ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಾಳುಕ್ಯ

ವಿಕಿಸೋರ್ಸ್ದಿಂದ

ಚಾಳುಕ್ಯ

ಕರ್ನಾಟಕದಲ್ಲಿ ಆಳಿದ ಒಂದು ಪ್ರಖ್ಯಾತ ರಾಜಮನೆತನ. ಈ ಮನೆತನದ ಅರಸರು ಸತ್ತ್ವಂiÀ ುುತ ಸಾಮ್ರಾಜ್ಯವನ್ನು ಕಟ್ಟಿ ಆಳಿ, ನಾಲ್ಕು ಶತಮಾನಗಳಿಗೂ ಹೆಚ್ಚು ಕಾಲ ನಾಡಿನ ಇತಿಹಾಸವನ್ನು ರೂಪಿಸಿ ಅಜೇಯವಾದ ಕರ್ನಾಟಕ ಬಲ ಎಂಬ ಕೀರ್ತಿ ಪಡೆದರು. ಕರ್ನಾಟಕದ ಸಾಹಿತ್ಯ ಕಲೆಗಳಿಗೆ ಅಮಿತವಾದ ಪ್ರೋತ್ಸಾಹ ನೀಡಿದರು. ಇವರ ಹೆಸರಿನಲ್ಲಿ ವಿಶಿಷ್ಟವಾದ ವಾಸ್ತು ಹಾಗೂ ಶಿಲ್ಪಕಲೆ ರೂಪುಗೊಂಡಿತು. ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಅರಸರ ಮನೆತನ ಭಾರತದಲ್ಲೇ ಪ್ರಬಲ ಅರಸುಮನೆತನಗಳಲ್ಲೊಂದೆಂದು ಪರಿಗಣಿತವಾಗಿದೆ. ಕನ್ನಡಿಗರಾದ ಇವರು ತಮ್ಮ ಪ್ರಭಾವವನ್ನು ಕರ್ನಾಟಕದ ಹೊರಗೂ ವಿಸ್ತರಿಸಿದರು. ಭಾರತಾದ್ಯಂತವಲ್ಲದೆ ಆಗ್ನೇಯ ಏಷ್ಯವೇ ಮುಂತಾದ ಇತರ ಕಡೆಗಳಿಗೂ ಕನ್ನಡ ಸಂಸ್ಕøತಿ ಹರಡುವಂತೆ ಮಾಡಿದರು. ಈ ಮನೆತನದ ನಾನಾ ಶಾಖೆಗಳಲ್ಲಿ ಬಾದಾಮಿ, ಕಲ್ಯಾಣ, ವೆಂಗಿ, ವೇಮುಲವಾಡ ಪ್ರಸಿದ್ಧವಾದವು. ಈ ಶಾಖೆಗಳ ಅರಸರಲ್ಲದೆ ಇನ್ನೂ ನಾನಾ ಶಾಖೆಗಳವರು ಕರ್ನಾಟಕದಲ್ಲಿ ಆಳಿದರು. ಈ ಮನೆತನದ ಮೊದಲ ರಾಜವಂಶ ಬಾದಾಮಿಯ ಚಾಳುಕ್ಯರದೆಂದೂ ಇವರ ಪ್ರಥಮ ದೊರೆಯಾದ ಪುಲಕೇಶಿ, ಕದಂಬರ ಇಮ್ಮಡಿ ಕೃಷ್ಣವರ್ಮನನ್ನು ಸೋಲಿಸಿ ಚಾಳುಕ್ಯ ರಾಜ್ಯವನ್ನು ಸ್ಥಾಪಿಸಿದನೆಂದೂ ತಿಳಿದುಬರುತ್ತದೆ. ಶಾಸನಗಳಲ್ಲಿ ಇವರನ್ನು ಸಾಮಾನ್ಯವಾಗಿ ಚಲುಕ್ಯ ಎಂದೇ ಕರೆಯಲಾಗಿದೆ. ರಾಷ್ಟ್ರಕೂಟರ ಅನಂತರ ಕಲ್ಯಾಣದಲ್ಲಿ ಆಳಿದವರನ್ನು ಚಾಳುಕ್ಯರೆಂದು ಹೆಸರಿಸಲಾಗಿದೆ. ಬಾದಾಮಿಯಲ್ಲಿ ಆಳಿದ ಈ ಮನೆತನದ ಮೊದಲ ಅರಸರನ್ನು ಚಲುಕ್ಯರೆಂದೇ ಕರೆಯಬೇಕೆಂಬುದು ಫ್ಲೀಟರ ಅಭಿಪ್ರಾಯ. ಕಲ್ಯಾಣದ ಚಾಳುಕ್ಯರು ಇವರಿಗಿಂತ ಭಿನ್ನರೆನ್ನಲು ಅವರ ಹೆಸರಿನ ಭಿನ್ನತೆಯೂ ಒಂದು ಕಾರಣವೆಂಬುದು ಅವರ ಮತ.

ಚಾಳುಕ್ಯ ಎಂಬ ಹೆಸರಲ್ಲದೆ ಚಳ್ಕಿ, ಚಳುಕಿ, ಚಳುಕ್ಯ, ಅಮಿಕ್ಯ, ಚಲುಕ್ಯ, ಚಾಳುಕ್ಯ ಎಂಬ ರೂಪಗಳೂ ಪ್ರಚಾರದಲ್ಲಿವೆ. ಇದರ ಅರ್ಥವೇನು ಎಂಬುದು ಸ್ಪಷ್ಟವಾಗಿಲ್ಲ. ಇದೊಂದು ವ್ಯಕ್ತಿನಾಮವಾಗಿರಬಹುದು. ಅಥವಾ ದ್ರಾವಿಡರ ಒಂದು ಪಂಗಡದ, ಜನಾಂಗದ ಹೆಸರಾಗಿರಬಹುದು. ಕ್ರಿ.ಶ.3ನೆಯ ಶತಮಾನಕ್ಕೆ ಸೇರಿದ, ನಾಗಾರ್ಜುನಕೊಂಡದಲ್ಲಿ ದೊರೆತ ಶಾಸನವೊಂದರಲ್ಲಿ ಖಂದಚಲಿಕಿ ರೆಮ್ಮಣದನೆಂಬ ಹೆಸರು ಕಂಡುಬಂದಿದೆ. ಇವನಿಗೂ ಚಾಳುಕ್ಯರಿಗೂ ಯಾವ ಸಂಬಂಧವನ್ನೂ ಕಲ್ಪಿಸಲಾಗದಾದರೂ ಚಾಳುಕ್ಯ ಎಂಬ ಹೆಸರಿನ ಪ್ರಾಚೀನ ರೂಪವಿದು ಎಂದು ಹೇಳಬಹುದು.

ಹನ್ನೊಂದನೆಯ ಶತಮಾನದಲ್ಲಿ ಮತ್ತು ಅನಂತರ ಹುಟ್ಟಿದ ಶಾಸನಗಳು ಈ ಹೆಸರಿನ ವ್ಯುತ್ಪತ್ತಿಯನ್ನು ಕುರಿತು ಹಲವಾರು ಕತೆಗಳನ್ನು ಹೆಣೆದಿವೆ. ಚುಲುಕ ಎಂಬ ಸಂಸ್ಕøತ ಪದದಿಂದ ಚಲುಕ್ಯ ಬಂತೆಂಬುದು ಒಂದು ಹೇಳಿಕೆ. ಚುಲುಕ ಎಂದರೆ ಎರಡು ಅಂಗೈಗಳನ್ನು ಕೂಡಿಸಿದರೆ ಉಂಟಾಗುವ ಬೊಗಸೆ. ಬಿಲ್ಹಣ ಕವಿವಿರಚಿತ ವಿಕ್ರಮಾಂಕದೇವಚರಿತವೆಂಬ ಐತಿಹಾಸಿಕ ಕಾವ್ಯದಲ್ಲಿ ಆತ ಈ ಕುರಿತು ಒಂದು ಕತೆ ಹೇಳಿದ್ದಾನೆ. ದುಷ್ಟರನ್ನು ಶಿಕ್ಷಿಸಿ. ಶಿಷ್ಟರನ್ನು ಸಂರಕ್ಷಿಸಲು ನಾಡಿಗೆ ಒಬ್ಬ ಮಹಾಪುರುಷನ ಅವಶ್ಯಕತೆ ಇದೆ ಎಂಬ ಕಾರಣದಿಂದ, ಅಂಥ ಒಬ್ಬ ಪುರುಷನನ್ನು ಸೃಷ್ಟಿಸಬೇಕೆಂದು ಬ್ರಹ್ಮನನ್ನು ಇಂದ್ರ ಪ್ರಾರ್ಥಿಸಿದ. ಇದಕ್ಕೆ ಒಪ್ಪಿದ ಬ್ರಹ್ಮ ಸಂಧ್ಯಾಕಾಲದಲ್ಲಿ ಅಘ್ರ್ಯ ಬಿಡುವಾಗ ತನ್ನ ಚುಲುಕದಲ್ಲಿದ್ದ ನೀರನ್ನು ದೃಷ್ಟಿಸಿದ. ಆಗ ಬೊಗಸೆಯಿಂದ ವೀರನೊಬ್ಬ ಉದಯಿಸಿದ. ಚುಲುಕದಿಂದ ಬಂದವನಾದ್ದರಿಂದ ಇವನೇ ಚಲುಕ್ಯ-ಚಾಲುಕ್ಯ-ಚಾಳುಕ್ಯ ಎನಿಸಿಕೊಂಡ.

ಈ ಕಾಲದ ಶಾಸನಗಳಲ್ಲಿ ಇವರನ್ನು ಕುರಿತ ಇನ್ನೊಂದು ಹೇಳಿಕೆ ಇದೆ: ಇವರು ಅಯೋಧ್ಯೆಯಿಂದ ದಕ್ಷಿಣಕ್ಕೆ ಬಂದವರು. ಈ ವಂಶದ ಹದಿನಾರು ಅರಸರು ದಕ್ಷಿಣಾಪಥದಲ್ಲಿ ಆಳಿದ ಮೇಲೆ ಸ್ವಲ್ಪ ಕಾಲ ಇವರು ಸತ್ತ್ವಹೀನರಾಗಿದ್ದರು. ಈ ವಂಶದ ಜಯಸಿಂಹ ಪುನಃ ಬಲಸಂವರ್ಧನೆ ಮಾಡಿಕೊಂಡು ರಾಷ್ಟ್ರಕೂಟ ಮನೆತನದ ಕೃಷ್ಣನ ಮಗನಾದ ಇಂದ್ರನನ್ನು ಸೋಲಿಸಿ ಚಾಳುಕ್ಯ ರಾಜ್ಯ ಸ್ಥಾಪನೆಗೆ ಕಾರಣನಾದ-ಎಂದು ಹೇಳಲಾಗಿದೆ. ಆದರೆ ಇವರು ಸೋಲಿಸಿದ ರಾಷ್ಟ್ರಕೂಟರು ಯಾರೆಂಬುದು ತಿಳಿಯದು. ಅಂಥವರಾರೂ ಕರ್ನಾಟಕದಲ್ಲಿ ಆ ಕಾಲದಲ್ಲಿ ಇದ್ದಂತಿಲ್ಲ. ಜಯಸಿಂಹನಿಗೆ ಹಿಂದೆ. ಚಾಲುಕ್ಯರು ಸತ್ತ್ವಹೀನರಾಗಿದ್ದ ಕಾಲಕ್ಕೂ ಮೊದಲು, 16 ಜನ ದಕ್ಷಿಣಾಪಥದಲ್ಲಿ ಆಳಿದರೆಂಬ ಮಾತನ್ನು ನಂಬುವುದಾದರೆ ದಕ್ಷಿಣಾಪಥದಲ್ಲಿ ಇವರ ಆಳ್ವಿಕೆ ಸು. 130ರ ವೇಳೆಗೇ ಆರಂಭವಾಯಿತೆನ್ನಬೇಕಾಗುತ್ತದೆ. ಇವರ ಪೂರ್ವಜರು 54 ಜನ ಅಯೋಧ್ಯೆಯಲ್ಲಿ ಆಳಿದರೆಂಬುದನ್ನು ನಂಬಿದರೆ ಅವರಲ್ಲೊಒಬ್ಬರೂ ಕೇವಲ ಹತ್ತು ವರ್ಷಗಳ ಕಾಲ ಆಳಿದರೆಂದು ಭಾವಿಸಿದರೂ ಅವರ ಆಳ್ವಿಕೆ ಕ್ರಿ.ಪೂ.410ರಷ್ಟು ಹಿಂದೆಯೇ ಅಲ್ಲಿ ಆರಂಭವಾಯಿತೆನ್ನಬೇಕು. ಆದರೆ ಇದು ಈವರೆಗೆ ತಿಳಿದಿರುವ ಇತಿಹಾಸಕ್ಕಿಂತ ಭಿನ್ನವಾಗುತ್ತದೆ. ಆದ್ದರಿಂದ ಈ ಹೇಳಿಕೆಯನ್ನು ನಂಬಲಾಗುವುದಿಲ್ಲ.

ಚಾಳುಕ್ಯರ ಮೂಲನಾಮ ಚಲುಕಿ, ಚಲ್ಕಿ, ಸಲುಕಿ ಅಥವಾ ಸಲ್ಕಿ-ಎಂಬ ಕನ್ನಡ ಪದ ಎಂದು ಊಹಿಸುವುದು ಹೆಚ್ಚು ಸಮಂಜಸ. ಇದು ಹಾರೆಯಂಥ ಒಂದು ಕೃಷಿ ಉಪಕರಣದ ಹೆಸರು. ಈ ಮನೆತನದ ಮೂಲಪುರಷ ಇದನ್ನು ತನ್ನ ಅಂಕಿತನಾಮವಾಗಿ ಸ್ವೀಕರಿಸಬೇಕು. ಈಗಲೂ ಕರ್ನಾಟಕದಲ್ಲಿ ಈ ರೀತಿ ಹೆಸರಿಟ್ಟುಕೊಳ್ಳುವ-ಕೃಷಿ ಉಪಕರಣದ ಹೆಸರಿನ ಜೊತೆಗೆ ಅಪ್ಪ ಎಂಬ ಗೌರವ ಪದ ಜೋಡಿಸುವ ರೂಢಿ ಇದೆ. (ಉದಾ : ಸಲ್ಕೆಪ್ಪ, ಗುದ್ಲೆಪ್ಪ). ಮೂಲತಃ ಚಾಳುಕ್ಯರು ಬಾದಾಮಿಯ ಕೆಳಬಲದಲ್ಲಿ ವಾಸಿಸುವ ಒಕ್ಕಲಿಗರ ಬಣಕ್ಕೆ ಸೇರಿದವರಿರಬೇಕು. ಆದರೆ ಬರಬರುತ್ತ ಈ ಮನೆತನ ಪ್ರಬಲವಾಗಿ ವಿಶಾಲಪ್ರದೇಶಗಳನ್ನು ಆಳಲು ಪ್ರಾರಂಭಿಸಿದಾಗ ಈ ಮನೆತನಕ್ಕೆ ಪೌರಾಣಿಕತೆಯನ್ನೂ, ಪಾವಿತ್ರ್ಯವನ್ನೂ ಕೊಡುವುದಕ್ಕಾಗಿ ದಂತಕಥೆ ಹುಟ್ಟಿಕೊಂಡಿರಬೇಕು.

ಬಾದಾಮಿಯ ಚಾಳುಕ್ಯರ ಸಮಕಾಲೀನ ಶಾಸನಗಳಲ್ಲಿ ಮೇಲೆ ಹೇಳಿದ ಕಥೆಗಳಾವುವೂ ಕಾಣಬರುವುದಿಲ್ಲ. ಇವರು ಮೂಲತಃ ಕನ್ನಡಿಗರೇ ಎಂಬ ವಿಷಯ ಅವುಗಳಿಂದ ತಿಳಿದುಬರುತ್ತದೆ. ಕದಂಬರಂತೆ ಇವರೂ ಹರಿತೀಪುತ್ರರು, ಮಾನವ್ಯಸ ಗೋತ್ರರು. ವರಾಹ ಇವರ ಲಾಂಛನ, ಸಪ್ತಮಾತೃಕೆಯರಿಂದ, ಕಾರ್ತಿಕೇಯನಿಂದ ಪರೀಕ್ಷಿಸಲ್ಪಟ್ಟ ಇವರು ಭಗವನ್ನಾರಾಯಣನ ಕೃಪಾಪಾತ್ರರು. ಈ ಅರಸರ ಪುಲಕೇಶಿ, ಬಿಟ್ಟಿರಸ ಮುಂತಾದ ಹೆಸರುಗಳನ್ನೂ, ನೋಡುತ್ತ ಗೆಲ್ವೋಂ, ಪ್ರಿಯಗಳ್ಳ ಇತ್ಯಾದಿ ಬಿರುದುಗಳನ್ನೂ, ಇವರು ಕನ್ನಡ ಮತ್ತು ಸಂಸ್ಕøತ ಭಾಷೆಗಳಿಗೆ ಕೊಟ್ಟ ಪ್ರೋತ್ಸಾಹವನ್ನೂ, ಆ ಭಾಷೆ ಹಾಗೂ ಲಿಪಿಗಳಲ್ಲಿ ಇವರು ಕೆತ್ತಿಸಿದ ಶಾಸನಗಳನ್ನೂ ಗಮನಿಸಿದರೆ ಇವರಿಗೆ ಆ ಭಾಷೆಯ ಮೇಲೆ, ಲಿಪಿಯ ಮೇಲೆ ಇದ್ದ ಒಲವು ಅರ್ಥವಾಗುತ್ತದೆ. ಈ ಕಾಲದಿಂದ ಕನ್ನಡ ಶಾಸನಸಾಹಿತ್ಯ ಹೆಚ್ಚು ಪ್ರೌಢವಾಗುತ್ತದೆ. ಕನ್ನಡದಲ್ಲಿ ಶಾಸನಗಳನ್ನು ಬರೆಸುವ ಪರಿಪಾಟೆ ಪ್ರಬಲವಾಗುತ್ತದೆ. ಇವರ ಅನಂತರ ಆಳಿದ ರಾಷ್ಟ್ರಕೂಟರು ಇವರ ಸೇನೆಯನ್ನು ಕರ್ನಾಟಕ ಬಲವೆಂದು ಕರೆದಿರುವುದನ್ನು ಇಲ್ಲಿ ಗಮನಿಸಬಹುದು. ಕ್ರಿ.ಶ. 8ನೆಯ ಶತಮಾನದಲ್ಲಿ ಪಾಂಡ್ಯರು ಕರ್ನಾಟಕದ ಈ ಅರಸರೊಂದಿಗೆ ಸಂಬಂಧ ಬೆಳೆಸಿದ್ದರು. ಪಾಂಡ್ಯವಂಶದ ನೆಡುಂಜಡೈಯನ ಅಜ್ಜನಾದ ಶಡೈಯನನ್ನು ಶಾಸನದಲ್ಲಿ ಮಧುರಕರು ನಾಟಕನ್ ಎಂದು ವಣಿರ್ಸಿರುವುದು ಪಾಂಡ್ಯರು ಕರ್ನಾಟಕದವರೊಡನೆ-ಚಾಳುಕ್ಯರೊಡನೆ-ಹೊಂದಿದ್ದ ಮಧುರವಾದ ಸಂಬಂಧದ ದ್ಯೋತಕವಾಗಿ, ವಿಷ್ಣುವರ್ಧನ ರಾಜನೆಂಬ ಹೆಸರಿನ ಕನ್ನಡ ರೂಪವಾದ ಬಿಟ್ಟರಸ ಎಂಬುದನ್ನು ತಾಮ್ರ ಶಾಸನದ ಮೊಹರಿನ ಮೇಲೆ ಕೆತ್ತಲಾಗಿದೆ. ಬುದ್ಧವರಸನ ಬಿರುದು ಮದನಂಗಾಶ್ರಯ-ಎಂಬ ವಿಷಯ ಇನ್ನೊಂದು ಶಾಸನದಿಂದ ತಿಳಿದಿದೆ. ಇದು ಸುಸ್ಪಷ್ಟವಾಗಿ ಕನ್ನಡದ ಬಿರುದು. ಒಟ್ಟಿನಲ್ಲಿ ಚಾಲುಕ್ಯರು ಮೂಲತಃ ಕನ್ನಡಿಗರೇ ಎಂಬುದೂ ಅವರು ಉತ್ತರದ ಅಯೋಧ್ಯೆಯಿಂದ ಬಂದವರೆಂಬ ಮಾತೂ ಅನಂತರ ಹೆಣೆಯಲಾದ ಕತೆಯೆಂಬುದು ಸ್ಪಷ್ಟ.

ಬಾದಾಮಿಯ ಚಾಳುಕ್ಯರು

ಇತಿಹಾಸ : ಕ್ರಿ.ಶ. 6ನೆಯ ಶತಮಾನದಿಂದ ಸುಮಾರು ಎರಡು ಶತಮಾನಗಳ ಕಾಲ ಇವರು ಕರ್ನಾಟಕವನ್ನಾಳಿದರು. ಇವರ ರಾಜಧಾನಿ ಬಾದಾಮಿಯಾಗಿದ್ದುದರಿಂದ ಇವರು ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾಗಿದ್ದಾರೆ. ಬಾದಾಮಿಯ ಚಾಳುಕ್ಯರ ಮೂಲಪುರಷ ಜಯಸಿಂಹ. ಈತನ ಮಗ ರಣರಾಗ. ಇವರನ್ನು ಕುರಿತು ಹೆಚ್ಚು ವಿವರಗಳು ಲಭ್ಯವಾಗಿಲ್ಲ. ಜಯಸಿಂಹ ಕದಂಬರ ಅಧೀನದಲ್ಲಿ ಒಬ್ಬ ಅಧಿಕಾರಿಯೋ, ಮಾಂಡಲಿಕನೋ ಆಗಿದ್ದಿರಬಹುದು. ಮಾನಪುರದಲ್ಲಿ ಆಳಿದ ರಾಷ್ಟ್ರಕೂಟ ಮನೆತನದ ಅಭಿಮನ್ಯುವಿನ ಮಾಂಡಲಿಕನೊಬ್ಬನಿಗೆ ಜಯಸಿಂಹನೆಂಬ ಹೆಸರಿತ್ತು. ಅವನು ಇವನಾಗಿದ್ದಿರಬಹುದೆಂಬುದು ಒಂದು ಊಹೆ. ಆದರೆ ಇದನ್ನು ಒಪ್ಪಲು ಪ್ರಬಲವಾದ ಆಧಾರಗಳಿಲ್ಲ. ಜಯಸಿಂಹ ಮತ್ತು ರಣರಾಗರ ಕಾಲವನ್ನು ಅನುಕ್ರಮವಾಗಿ ಸು. 500-520 ಮತ್ತು 520-540 ಎಂದು ಹೇಳಬಹುದು.

