕದಲ್ಲಿ ಹೆಚ್ಚಿನ ಬೆಂಬಲವಿಲ್ಲ.
ನಾಲ್ಕನೆಯದು ಸ್ತಿಮಿತ ಸ್ಥಿತಿ ಊಹೆ. ಇದರ ಪ್ರಕಾರ ಸೌರವ್ಯೂಹÀದ ಉಗಮಕಾಲದಲ್ಲೇ, ಎಂದರೆ ಭೂಮಿ ಮುಂತಾದ ಗ್ರಹಗಳು ಜನಿಸಿದಾಗಲೇ ಚಂದ್ರ ಕೂಡ ಜನಿಸಿತ್ತು. ಆಗಿನಿಂದಲೂ ಅದು ಭೂಮಿಯ ಉಪಗ್ರಹವಾಗಿಯೇ ಇತ್ತು ಎಂದಿದೆ. ಈ ಊಹೆಗೂ ಇಂದು ಭದ್ರವಾದ ಬುನಾದಿಯಿಲ್ಲ.
ಐದನೆಯದು ಸಂಲಯನ ಊಹೆ. ಇದರ ಪ್ರಕಾರ ಕ್ಷುದ್ರಗ್ರಹಗಳು ಗ್ರಹಗಳನ್ನು ಕಟ್ಟಿದ ಇಟ್ಟಿಗೆ ತುಂಡುಗಳು. ಎಲ್ಲ ಗ್ರಹಗಳೂ ಮೂಲತಃ ದೂಳು ಮತ್ತು ಕ್ಷುದ್ರಗ್ರಹಗಳ ಒಕ್ಕೂಟಗಳೇ. ಹಲವಾರು ಕ್ಷುದ್ರಗ್ರಹಗಳು ದೂಳಿನೊಡನೆ ಸೇರಿಕೊಂಡು ಭೂಮಿಯಂಥ ಒಂದು ಗ್ರಹವಾಯಿತು. ಅದೇ ಆಸುಪಾಸಿನಲ್ಲಿದ್ದ ಉಳಿದ ಚೂರುಗಳು ಒಟ್ಟುಗೂಡಿ ಚಂದ್ರ ಆಯಿತು. ಈ ಊಹೆಯನ್ನೂ ಇಂದು ಬಹುತೇಕ ವಿಜ್ಞಾನಿಗಳು ಒಪ್ಪುವುದಿಲ್ಲ.
ಈ ಐದು ಊಹೆಗಳಿಗೆ ಹೋಲಿಸಿದಲ್ಲಿ ಅಪೋಲೋ ಗಗನಯಾತ್ರಿಗಳು ತಂದ ಚಂದ್ರನ ಕಲ್ಲುಮಣ್ಣುಗಳನ್ನು ವಿಶ್ಲೇಷಿಸಿದ ನಂತರ ಮತ್ತೊಂದು ಬಗೆಯ ಊಹೆಯನ್ನು ವಿಜ್ಞಾನಿಗಳು ಮಾಡಿದರು. ಅವರ ಪ್ರಕಾರ ಮಂಗಳಗ್ರಹದಷ್ಟು ದೊಡ್ಡದಾದ ಆಕಾಶಕಾಯವೊಂದು ಭೂಮಿಯ ಬಾಲ್ಯದಲ್ಲಿ ಇಲ್ಲಿಗೆ ಬಂದು ಒಂದು ವಿಶೇಷ ಬಗೆಯಲ್ಲಿ ಡಿಕ್ಕಿ ಹೊಡೆಯಿತಂತೆ. ಆ ಆಕಾಶಕಾಯಕ್ಕೆ ವಿಜ್ಞಾನಿಗಳು ಜರ್ಫಿಯಸ್ ಎಂಬ ಹೆಸರನ್ನು ನೀಡಿದ್ದಾರೆ. ಇದರಿಂದ ಆ ಆಕಾಶಕಾಯ ನಾಶವಾದುದಲ್ಲದೇ ಭೂಮಿಯ ಮೇಲ್ಚಿಪ್ಪು ಅನಿಲರೂಪಕ್ಕೆ ತೆರಳಿತಂತೆ. ಮುಂದೆ ಈ ಅನಿಲದ ಮೋಡ ಭೂಮಿಯನ್ನು ಸುತ್ತಲಾರಂಭಿಸಿತೆಂದು ವಿಜ್ಞಾನಿಗಳು ನುಡಿಯುತ್ತಾರೆ. ಅನಂತರ ಆ ಅನಿಲಗಳು ಬಾಷ್ಪೀಕರಣಕ್ಕೆ ಒಳಗಾಗಿ ಚಂದ್ರನ ಉದ್ಭವಕ್ಕೆ ಕಾರಣವಾಯಿತಂತೆ. ಈ ಊಹೆಗೆ ಇಂದು ಸಾಕಷ್ಟು ಬೆಂಬಲ ವಿಜ್ಞಾನಲೋಕದಲ್ಲಿ ದೊರಕಿದೆ.
ii ಭೌತಸ್ವರೂಪ : 1 ದ್ರವ್ಯರಾಶಿ : ಚಂದ್ರನ ದ್ರವ್ಯರಾಶಿ (ಮಾಸ್) 7.35 x 102 ಕಿ.ಗ್ರಾಂ. (ಭೂಮಿ 5.98 x 1024 ಕಿ.ಗ್ರಾಂ.). ಇದು ಭೂದ್ರವ್ಯರಾಶಿಯ (1/81.68) ಪಟ್ಟು ಕಡಿಮೆ.
2 ಗಾತ್ರ : ಭೂಕೇಂದ್ರದಿಂದ ಕಾಣುವಂತೆ ಚಂದ್ರನ ಸರಾಸರಿ ಕೋನ ವ್ಯಾಸ 31’5". ರೇಡಾರ್, ಲೇಸರ್ ಮುಂತಾದ ಆಧುನಿಕ ತಂತ್ರಗಳಿಂದ ಭೂಮಿ-ಚಂದ್ರ ಸರಾಸರಿ ದೂರವನ್ನು ಅಳೆಯಲಾಗಿದೆ. ಭೂ ಕೇಂದ್ರದಿಂದ ಚಂದ್ರಕೇಂದ್ರದ ಸರಾಸರಿ ದೂರ 3,84.403 ಕಿ.ಮೀ. ಈ ರೇಖೀಯ ದೂರವನ್ನೂ ಚಂದ್ರನ ದೃಗ್ವ್ಯಾಸವನ್ನೂ ಸಂಬಂಧಿಸಿ ಚಂದ್ರನ ರೇಖೀಯ ವ್ಯಾಸವನ್ನೂ ತನ್ಮೂಲಕ ಘನಗಾತ್ರವನ್ನೂ ಗಣಿಸುವುದು ಸಾಧ್ಯ. ಚಂದ್ರನ ವ್ಯಾಸ 3475.9 ಕಿ.ಮೀ. (2156,86 ಮೈಲಿ) ಭೂಮಿಗೆ ಈ ಬೆಲೆ 12,742 ಕಿ.ಮೀ. (7917.88 ಮೈಲಿ). ಆದ್ದರಿಂದ ಭೂಮಿಯ ಮತ್ತು ಚಂದ್ರನ ಘನಗಾತ್ರಗಳ (ಅವು ಗೋಳಗಳೆಂದು ಭಾವಿಸಿದರೆ) ನಿಷ್ಪತ್ತಿ 49.47:1. ಅಲ್ಲಿಗೆ, ಭೂಮಿ ಒಂದು ಖಾಲಿ ಗೋಳವಾಗಿದ್ದರೆ ಅದರ ಒಳಗೆ ಸುಮಾರು 50 ಚಂದ್ರರನ್ನು ತುಂಬಬಹುದು ಎಂದಾಯಿತು.
3. ಸಾಂದ್ರತೆ: ದ್ರವ್ಯರಾಶಿಯನ್ನು ಘನಗಾತ್ರದಿಂದ ಭಾಗಿಸಿದಾಗ ದೊರೆಯುವ ಸೂಚ್ಯಂಕವಿದು. ಚಂದ್ರನ ಸರಾಸರಿ ಸಾಂದ್ರತೆ 3.34 ಗ್ರಾಂ/ಘನಸೆಂ.ಮೀ. (ಭೂಮಿ 5.5 ಗ್ರಾಂ/ಘನಸೆಂ.ಮೀ.) ಅಂದರೆ ಸಮಾನ ಗಾತ್ರದ ನೀರಿನ ತೂಕಕ್ಕಿಂತ ಚಂದ್ರನ ತೂಕ 3.34 ಪಟ್ಟು. (ಭೂಮಿಯ ತೂಕ 5.5 ಪಟ್ಟು). ಚಂದ್ರನ ಸರಾಸರಿ ಸಾಂಧ್ರತೆ ಭೂಮಿಯದಕ್ಕಿಂತ ಕಡಿಮೆ ಇರುವುದನ್ನು ಗಮನಿಸಿದ ಕೆಲವು ವಿಜ್ಞಾನಿಗಳು ಭೂಮಿಯ ಆರಂಭದ ದಿವಸಗಳಲ್ಲಿ, ಚಂದ್ರನು ಇನ್ನೂ ಭೂಮಿಯ ಅವಿಭಾಜ್ಯ ಅಂಗವಾಗಿದ್ದಾಗ, ಭಾರವಾದ ದ್ರವ್ಯಗಳು ಭೂ ಕೇಂದ್ರದೆಡೆಗೂ, ಹಗುರವಾದ ದ್ರವ್ಯಗಳು ಭೂಮೇಲ್ಮೈ ಎಡೆಗೂ ಸಾಗಿ ಸಂಗ್ರಹಗೊಂಡಿದ್ದುವು. ಆ ವೇಳೆ ಭೂಮಿಯ ಮೇಲ್ಮೈಯಿಂದ ಸಿಡಿದು ಬೇರ್ಪಟ್ಟ ಚಂದ್ರನ ಸರಾಸರಿ ಸಾಂದ್ರತೆ ಭೂಮಿಯ ಸರಾಸರಿ ಸಾಂದ್ರತೆಗಿಂತ ಕಡಿಮೆ ಆಗಿರುವುದು ಸಹಜವೇ ಆಗಿದೆ ಎಂದು ವಾದಿಸುತ್ತಾರೆ. 4. ಗುರುತ್ವಬಲ : ದ್ರವ್ಯರಾಶಿ ಒ ಮತ್ತು ತ್ರಿಜ್ಯ ಖ ಇರುವ ಒಂದು ಗೋಳೀಯ ವಸ್ತುವಿನ ತಲದಲ್ಲಿ ಗುರುತ್ವಬಲ ಆ ವಸ್ತುವಿನ ಗುರುತ್ವಬಲ ಉಂಟುಮಾಡುವ ವೇಗೋತ್ಕರ್ಷ ಚಿ ಆಗಿದ್ದರೆ ಆಗ .
ಇಲ್ಲಿ ಉ ವಿಶ್ವ ಗುರುತ್ವಾಕರ್ಷಣೀಯ ಸ್ಥಿರಾಂಕ. ಚಂದ್ರನ ಮೇಲ್ಮೈಯಲ್ಲಿ ಚಿಯ ಬೆಲೆ 161.7 ಸೆಂ.ಮೀ./ಸೆಕೆಂಡ್2 (ಭೂಮಿಯದು 980 ಸೆಂ.ಮೀ./ಸೆಕೆಂಡ್2. ಅಂದರೆ ಚಂದ್ರತಲದಲ್ಲಿ ವೇಗೋತ್ಕರ್ಷ ಭೂತದಲ್ಲಿನದಕ್ಕಿಂತ ಸುಮಾರು ರಷ್ಟು ಕಡಿಮೆ ಇರುತ್ತದೆ. ಯಾವುದೇ ಗ್ರಹದಲ್ಲಿ (ಇಲ್ಲವೇ ಉಪಗ್ರಹ) ಒಂದು ವಸ್ತುವಿನ ತೂಕ ಅದರ ದ್ರವ್ಯರಾಶಿ (m) ಹಾಗೂ ಗುರುತ್ವ ವೇಗೋತ್ಕರ್ಷಗಳ (g) ಗುಣಲಬ್ಧ (ತೂಕ = mg). ಆದ್ದರಿಂದ ಭೂಮಿಯಲ್ಲಿ 90 ಕಿ.ಗ್ರಾಂ. ತೂಕವಿರುವ ಓರ್ವ ವ್ಯಕ್ತಿಯ ತೂಕ ಚಂದ್ರನಲ್ಲಿ ಕೇವಲ 15 ಕಿ.ಗ್ರಾಂ. ಭೂಮಿಯಲ್ಲಿ ಒಂದಿಷ್ಟು ಪ್ರಯತ್ನದಿಂದ ಜಿಗಿಯಬಲ್ಲ ಎತ್ತರದ ಆರು ಪಟ್ಟು ಎತ್ತರವನ್ನು ಅಷ್ಟೇ ಪ್ರಯತ್ನದಿಂದ ಚಂದ್ರನಲ್ಲಿ ಆತ ಜಿಗಿಯಬಲ್ಲ.
5. ವಿಮೋಚನಾ ವೇಗ : ಒಂದು ಆಕಾಶಕಾಯದ ಗುರುತ್ವಬಲದ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರವಾಗಲು ಯಾವುದೇ ಕಣ ಆ ಕಾಯದ ತಲದಿಂದ ಜಿಗಿಯಬೇಕಾದ ಕನಿಷ್ಠ ಪ್ರಾರಂಭಿಕ ವೇಗಕ್ಕೆ ವಿಮೋಚನಾ ವೇಗ (ಎಸ್ಕೇಪ್ ವೆಲಾಸಿಟಿ) ಎಂದು ಹೆಸರು. ಇದರ ಅಳತೆ v =. ಆದ್ದರಿಂದ ಕಾಯ ಹೆಚ್ಚು ಹೆಚ್ಚು ಭಾರವುಳ್ಳದ್ದಾದಂತೆ ಅದರ ಗುರುತ್ವಬಲದೊಂದಿಗೆ ವಿಮೋಚನಾ ವೇಗವೂ ಹೆಚ್ಚು ಹೆಚ್ಚು ಆಗುತ್ತದೆ. ಸೂರ್ಯನಲ್ಲಿ ಇದರ ಬೆಲೆ 618 ಕಿ.ಮೀ./ಸೆ.; ಗುರುವಿನಲ್ಲಿ 59.54 ಕಿಮೀ./ಸೆ ; ಭೂಮಿಯಲ್ಲಿ 11.19 ಕಿ.ಮೀ./ಸೆ; ಚಂದ್ರನಲ್ಲಿ 2.38 ಕಿ.ಮೀ./ಸೆ. ಸೂರ್ಯೋಷ್ಣದಿಂದ ಕಾದ ವಾಯುವಿನ ಅಣುಗಳು ಅನುಕೂಲ ಸನ್ನಿವೇಶಗಳಲ್ಲಿ 10 ಕಿ.ಮೀ./ಸೆ ವೇಗವನ್ನು ತಲಪುವುದೇನೂ ಅಸಾಮಾನ್ಯ ಘಟನೆಗಳಲ್ಲ. ಇಂಥ ಕ್ಷೋಭಿತ ಕಣಗಳನ್ನು ಬಂಧಿಸಿ ಭೂಮಿಗೆ ವಾಯುಮಂಡಲದ ಕವಚವನ್ನು ಕಾಪಾಡಿ ಇಟ್ಟಿರುವುದು ಭೂಮಿಯ ಪ್ರಬಲ ಗುರುತ್ವಬಲ. ಚಂದ್ರದಲ್ಲಿನ ಸ್ಥಿತಿ ತದ್ವಿಪರೀತ. ಒಂದು ಕಾಲದಲ್ಲಿ ಅಲ್ಲಿ ವಾಯುಮಂಡಲ ಇದ್ದಿದ್ದರೆ, ಅದೇ ಸೂರ್ಯೋಷ್ಣದಿಂದ ಕಾದು ಕ್ಷೋಭೆಗೊಂಡ ವಾಯಕಣಗಳನ್ನು ಹಿಡಿದಿಡಲು ಚಂದ್ರಗುರುತ್ವಬಲಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ವಾಯುಕಣಗಳು ಚಂದ್ರನಲ್ಲಿನ ವಿಮೋಚನ ವೇಗವನ್ನು ಮೀರಿ ಜಿಗಿದು ವಿಶಾಲಾಕಾಶದಲ್ಲಿ ಸ್ವತಂತ್ರವಾಗಿರಬೇಕು. ಚಂದ್ರನಲ್ಲಿ ವಾಯುಮಂಡಲ, ಅದರಂತೆಯೇ ಜಲರಾಶಿ ಇಲ್ಲದಿರುವುದಕ್ಕೆ ಚಂದ್ರ ವಿಮೋಚನವೇಗ ಬಲು ಕಡಿಮೆ ಆಗಿರುವುದು ಒಂದು ಮುಖ್ಯ ಕಾರಣ.
6. ವಾಯುಮಂಡಲ ಮತ್ತು ಜಲರಾಶಿ : ಚಂದ್ರನಲ್ಲಿ ಇವೆರಡೂ ಇಲ್ಲ. ಚಂದ್ರನ ಮೇಲೆ ಮಾನವ ಇಳಿವ ಮೊದಲೇ ಅಥವಾ ಚಂದ್ರನ ಸಮೀಪ ದೃಶ್ಯಗಳನ್ನು ಆಧುನಿಕ ತಂತ್ರಗಳಿಂದ ಪಡೆಯುವ ಮೊದಲೇ ಈ ವಿಚಾರದಲ್ಲಿ ಸಾಕಷ್ಟು ಖಚಿತ ಜ್ಞಾನ ಅವನಿಗಿತ್ತು. ವಾಯುಮಂಡಲ ಸೂರ್ಯನ ಬೆಳಕನ್ನು ಚದರಿಸುತ್ತದೆ. ಚದರುವಿಕೆಯ ಪರಿಣಾಮಗಳನ್ನು ದೂರವೀಕ್ಷಣೆಯಿಂದ ಅಳೆಯಬಹುದು. ಚಂದ್ರನಲ್ಲಿ ಇಂಥ ಚದರಿಕೆಯ ಯಾವ ಲಕ್ಷಣಗಳನ್ನೂ ಗುರುತಿಸಲಾಗಿಲ್ಲ. ಅಲ್ಲದೆ ಸೂರ್ಯಗ್ರಹಣದ ಸಂದರ್ಭದಲ್ಲಿ ಚಂದ್ರಬಿಂಬದ ಹರಿತವಾದ ಅಂಚನ್ನು ಗುರುತಿಸಲಾಗಿದೆ; ಅಲ್ಲಿ ವಾಯುಮಂಡಲವಿದ್ದು ಬೆಳಕಿನ ಚದರಿಕೆ ಆಗಿದ್ದರೆ ಬಿಂಬದ ಅಂಚು ಮಸುಕಾಗುತ್ತಿತ್ತು. ವಾಯುಮಂಡಲದ ಅಭಾವದಿಂದಾಗಿ ಚಂದ್ರನ ಮೇಲ್ಮೈಯಲ್ಲಿ ಉಷ್ಣತೆಯ ಏರಿಳಿತಗಳು ಬಲು ತೀವ್ರವಾಗಿರುತ್ತವೆ. ಹಠಾತ್ತಾಗಿಯೂ ಇರುತ್ತವೆ. ಚಂದ್ರನ ಸೂರ್ಯಮುಖ ಪಾಶರ್ವ್ದಲ್ಲಿ ಉಷ್ಣತೆ ನೀರಿನ ಕುದಿಬಿಂದುವಿಗಿಂತ (1000.ಸೆ.) ಹೆಚ್ಚಿದ್ದರೆ ಸೂರ್ಯವಿಮುಖ ಪಾಶರ್ವ್ದಲ್ಲಿ ಅದು-1730 ಸೆ. ನಷ್ಟು ಕೆಳಕ್ಕೆ ಇಳಿದಿರುವುದುಂಟು. ಉಷ್ಣತೆಯ ಏರಿಳಿತಗಳ ಈ ಅತಿವ್ಯಾಪ್ತಿಯ ಪ್ರದೇಶದಲ್ಲಿ ಜಲರಾಶಿ ಇದ್ದಿದ್ದರೆ ಅದು ಉಗಿ-ಬರ್ಫ ಸ್ಥಿತಿಗಳ ನಡುವೆ ಆಂದೋಲಿಸುತ್ತಿರಬೇಕಾಗಿತ್ತು. ಆದರೆ ಆ ಮೊದಲೇ ಉಗಿಯ ಕಣಗಳು ಚಂದ್ರತಲದಿಂದ ಜಿಗಿದು ಮುಕ್ತವಾಗಿಬಿಡುತ್ತಿದ್ದುವು. ಹೀಗೆ ವಾಯು ಹಾಗು ಜಲರಾಹಿತ್ಯದ ಪರಿಣಾಮವಾಗಿ ಚಂದ್ರನಲ್ಲಿ ಯಾವ ತರಹದ ಜೀವಿಗಳ ಉಗಮ ಮತ್ತು ವಿಕಾಸವೂ ಸಾಧ್ಯವಾಗಲಿಲ್ಲ. ಚಂದ್ರ ಒಂದು ನಿರ್ಜೀವ ಜಗತ್ತು.
