ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಾಮುಂಡಿ
ಚಾಮುಂಡಿ -
ಶಿವನ ಅರ್ಧಾಂಗಿಯಾದ ಪಾರ್ವತಿಯ ಅವತಾರಗಳಲ್ಲಿ ಒಂದು. ಭಾರತೀಯ ಶಿಷ್ಟಪುರಾಣಗಳಲ್ಲಿ ಹಾಗೂ ಕನ್ನಡ ಜನಪದ ಪುರಾಣ ಕಾವ್ಯಗಳಲ್ಲಿ ಚಾಮುಂಡಿಯ ಕಥೆಗಳು ಕಂಡುಬರುತ್ತವೆ. ಇವಳಿಗೆ ಆದಿಶಕ್ತಿ, ಸರ್ವಶಕ್ತಿ, ಮಾಹೇಶ್ವರಿ, ಕಾಳಿ, ಕಾತ್ಯಾಯಿನಿ, ಚಂಡಿ, ಅಂಬಾ, ಈಶ್ವರಿ, ಭಗವತಿ, ದುರ್ಗಿ, ಮಹಾದೇವಿ ಮುಂತಾದ ಹೆಸರುಗಳಲ್ಲಿ ಪೂಜೆ ಸಲ್ಲುತ್ತದೆ. ಈ ಎಲ್ಲ ರೂಪಗಳಲ್ಲಿ ಮಹಿಷಾಸುರಮರ್ದಿನಿಯ ರೂಪವನ್ನು ಭಾರತದಲ್ಲಿ ಬಹಳಷ್ಟು ಹಿಂದಿನಿಂದಲೂ ಆರಾಧಿಸಿಕೊಂಡು ಬರಲಾಗಿದೆ. ಆಶ್ವಯುಜ ಶುಕ್ಲಪಕ್ಷದ ನವರಾತ್ರಿಯ ಕಾಲದಲ್ಲಿ ಭಾರತಾದ್ಯಂತ ದುರ್ಗಾರಾಧನೆ ಅತ್ಯಂತ ವೈಭವದಿಂದ ನಡೆಯುತ್ತದೆ. ಮೈಸೂರಿನಲ್ಲಿ ಈ ದಿನಗಳನ್ನು ದಸರಾ ಎಂದು ಕರೆಯುತ್ತಾರೆ. ದಸರೆಯ ಹತ್ತನೆಯ ದಿನವಾದ ವಿಜಯದಶಮಿ ಸಾಂಕೇತಿಕವಾಗಿ ಮಹಿಷನೆಂಬ ರಕ್ಕಸನನ್ನು ದುರ್ಗಿ ಸಂಹರಿಸಿದ ದಿನ. ಈ ದುರ್ಗಾರಾಧನೆ ಅರಿಷಡ್ವರ್ಗಗಳನ್ನು ಗೆದ್ದ ಆತ್ಮನನ್ನು ಸಾಂಕೇತಿಕವಾಗಿ ಸೂಚಿಸುತ್ತದೆ. ಏಕೆಂದರೆ ಅಸುರರು ಅರಿಷಡ್ವರ್ಗಗಳನ್ನು ಪ್ರತಿನಿಧಿಸುತ್ತಾರೆ.
ಚಾಮುಂಡಿಗೆ ಸಂಬಂಧಿಸಿದ ಸಂಗತಿಗಳನ್ನು ಮಾರ್ಕಂಡೇಯಪುರಾಣ, ಕಾಲಿಕಾ ಪುರಾಣ, ಶ್ರೀದೇವಿಭಾಗವತ, ಸ್ಕಾಂದಪುರಾಣ, ವರಾಹಪುರಾಣ, ವಿಷ್ಣು ಧರ್ಮೋತ್ತರಪುರಾಣ, ಸನತ್ಕುಮಾರ ಶಿಲ್ಪರತ್ನ, ಚತುರ್ವರ್ಗಚಿಂತಾಮಣಿ ಹಾಗೂ ಅಭಿಲಷಿತಾರ್ಥಚಿಂತಾಮಣಿ ಮುಂತಾದ ಕೃತಿಗಳು ಅಲ್ಪಸ್ವಲ್ಪ ವ್ಯತ್ಯಾಸಗಳಿಂದ ನಿರೂಪಿಸುತ್ತವೆ. ಆದರೆ ಇವುಗಳೆಲ್ಲದರ ಮೂಲ ಆಶಯ ಒಂದೇ ಆಗಿದೆ. ಅಂದರೆ ದೇವತೆಗಳಿಗೆ ಅಪಜಯವನ್ನುಂಟುಮಾಡಿ ಇಂದ್ರಪದವಿಯನ್ನೇರಿ, ಶಿಷ್ಟರಿಗೆಲ್ಲ ಕಂಟಕಪ್ರಾಯನಾಗಿದ್ದ ಮಹಿಷಾಸುರನ ಸಂಹಾರಕ್ಕಾಗಿ ದೇವಾಧಿದೇವತೆಗಳ ಸರ್ವಶಕ್ತಿ ತೇಜಃಪುಂಜವಾಗಿ ಹೊರಟು ಸರ್ವಮಂಗಳೆಯಾದ ದೇವಿಯಾಗಿ ಆವಿರ್ಭವಿಸುತ್ತಾಳೆ. ದೇವತೆಗಳ ರಕ್ಷಣಾರ್ಥವಾಗಿ ದೇವಿ ಶಿವಭಕ್ತನಾದ ಮಹಿಷನನ್ನು ವಧಿಸುತ್ತಾಳೆ. ಇದಲ್ಲದೆ ಚಂಡ-ಮುಂಡರನ್ನು ವಧಿಸಿ ಚಾಮುಂಡಿಯಾದಳೆಂಬ ಕಥೆಯೂ ಕಂಡುಬರುತ್ತದೆ. ಶಿಷ್ಟಪುರಾಣಗಳ ಪ್ರಕಾರ ಚಾಮುಂಡಿಯ ಅವತಾರದ ಉದ್ದೇಶವೆಂದರೆ ರಾಕ್ಷಸನ ಸಂಹಾರ, ದೇವತೆಗಳ ರಕ್ಷಣೆ. ಈ ಪ್ರಧಾನ ಉದ್ದೇಶಕ್ಕೆ ಹೊರತಾದ ಯಾವ ಸಂಗತಿಗಳನ್ನೂ ನಾವು ಇಲ್ಲಿ ನಿರೀಕ್ಷಿಸುವಂತಿಲ್ಲ. ಆದರೆ ಕನ್ನಡ ಜನಪದ ಪುರಾಣಕಾವ್ಯಗಳಲ್ಲಿ ಚಾಮುಂಡಿಯ ಜೀವನ ವೃತ್ತಾಂತ ಅತ್ಯಂತ ಕುತೂಹಲಕಾರಿಯೂ ವರ್ಣರಂಜಿತವೂ ಆಗಿ ಬೆಳೆದಿದೆ.
ಜನಪದ ವಕ್ತøಗಳ ಪ್ರಕಾರ ಉಜ್ಜಯಿನಿ ದೇಶದ ಬಿಜ್ಜಳರಾಯನಿಗೆ ಏಳು ಜನ ಹೆಣ್ಣುಮಕ್ಕಳಿರುತ್ತಾರೆ. ಅವರಲ್ಲಿ ಪರಿಯಾಪಟ್ಟಣದ ಉರಿಮಸಣಿ ಹಿರಿಯವಳು, ಚಾಮುಂಡಿ ಕಿರಿಯವಳು. ಇವರೇಳು ಜನವೂ ಕಾರಣಾಂತರದಿಂದ ಪರಸ್ಪರ ಜಗಳವಾಡಿಕೊಂಡು ಉತ್ತರದಿಂದ ಹೊರಟು ದಕ್ಷಿಣದ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಗೊಂಡರು. ಕಿರಿಯವಳಾದ ಚಾಮುಂಡಿ ತಾನು ನೆಲೆಗೊಳ್ಳಲು ತಕ್ಕ ಸ್ಥಳಕ್ಕಾಗಿ ಶೋಧನೆ ಮಾಡುತ್ತ ಬರುತ್ತಿರುವಾಗ ಸಂಪದ್ಭರಿತ ಭೂಮಿ ಮಹಿಷಮಂಡಲ ಅವಳ ಕಣ್ಣಿಗೆ ಬಿತ್ತು. ಇದೇ ತನ್ನ ನೆಲೆಗೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ ಬಂದಾಗ ಈ ಮಂಡಲವನ್ನಾಳುತ್ತಿದ್ದ ಮಹಿಷನೆಂಬ ರಾಕ್ಷಸ ಅವಳನ್ನು ಇದಿರಿಸಲು ಬಂದ. ಬ್ರಹ್ಮನ ವರಬಲದಿಂದ ಕೊಬ್ಬಿದ್ದ ಅವನನ್ನು ಚಾಮುಂಡಿ ಇದಿರಿಸಲು ನಿಂತಾಗ ಅವಳ ಬೆವರಿನಿಂದ ಉತ್ತುನಳ್ಳಿ ಮಾರಮ್ಮ ಹುಟ್ಟಿದಳು. ಈಕೆಯ ಸಹಾಯದಿಂದ ಚಾಮುಂಡಿ ಮಹಿಷನನ್ನು ಸಂಹರಿಸಿ ಮಹಿಷಮಂಡಲವನ್ನು ಸ್ವಾಧೀನಪಡಿಸಿಕೊಂಡು ಬೆಟ್ಟದ ಮೇಲೆ ನೆಲೆಗೊಳ್ಳುತ್ತಾಳೆ. ಮಹಿಷನಾಳುತ್ತಿದ್ದ ಮಹಿಷಮಂಡಲವೇ ಮಹಿಷಪುರಿಯಾಗಿ ಮಹಿಶೂರಾಗಿ ಈಗ ಮೈಸೂರಾಗಿದೆ. ಮೈಸೂರು ನಗರದೇವತೆಯೇ ಚಾಮುಂಡಿ.