ಪುಲಕೇಶಿ I : ರಣರಾಗನ ಮಗ 1ನೆಯ ಪುಲಕೇಶಿ. ಈತನನ್ನು ಚಾಳುಕ್ಯ ಮನೆತನದ ಮೂಲಪುರುಷನೆಂದು ಪರಿಗಣಿಸಬಹುದು. ಸ್ವತಂತ್ರವಾದ ರಾಜ್ಯಕ್ಕೆ ಅಡಿಪಾಯ ಹಾಕಿದವನು ಈತ. ಕದಂಬರನ್ನು ಸೋಲಿಸಿದ ಬಳಿಕ ಇವನು ಬಾದಾಮಿಯನ್ನು ತನ್ನ ರಾಜಧಾನಿಯನ್ನಾಗಿ ಆರಿಸಿಕೊಂಡು, ಅಲ್ಲಿಯ ಗುಡ್ಡದ ಮೇಲೆ ಅಜೇಯವಾದ ಕೋಟೆಯೊಂದನ್ನು ಕಟ್ಟಿಸಿದ. ಬಾದಾಮಿಯಲ್ಲಿ ದೊರೆತ ಶಕವರ್ಷ 465ರ (ಕ್ರಿ.ಶ. 543) ಇವನ ಶಾಸನ ಈತನನ್ನು ಚಲಿಕ್ಯವಲ್ಲಭೇಶ್ವರನೆಂದು ಕರೆದಿದೆ. ಚಾಳುಕ್ಯ ಅರಸರು ಅನಂತರದ ಕಾಲದಲ್ಲಿ ವಲ್ಲಭನೆಂಬ ಬಿರುದು ಪಡೆದು ಆ ಬಿರುದಿನಿಂದಲೇ ಪ್ರಸಿದ್ಧರಾದರು. ಪೃಥ್ವೀವಲ್ಲಭ ಎಂಬುದು ಅವರ ಬಿರುದುಗಳಲ್ಲಿ ಒಂದು. ವಲ್ಲಭನೆಂಬ ಬಿರುದನ್ನು ಮೊದಲು ಧರಿಸಿದವನೇ ಪುಲಕೇಶಿ ಎಂಬುದು ಇದರಿಂದ ಈಗ ತಿಳಿದಿದೆ. ರಣವಿಕ್ರಮನೆಂಬುದು ಈತನ ಇನ್ನೊಂದು ಹೆಸರು.

ಪುಲಕೇಶಿ ಅಶ್ವಮೇಧಾದಿ ಯಾಗಗಳನ್ನು ಮಾಡಿದನೆಂದು ಅವನ ಬಾದಾಮಿ ಶಾಸನ ಸಾರುತ್ತದೆ. ಮಂಗಲೇಶನ ಮಹಾಕೂಟ ಶಾಸನದಲ್ಲಿ ಈತ ಅಗ್ನಿಷ್ಟೋಮ. ಅಗ್ನಿಚಯನ, ವಾಜಪೇಯ, ಬಹುಸುವರ್ಣ. ಪೌಂಡರೀಕ ಮತ್ತು ಹಿರಣ್ಯಗರ್ಭ ಕ್ರತುಗಳನ್ನು ಆಚರಿಸಿದನೆಂದು ಹೇಳಿದೆ. ಇದು ಬಾದಾಮಿಯ ಶಾಸನದಲ್ಲಿಯ ಹೇಳಿಕೆಯನ್ನು ಸಮರ್ಥಿಸುತ್ತದೆ. ಎಂದ ಮೇಲೆ ಕದಂಬರನ್ನು ಸೋಲಿಸಿದ ಪುಲಕೇಶಿ ತನ್ನ ರಾಜ್ಯವನ್ನು ವಿಸ್ತರಿಸಲು ಇತರ ಯತ್ನಗಳನ್ನೂ ಮಾಡಿದನೆನ್ನಬಹುದು. ಸೇಂದ್ರಕರ ಶ್ರೀವಲ್ಲಭ ಅಲ್ಲಶಕ್ತಿ ಈತನ ಕಿರಿಯ ಸಮಕಾಲೀನನಾಗಿದ್ದ. ಇವನ ಸಾಮಂತರಲ್ಲೊಬ್ಬನಾಗಿದ್ದ. ಪುಲಕೇಶಿಗೆ ಒಪ್ಪುರ ಕುಲದ ದುರ್ಲಭದೇವಿ ಮತ್ತು ಇಂದುಕಾಂತಿ ಎಂಬಿಬ್ಬರು ಪತ್ನಿಯರಿದ್ದರು. ಕೀರ್ತಿವರ್ಮ ಮತ್ತು ಮಂಗಲೇಶ ಇವನ ಮಕ್ಕಳು. ಮುಧೋಳ ತಾಮ್ರಶಾಸನದ ಕರ್ತೃವಾದ ಪೂಗವರ್ಮ ಈತನ ಇನ್ನೊಬ್ಬ ಮಗನೆಂದೂ ಇವನೇ ಹಿರಿಯನಾಗಿದ್ದನೆಂದೂ ತಂದೆ ಜೀವಿಸಿದ್ದಾಗಲೇ ಇವನು ಮರಣಹೊಂದಿದರಿಂದ ಅನಂತರದ ವಂಶಾವಳಿಗಳಲ್ಲಿ ಇವನ ಉಲ್ಲೇಖ ಕಂಡುಬರುವುದಿಲ್ಲವೆಂದೂ ಒಂದು ವಾದವಿದೆ. ಆದರೆ ಪೂಗವರ್ಮ ಎಂಬುದು ಕೀತಿವರ್ಮನ ಇನ್ನೊಂದು ಹೆಸರಾಗಿರಬಹುದೆಂದು ಹೇಳಲಾಗಿದೆ.

ಕೀರ್ತಿವರ್ಮ I : ಪುಲಕೇಶಿಯ ಅನಂತರ ಕೀರ್ತಿವರ್ಮ ಪಟ್ಟಕ್ಕೆ ಬಂದ. ಗೊಡಚಿಯ ತಾಮ್ರಶಾಸನದಲ್ಲಿ ಇವನನ್ನು ಕತ್ತಿ ಅರಸ ಎಂದು ಕರೆಯಲಾಗದೆ. ಕತ್ತಿ ಅರಸ ಎಂಬುದು ಕೀರ್ತಿವರ್ಮ ಎಂಬ ಹೆಸರಿನ ಕನ್ನಡ ರೂಪ. ಬಾದಾಮಿಯ ಗುಹೆಯಲ್ಲಿ ಈತನ ಕ್ರಿ.ಶ. 500ರ ಶಾಸನವೊಂದು ಇದೆ. ಅದು ಈತನ ಆಳ್ವಿಕೆಯ 12ನೆಯ ವರ್ಷವೆಂದು ಹೇಳಲಾಗಿದೆ. ಎಂದರೆ ಈತ ಕ್ರಿ.ಶ.566ರಿಂದ ಆಳತೊಡಗಿದನೆಂದು ಖಚಿತವಾಗಿ ಹೇಳಬಹುದು. ಪುರುರಣಪರಾಕ್ರಮ, ಪರಾಕ್ರಮೇಶ್ವರ ಮುಂತಾದವು ಇವನ ಬಿರುದುಗಳು. ಇವನು ಕದಂಬ, ನಳ, ಮೌರ್ಯರನ್ನೂ ತಲಕಾಡಿನ ಗಂಗರನ್ನೂ ಸೋಲಿಸಿದ. ಮೊದಲ ಮೂವರು ನೆರೆಯಲ್ಲಿದ್ದ ಮಾಂಡಲಿಕರು. ಮೌರ್ಯರು ಕೊಂಕಣದಲ್ಲೂ ನಳರು ಬಳ್ಳಾರಿ-ಕರ್ನೂಲು ಪ್ರದೇಶದಲ್ಲೂ ಅಧಿಕಾರದಲ್ಲಿದ್ದರು. ಗಂಗರ ದುರ್ವಿನೀತ ಈತನ ಸಮಕಾಲೀನ. ದ್ರಮಿಳ, ಚೋಳ, ಪಾಂಡ್ಯ, ಕೇರಳ, ಮೂಷಕ ಮತ್ತು ಆಳುಪರನ್ನೂ ಉತ್ತರದಲ್ಲಿ ಅಂಗ, ವಂಗ, ಕಲಿಂಗ, ಮಗಧ, ಮದ್ರಕ ದೇಶಗಳ ಅರಸರನ್ನೂ ಕೀರ್ತಿವರ್ಮ ಗೆದ್ದನೆಂದು ಮಹಾಕೂಟದ ಶಾಸನದಲ್ಲಿ ಹೇಳಿದೆ. ಇವನು ಉತ್ತರ ದಿಗ್ವಿಜಯ ಮಾಡಿದ ವಿಚಾರ ಬೇರಾವ ಶಾಸನದಲ್ಲೂ ಉಕ್ತವಾಗಿಲ್ಲ. ಹೊಸದಾಗಿ ಸ್ಥಾಪಿಸಲಾದ ತನ್ನ ರಾಜ್ಯದ ಬಲಸಂವರ್ಧನೆಯಾಗುವುದಕ್ಕೆ ಮೊದಲೇ ಕೀರ್ತಿವರ್ಮ ದೂರದ ಮಗಧ, ಅಂಗ, ವಂಗ ದೇಶಗಳವರೆಗೂ ದಂಡೆತ್ತಿಹೋದನೆಂದು ಊಹಿಸುವುದು ಸಮಂಜಸವಾಗಿ ತೋರುವುದಿಲ್ಲ. ದಕ್ಷಿಣದ ಅರಸರನ್ನು ಕುರಿತ ವಿವರಗಳೂ ಲಭಿಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದ ಆಳುಪರು ಮೊದಲು ಚಾಳುಕ್ಯರನ್ನು ವಿರೋಧಿಸಿ ಅನಂತರ ಮೈತ್ರೀಭಾವ ಹೊಂದಿದರೆಂದು ಹೇಳಬಹುದು.

ಕದಂಬರ ಮಾಂಡಲಿಕರಾಗಿದ್ದ ಸೇಂದ್ರಕರು ಚಾಳುಕ್ಯರ ಸಾರ್ವಭೌಮತ್ವವನ್ನು ಒಪ್ಪಿಕೊಂಡರು. ಆ ಮನೆತನದ ಶ್ರೀವಲ್ಲಭಸೇನಾನಂದ ರಾಜ ತನ್ನ ಸೋದರಿಯನ್ನು ಕೀರ್ತಿವರ್ಮನಿಗೆ ಲಗ್ನಮಾಡಿಕೊಟ್ಟ. ಈಕೆಯ ಮಗನೇ ಇಮ್ಮಡಿ ಪುಲಕೇಶಿ. ವಿಷ್ಣುವರ್ಧನ, ಧಾರಾಶ್ರಯ ಜಯಸಿಂಹ, ಬುದ್ಧವರಸ ಎಂಬುವರು ಇನ್ನು ಮೂವರು. ಈತ ಬಹುಸುವರ್ಣ, ಅಗ್ನಿಷ್ಟೋಮ ಮುಂತಾದ ಯಾಗಗಳನ್ನು ಮಾಡಿ, ಪುಣ್ಯಯಶೋಭಿವೃದ್ಧಿಯನ್ನು ಪಡೆದಿದ್ದ. ಇವನ ಆದೇಶದ ಪ್ರಕಾರ ಇವನ ತಮ್ಮನಾದ ಮಂಗಲೇಶ ವಾತಾಪಿಯ ಗುಹೆಯೊಂದರಲ್ಲಿ ಮಹಾ ವಿಷ್ಣುಗೃಹವನ್ನು ನಿರ್ಮಿಸಿ, ಅಲ್ಲಿಯ ಪೂಜೆಗಾಗಿ ಲಾಂಜಿಗೇಶ್ವರವೆಂಬ ಗ್ರಾಮವನ್ನು ದತ್ತಿಯಾಗಿ ಬಿಟ್ಟ.

ಮಂಗಲೇಶ : ಕೀರ್ತಿವರ್ಮ ತೀರಿಕೊಂಡಾಗ ಅವನ ಮಗ ಯುವರಾಜ ಇಮ್ಮಡಿ ಪುಲಕೇಶಿ ಇನ್ನೂ ಪ್ರಾಪ್ತವಯಸ್ಕನಾಗಿರಲಿಲ್ಲವಾದ್ದರಿಂದ ರಾಜ್ಯಸೂತ್ರಗಳನ್ನು ಮಂಗಲೇಶ ವಹಿಸಿದ. ಮುಂದೆ ಪುಲಕೇಶಿ ಪ್ರಾಯಕ್ಕೆ ಬಂದಾಗ ಮಂಗಲೇಶ ರಾಜ್ಯವನ್ನು ಅವನಿಗೆ ಒಪ್ಪಿಸಿದನೆಂದು 11ನೆಯ ಶತಮಾನದ ಶಾಸನವೊಂದು ಹೇಳುತ್ತದೆ. ಆದರೆ ಮಂಗಲೇಶ ಪುಲಕೇಶಿಯ ವಿಚಾರದಲ್ಲಿ ಅಸೂಯೆಯುಳ್ಳವನಾಗಿದ್ದನೆಂದೂ ಅವನನ್ನು ವಂಚಿಸಿ ತನ್ನ ಮಗನಿಗೆ ಅರಸೊತ್ತಿಗೆ ವಹಿಸಿಕೊಡಲು ಹವಣಿಸುತ್ತಿದ್ದನೆಂದೂ ಮಗಲೇಶನನ್ನು ಸೋಲಿಸಿ ಪುಲಕೇಶಿ ರಾಜ್ಯ ಪಡೆದನೆಂದೂ ಐಹೊಳೆ ಶಾಸನದಲ್ಲಿ ಹೇಳಿದೆ. ಆಗ ನಡೆದ ಯುದ್ಧದಲ್ಲಿ ಮಂಗಲೇಶ ಮಡಿದ.

ಉರುರಣಪರಾಕ್ರಮ ಎಂಬುದು ಮಂಗಲೇಶನ ಬಿರುದು. ಈತ ಪರಾಕ್ರಮಶಾಲಿಯಾದ ಅರಸನಾಗಿದ್ದ. ಆಳ್ವಿಕೆಯ ಐದನೆಯ ವರ್ಷದಲ್ಲಿ ಉತ್ತರ ದಿಗ್ವಿಜಯ ಮಾಡಿ ಭಾಗೀರಥೀತೀರದಲ್ಲಿ ಜಯಸ್ತಂಭವೊಂದನ್ನು ನೆಡಬೇಕೆಂದಿದ್ದ. ಆದರೆ ಅನಂತರ ಆ ಯೋಚನೆಯನ್ನು ಬಿಟ್ಟು ಸ್ವರಾಜ್ಯದಲ್ಲೇ, ಮಹಾಕೂಟದ ಮಕುಟೇಶ್ವರ ದೇವಾಲಯದ ಮುಂದೆ ಧರ್ಮಸ್ತಂಭವನ್ನು ನಿಲ್ಲಿಸಿದ. ಉತ್ತರ ದಂಡಯಾತ್ರೆಯಲ್ಲಿ ಈತ ಸೋಲಿಸಿದ ಅರಸರಲ್ಲಿ ಕಲತ್ಸೂರಿ-ಕಲಚೂರಿ-ವಂಶದ ಶಂಕರಗಣ ಹಾಗೂ ಬುದ್ಧವರ್ಮರು ಪ್ರಮುಖರು. ಶಂಕರಗಣ ಯುದ್ಧದಲ್ಲಿ ಮಡಿದ. ಅವನ ಮಗನಾದ ಬುದ್ಧವರ್ಮ ಸೋತ. ಇದು ಸು. 601ರಲ್ಲಿ ನಡೆಯಿತೆನ್ನಲಾಗಿದೆ. ಈ ಕಲಚುರಿಯ ವಿರುದ್ಧ ಯುದ್ಧ 1ನೆಯ ಪುಲಿಕೇಶಿ ಬದುಕಿದ್ದಾಗ ನಡೆಯಿತೆಂಬುದು ಒಂದು ಊಹೆ. ಪುಲಕೇಶಿ II : ತಂದೆ ಹಾಗೂ ಚಿಕ್ಕಪ್ಪನಂತೆ ಪುಲಕೇಶಿಯೂ ಅಪ್ರತಿಮ ವೀರನಾಗಿದ್ದ. ನ್ಯಾಯವಾಗಿ ತನಗೆ ಸೇರಬೇಕಾದ ರಾಜ್ಯವನ್ನು ಶೌರ್ಯದ ಮೂಲಕವೇ ಪಡೆದ ಇವನು ಅದನ್ನು ಕಾಪಾಡಿಕೊಳ್ಳುವ ಹಾಗೂ ಚಾಳುಕ್ಯ ರಾಜ್ಯವನ್ನು ಭದ್ರವಾದ ಬುನಾದಿಯ ಮೇಲೆ ನಿಲ್ಲಿಸುವ ಕಾರ್ಯ ಕೈಗೊಂಡ. ಅರಮನೆಯಲ್ಲಿ ಆಂತರಿಕ ಕಲಹ ಉಂಟಾಗಿ ಶಾಂತಿ ಕದಡಿದ ಸಂದರ್ಭವನ್ನು ಉಪಯೋಗಿಸಿಕೊಂಡು ರಾಜ್ಯದ ವೈರಿಗಳು ಆಕ್ರಮಣಶೀಲರಾದರು. ಮಹಾಕೂಟದ ಮಂಗಲೇಶನ ಶಾಸನದಲ್ಲಿ ಗಂಗ, ಮೂಷಕ, ಪಾಂಡ್ಯ, ದ್ಮಿಳ, ಚೋಳ, ಅಳುಕ, ವೈಜಯಂತ ಮುಂತಾದ ರಾಜರನ್ನು ಅವನು ಸೋಲಿಸಿದನೆಂದು ಹೇಳಿದೆ. ಇವರೆಲ್ಲ ಸೇಡು ತೀರಿಸಿಕೊಳ್ಳಲು ಕಾದಿದ್ದರು. ಪುಲಕೇಶಿ ಇವರೊಡನೆ ಸ್ನೇಹ ಬೆಳೆಸಿ ತನ್ಮೂಲಕ ಮಂಗಲೇಶನನ್ನು ಸೋಲಿಸಲು ಸಮರ್ಥನಾದನೆಂದೂ, ಆದರೆ ತಾನು ರಾಜನಾದ ಬಳಿಕ ಇವರನ್ನು ಮಣಿಸುವ ಉದ್ದೇಶದಿಂದ ಇವರ ವಿರುದ್ಧವೇ ದಂಡಯಾತ್ರೆ ಮಾಡಿದನೆಂದೂ ಕೆಲವರ ಊಹೆ. ಈ ಅರಸನ 634ರ ಐಹೊಳೆಯ ಶಾಸನದಲ್ಲಿ ಇವನ ದಿಗ್ವಿಜಯ ಯಾತ್ರೆಯ ವಿವರಗಳಿವೆ. ಹೊರಗಿನ ಶತ್ರುಗಳೇ ಅಲ್ಲದೆ ರಾಜ್ಯದೊಳಗೇ ಕೆಲವರು ಸಾಮಂತರು ಆಗಿನ ಅರಾಜಕತೆಯ ದುರುಪಯೋಗ ಪಡೆದು ಪುಲಕೇಶಿಯ ವಿರುದ್ಧ ದಂಗೆ ಎದ್ದರು. ಇವರಲ್ಲಿ ಅಪ್ಪಾಯಿಕ ಮತ್ತು ಗೋವಿಂದ ಎಂಬವರಿದ್ದರು. ಇವರು ತಮ್ಮ ಗಜ ಸೈನ್ಯದೊಂದಿಗೆ ಭೀಮಾ ನದಿಯ ಉತ್ತರದಲ್ಲಿ ನುಗ್ಗಿದರು. ಆದರೆ ಇವರನ್ನು ಎದುರಿಸಲು ಬಂದ ಪುಲಕೇಶಿಯ ಸೈನ್ಯಬಲವನ್ನು ನೋಡಿಯೇ ಅಪ್ಪಾಯಿಕ ಹೆದರಿ ಓಡಿಹೋದ. ಇನ್ನೊಬ್ಬ ಸೋತು ಶರಣಾಗತನಾದ. ಇತರ ರಾಜರೂ ಮಾಂಡಲಿಕರೂ ಇದೇ ರೀತಿಯಲ್ಲಿ ದಂಗೆ ಏಳಲು ಅವಕಾಶ ಕೊಡಬಾರದೆಂದು ಯೋಚಿಸಿ ಪುಲಕೇಶಿಯೇ ದಂಡಯಾತ್ರೆ ಕೈಗೊಂಡ.

ಮಂಗಲೇಶನ ಕಾಲದಲ್ಲಿ ಪುಲಕೇಶಿ ಕದಂಬರ ವಿರುದ್ಧ ಕಾದು ಅವರನ್ನು ಸದೆಬಡಿದ. ಬನವಾಸಿ ಮತ್ತು ಇತರ ದುರ್ಗಗಳನ್ನು ವಶಪಡಿಸಿಕೊಂಡ. ಅನಂತರ ಬನವಾಸಿಗೆ ಹೊಂದಿಕೊಂಡಿದ್ದ ತುಳುನಾಡಿನ ಆಳುಪರನ್ನು ಸೋಲಿಸಿದ. ಗಂಗರೂ ಪುಲಕೇಶಿಗೆ ಶರಣಾಗಿ ತಮ್ಮ ಕೋಶವನ್ನು ಇವನಿಗೆ ಅರ್ಪಿಸಿದರು.