7. ನೈಸರ್ಗಿಕ ಬಲಗಳು : ಭೂಮಿಯ ಮೆಲೆ ವರ್ತಿಸುವ ನೈಸರ್ಗಿಕ ಬಲಗಳು ಪ್ರಧಾನವಾಗಿ ಏಳು: ಸೂರ್ಯಾಕರ್ಷಣೆ, ಚಂದ್ರಾಕರ್ಷಣೆ, ಸೂರ್ಯೋಷ್ಣ, ಉಲ್ಕಾಪಾತ, ವಾಯುಮಂಡಲದ ಕ್ಷೋಭೆ, ಜಲರಾಶಿಯ ಬಡಿತ, ಆಂತರಿಕ ಬಲಗಳು (ಭೂಕಂಪನ). ಇವುಗಳ ಪೈಕಿ, ಭೂಮಿಯ ಸ್ವರೂಪದ ಮೇಲೆ ತೀವ್ರ ಕುರುಹುಗಳನ್ನು ಮಾಡುವ ಬಲಗಳೆಂದರೆ ಸೂರ್ಯೋಷ್ಣ, ವಾಯು ಜಲರಾಶಿಗಳ ಕ್ಷೋಭೆ ಹಾಗೂ ಆಂತರಿಕ ಬಲಗಳು. ಪರ್ವತಗಳ ಹುಟ್ಟು, ಬೆಳೆವಣಿಗೆ, ಅಳಿವು, ನೆಲದ ಸವಕಳಿ, ಸಸ್ಯರಾಶಿಯ ವ್ಯಾಪ್ತಿ ಮುಂತಾದ ಸಮಸ್ತ ಬದಲಾವಣೆಗಳಿಗೂ ಕಾರಣಗಳಿವು. ಇನ್ನು ಉಲ್ಕಾಪಾತವನ್ನು ಸಮರ್ಥವಾಗಿ ತಡೆಹಿಡಿದು ಭೂಮಿಯ ಮೇಲ್ಮೈಗೆ ರಕ್ಷೆ ಒದಗಿಸುವ ಹೊದಿಕೆಯೇ ವಾಯುಮಂಡಲ. ಆದ್ದರಿಂದ ಉಲ್ಕೆಗಳ ಪತನದಿಂದ ಭೂಮೇಲ್ಮೈಯಲ್ಲಿ ಆಗಿರುವ ಹಾನಿ ಅತ್ಯಲ್ಪ. ಚಂದ್ರನಲ್ಲಾದರೋ ವಾಯು ಹಾಗೂ ಜಲರಾಶಿಗಳ ಅಭಾವದಿಂದಾಗಿ ಅಲ್ಲಿನ ಮೇಲ್ಮೈಸ್ವರೂಪವನ್ನು ತೀವ್ರವಾಗಿ ಬದಲಾಯಿಸಬಲ್ಲ ಎರಡು ಪ್ರಧಾನ ನೈಸರ್ಗಿಕ ಬಲಗಳೇ ಇಲ್ಲವಾಗಿವೆ. ಇನ್ನು ಭೂಮಿ ಹಾಗೂ ಸೂರ್ಯಾಕರ್ಷಣೆಗಳು ಉಂಟುಮಾಡುವ ಬದಲಾವಣೆಗಳು ದೀರ್ಘಕಾಲದಲ್ಲಿ ಅತ್ಯಲ್ಪ. ಆದ್ದರಿಂದ ಚಂದ್ರಸ್ವರೂಪವನ್ನು ಬದಲಾಯಿಸುವ ನೈಸರ್ಗಿಕ ಬಲಗಳೇನಿದ್ದರೂ ಅವು ಮುಖ್ಯವಾಗಿ ಸೂರ್ಯೋಷ್ಣ, ಉಲ್ಕಾಪಾತ ಹಾಗೂ ಆಂತರಿಕಬಲಗಳು. ಈ ಹಿಂದೆ ಹೇಳಿದಂತೆ ಚಂದ್ರನ ಮೇಲೆ ಸೂರ್ಯೋಷ್ಣತೆ-1730 ಸೆ. ಯಿಂದ ತೊಡಗಿ 1000 ಸೆ. ಅನ್ನೂ ಮಿಕ್ಕಿ ವ್ಯತ್ಯಯವಾಗುತ್ತದೆ. ಇದರಿಂದ ಬಂಡೆ, ನೆಲ, ಕಮರಿ ಎಲ್ಲವೂ ಅತಿ ತೀವ್ರ ಉಷ್ಣತೆಗಳ ನಡುವೆ ಏರಿಳಿಯುವುವು. ಬಂಡೆಗಳು ಒಡೆದು ಕಲ್ಲು ಚೂರು ಹೋಗಿ ಕ್ರಮೇಣ ದೂಳಾಗುವುದು ಈ ಏರಿಳಿತದ ಪರಿಣಾಮ. ಚಂದ್ರಪರ್ವತಗಳ ಬದಿಗಳು ತೀರ ಕಡಿದಾಗಿರುತ್ತವೆ. ಚಂದ್ರತಲದ ಮೇಲೆ ನೇರವಾಗಿ ಬೀಳುವ ಉಲ್ಕಾವೃಷ್ಟಿಯಿಂದ ಸಾಕಷ್ಟು ಕಲೆಗಳೂ ಕೂಪಗಳೂ ಉಂಟಾಗುವುವು. ಚಂದ್ರನಲ್ಲಿ ಆಂತರಿಕ ಬಲಗಳು ಇವೆಯೋ ಇಲ್ಲವೇ ಎನ್ನುವುದು ಪತ್ತೆಯಾಗಿಲ್ಲ. ಜ್ವಾಲಾಮುಖಿಗಳ ಅಸ್ತಿತ್ವದ ಬಗ್ಗೆ ಸ್ಪಷ್ಟ ಪುರಾವೆ ಲಭಿಸಿಲ್ಲ. ಅಂದರೆ ಚಂದ್ರಗರ್ಭ ಸಹ ಘನೀಭವಿಸಿ ಹೋಗಿದೆಯೇ (ಭೂಮಿಯಲ್ಲಿ ಹೀಗಾಗಿಲ್ಲವಷ್ಟೆ?) ಅಥವಾ ಚಂದ್ರನ ತೊಗಟೆ ಸಾಕಷ್ಟು ದಪ್ಪ ಮತ್ತು ಗಡಸಾಗಿದ್ದು ಸುಪ್ತ ಜ್ವಾಲಾಮುಖಿಗಳ ಪ್ರಕಟಣೆಯನ್ನು ಅದುಮಿಟ್ಟಿದೆಯೇ? ಉತ್ತರ ಖಚಿತವಿಲ್ಲ. ಮೊದಲಿಗೆ ಚಂದ್ರನ ಮೇಲೆ ವಿಪುಲವಾಗಿ ಕಾಣಬರುವ ಕೂಪ ಮತ್ತು ಕುಳಿಗಳು ಚಂದ್ರನಲ್ಲಿ ಒಂದು ಕಾಲದಲ್ಲಿ ಕ್ರಿಯಾಶೀಲವಾಗಿದ್ದು ಈಗ ಸುಪ್ತವಾಗಿರಬಹುದಾದ ಜ್ವಾಲಾಮುಖಿಗಳ ಪರಿಣಾಮವಾಗಿರಬಹುದು; ಆಗ ಜ್ವಾಲಾಮುಖಿಗಳಿಂದ ಪ್ರವಹಿಸಿದ ಲಾವಾರಸ ಹರಿದು ಆಕಾರರಹಿತ ಕೊರಕಲು ಕಣಿವೆಗಳಿಗೆ ಲೇಪನಗೊಂಡು ಕೂಪಗಳಾಗಿರಬಹುದೆಂಬ ವಾದ ಇದ್ದಿತು. ಹೀಗಲ್ಲದೆ, ಚಂದ್ರತಲ ಇನ್ನೂ ಮಿದುವಾಗಿದ್ದಾಗ ಅಲ್ಲಿ ಪತನವಾದ ಉಲ್ಕೆಗಳಿಂದಾದ ಗಾಯಗಳು ಈ ಕೂಪ ಹಾಗೂ ಕುಳಿಗಳಾಗಿರಬಹುದೆಂಬ ವಾದವೂ ಸಹ ಇದ್ದಿತು. ಆದರೆ ಇಂದು ವಿಜ್ಞಾನಿಗಳು ಚಂದ್ರನ ಮೇಲೆ ಇರುವ ಕಡುಬೂದಿ ಬಣ್ಣದ ಬೃಹತ್ ತಗ್ಗಿನ ಪ್ರದೇಶಗಳು ಚಂದ್ರನಿಗೆ ಬೃಹತ್ ಉಲ್ಕೆಗಳು ಅಪ್ಪಳಿಸಿದ ನಂತರ ಚಂದ್ರನ ಮೇಲ್ಮೆಯಡಿಯಿಂದ ಹರಿದ ಲಾವಾರಸದಿಂದ ಉಂಟಾಗಿವೆ ಎಂದು ನಂಬಿದ್ದಾರೆ.
8. ಪ್ರಾಕೃತಿಕ ಸ್ಥಿತಿ : ಹುಣ್ಣಿಮೆಯ ರಾತ್ರಿಯ ಪುರ್ಣಚಂದ್ರಬಿಂಬವನ್ನು ಬರಿಗಣ್ಣಿನಿಂದಲೇ ನೋಡಿ ಅದರ ಬಣ್ಣ ಏಕರೀತಿಯಾಗಿಲ್ಲ ಎಂಬುದನ್ನು ಅರಿಯಬಹುದು. ಗೆಲಿಲಿಯೋ (1564-1642) ತಾನೇ ರೂಪಿಸಿದ ದೂರದರ್ಶಕದಿಂದ ಚಂದ್ರನತ್ತ ನೋಡಿದಾಗ ಚಂದ್ರನ ಮೇಲೆ ಪರ್ವತಾವಳಿಗಳೂ ಕೂಪಕಮರಿಗಳೂ ಇದ್ದುದು ಸ್ಪಷ್ಟವಾಗಿ ಗೋಚರವಾಯಿತು. ಸಮುದ್ರಗಳಂತೆ ಗೋಚರಿಸಿದ ಪ್ರದೇಶಗಳನ್ನು ಆಗ ಗುರುತಿಸಿ ಅವುಗಳಿಗೆ ಹೆಸರಿಸಲಾಯಿತು. ಡಾನ್ಝಿಗಿನ ಜಾನ್ ಹೆವೆಲ್ (1611-1687) ಎಂಬಾತ 1647ರಲ್ಲಿ ಸೆಲೆನೋಗ್ರಾಫಿಯ ಎಂಬ ಗ್ರಂಥವನ್ನು ಪ್ರಕಟಿಸಿದ. ಅದರಲ್ಲಿ ಅವನು ದೃಗ್ಗೋಚರ ಚಂದ್ರಪಾಶರ್ವ್ದ ಪ್ರಧಾನ ಏರು ತಗ್ಗುಗಳನ್ನೆಲ್ಲ ಗುರುತಿಸಿ ಹೆಸರಿಸಿದ್ದ. ಅಂದಿನ ನಂಬಿಕೆಯ ಪ್ರಕಾರ ಚಂದ್ರನಲ್ಲಿ ಭೂಮಿ ಯಲ್ಲಿರುವಂತೆಯೇ ಖಂಡಗಳೂ ಸಮುದ್ರಗಳೂ ಇವೆ, ಜೀವಿಗಳ ನಿವಾಸವದು-ಅಂದರೆ ಭೂಮಿಯಂತೆ ಇರುವ ಇನ್ನೊಂದು ಲೋಕ ಚಂದ್ರ-ಎಂದಿತ್ತು. ಆದರೆ ಇಂದು, ಈ ಮೊದಲೇ ಹೇಳಿರುವಂತೆ, ಚಂದ್ರ ಒಂದು ಬರಡು ಲೋಕ ಎಂದು ಈಗ ಚೆನ್ನಾಗಿ ಗೊತ್ತಿದೆ. ಚಂದ್ರನಲ್ಲಿರುವ ಪರ್ವತ, ಕಣಿವೆ, ಕೂಪ ಮುಂತಾದವು ಭೂಮಿಯಲ್ಲಿನ ಸಂವಾದೀ ಏರುತಗ್ಗುಗಳಿಗಿಂತ ಭಿನ್ನ ಸ್ವರೂಪದವು. ಅಲ್ಲಿ ವರ್ತಿಸುವ ಬಲಗಳೇ ಬೇರೆ, ಇಲ್ಲಿ ವರ್ತಿಸುವ ಬಲಗಳೇ ಬೇರೆ ಆಗಿರುವುದು ಇದರ ಕಾರಣ.
9. ಸಮುದ್ರಗಳು : ಚಂದ್ರಬಿಂಬಕ್ಕೆ ಮೊಲದ ಮುದ್ರೆ ಒತ್ತಿರುವ ಮಹಾ ಆಳಗಳಿವು; ನೀರಿಲ್ಲದ ಬರಡುಪ್ರದೇಶಗಳು. ಮೊದಲು ತಪ್ಪಾಗಿ ಕರೆಯಲ್ಪಟ್ಟ ಮಾರಿಯಾ (ಲ್ಯಾಟನಿನಲ್ಲಿ ಸಮುದ್ರಗಳು) ಎಂಬ ಹೆಸರೇ ಇಂದಿಗೂ ಉಳಿದುಕೊಂಡಿದೆಯಷ್ಟೆ. ಈ ಸಮುದ್ರಗಳು ಒಣ, ವಿಶಾಲ, ಮಟ್ಟಸ, ತಗ್ಗು ನೆಲಗಳು. ಹೀಗಾಗಿ ಆಸುಪಾಸಿನ ನೆಲಕ್ಕಿಂತ ಮಂದ ಕಳೆಯವಾಗಿ ಇವು ಕಾಣುತ್ತವೆ. ಚಂದ್ರನ ದೃಗ್ಗೋಚರ ಪಾಶರ್ವ್ದಲ್ಲಿರುವ 15 ಸಮುದ್ರಗಳ ಪೈಕಿ ಅತಿ ದೊಡ್ಡದು ಇಂಬ್ರಿಯಮ್ ಸಮುದ್ರ. ಇದು ಅಡ್ಡವಾಗಿ 1125 ಕಿ.ಮೀ. ನಷ್ಟು ವ್ಯಾಪಿಸಿದೆ. ಹೆಚ್ಚಿನ ಸಮುದ್ರಗಳಿಗೆ ಸ್ಥೂಲವಾದ ವರ್ತುಲಾಕಾರ ಉಂಟು. ಇವುಗಳಲ್ಲಿ ಹೆಚ್ಚಿನವು ಪರಸ್ಪರ ಸಂಯೋಜಿತವಾಗಿವೆ, ಕೆಲವು ಒಂದರ ಮೇಲೊಂದು ವ್ಯಾಪಿಸಿವೆ ಕೂಡ. ಇಂದಿನ ತಿಳಿವಳಿಕೆಯ ಪ್ರಕಾರ ತಳಗಳು ನಾವು ಭಾವಿಸಿರುವಷ್ಟು ನುಣುಪಾಗಿ ಏನೂ ಇಲ್ಲ. ಸಾವಿರಾರು ಗುಳಿಗಳು ಕೂಪಗಳು ಒಂದೊಂದು ಸಮುದ್ರತಳದಲ್ಲೂ ಇವೆ. ಸೂರ್ಯನ ಬೆಳಕು ಅವುಗಳ ಮೇಲೆ ಬಿದ್ದಾಗ ಕೆಲವು ತಳಗಳು ಅಲೆ ಅಲೆಯಂಥ ಬೆಳಕನ್ನು ಪ್ರತಿಫಲಿಸುವುದೂ ಕಂಡುಬಂದಿದೆ. ಇನ್ನು ಕೆಲವು ತಳಗಳಲ್ಲಿ ಗುಡ್ಡಗಳಿವೆ. ಉದಾಹರಣೆಗೆ ನ್ಯೂಬಿಯಮ್ ಸಮುದ್ರ ತಳದಲ್ಲಿರುವ ನೇರ ಗೋಡೆ (ಸ್ಟ್ರೇಟ್ ವಾಲ್). ಇದರ ಎತ್ತರ ಸುಮಾರು 180 ಮೀ. ಉದ್ದ ಸುಮಾರು 130 ಕಿ.ಮೀ. ಮೊದಲಿಗೆ ಮಾನವರಹಿತ ಸರ್ವೇಯರ್ ಆಕಾಶನೌಕೆಗಳು ಮತ್ತು ನಂತರ ಗಗನಯಾತ್ರಿಗಳಿದ್ದ ಅಮೆರಿಕದ ಅಪೊಲೋ ಅಂತರಿಕ್ಷ ನೌಕೆಗಳು ಚಂದ್ರನ ಸಮುದ್ರ ತಳಗಳ ಮೇಲೆ ಇಳಿದು ದತ್ತಾಂಶಗಳನ್ನು ಭೂಮಿಗೆ ಪ್ರಸರಿಸಿವೆ. ಅಲ್ಲಿನ ವಸ್ತುಸ್ಥಿತಿಗಳ ಬಗ್ಗೆ ಗಮನಾರ್ಹ ಸಾದೃಶ್ಯ ಉಂಟು. ಸುಮಾರು 5-10 ಮೀ. ದಪ್ಪದ ಭಗ್ನಾವಶೇಷಗಳು ಅಲ್ಲಿ ತುಂಬಿವೆ. ದೂಳು, ಸುಮಾರು 0.0025 ಸೆಂ.ಮೀ. ವ್ಯಾಸದ ಸೂಕ್ಷ್ಮಕಣಗಳು, ಮರಳ ಹರಳುಗಳು ಇವುಗಳ ಮಿಶ್ರಣವೇ ಈ ಭಗ್ನಾವಶೇಷ. ಇದರ ಸರಾಸರಿ ಸಾಂದ್ರತೆ ಗ್ರಾಂ/ಘನಸೆಂ.ಮೀ.ಗೆ 0.7 ರಿಂದ 1.2ರ ನಡುವೆ ಉಂಟು. ಈ ವಸ್ತುವನ್ನು ಅದುಮಬಹುದಾದರೂ ಇದು ಮನುಷ್ಯನ ತೂಕವನ್ನು ಸುಲಭವಾಗಿ ಭರಿಸಬಲ್ಲುದು.
10 ಕೂಪಗಳು : ವ್ಯಾಸ 1.5 ಕಿ.ಮೀ. ನಿಂದ ತೊಡಗಿ 300 ಕಿಮೀ. ವರೆಗೆ ಇರುವ ವರ್ತುಲೀಯ ತಗ್ಗುಗಳಿವು. ಇನ್ನೂ ಚಿಕ್ಕವುಗಳಿಗೆ ಗುಳಿಗಳೆಂದು ಹೆಸರು. ಚಂದ್ರನ ಮೇಲ್ಮೈಯಲ್ಲಿ ಸಮುದ್ರಗಳಾದ ಬಳಿಕ ಇವುಗಳಿಗೆ ಅಧಿಕ ಪ್ರಾಧಾನ್ಯ ಉಂಟು. ಭೂಮಿಯಿಂದ ವೀಕ್ಷಿಸಿ ಸುಮಾರು 30,000 ದಷ್ಟು ಕೂಪಗಳನ್ನು ಲೆಕ್ಕ ಮಾಡಲಾಗಿತ್ತು. ಇವುಗಳ ಪೈಕಿ ಕ್ಲೇವಿಯಸ್ ಮತ್ತು ಗ್ರಿಮಾಲ್ಡಿ ಎಂಬವು ಅತಿ ದೊಡ್ಡವು. ಇವುಗಳ ವ್ಯಾಸ ಸುಮಾರು 240 ಕಿಮೀ. ವಿಖ್ಯಾತ ವಿಜ್ಞಾನಿಗಳ ಹೆಸರಿನಿಂದ ಕೂಪಗಳನ್ನು ಹೆಸರಿಸಲಾಗಿದೆ-ಟೈಕೊ, ಕೊಪರ್ನಿಕಸ್, ಕೆಪ್ಲರ್ ಇತ್ಯಾದಿ. ಸಮುದ್ರಗಳು ವ್ಯಾಪಿಸಿಲ್ಲದ ಚಂದ್ರ ಪ್ರದೇಶದಲ್ಲಿ ಕೂಪಗಳು ಹೆಚ್ಚಾಗಿ ಇರುವುದನ್ನು ಗುರುತಿಸಲಾಗಿದೆ. ಇನ್ನು ಸಮುದ್ರಗಳ ಒಳಗೇ ಪರಿಶೀಲಿಸಿದರೆ ಇರುವ ಕೂಪಗಳ ಸಂಖ್ಯೆ ಹೋಲಿಕೆಯಿಂದ ಕಡಿಮೆ. ಆದ್ದರಿಂದ ಚಂದ್ರತಲದಲ್ಲಿ ಕೂಪಗಳ ಉಗಮ ಮೊದಲು ಆಗಿರಬೇಕೆಂದೂ ಸಮುದ್ರಗಳ ಉಗಮ ಅನಂತರದ ವಿದ್ಯಮಾನವೆಂದೂ ಭಾವಿಸುವುದುಂಟು. ಸಾಧಾರಣ ಗಾತ್ರದ ಹೆಚ್ಚಿನ ಕೂಪಗಳು ವೃತ್ತಾಕಾರವಾಗಿವೆ. ಅವುಗಳಿಗೆ ಹೊರಗೋಡೆಗಳಿವೆ-ಇವುಗಳ ಎತ್ತರ ತಳದಿಂದ 300 ಮೀ. ಗಿಂತಲೂ ಹೆಚ್ಚಾಗಿರುವುದು ಅಪರೂಪವಲ್ಲ. ಪರಿಸರದ ನೆಲಕ್ಕಿಂತ ಕೂಪದ ತಳ ಎತ್ತರ ಮಟ್ಟದಲ್ಲಿರುವುದೂ ಉಂಟು. ಆದರೆ ಇದು ವಿರಳ. ಹೆಚ್ಚಿನ ಕೂಪಗಳಲ್ಲಿ ತಳ ಆಸುಪಾಸಿನ ನೆಲಕ್ಕಿಂತ ತಗ್ಗಿನಲ್ಲೇ ಇದೆ. ಕೂಪಗಳ ಒಳಗೋಡೆಗಳು ಹೊರಗೋಡೆಗಳಿಗಿಂತ ತೀರ ಕಡಿದಾಗಿ ಇರುವುದರಿಂದ ಪ್ರತಿಯೊಂದು ಕೂಪವೂ ಭಯಂಕರ ಮೃತ್ಯುಕೂಪ ದಂತೆಯೇ ಇರುವುದು. ವಿಶಾಲ ಕೂಪಗಳಲ್ಲಿ ಹೆಚ್ಚಿನವುಗಳ ಕೇಂದ್ರದಲ್ಲಿ ಪರ್ವತಾವಳಿಗಳು ಚಾಚಿಕೊಂಡಿವೆ. ಬಂiÀÄಲು ನೆಲದ ಮೇಲೆ ಬಾಂಬ್ ಬಿದ್ದು ಆಸ್ಫೋಟಿಸಿದಾಗ ಉಳಿಯುವ ಗುರುತನ್ನು ಹೆಚ್ಚಿನ ಕೂಪಗಳು ಹೋಲುವುವು. ಅಂದರೆ ಪ್ರಬಲ ಆಘಾತದ ಪರಿಣಾಮ ಈ ಕೂಪಗಳು ಎಂದು ಭಾವಿಸಬಹುದು. ಬಾಹ್ಯವಸ್ತುಗಳ ತಾಡನೆಯೋ ಆಂತರಿಕ ಜ್ವಾಲಾಮುಖಿಗಳ ಆಸ್ಫೋಟನೆಯೋ ಕೂಪಗಳನ್ನು ರೂಪಿಸಿರಬೇಕು. ಹಿಂದೊಮ್ಮೆ ಕ್ರಿಯಾಪಟುಗಳಾಗಿದ್ದ ಜ್ವಾಲಾಮುಖಿಗಳಿಂದ ಪ್ರವಹಿಸಿದ ಲಾವಾರಸ ಹರಿದು ಆಕಾರರಹಿತ ಕೊರಕಲು ಕಣಿವೆಗಳಿಗೆ ಲೇಪನಗೊಂಡು ಕೂಪಗಳಾಗಿರಬಹುದೆಂಬ ಊಹೆ ಮೊದಲು ಇದ್ದಿತು. ಇವುಗಳ ಗಾತ್ರ ಮತ್ತು ರೂಪ ಬದಲಾದದ್ದನ್ನು ಗಮನಿಸಲಾಗಿದೆ. ಪುರ್ಣಚಂದ್ರಗ್ರಹಣ ಕಾಲದಲ್ಲಿ ಕೆಲವು ಕೂಪಗಳು ಸ್ವಂತ ಪ್ರಕಾಶವನ್ನು ಬೀರುವುದನ್ನು ಗುರುತಿಸಿದ್ದಾರೆ. ಅವುಗಳ ಒಳಗಿರುವ ಲೋಹಾಂಶಗಳ ವಿಶ್ಲೇಷಣೆ ಸಾಕಷ್ಟು ಆದ ಮೇಲೆ ಇದರ ಕಾರಣ ತಿಳಿಯಬಹುದು.
