ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಳ್ಳಕೆರೆ

ವಿಕಿಸೋರ್ಸ್ದಿಂದ

ಚಳ್ಳಕೆರೆ- ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಒಂದು ತಾಲ್ಲೂಕು ಅದರ ಮುಖ್ಯಸ್ಥಳ. ಚಿತ್ರದುರ್ಗ ಉಪವಿಭಾಗಕ್ಕೆ ಸೇರಿದೆ. ಈ ತಾಲ್ಲೂಕಿನ ಪೂರ್ವದಲ್ಲಿ ಆಂಧ್ರ ಪ್ರದೇಶ ಮತ್ತು ಪಾವಗಡ ತಾಲ್ಲೂಕು, ದಕ್ಷಿಣದಲ್ಲಿ ಹಿರಿಯೂರು ತಾಲ್ಲೂಕು, ಪಶ್ಚಿಮದಲ್ಲಿ ಜಗಳೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳು ಉತ್ತರದಲ್ಲಿ ಬಳ್ಳಾರಿ ಜಿಲ್ಲೆ ಮತ್ತು ಮೊಳಕಾಲ್ಮೂರು ತಾಲ್ಲೂಕು ಇವೆ. ತಾಲ್ಲೂಕಿನ ವಿಸ್ತೀರ್ಣ 792.2 ಚ.ಮೈ. (2.067.4 ಚ.ಕಿ.ಮೀ.) 161 ಹಳ್ಳಿಗಳಿಂದಲೂ 2 ಪಟ್ಟಣಗಳಿಂದಲೂ ಕೂಡಿರುವ ಈ ತಾಲ್ಲೂಕಿನ ಜನಸಂಖ್ಯೆ 3,24,822 (2001).

1882 ರವರೆಗೆ ಇದಕ್ಕೆ ದೊಡ್ಡೇರಿ ತಾಲ್ಲೂಕು ಎಂಬ ಹೆಸರಿತ್ತು. 1825 ರಿಂದ 1866ರವರೆಗೆ ಮೊಳಕಾಲ್ಮೂರಯ ತಾಲ್ಲೂಕಿನ ಪ್ರದೇಶ ಇದಕ್ಕೆ ಸೇರಿತ್ತು. ಈ ತಾಲ್ಲೂಕಿನಲ್ಲಿ ಚಳ್ಳಕೆರೆ, ನಾಯಕನಹಟ್ಟಿ, ಪರಶುರಾಮಪುರ ಮತ್ತು ತಳಕು ಎಂಬ ನಾಲ್ಕು ಹೋಬಳಿಗಳಿವೆ.

ಎತ್ತರವಾದ ಹಾಗೂ ಪ್ರಮುಖವಾದ ಯಾವ ಬೆಟ್ಟಗಳ ಸಾಲೂ ಈ ತಾಲ್ಲೂಕಿನಲ್ಲಿಲ್ಲ. ಚದರಿದಂತೆ ಕೆಲವು ಶಿಲಾಮಯ ಬೆಟ್ಟಗಳಿವೆ. ತಾಲ್ಲೂಕಿನ ಉಳಿದ ಭಾಗ ಮೈದಾನ. ಈ ತಾಲ್ಲೂಕಿನ ವಿಸ್ತøತವಾದ ಅಮೃತಮಹಲ್ ಕಾವಲುಗಳು ಪ್ರಸಿದ್ಧವಾಗಿವೆ. ಸಣ್ಣ ತೊರೆಗಳ ದಡಗಳಲ್ಲಿ. ಕೆರೆಯಂಗಳ ಮತ್ತಿತರ ತಗ್ಗು ಪ್ರದೇಶಗಳಲ್ಲಿ ಖರ್ಜೂರದ ಗಿಡಗಳುಂಟು. ವೇದಾವತಿ ನದಿ ಅತ್ಯಂತ ದಕ್ಷಿಣದ ಅಂಚಿನಲ್ಲಿ ಈ ತಾಲ್ಲೂಕನ್ನು ಪ್ರವೇಶಿಸಿ, ದಕ್ಷಿಣೋತ್ತರವಾಗಿ ಹರಿದು, ಈಶಾನ್ಯ ದಿಕ್ಕಿಗೆ ತಿರುಗಿ ಘಟಪರ್ತಿ ಎಂಬಲ್ಲಿ ಬಳ್ಳಾರಿ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಇದರ ಉಪನದಿಗಳು ಗರಣಿ ಮತ್ತು ನಾಯಕನ ಹಟ್ಟಿ. ಈ ನದಿಯ ನೀರನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲಾಗುತ್ತಿದೆ.