ಕೊಂಕಣದಲ್ಲಿ ಆಲುತ್ತಿದ್ ಮೌರ್ಯಕುಲದ ಸಾಮಂತರು ಇವನನ್ನು ಎದುರಿಸಲಾರದೆ ಹೋದರು. ಅಲ್ಲಿಂದ ಮುಂದೆ ಪಶ್ಚಿಮ ಸಮುದ್ರದಲ್ಲಿಯ ಪುರೀ ಬಂದರನ್ನು ಪುಲಕೇಶಿ ಆಕ್ರಮಿಸಿದ. ಇದು ಮುಂಬಯಿಯ ಸಮೀಪದಲ್ಲಿರುವ ಎಲಿಫೆಂಟ ಎಂಬ ದ್ವೀಪ. ಪುಲಕೇಶಿಯ ಈ ವಿಜಯಗಳನ್ನು ಕಂಡ ಲಾಟ ಮತ್ತು ಮಾಳವ ದೇಶದ ಅರಸರು ಅವನ ಸಾಮಂತರಾಗಿರಲು ಒಪ್ಪಿಕೊಂಡರು. ಗುಜರಾತು ಚಾಳುಕ್ಯ ರಾಜ್ಯದ ಒಂದು ಪ್ರಾಂತ್ಯವಾಗಿ ಮಾರ್ಪಟ್ಟಿತು.

ಆಗ ಕನೌಜಿನ ದೊರೆ ಶ್ರೀಹರ್ಷ ಉತ್ತರ ಭಾರತವನ್ನೆಲ್ಲ ವಶಪಡಿಸಿಕೊಂಡು ಸಕಲೋತ್ತರಾಪಥೇಶ್ವರನೆನಿಸಿಕೊಂಡಿದ್ದ. ಅಖಂಡ ಭಾರತದ ಸಾರ್ವಭೌಮನಾಗುವ ಕನಸನ್ನು ಕಾಣುತ್ತಿದ್ದ. ಅವನು ಒಂದು ದೊಡ್ಡ ಸೇನೆಯನ್ನು ಕೂಡಿಸಿಕೊಂಡು ದಕ್ಷಿಣದ ದಂಡಯಾತ್ರೆ ಕೈಗೊಂಡ. ಉತ್ತರ ದಿಗ್ವಿಜಯಕ್ಕಾಗಿ ಮುಂದೆ ಸಾಗಿದ್ದ ಪುಲಕೇಶಿಯೂ ಶ್ರೀಹರ್ಷನೂ ನರ್ಮದಾ ನದಿಯ ತೀರದಲ್ಲಿ ಪರಸ್ಪರವಾಗಿ ಎದುರಿಸಿ ಕಾದಿದದ್ದರು. ಕರ್ನಾಟಕಸಿಂಹದ ಮುಂದೆ ಉತ್ತರಾಪಥದ ಮದಿಸಿದ ಆನೆಯ ಆಟ ಸಾಗಲಿಲ್ಲ. ಅವನು ರಣರಂಗದಿಂದ ಓಡಿಹೋಗಬೇಕಾಯಿತು. ಆತ ಅನುಭವಿಸಿದ ಮುಖಭಂಗವನ್ನು ಐಹೊಳೆಯ ಶಾಸನ ವಿವರಿಸುತ್ತದೆ. ಭಾರತದ ಎರಡು ಭಾಗಗಳ-ಉತ್ತರಾಪಥ ಹಾಗೂ ದಕ್ಷಿಣಾಪಥಗಳ-ನಡುವೆ ಹಿರಿಮೆಗಾಗಿ ನಡೆದ ಹೋರಾಟವಿದು. ಕರ್ನಾಟಕದ ಇತಿಹಾಸದಲ್ಲಿ ಇದೊಂದು ಪ್ರಮುಖವಾದ ಘಟನೆ.

ಇದರ ಪರಿಣಾಮವಾಗಿ ಪುಲಕೇಶಿ 99,000 ಗ್ರಾಮಗಳನ್ನೊಳಗೊಂಡ ಮೂರು ಮಹಾರಾಷ್ಟ್ರಕಗಳಿಗೆ ಅಧಿಪತಿಯಾದ. ಪುಲಕೇಶಿ ಹರ್ಷನನ್ನು ಸೋಲಿಸಿದ ಮೇಲೆ ಮಹಾರಾಷ್ಟ್ರಕತ್ರಯವನ್ನು ಗೆದ್ದನೆಂದೂ ಅದಕ್ಕಾಗಿಯೇ ವಿಂಧ್ಯಪರ್ವತದ ನರ್ಮದಾ ತೀರದಲ್ಲಿ ತಂಗಿದ್ದನೆಂದೂ ಕೆಲವು ವಿದ್ವಾಂಸರ ಅಭಿಪ್ರಾಯ. ಮಹಾರಾಷ್ಟ್ರಕತ್ರಯ ಯಾವುದು ಎಂಬ ವಿಚಾರವಾಗಿ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಆಡಳಿತದ ಸೌಕರ್ಯಕ್ಕಾಗಿ ದೇಶವನ್ನು ವಿಭಾಗಗಳಾಗಿ ಮಾಡಲಾಗಿತ್ತೆನ್ನಬಹುದು. ಈ ವಿಭಾಗಗಳು ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೊಂಕಣಗಳಾಗಿರಬಹುದು.

ಹರ್ಷನನ್ನು ಸೋಲಿಸಿದ ಅನಂತರ ಪುಲಕೇಶಿ ಪೂರ್ವದಿಕ್ಕಿಗೆ ತಿರುಗಿದ. ಕೋಸಲ ಮತ್ತು ಕಳಿಂಗ ದೇಶಗಳ ಅರಸರಾದ ಪಾಂಡಲುವಂಶಿ ಮತ್ತು ಪೂರ್ವಗಂಗರು ಸೋತರು. ಇವರನ್ನು ಹಿಮ್ಮೆಟ್ಟಿಸಿದ ಬಳಿಕ ಪುಲಕೇಶಿ ಷಿಷ್ಠಪುರದ (ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ಪೀಠಾಪುರಂ) ಕೋಟೆಯನ್ನು ವಶಪಡಿಸಿಕೊಂಡ. ಕುಸಾಲ ಪ್ರದೇಶ (ಏಲೂರಿನ ಬಳಿ ಇರುವ ಕೊಲ್ಲೇರು) ಆಗ ವೆಂಗಿದೇಶದ ಭಾಗವಾಗಿತ್ತು. ಇದೂ ಪುಲಕೇಶಿಯ ಕೈವಶವಾಯಿತು. ದಿಗ್ವಿಜಯದ ಮುಕ್ಕಾಲು ಭಾಗವನ್ನು ಮುಗಿಸಿ ದಕ್ಷಿಣಕ್ಕೆ ಬಂದಿದ್ದ ಪುಲಕೇಶಿಗೆ ಕಾಂಚೀಪುರದಲ್ಲಿ ಆಳುತ್ತಿದ್ದ ಪಲ್ಲವರ ಅರಸನಾದ ಮಹೇಂದ್ರವರ್ಮ ಪ್ರಬಲ ವಿರೋಧಿಯಾದ, ಆದರೆ ಪುಲಕೇಶಿಯ ಉನ್ಮತ್ತ ಸೈನ್ಯದ ಮುಂದೆ ಪಲ್ಲವರೂ ಸೋತರು.

ದಕ್ಷಿಣ ಭಾರತದ ಇತಿಹಾಸದಲ್ಲಿ ಪುಲಕೇಶಿ ಹಾಗೂ ಮಹೇಂದ್ರವರ್ಮರ ನಡುವೆ ನಡೆದ ಈ ಯುದ್ಧ ಒಂದು ಮಹತ್ತ್ವದ ಘಟನೆಯಾಯಿತು. ಮುಂದಿನ ಕೆಲವು ಶತಮಾನಗಳ ಕಾಲ ಇದು ಕರ್ನಾಟಕದ ಹಾಗೂ ತಮಿಳುನಾಡಿನ ಇತಿಹಾಸಗಳ ಮೇಲೆ ಪ್ರಭಾವ ಬೀರಿತು. ಚಾಳುಕ್ಯ-ಪಲ್ಲವರ ನಡುವೆ ಆಗ ಆರಂಭವಾದ ವೈಷಮ್ಯ ಹೋರಾಟಗಳು ಚಾಳುಕ್ಯರ ಪಲ್ಲವರ ಆನಂತರ ಆಳಿದ ವಂಶಸ್ಥರ ನಡುವೆಯೂ ಮುಂದುವರಿದುವು.

ಪಲ್ಲವರನ್ನು ಸೋಲಿಸಿದ ಬಳಿಕ ಪುಲಕೇಶಿ ಕಾವೇರೀ ನದಿಯನ್ನು ದಾಟಿ, ಚೋಳ, ಕೇರಳ, ಪಾಂಡ್ಯರ ವರ್ಚಸ್ಸನ್ನು ತೆಗೆದುಹಾಕಿದ. ಪುಲಕೇಶಿ ದಿಗ್ವಿಜಯ ಯಾತ್ರೆ ಮುಗಿಸಿ ರಾಜಧಾನಿಯಾದ ವಾತಾಪಿಗೆ ಹಿಂದುರಿಗಿದ. ಇವನ ಕಾಲದಲ್ಲಿ ಕರ್ನಾಟಕ ಸಾಮ್ರಾಜ್ಯ ಗುಜರಾತಿನ ಪೀಠಾಪುರದವರೆಗೂ ನರ್ಮದಾ ನದಿಯಿಂದ ಪೆನ್ನಾರ್‍ವರೆಗೂ ಹಬ್ಬಿತ್ತು.

ಅನಂತರ ಅವನು ಆಡಳಿತವನ್ನು ಸ್ಥಿರಗೊಳಿಸುವ ಕಾರ್ಯವನ್ನು ಕೈಗೊಂಡ. ನಾಸಿಕ ಮತ್ತು ಸುತ್ತಲಿನ ಪ್ರದೇಶಗಳನ್ನು ತನ್ನ ಸೋದರನಾದ ಧರಾಶ್ರಯ ಜಯಸಿಂಹನಿಗೆ ಒಪ್ಪಿಸಿ ಅವನನ್ನು ಪ್ರಾಂತ್ಯಾಧಿಕಾರಿಯಾಗಿ ನೇಮಿಸಿದೆ. ಇನ್ನೊಬ್ಬ ತಮ್ಮನಾದ ಕುಬ್ಜ ವಿಷ್ಣುವರ್ಧನ ವೆಂಗಿಮಂಡಲದ ಅಧಿಪತಿಯಾಗಿ ನೇಮಕಗೊಂಡ. 616-17ರಲ್ಲಿ ಈತ ಯುವರಾಜನಾಗಿ ಸಾತಾರೆಯ ಪ್ರಾಂತ್ಯದಲ್ಲಿ ಆಳುತ್ತಿದ್ದ. ಈತನ ನೇಮಕ ಪೂರ್ವತೀರದಲ್ಲಿ ನೂತನ ರಾಜ್ಯವೊಂದರ ಉದಯಕ್ಕೆ ನಾಂದಿಯಾಯಿತು. ಸ್ವಲ್ಪಕಾಲದ ಅನಂತರ ಕುಬ್ಜ ವಿಷ್ಣುವರ್ಧನನೂ ಆನಂತರ ಅವನ ಸಂತತಿಯವರೂ ವೆಂಗಿಯಲ್ಲಿ ಸ್ವತಂತ್ರರಾಗಿ ಆಳತೊಡಗಿದರು. ಇವರು ಇತಿಹಾಸದಲ್ಲಿ ವೆಂಗಿಯ (ಪೂರ್ವ) ಚಾಳುಕ್ಯರೆಂದು ಪ್ರಸಿದ್ಧರಾಗಿದ್ದಾರೆ. ಇವರ ರಾಜ್ಯ ಪೂರ್ವಸಮುದ್ರ ತೀರದಲ್ಲಿ ಗೋದಾವರಿ ಜಿಲ್ಲೆಯಿಂದ ನೆಲ್ಲೂರಿನವರೆಗೂ ಹಬ್ಬಿತ್ತು. ಈ ರಾಜ್ಯದ ಆಕ್ರಮಣಕ್ಕಾಗಿ ದಕ್ಷಿಣ ಭಾರತದ ಹೆಸರಾದ ಕರ್ನಾಟಕ ಮತ್ತು ತಮಿಳುನಾಡು ಅರಸುಮನೆತನಗಳ ನಡುವೆ ಭೀಕರ ಕದನಗಳು ನಡೆದುವು. ಬಪ್ಪೂರ ಕುಲದ ಸತ್ಯಾಶ್ರಯ ಧ್ರುವರಾಜ ಇಂದ್ರವರ್ಮ ರೇವತಿ ದ್ವೀಪದಲ್ಲಿದ್ದ ನಾಲ್ಕು ವಿಷಯಗಳನ್ನೂ ಅನೇಕ ಮಂಡಳಿಗಳನ್ನೂ ಪುಲಕೇಶಿಯ ಅಧೀನದಲ್ಲಿ ಆಳುತ್ತಿದ್ದ.

ಪುಲಕೇಶಿಯ ರಾಜ್ಯಭಾರದ ಸಮಯದಲ್ಲಿ ಭಾರತದಲ್ಲಿ ಪ್ರವಾಸಮಾಡಿದ ಪ್ರಸಿದ್ಧನಾದ ಚೀನೀ ಯಾತ್ರಿಕ ಹ್ಯೂಯೆನ್‍ತ್ಸಾಂಗ್ ತನ್ನ ಬರವಣಿಗೆಗಳಲ್ಲಿ ಪುಲಿಕೇಶಿಯ ಸಾಮ್ರಾಜ್ಯ, ರಾಜಧಾನಿ, ಜನರ ಸ್ವಭಾವ ಮುಂತಾದ ವಿವರಗಳನ್ನು ಕೊಟ್ಟಿದ್ದಾನೆ. ಪುಲಕೇಶಿ ಹರ್ಷದೊಡನೆ ಯುದ್ಧಮಾಡಿದಾಗ ನಾಸಿಕದಲ್ಲಿದ್ದದ್ದರಿಂದ ಅದನ್ನೇ ಅವನ ರಾಜಧಾನಿಯೆಂದು ಹ್ಯೂಯೆನ್ ತ್ಸಾಂಗ್ ತಪ್ಪಾಗಿ ಭಾವಿಸಿದ್ದಾನೆ.

ಪುಲಕೇಶಿಯ ದಿಗ್ವಿಜಯ ಅವನ ಕೀರ್ತಿಯನ್ನು ದಶದಿಕ್ಕುಗಳಲ್ಲೂ ಮೊಳಗಿಸಿತು. ಭಾರತ ದೇಶವನ್ನೂ ದಾಟಿ ದೂರದ ಇರಾನ್ ದೇಶಕ್ಕೂ ಇವನ ಖ್ಯಾತಿ ಹಬ್ಬಿತು. ಆ ದೇಶದ ರಾಜನಾದ ಇಮ್ಮಡಿ ಖುಸ್ರು ಪುಲಕೇಶಿಯೊಡನೆ ಪತ್ರವ್ಯವಹಾರ ನಡೆಸಿದನೆಂದೂ ಪುಲಕೇಶಿ ಇರಾನಿಗೆ ತನ್ನ ರಾಯಭಾರಿಯೊಬ್ಬನನ್ನು ಕಳುಹಿಸಿದನೆಂದೂ ಟಬರಿ ಎಂಬ ಅರಬ್ಬ ಇತಿಹಾಸಕಾರ ಬರೆದಿದ್ದಾನೆ. ಕರ್ನಾಟಕ ಇರಾನ್ ದೇಶದೊಡನೆ ವ್ಯಾಪಾರ ಸಂಬಂಧ ಹೊಂದಿತ್ತೆಂಬುದು ಅವನ ಬರವಣಿಗೆಗಳಿಂದ ತಿಳಿದುಬರುತ್ತದೆ.

ಆದರೆ ಪುಲಕೇಶಿಯ ಕೀರ್ತಿ ಏರಿದಷ್ಟು ತೀವ್ರಗತಿಯಲ್ಲಿಯೇ ಇಳಿಮೊಗವಾಯಿತು. ಯುದ್ಧದಲ್ಲಿ ಸೋತು ರಾಜಧಾನಿಯಿಂದ ಓಡಿದ ಪಲ್ಲವ 1ನೆಯ ಮಹೇಂದ್ರವರ್ಮ ಪುಲಕೇಶಿಯಷ್ಟೇ ಪ್ರಬಲನಾಗಿದ್ದ ಅರಸ. ಅವನ ಪಲ್ಲವ ರಾಜ್ಯವನ್ನು ಸ್ಥಿರವಾದ ಅಡಿಪಾಯದ ಮೇಲೆ ನಿಲ್ಲಿಸಿದನಷ್ಟೇ ಅಲ್ಲದೆ ತಮಿಳರ ಸಂಸ್ಕøತಿ, ಸಾಹಿತ್ಯ, ಕಲೆಗಳಿಗೆ ಆಶ್ರಯದಾತನಾಗಿದ್ದ. ಪುಲಕೇಶಿಯಿಂದ ಸೋತ ಅವಮಾನದ ನೋವಿನಲ್ಲೇ ಅವನು ಸತ್ತ. ಅವನ ಆನಂತರ ಪಟ್ಟಕ್ಕೆ ಬಂದ ಅವನ ಮಗ 1ನೆಯ ನರಸಿಂಹವರ್ಮ ಸಮಯ ಸಾಧಿಸಿ ಚಾಳುಕ್ಯರ ಬಲ ಎದುರಿಸಲಾರದೆ ಹೋಯಿತು. ಪುಲಕೇಶಿ ಕೊನೆಗೂ ಸೋಲನ್ನು ಒಪ್ಪಿಕೊಳ್ಳಲಾಯಿತು. ಚಾಳುಕ್ಯರ ರಾಜಧಾನಿಯಾದ ವಾತಾಪಿಯನ್ನು (ಬಾದಾಮಿ) ನರಸಿಂಹವರ್ಮ ಸೂರೆಮಾಡಿ ವಾತಾಪಿಕೊಂಡ ಎಂಬ ಬಿರುದು ಧರಿಸಿದ. ಬಹುಶಃ ಈ ಹೋರಾಟದಲ್ಲಿ ಪುಲಕೇಶಿ ಸಾವನ್ನಪ್ಪಿರಬೇಕು. ಪುಲಕೇಶಿಗೆ ಹಲವಾರು ಪತ್ನಿಯರಿದ್ದರೆಂದೂ ಕದಂಬಾ ಎಂಬುವಳು ಆಗ್ರಮಹಿಷಿಯೆಂದೂ ಅಭಿಪ್ರಾಯಪಡಲಾಗಿದೆ.

ಅವನತಿ, ಉತ್ಕರ್ಷ : ಆದಿತ್ಯವರ್ಮ, ಚಂದ್ರಾದಿತ್ಯ, ವಿಕ್ರಮಾದಿತ್ಯ, ರಣರಾಗವರ್ಮ ಮತ್ತು ಧಾರಾಶ್ರಯ ಜಯಸಿಂಹವರ್ಮ ಇವರು ಪುಲಕೇಶಿಯ ಮಕ್ಕಳು. ಅಂಬೇರಾ ಎಂಬ ಒಬ್ಬ ಹೆಣ್ಣುಮಗಳೂ ಇದ್ದಳೆಂದು ಹೇಳಲಾಗಿದೆ. ಆದಿತ್ಯವರ್ಮ ಹಿರಿಯ. ಆವನ ಮಗ ಅಭಿನವಾದಿತ್ಯ. ಚಂದ್ರಾದಿತ್ಯ ಸಾವಂತವಾಡಿ ಪ್ರದೇಶವನ್ನು ಆಳುತ್ತಿದ್ದ. ಈತನ ಪತ್ನಿ ಖ್ಯಾತಿವೆತ್ತ ಸಂಸ್ಕøತ ಕವಿಯತ್ರಿ ವಿಜಯಭಟ್ಟಾರಿಕಾ. ಧಾರಾಶ್ರಯ ಜಯಸಿಂಹವರ್ಮ ಲಾಟಮಂಡಲವನ್ನು (ಗುಜರಾತ್) ಆಳುತ್ತಿದ್ದ. ರಣರಾಗವರ್ಮನನ್ನು ಕುರಿತ ಯಾವ ವಿವರಗಳೂ ತಿಳಿದಿಲ್ಲ.

643-655 ಚಾಳುಕ್ಯ ರಾಜ್ಯ ದುರ್ದಿನಗಳು. ಪಲ್ಲವ ನರಸಿಂಹವರ್ಮ ಬಹುಶಃ ಈ ಹನ್ನೆರಡು ವರ್ಷಗಳ ಕಾಲ ಅದನ್ನು ತನ್ನ ಅಧೀನದಲ್ಲಿಟ್ಟುಕೊಂಡಿದ್ದ. ಪುಲಕೇಶಿಯ ಮಕ್ಕಳು ರಾಜಧಾನಿಯಿಂದ ಹೊರಗಿದ್ದು ತಮ್ಮ ರಾಜ್ಯವನ್ನು ಹಿಂದಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದರು. ಆದರೂ ಈ ವರ್ಷಗಳಲ್ಲಿ ನಡೆದ ಘಟನೆಗಳು ಯಾವುವೂ ತಿಳಿಯವು. ಪುಲಕೇಶಿಯ ಆನಂತರ ಆದಿತ್ಯವರ್ಮ ಅವನ ಉತ್ತರಾಧಿಕಾರಿಯಾದ. ಅವನಿಗೆ ಮಹಾರಾಜಾಧಿರಾಜ ಮುಂತಾದ ಬಿರುದುಗಳಿದ್ದುವೆಂದು ಅವನ ಶಾಸನಗಳಿಂದ ತಿಳಿದುಬರುತ್ತದೆ. ಆದರೆ ಪಲ್ಲವರನ್ನು ಹೊಡೆದಟ್ಟಿ ಚಾಳುಕ್ಯರಾಜ್ಯವನ್ನು ಪುನಃ ಸ್ಥಾಪಿಸಿದ ಕೀರ್ತಿ ಪುಲಕೇಶೀಯ ಇನ್ನೊಬ್ಬ ಮಗನಾದ ವಿಕ್ರಮಾದಿತ್ಯನದು.