11 ಪರ್ವತಗಳು : ಚಂದ್ರನಲ್ಲಿ ಸಾಕಷ್ಟು ಪರ್ವತಸಮೂಹಗಳೇ ಇವೆ-ಆಲ್ಪ್್ಸ, ಆಪೆನ್ನೈನ್ಸ್, ಕಾರ್ಪೇಥಿಯನ್ಸ್ ಇತ್ಯಾದಿ. ಈ ಹೆಸರುಗಳು ಭೂಮಿಯ ಮೇಲಿನ ಪರ್ವತಾವಳಿಗಳ ಹೆಸರುಗಳಿಂದಲೇ ಪ್ರಭಾವಿತವಾದವು. ಆದರೆ ಸಾದೃಶ್ಯ ಇಲ್ಲಿಗೆ ಮುಕ್ತಾಯವಾಗುತ್ತದೆ. ಮಳೆಯ ಹೊಡೆತ, ಗಾಳಿಯ ಬಡಿತ, ನೀರಿನ ಹರಿಯುವಿಕೆ ಯಿಂದಾಗುವ ಸವಕಳಿ, ಗಿಡಮರಗಳ ನಿರಂತರ ಪ್ರಭಾವ ಇವೇ ಮುಂತಾದವುಗಳಿಂದ ಭೂಮಿಯ ಮೇಲಿನ ಪರ್ವತಾವಳಿಗಳ ಬಾಹ್ಯ ರೂಪಗಳಲ್ಲಿ ತೀವ್ರ ವ್ಯತ್ಯಾಸಗಳು ತಲೆದೋರಿವೆ. ಇಂಥ ಯಾವ ಸಮಸ್ಯೆಯೂ ಇಲ್ಲದಿರುವ ಚಂದ್ರಲೋಕದ ಬೆಟ್ಟಗುಡ್ಡಗಳು ಹೆಚ್ಚು ಕಡಿಮೆ ಅವು ಮೈದಳೆದ ಕಾಲದ ನಗ್ನರೂಪದಲ್ಲಿಯೇ ಇಂದಿಗೂ ಇವೆ. ಕಡಿದಾದ ಮೈಗಳು, ನೆಲದಿಂದ ಹಠಾತ್ತಾಗಿ ಅಂತರಿಕ್ಷಕ್ಕೆ ಚಾಚಿರುವ ಶಿಖರಾಗ್ರಗಳು, ಒಂಟಿ ಬಂಡೆಗಳು ಮುಂತಾದವು ಚಂದ್ರಪರ್ವತಗಳ ವೈಶಿಷ್ಟ್ಯ. ಅತ್ಯುನ್ನತ ಶಿಖರದ ಎತ್ತರ 7,620 ಮೀ. ವರೆಗೂ ಇದೆ. (ಅತ್ಯುನ್ನತ ಎವರೆಸ್ಟಿನ ಎತ್ತರ 8,839 ಮೀ.). ಅಪೆನ್ನೈನ್ಸ್ ಪರ್ವತ ಶ್ರೇಣಿಗಳಲ್ಲಿ ಹ್ಯಾಡ್ಲೀ ಎಂಬವನ ಹೆಸರಿನ ರಿಲ್ ಅಥವಾ ಕಣಿವೆ ಎದ್ದು ತೋರುವ ಉದ್ದವಾದ ಒಂದು ಬಿರುಕು. ಸರಿ ಸುಮಾರು ಒಂದೇ ದಪ್ಪದ ನಳಿಗೆ ಅಡ್ಡಾದಿಡ್ಡಿ ಹರಿದಂತೆ ಇದರ ವ್ಯಾಪ್ತಿ ಉಂಟು. ಇದು ಪರ್ವತದಿಂದ ತೊಡಗಿ ಪಕ್ಕದ ಸಮುದ್ರದವರೆಗೂ ಹಬ್ಬಿಕೊಂಡಿದೆ. ಈ ವಲಯದ ಚಿತ್ರಗಳ ಪರಿಶೀಲನೆಯಿಂದ ತಿಳಿದಿರುವುದಿಷ್ಟು: ಹ್ಯಾಡ್ಲೀ ಕಣಿವೆಯ ಎರಡು ಪಕ್ಕಗಳ ಗೋಡೆಗಳಿಂದ ಹೊಸತಾಗಿ ಕಲ್ಲುಗಳು ಉರುಳಿರುವ ಗಾಯಗಳನ್ನು ಗುರುತಿಸಲಾಗಿದೆ; ಈ ಕಣಿವೆ ಒಂದು ಸಮುದ್ರದ ತಳವನ್ನು ಸೇರಿ ಅಲ್ಲಿಯೂ ಕೊರೆದುಕೊಂಡು ಮುಂದೆ ಹೋಗಿದೆ. ಇದರ ಹರಿವಿನ ಪುರ್ಣ ಅಧ್ಯಯನ ಚಂದ್ರನ ವಿವಿಧ ಸ್ತರಗಳ ರಚನೆ, ರೂಪಾಂತರ, ವಯಸ್ಸು ಮುಂತಾದವುಗಳಿಗೆ ಹೆಚ್ಚಿನ ಒಳನೋಟ ನೀಡಿದೆ. 12 ಮ್ಯಾಸ್ಕನುಗಳು : ಚಂದ್ರನಲ್ಲಿ ಅಧಿಕ ದ್ರವ್ಯರಾಶಿ ಕೇಂದ್ರೀಕೃತ ಸ್ಥಳಗಳಿಗೆ ಈ ಹೆಸರುಂಟು. ಒಂSs ಅಔಓಛಿeಟಿಣಡಿಚಿಣioಟಿ ಎಂಬ ಪದಗಳ ಸಂಯೋಜಿತ ಸಂಕ್ಷೇಪ ರೂಪ ಒಂSಅಔಓ. ಚಂದ್ರನ ಸುತ್ತ ಪ್ರರಿಭ್ರಮಿಸಲು ನಿಯೋಜಿಸಿದ ಆಂತರಿಕ್ಷ ನೌಕೆಗಳ ಕಕ್ಷಾವೇಗಗಳನ್ನು ಕರಾರುವಾಕ್ಕಾಗಿ ನಿರ್ಧರಿಸಲಾಗಿತ್ತು. ಆದರೆ ವಾಸ್ತವಿಕ ಕಕ್ಷಾವೇಗಗಳು ಸೈದ್ಧಾಂತಿಕ ಕಕ್ಷಾವೇಗಗಳಿಂದ ವಿಚಲನೆಗೊಂಡಿದ್ದುದನ್ನು-ಅದೂ ಕೆಲವೆಡೆಗಳಲ್ಲಿ ಮಾತ್ರ-ಗುರುತಿಸಲಾಯಿತು. ಇಂಬ್ರಿಯಮ್, ಸೆರೆನಿಡೆಟಿಸ್, ಕ್ರಿಸಿಯಮ್, ಹ್ಯೂಮರಮ್ ಮತ್ತು ನೆಕ್ಟಾರಿಸ್ ಸಮುದ್ರಗಳ ಮೇಲುಭಾಗಗಳಲ್ಲಿ ಒಂದು ನೌಕೆ ಸಾಗುತ್ತಿದ್ದಾಗ ಅದರ ಕಕ್ಷಾವೇಗ ಏರುತ್ತಿತ್ತು. ಆದ್ದರಿಂದ ಆ ವಲಯಗಳಲ್ಲಿ ಚಂದ್ರನ ಗುರುತ್ವಾಕರ್ಷಣ ಬಲ ಹೆಚ್ಚು ಇರಬೇಕು ಎಂದು ವಿಜ್ಞಾನಿಗಳು ತೀರ್ಮಾನಿಸಿದರು. ಇದರ ಕಾರಣ ಅಲ್ಲಿ ಅಧಿಕ ದ್ಯವ್ಯರಾಶಿ ಕೇಂದ್ರೀಕರಣ. ಇಂಥ ವಲಯಗಳೇ ಮ್ಯಾಸ್ಕನುಗಳು. ದೈತ್ರಗಾತ್ರದ, ಮಹಾಭಾರದ ಹಾಗೂ ಕಬ್ಬಿಣಾಂಶ ಜಾಸ್ತಿ ಇರುವ ಉಲ್ಕಾಪಿಂಡಗಳು ಮ್ಯಾಸ್ಕನ್ ವಲಯಗಳಲ್ಲಿ ಹುದುಗಿ ಕೊಂಡಿರಬಹುದು ಎಂದು ಕೆಲವರ ಊಹೆ. ಚಂದ್ರನ ಒಳಗಿನಿಂದ ಹರಿದ ವಿವಿಧ ಸಾಂದ್ರತೆಗಳ ಲಾವಾರಸ ಈ ತಗ್ಗು ಪ್ರದೇಶಗಳನ್ನು ಆವರಿಸಿ ಅಲ್ಲಿ ದಟ್ಟವಾಗಿ ಘನೀಭವಿಸಿರ ಬಹುದು ಎಂದು ಬೇರೆಯವರ ಅಭಿಪ್ರಾಯ. ಉಲ್ಕಾ ಸಂಘರ್ಷದಿಂದ ಉಂಟಾದ ಕೂಪಗಳನ್ನು ಮುಚ್ಚಲು, ಅಂದು ದ್ರವರೂಪದಲ್ಲಿ ಇದ್ದಿರಬಹುದಾದ ಚಂದ್ರರಸ ಹರಿದು ಈ ವಲಯದಲ್ಲಿ ದಟ್ಟೈಸಿರಬಹುದು ಎಂದು ಮತ್ತೊಂದು ವಿಜ್ಞಾನಿಗಳ ಗುಂಪಿನ ಅಭಿಪ್ರಾಯ. ಈ ಬಗ್ಗೆ ಇನ್ನೂ ಖಚಿತವಾದ ತೀರ್ಮಾನಕ್ಕೆ ಬರಲು ವಿಜ್ಞಾನಲೋಕಕ್ಕಿನ್ನೂ ಸಾಧ್ಯವಾಗಿಲ್ಲ.
13 ಚಂದ್ರನ ಸ್ಮಾರಕಗಳು : ಚಂದ್ರನ ಮೇಲಿಳಿದ ಮನುಷ್ಯ ಅಲ್ಲಿಂದ ಶಿಲೆಗಳನ್ನು ತಂದಿದ್ದಾನೆ. ಇವನ್ನು ಭೂಮಿಯಲ್ಲಿನ ಪ್ರಯೋಗಶಾಲೆಗಳಲ್ಲಿ ವಿಭಜಿಸಿ ಪರೀಕ್ಷಿಸಲಾಗಿದೆ. ಆಯ್ದು ತಂದ ಚಂದ್ರಶಿಲೆಗಳು ಅಗ್ನಿಜನ್ಯ ಅಂದರೆ ಉಷ್ಣಶಕ್ತಿಯಿಂದ ನಿರ್ಮಿತವಾದವುಗಳೆಂದು ಗೊತ್ತಾಗಿದೆ. (ಮ್ಯಾಗ್ಮದ-ಎಂದರೆ ಕಾಯವೊಂದು ಘನೀಭವಿಸುವ ಪುರ್ವಸ್ಥಿತಿಯ ಶಿಲಾದ್ರವದ-ಉಷ್ಣವು ವಿಸರಣೆಯಿಂದ ನಷ್ಟವಾದಂತೆ ಅದು ಹೆಪ್ಪುಗಟ್ಟಿ ಅಕ್ಕಪಕ್ಕದ ಸಂಸ್ತರಗಳ ಒತ್ತಡದಿಂದ ಕಲ್ಲಾಗುವುದು. ಇದೇ ಅಗ್ನಿಜನ್ಯಶಿಲೆ ಅಥವಾ ಅಗ್ನಿಶಿಲೆ. ಭೂಮಿಯಲ್ಲಿ ಇರುವ ಇತರ ಎರಡು ವಿಧದ ಶಿಲೆಗಳು ಜಲಜ ಶಿಲೆಗಳು ಮತ್ತು ರೂಪಾಂತರಿತ ಶಿಲೆಗಳು. ಆದರೆ ಶೇ.95 ರಷ್ಟು ಅಗ್ನಿಶಿಲೆಗಳೇ. ಆದ್ದರಿಂದ ಚಂದ್ರ ಮೊದಲು ಶಿಲಾದ್ರವದ ರೂಪದಲ್ಲಿದ್ದು ಘನೀಭವಿಸಿ ಈಗಿನ ರೂಪಕ್ಕೆ ಬಂದಿರಬಹುದು ಎಂಬ ಊಹೆಗೆ ಬಲವಾದ ಪುರಾವೆ ಲಭಿಸಿದಂತಾಗಿದೆ. ಜಲಜಶಿಲೆ ಇದುವರೆಗೆ (2005) ದೊರೆತಿಲ್ಲ. ಅಗ್ನಿಶಿಲೆಗಳ ಶೋಧನೆಯಿಂದ ಶೀತಲಚಂದ್ರ ಊಹೆಗೆ (ಇದರ ಪ್ರಕಾರ ಚಂದ್ರ ಎಂದೂ ಬಿಸಿಯಾಗಿರಲಿಲ್ಲ; ಆದ್ದರಿಂದ ಅದರ ಗರ್ಭದಲ್ಲಿಯೂ ಉಷ್ಣವಿರುವುದು ಸಾಧ್ಯವಿಲ್ಲ ಎಂದಿದೆ) ಮಂಗಳ ಹಾಡಿದಂತಾಯಿತು. ಈಗ ದೊರೆತಿರುವ ಅಗ್ನಿಶಿಲೆಗಳ ವಯಸ್ಸು 3.1x108 ವರ್ಷಗಳೆಂದು ಅಂದಾಜು. ಇವನ್ನು ಪಡೆದದ್ದು ಚಂದ್ರನ ಸಮುದ್ರದಿಂದ. ಆದ್ದರಿಂದ ಸಮುದ್ರದ ವಯಸ್ಸು ಕನಿಷ್ಠ ಪಕ್ಷ 3.1x108 ವರ್ಷಗಳಾಗಿರಲೇಬೇಕು. ಇದರ ಅರ್ಥ ಚಂದ್ರನ ಸಮುದ್ರಗಳು ಈಚಿನ ರಚನೆಗಳಲ್ಲ; ಇವು ಸಾಕಷ್ಟು ಹಳೆಯವು ಮಾತ್ರವಲ್ಲ, ಲಕ್ಷಾಂತರ ವರ್ಷಗಳಿಂದ ಅದೇ ರೂಪದಲ್ಲಿ ಇವೆ ಕೂಡ. ಭೂಮಿಯಲ್ಲಿ ದೊರೆತಿರುವ ಅತಿ ಪ್ರಾಚೀನ ಶಿಲೆಗಳ ವಯಸ್ಸು ಸುಮಾರು 3.3x108 ವರ್ಷಗಳು. ಈ ಹೋಲಿಕೆಯಲ್ಲಿ ಚಂದ್ರ ಮತ್ತು ಭೂಮಿಯ ಶಿಲೆಗಳು ಸಮಕಾಲೀನವಾಗಿವೆ. ಆದರೆ ಭೂಮಿಯಲ್ಲಿ ಆ ಮೊದಲೂ ಶಿಲೆಗಳಿದ್ದಿರಲಿಲ್ಲ ಎಂದು ತೀರ್ಮಾನಿಸಲಾಗದು. ನೈಸರ್ಗಿಕ ಬಲಗಳ ಹೊಡೆತದಿಂದ ಅವು ಶಿಥಿಲವಾಗಿ ನಾಶವಾಗಿಹೋಗಿರುವ ಸಾಧ್ಯತೆ ಉಂಟು. ಚಂದ್ರನ ಟ್ರಾಂಕ್ವಿಲಿಟಿ ಸಮುದ್ರತಳದಿಂದ ಆಯ್ದು ತಂದ ದೂಳನ್ನೂ ಶಿಲೆಗಳನ್ನೂ ಪರಿಶೀಲಿಸಿದಾಗ ದೂಳಿನ ವಯಸ್ಸು ಸುಮಾರು 4.6x109 ವರ್ಷಗಳೆಂದೂ ಶಿಲೆಗಳ ವಯಸ್ಸು ಸುಮಾರು 3.6x109 ವರ್ಷಗಳೆಂದೂ (ಎಂದರೆ ಶಿಲೆಗಳು ದೂಳಿಗಿಂತ 1x109 ವರ್ಷಗಳಷ್ಟು ತರುಣ) ಕಂಡುಬಂದಿತು. ದೂಳಿನ ಪ್ರಾಯ ಚಂದ್ರನ ಪ್ರಾಯದಷ್ಟೇ (ಇದು ಸರಿಸುಮಾರಾಗಿ 5x109 ವರ್ಷಗಳು).