ನಂದಿಹಳ್ಳಿಯಲ್ಲಿ ನಿರ್ಮಾಣವಾಗುವ ಅಣೆಕಟ್ಟಿನಿಂದ ಈ ತಾಲ್ಲೂಕಿಗೆ ಹೇರಳವಾದ ನೀರು ಒದಗುವ ಭರವಸೆಯುಂಟು. ಪಾವಗಡ ತಾಲ್ಲೂಕಿನಲ್ಲಿ ಹುಟ್ಟಿ, ಈ ತಾಲ್ಲೂಕಿನ ಕಡೆಗೆ ಹರಿಯುವ ಮತ್ತೊಂದು ಪುಟ್ಟ ಉಪನದಿ ಈ ತಾಲ್ಲೂಕಿನ ಆಗ್ನೇಯ ಭಾಗಕ್ಕೆ ನೀರಾವರಿ ಒದಗಿಸುತ್ತದೆ. ವಾಯುವ್ಯ ಮೂಲೆಯ ಪ್ರದೇಶಗಳಿಗೆ ನೀರಾವರಿಗೆ ಒದಗಿಬಂದಿರುವ ನದಿ ಹಗರಿ. ಇದು ತಾಲ್ಲೂಕಿನ ವಾಯುವ್ಯದ ಎಲ್ಲೆ.

ಈ ತಾಲ್ಲೂಕಿನಲ್ಲಿ ಚಳ್ಳಕೆರೆ ಪಟ್ಟಣದ ಪೂರ್ವಕ್ಕೆ, ಉಲ್ಲವರ್ತಿಕಾವಲ್‍ನಲ್ಲಿ ಮಣ್ಣಿನ ಮೇಲ್ಭಾಗದಲ್ಲಿ ಉರುಳೆಯಾಕಾರದ ಹರಳುಗಳ ರೂಪದಲ್ಲಿ ಪಾಟಲವರ್ಣದ ಕುರುಂದ ಶಿಲೆ ದೊರೆಯುತ್ತದೆ. ಇದನ್ನು ವಾಣಿಜ್ಯದೃಷ್ಟಿಯಿಂದ ವಿಶೇಷವಾಗಿ ತೆಗೆಯುತ್ತಿಲ್ಲ.

ಚಿತ್ರದುರ್ಗ ಜಿಲ್ಲೆಯ ಅತ್ಯಂತ ಕಡಿಮೆ ಮಳೆಯ ತಾಲ್ಲೂಕು ಚಳ್ಳಕೆರೆ. ಸರಾಸರಿ ವಾರ್ಷಿಕ ಮಳೆ 455.5ಮಿಮೀ. ಮೇ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚಿನ ಮಳೆ.

ನೀರಾವರಿಗೆ ಒಳಪಟ್ಟಿರುವ ಭೂಮಿ ವಿನಾ ಉಳಿದ ನೆಲ ಅಷ್ಟೇನೂ ಫಲವತ್ತಾಗಿಲ್ಲ. ತಾಲ್ಲೂಕಿನ ನೈಋತ್ಯ ಭಾಗದಲ್ಲಿ ಸ್ವಲ್ಪಮಟ್ಟಿಗೆ ಉತ್ತಮವಾದ ಕಪ್ಪುಮಣ್ಣಿನ ಪ್ರದೇಶವಿದೆ. ಅನೇಕ ಕಡೆಗಳಲ್ಲಿಯ ಮಣ್ಣು ಲವಣಯುಕ್ತವಾದದ್ದು.

