ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಾಲ್ತಿ ಹೊಣೆ
ಚಾಲ್ತಿ ಹೊಣೆ - ಅಲ್ಪಾವಧಿಯ ಋಣ; ಸಾಮಾನ್ಯವಾಗಿ ಒಂದು ವರ್ಷದೊಳಗೆ, ಇದಕ್ಕೂ ಮೀರಿದರೆ ಸಂಸ್ಥೆಯ ವ್ಯವಹಾರ ಆವರ್ತ ವರ್ಷದೊಳಗೆ, ಚಾಲ್ತಿ ಆಸ್ತಿಗಳಿಂದಲೋ ವರಮಾನಕ್ಕೆ ವರ್ಗಾಯಿಸಿಯೋ, ಸಮನ್ವಯ ಮಾಡಿಯೋ (ರಿಕನ್ಸೈಲ್) ಇತ್ಯರ್ಥಪಡಿಸಬೇಕಾದ ಹೊಣೆ. (ಕರೆಂಟ್ ಲಯಬಿಲಿಟಿ). ಚರ ಹೊಣೆ ಅಥವಾ ಸಾಲ (ಫ್ಲೋಟಿಂಗ್ ಲಯಬಿಲಿಟಿ ಅಥವಾ ಡೆಟ್) ಎಂದೂ ಇದನ್ನು ಕರೆಯಲಾಗುತ್ತದೆ. ಚಾಲ್ತಿ ಹೊಣೆಗಳ ಉದಾಹರಣೆಗಳು ಇವು : 1 ಪದಾರ್ಥ, ಸೇವೆಗಳ ಸರಬರಾಜುದಾರರೊಂದಿಗಿನ ವಹಿವಾಟುಗಳಿಂದಾಗಿ ಉದ್ಭವವಾದ ವಾಣಿಜ್ಯ ಸಾಲದಾತರ ಲೆಕ್ಕಗಳು ಮತ್ತು ಪಾವತಿಸಬೇಕಾದ (ದೇಣೀ) ಹುಂಡಿಗಳು; 2 ಒಂದು ವರ್ಷದೊಳಗೆ ತೀರಿಸಬೇಕಾದ ಬ್ಯಾಂಕು ಸಾಲಗಳು ; 3 ಒಂದು ವರ್ಷದೊಳಗೆ ಪಾವತಿಗೆ ಬರುವ ದೀರ್ಘಾವಧಿ ಸಾಲದ ಕಂತುಗಳು ; 4 ಗ್ರಾಹಕರಿಂದ ಬಂದ ಅಲ್ಪಾವಧಿ ಠೇವಣಿಗಳು ಮತ್ತು ಮುಂಗಡಗಳು; 5 ಘೋಷಿಸಲಾದ-ಆದರೆ ಪಾವತಿಯಾಗದಿರುವ-ಲಾಭಾಂಶಗಳು ; 6 ಪಾವತಿ ಮಾಡಬೇಕಾದ ಬಡ್ಡಿ, ತೆರಿಗೆ, ಸಂಬಳ, ಕಮಿಷನ್, ಸ್ವಾಮ್ಯ ಶುಲ್ಕಭಾಗ (ರಾಯಲ್ಟಿ), ಬೋನಸ್ಸು, ಹಂಚಿಕೆಯಾದ ಲಾಭ ಮುಂತಾದವು.
ಚಾಲ್ತಿ ಹೊಣೆಗಳು ಸಂಸ್ಥೆಯ ಆಸ್ತಿ-ಹೊಣೆ ತಃಖ್ತೆ (ಬ್ಯಾಲೆನ್ಸ್ ಷೀಟ್)ಯ ಹೊಣೆಬದಿಯಲ್ಲಿ ಎರಡನೆಯ ಸ್ಥಾನದಲ್ಲಿ ನಮೂದಾಗುತ್ತವೆ. ರೂಢಿಯಂತೆ ಮೊದಲನೆಯ ಸ್ಥಾನ ಸ್ಥಿರಹೊಣೆಗಳದು. (ಸಿ.ಎಂ.ಎಂ.)