ಅನಂತರದ ಅಪೋಲೋ 17ರ ಗಗನಯಾತ್ರಿಗಳು ಚಂದ್ರನ ಎತ್ತರ ಪ್ರದೇಶದಲ್ಲಿ ಇಳಿದು ಅಲ್ಲಿಂದ ಸಂಗ್ರಹಿಸಿ ತಂದ ಶಿಲೆಗಳು ಸುಮಾರು 4-4.3 ರಿಂದ 4.3 ಬಿಲಿಯನ್ ವರ್ಷಗಳಷ್ಟು ಹಳೆಯವೆಂದು ಅಂದಾಜು ಮಾಡಲಾಯಿತು. ಈ ನಿಟ್ಟಿನಲ್ಲಿ ಅಪೋಲೋ 17ರ ಗಗನಯಾತ್ರಿಗಳು ತಂದ ಒಂದು ಶಿಲೆಯ ವಯಸ್ಸು ಸುಮಾರು 4.6 ಬಿಲಿಯನ್ ವರ್ಷಗಳೆಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಚಂದ್ರಜನನವಾದ ಸುಮಾರು 1x109 ವರ್ಷಗಳ ತರುವಾಯ, ಎಂದರೆ ಸುಮಾರು 4x109 ವರ್ಷಗಳ ಹಿಂದೆ, ಸಂಭವಿಸಿದ ಕೆಲವು ದುರ್ಘಟನೆಗಳ ಪರಂಪರೆ ಚಂದ್ರನನ್ನು ಭೀಕರವಾಗಿ ಅಲುಗಿಸಿಬಿಟ್ಟಿತು. ಆಗ ಲಾವಾರಸದ (ಅಥವಾ ಚಂದ್ರಶಿಲಾರಸದ) ಪ್ರವಾಹವೇ ಹರಿಯಿತು. ಚಂದ್ರಗರ್ಭದಿಂದ ಹೊರಬಂದ ಲಾವಾರಸ ತಣಿದು ಶಿಲೆಗಳಾಗಿರಬಹುದು ಅಥವಾ ಉಲ್ಕಾ ತಾಡನೆಯಿಂದ ಶಿಲೆ ಕರಗಿ ಮರುರೂಪ ಪಡೆದಿರಬಹುದು. ಎರಡನೆಯ ಕಾರಣ ಸಮರ್ಪಕ ಎಂದು ಭಾವಿಸಿದರೆ ಅಂಥ ದುರ್ಘಟನೆಯ ಕುರುಹು ಚಂದ್ರನ ನೆರೆಕಾಯವಾದ ಭೂಮಿಯಲ್ಲಿಯೂ ಕಾಣಬೇಕು. ಬಹುಶಃ ಈ ಕಾರಣದಿಂದ ವಿಜ್ಞಾನಿಗಳಿಗೆ ಭೂಮಿಯ ಮೇಲೆ 3.6 x 109 ವರ್ಷಗಳಿಗಿಂತ ಹಳೆಯ ಕಲ್ಲುಗಳನ್ನು ಪತ್ತೆ ಮಾಡುವುದು ಸಾಧ್ಯವಾಗಿಲ್ಲ (ಭೂಮಿಯ ವಯಸ್ಸು ಸುಮಾರು 5 x 109 ವರ್ಷಗಳು). ಚಂದ್ರನಿಂದ ತಂದ ವಸ್ತುಗಳ ನಮೂನೆಯನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳ ನೆರವಿನಿಂದ ಪರಿಶೀಲಿಸಿದಾಗ ಉಲ್ಕಾಪಾತದ ಪರವಾಗಿ ಇನ್ನಷ್ಟು ದಾಖಲೆ ದೊರೆಯಿತು. ಅತ್ಯಂತ ಸೂಕ್ಷ್ಮಕಣಗಳ (ಅತಿಸೂಕ್ಷ್ಮ ಉಲ್ಕೆಗಳು) ಅವಿಚ್ಛಿನ್ನ ಪ್ರಹಾರದಿಂದ ಚಂದ್ರಶಿಲೆಗಳ ಕಣಕಣಗಳ ಮೇಲೆಯೂ ಆದ ಗುರುತುಗಳು ಸ್ಪಷ್ಟವಾಗಿ ಕಂಡವು. ಗಾಜಿನಂತೆ ಹೊಳೆವ ತುಣುಕುಗಳೂ ಸಾಕಷ್ಟು ದೊರೆತಿವೆ. ಉಲ್ಕಾಪಾತದಿಂದ ಕರಗಿ ಹಾರಿದ ಮರಳುಮಿಶ್ರಿತ ಕಲ್ಲಿನ ದ್ರವ ಘನೀಭವಿಸಿದಾಗ ಇವು ಉಂಟಾಗಿರಬಹುದು. ವಿಶ್ವಕಿರಣ (ಕಾಸ್ಮಿಕ್ ರೇ) ಮತ್ತು ಸೌರ ಕಣಗಳ ತಾಡನದ ಅಚ್ಚಳಿಯದ ಕುರುಹುಗಳನ್ನೂ ಗುರುತಿಸಲಾಗಿದೆ. ಎಂದೆಂದೂ ಮಾಸದ ಈ ಕುರುಹುಗಳ ಪರಿಶೀಲನೆಯಿಂದ ಅವು ಯಾವಾಗ ಉಂಟಾದವೆಂದು ಕಂಡುಹಿಡಿಯಬಹುದು. ಟ್ರಾಂಕ್ವಿಲ್ವಿಟ ಸಮುದ್ರದಿಂದ ಸಂಗ್ರಹಿಸಿದ ಶಿಲೆಗಳಲ್ಲಿ ಭೂಮಿಯ ಮೇಲೆ ಇರದಂಥ ಕನಿಷ್ಠ ಪಕ್ಷ ಮೂರು ಲೋಹಸಂಯುಕ್ತಗಳನ್ನು ಪತ್ತೆಹಚ್ಚಲಾಯಿತು. ಇವೆಲ್ಲವುಗಳಲ್ಲೂ ಕಬ್ಬಿಣದ ಅಂಶವೇ ಪ್ರಧಾನ. ಚಂದ್ರನಲ್ಲಿ ಜೀವ ವಿಕಾಸವನ್ನು ಕರಿತು ಅಭಿಪ್ರಾಯ ಸ್ಪಷ್ಟವಾಗಿದೆ-ಅಲ್ಲಿ ಎಂದೂ ಜೀವಿಗಳಿದ್ದಿರಲಾರವು; ಜೀವವಿಕಾಸಕ್ಕೆ ಚಂದ್ರ ಖಂಡಿತವಾಗಿಯೂ ಪ್ರತಿಕೂಲ ಪರಿಸರ. ರಚನೆ, ವಯಸ್ಸು ಈ ದೃಷ್ಟಿಯಿಂದ ಭೂಮಿ ಹಾಗೂ ಚಂದ್ರರಲ್ಲಿ ಸಾಮ್ಯ ಕಂಡುಬಂದರೂ ಇತರ ವಿವರಗಳ ಪರಿಶೀಲನೆಯಿಂದ ಇವುಗಳಲ್ಲಿರುವ ಭಿನ್ನತೆ ಮತ್ತು ಅಸಮತೆಗಳು ಜಾಸ್ತಿ ಎಂದು ತಿಳಿದಿದೆ. ಚಂದ್ರಗರ್ಭದಲ್ಲಿ ಯಾವ ತರಹದ ಕಂಪನವನ್ನೂ ಪತ್ತೆ ಹಚ್ಚಲಾಗಿಲ್ಲ. ಚಂದ್ರನ ತೊಗಟೆಯ ಮೇಲಿರುವ ರಾಸಾಯನಿಕ ಸಂಯುಕ್ತಗಳೂ ಖನಿಜಗಳೂ ಭೂಮಿಯ ಮೇಲಿನವುಗಳಿಂತ ಗಮನಾರ್ಹ ವಾಗಿ ಬೇರೆಯಾಗಿವೆ. ಅದೊಂದು ಕಿಟ್ಟ; ಅಧಿಕ ಉಷ್ಣತೆಯಲ್ಲಿ ತಯಾರಾದ, ನೀರು ಇದ್ದಿದ್ದರೆ ಅಂದೇ ಕಳೆದುಕೊಂಡ, ಬರಡು ಆಕಾಶಕಾಯ ಎಂದು ವಿಜ್ಞಾನಿಗಳ ತೀರ್ಮಾನ. 14. ಚಂದ್ರನ ಮೇಲ್ಮೈಯಲ್ಲಿನ ರಾಸಾಯನಿಕಗಳು: ಚಂದ್ರನ ಮೇಲೆ 1966 ರಿಂದ ಈಚೆಗೆ ರಷ್ಯ ದೇಶದ ಲ್ಯೂನಾ ಸರಣಿಯ ಅಮೆರಿಕ ದೇಶದ ಸರ್ವೆಯರ್ ಸರಣಿಯ ರೋಬೋಟ್ ನೌಕೆಗಳು ಮತ್ತು ಅಪೋಲೋ ಸರಣಿಯ ಮಾನವ ಸಹಿತ ನೌಕೆಗಳು ವಿವಿಧ ಪ್ರದೇಶಗಳಲ್ಲಿ ನಿಧಾನವಾಗಿ ಇಳಿದವು. ಲೂನಾ ನೌಕೆಗಳಲ್ಲಿ ಮತ್ತು ಅವುಗಳಲ್ಲಿ ಚಂದ್ರನ ಮೇಲೆ ಇಳಿಸಿದ ಎರಡು ಲೊನಖೋಡ್-1 ಮತ್ತು ಎರಡು ಸ್ವಯಂಚಾಲಿತ ವಾಹನಗಳಲ್ಲಿ ಮತ್ತು ಸರ್ವೇಯರ್ ನೌಕೆಗಳಲ್ಲಿ ಅಳವಡಿಸಿದ್ದ ಸೂಕ್ಷ್ಮ ಉಪಕರಣಗಳ ನೆರವಿನಿಂದ ಚಂದ್ರನ ಮೇಲ್ಮೈಯಲ್ಲೇ ಕೆಲವು ಪ್ರಯೋಗಗಳನ್ನು ಸ್ವಯಂಚಾಲಿತವಾಗಿ ನಡೆಸಿ ದತ್ತಾಂಶಗಳನ್ನು ಸಂಗ್ರಹಿಸಲಾಯಿತು. ವಿಶ್ಲೇಷಣೆಗೆ ಆಯ್ದುಕೊಂಡ ವಸ್ತುವಿನ ಮೇಲೆ ಆಲ್ಫಾ ಕಣಗಳನ್ನು (ಹಿಲಿಯಮ್ ಪರಮಾಣುಗಳ ತಿರುಳುಗಳು) ತಾಡಿಸಲಾಯಿತು. ಈ ಆಲ್ಫಾ ಕಣಗಳು ಚಂದ್ರವಸ್ತುವಿನ ಪರಮಾಣುವಿನ ತಿರುಳುಗಳೊಡನೆ ಅಂತರಕ್ರಿಯೆ ಎಸಗಿ ಹಲವಾರು ಪ್ರೋಟಾನುಗಳೂ ಇತರ ಆಲ್ಫಾ ಕಣಗಳೂ ಹೊರಹೊಮ್ಮುವಂತೆ ಮಾಡಿದುವು. ಹಾಗೆ ಚಿಮ್ಮಲ್ಪಟ್ಟ ಪ್ರೋಟಾನುಗಳ ಹಾಗೂ ಆಲ್ಫಾ ಕಣಗಳ ಶಕ್ತಿವಿತರಣೆ ತಾಡಿತ ವಸ್ತುವನ್ನು ನಿರ್ಮಿಸಿರುವ ಪರಮಾಣುಗಳ ಬಗೆಗಳನ್ನು ಅವಲಂಬಿಸಿತ್ತು. ಆದ್ದರಿಂದ ತಾಡನಾನಂತರ ಲಭಿಸಿದ ಶಕ್ತಿ ವಿತರಣೆಯನ್ನು ಸೂಕ್ಷ್ಮವಾಗಿ ಅಳೆದು ದೊರೆತ ಮಾಹಿತಿ ಗಳನ್ನು ಭೂಮಿಗೆ ಬಿತ್ತರಿಸಲಾಯಿತು. ಇವನ್ನು ಆಧರಿಸಿ ವಿಜ್ಞಾನಿಗಳು ಚಂದ್ರತಲದಲ್ಲಿನ ಶಿಲೆಗಳ ಹಾಗೂ ಕಣಗಳ ವಿಶ್ಲೇಷಣೆಯನ್ನು ಮಾಡಿದರು. ಮೊದಲಿಗೆ ಚಂದ್ರನ ಮೇಲ್ಮೈಯ ಬೇರೆ ಬೇರೆ ಭಾಗಗಳಿಂದ ಆಯ್ದು ತಂದ ಶಿಲೆಯ ಮಾದರಿಗಳಿಂದ ದೊರೆತ ಫಲಿತಾಂಶ ಗಳೂ ಕೆಲಮಟ್ಟಿಗೆ ಒಂದೇ ಆಗಿದ್ದುದು ಕಂಡುಬಂದಿತು. ಅವುಗಳಲ್ಲಿ ಚಂದ್ರನ ಸಾಗರ ಸಮುದ್ರ ಪ್ರದೇಶಗಳಲ್ಲಿ ದೊರೆತ ಬಸಾಲ್ಟ್ ಶಿಲೆಗಳಲ್ಲಿ ಕಬ್ಬಿಣ, ಮ್ಯಾಂಗನೀಸ್ ಹಾಗೂ ಟೈಟೇನಿಯಂ ನಂತರ ‘ಭಾರವಾದ’ ಧಾತುಗಳು ಹೆಚ್ಚಾಗಿ ಕಂಡುಬಂದರೆ ಅನೋರ್ಥೋ ಸೈಟ್ಗಳಲ್ಲಿ ಅಲ್ಯೂಮಿನಿಯಂ ಹಾಗೂ ಕ್ಯಾಲ್ಸಿಯಂನಂತಹ ಧಾತುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವು ಒಂದೊಂದೂ ರಾಸಾಯನಿಕ ರಚನೆಯ ರೀತ್ಯಾ ಚಂದ್ರನ ಈ ಶಿಲೆಗಳು ಭೂಮಿಯಲ್ಲಿ ದೊರೆಯುವ ಬಸಾಲ್ಟ್ ಹಾಗೂ ಅನೋರ್ಥೋಸೈಟ್ ಶಿಲೆಗಳನ್ನು ಹೋಲುತ್ತವೆ. ಆದ್ದರಿಂದ ಚಂದ್ರ ಮತ್ತು ಭೂಮಿಗಳ ಕೆಲವು ವಸ್ತುಗಳಿಗಾದರೂ ಒಂದೇ ರಾಸಾಯನಿಕ ಇತಿಹಾಸವಿತ್ತೆಂದು ವೇದ್ಯವಾಯಿತು.
15 ಚಂದ್ರನ ಅದೃಶ್ಯಭಾಗ : ಭೂಮಿಯಿಂದ ನೋಡುವ ವೀಕ್ಷಕನಿಗೆ ಚಂದ್ರನ ಒಂದು ಭಾಗ ಮಾತ್ರ ಸದಾ ಕಾಣುತ್ತಿರುತ್ತದೆ. ಇನ್ನೊಂದು ಭಾಗ, ಎಂದರೆ ಹಿಂಭಾಗ, ಸದಾ ಅದೃಶ್ಯವಾಗಿಯೇ ಇರುವುದು. 1959ರ ಅಕ್ಟೋಬರ್ 4ರಂದು ರಷ್ಯ ದೇಶದ ಆಕಾಶನೌಕೆ ಲೂನಿಕ್ 3 ಚಂದ್ರನ ಅದೃಶ್ಯಭಾಗದೆಡೆಗೆ ಸಾಗಿ ಭೂಮಿಗೆ ಅಲ್ಲಿನ ಚಿತ್ರಗಳನ್ನು ಬಿತ್ತರಿಸಿತು. ಇವೇ ನಮಗೆ ದೊರೆತ ಪ್ರಥಮ ಚಿತ್ರಗಳು. ಆ ಬಳಿಕ ಸಾಕಷ್ಟು ಸವಿವರ ಚಿತ್ರಗಳನ್ನು ಲೂನಾರ್ ಆರ್ಬಿಟರ್ ಲೂನಾ ಕ್ಲಮಂಚೈನ್, ಲೂನಾರ್ ಪ್ರಾಸ್ಪೆಕ್ಟರ್, ಇಂತಹ ರೋಬೋಟ್ ನೌಕೆಗಳ ಹಾಗೂ ಅಪೋಲೋ ಮಾನವಸಹಿತ ನೌಕೆಗಳ ನೆರವಿನೊಡನೆ ಸಂಗ್ರಹಿಸಲಾಗಿದೆ. ಅದೃಶ್ಯಭಾಗದಲ್ಲಿ ‘ಸಮುದ್ರ’ಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಇರುವ ಒಂದು ವ್ಯತ್ಯಾಸವನ್ನು ಬಿಟ್ಟರೆ ಚಂದ್ರನ ಎರಡೂ ಅರ್ಧಗಳಲ್ಲಿ ಸಾಕಷ್ಟು ಸಾದೃಶ್ಯ ಉಂಟು. III ಚಲನೆಗಳು : 1 ಆವರ್ತನೆ ಭ್ರಮಣೆ ; ಸಾಮಾನ್ಯವಾಗಿ ಎಲ್ಲ ಆಕಾಶಕಾಯಗಳಿಗೂ ಇರುವಂತೆ ಚಂದ್ರನಿಗೆ ಕೂಡ ಎರಡು ಪ್ರಧಾನ ಚಲನಗಳಿವೆ-ಸ್ವಂತಾಕ್ಷದ ಸುತ್ತ ಆವರ್ತನೆ, ಭೂಮಿಯ ಸುತ್ತ ಭ್ರಮಣೆ. ಇವೆರಡರ ಅವಧಿಗಳೂ ಸಮವಾಗಿವೆ, ಎಂದರೆ, ಚಂದ್ರನ ನಾಕ್ಷತ್ರಿಕ ಪರಿಭ್ರಮಣೆಯ ಅವಧಿ (ಸೈಡೀರಿಯಲ್ ರಿವೊಲ್ಯೂಷನ್-ಸ್ಥಿರ ನಕ್ಷತ್ರಗಳನ್ನು ಕುರಿತಂತೆ ಭೂಮಿಯನ್ನು ಒಂದು ಸಲ ಸುತ್ತುಹಾಕಲು ಚಂದ್ರನಿಗೆ ಬೇಕಾಗಿರುವ ಕಾಲಾವಧಿ) ಚಂದ್ರನ ನಾಕ್ಷತ್ರಿಕ ಆವರ್ತನೆಯ ಅವಧಿಗೆ (ಸೈಡೀರಿಯಲ್ ರೋಟೇಷನ್) ಸಮವಾಗಿದೆ. ಇದು 27.32 ದಿವಸಗಳು ಅಥವಾ 27 ದಿ. 7 ಗಂ. 43 ನಿ. 11.5 ಸೆ. ಆದರೆ ಇದೇ ಅವಧಿಯಲ್ಲಿ ಭೂಮಿ-ಚಂದ್ರ ವ್ಯವಸ್ಥೆ ಸೂರ್ಯನ ಸುತ್ತ ಸುಮಾರು 27/365 (ಎಂದರೆ ಸುಮಾರು 1/13ರಷ್ಟು ಅಥವಾ ಸುಮಾರು 270 ದೂರವನ್ನು ಗಮಿಸಿರುತ್ತದೆ. ಆದ್ದರಿಂದ ಚಂದ್ರನ ಒಂದು ನಾಕ್ಷತ್ರಿಕ ಪರಿಭ್ರಮಣೆಯ ಅವಧಿಯಲ್ಲಿ ಸೂರ್ಯ ಸ್ಥಿರನಕ್ಷತ್ರಗಳ ಹಿನ್ನೆಲೆಯಲ್ಲಿ ಸುಮಾರು 270ಯಷ್ಟು ಪಶ್ಚಿಮ-ಪುರ್ವದಿಶೆಯಲ್ಲಿ ಚಲಿಸಿರುವಂತೆ ಭೂಮಿಯಲ್ಲಿರುವ ವೀಕ್ಷಕನಿಗೆ ಭಾಸವಾಗುತ್ತದೆ. ಚಂದ್ರನ ಪರಿಭ್ರಮಣ ದಿಶೆಯೂ ಪಶ್ಚಿಮ-ಪುರ್ವ. ಹೀಗಾಗಿ ಸೂರ್ಯನನ್ನು ಕುರಿತಂತೆ ಚಂದ್ರ ಒಂದು ಪರಿಭ್ರಮಣೆಯನ್ನು ಭೂಮಿಯ ಸುತ್ತ ಮುಗಿಸಲು ನಾಕ್ಷತ್ರಿಕ ಪರಿಭ್ರಮಣಾವಧಿಗಿಂತ ಸ್ವಲ್ಪ ಹೆಚ್ಚು ಕಾಲಾವಕಾಶ ಬೇಕಾಗುವುದು. ಈ ಅವಕಾಶಕ್ಕೆ ಸಂಯುತಿ ಅವಧಿ(ಸಿನಾಡಿಕ್ ಪೀರಿಯಡ್) ಎಂದು ಹೆಸರು. ಇದೇ ಅವಧಿಯಲ್ಲಿ ಚಂದ್ರನ ಕಲೆಗಳಲ್ಲಿ (ಫೇಸಸ್) ಒಂದು ಪುರ್ಣಾಂದೋಳನ ಮುಗಿಯುವುದರಿಂದ ಇದಕ್ಕೆ ಚಾಂದ್ರಮಾಸ ಅಥವಾ ತಿಂಗಳು (ಲ್ಯೂನೇಷನ್) ಎಂಬ ಹೆಸರು ಕೂಡ ಉಂಟು. ಚಾಂದ್ರಮಾಸದ ಅವಧಿ 29.53 ದಿವಸಗಳು ಅಥವಾ 29 ದಿ. 12 ಗಂ. 44 ನಿ. 2.8 ಸೆ. ಸಾಮಾನ್ಯ ವೀಕ್ಷಕರಿಗೆ ಚಾಂದ್ರಮಾಸವೇ ಪ್ರಕಟಿತವಾಗಿ (ಕಲೆಗಳ ಪುರ್ಣಾಂದೋಳನದ ಪರಿಣಾಮ) ಕಾಣುವುದರಿಂದ ರೂಢಿಯಲ್ಲಿ ಅದಕ್ಕೇ ಹೆಚ್ಚಿನ ಪ್ರಾಧಾನ್ಯ ಲಭಿಸಿದೆ.
2. ದೋಲನಗಳು : ಚಂದ್ರನ ಆವರ್ತನಾವಧಿಯೂ ಪರಿಭ್ರಮಣಾವಧಿಯೂ ಸಮವಾಗಿರುವುದರಿಂದ ಭೂಮಿಯಲ್ಲಿ ನಿಂತಿರುವ ವೀಕ್ಷಕನಿಗೆ ಚಂದ್ರನ ಒಂದು ಪಾಶರ್ವ್ ಮಾತ್ರ ಕಾಣುತ್ತದೆ, ಉಳಿದ ಪಾಶರ್ವ್ ಸದಾ ಅದೃಶ್ಯವಾಗಿರುತ್ತದೆ. ಈ ವೈಚಿತ್ರ್ಯದ ಗಣಿತ ಅರ್ಥವಾಗಲು ಒಂದು ಸುಲಭ ಪ್ರಯೋಗ ಮಾಡಿನೋಡಬಹುದು. ಹಜಾರದ ನಡುವೆ ಒಂದು ಅಗ್ಗಿಷ್ಟಿಕೆ ಇರಲಿ (ಔ) (ಚಿತ್ರ 12). ಅದರ ಸುತ್ತ ತುಸು ದೂರದಲ್ಲಿ ಒಂದು ವೃತ್ತ ಪರಿಧಿಯ ಮೇಲೆ (S) ಒಬ್ಬ ವ್ಯಕ್ತಿ ಸದಾ ಅಗ್ಗಿಷ್ಟಿಕೆ ಕಡೆಗೆ ಮುಖಮಾಡಿಕೊಂಡಿರುವಂತೆ ಚಲಿಸಲಿ. ಉದಾಹರಣೆಗೆ ಂಯಲ್ಲಿ ಆತನ ಮುಖ ಉತ್ತರಕ್ಕಿದೆ; ಹಾಗೆ ಬಂದಾಗ ಅದು ಪಶ್ಚಿಮಕ್ಕಿರುವುದು; ಅಗೆ ಬಂದಾಗ ಅದು ದಕ್ಷಿಣಕ್ಕಿರುವುದು; ಹಾಗೆ ಃಗೆ ಬಂದಾಗ ಅದು ಪುರ್ವಕ್ಕಿರುವುದು. ಕೊನೆಗೆ ಆಗೆ ಬಂದಾಗ ಪುನಃ ಉತ್ತರಾಭಿಮುಖಿಯಾಗಿರುವುದು. ಅಲ್ಲಿಗೆ ಆ ವ್ಯಕ್ತಿ Sನ ಮೇಲೆ ಒಂದು ಸುತ್ತನ್ನು ಮುಗಿಸುವ ಅವಧಿಯಲ್ಲಿ ತನ್ನ ಸುತ್ತ ಕೂಡ ಒಂದು ಸುತ್ತನ್ನು ಮುಗಿಸಿರುತ್ತಾನೆ ಎಂದಾಯಿತು. ಈಗ ಔ ಭೂಮಿ ಮತ್ತು ವ್ಯಕ್ತಿ ಚಂದ್ರ ಎಂದು ಭಾವಿಸಿದರೆ ಔ ನಿಂದ ನೋಡುವ ವೀಕ್ಷಕನಿಗೆ ಚಂದ್ರನ ಬೆನ್ನಭಾಗ ಎಂದೂ ಕಾಣುವುದಿಲ್ಲ. ವಾಸ್ತಾವಿಕವಾಗಿ ಚಂದ್ರನ ಚಲನೆ ಬಲು ಜಟಿಲವಾಗಿದೆ. ಹಲವಾರು ಆಂದೋಲನಗಳಿಂದ ಕೂಡಿದೆ. ಇವುಗಳ ಪರಿಣಾಮವಾಗಿ, ಯಾವುದೇ ಒಂದು ಕ್ಷಣದಲ್ಲಿ ಭೂವೀಕ್ಷಕನಿಗೆ ಚಂದ್ರನ ಅರ್ಧಭಾಗ ಮಾತ್ರ ಕಾಣಿಸುವುದು ನಿಜವಾದರೂ ಒಂದು ವರ್ಷದ ಅವಧಿಯಲ್ಲಿ ಚಂದ್ರನ ಅದೃಶ್ಯಭಾಗದ ಒಂದಿಷ್ಟು ಅಂಶವೂ ಕಂಡಿರುತ್ತದೆ. ಈ ವಿದ್ಯಮಾನಕ್ಕೆ, ಎಂದರೆ ಭೂಮಿ-ಚಂದ್ರ ವ್ಯವಸ್ಥೆಯ ಚಲನೆಯ ಪರಿಣಾಮವಾಗಿ ಚಂದ್ರನ ಅದೃಶ್ಯಭಾಗದ ಒಂದಿಷ್ಟು ಅಂಶವನ್ನು ಕಾಣಲಾಗುವ ವಿದ್ಯಮಾನಕ್ಕೆ, ಚಂದ್ರನ ದೋಲನಗಳು (ಲೈಬ್ರೇಷನ್ಸ್) ಎಂದು ಹೆಸರು. ದೋಲನಗಳನ್ನು ಜ್ಯಾಮಿತೀಯ ಮತ್ತು ಭೌತದೋಲನಗಳೆಂದು ವರ್ಗೀಕರಿಸ ಲಾಗಿದೆ. ಜ್ಯಾಮಿತೀಯ ದೋಲನಗಳಲ್ಲಿ ಮೂರು ಬಗೆಗಳುಂಟು : ರೇಖಾಂಶ ದೋಲನ, ಅಕ್ಷಾಂಶ ದೋಲನ, ದ್ಯೆನಂದಿನ ದೋಲನ.
(i) ರೇಖಾಂಶ ದೋಲನ (ಲ್ಯೆಬ್ರೇಷನ್ ಇನ್ ಲಾಂಜಿಟ್ಯೂಡ್) : ಚಂದ್ರನ ಆವರ್ತನ ದರ ಏಕರೀತಿ ಇದೆ. ಆದರೆ ಕಕ್ಷೆಯ ಮೇಲೆ ಸಂಚರಿಸುವಾಗ ಚಂದ್ರನ ಕೋನವೇಗ (ಎಂದರೆ ಪರಿಭ್ರಮಣವೇಗ) ಬದಲಾಗುತ್ತಲೇ ಇರುವುದು. ಹೀಗಾಗಿ ಇವೆರಡು ಚಲನೆಗಳ ಸರಾಸರಿ ದರ ಒಂದೇ ಆಗಿದ್ದರೂ ಒಂದು ಇನ್ನೊಂದರೊಡನೆ ಹೊಂದಿಕೊಳ್ಳದೇ ಲಯ ತಪ್ಪುತ್ತದೆ. ತತ್ಪರಿಣಾಮವಾಗಿ ಭೂವೀಕ್ಷಕರಿಗೆ ಮೊದಲು ಚಂದ್ರನ ಒಂದಿಷ್ಟು ಪಶ್ಚಿಮ (ಅದೃಶ್ಯ) ಪಾಶರ್ವ್ವೂ, ಬಳಿಕ ಒಂದಿಷ್ಟು ಪುರ್ಣ (ಅದೃಶ್ಯ) ಪಾಶರ್ವ್ವೂ ಗೋಚರಿಸುತ್ತವೆ. ಒಂದೊಂದು ಪಾಶರ್ವ್ದಲ್ಲೂ ಸುಮಾರು 80ಗಳಷ್ಟು ಹೆಚ್ಚಿನ ಅಂಶವನ್ನು ಈ ಪ್ರಕಾರ ಕಾಣುತ್ತೇವೆ.