ವಿಕ್ರಮಾದಿತ್ಯ I: ಇವನು 655ರಲ್ಲಿ ಪಟ್ಟಕ್ಕೆ ಬಂದ. ಅದಕ್ಕೂ ಮೊದಲು ಅವನಿಪತಿ ತ್ರಿಯಾಂತರಿತವಾಗಿದ್ದ ರಾಜ್ಯವನ್ನು ಇವನು ತಿರುಗಿ ಸಂಪಾದಿಸಿದನೆಂದು ಶಾಸನಗಳು ತಿಳಿಸುತ್ತವೆ. ಚಾಳುಕ್ಯ ರಾಜ್ಯಕ್ಕೆ ಗ್ರಹಣ ಹಿಡಿಸಿದ್ದ ಆ ಮೂವರು ರಾಜರು ಯಾರು ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ದೊರತಿಲ್ಲ. ಇತಿಹಾಸಕಾರರು ಭಿನ್ನಭಿನ್ನವಾದ ಊಹೆ ಮಾಡಿದ್ದಾರೆ. ವಿಕ್ರಮಾದಿತ್ಯನ ಸೋದರರೇ ಆಗಿದ್ದ ಆದಿತ್ಯವರ್ಮ, ಚಂದ್ರಾದಿತ್ಯರು ಪಲ್ಲವ ನರಸಿಂಹವರ್ಮನೊಡಗೂಡಿದ್ದರೆಂಬುದೂ ಇವರೇ ಆ ಮೂವರು ಅವನಿಪತಿಗಳೆಂಬುದೂ ಒಂದು ಊಹೆ. ಆದರೆ ವಿಕ್ರಮಾದಿತ್ಯನಿಗೂ ಅವನ ಸೋದರಿಗೂ ನಡುವೆ ವೈಷಮ್ಯಕ್ಕೆ ಕಾರಣವೇ ಇರಲಿಲ್ಲ. ಪುಲಕೇಶಿ ತನ್ನ ದಿಗ್ವಜಯದ ಅಂತ್ಯದಲ್ಲಿ ದಕ್ಷಿಣದಲ್ಲಿ ಸೋಲಿಸಿದ್ದ ಚೋಳ, ಕೇರಳ, ಪಾಂಡ್ಯರು ಅನಂತರ ಪಲ್ಲವರೊಡಗೂಡಿ ಪುಲಕೇಶಿಯನ್ನು ಸೋಲಿಸಲು ಪ್ರಯತ್ನಿಸಿದಂತೆ ತೋರುತ್ತದೆ. ಇವರೇ ಆ ಮೂವರು ಅರಸರು ಎಂದೂ ಊಹಿಸಬಹುದು.

ಪಲ್ಲವರ ವಶವಾಗಿದ್ದ ಚಾಳುಕ್ಯ ರಾಜ್ಯವನ್ನು ಪಡೆಯಲು ವಿಕ್ರಮಾದಿತ್ಯ ಹತ್ತು ವರ್ಷಗಳ ಕಾಲ ಕಾರ್ಯನಿರತನಾಗಿದ್ದ ; ತನ್ನ ಮಗನನ್ನೂ ಮೊಮ್ಮಗನನ್ನೂ ಯುದ್ಧಕಲೆಯಲ್ಲಿ ಪರಿಣತರನ್ನಾಗಿ ಮಾಡಿದ್ದ. ಅವರನ್ನು ತನ್ನೊಡನೆ ಯುದ್ಧರಂಗಕ್ಕೆ ಒಯ್ದ. ಪಲ್ಲವ ನರಸಿಂಹವರ್ಮ, ಅವನ ಮಗ ಎರಡನೆಯ ಮಹೇಂದ್ರವರ್ಮ ಮತ್ತು ಅವನ ಪರಮೇಶ್ವರವರ್ಮ ಇವರು ಮೂವರೊಡನೆಯೂ ವಿಕ್ರಮಾದಿತ್ಯ ಯುದ್ಧ ಮಾಡಿದ. ಕಾಂಚೀಪುರದ ಪಶ್ಚಿಮಕ್ಕಿರುವ ಮಲ್ಲಿಯೂರಿನವರೆಗೂ ತನ್ನ ಸೇನೆಯನ್ನು (670) ಒಯ್ದ. 670-674 ರ ನಡುವೆ ಇವನು ಪಲ್ಲವರನ್ನು ಸೋಲಿಸಿರಬೇಕು. 655ರಲ್ಲೇ ಪಲ್ಲವರನ್ನು ಚಾಳುಕ್ಯರಾಜ್ಯದಿಂದ ಓಡಿಸಲಾಗಿತ್ತು. ವಿಕ್ರಮಾದಿತ್ಯ ಅನೇಕ ಯುದ್ಧಗಳಲ್ಲಿ ಶತ್ರುಗಳನ್ನು ಸೋಲಿಸಿ ತನ್ನ ತಂದೆಯ ರಾಜವೈಭವವನ್ನು ಪುನಃ ಸಂಪಾದಿಸಿ ಸಕಲ ಚಾಳುಕ್ಯ ಸಾಮ್ರಾಜ್ಯಕ್ಕೆ ಅಧಿಪತಿಯಾದನೆಂದು ಶಾಸನಗಳು ಬಣ್ಣಿಸಿವೆ.

ವಿಕ್ರಮಾದಿತ್ಯನಿಗೆ ಶ್ರೀವಲ್ಲಭ, ಅನಿವಾರಿತ, ರಣರಸಿಕ, ರಾಜಮಲ್ಲ ಮುಂತಾದ ಬಿರುದುಗಳಿದ್ದುವು. ಗಂಗಾಮಹಾದೇವಿ ಇವನ ಪತ್ನಿ. ಈತ 25 ವರ್ಷಗಳಿಗೂ ಹೆಚ್ಚುಕಾಲ ಸು. 681ರವರೆಗೆ ಆಳಿದ. ಸೇಂದ್ರಕರೂ ಗುಜರಾತಿನಲ್ಲಿ ಆಳುತ್ತಿದ್ದ ಚಾಳುಕ್ಯರೂ ಇವನ ಮಾಂಡಲಿಕರಾಗಿದ್ದರು. ಸೇಂದ್ರಕವಂಶದವನು ದೇವಶಕ್ತಿ, ಗುಜರಾತಿನಲ್ಲಿದ್ದವನು ವಿಕ್ರಮಾದಿತ್ಯನ ತಮ್ಮನಾದ ಧಾರಾಶ್ರಯ ಜಯಸಿಂಹವರ್ಮನ ಮಗ, ಶ್ರ್ಯಾಶ್ರಯ ಶೀಲಾದಿತ್ಯ ; ಸೇಂದ್ರಕವಂಶದ ಇನ್ನೊಬ್ಬ ಮಾಂಡಲೀಕ ಜಯಶಕ್ತಿ.

ವಿನಯಾದಿತ್ಯ. ವಿಕ್ರಮಾದಿತ್ಯನ ಮಗ ವಿನಯಾದಿತ್ಯ 681ರಲ್ಲಿ ಪಟ್ಟಕ್ಕೆ ಬಂದ. ಇವನು 15 ವರ್ಷಗಳ ಕಾಲ, 696ರ ವರೆಗೆ ಆಳಿದ. ಈತನ ಆಳ್ವಿಕೆಯ ಕಾಲದಲ್ಲಿ ಸಾಮ್ರಾಜ್ಯದಲ್ಲಿ ಶಾಂತಿ-ಸುಭಿಕ್ಷೆಗಳು ನೆಲಸಿದ್ದವು. ತಂದೆ ಇವನನ್ನು ಯುವರಾಜಪದವಿಗೇರಿಸಿದ್ದರಿಂದ ಇವನಿಗೆ ಅನಂತರ ಆಡಳಿತದ ಜವಾಬ್ಧಾರಿ ಹೊರುವುದು ಕಷ್ಟವಾಗಲಿಲ್ಲ. ಈತ ನುರಿತ ಯೋಧ. ಪಲ್ಲವರೊಡನೆ ನಡೆದ ಕದನದಲ್ಲಿ ತಂದೆಗೆ ಸಹಾಯಕನಾಗಿದ್ದ. ಜೊತೆಗೆ ತಂದೆ ರಾಜಧಾನಿಯಿಂದ ಹೊರಗಡೆ ಇದ್ದಾಗ ಆಡಳಿತದ ಹೊಣೆಯನ್ನು ಹೊರುವುದರ ಮೂಲಕವೂ ಅವನಿಗೆ ಸಹಾಯ ನೀಡಿದ್ದ.

ಇವನು ಉತ್ತರಾಪಥದ ಅರಸರ ಮೇಲೆ ಜಯವನ್ನು ಸಾಧಿಸಿ ಅವರಿಂದ ಗಂಗಾ, ಯಮುನಾ, ಪಾಳಿಧ್ವಜ ಮುಂತಾದ ಪಾರಮೈರ್ಶವರ್ಯ ಸೂಚಕ ಚಿಹ್ನೆಗಳನ್ನು ತೆಗೆದುಕೊಂಡನೆಂದು ಅನಂತರದ ಶಾಸನಗಳಲ್ಲಿ ಹೇಳಲಾಗಿದೆ.

ವಿನಯಾದಿತ್ಯ ದಕ್ಷಿಣದ ಕವೇರ, ಪಾರಸಿಕ ಮತ್ತು ಸಿಂಹಳದ ಅರಸರನ್ನು ಸೋಲಿಸಿದನೆಂದೂ ಹೇಳಿದೆ. ಪಲ್ಲವ ಮಹೇಂದ್ರವರ್ಮ ಕಾಂಬೋಡಿಯದ (ಕಂಬುಜ) ಅರಸನನ್ನು ತನ್ನ ಸಾಮಂತನನ್ನಾಗಿ ಮಾಡಿಕೊಂಡಿದ್ದ. ಪಲ್ಲವರನ್ನು ಸೋಲಿಸಿದ ವಿನಯಾದಿತ್ಯ ಕವೇರನನ್ನೂ (ಕಂಬುಜ) ತನ್ನ ಆಧೀನರನ್ನಾಗಿ ಮಾಡಿಕೊಂಡ. ವಿನಯಾದಿತ್ಯ ಚೀನಕ್ಕೆ ತನ್ನ ರಾಯಭಾರಿಗಳನ್ನು ಕಳುಹಿಸಿದನೆಂದೂ ಹೇಳಲಾಗಿದೆ.

ವಿನಯಾದಿತ್ಯನಿಗೆ ರಾಜಾಶ್ರಯ, ಯುದ್ಧಮಲ್ಲ ಎಂಬ ಬಿರುದುಗಳಿದ್ದುವು. ರನ್ನಕವಿ ತನ್ನ ಗದಾಯುದ್ಧದಲ್ಲಿ ಚಾಳುಕ್ಯ ವಂಶಾವಳಿಯನ್ನು ಕೊಡುವಾಗ ಇವನನ್ನು ದುರ್ಧರಮಲ್ಲನೆಂದು ವರ್ಣಿಸಿದ್ದಾನೆ. ಈತನ ಪತ್ನಿ ವಿನಯವತಿ, ಪತಿಯ ಮರಣಾನಂತರವೂ ಸ್ವಲ್ಪಕಾಲ ಜೀವಿಸಿದ್ದ ಈಕೆ 699 ರಲ್ಲಿ ಬಾದಾಮಿಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದಳು. ವಿನಯಾದಿತ್ಯನಿಗೆ ವಿಜಯಾದಿತ್ಯನೆಂಬ ಮಗನಲ್ಲದೆ ಕುಂಕುಮ ಮಹಾದೇವಿ ಎಂಬ ಮಗಳೂ ಇದ್ದಳು. ಈಕೆಯನ್ನು ಆಳುಪ ವಂಶದ ಚಿತ್ರವಾಹನಿಗೆ ಲಗ್ನಮಾಡಿ ಕೊಡಲಾಗಿತ್ತು. ಚಿತ್ರವಾಹನ ಆಳುಕ ಮಹಾರಾಜನ ಮಗನೆಂದು ತೋರುತ್ತದೆ. ಇವನು ಕದಂಬ ಮಂಡಲದ ಅಧಿಪತಿಯಾಗಿದ್ದ, ಕುಂಕುಮ ಮಹಾದೇವಿ ಪುರಿಗೆರೆ ನಗರದಲ್ಲಿ (ಲಕ್ಷ್ಮೇಶ್ವರ) ಒಂದು ಜಿನಬಸದಿ (ಆನೆಸಜ್ಜೆಯ ಬಸದಿ) ಕಟ್ಟಿಸಿದಳು.

696 ರಲ್ಲಿ ಇವನು ಪಟ್ಟಕ್ಕೆ ಬಂದ. ತಂದೆಯ ಮರಣದ ಕಾಲದಲ್ಲಿ ಇವನು ಉತ್ತರ ಭಾರತದಲ್ಲಿ ಸೆರೆಯಲ್ಲಿದ್ದು, ಅಲ್ಲಿಂದ ತಪ್ಪಿಸಿಕೊಂಡು ಬಂದು ರಾಜ್ಯಸೂತ್ರಗಳನ್ನು ವಹಿಸಿಕೊಂಡನೆಂದು ತಿಳಿದುಬರುತ್ತದೆ. ಅಜ್ಜನಾದ ವಿಕ್ರಮಾದಿತ್ಯನ ಕಾಲದಿಂದಲೇ ಇವನು ರಣಾಂಗಣದಲ್ಲಿ ಹೋರಾಡಿದ್ದ. ತಂದೆಗೂ ಬೆನ್ನೆಲುಬಾಗಿದ್ದ. ತಂದೆಯ ಉತ್ತರ ದೇಶದ ದಂಡಯಾತ್ರೆಯಲ್ಲಿ ಇವನು ಭಾಗವಹಿಸಿದ್ದು ಆತನಿಗಿಂತ ಮೊದಲೇ ಶತ್ರುಸೇನೆಯನ್ನು ಹೊಕ್ಕು ಅವರಿಂದ ಗಂಗಾಯಮುನಾ ಪಾಳಿಧ್ವಜ ಪಡಢಕ್ಕಾ ಮಹಾಶಬ್ದ ಚಿಹ್ನೆಗಳನ್ನೂ ಮಾಣಿಕ್ಯ ಮತಂಗಜಾದಿಗಳನ್ನೂ ಕಸಿದುಕೊಂಡ. ಪಟ್ಟಕ್ಕೆ ಬಂದ ಕೂಡಲೇ ರಾಜ್ಯದಲ್ಲಿ ಪುಂಡರ ಹಾವಳಿಯನ್ನು ತಗ್ಗಿಸಿದ. ಈತ ಸಾಹಸರಸಿಕ, ನಿರವದ್ಯ ಇತ್ಯಾದಿ ಬಿರುದಾಂಕಿತನಾಗಿದ್ದ. ಸುಮಾರು 37 ವರ್ಷಗಳ ಕಾಲ ರಾಜ್ಯವಾಳಿದ ಈತನ ಕಾಲದಲ್ಲಿ ರಾಜ್ಯದಲ್ಲಿ ಶಾಂತಿನೆಲೆಸಿತ್ತು. ಈತ ಕಲೆಗೆ ಪ್ರೋತ್ಸಾಹ ನೀಡಿದ. ಪಟ್ಟದಕಲ್ಲಿನಲ್ಲಿ ಸುಂದರವಾದ ವಿಜಯೇಶ್ವರ (ಈಗ ಸಂಗಮೇಶ್ವರ ಎಂದು ಕರೆಯುತ್ತಾರೆ) ದೇವಾಲಯ ಕಟ್ಟಿಸಿದ.

ಒಮ್ಮೆ ಮಾತ್ರ ಇವನು ಪಲ್ಲವರೊಡನೆ ಹೋರಾಡಬೇಕಾಯಿತು. ಆ ಸಂದರ್ಭದಲ್ಲಿ ಇವನಿಗೆ ಮಗನಾದ ಇಮ್ಮಡಿ ವಿಕ್ರಮಾದಿತ್ಯ ಸಹಾಯಕನಾಗಿದ್ದ. ಬಹುಶಃ ಆ ಯುವರಾಜನೇ ಸೇನೆಯ ನಾಯಕತ್ವವನ್ನೂ ವಹಿಸಿದ್ದ.

ವಿಜಯಾದಿತ್ಯನ ಪಟ್ಟದ ರಾಣಿಯ ಹೆಸರು ತಿಳಿಯದು. ಆದರೆ ಅವನ ಪ್ರಾಣ ವಲ್ಲಭೆ ಎನಿಸಿಕೊಂಡಿದ್ದ ಸೂಳೆ ವಿನಾಪೋಟಿ ಎಂಬವಳ ಹೆಸರು ಒಂದು ಶಾಸನದಲ್ಲಿ ಕಾಣಿಸಿಕೊಂಡಿದೆ. ಈಕೆ ಗುಣಸಂಪನ್ನೆ, ದೈವಭಕ್ತೆ, ಮಹಾಕೂಟದಲ್ಲಿ ಮಕುಟೇಶ್ವರನಾಥನಿಗೆ ರತ್ನಪೀಠವನ್ನೂ ಬೆಳ್ಳಿಯ ಪೀಠವನ್ನೂ ಮಾಡಿಸಿಕೊಟ್ಟಿದ್ದಲ್ಲದೆ ಪೂಜಾರಿಗಳಿಗೆಂದು ಭೂಮಿಯನ್ನು ದಾನಮಾಡಿದಳು.

ವಿಕ್ರಮಾದಿತ್ಯ II : ಇವನು 733ರಲ್ಲಿ ಪಟ್ಟಕ್ಕೆ ಬಂದು ಹನ್ನೆರಡು ವರ್ಷಗಳ ಕಾಲ ಮಾತ್ರ ರಾಜ್ಯವಾಳಿದ. ಈ ಅಲ್ಪಕಾಲದಲ್ಲೇ ಈತ ಕದನಗಳಲ್ಲಿ ಹೋರಾಡಿ ಖ್ಯಾತಿ ಗಳಿಸಿದ. ತಂದೆಯ ಕಾಲದಲ್ಲಿ ನೆಲೆಗೊಂಡಿದ್ದ ಶಾಂತಿ ಆಗ ಪುನಃ ಕಲಕಿತ್ತು. ಆ ವೇಳೆಗೆ ಉತ್ತರದಲ್ಲಿ ಅರಬರು (ತಾಜಿಕರು) ಸಿಂಧ್ ಪ್ರಾಂತ್ಯದ ಹಲವಾರು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದರು. ಗುಜರಾತಿನಲ್ಲಿ ಆಳುತ್ತಿದ್ದ ವಿಕ್ರಮಾದಿತ್ಯನ ಮಾಂಡಲಿಕನಾದ ಚಾಳುಕ್ಯವಂಶದ ಧರಾಶ್ರಯ ಜಯಸಿಂಹವರ್ಮನ ಮಗ ಅವನಿಜನಾಶ್ರಯ ಪುಲಕೇಶಿ ದಕ್ಷಿಣಾ ಪಥವನ್ನು ಆಕ್ರಮಿಸಬೇಕೆಂದಿದ್ದ ಅರಬರನ್ನು ಬಗ್ಗುಬಡಿದು ಹಿಂದಕ್ಕೆ ಅಟ್ಟಿದ, ಸೌರಾಷ್ಟ್ರ, ಗೂರ್ಜರ, ಮೌರ್ಯ, ಸೈಂಧವ, ಕಚ್ಛೆಲ್ಲ, ಚಾಪೋಟಕ ಮೊದಲಾದ ರಾಜರನ್ನೂ ಪುಲಕೇಶಿ ಸೋಲಿಸಿದ.

ವಿಕ್ರಮಾದಿತ್ಯ ಪಲ್ಲವರ ವಿರುದ್ಧ ಮೂರು ಸಲ ದಂಡೆತ್ತಿದ. ಮೊದಲನೆಯದು ಅವನಿನ್ನೂ ಯುವರಾಜನಾಗಿದ್ದಾಗಿನದು. ಈತ ಎರಡನೆಯ ಸಲ ಪುನಃ ಅವರ ವಿರುದ್ಧ ದಾಳಿ ಮಾಡಿದ. ಪ್ರಾಕೃತ ಮಿತ್ರರಾಗಿದ್ದ ಪಲ್ಲವರನ್ನು ನಿರ್ಮೂಲವಾಗಿ ನಾಶ ಮಾಡಬೇಕೆಂದು ನಿಶ್ಚಯಿಸಿ ತುಂಡಾಕ ವಿಷಯವನ್ನು ಪ್ರವೇಶಿಸಿ ಅಲ್ಲಿ ತನಗೆದುರಾದ ಪಲ್ಲವ ನಂದಿಪೋತವರ್ಮನನ್ನು ಸೋಲಿಸಿದ. ಕಟುಮುಖವಾದಿತ್ರ, ಸಮುದ್ರ ಘೋಷ ಎಂಬ ವಿಶೇಷವಾದ ವಾದ್ಯಗಳನ್ನೂ ಖಟ್ಟಾಂಗಧ್ವಜ ಎಂಬ ರಾಜಚಿಹ್ನೆಯನ್ನೂ, ಆನೆಗಳನ್ನೂ ಮಾಣಿಕ್ಯ ರಾಶಿಯನ್ನೂ ಕಸಿದುಕೊಂಡ. ರಾಜಧಾನಿಯಲ್ಲಿ ತನ್ನ ಶಾಸನವೊಂದನ್ನು ಕೆತ್ತಿಸಿದ. ಅವನ, ಅವನ ಅನಂತರದ ಅರಸರ ಶಾಸನಗಳಲ್ಲಿ ಅವನು ಬಾದಾಮಿಯನ್ನು ಸೂರೆಗೊಂಡು ನಾಶಮಾಡಿದಂತೆ ಉಲ್ಲೇಖಗಳಿವೆ. ಸೇಡು ತೀರಿಸಿಕೊಳ್ಳುವ ಅನುಕೂಲ ವಿಕ್ರಮಾದಿತ್ಯನಿಗೆ ದೊರಕಿತ್ತು. ಕಾಂಚೀಪುರದಲ್ಲಿ ವೈಭವೋಪೇತವಾದ ರಾಜಸಿಂಹೇಶ್ವರಾಲಯವನ್ನು (ಈಗಿನ ಕೈಲಾಸನಾಥ) ಇವನು ನೋಡಿದ. ಪಲ್ಲವರ ರಾಜಧಾನಿಯಲ್ಲಿ ತನ್ನೊದೊಂದು ಶಾಸನವನ್ನು ಕೆತ್ತಿಸಲು ನಿಶ್ಚಯಿಸಿದ. ಆದರೆ ಪಲ್ಲವರಂತೆ ವಿನಾಕೃತ್ಯಗಳಲ್ಲಿ ತೊಡಗದೆ, ಆ ದೇವಾಲಯದ ಧನಕನಕಗಳನ್ನು ಪರೀಕ್ಷಿಸಿ, ದೇವರಿಗೆ ಅದನ್ನು ಪುನರ್ದತ್ತಿ ಮಾಡಿ ಇತರ ಧರ್ಮಕಾರ್ಯಗಳಿಗಾಗಿ ಸುವರ್ಣರಾಶಿಯನ್ನು ವಿನಿಯೋಗಿಸಿದ. ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ಅವನ ಮಗನಾದ ಇಮ್ಮಡಿ ಕೀರ್ತಿವರ್ಮ ಪಲ್ಲವರ ವಿರುದ್ಧ ದಂಡೆತ್ತಿ ಹೋದ. ಇದು ಪಲ್ಲವರೊಡನೆ ವಿಕ್ರಮಾದಿತ್ಯನ ಮೂರನೆಯ ಯುದ್ಧ.