ಜನಪದ ಸಾಹಿತ್ಯದಲ್ಲಿ ಚಾಮುಂಡಿಯನ್ನು ಚಾಮರಾಯರ ಮಗಳು ಎಂದೂ ಕರೆಯಲಾಗಿದೆ. 'ಮಲೆಯ ಮಾದೇಶ್ವರ ಜನಪದ ಮಹಾಕಾವ್ಯದಲ್ಲಿ ಶ್ರವಣ ದೊರೆಯ ಸಂಹಾರಕ್ಕಾಗಿ ಈಶ್ವರ ಭೂಮಿಗೆ ಬಂದಾಗ ಪಾರ್ವತಿಯೂ ಅವನೊಡನೆ ಕೈಲಾಸದಿಂದ ಬರುತ್ತಾಳೆ. ಮೈಸೂರಿಗೆ ಬಂದಾಗ ಮಹಿಷನನ್ನು ವಿಕಾರರೂಪದಿಂದ ಮರ್ದಿಸುತ್ತಾಳೆ. ಆಗ ಮಾದೇಶ್ವರ ಅವಳ ಉಗ್ರರೂಪವನ್ನು ನೋಡಲಾರದೆ ಅವಳನ್ನು ಬಿಟ್ಟು ಮುಂದಕ್ಕೆ ಹೊರಡುತ್ತಾನೆ. ಬೆಂಬಿಡದೆ ಬಂದ ಪಾರ್ವತಿಯನ್ನು ತಡೆದು, ತನ್ನ ಅಂಶ ನಂಜುಂಡನಾಗಿ ನಂಜನಗೂಡಿನಲ್ಲಿ ಹುಟ್ಟಿರುವುದಾಗಿಯೂ ಆ ಭೋಗನಂಜುಂಡನನ್ನು ಆಕೆ ಸೇರಬೇಕೆಂದೂ ಹೇಳಿ ಅವಳನ್ನು ಹಿಂದಕ್ಕೆ ಕಳಿಸುತ್ತಾನೆ. ಹಿಂತಿರುಗಿ ಬಂದ ಮೇಲಿನ ನಂಜುಂಡ-ಚಾಮುಂಡಿಯರ ಪ್ರಣಯ ಪ್ರಸಂಗದ ರಸವತ್ತಾದ ಕಥೆಯನ್ನು ದೇವರಗುಡ್ಡರು, ನೀಲಗಾರರು, ತಂಬೂರಿಯವರು, ಹೆಳವರು ಹಾಗೂ ಹೆಂಗಸರು ಹಾಡುತ್ತಾರೆ. ಇವರ ಸಾಹಿತ್ಯದ ಆಧಾರದಿಂದ ಚಾಮುಂಡಿಯ ಐತಿಹಾಸಿಕತೆಯನ್ನು ಸುಲಭವಾಗಿ ರೂಪಿಸಬಹುದಾಗಿದೆ.
ಅಲಿಖಿತ ಇತಿಹಾಸದ ಕಡೆಗೆ ಗಮನ ಹರಿಸಿದರೆ ಏಳುಮಲೆಯ ಮಾದೇಶ್ವರನಿಗೂ ನಂಜನಗೂಡಿನ ನಂಜುಂಡೇಶ್ವರನಿಗೂ ಚಾಮುಂಡಿಗೂ ಒಂದಲ್ಲ ಒಂದು ವಿಧದಲ್ಲಿ ಸಂಬಂಧವಿರುವಂತೆ ಕಂಡುಬರುತ್ತದೆ. ಅಲ್ಲದೆ ಇವರೆಲ್ಲರೂ ಸಮಕಾಲೀನರೆಂದೂ ಸ್ಪಷ್ಟವಾಗುತ್ತದೆ. ಚಾಮುಂಡಿ ಮಲೆಯ ಮಾದೇಶ್ವರನ ತಂಗಿಯೆಂದು ತಿಳಿಯುವುದರಿಂದಲೂ ಮಾದೇಶ್ವರ ಮಾದಿಗರವನೆಂದು ತಿಳಿಯುವುದರಿಂದಲೂ ಚಾಮುಂಡಿಯನ್ನು ನಂಜುಂಡನ ಪತ್ನಿಯರಾದ ದೇವೀರಮ್ಮ ಹಾಗೂ ಸೋಮಾಜಮ್ಮರು ಕೋಳಿ ಕುರಿ ತಿನ್ನುವ ಮುಂಡೆಯೆಂದು ಬಯ್ಯುವುದರಿಂದಲೂ ಚಾಮುಂಡಿ ಮಾದಿಗ ಕುಲದವಳು ಎಂಬುದು ಸ್ಪಷ್ಟವಾಗುತ್ತದೆ.