(ii) ಅಕ್ಷಾಂಶ ದೋಲನ (ಲೈಬ್ರೇóಷನ್ ಇನ್ ಲ್ಯಾಟಿಟ್ಯೂಡ್ : ಚಂದ್ರನ ಆವರ್ತನಾಕ್ಷ ಚಂದ್ರಕಕ್ಷೆಯ ಸಮತಲಕ್ಕೆ ಲಂಬವಾಗಿಲ್ಲ. ಬದಲು ಸುಮಾರು 6.500ಗಳಷ್ಟು ವಾಲಿಕೊಂಡಿದೆ. ಚಂದ್ರನ ಅಕ್ಷವಿನ್ಯಾಸ, ಭೂಮಿಯ ಅಕ್ಷ ವಿನ್ಯಾಸದಂತೆ ಸದಾಕಾಲ ಸ್ಥಿರವಾಗಿರುವುದು. ತತ್ಪರಿಣಾಮವಾಗಿ ಭೂವೀಕ್ಷಕನಿಗೆ ಚಂದ್ರನ ಉತ್ತರ ಮೇರುವಿನಿಂದ ಆಚೆಗೆ ಅದೃಶ್ಯ ಪಾಶರ್ವ್ದ 6.50ಯಷ್ಟು ಒಮ್ಮೆ ಗೋಚರಿಸಿದರೆ ಎರಡು ವಾರಗಳ ತರುವಾಯ ದಕ್ಷಿಣ ಮೇರುವಿನಿಂದ ಆಚೆಗೆ ಅದೃಶ್ಯ ಪಾಶರ್ವ್ದ 6.50 ಯಷ್ಟು ಗೋಚರಿಸುವುದು.
(iii) ದೈನಂದಿನ ದೋಲನ (ಡೈಯರ್ನಲ್ ಲೈಬ್ರೇಷನ್) : ಭೂಮಿಯ ಆವರ್ತನೆ ಹಾಗೂ ಪ್ರರಿಭ್ರಮಣೆಗಳ ಸಂಯುಕ್ತ ಪರಿಣಾಮವಾಗಿ ಚಂದ್ರನ ಪುರ್ವ ಹಾಗೂ ಪಶ್ಚಿಮ ಅಂಚುಗಳಿಂದ ಆಚೆಗೆ 10 ಯಷ್ಟು ಅದೃಶ್ಯ ಪಾಶರ್ವ್ ಗೋಚರಿಸುತ್ತದೆ. ಜ್ಯಾಮಿತೀಯ ದೋಲನಗಳ ಸಂಯುಕ್ತ ಫಲವಾಗಿ ಚಂದ್ರನ ಭಾಗ ಭೂವೀಕ್ಷಕನಿಗೆ ಸದಾ ಗೋಚರಿಸುತ್ತದೆ: ಶೇ.41 ಅಂಶ ಎಂದೂ ಗೋಚರಿಸುವುದಿಲ್ಲ. ಶೇ.18 ಅಂಶ ಪರ್ಯಾಯವಾಗಿ ಗೋಚರ ಅಗೋಚರವಾಗುತ್ತಿರುವುದು.
ಭೌತ ದೋಲನ (ಫಿಸಿಕಲ್ ಲೈಬ್ರೇಷನ್): ಚಂದ್ರನ ಆಕಾರ ಪರಿಪುರ್ಣಗೋಳವಲ್ಲ; ಪರಸ್ಪರ ಲಂಬವಾಗಿರುವ ಮೂರು ಅಕ್ಷಗಳಿಂದ ಕೂಡಿದ ದೀರ್ಘವೃತ್ತ ಕಲ್ಪವಿದು (ಟ್ರೈ ಆ್ಯಕ್ಸಿಯಲ್ ಎಲಿಪ್ಸಾಯಿಡ್). ಹೀಗಾಗಿ ಚಂದ್ರನ ಭೌತಸನ್ನಿವೇಶಗಳನ್ನು ನಾವು ವೀಕ್ಷಿಸುವಾಗ ಸ್ವಲ್ಪ ಏರಿಳಿತಗಳು ತೋರುವುವು. ಇದೇ ಭೌತ ದೋಲನಗಳು.
3 ಕಕ್ಷೆ : ಚಂದ್ರ ಭೂಮಿಯ ಸುತ್ತ ಸಂಚರಿಸುವ ಕಕ್ಷೆಯ ಆಕಾರ ದೀರ್ಘವೃತ್ತ. ಇದರ ಒಂದು ನಾಭಿಯಲ್ಲಿü ಭೂಮಿಯಲ್ಲಿ ಉಂಟು. ಈ ಚಲನೆ ಕೆಪ್ಲರನ ನಿಯಮಗಳ (ನೋಡಿ) ಅನುಸಾರ ಇದೆ. ಕಕ್ಷೆಯ ಸರಾಸರಿ ಉತ್ಕೇಂದ್ರತೆ 0.0549 ಭೂಮಿಯ ನೀಚ ಬಿಂದುವಿನಲ್ಲಿ (ಪೆರಿಜೀ-ಎಂದರೆ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತಿ ಸಮೀಪವಾಗಿರುವ ಬಿಂದು) ಭೂಮಿ-ಚಂದ್ರರ ದೂರ ಸುಮಾರು 356,400 ಕಿಮೀ; ಮತ್ತು ಭೂಮ್ಯುಚ್ಚ ಬಿಂದುವಿನಲ್ಲಿ (ಅಪೋಜೀ-ಎಂದರೆ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತಿ ದೂರವಾಗಿರುವ ಬಿಂದು) ಭೂಮಿ-ಚಂದ್ರನ ದೂರ ಸುಮಾರು 406,686 ಕಿಮೀ.
ನೀಚಬಿಂದುವಿನಲ್ಲಿ ಕಕ್ಷಾವೇಗ ಗರಿಷ್ಠ. ಉಚ್ಚಬಿಂದುವಿನಲ್ಲಿ ಅದು ಕನಿಷ್ಠ. ಕಕ್ಷಾವೇಗದ ಸರಾಸರಿ 1021 ಮೀ./ಸೆ. ಚಂದ್ರನ ಕಕ್ಷಾತಲ ಕ್ರಾಂತಿ ವೃತ್ತ ತಲಕ್ಕೆ (ನೊಡಿ- ಕ್ರಾಂತಿ-ವೃತ್ತ) ಸುಮಾರು 508'ಗಳಷ್ಟು ವಾಲಿಕೊಂಡಿದೆ. ಇವೆರಡೂ ವೃತ್ತಗಳು ಓ, ಓ'ಎಂಬ ಎರಡು ಬಿಂದುಗಳಲ್ಲಿ ಛೇದಿಸುತ್ತವೆ. ಇವುಗಳಿಗೆ ಪಾತ ಬಿಂದುಗಳು ಅಥವಾ ಸರಳವಾಗಿ ಪಾತಗಳು (ನೋಡ್ಸ್) ಎಂದು ಹೆಸರು (ನೋಡಿ- ಗ್ರಹಣ,-ಖಗೋಳೀಯ) ಬಹು ಪ್ರಬಲ ಗುರುತ್ವಾಕರ್ಷಣ ಕೇಂದ್ರವಾದ ಸೂರ್ಯ ಸಹಜವಾಗಿಯೇ ಚಂದ್ರನನ್ನು ಕ್ರಾಂತಿವೃತ್ತ ತಲಕ್ಕೆ ಸೀಮಿತಗೊಳಿಸಲು ಸೆಳೆಯುತ್ತಿರುತ್ತದೆ. ಆದರೆ ಚಂದ್ರನ ನಿರಂತರ ಚಲನೆಯ ಪರಿಣಾಮವಾಗಿ ಇದು ಸಾಧ್ಯವಾಗುವುದಿಲ್ಲ. ಬದಲು ಪಾತಗಳು ಚಂದ್ರಚಲನೆಯ ವಿರುದ್ಧ ದಿಶೆಯಲ್ಲಿ (ಎಂದರೆ ಪುರ್ವ-ಪಶ್ಚಿಮ ದಿಶೆಯಲ್ಲಿ) ಕ್ರಾಂತಿವೃತ್ತದ ಮೇಲೆ ಕ್ರಮೇಣ ಜರುಗುತ್ತವೆ (ಭೂಕಕ್ಷೆ ವಿಷುವದ್ವೖತ್ತವನ್ನು ಛೇದಿಸುವ ಎಂಬ ಎರಡು ವಿಷುವದ್ಬಿಂದುಗಳು ಕ್ರಾಂತಿವೃತ್ತದ ಮೇಲೆ ಪುರ್ವ-ಪಶ್ಚಿಮ ದಿಶೆಯಲ್ಲಿ ಚಲಿಸುವ ಅಯನಾಂಶ (ನೋಡಿ) ಎಂಬ ವಿದ್ಯಮಾನಕ್ಕೆ ಸಂವಾದಿಯಾದ ವಿದ್ಯಮಾನವಿದು). ಪಾತರೇಖೆ 6,798 ದಿವಸಗಳಲ್ಲಿ ಅಥವಾ 18 ವ. 224 ದಿ.ಗಳಲ್ಲಿ ಕ್ರಾಂತಿವೃತ್ತದ ಮೇಲೆ ಒಂದು ಪುರ್ಣ ಪರಿಭ್ರಮಣೆಯನ್ನು ಮುಗಿಸುತ್ತದೆ.
4. ಆಕಾಶದಲ್ಲಿ ಚಂದ್ರನ ಚಲನೆ: ನಿರಪೇಕ್ಷವಾಗಿ ಪರಿಶೀಲಿಸುವಾಗ ಚಂದ್ರನ ಚಲನೆ ತೀರ ಜಟಿಲ ವಾದದ್ದು. ಚಂದ್ರನ ಮೂಲ ಹಾಗು ಸಮೀಪಗ್ರಹವಾದ ಭೂಮಿಯ ಪ್ರಭಾವ ಒಂದು ಕಡೆ, ಸೌರವ್ಯೂಹದ ಪ್ರಧಾನ ಕಾಯ ಸೂರ್ಯನ ಪ್ರಭಾವ ಒಂದು ಕಡೆ-ಇವುಗಳ ಪರಿಣಾಮ ವಾಗಿ ಚಂದ್ರನ ವರ್ತನೆ ಬಲು ಸಿಕ್ಕುಸಿಕ್ಕಾಗಿದೆ. ಇದರ ಮುಖ್ಯಾಂಶಗಳನ್ನು ಮುಂದೆ ತಿಳಿಸಿದೆ.
i. ಭೂಮಿಯ ಸುತ್ತ ಚಂದ್ರ ರೇಖಿಸುವ ದೀಘೃವೃತ್ತ ಒಂದು ಸಮತಲದ ಮೇಲೆ ಸ್ಥಿರವಾಗಿಲ್ಲ-ಅದು ತಲದ ಮೇಲೆ ಚಂದ್ರಚಲನೆಯ ದಿಶೆಯಲ್ಲಿ ಪರಿಭ್ರಮಿಸುತ್ತದೆ (ನೇರ ಚಲನೆ ಅಥವಾ ಡೈರೆಕ್ಟ್ ಮೋಷನ್ ಎಂದು ಇದರ ಹೆಸರು). ಹೀಗಾಗಿ ದೀರ್ಘವೃತ್ತದ ದೀರ್ಘಾಕ್ಷ ಒಂದು ಪುರ್ಣ ಪರಿಭ್ರಮಣೆಯನ್ನು 3232 ದಿವಸಗಳಲ್ಲಿ ಅಥವಾ 8 ವ. 310 ದಿನಗಳಲ್ಲಿ ಮುಗಿಸುತ್ತದೆ. ಈ ಚಲನೆಗೆ ಸದೃಶವಾದದ್ದು ಭೂಕಕ್ಷೆಯ ನೀಚೋಚ್ಚ ರೇಖೆಯ (ಲೈನ್ ಆಫ್ ಆ್ಯಪ್ಸಿಡ್ಸ್) ಚಲನೆ-21,000 ವರ್ಷಗಳಲ್ಲಿ ಇದು ಒಂದು ಸುತ್ತನ್ನು ಪುರೈಸುವುದು.
ii. ಪಾತರೇಖೆಯ ಹಿನ್ನಡೆ (ರಿಟ್ರೊಗ್ರೇಡ್ ಮೋಷನ್). ಇದನ್ನು ಈ ಮೇಲೆ ಕಕ್ಷೆ ಎಂಬ ಶೀರ್ಷಿಕೆಯಲ್ಲಿ ವಿವರಿಸಿದೆ.
iii. ಚಂದ್ರಕಕ್ಷೆಯ ತಲ ಕಾಂತಿವೃತ್ತ ತಲಕ್ಕೆ ವಾಲಿಕೊಂಡಿದೆ (ಸರಾಸರಿ ಬೆಲೆ 50 8' 48") ಎಂದು ಹೇಳಿದೆಯಷ್ಟೆ. ಈ ಬಾಗು (ಇನ್ಕ್ಲಿನೇಷನ್) ಕನಿಷ್ಠ 50 0' 1" ನಿಂದ ಗರಿಷ್ಠ 50 17' 35" ಗಳ ವರೆಗೆ ಆಂದೋಳಿಸುತ್ತದೆ. ಇದರ ಅವಧಿ 173 ದಿವಸಗಳು. iv. ಕಕ್ಷೆಯ ಉತ್ಕೇಂದ್ರತೆಯ ಪರಿಣಾಮವಾಗಿ ಪ್ರತಿಯೊಂದು ತಿಂಗಳಿನಲ್ಲೂ ಚಂದ್ರ 60 ಯೂನಿಟ್ಗಳಷ್ಟು ತಡವಾಗಿ ಇಲ್ಲವೇ ಮೊದಲಾಗಿ ಚಲಿಸುತ್ತಿರುತ್ತದೆ. ಇದಕ್ಕೆ ಕೇಂದ್ರ ಸಂಸ್ಕಾರ (ಇಕ್ವೇಷನ್ ಆಫ್ ಸೆಂಟರ್) ಎಂದು ಹೆಸರು.
v. ಸ್ವಂತ ಕಕ್ಷೆಯಲ್ಲಿ ಚಲಿಸುತ್ತಿರುವ ಚಂದ್ರನ ಮೇಲೆ ಸೂರ್ಯಾಕರ್ಷಣೆ ಕ್ಷೋಭೆ ಉಂಟುಮಾಡುತ್ತದೆ ಚಂದ್ರಕಕ್ಷೆಯ ನೀಚೋಚ್ಚರೇಖೆಯ ಮೂಲಕ ಸೂರ್ಯ ಹಾಯುವಾಗ ಕಕ್ಷೆಯ ಉತ್ಕೇಂದ್ರತೆ ಹೆಚ್ಚಾಗುವುದು; ಅದಕ್ಕೆ ಲಂಬವಾಗಿರುವ ರೇಖೆಯ ಮೂಲಕ ಸೂರ್ಯ ಹಾಯುವಾಗ ಈ ಉತ್ಕೇಂದ್ರತೆ ಕಡಿಮೆ ಆಗುವುದು. ಈ ಪರಿಣಾಮಕ್ಕೆ ಚಾಂದ್ರಕಕ್ಷಾ ಕ್ಷೋಭೆ ಅಥವಾ ಸರಳವಾಗಿ ಚಾಂದ್ರಕ್ಷೋಭೆ (ಎವೆಕ್ಷನ್) ಎಂದು ಹೆಸರು. ಇದರ ಪ್ರಕಟಿತರೂಪವಾಗಿ ಚಂದ್ರನ ರೇಖಾಂಶದಲ್ಲಿ (ಲಾಂಜಿಟ್ಯೂಡ್) 10 15'ಗಳಷ್ಟು ಗರಿಷ್ಠ ವ್ಯತ್ಯಾಸ ತೋರಿಬರುತ್ತದೆ. ಕ್ಷೋಭೆಯ ಅವಧಿಕಾಲ 32 ದಿವಸಗಳು.
vi. ಇತರ ಅಸಮತೆಗಳಲ್ಲಿ ಮುಖ್ಯವಾದವು 15 ದಿವಸಗಳ ಅವಧಿಕಾಲವಿರುವ ವಿಚರಣೆ (ವೇರಿಯೇಷನ್), ಒಂದು ವರ್ಷ ಅವಧಿಕಾಲವಿರುವ ವಾರ್ಷಿಕ ಸಂಸ್ಕಾರ (ಆ್ಯನ್ಯುಯಲ್ ಈಕ್ವೇಷನ್), 29 ದಿವಸಗಳ ಅವಧಿಕಾಲವಿರುವ ದಿಗ್ವ್ಯತ್ಯಾಸದ ಅಸಮತೆ ಇತ್ಯಾದಿ. ಚಂದ್ರನ ಚಲನೆಯಲ್ಲಿ 1500ರಷ್ಟು ಅಸಮತೆಗಳನ್ನು ಗುರುತಿಸಿದ್ದುಂಟು. ಅವುಗಳ ಪೈಕಿ ಮುಖ್ಯವಾದ 500ನ್ನು ಗಮನದಲ್ಲಿಟ್ಟುಕೊಂಡೇ ಚಾಂದ್ರಕೋಷ್ಟಕಗಳನ್ನು ತಯಾರಿಸಬೇಕು. ಉದಾಹರಣೆಗೆ, ಚಂದ್ರನ ಕಕ್ಷಾವೇಗ ಶತಮಾನವೊಂದರ 12" ಗಳಷ್ಟು ಏರುವುದೆಂದು ತಿಳಿದಿದೆ. ಆದ್ದರಿಂದ 1974ರಲ್ಲಿ ಬಲು ನಿಖರವಾಗಿ ಚಂದ್ರಕಕ್ಷೆಯನ್ನು ಗುರುತು ಮಾಡಿ ದೊರೆತ ಫಲಿತಾಂಶಗಳನ್ನು 2074ರಲ್ಲಿ ಉಪಯೋಗಿಸಿದರೆ ಅಂದಿನ ವಾಸ್ತವ ಚಂದ್ರ, ಗಣನೆ ತಿಳಿಸುವ ಚಂದ್ರ ಇರಬೇಕಾದಲ್ಲಿ ಇರುವುದಿಲ್ಲ, ಬದಲು ಸುಮಾರು 12" ಅಥವಾ ಸುಮಾರು 22.5 ಕಿಮೀ. ಮುಂದೆ ಇರುವುದು. ಇದುವರೆಗೆ ವಿವರಿಸಿದ ಎಲ್ಲ ಅಸಮತೆಗಳ ಹಾಗೂ ಅಸಮ ಬಲಗಳ ಪರಿಣಾಮವಾಗಿ ಭೂಮಿ-ಚಂದ್ರ ವ್ಯವಸ್ಥೆ ಸೂರ್ಯನನ್ನು ಕುರಿತಂತೆ ಆಕಾಶದಲ್ಲಿ ರೇಖಿಸುವ ಪಥವನ್ನು ಚಿತ್ರ 11 (ಬಿ), (ಸಿ) ಗಳಲ್ಲಿ ಕಾಣಿಸಿದೆ.
5. ಶರಚ್ಚಂದ್ರ : ಶರತ್ಕಾಲದಲ್ಲಿ (ಎಂದರೆ ಆಶ್ವೀಜ ಕಾರ್ತಿಕ ಮಾಸಗಳು; ಆಗಸ್ಟ್-ನವೆಂಬರ್ ಅವಧಿಯಲ್ಲಿ ಹಿಂದೆ ಮುಂದೆ ಬರುತ್ತವೆ) ಬರುವ ಹುಣ್ಣಿಮೆಯ ಚಂದ್ರ. ಶರಚ್ಚಂದ್ರ. ಇದು ವಸಂತ ವಿಷುವದ್ಬಿಂದುವಿನೊಡನೆ (ಡಿ ಬಿಂದು ಅಂದರೆ ಫಸ್ಟ್ ಪಾಯಿಂಟ್ ಆಫ್ ಏರೀಸ್ ಅಂದರೆ ವರ್ನಲ್ ಈಕ್ವಿನಾಕ್ಸ್) ಉದಯಿಸುವುದು. ಉತ್ತರ ಅಕ್ಷಾಂಶಗಳ ನಿವಾಸಿಗಳಿಗೆ ಆ ವೇಳೆ ಕ್ರಾಂತಿವೃತ್ತ ಕ್ಷಿತಿಜದೊಡನೆ ಕನಿಷ್ಠವಾಗಿ ಬಾಗಿಕೊಂಡಿರುತ್ತದೆ. ಚಂದ್ರಕಕ್ಷೆ ಕ್ರಾಂತಿವೃತ್ತಕ್ಕೆ 50 8'ಗಳಷ್ಟು ಬಾಗಿಕೊಂಡಿರುವುದರಿಂದ ಚಂದ್ರ ವಸಂತ ವಿಷವದ್ಬಿಂದುವಿನಿಂದ ವಿಶೇಷ ದೂರಸಾಗುವುದಿಲ್ಲ. ಹೀಗಾಗಿ ಶರಚ್ಚಂದ್ರ ಮತ್ತು ಅದರ ಸಮೀಪದ ಸಂಜೆಗಳೆಂದು ಚಂದ್ರೋದಯದಲ್ಲಿ ಗಣನೀಯ ತಡವಾಗುವುದಿಲ್ಲ. ಅರ್ಥಾತ್ ಭೂನಿವಾಸಿಗಳಿಗೆ ಆ ದಿವಸಗಳಂದು ತಿಂಗಳ ಬೆಳಕು ಸಂಜೆ ಕವಿಯುವ ಮೊದಲೇ ದೊರೆಯುತ್ತದೆ. ಚಿತ್ರ-17-ಎ ಹಲವಾರು ಪ್ರದೇಶಗಳಲ್ಲಿ ಇದು ಕೊಯ್ಲಿನ ವೇಳೆ. ಆದ್ದರಿಂದ ಇಂಗ್ಲೆಂಡ್ ಮುಂತಾದೆಡೆಗಳಲ್ಲಿ ಶರಚ್ಚಂದ್ರನಿಗೆ ಕೊಯ್ಲು ಚಂದ್ರ (ಹಾರ್ವೆಸ್ಟ್ ಮೂನ್) ಎಂದು ಕರೆಯುವುದು ವಾಡಿಕೆ. ಮರುತಿಂಗಳ ಹುಣ್ಣಿಮೆಯ ವೇಳೆ ಜನ ಬೇಟೆಯಲ್ಲಿ ತೊಡಗುವುದರಿಂದ ಆ ಚಂದ್ರನಿಗೆ ಬೇಟೆಗಾರರ ಚಂದ್ರ ಎಂದು ಕರೆಯುವುದುಂಟು. ಗಿI ಕಲೆಗಳು (ಫೇಸಸ್) : ಚಂದ್ರ (ಇನ್ನಷ್ಟು ವ್ಯಾಪಕವಾಗಿ ಹೇಳುವುದಾದರೆ ಯಾವುದೇ ಗ್ರಹ) ಭೂಮಿಗೆ ಪ್ರದರ್ಶಿಸುವ ಬಿಂಬಕ್ಕೆ-ಎಂದರೆ ಹೊಳೆಯುವ ಭಾಗಕ್ಕೆ-ಕಲೆ ಎಂದು ಹೆಸರು. ಇದರ ಮಾಪಕ ಹೊಳೆಯುವ ಭಾಗ ಹಾಗೂ ಪುರ್ಣಬಿಂಬಗಳ ನಿಷ್ಪತ್ತಿ. ಆದ್ದರಿಂದ ಅಮಾವಾಸ್ಯೆ ಚಂದ್ರನ ಕಲೆ 0, ಹುಣ್ಣಿಮೆ ಚಂದ್ರನ ಕಲೆ 1. ಉಳಿದ ದಿವಸಗಳಂದು ಚಂದ್ರನ ಕಲೆ ಒಂದು ಭಿನ್ನರಾಶಿ. ಯಾವುದೇ ಮುಹೂರ್ತದಲ್ಲಿ ಭೂಮುಖವಾಗಿರುವ ಅರ್ಧಾಂಶ ಭೂನಿವಾಸಿಗಳಿಗೆ ಕಾಣುತ್ತಿರುವುದು. ಚಿತ್ರ18ರÀಲ್ಲಿ ಇ ಭೂಮಿ: ಈ ಅರ್ಧಾಂಶ ಂಈಅಉ: ಸೂರ್ಯಮುಖವಾಗಿರುವ ಅರ್ಧಾಂಶ ಬೆಳಗುತ್ತಿರುವುದು-ಚಿತ್ರ್ರದಲ್ಲಿ S ಸೂರ್ಯ; ಬೆಳಗುತ್ತಿರುವ ಅರ್ಧಾಂಶದ ಗಡಿಯನ್ನು ಂಃಅ ಸೂಚಿಸುತ್ತದೆ. ಆದ್ದರಿಂದ ಈ ಎರಡು ಆರ್ಧಗೋಳಗಳ ಸಾಮಾನ್ಯ ಗೋಳಖಂಡ (ಚಂದ್ರಕ ಅಥವಾ ಲ್ಯೂನ್ ಎಂದು ಇದನ್ನು ಕರೆಯುವುದುಂಟು) ವೀಕ್ಷಕನಿಗೆ ಬೆಳಕು ಪ್ರತಿಫಲಿಸುವ ಭಾಗ-ಇದು ಂಃಅಈಂ ಎಂಬ ಚಂದ್ರಕ. ಮೂರು ಆಯಾಮಗಳ ಈ ಚಂದ್ರಕ ಭೂಮಿ-ಚಂದ್ರ ದೂರದ ಅಗಾಧತೆಯಿಂದಾಗಿ, ವೀಕ್ಷಕನ ದೃಷ್ಟಿರೇಖೆಗೆ (ಇಒ) ಲಂಬವಾಗಿರುವ ಸಮತಲದ ಮೇಲೆ (ಕಾಗದದ ಸಮತಲ) ವೀಕ್ಷೇಪಿತವಾದಂತೆ ಭಾಸವಾಗುತ್ತದೆ.-ಇದು ಂಆಅಈಂ ಸಮತಲ. ಹೀಗಾಗಿ ಚಂದ್ರನ ಹೊಳೆಯುವ ಭಾಗ (ಅಂತೆಯೇ ಪುರ್ಣಚಂದ್ರ) ಒಂದು ಸಮತಲದಂತೆ ಕಾಣುವುದು.