ಬೆಂಗಳೂರು-ಬಳ್ಳಾರಿ ಬಾಟಾಮಾರ್ಗ ಈ ತಾಲ್ಲೂಕಿನಲ್ಲಿ ಉತ್ತರ-ದಕ್ಷಿಣವಾಗಿ ಹಾಯ್ದು ಹೋಗುತ್ತದೆ. ಚಿತ್ರದುರ್ಗದಿಂದ ಬರುವ ರಸ್ತೆಯೊಂದು ಇದನ್ನು ಚಳ್ಳಕೆರೆಯಲ್ಲಿ ಸಂಧಿಸುತ್ತದೆ. ಚಳ್ಳಕೆರೆಯಿಂದ ಪಾವಗಡ ಮತ್ತು ಜಗಳೂರುಗಳಿಗೆ ರಸ್ತೆಗಳುಂಟು. ಈ ತಾಲ್ಲೂಕಿನಲ್ಲಿ ರೈಲುಮಾರ್ಗವಿಲ್ಲ. ಬಹಳ ಹತ್ತಿರದ ರೈಲುನಿಲ್ದಾಣವೆಂದರೆ ಚಿತ್ರದುರ್ಗ.

ಚಳ್ಳಕೆರೆ ಪಟ್ಟಣ ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಚಿತ್ರದುರ್ಗದಿಂದ ಈಶಾನ್ಯ ಮೂಲೆಗೆ 18 ಮೈ. ದೂರದಲ್ಲಿ ಉ.ಅ.14 18' ಮತ್ತು ಪೂ.ರೇ. 78 43' ಮೇಲೆ ಇದೆ. ಜನಸಂಖ್ಯೆ 49,065 (2001). ಇಲ್ಲೊಂದು ಪುರಸಭೆಯಿದೆ. ಪ್ರತಿ ಭಾನುವಾರ ಇಲ್ಲಿ ನಡೆಯುವ ಸಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಪ್ರಸಿದ್ದವಾದ್ದು. ಜಿಲ್ಲೆಯ ಎಲ್ಲ ಕಡೆಗಳಿಂದಲೂ ಸುಮಾರು 5,000 ಕ್ಕೂ ಹೆಚ್ಚು ಜನ ಬರುತ್ತಾರೆ. ನೆಲಗಡಲೆ, ಹತ್ತಿ, ಬತ್ತ ಇವು ಇಲ್ಲಿ ವ್ಯಾಪಾರವಾಗುವ ಸರಕುಗಳು. ಚಳ್ಳಕೆರೆ ಪಟ್ಟಣದಲ್ಲಿ ನಿಯಂತ್ರಿತ ಮಾರುಕಟ್ಟೆಯೂ ಉಂಟು. ಈ ಪಟ್ಟಣದ ದೇವತೆ ಚಳ್ಳಕೆರೆ ಅಮ್ಮ. ಇಲ್ಲಿಯ ಪುರ ಪ್ರೌಢಶಾಲೆ ಇಡೀ ಜಿಲ್ಲೆಯಲ್ಲೇ ಹಳೆಯದು. ಚಳ್ಳಕೆರೆಯ ಬಳಿ 17 ಎಣ್ಣೆ ಗಿರಣಿಗಳುಂಟು. ಚಳ್ಳಕೆರೆ ಪಟ್ಟಣದಲ್ಲೂ ತಾಲ್ಲೂಕಿನ ಅನೇಕ ಕಡೆಗಳಲ್ಲೂ ಅನೇಕ ಹತ್ತಿ ಕೈ ಮಗ್ಗಗಳುಂಟು. (ಕೆ.ಆರ್.ಆರ್.)