ಹೈಹಯವಂಶದ ರಾಜಕುಮಾರಿ ಲೋಕಮಹಾದೇವಿಯೂ ತ್ರೈಲೋಕ್ಯ ಮಹಾದೇವಿಯೂ ವಿಕ್ರಮಾದಿತ್ಯನ ಮಡದಿಯರು. ಹಿರಿಯಳಾದ ಲೋಕಮಹಾದೇವಿ ಪಟ್ಟದಕಲ್ಲಿನಲ್ಲಿ ಲೋಕೇಶ್ವರಾಲಯವನ್ನು ಕಟ್ಟಿಸಿದಳು, ಇದೇ ಈಗ ವಿರೂಪಾಕ್ಷನ ಗುಡಿಯೆಂದು ಪ್ರಸಿದ್ಧವಾಗಿದೆ. ಕಿರಿಯಳಾದ ತ್ರೈಲೋಕ್ಯ ಮಹಾದೇವಿ ಇದಕ್ಕೆ ಉತ್ತರದಲ್ಲಿ ತ್ರೈಲೋಕೇಶ್ವರಾಲವನ್ನು ಕಟ್ಟಿಸಿದಳು. ಆ ಗುಡಿ ಈಗ ಹಾಳಾಗಿದೆ. ಲೋಕೇಶ್ವರಾಲಯವನ್ನು ಕಟ್ಟಿದ ರೂವಾರಿ ಅನಿವರಿತಾಚಾರಿ ಗುಂಡ, ಲೋಕಮಹಾದೇವಿ ಅವನಿಗೆ ತ್ರಿಭುವನಾಚಾರಿ ಎಂಬ ಬಿರುದನ್ನು ಕೊಟ್ಟಳು. ಆ ದೇವಾಲಯಕ್ಕೆ ನರೆಯಂಗಲ್ಲಿನ ಪನ್ನಾಸವನ್ನು (ಒಂದು ವಿಧವಾದ ಸುಂಕ) ದಾನವಾಗಿ ಕೊಟ್ಟಳು.

ಕೀತೀವರ್ಮ II: ತ್ರೈಲೋಕ್ಯಮಾಹಾದೇವಿಯ ಮಗನೇ ಬಾದಾಮಿಯ ಚಾಳುಕ್ಯ ವಂಶದ ಕೊನೆಯ ಅರಸನಾದ ಇಮ್ಮಡಿ ಕೀರ್ತಿವರ್ಮ. ಈತ 745ರಲ್ಲಿ ಪಟ್ಟಕ್ಕೆ ಬಂದ ಸು. 757ರವರೆಗೂ ಆಳಿದ ಇವನ ಆಳ್ವಿಕೆ ಹೆಚ್ಚು ಘಟನೆಗಳಿಂದ ಕೂಡಿಲ್ಲ. ಆದರೂ ಇವನ ಆಳ್ವಿಕೆಯ ಕೊನೆಗಾಲದಲ್ಲಿ ಸಾಮಂತರು ಪುನಃ ಅವಿಧೇಯರಾಗಿ ಇವನ ವಿರುದ್ಧ ನಿಂತರು. ಅಂಥವರಲ್ಲಿ ರಾಷ್ಟ್ರಕೂಟ ಮನೆತನದ ದಂತಿದುರ್ಗ ಪ್ರಮುಖ 747ರ ಸುಮಾರಿನಲ್ಲೇ ಅವನು ಸ್ವತಂತ್ರನಾಗಲು ಹವಣಿಸಿದ. ಅವನ ಆ ವರ್ಷದ ಶಾಸನದಲ್ಲಿ ಅವನ ಅಧಿಪತಿಯಾದ ಕೀರ್ತಿವರ್ಮನ ಉಲ್ಲೇಖವೇ ಇಲ್ಲದಿರುವುದು ಇದಕ್ಕೆ ಗುರುತು. ಇದಾದ ಹತ್ತು ಹನ್ನೆರಡು ವರ್ಷಗಳಲ್ಲಿಯೆ ಅವನು ತನ್ನ ಶಕ್ತಿಯನ್ನು ಬೆಳೆಸಿಕೊಂಡ, ಹರ್ಷವರ್ಧನ, ವಜ್ರಪಲ್ಲವ, ಚೋಲ, ಪಾಂಡ್ಯ, ಕೇರಳ ರಾಜ್ಯಗಳನ್ನು ಸೋಲಿಸಿ, ಖ್ಯಾತಿವೆತ್ತ ಕರ್ನಾಟಕ ಬಲವನ್ನು ಬಹಳ ಸುಲಭವಾಗಿ ತಾನು ಜಯಿಸಿದುದಾಗಿ 754ರ ಶಾಸನದಲ್ಲಿ ಅವನು ಹೇಳಿಕೊಂಡಿದ್ದಾನೆ. ಆದರೆ 757ರವರೆಗೂ ಕೀರ್ತಿವರ್ಮನ ಶಾಸನಗಳು ಲಭ್ಯವಾಗಿವೆ. ಆದ್ದರಿಂದ ಅದುವರೆಗೂ ಕಿರ್ತಿವರ್ಮ ಅಧಿಕಾರದಲ್ಲಿ ಮುಂದುವರಿದನೆಂಬುದು ಸ್ಪಷ್ಟ. ಅಷ್ಟರಲ್ಲಿ ದಂತಿದುರ್ಗ ಮರಣಹೊಂದಿ, ಅವನ ಚಿಕ್ಕಪ್ಪನಾದ ಕೃಷ್ಣ ಅವನ ಸ್ಥಾನಕ್ಕೆ ಬಂದಿದ್ದ. ಬಹುಶಃ ಚಾಳುಕ್ಯ ರಾಜ್ಯದ ಉತ್ತರಭಾಗ ದಂತಿದುರ್ಗನ ವಶವಾಗಿದ್ದು, ಕೃಷ್ಣ ಆ ಭಾಗಕ್ಕೆ ಉತ್ತರಾಧಿಕಾರಿಯಾಗಿರಬೇಕು. 757ರ ಅನಂತರ ಚಾಳುಕ್ಯ ರಾಜ್ಯವನ್ನು ಅವನು ಸಂಪೂರ್ಣವಾಗಿ ತನ್ನದನ್ನಾಗಿ ಮಾಡಿಕೊಂಡ.

540ರಿಂದ ಎರಡು ಶತಮಾನಗಳವರೆಗೂ ವಿಜೃಂಭಣೆಯಿಂದ ಮೆರೆದ ಬಾದಾಮಿಯ ಚಾಳುಕ್ಯ ರಾಜ್ಯ ಅನಂತರ ಅಸ್ತಂಗತವಾಯಿತು. ಈ ಮನೆತನಕ್ಕೆ ಸೇರಿದ ಇಮ್ಮಡಿ ತೈಲಪ ಚಾಳುಕ್ಯ ರಾಜ್ಯವನ್ನು ಪುನಃ ಪ್ರತಿಷ್ಠಾಪಿಸುವವರೆಗೂ, ಎರಡು ಶತಮಾನಗಳ ಕಾಲ, ರಾಷ್ಟ್ರಕೂಟರು ಕರ್ನಾಟಕದಲ್ಲಿ ಆಳಿದರು. ಆ ಕಾಲದಲ್ಲಿ ಚಾಳುಕ್ಯವಂಶಕ್ಕೆ ಸೇರಿದ ಹಲವರು ಅಲ್ಲಲ್ಲಿ ಸಾಮಂತರಾಗಿ ಆಳುತ್ತಿದ್ದರೆಂದು ಶಾಸನದಿಂದ ಗೊತ್ತಾಗುತ್ತದೆ. ಆದರೆ ಇವರಿಗೂ ಮೂಲ ಮನೆತನದವರಿಗೂ ಇದ್ದ ಸಂಬಂಧವೆಂಥದೆಂಬುದು ತಿಳಿಯದು. (ಎನ್.ಎಲ್.ಆರ್.; ಜಿ.ಬಿ.ಆರ್.)

      ಶಾಸನಗಳು : ಬಾದಾಮಿಯ ಚಾಳುಕ್ಯರ ಶಿಲಾಶಾಸನಗಳಿಗಿಂತ ತಾಮ್ರ ಶಾಸನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿವೆ. ತಾಮ್ರಶಾಸನಗಳಲ್ಲಿ ಉಪಯೋಗಿಸಲಾದ ಲಿಪಿ ಕನ್ನಡವಿದ್ದರೂ, ಭಾಷೆ ಸಂಸ್ಕøತ, ಹೇಳಬೇಕಾದ್ದನ್ನು ಖಚಿತವಾಗಿ ವಸ್ತುನಿಷ್ಠವಾಗಿ ಹೇಳಲಾಗಿದೆ. ಈ ಶಾಸನಗಳಲ್ಲಿ ಹೆಚ್ಚಿನ ವಿವರಗಳು ಸಿಗುವುದಿಲ್ಲ. ತಾಮ್ರಶಾಸನಗಳಲ್ಲಿ ಬಾದಾಮಿಯ ಚಾಳುಕ್ಯರ ಸಾಂಪ್ರದಾಯಿಕ ಪ್ರಶಸ್ತಿಗಳು ಉಲ್ಲೇಖವಾಗಿರುತ್ತವೆ. ಆದರ ಈ ಪ್ರಶಸ್ತಿಗಳು ಇವರ ಅನಂತರ ಬಂದ ಕಲ್ಯಾಣ ಚಾಳುಕ್ಯರ ಶಾಸನಗಳಲ್ಲಿ ಹೆಚ್ಚು ವಿಸ್ತಾರಗೊಂಡಿವೆ. ಸಮಸ್ತಭುವನಾಶ್ರಯ, ಪೃಥ್ವೀವಲ್ಲಭ, ಮಹಾರಾಜಾಧಿರಾಜಂ, ಪರಮೇಶ್ವರಂ, ಪರಮಭಟ್ಟಾರಕಂ, ಸತ್ಯಾಸ್ರಯಕುಲತಿಲಕಂ, ಚಾಳುಕ್ಯಾಭರಣ-ಎಂಬ ಮಾತುಗಳು ಚಾಳುಕ್ಯರ ಆನಂತರದ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಈ ಶಾಸನಗಳಲ್ಲಿ ಕಾಲಗಣನೆಯನ್ನು ಹೆಚ್ಚು ನಿಖರವಾಗಿ ಉಪಯೋಗಿಸಲಾಗಿದೆ. ಶಕಸಂವತ್ಸರದ ಸಂಖ್ಯೆ., ಸಂವತ್ಸರ, ಮಾಸ, ಪಕ್ಷ ಹಾಗೂ ತಿಥಿಗಳನ್ನೂ ವಾರದ ದಿನವನ್ನೂ ಈ ಶಾಸನಗಳಲ್ಲಿ ನಿರ್ದೇಶಿಸಲಾಗಿರುತ್ತದೆ. ಶಾಸನದ ಉದ್ದೇಶವನ್ನು ಸೂಚಿಸುವುದಲ್ಲದೆ, ಹೆಚ್ಚು ಸಾಹಿತ್ಯಕವಾಗಿ ಆ ಊರಿನ, ನಾಡಿನ, ಪ್ರಾಂತ್ಯದ ಪ್ರಕೃತಿ ರಮಣೀಯತೆಯನ್ನೂ, ವೈಭವವನ್ನೂ, ದಾನ ನೀಡಿದವನ, ದಾನ ಪಡೆದವನ ಸದ್ಗುಣಗಳನ್ನೂ ಅನಂತರ ಶಾಸನಗಳು ಪ್ರೌಢವಾಗಿ ವರ್ಣಿಸುತ್ತವೆ.

ಬಾದಾಮಿಯ ಚಾಳುಕ್ಯರ ಶಾಸನಗಳ ಪೈಕಿ ಬಾದಾಮಿಯಲ್ಲಿ ದೊರೆತ ಮೊದಲನೆಯ ಪುಲಕೇಶಿಯ ಶಾಸನ, ಕಾಲದ ದೃಷ್ಟಿಯಿಂದ ಮುಖ್ಯವಾದ್ದು. ಐದು ಸಾಲುಗಳುಳ್ಳ ಈ ಶಾಸನ ಶಕ ಕಾಲದ ಅತಿ ಪ್ರಾಚೀನ ಉಲ್ಲೇಖವನ್ನೊಳಗೊಂಡ ಶಾಸನಗಳಲ್ಲಿ ಎರಡನೆಯದು. 1 ಸ್ವಸ್ತಿ ಶಕವರ್ಷೇಷು ಚತುಃಶತೇಷು ಪಂಚಷಷ್ಠಿಯತೇಷು 2 ಸ್ವಮೇಧಾದಿಯಜ್ಞಾನಾಂ ಯಜ್ವಾ ಶ್ರೌತವಿಧಾನತಃ 3 ಹಿರಣ್ಯಗರ್ಭಸಮ್ಭೂತಶ್ಚಲಿಕ್ಯೋ ವಲ್ಲಭೇಶ್ವರಃ 4 ಧರಾಧರೇನ್ದ್ರ ವಾತಾಪಿಮಜೇಯಂ ಭೂತಯೇ ಭುವಃ 5 ಅಧಸ್ತಾದುಪರಿಷ್ಟೌಚ್ಚ ದುರ್ಗಮೇತದಚೀಕರತ್

ಎಂದಿರುವ ಈ ಶಾಸನದ ಕಾಲ ಶಕ 465ಕ್ಕೆ ಸಮನಾದ ಕ್ರಿ.ಶ. 543. ಪುಲಕೇಶಿ ರಾಜ್ಯವಾಳತೊಡಗಿದ್ದು ಕ್ರಿ.ಶ.ಸು. 540ರಿಂದ ಎಂದು ಶಾಸನದಿಂದ ಗೊತ್ತಾಗುತ್ತದೆ. ಅಲ್ಲದೆ ಅಜೇಯವಾದ ವಾತಾಪಿಯ (ಬಾದಾಮಿ) ದುರ್ಗವನ್ನು ಕಟ್ಟಲು ಈತ ಕಾರಣನೆಂದೂ ತಿಳಿದುಬರುತ್ತದೆ.

ಮುಧೋಳ ತಾಮ್ರಶಾಸನದಲ್ಲಿ ಉಕ್ತನಾದ ಅರಸ ಪೂಗವರ್ಮ. ಈತ ಒಂದನೆಯ ಪುಲಕೇಶಿಯ ಹಿರಿಯ ಮಗನಾಗಿರಬಹುದೆಂದು ಹಲವರು ಊಹಿಸಿದ್ದಾರೆ. ಆದರೆ ಇದು ಒಂದನೆಯ ಕೀತಿವರ್ಮನಿಗೆ ಇದ್ದ ಇನ್ನೊಂದು ಹೆಸರು ಎಂಬ ವಾದವೂ ಇದೆ. ಬಾದಾಮಿಯ ವೈಷ್ಣವ ಗುಹೆಯಲ್ಲಿರುವ, ಒಂದನೆಯ ಕೀರ್ತಿವರ್ಮನ, ಶಕ 500ರ (ಕ್ರಿ.ಶ. 578) ಶಾಸನದಲ್ಲಿ ಮಂಗಲೇಶ ತನ್ನ ಅಣ್ಣನ ಅಣತಿಯಂತೆ ಕಟ್ಟಿಸಿದ ಆಲಯದ ಹೃದಯಂಗವಾದ ವರ್ಣನೆ ಇದೆ. ಅದು ಅತಿ ದೈವಕವಮಾನುಷ್ಯ ಕಮತ್ಯದ್ಭುತಕರ್ಮವಿರಚಿತವೆಂದು, ಭೂಮಭಾಗೋಪ ಭೋಗೋಪರಿ ಪಯ್ರ್ಯನ್ತಾತಿ ಶಯದರ್ಶನೀಯತಮವೆಂದು ಶಾಸನ ಹೇಳುತ್ತದೆ.

ಬೆಳಗಾವಿ ಜಿಲ್ಲೆಯ ಹೂಲಿ ಗ್ರಾಮದಲ್ಲಿ ದೊರೆತಿರುವ ಮಂಗಲೇಶನ ತಾಮ್ರ ಶಾಸನವೊಂದರಲ್ಲಿ ರಾಜನನ್ನು ಮಂಗಳರಾಜ ಮತ್ತು ರಣವಿಕ್ರಾಸ್ತನೆಂದು ಹೆಸರಿಸಿದೆ. ಮಾಂಡಲಿಕನಾದ ಸೇಂದ್ರ ಮನೆತನದ ಕಣ್ಣಶಕ್ತಿಯ ಮಗನಾದ ರವಿಶಕ್ತಿಯ ವಿಜ್ಞಾಪನೆಯಂತೆ ಶಾಂತಿಭಗವಂತನ ದೇವಾಲಯಕ್ಕೆ ಅರಸ ಮಾಡಿದ ಭೂದಾನದ ಶಾಸನವಿದು. ಇದರಲ್ಲಿಯ ಗಮನಾರ್ಹವಾದ ವಿಷಯವೆಂದರೆ ತಾಯಿ ಹುಲಿಯನ್ನು ಅದರ ಮೊಲೆಯೂಡುತ್ತಿರುವ ಹುಲಿಯ ಮರಿಯನ್ನೂ ಚಿತ್ರಿಸುವ ತಾಮ್ರದ ರಾಜಮುದ್ರೆ. ಇದು ಚಾಳುಕ್ಯರ ಶಾಸನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ವರಾಹಮುದ್ರೆಗಿಂತ ಭಿನ್ನವಾದ್ದು. ಮಹಾಕೂಟದ ಸ್ತಂಭದ ಮೇಲಿರುವ ಸಂಸ್ಕøತ ಶಿಲಾಶಾಸನ ಸಹ ಇದೇ ಅರಸನದು. ಇದರಲ್ಲಿ ಮಂಗಲೇಶನ ವ್ಯಕ್ತಿತ್ವವನ್ನು ಚಿತ್ರಿಸಲಾಗಿದೆ.

ಇಮ್ಮಡಿ ಪುಲಕೇಶಿಯ ಐಹೊಳೆಯ ಶಾಸನ ಈ ಅರಸರ ಶಾಸನಗಳಲ್ಲಿ ವಿಶಿಷ್ಟವಾದ್ದು. ಇದೊಂದು ಪ್ರಶಸ್ತಿಪರ ಶಿಲಾಶಾಸನ. ಇವರ ಬೇರಾವ ಶಾಸನಗಳೂ ಇದರಷ್ಟು ವಿಸ್ತಾರವಾಗಿಲ್ಲ. ಸೇನಾನಿಯೂ ಸ್ವತಃ ಕವಿಯೂ ಆದ ರವಿಕೀರ್ತಿಯ ಈ ಶಾಸನ ಸಂಸ್ಕøತದಲ್ಲಿ, ಪ್ರೌಢವಾದ ವೈದರ್ಭೀ ಶೈಲಿಯಲ್ಲಿ ಇದೆ. ಇದರಲ್ಲಿ ಶಕಕಾಲದ ನಿರ್ದೇಶದ ಜೊತೆಗೆ, ಅದು (ಶಕ 556, ಕ್ರಿ.ಶ. 634) ಮಹಾಭಾರತ ಯುದ್ಧಾನಂತರ 3,735 ವರ್ಷಗಳಿಗೆ ಸಮನೆಂದು ಹೇಳಿರುವುದು ಗಮನಾರ್ಹವಾದ ವಿಷಯ. ಇದರಲ್ಲಿ ಪುಲಕೇಶಿಯ ಸಾಧನೆಗಳನ್ನು ವರ್ಣಿಸಲಾಗಿದೆ. ರಾಜಕೀಯ ಇತಿಹಾಸ ಪುನರ್ರಚನೆಗೆ ಇದು ಉಪಯುಕ್ತ ಮಾಹಿತಿ ಒದಗಿಸಿದೆ. ಕಾಳಿದಾಸ ಹಾಗೂ ಭಾರವಿಗಳಿಗೆ ಹೋಲಿಸಿಕೊಂಡಿರುವುದರಿಂದ ಕಾಳಿದಾಸನ ಕಾಲಕ್ಕೆ ಸಂಬಂಧಿಸಿದಂತೆ ಒಂದು ನಿರ್ಣಾಯಕವಾದ ಘಟ್ಟ ಇದರಿಂದ ದೊರೆತಿದೆ. ಈ ಶಾಸನ ಕಾಲದ ವೇಳೆಗಾಗಲೇ ಕಾಳಿದಾಸ ಗತಿಸಿ ಒಂದು ಶತಮಾನವಾದರೂ ಆಗಿದ್ದಿರಬಹುದೆಂದು ಊಹಿಸಬಹುದಾಗಿದೆ.