ಚಂದ್ರನ ಕಲೆ= =
= ಚಂದ್ರನ ತ್ರಿಜ್ಯ
ಇಲ್ಲಿ ಕೋನಕ್ಕೆ ಚಂದ್ರನ ಕೋನಾಂತರ (ಇಲಾಂಗೇಷನ್) ಎಂದು ಹೆಸರು.
ಒಂದು ಚಾಂದ್ರಮಾಸದಲ್ಲಿ (ಲ್ಯುನೇಷನ್) ಚಂದ್ರನ ಕಲೆಗಳಲ್ಲಿ ಒಂದು ಪುರ್ಣಾಂದೋಳನ ಮುಗಿಯುತ್ತದೆ. ಒಂದು ನಿಶ್ಚಿತ ಸಂಜೆ ಅಮಾವಾಸ್ಯೆ ಎಂದು ಭಾವಿಸೋಣ. ಅದು ವೀಕ್ಷಕ-ಸೂರ್ಯರೇಖೆಯ ದಿಶೆಯಲ್ಲಿ ಸರಿಸುಮಾರಾಗಿ ಚಂದ್ರ ಇರುತ್ತದೆ. ಸೂರ್ಯ ಚಂದ್ರರ ರೇಖಾಂಶಗಳು ಅಂದು ಸಮ. ಆದ್ದರಿಂದ ಚಂದ್ರನ ಹೊಳೆಯುವ ಭಾಗ ಭೂಮಿಯ ವಿರುದ್ಧ ದಿಕ್ಕಿನಲ್ಲಿರುವುದು. ಅಲ್ಲದೆ ಸೂರ್ಯನ ಬೆಳಕಿನಲ್ಲಿ ಚಂದ್ರ ಕಾಣಿಸುವುದು ಸಾಧ್ಯವಾಗುವುದಿಲ್ಲ.
ಎರಡನೆಯ ಸಂಜೆಯಾಗುವಾಗ ಸೂರ್ಯ ಭೂಮಿಯ ಸುತ್ತ ಸುಮಾರು 10 ಯಷ್ಟು (ಇದು ತೋರ್ಕೆ ಚಲನೆ) ಮತ್ತು ಚಂದ್ರ ಸುಮಾರು 130 ಗಳಷ್ಟು ಪಶ್ಚಿಮ-ಪುರ್ವ ದಿಶೆಯಲ್ಲಿ ಚಲಿಸಿರುತ್ತವೆ. ಆದ್ದರಿಂದ ಅಂದು ಚಂದ್ರ ಸೂರ್ಯನಿಗಿಂತ ಸುಮಾರು 120 ಗಳಷ್ಟು ಮುನ್ನಡೆದಿರುತ್ತದೆ (ಪಶ್ಚಿಮ-ಪುರ್ವ). ಅಂದರೆ ಚಂದ್ರ-ಸೂರ್ಯರ ರೇಖಾಂಶ ವ್ಯತ್ಯಾಸ 120 ಎಂದಾಯಿತು. ಚಂದ್ರ ಸೂರ್ಯನಿಗಿಂತ ಪುರ್ವಕ್ಕೆ ಇರುವುದರಿಂದ ಸೂರ್ಯ ಕಂತಿ ಸ್ವಲ್ಪ ಕಾಲಾನಂತರ ಚಂದ್ರ ಕಂತುವುದು. ಆದರೆ ಈ ಅಂತರ ಅತ್ಯಲ್ಪವಾಗಿರುವುದರಿಂದ ಪಾಡ್ಯದ ಚಂದ್ರನನ್ನು ಕಾಣುವುದು ಕಷ್ಟ.
ಮೂರನೆಯ ಸಂಜೆ ಸೂರ್ಯ-ಚಂದ್ರ ಅಂತರ (ರೇಖಾಂಶ ವ್ಯತ್ಯಾಸ) ಗಮನಾರ್ಹ ವಾಗಿ ಏರಿರುತ್ತದೆ. ಅದು ಈಗ ಸುಮಾರು 240. ಆದ್ದರಿಂದ ಬಿದಿಗೆ ಚಂದ್ರನನ್ನು ಪ್ರಯಾಸದಿಂದ ಕಾಣಬಹುದು. ಇದರ ಹೊಳೆಯುವ ಭಾಗ ಸೂರ್ಯಮುಖವಾಗಿ-ಎಂದರೆ ಪಶ್ಚಿಮ ದಿಶೆಗೆ-ಇದೆ. ಮುಂದಿನ ಸಂಜೆಗಳಲ್ಲಿ ಚಂದ್ರನ ಕಲೆ ಕ್ರಮೇಣ ಏರುವುದರ ಜೊತೆಗೆ ಸಂಜೆ ವೇಳೆ ಚಂದ್ರ ಸೂರ್ಯನಿಗಿಂತ ಪಶ್ಚಿಮ ಪುರ್ವ ದಿಶೆಯಲ್ಲಿ ಸಾಕಷ್ಟು ದೂರ ಸರಿದಿರುತ್ತದೆ ಕೂಡ. 15 ದಿವಸಗಳಾಗುವಾಗ ರೇಖಾಂಶ ವ್ಯತ್ಯಾಸ 1800 ಆಗಿರುತ್ತದೆ. ಅಂದು ಭೂವೀಕ್ಷಕನಿಗೆ ಸೂರ್ಯ ಮತ್ತು ಚಂದ್ರ ವಿರುದ್ಧ ದಿಶೆಗಳಲ್ಲಿರುತ್ತವೆ. ಆದ್ದರಿಂದ ಚಂದ್ರನ ಹೊಳೆಯುವ ಭಾಗ ಪುರ್ತಿ ಗೋಚರಿಸುತ್ತದೆ. ಇದೇ ಹುಣ್ಣಿಮೆ. ಚಂದ್ರನ ಪಶ್ಚಿಮಾಭಿಮುಖ ಚಲನೆ ಏಕಪ್ರಕಾರ ಮುಂದುವರಿಯುತ್ತಲೇ ಇರುವುದು. ಆದ್ದರಿಂದ ರೇಖಾಂಶವ್ಯತ್ಯಾಸ ವೃದ್ಧಿಗೊಳ್ಳುತ್ತಿರುವುದು. ಹೀಗಾಗಿ ಚಂದ್ರೋದಯ ಒಂದು ಸಂಜೆಯಿಂದ ಮತ್ತೊಂದು ಸಂಜೆಗೆ ತಡವಾಗುತ್ತಾ, ಇದೇ ವೇಳೆ ಚಂದ್ರನ ಕಲೆ ತಗ್ಗುತ್ತಾ, ಸಾಗುವುದು. ಈಗ ಚಂದ್ರನ ಪುರ್ವಪಾಶರ್ವ್ ಬೆಳಕನ್ನು ಬಿರುತ್ತದೆ. ಹುಣ್ಣಿಮೆಯ ಅನಂತರದ 15 ದಿವಸಗಳಲ್ಲಿ ಸೂರ್ಯ ಮತ್ತು ಚಂದ್ರರ ರೇಖಾಂಶ ವ್ಯತ್ಯಾಸ 3600 ಎಂದರೆ 00 ಆಗಿ ಅಂದು ಪುನಃ ಅಮಾವಾಸ್ಯೆ ಸಂಭವಿಸುವುದು.
ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗಿನ 15 ದಿವಸಗಳ ಅವಧಿಗೆ ಶುಕ್ಲಪಕ್ಷವೆಂದು ಹೆಸರು. ಚಂದ್ರನ ಕಲೆಗಳಲ್ಲಿ ತಲೆದೋರುವ ಏರಿಳಿತಗಳನ್ನು ಚಿತ್ರ 19 (ಎ)ನಲ್ಲಿ ಕಾಣಿಸಿದೆ.
ಗಿ ತಿಂಗಳ ಬೆಳಕು : ಸೂರ್ಯನಿಂದ ಹೊಮ್ಮುವ ಬೆಳಕು, ಉಷ್ಣ ಮುಂತಾದ ವಿದ್ಯುತ್ಕಾಂತ ವಿಸರಣೆ (ಶಕ್ತಿ) ಚಂದ್ರನ ಮೇಲೆ ಕೂಡ ಬೀಳುತ್ತದೆ. ಇದರ ಒಂದಂಶವನ್ನು ಚಂದ್ರ ಪ್ರತಿಫಲಿಸುವುದು. ಪ್ರತಿಫಲಿತ ಬೆಳಕಿಗೆ ತಿಂಗಳ ಬೆಳಕು ಅಥವಾ ಬೆಳದಿಂಗಳು ಎಂದು ಹೆಸರು. ಭೂಮಿ ಸಹ ಇದೇ ರೀತಿ ಬೆಳಕನ್ನು ಪ್ರತಿಫಲಿಸುತ್ತದೆ. ಇದರ ಹೆಸರು ಭೂಕಾಂತಿ. ಬಾಲಚಂದ್ರ ಬಿಂಬದಲ್ಲಿ ಹೊಳೆಯುವ ಭಾಗಕ್ಕೆ ಪುರಕವಾಗುವಂತೆ ಮಸಕಾದ ಭಾಗ ಎದ್ದು ಕಾಣುವುದು ಭೂಕಾಂತಿಯ ಪರಿಣಾಮ. ಬೆಳುದಿಂಗಳು ತಂಪು ಎನ್ನುವ ಪ್ರಚಲಿತ ಭಾವನೆ ತಪ್ಪು. ಈ ಕೆಳಗಿನ ಯಾದಿ ಇದನ್ನು ಸ್ಪಷ್ಟಪಡಿಸುತ್ತದೆ. ವಿಸರಣೆಯ ಶೇಕಡಾ ಸೌರಬೆಳಕು ಬೆಳುದಿಂಗಳು ಅತಿನೇರಿಳೆ (ಹ್ರಸ್ವ ಅಲೆ) ... 10 1 ದೃಗ್ಗೋಚರ ಬೆಳಕು ... 46 5 ಅತಿರಕ್ತ (ದೀರ್ಘ ಅಲೆ) ... 44 6 ಗ್ರಹೋಷ್ಣ (ಅತಿ ದೀರ್ಘ ಅಲೆ) ... 0 88
ಗ್ರಹೋಷ್ಣ ಎಂದರೆ ಒಂದು ಗ್ರಹ (ಅಥವಾ) ಉಪಗ್ರಹ; ನಕ್ಷತ್ರವಲ್ಲ ಎನ್ನುವ ಅರ್ಥದಲ್ಲಿ) ತನ್ನ ಮೇಲೆ ಪಾತವಾಗುವ ಸೌರ ಉಷ್ಣವನ್ನು ಪ್ರತಿಫಲಿಸುವುದರಿಂದ ದೊರೆಯುವ ಉಷ್ಣ. ಸುಮಾರು ಐದು ಲಕ್ಷ ಹುಣ್ಣಿಮೆ ಚಂದ್ರರು ಏಕಕಾಲದಲ್ಲಿ ನೀಡುವ ಬೆಳಕಿನ ಮೊತ್ತ ಸೂರ್ಯನ ಬೆಳಕಿಗೆ ಸಮವಾದೀತು! ಅಥವಾ, ರಾತ್ರಿಯ ಆಕಾಶವಿಡೀ ಹೊಳೆಯುವ ಚಂದ್ರ ಆಗಿದ್ದರೆ ಆಗ ನಮಗೆ ದೊರೆಯುವ ಬೆಳಕು ಸೂರ್ಯನ ಬೆಳಕಿನ 1/5 ಅಂಶ ಮಾತ್ರವಾದೀತಷ್ಟೆ! ತಿಂಗಳ ಬೆಳಕಿನ ತೀವ್ರತೆ 1/4 ಮೀಟರ್-ಕ್ಯಾಂಡಲ್ (ಒಂದು ಮೀಟರ್ ದೂರದಲ್ಲಿ ಇರಿಸಿದ ಕ್ಯಾಂಡಲ್, ಎಂದರೆ ಮೇಣದ ಬತ್ತಿ, ಬೀರುವ ಬೆಳಕಿಗೆ 1 ಮೀ. ಕ್ಯಾಂ. ಎಂದು ಹೆಸರು). ಬೆಳುದಿಂಗಳು ಇದರ ¼ ರಷ್ಟು ಉಂಟಷ್ಟೆ. ಹುಣ್ಣಿಮೆಯ ಚಂದ್ರನ ಕಾಂತಿಮಾನ- 12.5 (ಶುಕ್ರ -4.4, ಗುರು -2.5, ಲುಬ್ಧಕ -1.58). ಚಂದ್ರನ ಆಲ್ಬೆಡೊ (ಎಂದರೆ ಪ್ರತಿಫಲನ ಸಾಮಥರ್ಯ್; ಪ್ರತಿಫಲಿತ ಬೆಳಕು ಮತ್ತು ಪಾತ ಬೆಳಕುಗಳ ನಿಷ್ಪತ್ತಿ ಇದರ ಸೂಚ್ಯಂಕ) 0.07. ಸೌರವ್ಯೂಹದ ಗ್ರಹಗಳಲ್ಲಿ ಗರಿಷ್ಠ ಆಲ್ಬೆಡೊ ಶುಕ್ರನಿಗೂ (0.64) ಕನಿಷ್ಠ ಆಲ್ಬೆಡೊ ಬುಧನಿಗೂ (0.06)ಉಂಟು. ಭೂಮಿಯ ಆಲ್ಬೆಡೊ 0.4. ಚಂದ್ರನ ಮೇಲೆ ಪಾತವಾಗುವ ಸೌರ ಬೆಳಕಿನ ಶೇ.93ರಷ್ಟು ಅಲ್ಲಿಯೇ ಹೀರಿಕೊಳ್ಳಲ್ಪಡುತ್ತದೆ. ಇದು ಉಷ್ಣವಾಗಿ ಪರಿವರ್ತನೆಗೊಂಡು ಚಂದ್ರನನ ಮೇಲ್ಮೈಯ ಉಷ್ಣತೆ ಏರುವುದು. ಚಂದ್ರನ ಆಲ್ಬೆಡೊ ಇಷ್ಟೊಂದು ಕಡಿಮೆ ಆಗಿರಲು ಕಾರಣ ಅದರ ತಲದ ಏರಿಳಿತಗಳು, ಡೊಗರು, ಕಮರಿಗಳು. ಆರ್ಧಚಂದ್ರ (ಎಂದರೆ ಚಂದ್ರನ ಕಲೆ ಳಿ) ಬೀರುವ ಬೆಳಕು, ಹುಣ್ಣಿಮೆ ಚಂದ್ರ ಬೀರುವ ಬೆಳಕಿನ 1/9 ರಷ್ಟು ಮಾತ್ರ ಉಂಟು. ಇದು ಚಂದ್ರನ ತಲದ ವಕ್ರತೆಗಳನ್ನೂ ಪಾತವಾಗುವ ಸೌರಕಿರಣಗಳ ದಿಸೆಯನ್ನೂ ಅವಲಂಬಿಸಿ ಹೀಗಾಗುತ್ತದೆ.
ಗಿI ಕೆಲವು ಉಪಯುಕ್ತ ಮಾಹಿತಿಗಳು : ಚಂದ್ರಗೋಳದ ತ್ರಿಜ್ಯ (ಭೂಮಿಯ ಸಮಭಾಜಕೀಯ ತ್ರಿಜ್ಯ = 1) : 0.27227 ; ಎಂದರೆ 1736.7 ಕಿ.ಮೀ ಸಲೆ : 105 ಕಿ.ಮೀ2 ಘನಗಾತ್ರ : 219 x 108 ಕಿಮೀ.3 ದ್ರವ್ಯರಾಶಿ (ಭೂಮಿ=1) : ; ಎಂದರೆ 7.35 x 1025 ಗ್ರಾಂ. ಸರಾಸರಿ ಸಾಂದ್ರತೆ (ನೀರು=1) : 3.36 ಚಂದ್ರತಲದಲ್ಲಿ ಗುರುತ್ವ ವೇಗೋತ್ಕರ್ಷ : 163 ಸೆಂಮೀ. ಸಂಯುತಿ ಅವಧಿ (ಚಾಂದ್ರಮಾಸ) : 29.530588 ದಿ = 29 ದಿ. 12 ಗಂ. 44 ಮಿ. 2.8 ಸೆ, ನಾಕ್ಷತ್ರಿಕ ಅವಧಿ 27.321661 ದಿ. = 27 ದಿ. 7 ಗಂ. 43 ಮಿ. 11.5 ಸೆ. ಸರಾಸರಿ ದಿಗ್ವ್ಯತ್ಯಾಸ : 57’2.7" ಸರಾಸರಿ ದೂರ (ಭೂಮಿಯ ಸಮಭಾಜಕೀಯ ತ್ರಿಜ್ಯ = 1) : 60.2665; ಎಂದರೆ 384,400 ಕಿಮೀ. ಸರಾಸರಿ ತೋರ್ಕೆ ತ್ರಿಜ್ಯ : 15' 32" (ಸೂರ್ಯ 16') ಕಕ್ಷೆಯ ಸರಾಸರಿ ಉತ್ಕೇಂದ್ರತೆ : 0.0549 ಸರಾಸರಿ ಭೂಮಿ ನೀಚ ದೂರ : 363,300 ಕಿಮೀ (ಕನಿಷ್ಠ 356,500 ಕಿ.ಮೀ) ಸರಾಸರಿ ಭೂಮ್ಯುಚ್ಚ ದೂರ : 405,500 ಕಿ.ಮೀ (ಗರಿಷ್ಠ : 406,800 ಕಿ.ಮೀ) ಕ್ರಾಂತಿವೃತ್ತಕ್ಕೆ ಕಕ್ಷೆಯ ಸರಾಸರಿ ಬಾಗು : 50 8' 43" ಕ್ರಾಂತಿವೃತ್ತಕ್ಕೆ ಚಾಂದ್ರ ಸಮಭಾಜಕೀಯವೃತ್ತದ ಬಾಗು ; 10 32"
ಗಿII ಭಾರತೀಯ ಖಗೋಳ ವಿಜ್ಞಾನದಲ್ಲಿ ಚಂದ್ರ : ಆಕಾಶದಲ್ಲಿ ಸೂರ್ಯನಾದ ಬಳಿಕ ಅತ್ಯಂತ ಗಮನಾರ್ಹ ಕಾಯವೆಂದರೆ ಚಂದ್ರನೇ. ಕೇವಲ ಪ್ರಕಾಶ ಒಂದರಲ್ಲೇ ಅಲ್ಲ, ತನ್ನ ಕಲೆಗಳ ಏರಿಳಿತಗಳು ನಾಕ್ಷತ್ರಿಕ ಹಿನ್ನೆಲೆಯಲ್ಲಿ ವೇಗಯುತವಾದ ಚಲನೆ ಇವುಗಳಿಂದಲೂ ಚಂದ್ರ ಒಂದು ವಿಶಿಷ್ಟ ಗುಣವಿರುವ ಆಕಾಶಕಾಯ. ಚಂದ್ರನಿಗೆ ಸ್ವಂತ ಪ್ರಕಾಶವಿಲ್ಲ. ಸೂರ್ಯಪ್ರಕಾಶವನ್ನು ಪ್ರತಿಫಲಿಸಿ ಅದು ಬೆಳಗುತ್ತದೆ ಎನ್ನುವುದನ್ನು ಭಾರತೀಯ ಖಗೋಳವಿಜ್ಞಾನಿಗಳು ಋಗ್ವೇದ ಕಾಲದಷ್ಟು ಹಿಂದೆಯೇ ಗಮನಿಸಿ ಉಲ್ಲೇಖಿಸಿದ್ದಾರೆ. (ಋಗ್ವೇದ Iಘಿ 71.9) ಅಮಾವಾಸ್ಯೆಯ ವಿದ್ಯಮಾನವನ್ನು ಆಲಂಕಾರಿಕವಾಗಿ ಶತಪಥ ಬ್ರಾಹ್ಮಣದಲ್ಲಿ ಈ ಕೆಳಗಿನಂತೆ ವರ್ಣಿಸಿದೆ (ಶ.ಬ್ರಾ. 1.6.4. 18-20) :
ಅಲ್ಲಿ ಉರಿಯುತ್ತಿರುವ ಆ ಕಾಯ (ಎಂದರೆ ಸೂರ್ಯ) ಬೇರೆ ಯಾರೂ ಅಲ್ಲ-ಸಾಕ್ಷಾತ್ ಇಂದ್ರನೇ : ಇನ್ನು ಚಂದ್ರನೋ ಸ್ವತಃ ವೃತ್ರನೇ. ಪ್ರವೃತ್ತಿಯಿಂದ ಇಂದ್ರ ವೃತ್ರನ ಶತ್ರು. ಈ ವೃತ್ರ ಹಿಂದೆ (ಎಂದರೆ ಹಿಂದಿನ ರಾತ್ರಿ) ಇಂದ್ರ (ಸೂರ್ಯ)ನಿಗಿಂತ ಅತಿ ದೂರದಲ್ಲಿ ಮೂಡಿದ್ದರೂ ಈಗ ಅವನು (ವೃತ್ರ) ಇಂದ್ರನೆಡೆಗೆ ಈಸಿ ಅವನ ತೆರೆಬಾಯಿಯನ್ನು ಪ್ರವೇಶಿಸುತ್ತಾನೆ. ಹೀಗೆ ವೃತ್ರನನ್ನು ಕಬಳಿಸಿದ ಇಂದ್ರ ಮೂಡುತ್ತಾನೆ-ವೃತ್ರ ಈಗ ಎಲ್ಲೂ ಕಾಣಿಸುವುದಿಲ್ಲ. ವೃತ್ರನ ಸತ್ತ್ವವನ್ನು ಹೀರಿಕೊಂಡು ಇಂದ್ರ ಆತನನ್ನು ಹೊರ ಗೆಸೆದುಬಿಡುತ್ತಾನೆ. ಸತ್ತ್ವ ಕಳೆದುಕೊಂಡ ವೃತ್ರನನ್ನು ಪಶ್ಚಿಮಾಕಾಶದಲ್ಲಿ ಕಾಣಬಹುದು. ಅಲ್ಲಿಂದ ಮುಂದೆ ಅವನು ಕ್ರಮೇಣ ವೃದ್ಧಿಹೊಂದುತ್ತಾನೆ. ಪುನಃ ಇಂದ್ರನಿಗೆ ಆಹಾರವಾಗುತ್ತಾನೆ.