ಲಿಂಗಾಯತರವನಾದ ನಂಜುಂಡ ಕುಂತೂರು ಮಠದಲ್ಲಿ ಮಾದೇಶ್ವರನ ಸಹಪಾಠಿ. ಮಾದೇಶ್ವರ ಶ್ರವಣ ದೊರೆಯನ್ನು ಸಂಹರಿಸಿ ಹದಿನಾಡನ್ನು ನಂಜುಂಡನಿಗೆ ಕೊಡುತ್ತಾನೆ. ನಂಜುಂಡ ಮಾದೇಶ್ವರನ ತಂಗಿಯಾದ ಚಾಮುಂಡಿಯೊಡನೆ ಗುಪ್ತಪ್ರಣಯವನ್ನು ಇಟ್ಟುಕೊಂಡಿದ್ದರಿಂದ ಇವರಿಬ್ಬರ ಮುಖದರ್ಶನವೇ ನನಗೆ ಬೇಡವೆಂದು ಮಾದೇಶ್ವರ ಕಂಪಣ ರಾಜ್ಯದ ಮೂಡ್ಲುಮಲೆಯಲ್ಲಿ 'ಏಕಾಂಗಿವಸ್ತುವಾಗಿ ನೆಲೆಗೊಳ್ಳುತ್ತಾನೆ. ಈ ಮೂವರೂ ಜನಪದ ಸಾಹಿತ್ಯದ ಪ್ರಕಾರ ಸಮಕಾಲೀನರಾಗಿದ್ದ ವಿಷಯ ಸತ್ಯವಾದುದಾದರೆ 16ನೆಯ ಶತಮಾನದ ಮಾದೇಶ್ವರನ ಕಾಲವೇ ನಂಜುಂಡ, ಚಾಮುಂಡಿಯರ ಕಾಲವೂ ಆಗುತ್ತದೆ.
ಐತಿಹಾಸಿಕ ದೃಷ್ಟಿಯಿಂದ ಅವಲೋಕಿಸಿದಾಗ ಚಾಮುಂಡಿ ಮೈಸೂರು ಅರಸರ ಪರವಾಗಿ ಬಹಳಷ್ಟು ಯುದ್ಧಗಳಲ್ಲಿ ಪಾಲ್ಗೊಂಡ ವೀರವನಿತೆಯಾಗಿದ್ದಿರಬಹುದೆಂದು ಕಾಣುತ್ತದೆ. ಪಿರಿಯಾಪಟ್ಟಣದ ಲಾವಣಿ, ಮಾಗಡಿ ಕೆಂಪೇಗೌಡನ ಲಾವಣಿಗಳಲ್ಲಿ ಈಕೆ ಮೈಸೂರರಸರ ಪರವಾಗಿ ನಂಜುಂಡನೊಡನೆ ಹೋಗಿ ಯುದ್ಧ ಮಾಡುವ ಸಂದರ್ಭಗಳ ವರ್ಣನೆ ಕಂಡುಬರುತ್ತದೆ. ಇವರಿಬ್ಬರ ಶಕ್ತಿಸಾಮಥ್ರ್ಯಗಳಿಗೆ ಕೃತಜ್ಞತೆಯ ರೂಪದಲ್ಲಿ ಮೈಸೂರು ಅರಸರು ತೋರಿಸಿದ ಭಕ್ತಿ ಇವರನ್ನು ದೇವರನ್ನಾಗಿಸಿವೆ. ಐತಿಹಾಸಿಕ ವ್ಯಕ್ತಿಗಳು ಹೀಗೆ ಭಕ್ತಿಗೌರವಗಳ ಪವಿತ್ರಾವರಣದಿಂದ ಪುರಾಣವ್ಯಕ್ತಿಗಳಾಗುವ ಸಂದರ್ಭಗಳು ನಮ್ಮಲ್ಲಿ ವಿರಳವೇನಲ್ಲ. (ಪಿ.ಕೆ.ಆರ್.ಎ.)