ಕಾಂಚೀಪುರದಲ್ಲಿ ದೊರೆತ ಇಮ್ಮಡಿ ವಿಕ್ರಮಾದಿತ್ಯನ ಶಾಸನ ಕನ್ನಡ ಭಾಷೆಯಲ್ಲಿದೆ. ಈತ ಪಲ್ಲವ ಅರಸನನ್ನು ಸೋಲಿಸಿದ ಅನಂತರ ಆತನ ರಾಜಧಾನಿಯಾದ ಕಾಂಚೀಪುರದಲ್ಲಿ ರಾಜಸಿಂಹೇಶ್ವರಾಲಯವೂ ಒಂದು. ಅವನು ಅಲ್ಲಿ ತನ್ನದೊಂದು ಕನ್ನಡ ಶಾಸನವನ್ನು ಕೊರೆಯಿಸಿದ. ಕಂಚಿಯಾನ್ ಕೊಂಡು ರಾಜಸಿಂಹೇಶ್ವರರ ಧನಮಾನ್ ಕಂಡು ಮಗುಳ್ದು ದೇವರ್ಗೆಬಿಟ್ಟಾರ್ ಇನ್ತು ಬಿಟ್ಟ ಭಟಾರರಾ ಧರ್ಮ ಸ್ಥಿತಿಯಂ ಈ ಅಕ್ಷರಂಗಳುಮಾನ್ ಅಟಿವಾರೀಯೂರ ಘಟಿಗೆಂiÀೂ ಮಹಾಜನಮಾನ್ ಕೊನ್ದಾರ ಲೋಕಕ್ಕೆ ಸನ್ದಾರಪ್ಪರ್, ಎನ್ನುವ ಆ ಶಾಸನ ಅವನ ಧರ್ಮ ಬುದ್ಧಿಗೆ ಸಾಕ್ಷೀಭೂತವಾಗಿದೆ.

ಇದಕ್ಕೂ ಪ್ರಾಚೀನವಾದ ಕನ್ನಡ ಶಾಸನ ಬಾದಾಮಿಯ ವೈಷ್ಣವ ಗುಹೆಯಲ್ಲಿದೆ. ಪೃಥ್ವೀವಲ್ಲಭ ಮಂಗಲೀಸನಾ ಕಲ್ಪನೆಗೆ ಇತ್ತೊಂದು ಲಂಜಿಗೇಸರಂ ದೇವರ್ಕೆ ಪೂನಿಟುವ ಮಾಲಕಾರರ್ಗೆ ಅರ್ಧವಿಸಂ ಇತ್ತುದಾನ¿Éವೊನ್ ಪಂಚಮಹಾಪಾತಕನೆಕುಂ ಎಂಬ ಈ ಶಾಸನ ಈ ಚಾಳುಕ್ಯರ ಅತಿ ಪ್ರಾಚೀನ ಕನ್ನಡ ಶಾಸನ.

ಮಹಾಕೂಟದಲ್ಲಿರುವ ವಿಜಯಾದಿತ್ಯನ ಶಾಸನವೊಂದು ಆತನ ಸೂಳೆ, ಪ್ರಾಣವಲ್ಲಭೆ ಎನಿಸಿದ ವಿನಾಪೋಟಿಗೆ ಸಂಬಂಧಿಸಿದ್ದು. ವಿಜಯಾದಿತ್ಯ ಸತ್ಯಾಶ್ರಯ ಪೃಥ್ವೀವಲ್ಲಭೆ ಎನಿಸಿದ ವಿನಾಪೋಟಿಗೆ ಸಂಬಂಧಿಸಿದ್ದು. ವಿಜಯಾದಿತ್ಯ ಸತ್ಯಾಶ್ಯ ಪೃಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಭಟಾರರಾ ಪ್ರಾಣವಲ್ಲಭೆ ವಿನಾಪೋಟಿಗಳೆನ್ವೊರ್ಸೂಳೆಯರ್ ಇವರಂ ಮುದುತಾಯ್ವಿ ರೇವಮಞ್ಚಳ್ಗಳವರಾ ಮಗಳ್ದಿಕ್ರ್ಕೂಚಿಪೋಟಿಗಳವರಾ ಮಗಳು ವಿನಾಪೋಟಿಗಳಿಲ್ಲಿಯೆ ಹಿರಣ್ಯಗರ್ಭಮೀಟ್ದು ಎಲ್ಲಾ ದಾನಮುಂ ಗೊಟ್ಟು ದೇವನಾಪೀಠಮಾನ್ಕಿಸುವಿನೆ ಕಟ್ಟಿ ಬೆಳ್ಳಿಯಾ ಕೊಡೆಯಾನೇ ಟಿಸಿಎ ಮಙ್ಗಳುಳ್ಳೆ ಅಷ್ಟಶತಂ ಕ್ಷೇತ್ರ ಗೊಟ್ಟೊಳ್-ಎಂಬ ಈ ಶಾಸನ ವಿನಾ ಪೋಟಿಯ ತಾಯಿ ಹಾಗೂ ಅಜ್ಜಿಯರನ್ನು ಹೆಸರಿಸಿ ಆಕೆ ದೇವರಿಗಿತ್ತ ದಾನವನ್ನು ಉಲ್ಲೇಖಿಸಿದೆ. ನಾಣ್ಯಗಳು : ಬಾದಾಮಿಯ ಚಾಲುಕ್ಯರ ಶಾಸನಗಳಲ್ಲಿ ನಾಣ್ಯಗಳ ಉಲ್ಲೇಖಗಳಿವೆ. ಗದ್ಯಾಣ, ಧರಣ, ವೀಸ-ಇವು ಚಲಾವಣೆಯಲ್ಲಿದ್ದ ನಾಣ್ಯಗಳ ಹೆಸರುಗಳು. ಆದರೆ ಖಚಿತವಾಗಿ ಈ ಅರಸರು ಅಚ್ಚುಹಾಕಿಸಿದರೆಂದು ಹೇಳಲು ಸಾಧ್ಯವಾಗುವಂಥ ಯಾವ ನಾಣ್ಯಗಳೂ ದೊರೆತಿಲ್ಲ. ಇಲಿಯಟರು ಮಂಗಲೇಶನ ನಾಣ್ಯಗಳೆಂದು ಕೆಲವನ್ನು ತೋರಿಸಿದ್ದಾರಾದರೂ ಅದು ಆ ಅರಸ ಚಲಾವಣೆಗೆ ತಂದ ನಾಣ್ಯಗಳೆಂದು ಹೇಳಲು ಸ್ಪಷ್ಟವಾದ ಆಧಾರಗಳಿಲ್ಲ. ಚಾಲುಕ್ಯರ ನಾಣ್ಯಗಳು ಮೊದಲು ಬೆಳ್ಳಿ ಅಥವಾ ಬಂಗಾರದ ಗಟ್ಟಿಗಳ ತುಂಡುಗಳಾಗಿದ್ದು, ಕ್ರಮೇಣ ಗೋಲಾಕಾರ ಪಡೆದುವೆನ್ನಲಾಗಿದೆ. ಅವುಗಳ ಮೇಲೆ ವರಾಹದ ಚಿತ್ರವಿತ್ತೆಂದೂ ಆ ನಾಣ್ಯಗಳು ಕದಂಬರ ನಾಣ್ಯಗಳ ಅನುಕರಣೆಗಳೆಂದೂ ಹೇಳಲಾಗಿದೆ. (ಜಿ.ಬಿ.ಆರ್.)

ವಾಸ್ತು : ಬಾದಾಮಿಯ ಚಾಳುಕ್ಯರ ಕಾಲದ ಮುಖ್ಯ ವಾಸ್ತುಕೃತಿಗಳೆಲ್ಲ ಅವರ ರಾಜಧಾನಿಯಾಗಿದ್ದ ಬಾದಾಮಿ, ಅದರ ಪರಿಸರದಲ್ಲೇ ಇರುವ ಮಹಾಕೂಟ, ನಾಗರಾಳ್, ಬಾದಾಮಿಗೆ 12-15ಮೈ. ದೂರದಲ್ಲಿ ಮಲಪ್ರಭಾ ನದಿಯ ಬಲದಂಡೆಯಲ್ಲಿರುವ ಪಟ್ಟದಕಲ್ಲು, ಅದೇ ನದಿಯ ಎಡದಂಡೆಯಲ್ಲಿರುವ ಐಹೊಳೆ-ಈ ಸ್ಥಳಗಳಲ್ಲಿ ಇವೆ. ಐಹೊಳೆಯಲ್ಲಿರುವ ಒಂದು ಕೋಟೆಯ ಅವಶೇಷಗಳನ್ನು ಬಿಟ್ಟರೆ ಮಿಕ್ಕವೆಲ್ಲ ದೇವಾಲಯಗಳು. ಬಾದಾಮಿಯಲ್ಲಿ ಸುಮಾರು 20, ನಾಗರಾಳಿನಲ್ಲಿ ಒಂದು, ಮಹಾಕೂಟದಲ್ಲಿ ಸುಮಾರು 10, ಪಟ್ಟದಕಲ್ಲಿನಲ್ಲಿ ಸುಮಾರು 12 ಮತ್ತು ಐಹೊಳೆಯಲ್ಲಿ ಸುಮಾರು 100ಕ್ಕೂ ಹೆಚ್ಚು ದೇವಾಲಯಗಳಿವೆ. ಅಲ್ಲದೆ ಮಹಬೂಬ್‍ನಗರ ಜಿಲ್ಲೆಯ ಅಲಂಪುರದಲ್ಲಿ ಒಂಬತ್ತು. ಕರ್ನೂಲು ಜಿಲ್ಲೆಯ ಸತ್ಯವೋಲು ಮತ್ತು ಮಹಾನಂದಿಗಳಲ್ಲಿ ಒಂದೊಂದು ದೇವಾಲಯಗಳು ಇವೆ. ಇವುಗಳಲ್ಲಿ ಹೆಚ್ಚಿನವು ಹಿಂದೂ ದೇವಾಲಯಗಳು, ಐದಾರು ಜೈನದೇಗುಲಗಳು. ಒಂದು ಅಥವಾ ಎರಡು ವಾಸ್ತುಕೃತಿಗಳು ಬೌದ್ಧ ಎಂದು ಊಹಿಸಲು ಅವಕಾಶವಿದೆ. ಬಾದಾಮಿಯ ಚಾಳುಕ್ಯರ ಕಾಲದ ಏಕೈಕ ಕ್ಷಾತ್ರವಾಸ್ತುವಿನ ಉದಾಹರಣೆಯಾಗಿರುವ ಐಹೊಳೆಯ ಕೊಟೆಗೋಡೆ ಸುಮಾರು 7 ಅಥವಾ 8ನೆಯ ಶತಮಾನದ್ದಿದ್ದಂತೆ ತೋರುತ್ತದೆ. ಆ ಕೋಟೆಯ ತಳವಿನ್ಯಾಸ ಪ್ರಾಯಶಃ ಚಚ್ಚೌಕವಾಗಿತ್ತೆಂದೂ ಅದರ ನಾಲ್ಕು ಕಡೆಯ ಮಹಾದ್ವಾರಗಳಲ್ಲೂ ಅಲ್ಲಲ್ಲಿ ಚೌಕಾಕಾರದ ಅಟ್ಟಾಲಕಗಳು ಇದ್ದುವೆಂದೂ ಅದು ಸುತ್ತಲೂ ಕಂದಕದಿಂದ ಪರಿವೃತವಾಗಿತ್ತೆಂದೂ ಅದರ ಈಗಿನ ಉಳಿಕೆಗಳಿಂದ ಊಹಿಸಬಹುದಾಗಿದೆ. ಯಾವ ಬಂಧಕ ಸಾಮಗ್ರಿಗಳನ್ನೂ ಉಪಯೋಗಿಸದೆ ದೊಡ್ಡ ಸೈಜುಗಲ್ಲುಗಳನ್ನು ಒಂದರ ಮೇಲೊಂದು ಪೇರಿಸಿ ಗೋಡೆಗಳನ್ನು ರಚಿಸಲಾಗಿದೆ.

ಆ ಕಾಲದ ಧಾರ್ಮಿಕ ವಾಸ್ತುಕೃತಿಗಳನ್ನು ಗುಹೆಗಳು ಮತ್ತು ಕಟ್ಟಡಗಳು ಎಂದು ವಿಂಗಡಿಸಬಹುದು. ಬಾದಾಮಿಯಲ್ಲಿ ಮೇಣಬಸ್ತಿಗಳು ಎಂದು ಕರೆಯಲಾಗುವ ನಾಲ್ಕು ಗುಹೆದೇವಾಲಯಗಳು, ಐಹೊಳೆಯಲ್ಲಿಯ ರಾವಣಫಡಿ ಗುಹೆ ಮತ್ತು ಇನ್ನೊಂದು ಜೈನಗುಹೆ ಮೊದಲನೆಯ ರೀತಿಯವು. ಮರಳಗಲ್ಲು ಗುಡ್ಡಗಳ ಕಡಿದಾದ ಮುಖದೊಳಕ್ಕೆ ಕಡಿದಿರುವ ಈ ಗುಹೆಗಳಲ್ಲಿ ಸಾಮಾನ್ಯವಾಗಿ ಒಂದು ಅಥವಾ ಹೆಚ್ಚು ಕಂಬ ಸಾಲುಗಳಿರುವ ಆಯಾಕಾರದ ಒಂದು ದೊಡ್ಡ ಹಜಾರ ಮತ್ತು ಅದರ ಒಂದು ಸಣ್ಣ ಗರ್ಭಗೃಹ ಮಾತ್ರ ಇರುತ್ತವೆ. ಹೊರಮೈಯನ್ನು ನಾಜೂಕಾಗಿ ಕೊರೆದಿರುವ ದಪ್ಪ ಕಂಬಗಳು, ಶಿಲ್ಪಾಲಂಕೃತ ಗೋಡೆಗಳು ಮತ್ತು ಚಾವಣಿಗಳು ಈ ಗುಹೆಗಳ ಆಕರ್ಷಕ ಭಾಗಗಳು, ಈ ಗುಹೆ ದೇವಾಲಯಗಳೆಲ್ಲ ಅವುಗಳ ವಾಸ್ತು ವಿನ್ಯಾಸಕ್ಕಿಂತ, ಅಲ್ಲಿ ಕಂಡುಬರುವ ದೇವದೇವತೆಗಳ ಬೃಹತ್ ಅತಿ ಉಬ್ಬುಶಿಲ್ಪಗಳು ಮತ್ತು ಅಲಂಕರಣದ ನಿಮ್ನ ಉಬ್ಬು ಶಿಲ್ಪಗಳಿಗೆ ಪ್ರಸಿದ್ಧವಾಗಿವೆ. ಐಹೊಳೆಯ ಗುಹೆದೇವಾಲಯಗಳು ಚಿಕ್ಕವು. ಇವುಗಳಲ್ಲಿ ರಾವನಫಡಿ ಗುಹೆ ಶೈವಧರ್ಮೀಯವಾದರೆ ಇನ್ನೊಂದು ಜೈನಗುಹೆ. ಬಾದಾಮಿಯ ಗುಹೆ ದೇವಾಲಯಗಳಲ್ಲಿ ನಾಲ್ಕನೆಯದು ಜೈನ, ಉಳಿದವು ಹಿಂದೂ. ಮೊದಲನೆಯದನ್ನು ಶೈವಗುಹೆಯೆಂದೂ 2 ಮತ್ತು 3ನೆಯವನ್ನು ವೈಷ್ಣವ ಗುಹೆಗಳೆಂದೂ ಅಲ್ಲಿಯ ಮುಖ್ಯ ಶಿಲ್ಪಗಳ ಆಧಾರದ ಮೇಲೆ ಕರೆಯುವುದುಂಟು. ಒಬ್ಬ ವಾಸ್ತುಚರಿತ್ರಕಾರರ ಪ್ರಕಾರ ದಕ್ಷಿಣ ಭಾರತದ ಹಿಂದೂ ಜೈನ ಗುಹಾವಾಸ್ತು ಶಿಲ್ಪ ಸರಣಿಯಲ್ಲಿ ಬಾದಾಮಿಯ ಚಾಳುಕ್ಯರ ಕಾಲದ ಗುಹೆಗಳೇ ಅತ್ಯಂತ ಪ್ರಾಚೀನವಾದವು. ಇವುಗಳಲ್ಲೂ ಐಹೊಳೆಯ ಗುಹೆಗಳು ಮೊದಲವೆಂದೂ ಬಾದಾಮಿಯವು ಅನಂತರದವೆಂದೂ ಊಹೆ. ಬಾದಾಮಿಯ ಮೂರನೆಯ ಗುಹೆಯಲ್ಲಿ ಚಾಳುಕ್ಯ ಮಂಗಲೀಶನ ಒಂದು ಶಾಸನವಿದೆ. ಗುಹೆಯ ಕಾಲ ಶಕ 500 (ಕ್ರಿ.ಶ.578) ಎಂದು ಅದು ಸ್ಪಷ್ಟವಾಗಿ ತಿಳಿಸುತ್ತದೆ. (ಎಲಿಫೆಂಟ ಮತ್ತು ಎಲ್ಲೋರದ ಕೆಲವು ಗುಹೆಗಳು ಚಾಳುಕ್ಯ ಕಾಲದವಿರಬಹುದೆಂದು ಒಬ್ಬಿಬ್ಬರು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.)

ಚಾಳುಕ್ಯರ ಕಾಲದ ವಾಸ್ತುಕೃತಿಗಳೆಲ್ಲ ಬಿಜಾಪುರ ಜಿಲ್ಲೆಯಲ್ಲಿ ದೊರಕುವ ನಸುಗೆಂಪು ಅಥವಾ ತಿಳಿಹಳದಿ ಬಣ್ಣದ ಮರಳುಗಲ್ಲಿನಲ್ಲಿ ಕಟ್ಟಲಾದವು. ಆಯಾಕಾರದ, ಹೆಚ್ಚು ಮಟ್ಟಿಗೆ ದೊಡ್ಡ ಚಪ್ಪಡಿಯಂಥ, ಕಲ್ಲುಗಳನ್ನು ಯಾವ ಬಂಧಕ ಸಾಮಗ್ರಿಯನ್ನೂ ಉಪಯೋಗಿಸದೆ ಒಂದರಮೇಲೊಂದರಂತೆ ಪೇರಿಸಿ ಗೋಡೆಗಳನ್ನು ಎತ್ತುವುದು, ಅದೇ ರೀತಿಯ ಒಂದೊಂದೇ ದಪ್ಪಕಲ್ಲುಗಳನ್ನು ಕಂಬಗಳು ಮತ್ತು ತೊಲೆಗಳಾಗಿ ಉಪಯೋಗಿಸುವುದು, ದೊಡ್ಡ ಚಪ್ಪಡಿಗಳನ್ನು ಚಾವಣಿಗಾಗಿ ಕವುಚುವುದು-ಇದು ಈ ಕಾಲದ ವಾಸ್ತುಕೃತಿಗಳಲ್ಲಿ ಕಂಡುಬರುವ ತಂತ್ರ. ಚಾಳುಕ್ಯ ಪೂರ್ವಕಾಲದ ದಕ್ಷಿಣ ಭಾರತದಲ್ಲಿ ಶಿಲಾಕಟ್ಟಡಗಳ, ಅದರಲ್ಲೂ ಶಿಲಾದೇವಾಲಯಗಳ, ರಚನೆ ಅಷ್ಟೇನೂ ಪ್ರಚಲಿತವಾಗಿರಲಿಲ್ಲ. ಅಂದಿನ ವಾಸ್ತು ರಚನೆಗಳಲ್ಲಿ ಗುಹಾ ರೀತಿಯನ್ನು ಬಿಟ್ಟರೆ, ಮರ ಅಥವಾ ಇಟ್ಟಿಗೆಯ ಕಟ್ಟಡಗಳಷ್ಟೇ ರೂಡಿಯಲ್ಲಿದ್ದುವು. ಆದ್ದರಿಂದಲೇ ಚಾಳುಕ್ಯ ಶಿಲಾಕಟ್ಟಡಗಳಲ್ಲಿ ಭದ್ರತೆಯ ದೃಷ್ಟಿಯಿಂದ ಅಗತ್ಯವಾದ್ದಕ್ಕಿಂತ ಹೆಚ್ಚು ದಪ್ಪನೆಯ ಕಲ್ಲುಗಳ ಉಪಯೋಗ, ಸಾಮಗ್ರಿ ಮತ್ತು ಶಕ್ತಿಯ ಅಪವ್ಯಯ ಕಂಡುಬರುತ್ತದೆಂದೂ ಇದು ಕಲೆಯ ಶೈಶಾವಸ್ಥೆಯ ಸಾಮಾನ್ಯ ಕುರುಹೆಂದೂ ವಾಸ್ತುತಂತ್ರಜ್ಞರ ಅಭಿಪ್ರಾಯ. ಶಿಲಾಕಟ್ಟಡಗಳ ರಚನೆಯಲ್ಲಿ ಪೂರ್ವಸಂಪ್ರದಾಯದ ಹಿನ್ನೆಲೆಯಿಲ್ಲದಿದ್ದರೂ ಈ ದಿಶೆಯಲ್ಲಿ ನೂತನವಾಗಿ ಪ್ರಯೋಗಗಳನ್ನು ಮಾಡಿ, ಮುಂದೆ ಅನೇಕ ಶತಮಾನಗಳ ಕಾಲ ಮುಂದುವರಿಯುವಂಥ ದೇವಾಲಯ ಸ್ವರೂಪವನ್ನು ರೂಪಿಸಿದ್ದು ಚಾಳುಕ್ಯರ ಕಾಲದ ಸಾಧನೆ. ಈ ದೃಷ್ಟಿಯಿಂದ ಕ್ರಿ.ಶ. ಸುಮಾರು 5-6ನೆಯ ಶತಮಾನದಿಂದ 8ನೆಯ ಶತಮಾನದವರೆಗೆ ಬೆಳೆದ ಪ್ರಯೋಗಾತ್ಮಕ ಚಾಳುಕ್ಯ ವಾಸ್ತುಶೈಲಿ ಭಾರತೀಯ ವಾಸ್ತುಚರಿತ್ರೆಯಲ್ಲಿ ಪ್ರಮುಖ ಸ್ಥಾನ ಗಳಿಸಿದೆ. ಈ ಕಾಲದ ವಾಸ್ತುಕೃತಿಗಳನ್ನು ಅಭ್ಯಸಿಸಿರುವ ವಾಸ್ತು ಚರಿತ್ರಕಾರರು ಬಾದಾಮಿಯ ಚಾಳುಕ್ಯ ವಾಸ್ತುಸಂಪ್ರದಾಯವನ್ನು ಪ್ರಯೋಗಾತ್ಮಕ ವಾಸ್ತುಸಂಪ್ರದಾಯವೆಂದೂ ಬಿಜಾಪುರ ಜಿಲ್ಲೆಯನ್ನು ಅದರಲ್ಲೂ ಐಹೊಳೆಯನ್ನು ಶಿಲಾದೇವಾಲಯ ಸಂಪ್ರದಾಯದ ತೊಟ್ಟಿಲು ಎಂದೂ ಕರೆದಿದ್ದಾರೆ.