ಸೂರ್ಯನನ್ನು ಕುರಿತು ಚಂದ್ರನ ಪಶ್ಚಿಮ-ಪುರ್ವ ದಿಶೆಯ ಚಲನೆಯನ್ನೂ ಚಂದ್ರನ ಕಲೆಗಳ ಏರಿಳಿತಗಳನ್ನೂ ಬಲು ಸೊಗಸಾಗಿ ವರ್ಣಿಸುವ ಚಿತ್ರವಿದು. ಕಾಲ ಮಾಪನವನ್ನು ಮಾಡಲು ಸಹಜವಾಗಿ ಒದಗುವ ಆಕಾಶಗಡಿಯಾರ ಚಂದ್ರ ಎನ್ನುವ ಸಂಗತಿ ಬಲು ಪ್ರಾಚೀನ ಕಾಲದಲ್ಲೇ ಭಾರತೀಯರಿಗೆ ತಿಳಿದಿತ್ತು. ಚಂದ್ರನ ಸಂಯುತಿ ಅವಧಿ (ಚಾಂದ್ರಮಾಸ) ಹಾಗೂ ನಾಕ್ಷತ್ರಿಕ ಅವಧಿ ಇವೆರಡನ್ನೂ ಅವರು ಗುರುತಿಸಿದ್ದರು-ಮೊದಲನೆಯದು ಸೂರ್ಯನನ್ನು ಕುರಿತಂತೆ ಒಂದು ಪುರ್ಣ ಪರಿಭ್ರಮಣೆ (ಅವಧಿ 29.5 ದಿ.) ಎರಡನೆಯದು ಸ್ಥಿರ ನಕ್ಷತ್ರಗಳನ್ನು ಕುರಿತಂತೆ ಒಂದು ಪುರ್ಣ ಪರಿಭ್ರಮಣೆ (ಅವಧಿ ಸುಮಾರು 27 ದಿ.) ಈ ವಿವರಗಳು ಆರಂಭದ ಸಂಹಿತೆಗಳಲ್ಲೇ ಬಂದಿವೆ, ಚಂದ್ರಕಕ್ಷೆಯಲ್ಲಿರುವ ಆಶ್ವಿನಿಯಿಂದ ರೇವತಿವರೆಗಿನ 27 ನಕ್ಷತ್ರಗಳಿಗೆ ಪ್ರಾಧಾನ್ಯ ಬಂದದ್ದು ಈ ಕಾರಣದಿಂದ. ಗಿIII ಮಾನವ, ಚಂದ್ರನ ಮೇಲೆ : ಚಂದ್ರನ ಮೇಲೆ ಮಾನವ ಮೊದಲು ಕಾಲಿಟ್ಟಿದ್ದು 1969ರ ಜುಲೈ 21 ರಂದು. (ನೋಡಿ-ಅಪೋಲೊ-11). ಆಕಾಶಯಾನದ ಇತರ ವಿವರಗಳಿಗಾಗಿ (ನೋಡಿ- ಅಂತರಿಕ್ಷ ಸಂಶೋಧನೆ); ಉಪಗ್ರಹ,ಕೃತಕ. ಮನುಷ್ಯನನ್ನು ಚಂದ್ರನ ಮೇಲೆ ಇಳಿಸಿ, ಸ್ವಲ್ಪ ಕಾಲ ಅಲ್ಲಿಯೇ ಉಳಿಸಿ, ಬಳಿಕ ಭೂಮಿಗೆ ಮರಳಿಸುವ ಉದ್ದೇಶದಿಂದ ಅಪೊಲೊ ಆಕಾಶಯೋಜನೆ 1961-70ರ ದಶಕದಲ್ಲಿ ಕಾರ್ಯಪ್ರವೃತ್ತವಾಯಿತು. ಇದರ ಪ್ರಥಮ ಫಲ ಸಿದ್ಧಿಸಿದ್ದು 1969ರ ಜುಲೈ 21ರಂದು ಮೊದಲಿಗೆ ನೀಲ್ ಆರ್ಮ್ಸ್ಟ್ರಾಂಗ್ ನಂತರ ಎಡ್ವಿನ್ ಅಲ್ಡ್ರಿನ್ ಚಂದ್ರನ ಮೇಲೆ ಕಾಲಿಟ್ಟಾಗ. ಅವರು ಪಯಣಿಸಿದ ಅಂತರಿಕ್ಷ ನೌಕೆಯ ಹೆಸರು ಅಪೊಲೊ-11. ಆ ಮೊದಲಿನ ಅಪೊಲೊ ಹಾಗೂ ಇತರ ಮಾನವರಹಿತ ಅಂತರಿಕ್ಷ ನೌಕೆಗಳು ಮನುಷ್ಯನ ಚಂದ್ರಾವತರಣಕ್ಕೆ ಬೇಕಾದ ಮಾಹಿತಿಗಳನ್ನು ಸವಿವರವಾಗಿ ಮತ್ತು ವಿಪುಲವಾಗಿ ಒದಗಿಸುವುದರಲ್ಲಿ ಯಶಸ್ವಿಯಾದ್ದರಿಂದಲೇ ಆರ್ಮ್ಸ್ಟ್ರಾಂಗ್ “ ಅದು ಮಾನವನೊಬ್ಬನಿಗೆ ಬಲು ಪುಟ್ಟ ಹೆಜ್ಜೆ, ಆದರೆ ಮಾನವಜನಾಂಗಕ್ಕೆ ದೈತ್ಯ ನೆಗೆತ” ಈ ಅರ್ಥಬರುವ ಮೊತ್ತಮೊದಲ ಮಾತನ್ನು ಚಂದ್ರನ ಮೇಲಿಂದ ಉದ್ಗರಿಸಲು ಸಮರ್ಥನಾದ. ಅಪೊಲೊ ಸರಣಿ ಮುಂದುವರಿದು 1972ರ ಡಿಸೆಂಬರಿನಲ್ಲಿ ಅಪೊಲೊ-17 ನೌಕೆ ಅದರ ಯಾನಿಗಳ ಸಮೇತ ಧರೆಗೆ ಸುರಕ್ಷಿತವಾಗಿ ಮರಳಿದಾಗ ಅಪೊಲೊ ಯೋಜನೆ, ಎಂದರೆ “ಚಂದ್ರನ ಮೇಲೆ ಮಾನವ,” ಯೋಜನೆ ಪುರ್ಣವಾಯಿತು. ಈ ಯೋಜನೆಯ ಮುಕ್ತಾಯ ಮಾನವನ ಜ್ಞಾನಕ್ಷಿತಿಜವನ್ನು ಆರು ಪ್ರಮುಖ ಕ್ಷೇತ್ರಗಳಲ್ಲಿ ವಿಸ್ತರಿಸಿತು.
ಮೊದಲನೆಯದು ಜೀವವಿಜ್ಞಾನ ಕ್ಷೇತ್ರ. ಮನುಷ್ಯ ಭೂಮಿಯ ಶಿಶು. ಇಲ್ಲಿನ ವಾಯುಮಂಡಲ, ಜಲರಾಶಿ, ಹವೆ, ಸಸ್ಯಸಂಪತ್ತು, ಗುರುತ್ವಬಲ, ಸೌರವಿಕಿರಣ, ಭೌತಪರಿಸ್ಥಿತಿ, ಸಾಮಾಜಿಕ ಜೀವನ ಒಂದೊಂದೂ ಈತನ ದೇಹ ಮತ್ತು ಮನಸ್ಸನ್ನು ರೂಪಿಸಿದೆ. ಭೂಮಿಯಿಂದ ಹೊರಗೆ ಹೋಗುವ ಮನುಷ್ಯ ಇವೆಲ್ಲ ಅನುಕೂಲ ಪ್ರಭಾವಗಳಿಂದ ಪರೋಕ್ಷವಾಗಿ ತಿಳಿದ ಮತ್ತು ತಿಳಿಯದ ಎಷ್ಟೋ ಪ್ರಭಾವಗಳಿಗೆ ಈಡಾಗುತ್ತಾನೆ. ಅಂತರಿಕ್ಷದ ಹಾಗೂ ಅಂತರಿಕ್ಷಯಾನದ ಹಲವಾರು ವಿದ್ಯಮಾನಗಳನ್ನು ಭೂಮಿಯಲ್ಲೇ ಕೃತಕವಾಗಿ ಸೃಷ್ಟಿಸಿ ಅವುಗಳಿಗೆ ಮನುಷ್ಯನನ್ನು ಒಡ್ಡಿ ಆ ಪರಿಣಾಮಗಳನ್ನು ಆಭ್ಯಸಿಸಿ ಅವನನ್ನು ಅಂತರಿಕ್ಷಯಾನಕ್ಕೆ ಸಿದ್ಧಪಡಿಸಲಾಯಿತು. ಸುಸಜ್ಜಿತವಾದ ಅಂತರಿಕ್ಷ ಉಡುಪನ್ನು ತೊಟ್ಟು ಭೂಗುರುತ್ವದ ಆರರಲ್ಲಿ ಒಂದರಷ್ಟು ಮಾತ್ರ ಇರುವ ಚಂದ್ರತಲದಲ್ಲಿ ನಡೆಯುವುದು, ನಿಲ್ಲುವುದು, ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಇವೇ ಮೊದಲಾದ ಅಂತರಿಕ್ಷ ಚಟುವಟಿಕೆಗಳು ಇಂಥ ಪ್ರಯತ್ನದ ಫಲ. ಅಂದರೆ ಯುಕ್ತಶಿಕ್ಷಣ, ತಕ್ಕ ಪೋಷಾಕು, ಸವಾಲನ್ನು ಎದುರಿಸುವ ದಿಟ್ಟತನ, ಸಮರ್ಥ ಭೂನಿಯಂತ್ರಣ ಇವೇ ಮುಂತಾದವು ಸುಸಂಘಟಿತವಾಗಿ ಮೇಳೈಸಿದರೆ ಮನುಷ್ಯ ಭೂಮಿಯಿಂದ ಹೊರಕ್ಕೆ ಹೋಗಿ ಅಜ್ಞಾತಲೋಕಗಳ ಅನ್ವೇಷಣೆ ನಡೆಸಿ ಯಶಸ್ವಿಯಾಗಿ ಮರಳಬಲ್ಲ ಎಂಬುದು ಇದರಿಂದ ವೇದ್ಯವಾಯಿತು.
ಎರಡನೆಯದು ಯಂತ್ರನಿರ್ಮಾಣ ಕ್ಷೇತ್ರ. ಆಕಾಶಯಾನಕಾಲದಲ್ಲಿ ಎದುರಾಗುವ ವೇಗ, ಉಷ್ಣತೆ, ಸಂಮರ್ದ, ಘರ್ಷಣೆ, ಸೌರವಿಕಿರಣ ಇವೆಲ್ಲವೂ ಭೂಪರಿಸರದ ಯಾವ ಪ್ರಯಾಣದಲ್ಲೂ ಎದುರಾಗದಂಥವು. ಇಂಥ ತೀವ್ರ ಪ್ರಭಾವಗಳ ವಿರುದ್ಧ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ತಮ್ಮೊಳಗಿರುವ ಸೂಕ್ಷ್ಮೋಪಕರಣಗಳಿಗೂ ಗಗನಯಾತ್ರಿಗಳಿಗೂ ರಕ್ಷಣೆ ಒದಗಿಸುವ ಅಂತರಿಕ್ಷನೌಕೆಗಳ ನಿರ್ಮಾಣ ಮನುಷ್ಯ ಹಿಂದೆಂದೂ ಎದುರಿಸದ ಹೊಸ ಸಮಸ್ಯೆಗಳನ್ನೇ ಸೃಷ್ಟಿಸಿದುವು. ಉದಾಹರಣೆಗೆ ಅಪೊಲೊ-11 ನೌಕೆ ಅದರ ವಾಹನ ಸ್ಯಾಟರ್ನ್-5 ರಾಕೆಟ್ಟಿನ ಸಮೇತ ನೆಲದ ಮೇಲೆ ನಿಂತಿದ್ದಾಗ ಈ ವ್ಯವಸ್ಥೆಯ ತೂಕ 3000 ಟನ್ ಎತ್ತರ 110 ಮೀಟರ್, ಇಂಥ ಮಹಾತೂಕವನ್ನು ಭೂಮಿಯಿಂದ ಮೇಲಕ್ಕೆ ಉಡಾಯಿಸುವಾಗ 3400 ಟನ್ನುಗಳಷ್ಟು ನೂಕುಬಲವನ್ನು ಮೊದಲು ಉತ್ಪಾದಿಸ ಬೇಕಾಯಿತು. ಭೂಮಿಯನ್ನು ಸುತ್ತುವ ಕಾರ್ಯದಿಂದ ವಿಮೋಚನೆ ಪಡೆದ ಹಂತದಲ್ಲಿ ನೌಕೆಯ ವೇಗ ಗಂಟೆಗೆ 39,260 ಕಿಲೋ ಮೀಟರುಗಳಷ್ಟಿತ್ತು! ಚಂದ್ರಯಾನ ಮುಗಿಸಿ ಭೂಮಿಗೆ ಮರಳುವಾಗ ನೌಕೆಯ ಹೊರಕವಚದ ಉಷ್ಣತೆ 26000 ಸೆ. ಇಂಥ ಸಮಸ್ಯೆಗಳನ್ನು ನಿರೀಕ್ಷಿಸಿ ಸೂಕ್ತ ಮತ್ತು ಸಮರ್ಥ ಯಂತ್ರಗಳನ್ನೂ ರಚನೆಗಳನ್ನೂ ನಿರ್ಮಿಸಲೆಂದೇ ಮೈದಳೆದ ವಿಜ್ಞಾನವಿಭಾಗದ ಹೆಸರು ಅಂತರಿಕ್ಷ ವಿನ್ಯಾಸಶಾಸ್ತ್ರ. ನೌಕೆಯ ಒಂದೊಂದು ಬಿಡಿಭಾಗವೂ ಅತಿನಿಷ್ಕೃಷ್ಟ ಮತ್ತು ಕಠಿಣ ಪುರ್ವಪರೀಕ್ಷೆಗೆ ಒಳಗಾದ ವಿನಾ ಅದು ಯಾನಯೋಗ್ಯವಾಗುವುದಿಲ್ಲ. ಇಂಥ ಬಿಡಿ ಭಾಗಗಳ ಆಲೇಖ್ಯ ಹೇಗಿರಬೇಕು, ಆ ಭಾಗಗಳನ್ನು ಯಾವ ಪದಾರ್ಥಗಳಿಂದ ನಿರ್ಮಿಸಬೇಕು ಎಂಬ ವಿವರಗಳೆಲ್ಲವೂ ಈಗ ಅಂತರಿಕ್ಷ ವಿನ್ಯಾಸಕರಿಗೆ ತಿಳಿದಿರುವ ಸಂಗತಿಗಳಾಗಿವೆ.
ಮೂರನೆಯದು ಶಕ್ತಿಮೂಲಾನ್ವೇಷಣೆ. ಅಂತರಿಕ್ಷಯಾನ ಸಾಂಪ್ರದಾಯಿಕ ವಿಮಾನಸಂಚಾರಕ್ಕಿಂತ ತೀರ ಭಿನ್ನವಾದದ್ದು. ಅತಿಯಾಗಿ ಸರಳೀಕರಿಸಿ ಹೇಳುವುದಾದರೆ ವಿಮಾನಯಾನವೆಂದರೆ ವಾಯುಸಮುದ್ರದಲ್ಲಿ ಸಾಗುತ್ತಿರುವ ಹಡಗು. ಅಂತರಕ್ಷ ನೌಕೆ ಹೀಗಲ್ಲ. ಅದು ಭೂಮಿಯ ವಾಯುಮಂಡಲದ ತೀರ ಸೀಮಿತವಲಯವನ್ನು ತೊರೆದ ಬಳಿಕ ನಿರ್ವಾತ ಪ್ರದೇಶದಲ್ಲಿ ಬಹುಕಾಲ ಬಹುದೂರ ಸಂಚರಿಸುತ್ತಿರುವುದು. ಅಲ್ಲದೆ ಭೂಗುರುತ್ವದ ಬಿಗಿ ಅಪ್ಪುಗೆಯಿಂದ ಪಾರಾಗಿ ಹೋಗಲು ನೌಕೆ ಗಂಟೆಗೆ 40,000 ಕಿಲೋಮೀಟರುಗಳಿಗೂ ಮಿಕ್ಕಿದ ವೇಗವನ್ನು ಪಡೆಯಬೇಕಾಗುತ್ತದೆ. ಆದ್ದರಿಂದ ಇಲ್ಲಿ ಬೇಕಾದದ್ದು ನಿರ್ವಾತಪ್ರದೇಶದಲ್ಲಿ ಅಧಿಕವೇಗವನ್ನು ನೌಕೆಗೆ ನೀಡಬಲ್ಲ ಶಕ್ತಿಮೂಲ. ರಾಕೆಟ್ಟುಗಳ ನಿರ್ಮಾಣ ಈ ಹೊಸ ಆಯಾಮವನ್ನು ಒದಗಿಸಿದೆ. ರಾಕೆಟನ್ನು ಉರಿಸಿದಾಗ ಅದರ ಬೆಂಕಿಯ ನಾಲಗೆ ಚಾಚುವ ದಿಶೆಗೆ ವಿರುದ್ಧ ದಿಶೆಯಲ್ಲಿ ನೌಕೆ ಚಲಿಸುತ್ತದೆ. ಈ ನಿಯಮಾನುಸಾರ ರಾಕೆಟುಗಳನ್ನು ಸೂಕ್ತದಿಶೆಯಲ್ಲಿ ಉರಿಸಿ ಒಂದು ನೌಕೆಗೆ ಅಧಿಕವೇಗವನ್ನು ನೀಡಬಹುದು. ಇಲ್ಲವೇ ನೌಕೆಯ ವೇಗವನ್ನು ಮಂದಗೊಳಿಸಬಹುದು ಅಥವಾ ಅದರ ಚಲನದಿಶೆಯನ್ನು ಬದಲಾಯಿಸಬಹುದು. ರಾಕೆಟ್ಟುಗಳಲ್ಲಿ ಶಕ್ತಿಮೂಲವಾಗಿ ಘನ ಮತ್ತು ದ್ರವ ನೋದನಕಾರಿಗಳೆರಡರ (ನೋದನಕಾರಿ ಎಂದರೆ ಇಂಧನ ಮತ್ತು ಆಕ್ಸಿಡ್ಕಾರಕಗಳ ಜೋಡಿ) ಬಳಕೆಯೂ ಉಂಟು. ಅಪೊಲೊ-11ನ್ನು ಒಯ್ದ ಸ್ಯಾಟರ್ನ್-5 ರಾಕೆಟ್ನಲ್ಲಿ ದ್ರವ ಹೈಡ್ರೊಜನ್, ಸೀಮೆಎಣ್ಣೆ ಮತ್ತು ದ್ರವ ಆಕ್ಸಿಜನ್ನುಗಳ ಮಿಶ್ರಣವನ್ನು ನೋದನಕಾರಿಗಳಾಗಿ ಉಪಯೋಗಿಸಿದ್ದರು. ದ್ರವ ಹೈಡ್ರೋಜನ್ನನ್ನು-2530 ಸೆ. ನಲ್ಲಿಯೂ ದ್ರವ ಆಕ್ಸಿಜನ್ನನ್ನು-1730 ಸೆ.ನಲ್ಲಿಯೂ ಕಾಪಾಡಿಕೊಂಡು ಯುಕ್ತ ಮಿಶ್ರಣವನ್ನು ಪುರೈಕೆ ಮಾಡಿ ಶಕ್ತಿಯನ್ನು ಒದಗಿಸಲಾಯಿತು. ಇಂಥ ಆಸ್ಫೋಟಕ ನೋದನಕಾರಿಗಳನ್ನು ಭಾರಿಪ್ರಮಾಣದಲ್ಲಿ ಸುದೀರ್ಘ ಅಂತರಿಕ್ಷಯಾನಕ್ಕೆ ಕೊಂಡೊಯ್ಯುವುದು ಬಲು ದುಬಾರಿಯ ಸಾಹಸವಾಗುತ್ತದೆ. ಆದ್ದರಿಂದ ಆಕಾಶಕಾಯಗಳ ಗುರುತ್ವಾಕರ್ಷಣ ಶಕ್ತಿಯನ್ನೂ ಅಲ್ಪ ಪ್ರಮಾಣದಲ್ಲಿ ಸೂರ್ಯನಿಂದ ದೊರೆಯುವ ಶಕ್ತಿಯನ್ನೂ ಪರಮಾಣು ಶಕ್ತಿಯನ್ನೂ ಅಂತರಿಕ್ಷನೌಕೆಯೊಂದರ ಚಲನೆಗಾಗಿ ಬಳಸಿಕೊಳ್ಳುವ ಏರ್ಪಾಡು ಸಹ ಇಂದು ಉಂಟು. ನಾಲ್ಕನೆಯದು ನಿಯಂತ್ರಣ ವಿಜ್ಞಾನ: ಇಂದಿನ ಜೆಟ್ ವಿಮಾನಗಳ ಯಾನವೇಗ ಏರುತ್ತಿರುವಂತೆ ಅವುಗಳ ನಿಯಂತ್ರಣವನ್ನು ಬಲುಮಟ್ಟಿಗೆ ಸ್ವಯಂಚಲನೆಗೊಳಿಸಲಾಗುತ್ತಿದೆ. ಅಂತಹ ಉನ್ನತವೇಗದಲ್ಲಿ ಚಾಲಕನ ನಿರ್ಧರಣ ಸಾಮಥರ್ಯ್ ಸಾಕಷ್ಟು ನಿಷ್ಕೃಷ್ಟವೂ ಕ್ಷಿಪ್ರವೂ ಆಗಿರದಿರುವುದೇ ಇದರ ಕಾರಣ. ಭೂಪರಿಸರದಲ್ಲೇ ಪರಿಸ್ಥಿತಿ ಹೀಗಿದ್ದರೆ ಇನ್ನು ಆಕಾಶಯಾನದಲ್ಲಿ ನಿಯಂತ್ರಣ ಸಮಸ್ಯೆ ಅದೆಷ್ಟು ಗಂಭೀರವಾಗಿದ್ದೀತು ಎಂಬುದನ್ನು ಊಹಿಸಿಕೊಳ್ಳಬಹುದು. ನೌಕೆಯೊಂದರಲ್ಲಿನ ಮತ್ತು ಕೆಲವು ವೇಳೆ ಯಾನನಿರ್ವಹಣಾ ವ್ಯವಸ್ಥೆ ಅಂತರಿಕ್ಷನೌಕೆಯ ಯಾನವನ್ನು ಕ್ಷಣಕ್ಷಣ ನಿಯಂತ್ರಿಸುತ್ತದೆ. ಅಪೊಲೋ ನೌಕೆಯ ನಿಯಂತ್ರಣ ವ್ಯವಸ್ಥೆಯ ಎಂದಿನ ಸಾಧಾರಣ ಕ್ರಿಯೆಗಳೆಲ್ಲವೂ ಗಣಕೀಕೃತವಾಗಿ ಸ್ವಯಂಚಾಲಿತವಾಗಿ ಕ್ರಮವಿಧಿಯನ್ನೇ ಬದಲಾಯಿಸಬೇಕಾಗಿ ಬಂದಾಗ ವಿವಿಧ ವಿಜ್ಞಾನಪ್ರಕಾರಗಳಲ್ಲಿ ತಜ್ಞರಾದವರ ಒಂದು ತಂಡವೇ ಸೂಕ್ತ ನಿರ್ಧಾರವನ್ನು ತಳೆದು ಅದನ್ನು ಗಗನಯಾತ್ರಿಗಳಿಗೆ ಘೋಷಿಸಲಾಗುತ್ತಿತ್ತು. ಯಂತ್ರ-ಮನುಷ್ಯ ಅಂತರಕ್ರಿಯೆ ಬೇರೆಲ್ಲ ಕ್ಷೇತ್ರಗಳಿಗಿಂತ ಹೆಚ್ಚಿನ ಅನ್ಯೋನ್ಯತೆಯಿಂದ ಇಲ್ಲಿ ನಡೆಯುತ್ತಿತ್ತು.