ಬಾದಾಮಿಯ ಚಾಳುಕ್ಯ ಕಾಲದ ಮೊದಲ ದೇವಾಲಯಗಳ ರಚನೆಯಲ್ಲಿ ದೇವಾಲಯಗಳಿಗೆ ವಿಶಿಷ್ಟವಾದ ಪರಿಚಿತ ವಿನ್ಯಾಸ ಕಂಡುಬುರುವುದಿಲ್ಲ. ದೂರದಿಂದ ನೋಡಿದರೆ ಅವನ್ನು ದೇವಾಲಯಗಳೆಂದು ಗುರುತಿಸುವುದೂ ಕಷ್ಟ. ಐಹೊಳೆಯ ಮಧ್ಯದಲ್ಲಿರುವ ಕೊಂತಿಗುಡಿ ಎಂದು ಕರೆಯುವ ಮೂರು ದೇವಾಲಯಗಳ ಗುಂಪು ಈ ಘಟ್ಟಕ್ಕೆ ಸೇರದವು. ಇವುಗಳಲ್ಲಿ ನವರಂಗದ ಹಿಂಭಾಗಕ್ಕೆ ಸರಿದ ಗರ್ಭಗೃಹ, ಸುಖನಾಸಿ, ಪ್ರದಕ್ಷಿಣಪಥ, ಸಭಾಮಂಟಪ, ಮುಖಮಂಟಪ ಮುಂತಾದ ಯಾವ ದೇವಾಲಯ ವೈಶಿಷ್ಟ್ಯಗಳೂ ಇಲ್ಲ. ತಳವಿನ್ಯಾಸದಲ್ಲಿ ಇವೆಲ್ಲ ಆಯಾಕಾರ, ಇದು ಒಂದು ದೊಡ್ಡ ಹಜಾರ ಮಾತ್ರ. ಹಿಂಭಾಗದ ಗೋಡೆಗೆ ಸೇರಿದಂತೆ, ಹಜಾರದಲ್ಲಿ ಸ್ವಲ್ಪ ಭಾಗವನ್ನು ಆಕ್ರಮಿಸುವಂತೆ ಒಂದು ಆಯಾಕಾರದ ಗರ್ಭಗುಡಿಯನ್ನು ಅನಂತರ ಅಳವಡಿಸಲಾಗಿದೆ. ಕೊಂತಿಗುಡಿ ಗುಂಪಿನ ಮೊದಲನೆಯ ದೇವಾಲಯದ ಹಜಾರದಲ್ಲಿ ಗರ್ಭಗುಡಿಯ ಮುಂದೆ ಎರಡು ಕಂಬಗಳಷ್ಟೇ ಇವೆ. ಎರಡನೆಯದರಲ್ಲಿ ಎಂಟು ಕಂಬಗಳನ್ನು ಅಡ್ಡಡ್ಡಲಾಗಿ ಎರಡು ಸಾಲುಗಳಾಗಿ ನಿಲ್ಲಿಸಲಾಗಿದೆ. ಆದರೆ ಮೂರನೆಯ ದೇವಾಲಯ ಪರಿಷ್ಕøತ. ಇಲ್ಲಿ ಹಜಾರವನ್ನೇ ಮಧ್ಯದ ಒಂದು ಗೋಡೆಯಿಂದ ಎರಡು ಭಾಗ ಮಾಡಿ, ಒಳಮಂಟಪ ಮತ್ತು ಮುಖಮಂಟಪದಂತೆ ಉಪಯೋಗಿಸಿಕೊಳ್ಳಲಾಗಿದೆ. ಅಲ್ಲದೆ. ಈ ದೇವಾಲಯದಲ್ಲಿ ಭಾರವಾದ ಶಿಖರವನ್ನೂ ಅಳವಡಿಸುವ ಪ್ರಯತ್ನ ನಡೆದಿದೆ. ಯಾವುದೇ ರೀತಿಯ ಸ್ಪಷ್ಟ ವಿನ್ಯಾಸದ ಅಭಾವ, ರಚನೆಯಲ್ಲಿ ಒರಟುತನ, ಕಂಬ ಮತ್ತು ಕಟ್ಟಡಗಳ ಕುಬ್ಜಾಕಾರ, ಇವೆಲ್ಲ ಕೊಂತಿಗುಡಿ ದೇವಾಲಯಗಳ ಪ್ರಾಚೀನತೆಯನ್ನು ಸಾರುತ್ತವೆ.

ಈ ಪ್ರಯೋಗಾತ್ಮಕ ಘಟ್ಟಕ್ಕೇ ಸೇರಿದ ಇನ್ನೊಂದು ಕಟ್ಟಡ ಐಹೊಳೆಯ ಲಾಡಖಾನ್, ಗುಡಿ. ಪರ್ಸಿ ಬೌನ್ ಎಂಬ ವಿದ್ವಾಂಸರು ಇದು ಐಹೊಳೆಯ ದೇವಾಲಯಗಳಲ್ಲಿ ಅತ್ಯಂತ ಪ್ರಾಚೀನವಾದ್ದೆಂದು (ಕ್ರಿ.ಶ. 450) ಅಭಿಪ್ರಾಯಪಟ್ಟಿದ್ದರೂ ಇದು ಅಲ್ಲಿಯ ಇತರ ಕೆಲವು ದೇವಾಲಯಗಳಿಗಿಂತ ಸ್ವಲ್ಪ ಅನಂತರದ್ದೆಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿದೆ.

ತಳವಿನ್ಯಾಸದಲ್ಲಿ ಇದು ಒಂದು ಚೌಕಾಕಾರದ ದೊಡ್ಡ ಹಜಾರ. ಆದರೆ ಒಳಭಾಗದಲ್ಲಿ ಹೊರಗೋಡೆಗಳಿಗೆ ಸಮಾನಾಂತರವಾಗಿರುವ ಎರಡು ಸಾಲು ಕಂಬಗಳ ಚೌಕಗಳಿದ್ದು. ಈ ಹಜಾರ ಏಕಕೇಂದ್ರದ ಮೂರು ಚೌಕಗಳ ಮಂಟಪದ ರೂಪ ತಾಳಿದೆ. ಹಿಂಭಾಗದ ಗೋಡೆಗೆ ಸೇರಿದಂತೆ ಚಿಕ್ಕ ಆಯಾಕಾರದ ಗರ್ಭಗುಡಿಯೂ ಮುಂಭಾಗದಲ್ಲಿ ಚೌಕ ಹಜಾರದಿಂದ ಮುಂದೆ ಸಂದಿರುವ ಮುಖಮಂಟಪವೂ ಇವೆ. ಗರ್ಭ ಗುಡಿಯಲ್ಲಿ ಲಿಂಗವೂ ನಡುಚೌಕದಲ್ಲಿ ನಂದಿಯ ವಿಗ್ರಹವೂ ಇರುವುದರಿಂದ ಇದು ಶಿವದೇವಾಲಯವೆಂದು ತೋರುತ್ತದೆ. ಹೊರಗೋಡೆ ಇರುವಲ್ಲಿ ಮೊದಲು ಕಂಬಗಳಷ್ಟೇ ಇದ್ದು ಸುತ್ತಲೂ ತೆರೆದ ಮಂಟಪದಂತೆ ಇಡೀ ಕಟ್ಟಡವಿತ್ತೆಂದೂ ಅನಂತರ ಚಪ್ಪಡಿಗಳಿಂದಲೂ ದೊಡ್ಡ ಜಾಲಂಧ್ರಗಳಿಂದಲೂ ಹೊರಗೋಡೆಯನ್ನು ರಚಿಸಿರಬೇಕೆಂದೂ ಸ್ಪಷ್ಟವಾಗುತ್ತದೆ. ದೊಡ್ಡ ಚಪ್ಪಡಿಗಳನ್ನು ಇಳಿಚಾರಾಗಿರುವಂತೆ ಒಂದರ ಪಕ್ಕದಲ್ಲೊಂದರಂತೆ ಜೋಡಿಸಿ ಚಾವಣಿಯನ್ನು ರಚಿಸಲಾಗಿದೆ. ಹಾಸು ಹೆಂಚುಗಳ ಮೇಲಿನ ಹೊದಿಕೆಹೆಂಚುಗಳ ರೀತಿಯಲ್ಲಿ ಆ ಚಪ್ಪಡಿಗಳ ಮಧ್ಯದ ಸಂದುಗಳ ಮೇಲೆ ಕಿರಿ ಅಗಲದ ಉದ್ದ ಚಪ್ಪಡಿಗಳನ್ನು ಇಟ್ಟು ಸಂದುಗಳನ್ನು ಮುಚ್ಚಲಾಗಿದೆ. ಈ ರೀತಿಯ ಚಾವಣಿಯ ರಚನೆ ಪ್ರಾಯಶಃ ಈ ದೇವಾಲಯದಲ್ಲಿ ಮೊದಲಾಗಿ ಕಂಡುಬಂದಿದೆ. ಕರ್ನಾಟಕದಲ್ಲಿ ಮುಂದೆ ಅನೇಕ ಶತಮಾನಗಳ ಕಾಲ ಈ ವಿಧಾನ ಬಳಕೆಯಲ್ಲಿತ್ತು. ಮಾಳಿಗೆಯ ಮೇಲೆ, ಹಜಾರದ ನಡುಚೌಕದ ನೇರಕ್ಕೆ ಸರಿಯಾಗಿ, ಇನ್ನೊಂದು ಆಯ ತಳವಿನ್ಯಾಸದ ಚಿಕ್ಕ ಗರ್ಭ ಗೃಹವಿರುತ್ತದೆ. ಇದರಲ್ಲಿ ಹೊರಗೋಡೆಗಳ ಮೇಲೆ ಅರೆಗಂಬಗಳು ಮತ್ತು ಕೆಲವು ಶಿಲ್ಪಾಲಂಕರಣಗಳು ಇವೆ. ಈ ಎರಡನೆಯ ಅಂತಸ್ತು ಮುಂದೆ ಶಿಖರಗಳ ಬೆಳೆವಣಿಗೆಗೆ ಪೂರ್ವಸೂಚಿಯಾಗಿದ್ದಿರಬಹುದೆಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಇಲ್ಲಿಯ ಮುಖಮಂಟಪದ ಕಂಬಗಳಲ್ಲಿ ಅನೇಕ ಮಿಥುನದ ಶಿಲ್ಪಗಳನ್ನು ಅಳವಡಿಸಲಾಗಿದೆ. ಅಲಂಕೃತ ಮುಖಮಂಪಟ, ಇಳಿಚಾವಣಿ, ಎರಡನೆಯ ಅಂತಸ್ತು ಮುಂತಾದ ಹೊಸ ಅಂಗಗಳನ್ನು ಲಾಡಖಾನ್ ಗುಡಿ ಹೊಂದಿರುವುದರಿಂದ ಇದನ್ನು ಕೊಂತಿಗುಡಿಗಿಂತ ಅನಂತರದ ಘಟ್ಟದ್ದೆಂದು ಪರಿಗಣಿಸಬಹುದಾಗಿದೆ.

ಐಹೊಳೆಯ ದುರ್ಗ ಗುಡಿ ಅಸಾಮಾನ್ಯ ರೀತಿಯ ವೈಶಿಷ್ಟ್ಯಪೂರ್ಣ ಕಟ್ಟಡ. ಇದು ಹಿಂದೂ ದೇವಾಲಯಗಳ ವಿನ್ಯಾಸ ಇನ್ನೂ ರೂಪುಗೊಳ್ಳದಿದ್ದಾಗ ಬೌದ್ಧರ ಚೈತ್ಯಾಲಯದ ಮಾದರಿಯನ್ನು ಅನುಸರಿಸಿ ನಿರ್ಮಿಸಲಾಗಿರುವ ಒಂದು ಕಟ್ಟಡವೆಂದೂ ಕ್ರಿ.ಶ. 600ಕ್ಕೂ ಹಿಂದಿನದಿರಬಹುದೆಂದೂ ಒಬ್ಬ ವಿದ್ವಾಂಸರು ಊಹಿಸಿದ್ದಾರೆ. ಈ ದೇವಾಲಯದ್ದು ಗಜಪೃಷ್ಠಾಕೃತಿಯ ತಳವಿನ್ಯಾಸ; ಎಂದರೆ ಮುಂಭಾಗ ಆಯಾಕಾರವಾಗಿದ್ದು ಅದೇ ನೇರದಲ್ಲೇ ಪಕ್ಕದ ಗೋಡೆಗಳು ಅರ್ಧ ವೃತ್ತಾಕಾರದಲ್ಲಿ ಸೇರುತ್ತವೆ. ಈ ವಿನ್ಯಾಸ ಹೊರಮೈಗಷ್ಟೇ ಮೀಸಲಾಗಿಲ್ಲ. ನಡುವಣ ಗರ್ಭಗೃಹ, ಅದರ ಮುಂದಿನ ಮಂಟಪ, ಗರ್ಭಗೃಹದ ಸುತ್ತಲಿನ ಪ್ರದಕ್ಷಿಣ ಪಥವನ್ನು ಒಳಗೊಳ್ಳುವಂತಿರುವ ಎರಡನೆಯ ಕೋಶ, ಇವೆಲ್ಲವನ್ನೂ ಸಮಾನಾಂತರದಲ್ಲಿ ಸುತ್ತುವರಿದಂತೆ ಹೊರಸುತ್ತುಗೋಡೆ-ಇವೂ ಹೀಗೇ ಇರುತ್ತವೆ. ಈ ಎಲ್ಲ ಭಾಗಗಳೂ ಅದೇ ಗಜಪೃಷ್ಠ ವಿನ್ಯಾಸದ ಎತ್ತರದ ಆದಿಷ್ಠಾನದ ಮೇಲೆ ನಿಂತಿವೆ. ಹೊರಸುತ್ತಿನಲ್ಲಿ ಗೋಡೆಯ ಬದಲು ಕಂಬಗಳಷ್ಟೇ ಇದ್ದರೂ ಒಳ ಸುತ್ತುಗಳು ಭದ್ರಗೋಡೆಯವಾಗಿವೆ. ಇವುಗಳಲ್ಲಿ ಅಲ್ಲಲ್ಲಿ ಜಾಲಂಧ್ರಗಳಿವೆ. ಎರಡನೆಯ ಸುತ್ತಿನ ಹೊರಮೈಯಲ್ಲಿ ದೇವಕೋಷ್ಠಗಳುಂಟು. ದೇವಾಲಯದ ಮುಂಭಾಗದಲ್ಲಿ ಎರಡು ಪಕ್ಕಗಳಲ್ಲಿ ಪಾವಟಿಗೆಗಳಿವೆ. ದ್ವಾರದ ಮುಂದಿನ ಆರ್ಧ ಮಂಟಪಕ್ಕೆ ಒಯ್ಯುವಂತೆ ಇವನ್ನು ರಚಿಸಲಾಗಿದೆ. ಮೂರುಸುತ್ತುಗಳಿಗೂ ಬೇರೆಬೇರೆಯಾಗಿ ಬೇರೆಬೇರೆ ಮಟ್ಟಗಳಲ್ಲಿ ಚಾವಣಿಗಳಿವೆ. ಮಧ್ಯದ ಚಾವಣಿ ಮಟ್ಟಸವಾದ್ದು. ಇತರ ಎರಡು ಇಳಿಜಾರಾಗಿವೆ. ಗರ್ಭಗೃಹದ ನೇರದಲ್ಲಿ ಚಾವಣಿಯ ಮೇಲುಗಡೆ ಒಂದು ಶಿಖರವುಂಟು. ಆಕೃತಿಯಲ್ಲಿ ಸರಳವಾಗಿರುವ, ಈ ದೇವಾಲಯದ ಗಾತ್ರಕ್ಕೆ ಸಣ್ಣದೆನಿಸುವ ಈ ಶಿಖರ ದೇವಾಲಯ ರಚನೆಯ ಕಾಲಕ್ಕಿಂತ ಸ್ವಲ್ಪ ಅನಂತರದ್ದಿರಬಹುದೆಂದೂ ಆದರೂ ನಾಗರ ಸಂಪ್ರದಾಯದ ಶಿಖರಗಳ ಉಗಮಾವಸ್ಥೆಗೆ ಸೇರಿದ್ದೆಂದೂ ಉಹಿಸಲಾಗಿದೆ.