ಐದನೆಯದು ಚಂದ್ರಪರಿಸರವಿಜ್ಞಾನ. ಆಕಾಶಯುಗ 1957ರಲ್ಲಿ ಆರಂಭವಾಯಿತಷ್ಟೆ. ಆ ಮೊದಲು ಚಂದ್ರನ ಭೌತ ಪರಿಸ್ಥಿತಿಯನ್ನು ಕುರಿತು ನಮಗೆ ತಿಳಿದಿದ್ದ ವಿಷಯಗಳೇನಿದ್ದರೂ ಅವು ಪರೋಕ್ಷ ವಿಧಾನಗಳಿಂದ ಮತ್ತು ಗಣನೆಗಳಿಂದ ಲಭಿಸಿದವು ಮಾತ್ರ. ಇಷ್ಟನ್ನೇ ಆಧರಿಸಿ ಮನುಷ್ಯನನ್ನು ಚಂದ್ರನ ಮೇಲೆ ಇಳಿಸುವುದು ಅಪ್ರಾಯೋಗಿಕ. ಹೀಗಾಗಿ ಮನುಷ್ಯನ ಚಂದ್ರಯಾನದ ಮೊದಲು ಮಾನವರಹಿತ. ಆದರೆ ಉಪಕರಣಸಹಿತ, ನೌಕೆಗಳನ್ನು ಚಂದ್ರನ ಮೇಲೆ ಇಳಿಸಿ ಅವುಗಳ ನೆರವಿನಿಂದ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಅಲ್ಲದೆ ಅಪೊಲೊ-8ರಲ್ಲಿ ಮೂವರು ಅಮೆರಿಕಾದ ಗಗನಯಾತ್ರಿಗಳು 1968ರಲ್ಲಿ ಚಂದ್ರನಿಗೆ ಪ್ರದಕ್ಷಿಣೆ ಹಾಕಿ ಚಂದ್ರನ ಸಮೀಪಚಿತ್ರಗಳನ್ನು ಪಡೆದು ಧರೆಗೆ ಮರಳಿದರು. ಸಮೀಪದಿಂದ ತೆಗೆಯಲಾದ ಇಂತಹ ಚಿತ್ರಗಳಿಂದ ಚಂದ್ರನ ಸಾಗರಗಳು ವಾಸ್ತವಿಕವಾಗಿ ಜಲರಹಿತ ಮಹಾಕಮರಿಗಳು, ಕೂಪಗಳು ಉಲ್ಕಾಪಾತದಿಂದಲೇ ಉಂಟಾದವು. ಚಂದ್ರನ ಮಟ್ಟಸ ಪ್ರದೇಶಗಳಲ್ಲಿ ಮನುಷ್ಯ ಹೂತುಹೋಗಬಹುದಾದಂಥ ದೂಳಿನ ರಾಶಿ ಏನೂ ಇಲ್ಲ. ಮತ್ತು ಚಂದ್ರ ಪುರ್ಣವಾಗಿ ವಾಯುರಹಿತ ಎಂದು ಮುಂತಾದುವು ಖಚಿತವಾಗಿ ತಿಳಿಯಿತು. ಅಲ್ಲದೆ ಚಂದ್ರತಲದಲ್ಲಿ ಸೂರ್ಯೋಷ್ಣದಿಂದ ಒದಗುವ ಉಷ್ಣತೆಯ ತೀವ್ರ ಏರಿಳಿತಗಳನ್ನು ಕುರಿತು ವಿವರಗಳು ಲಭಿಸಿದವು. ಹೀಗೆ ದೊರೆತ ಜ್ಞಾನದ ಪರಿಣಾಮವಾಗಿ ಮನುಷ್ಯನನ್ನು ಎಲ್ಲಿ ಹೇಗೆ ಎಂದು ಇಳಿಸಬೇಕು, ಎಷ್ಟು ಕಾಲ ಆತ ಅಲ್ಲಿ ಇರಬೇಕು, ಏನೇನು ಕಾರ್ಯಗಳನ್ನು ನಡೆಸಬೇಕು ಇವೇ ಮುಂತಾದ ಕ್ರಮವಿಧಿಗಳನ್ನು ರೂಪಿಸಲು ವಿಜ್ಞಾನಿಗಳು ಸಮರ್ಥರಾದರು.
ಆರನೆಯದು ಬ್ರಹ್ಮಾಂಡವನ್ನು ಕುರಿತಂತೆ ಉಂಟಾಗಿರುವ ಪರಿಜ್ಞಾನ. ಬ್ರಹ್ಮಾಂಡದ ಒಂದು ಕಿರುತುಣುಕು ಸೌರವ್ಯೂಹ. ಅದರ ಒಂದು ಅಲ್ಪಾಂಶ ಭೂಮಿ-ಚಂದ್ರ ವಲಯ. ಮನುಷ್ಯನಿಗೆ ಬ್ರಹ್ಮಾಂಡವನ್ನು ಕುರಿತು ಜ್ಞಾನ ಮೊದಲು ಲಭಿಸುವುದು ಅವನ ಸ್ವಂತ ಗ್ರಹದ ಅನ್ವೇಷಣೆಯಿಂದ; ಬಳಿಕ ಆಕಾಶವೀಕ್ಷಣೆಯಿಂದ, ಯುಗಯುಗಗಳಿಂದ ಆಕಾಶದ ದೃಶ್ಯ ಕಾಯಗಳು ಮನುಷ್ಯನಿಗೆ ನಾನಾವಿಧದ ಸವಾಲುಗಳನ್ನೂ ಆಕರ್ಷಣೆಗಳನ್ನೂ ಒಡ್ಡುತ್ತ ಬಂದಿವೆ. ಇಂಥ ಸವಾಲುಗಳ ಪೈಕಿ ಒಂದು ಭೂಮಿಗೆ ಅತಿ ಸಮೀಪ ಆಕಾಶಕಾಯವಾದ ಚಂದ್ರನಲ್ಲಿ ಯಾವ ವಿಧವಾದ ಜೀವಿಗಳಿದ್ದುದಕ್ಕೂ ದಾಖಲೆಗಳಿಲ್ಲ. ಚಂದ್ರನಿಂದ ಆಯ್ದು ತಂದ ಬಹುತೇಕ ಶಿಲೆಗಳು ಘನೀಭವಿಸಿದ್ದು 325 ರಿಂದ 360 ಕೋಟಿ ವರ್ಷಗಳಷ್ಟು ಪ್ರಾಚೀನದಲ್ಲಿ, ಚಂದ್ರನ ವಯಸ್ಸು ಸುಮಾರು 4600 ದಶಲಕ್ಷ ವರ್ಷಗಳು, ಭೂಮಿಗಿಂತ ಚಂದ್ರ ಪ್ರಾಯಶಃ 40 ಕೋಟಿ ವರ್ಷಗಳಷ್ಟು ಕಿರಿಯದು, ಇಂತಹ ವಿಷಯಗಳು ತಿಳಿದಿವೆ.
ಮನುಷ್ಯನ ತಂತ್ರವಿಜ್ಞಾನದ ಪ್ರಗತಿಯ ಹಾಗೂ ಯಶಸ್ಸಿನ ಪ್ರಧಾನ ಪ್ರತೀಕ ಅಪೊಲೊ ಯೋಜನೆ. ಮನುಷ್ಯ ಭೂಮಿಗೆ ಸದಾ ಬಂಧಿತನಾಗಿ ಇರಬೇಕಾಗಿಲ್ಲ. ಭಿನ್ನ ಪರಿಸರಕ್ಕೆ ತೆರಳಿ ಅಲ್ಲಿ ಬದಕುಬಲ್ಲ ಎಂದು ಇದರಿಂದ ರುಜುವಾತಾಗಿದೆ. ಅಪೊಲೊ ಯೋಜನೆಯ ಉಪೋತ್ಪನ್ನಗಳಾಗಿ ಮಾನವ ಜನಾಂಗಕ್ಕೆ ಒದಗಿರುವ ಲಾಭ ಸೌಕರ್ಯಗಳ ವಿಶ್ಲೇಷಣೆ ಸುದೀರ್ಘವಾದುದರಿಂದ ಅದನ್ನು ಪ್ರತ್ಯೇಕವಾಗಿಯೇ ಮಾಡಬೇಕಾಗುತ್ತದೆ. ಆದ್ದರಿಂದ ಅಪೊಲೊ ಯೋಜನೆಯ ಅನಂತರ ಆದದ್ದೇನು ಎಂಬ ಪ್ರಶ್ನೆಗೆ ವೈಜ್ಞಾನಿಕ ಉತ್ತರವನ್ನು ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಯೋಜನೆಯ ನಿರ್ಮಾಪಕ ರಾಷ್ಟ್ರವಾದ ಅಮೆರಿಕದ ಸಂಯುಕ್ತ ಸಂಸ್ಥಾನಗಳ ವಿಜ್ಞಾನಿಗಳ ಚಿಂತನೆ ಎರಡು ಸ್ಪಷ್ಟ ದಿಶೆಗಳಲ್ಲಿ ಹರಿಯಿತು.
ಮೊದಲನೆಯದು ಅಂತರಿಕ್ಷ ನಿಲ್ದಾಣಗಳ ಸ್ಥಾಪನೆ-ಸ್ಪೇಸ್ ಸ್ಟೇಷನ್ಸ್ ಎಂದು ಇವನ್ನು ಇಂಗ್ಲಿಷಿನಲ್ಲಿ ಕರೆಯುತ್ತಾರೆ. ಭೂಮಿಯ ಸುತ್ತ ನಿರಂತರವಾಗಿ ಸುತ್ತಲು ಇಂಥ ನೌಕೆಯನ್ನು 1973ರಲ್ಲಿ ಉಡಾಯಿಸಲಾಯಿತು. ಸೂರ್ಯ, ಚಂದ್ರ ಹಾಗೂ ಭೂಮಿಯನ್ನು ಕುರಿತು ಹೆಚ್ಚಿನ ಜ್ಞಾನವನ್ನು ಗಳಿಸುವುದು ಈ ಅಂತರಿಕ್ಷ ನಿಲ್ದಾಣ ಯೋಜನೆಯ ಒಂದು ಉದ್ದೇಶವಾಗಿತ್ತು. ವಿಜ್ಞಾನಿಗಳ ಚಿಂತನೆ ಹರಿದಿರುವ ಎರಡನೆಯ ದಿಶೆ ಎಂದರೆ ಚಂದ್ರನ ವಸಾಹತೀಕರಣ. ಚಂದ್ರಪರಿಸರ ಮಾನವನ ಮುಕ್ತವಾಸಕ್ಕೆ ಸರ್ವಥಾ ಅಯೋಗ್ಯ ಎಂಬುದು ಸಿದ್ಧವಾಗಿದ್ದರೂ ಈ ಆಸೆ ಏಕೆ ಎಂಬ ಪ್ರಶ್ನೆಗೆ ಉತ್ತರ ಬಲು ಸರಳ ಮನುಷ್ಯನ ಅದಮ್ಯ ಸಾಹಸ ಪ್ರವೃತ್ತಿ. ಚಂದ್ರನ ನಿರ್ವಾತಪ್ರದೇಶದಲ್ಲಿ, ದೂಳಿನಿಂದ ಕಲುಷಿತವಾಗಿರದ ಮತ್ತು ಮನುಷ್ಯಕೃತ ಬೆಳಕಿನಿಂದ ಮಲಿನವಾಗಿರದ ಆವರಣದಲ್ಲಿ, ಕಡಿಮೆ ಗುರುತ್ವದ ಪ್ರಭಾವದಲ್ಲಿ, ಖಗೋಳ ವೀಕ್ಷಣಾಲಯಗಳ ಸ್ಥಾಪನೆ ಮತ್ತು ಅವುಗಳಿಂದ ವೀಕ್ಷಣೆ ಹೆಚ್ಚು ಸುಲಭ ಹಾಗೂ ಫಲಕಾರಿ. ಅಲ್ಲಿ ಸಂಗ್ರಹಿಸಲ್ಪಡುವ ದತ್ತಾಂಶಗಳು ಹೆಚ್ಚು ನಿಷ್ಕೃಷ್ಟ. ಚಂದ್ರನಲ್ಲಿ ಸ್ಥಾಪಿಸಬಹುದಾದ ದೂರದರ್ಶಕಗಳು ಪ್ರಪಂಚದ ಅನೇಕ ದೊಡ್ಡ ದೂರದರ್ಶಕಗಳಿಗಿಂತ ಅದೆಷ್ಟೋ ಪಟ್ಟು ಹೆಚ್ಚು ವಿವರಗಳನ್ನು ಇನ್ನಷ್ಟು ನಿಷ್ಕೃಷ್ಟವಾಗಿ ಒದಗಿಸಬಲ್ಲದೆಂದು ವಿಜ್ಞಾನಿಗಳು ಭಾವಿಸಿದ್ದರು. ರೇಡಿಯೋ ದೂರದರ್ಶಕದ ವಿಚಾರದಲ್ಲೂ ಇದು ಅಷ್ಟೇ ಸತ್ಯ. ಖಗೋಳವಿಜ್ಞಾನಿಗಳಿಗೆ ಹೇಗೋ ಭೂವಿಜ್ಞಾನಿಗಳಿಗೂ ಹಾಗೆ ಚಂದ್ರ ಬಲು ಪ್ರಿಯ. ಭೂಮಿಯ ಮೈಯನ್ನು ಸತತವಾಗಿ ಘಾಸಿಗೊಳಿಸಬಹುದಾದ ಗಾಳಿ, ಮಳೆ, ನೀರಿನ ಪ್ರವಾಹ, ಜೀವಿಕ್ರಿಯೆ ಅಲ್ಲಿಲ್ಲ. ಜ್ವಾಲಾಮುಖಿಗಳ ಚಟುವಟಿಕೆ ಈಗ ಅಲ್ಲಿ ಪ್ರಕಟವಾಗುತ್ತಿಲ್ಲ. ನೇರವಾಗಿ ಚಂದ್ರನ ಮೈಮೇಲೆ ಪಾತವಾಗುವ ಸೌರವಿಕಿರಣ, ಅದರಿಂದ ಉದ್ಭವಿಸುವ ಉಷ್ಣತೆಯ ತೀವ್ರ ಏರಿಳಿತಗಳನ್ನು ಬಿಟ್ಟರೆ ಚಂದ್ರನ ಭೌತಸ್ಥಿತಿಯನ್ನು ಬದಲಾಯಿಸುವ ಬೇರಾವ ಕಾರಕವೂ ಅಲ್ಲಿಲ್ಲ. ಅಪೊಲೋ ಕಾರ್ಯಕ್ರಮದ ಮೊದಲು ಇಂಥ ಪ್ರದೇಶದಲ್ಲಿ ಭೂವಿಜ್ಞಾನಿಗಳು ಚಂದ್ರನ ಹುಟ್ಟಿನಿಂದ ತೊಡಗಿ ಇಂದಿನವರೆಗಿನ ಸಮಸ್ತ ವಿಕಾಸಗಳ ಅಚ್ಚಳಿಯದ ವಿಪುಲ ದಾಖಲೆಗಳನ್ನು ಕಾಣುವ ತವಕದಿಂದಿದ್ದರು. ಚಂದ್ರನಲ್ಲಿ ಸ್ಥಾಪಿಸಬಹುದಾದ ಭೂ ಹವಾವೀಕ್ಷಣಾಲಯ ಭೂನಿವಾಸಿಗಳಿಗೆ ಅಲ್ಲಿನ ಹವೆಯನ್ನು ಕುರಿತು ನಿಷ್ಕೃಷ್ಟ ಮತ್ತು ವ್ಯಾಪಕ ವಿವರಗಳನ್ನು ಒದಗಿಸಬಲ್ಲುದೆಂದು ಹವಾವಿಜ್ಞಾನಿಗಳು ಭಾವಿಸಿದ್ದರು. ಚಂದ್ರಗರ್ಭದಲ್ಲಿ ಹುದುಗಿರಬಹುದಾದ ಖನಿಜ ಸಂಪತ್ತಿನ ಅಂದಾಜು ಸಂಪುರ್ಣವಾಗಿ ಯಾರಿಗೂ ಇಲ್ಲ. ಸೌರವ್ಯೂಹದ ಇತರ ಗ್ರಹಗಳಿಗೆ ಯಾನ ಮಾಡಲು ಮನುಷ್ಯನಿಗೆ ಸಹಜವಾಗಿ ಒದಗುವ ಪ್ರಥಮ ನೈಸರ್ಗಿಕ ಅಂತರಿಕ್ಷನಿಲ್ದಾಣ ಚಂದ್ರ. ಅಲ್ಲಿನ ಭೌತಬಲಗಳು ಭೂಮಿಗಿಂತ ತೀರ ಭಿನ್ನವಾದ್ದರಿಂದ ಹಲವಾರು ವಿಶೇಷ ಯಂತ್ರಸ್ಥಾವರಗಳ ರಚನೆ ಮತ್ತು ಸ್ಥಾಪನೆ ಸಾಕಷ್ಟು ಲಾಭದಾಯಕವಾಗಬಹುದು. ಅವುಗಳ ಉತ್ಪನ್ನಗಳನ್ನು ಚಂದ್ರನಿಂದ ಭೂಮಿಗೆ ಸಾಗಿಸಲು ತಗಲುವ ಖರ್ಚನ್ನು ಭರಿಸಿಯೂ ಅವು ಲಾಭ ನೀಡಬಹುದು ಎಂದು 1970ರ ದಶಕದ ಪ್ರಾರಂಭದಲ್ಲಿ ನಂಬಲಾಗಿತ್ತು. ಆದ್ದರಿಂದ ಅಜ್ಞಾತ ಲೋಕದ ಅಸಂಖ್ಯಾತ ವಿಭವಗಳನ್ನು ಮಾನವ ಕಲ್ಯಾಣಕ್ಕಾಗಿ ಅಳವಡಿಸಲು ಚಂದ್ರನ ವಸಾಹತೀಕರಣ ಅವಶ್ಯ. ಇದು ಹೇಗೆ ನಡೆಯಬಹುದು ಎನ್ನುವ ದಿಶೆಯಲ್ಲೂ ಸಾಕಷ್ಟು ವೈಜ್ಞಾನಿಕ ಚಿಂತನೆ ಹರಿದಿದೆ. ಚಂದ್ರಲೋಕದಲ್ಲಿ ಮಾನವಜೀವನಕ್ಕೆ ಅವಶ್ಯವಾದ ಕೃತಕ ಭೂಪರಿಸರವನ್ನು ಸೃಷ್ಟಿಸಿ ಇದು ನಿರಂತರವಾಗಿಯೂ ಸ್ವಯಂ ಉತ್ಪಾದನೆ ಆಗುತ್ತಿರುವಂಥ ಕ್ರಿಯಾವಿನ್ಯಾಸವನ್ನು ಏರ್ಪಡಿಸಬೇಕು. ಚಂದ್ರವಸಾಹತಿಗೂ ಭೂಮಿಗೂ ನಡುವೆ ಮನುಷ್ಯರನ್ನು ಸರಾಗವಾಗಿ ಒಯ್ಯಬಲ್ಲ ವಾಹನಗಳು ಜೆಟ್ ವಿಮಾನಗಳಂತೆ ಅನುದಿನದ ವಿದ್ಯಮಾನಗಳಾಗಿರಬೇಕು. ಇಂತಹ ಕಲ್ಪನಾವಿಲಾಸದಲ್ಲಿ ವಿಜ್ಞಾನಿಗಳು ಈಗ್ಗೆ 35 ವರ್ಷಗಳ ಹಿಂದೆ ಮುಳುಗಿದ್ದರು. ಚಂದ್ರನಲ್ಲಿಗೆ ಮಾನವರು ಹಿಂತಿರುಗುವುದಕ್ಕೆ ಬೆಂಬಲವನ್ನು ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಜೂನಿಯರ್ ಅವರು 2004ರಲ್ಲಿ ವ್ಯಕ್ತಪಡಿಸಿದರು. (ಜಿ.ಟಿ.ಎನ್.) ಪರಿಷ್ಕರಣೆ: ಬಿ.ಆರ್.ಜಿ.