ಐಹೊಳೆಯ ಇನ್ನೊಂದು ದೇವಾಲಯ ಹುಚ್ಚಮಲ್ಲಿ ಗುಡಿ. ಇದು ಆಯಾಕಾರದ ತಳವಿನ್ಯಾಸದ ಕಟ್ಟಡ. ಆದರೆ ಇದರಲ್ಲಿ ದೇವಾಲಯದ ವಿವಿಧಾಂಗಗಳು ಹೆಚ್ಚು ಕಡಿಮೆ ರೂಪುಗೊಂಡಿವೆ. ಒಳಗೆ ಗರ್ಭಗೃಹ, ಅರೆಬರೆ ಅಂತರಾಳ, ಮಧ್ಯಮಂಟಪ ಮತ್ತು ಮುಂದೆ ಮುಖಮಂಟಪವಲ್ಲದೆ, ಗರ್ಭಗುಡಿಯ ಮೇಲೆ ನಾಗರ ಶೈಲಿಯ ಶಿಖರವೂ ಇದೆ. ಶಿಖರರಹಿತವಾದ, ಆದರೆ ಎರಡನೆಯ ಅಂತಸ್ತುಳ್ಳ, ಸುಮಾರು ಇದೇ ವಿನ್ಯಾಸದ ಇನ್ನೊಂದು ದೇವಾಲಯವೆಂದರೆ ಶಾಸನಪ್ರಸಿದ್ಧವಾದ ಮೇಗುತಿ. ಇದು ಕ್ರಿ.ಶ.634ರಲ್ಲಿ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕಟ್ಟಿದ್ದು. ಕೊಂತಿಗುಡಿ, ಲಾಡಖಾನ್ ಮೊದಲಾದ ಘಟ್ಟಗಳಲ್ಲಿ ಬೆಳೆಯುತ್ತಿದ್ದ ಹಿಂದೂ ಜೈನ ದೇವಾಲಯಗಳು ಪ್ರಾಯಶಃ ಕ್ರಿ.ಶ. 6ನೆಯ ಶತಮಾನದ ಕೊನೆಯ ಅಥವಾ 7ನೆಯ ಶತಮಾನದ ಮೊದಲ ಭಾಗಕ್ಕೆ ಹಿಂದೂ ಪೂಜಾ ಮತ್ತು ಇತರ ಧಾರ್ಮಿಕ ಆಚಾರಗಳಿಗೆ ಅನುಕೂಲವಾದಂಥ ವಾಸ್ತುರೂಪವನ್ನು ತಳೆಯಲಾರಂಭಿಸಿದುವು. ಈ ಬೆಳವಣಿಗೆಯಲ್ಲಿ ಚಾಳುಕ್ಯ ನೆಲದಲ್ಲೇ ಎರಡು ಕವಲುಗಳನ್ನು ಕಾಣಬಹುದು. ಒಂದು ದ್ರಾವಿಡ, ಮತ್ತೊಂದು ನಾಗರ. ಈ ಎರಡು ರೀತಿಗಳೂ ಅವುಗಳ ಶುದ್ಧ ರೂಪಗಳಲ್ಲಿ ಕೆಲವು ವಿಶಿಷ್ಟಾಂಶಗಳನ್ನು ಒಳಗೊಂಡಿರುತ್ತವೆ. ಶಿಖರದ ರಚನೆಯಲ್ಲಿಯ ವ್ಯತ್ಯಾಸವನ್ನು ಮುಖ್ಯವಾಗಿ ಪರಿಗಣಿಸಬಹುದು. ದ್ರಾವಿಡ ಶೈಲಿಯಲ್ಲಿ ಇದು ಗರ್ಭಗುಡಿಯ ಮೇಲೆ ಮೆಟ್ಟಲು ಮೆಟ್ಟಲಾಗಿ ಮೇಲೆದ್ದಿರುತ್ತದೆ. ಪ್ರತಿಯೊಂದು ಏರುಮೆಟ್ಟಿಲು ಅಥವಾ ಘಟ್ಟವನ್ನು ತಳ ಎಂದು ನಿರ್ದೇಶಿಸಿದಲ್ಲಿ, ಪ್ರತಿತಳವೂ ಕೆಳ ತಳದ, ಎಂದರೆ ಮುಖ್ಯ ಗರ್ಭಗುಡಿಯ, ಪ್ರತಿರೂಪವೇ ಆಗಿರುತ್ತದೆ.; ಆದರೆ ಮೇಲೆ ಹೋದಂತೆ ಇದು ಚಿಕ್ಕದಾಗುತ್ತದೆ. ಶಿಖರದ ಮೇಲ್ಭಾಗದಲ್ಲಿ ಗ್ರೀವ ಮತ್ತು ಕಳಶ ಇರುತ್ತವೆ. ಈ ಶಿಖರದ ವಿನ್ಯಾಸದಲ್ಲಿ ಅಡ್ಡ ಸಮಾನಾಂತರ ಗೆರೆಗಳಿಗೆ ಪ್ರಾಧಾನ್ಯ. ನಾಗರ ಶೈಲಿಯಲ್ಲೂ ಗರ್ಭಗುಡಿಯ ಶಿಖರ ಮೇಲೆ ಇರುವುದಾದರೂ ಅದು ಮೇಲೆ ಹೋದಂತೆಲ್ಲ ಸ್ವಲ್ಪವೇ ಬಾಗುಳ್ಳ ನೇರ ಸಮಾನಾಂತರ ಪಟ್ಟಿಕೆಗಳಿಂದ ಕೂಡಿದ್ದಾಗಿರುತ್ತದೆ. ಇಲ್ಲಿ ಕೆಲವು ಸಲ ಮೂಲೆಗಳಲ್ಲಿ ಚಿಕ್ಕ ಆಮಲಕಗಳನ್ನಿಟ್ಟಿರುವುದರಿಂದ ಇಲ್ಲೂ ಅಡ್ಡ ಸ್ತರಗಳ ಭಾವನೆ ಮೂಡುವುದಾದರೂ ನೇರ ಏರು ರೇಖೆಗಳೇ ವಿನ್ಯಾಸದಲ್ಲಿ ಪ್ರಧಾನವಾಗಿ ಎದ್ದು ಕಾಣುತ್ತವೆ. ಇಲ್ಲಿ ನೇರ ಸಮಾನಾಂತರ ಗೆರೆಗಳಿಗೆ ಪ್ರಾಧಾನ್ಯ. ಶಿಖರದ ಮೇಲೆ ದೊಡ್ಡ ಕಲ್ಲಿನ ಮೇಲೆ ಕಡೆದ ಆಮಲಕವೂ ಅದರ ಮೇಲೆ ಸ್ತೂಪಿಯೂ ಇರುತ್ತವೆ. ಶಿಖರದ ಹೊರಮೈ ಅಲಂಕರಣವನ್ನು ಅನೇಕ ಚೈತ್ಯ ಗವಾಕ್ಷಿಗಳ ಸರಣಿಗಳಿಂದ ಮಾಡಲಾಗಿರುತ್ತದೆ. ಚಾಳುಕ್ಯ ವಾಸ್ತುಚರಿತ್ರೆಯಲ್ಲಿ ನಾಗರರೀತಿಯ ಮೊದಲ ಘಟ್ಟಗಳು ಹಿಂದೆ ವಿವರಿಸಿರುವ ದುರ್ಗ ಮತ್ತು ಹುಚ್ಚಮಲ್ಲಿ ಗುಡಿಗಳಲ್ಲಿವೆಯಾದರೆ, ದ್ರಾವಿಡ ರೀತಿಯ ಮೊದಲ ಘಟ್ಟದ ಕೃತಿಗಳು ಐಹೊಳೆಯ ಒಂದೆರಡು ಚಿಕ್ಕ ಗುಡಿಗಳಲ್ಲೂ ಮಹಾಕೂಟ ಮತ್ತು ಬಾದಾಮಿಯ ಹಲವು ದೇವಾಲಯಗಳಲ್ಲೂ ಕಾಣುತ್ತವೆ. ಮಹಾಕೂಟದ ಮಹಾಕೂಟೇಶ್ವರ ದೇವಾಲಯ ಪ್ರಾಯಶಃ ಕ್ರಿ.ಶ. 600ರ ಸುಮಾರಿನದು. ಇದು ದ್ರಾವಿಡ ಸಂಪ್ರದಾಯದ ಕಟ್ಟಡ. ಬಾದಾಮಿಯ ಬೆಟ್ಟದಲ್ಲಿರುವ ಮಾಲೆಗಿತ್ತಿ ಶಿವಾಲಯದಲ್ಲಿ ದ್ರಾವಿಡ ಸಂಪ್ರದಾಯದ ವಿಶಿಷ್ಟಾಂಶಗಳೆಲ್ಲ ರೂಪುಗೊಂಡಿವೆ. ಚೌಕಾಕಾರದ ಗರ್ಭಗೃಹ, ಮಧ್ಯಮಂಟಪ ಮತ್ತು ಮುಖಮಂಟಪಗಳುಳ್ಳ ಈ ಗುಡಿಯ ರಚನೆಯಲ್ಲಿ ದಪ್ಪ ಕಂಬಗಳು, ಗೋಡೆಗಳು ಮುಂತಾದವುಗಳ ಉಪಯೋಗವಲ್ಲದೆ ಹೊರ ಅಲಂಕರಣದಲ್ಲಿ ಇರುವ ಸೀಮಿತ ವಾಸ್ತು ಶಿಲ್ಪ ರೂಪಗಳು, ಅವುಗಳ ನಿರೂಪಣೆಯಲ್ಲಿ ಕಂಡುಬರುವ ಹೊಸತನದ ಹುರುಪು-ಇವು ಇದೊಂದು ಆರಂಭದ ಘಟ್ಟದ ಕೃತಿಯೆಂದು ಸಾರುತ್ತವೆ. ಆದರೆ ಗರ್ಭಗುಡಿಯ ಮೇಲಿನ ಶಿಖರದಲ್ಲಿ ದ್ರಾವಿಡ ಸಂಪ್ರದಾಯದ ಎಲ್ಲ ಅಂಶಗಳು ರೂಪುಗೊಂಡಿವೆ. ದ್ರಾವಿಡ ಶೈಲಿಯ ಶಿಖರದ ಪ್ರಥಮ ಸಂಪೂರ್ಣ ರೂಪವನ್ನು ಇಲ್ಲಿ ಕಾಣಬಹುದು.

ಆಲಂಪುರದ ದೇವಾಲಯಗಳು ನಾಗರಸಂಪ್ರದಾಯದವು. ಇವುಗಳಲ್ಲಿ ಸಾಮಾನ್ಯವಾಗಿ ಗರ್ಭಗುಡಿ, ಮಹಾಮಂಟಪ ಮತ್ತು ಮುಖಮಂಟಪಗಳಷ್ಟೇ ಇವೆ. ಗರ್ಭಗೃಹದ ಮೇಲೆ ನೇರ ಬಾಗಿನ ಶಿಖರವಿರುತ್ತದೆ. ಅಲ್ಲಿಯ ಸ್ವರ್ಗಬ್ರಹ್ಮ ದೇವಾಲಯ ಚಾಳುಕ್ಯ ವಿನಯಾದಿತ್ಯನ ಕಾಲದ್ದೆಂದು ಅಲ್ಲಿರುವ ಒಂದು ಶಾಸನದಿಂದ ತಿಳಿಯುತ್ತದೆ.

ಪಟ್ಟಕದಲ್ಲಿನ ದೇವಾಲಯಗಳು ಬಾದಾಮಿಯ ಚಾಳುಕ್ಯರ ಆಳ್ವಿಕೆಯ ಕೊನೆಯ ಘಟ್ಟದವು. ಅಲ್ಲಿರುವ ವಿರೂಪಾಕ್ಷ ದೇವಾಲಯ ಆ ಕಾಲದ ದೇವಾಲಯಗಳಲ್ಲಿ ಅತಿ ದೊಡ್ಡದು. ಚಾಳುಕ್ಯ ಇಮ್ಮಡಿ ವಿಕ್ರಮಾದಿತ್ಯನ ಪಟ್ಟದರಸಿ ಲೋಕ ಮಹಾದೇವಿ ಇದನ್ನು ಕಟ್ಟಿಸಿದಳೆಂದು (ಕ್ರಿ.ಶ. ಸು. 740) ಅಲ್ಲಿ ದೊರಕಿರುವ ಒಂದು ಶಾಸನದಿಂದ ತಿಳಿಯುತ್ತದೆ. ಆ ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಪ್ರದಕ್ಷಿಣಪಥ, ದೊಡ್ಡ ಸಭಾಮಂಟಪ, ಇದಕ್ಕೆ ಮೂರು ಕಡೆಗಳಿಂದ ಪ್ರವೇಶ ದ್ವಾರಗಳು, ಇವುಗಳ ಮುಂದೆ ಅರ್ಧ ಮಂಟಪಗಳು ಇವೆ. ಈ ಮುಖ್ಯ ಘಟಕದಿಂದ ಸ್ವಲ್ಪ ಬಿಟ್ಟಂತೆ ಮುಂಭಾಗದಲ್ಲಿ, ಒಂದು ಪ್ರತ್ಯೇಕ ನಂದಿಮಂಟಪ, ಇವೆಲ್ಲವನ್ನೂ ಒಳಗೊಳ್ಳುವಂತ ಬೃಹತ್ ಪ್ರಕಾರ, ಪ್ರಾಕಾರಕ್ಕೆ ಸೇರಿದಂತೆ ಉಪದೇವತೆಗಳಿಗೆ ಸಣ್ಣ ಗುಡಿಗಳು ಇವೆ. ಏರುವಿನ್ಯಾಸದಲ್ಲಿ ಎತ್ತರದ ಅಧಿಷ್ಠಾನ, ದೇವಕೋಷ್ಠಗಳು, ಜಾಲಂಧ್ರಗಳು ಮತ್ತು ಶಿಲ್ಪಗಳಿಂದಲಂಕೃತವಾದ ಭಿತ್ತಿ, ಮೇಲೆ ಕಪೋತ, ಕೂಟಶಾಲಗಳಿಂದಲಂಕೃತವಾದ ಹಾರ, ಗರ್ಭಗುಡಿಯ ಮೇಲೆ, ಸ್ತೂಪಿಯಿಂದಲಂಕೃತವಾದ, ಈ ಹಿಂದಿನ ಅಂಶಗಳನ್ನು ಅದೇ ಕ್ರಮದಲ್ಲಿ ಘಟ್ಟಘಟ್ಟಕ್ಕೆ ಚಿಕ್ಕದಾಗುವಂತೆ ಪುನರಾವರ್ತಿಸಿರುವ, ದ್ರಾವಿಡ ಶೈಲಿಯ ತ್ರಿತಳ ಶಿಖರ ಇವೆ. ಹೊರ ಪ್ರಾಕಾರದ ಪ್ರವೇಶದ್ವಾರದ ಮೇಲೆ ಒಂದು ಕುಬ್ಜಾಕಾರದ ಶಿಲಾಶಿಖರವೂ ಉಂಟು. ಇದು ಮುಂದೆ ದೇವಾಲಯದ ವೈಶಿಷ್ಟ್ಯವಾದ ಮಹಾದ್ವಾರ ಗೋಪುರದ ಬೆಳೆವಣಿಗೆಯ ಮೊಳಕೆಯೆನ್ನುವಂತಿದೆ. ವಿರೂಪಾಕ್ಷ ದೇವಾಲಯದ ವಾಸ್ತುವಿನ್ಯಾಸದಲ್ಲಿ ಕಂಡುಬರುವ ಉದ್ದ, ಅಗಲ, ಎತ್ತರಗಳ ಪ್ರಮಾಣಗಳ ಸಾಮರಸ್ಯ, ವಾಸ್ತು ಮತ್ತು ಶಿಲ್ಪಾಲಂಕರಣದಲ್ಲಿರುವ ಸುಂದರ ಸಹಯೋಗ-ಇವುಗಳಿಂದಾಗಿ ಈ ದೇವಾಲಯ ಚಾಳುಕ್ಯರ ಕಾಲದ ಉಚ್ಚತಮ ರಚನೆಯೆಂದು ಹೆಸರಾಗಿದೆ. ಪಟ್ಟದಕಲ್ಲಿನಲ್ಲಿ ವಿರೂಪಾಕ್ಷ ದೇವಸ್ಥಾನವಲ್ಲದೆ ದ್ರಾವಿಡ ಸಂಪ್ರದಾಯಕ್ಕೆ ಸೇರಿದ ಮಲ್ಲಿಕಾರ್ಜುನ ಇತ್ಯಾದಿ ದೇವಾಲಯಗಳು ಮತ್ತು ನಾಗರ ಸಂಪ್ರದಾಯದ ಕಾಶಿ ವಿಶ್ವೇಶ್ವರ, ಪಾಪನಾಥ, ಗಳಗನಾಥ ಮುಂತಾದ ದೇಗುಲಗಳು ಇವೆ. ಇಲ್ಲಿಯ ದೇವಾಲಯಗಳೆಲ್ಲವೂ-ನಾಗರವಾಗಲಿ, ದ್ರಾವಿಡವಾಗಲಿ-ದೇವಾಲಯಗಳಿಗೆ ವಿಶಿಷ್ಟವಾದ ಸಕಲಾಂಗಗಳಿಂದ ಪರಿಪೂರ್ಣವಾಗಿವೆ. ಇವು ದೇವಾಲಯ ರಚನಾ ವಸ್ತುವಿನ ಪ್ರಾಥಮಿಕ ಹಂತಗಳಾದ ಕೊಂತಿಗುಡಿ, ಲಾಡಖಾನ್ ಮುಂತಾದ ಗುಡಿಗಳಿಂದಲೇ ಬೆಳೆದು ಬಂದವಾದರೂ ಆಕಾರದಲ್ಲಿ, ಸೌಂದರ್ಯದಲ್ಲಿ, ಭದ್ರತೆಯಲ್ಲಿ ಅವಕ್ಕಿಂತ ಅತ್ಯುಚ್ಚ ಮಟ್ಟದವಾಗಿವೆ. ಸುಮಾರು 2 ಶತಮಾನಗಳಲ್ಲಿ ಚಾಳುಕ್ಯ ಸಾಮ್ರಾಜ್ಯದ ಆಶ್ರಯದಲ್ಲಿ ಅಲ್ಲಿನ ಸ್ಥಾಪತಿಗಳು ಶಿಲಾದೇವಾಲಯ ರಚನೆಯಲ್ಲಿ ತೋರಿಸಿರುವ ಪ್ರಯೋಗಶೀಲತೆ ಮತ್ತು ಉತ್ತಮ ಸಾಧನೆಗಳ ಕುರುಹಾಗಿ ನಿಂತಿವೆ. ಇಲ್ಲಿ ಬೆಳೆದ ದ್ರಾವಿಡ ಮತ್ತು ನಾಗರ ದೇವಾಲಯ ರೂಪಗಳೇ ಮುಂದೆ ಭಾರತದ ಎಲ್ಲೆಡೆಗಳಲ್ಲಿ ಕಟ್ಟಿದ ದೇಗುಲಗಳಿಗೂ ಮಾತ್ರವಲ್ಲದೆ ಆಗ್ನೇಯ ಏಷ್ಯದ ಹಲವು ದೇಶಗಳಲ್ಲಿ ಕಟ್ಟಲಾಗಿರುವ ದೇವಾಲಯಗಳ ಸ್ವರೂಪಕ್ಕೆ ಮೂಲ ಮಾದರಿಯನ್ನು ಒದಗಿಸಿದುವೆಂದು ಅನೇಕ ವಿದ್ವಾಂಸರು ಸಕಾರಣವಾಗಿ ಊಹಿಸಿದ್ದಾರೆ.

ಶಿಲ್ಪ : ಬಾದಾಮಿಯ ಚಾಳುಕ್ಯರ ಕಾಲದ ಶಿಲ್ಪಕೃತಿಗಳೆಲ್ಲ ಶಿಲೆಯವು. ಐಹೊಳೆಯ ಮೇಗುಟಿ ದೇವಾಲಯದ ಸುತ್ತು ಪೌಳಿಯ ಬಾಗಿಲ ಬಳಿ ನಿಂತಿರುವ ಬಹು ಸವೆದಿರುವ ಒಂದು ದ್ವಾರಪಾಲ ವಿಗ್ರಹ ಪ್ರಾಯಶಃ ಈಗ ಉಳಿದಿರುವ ಏಕೈಕ ಪೂರ್ಣಶಿಲ್ಪ. ಮಿಕ್ಕವೆಲ್ಲ ವಾಸ್ತುಕೃತಿಗಳಿಗೆ ಪೋಷಕವಾಗಿ ಗುಹೆಗಳ ಮತ್ತು ದೇವಾಲಯಗಳ ಗೋಡೆ, ಚಾವಣಿ ಮತ್ತು ಕಂಬಗಳ ಮೇಲೆ ಕಂಡರಿಸಿರುವ ಉಬ್ಬುಶಿಲ್ಪಗಳು. ಪಟ್ಟದಕಲ್ಲಿನ ದೇವಾಲಯಗಳು, ಐಹೊಳೆಯ ದುರ್ಗ ಗುಡಿ ಮುಂತಾದೆಡೆಗಳಲ್ಲಿರುವ ಕೆಲವು ಶಿಲ್ಪಗಳು ಹಲವು ಅಂಗುಲಗಳಷ್ಟೇ ಉದ್ದಗಲವಿದ್ದರೆ, ಬಾದಾಮಿಯ ಮೂರನೆಯ ಗುಹೆಯೇ ಮುಂತಾದ ಎಡೆಗಳಲ್ಲಿ ಸುಮಾರು 10ಗಿಂತ ಎತ್ತರವಾಗಿವೆ. ಗಾತ್ರ, ಹಿನ್ನಲೆ ಮುಂತಾದ ಅಂಶಗಳಿಗೆ ಅನುಗುಣವಾಗಿ ನಿಮ್ನ, ಅರೆ ಅಥವಾ ಅತಿ ಉಬ್ಬಿನ ಕೃತಿಗಳಾಗಿವೆ.

ಈ ಕಾಲದ ಶಿಲ್ಪಗಳು ಬಹುತೇಕ ಧಾರ್ಮಿಕವಾದವು. ಶಿವ, ವಿಷ್ಣು ಮುಂತಾದ ದೇವರುಗಳ ವಿವಿಧ ಅವತಾರಗಳು, ಲೀಲಾಮೂರ್ತಿಗಳು, ಗಣಪತಿ, ಕುಮಾರ, ಬ್ರಹ್ಮ, ದುರ್ಗ, ಮಾತೃಕೆಯರು, ಗ್ರಹಗಳು, ದಿಕ್ಪಾಲಕರು, ಯಕ್ಷ, ಗಣ, ಗಂಧರ್ವ, ಕಿನ್ನರ ಮುಂತಾದ ದೇವೋಪದೇವತೆಗಳ ಮೂರ್ತಿಗಳು ಇವೆ. ಜೈನ ಅಥವಾ ಬೌದ್ಧ ವಾಸ್ತುಕೃತಿಗಳಲ್ಲಿ ತದ್ಧರ್ಮೀಯ ಶಿಲ್ಪಗಳಿರುತ್ತವೆ. ಬಾದಾಮಿ, ಪಟ್ಟದಕಲ್ಲು ಮುಂತಾದೆಡೆಗಳಲ್ಲಿ ರಾಮಾಯಣ, ಭಾರತ ಮತ್ತು ಭಾಗವತ ಕಥಾನಿರೂಪಣೆಯ ಪಟ್ಟಿಕೆಗಳುಂಟು. ಹಲವಾರು ದೇವಾಲಯಗಳಲ್ಲಿ ಸುಂದರ ಸ್ತ್ರೀವಿಗ್ರಹಗಳೂ ಕಾಮಕೇಳೀನಿರತ ಮಿಥುನವಿಗ್ರಹಗಳೂ ಇವೆ. ಎಲ್ಲೋ ಕೆಲವು ಕಡೆ ನೌಕಾಯಾನ ಮುಂತಾದ ಲೌಕಿಕ ವಿಷಯಗಳನ್ನು ಕುರಿತ ಶಿಲ್ಪಗಳನ್ನು ಕಾಣಬಹುದು. ಕಥಾನಿರೂಪಣೆಯ ಪಟ್ಟಿಕೆಗಳಲ್ಲಿ ಮಾತ್ರ ಕಥೆಯ ಓಟವನ್ನು ಅನುಸರಿಸಿ ಹಲವು ಘಟನೆಗಳನ್ನು ಅನುಕ್ರಮವಾಗಿ ನಿರೂಪಿಸಲಾಗಿದೆ. ಇವು ವಿನಾ ಮಿಕ್ಕ ಶಿಲ್ಪಗಳಲ್ಲಿ ಬಹು ಸಂಖ್ಯೆಯವು ಏಕವಿಷಯಕ ಸ್ವತಂತ್ರ ಶಿಲ್ಪಗಳು; ಇವುಗಳಲ್ಲಿ ಒಂದು ಶಿಲ್ಪಕ್ಕೂ ಅದರ ಪಕ್ಕದ್ದಕ್ಕೂ ಯಾವ ಸಂಬಂಧವು ಇರುವುದಿಲ್ಲ, ವಿಷ್ಣು, ಶಿವ ಮುಂತಾದ ಜೀವಿಶಿಲ್ಪ ನಿರೂಪಣೆಗಳಲ್ಲಿ ಮುಖ್ಯ ದೇವಮೂರ್ತಿಯನ್ನು ಪ್ರಧಾನವಾಗಿ ತೋರಿಸಿದ್ದು ಇತರ ಅನುಚರ ಅಥವಾ ಸಹವಿಗ್ರಹಗಳನ್ನು ಪ್ರಧಾನ ಮೂರ್ತಿಯ ಗಾತ್ರಕ್ಕಿಂತ ಬಹಳ ಚಿಕ್ಕದಾಗಿ ಶಿಲ್ಪಿಸಿ, ಪ್ರೇಕ್ಷಕರನ್ನು ಮುಖ್ಯ ವಿಷಯದತ್ತ ಸೆಳೆಯುವುದು ಚಾಳುಕ್ಯ ಶಿಲ್ಪ ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಅನುಸರಿಸಲಾಗಿರುವ ತಂತ್ರ. ತುಂಬುಗಲ್ಲದ ದುಂಡುಮುಖ, ಮೀನುಗಣ್ಣು, ನಗೆ ತುಂಬಿದ ದಪ್ಪ ತುಟಿ, ವಿಶಾಲ ಎದೆ. ದೃಢಕಾಯ, ಹಿತಮಿತ ಅಲಂಕಾರ, ಇರುವ ಕೆಲವೇ ಅಭರಣಗಳಲ್ಲಿ ವೈವಿಧ್ಯ, ಕೌಶಲ-ಇವು ಆ ಕಾಲದ ಶಿಲ್ಪದ ಕೆಲವು ವಿಶಿಷ್ಟ ಲಕ್ಷಣಗಳು. ಆದರೂ ಕಾಲ ಮತ್ತು ವಿಷಯಾನುಗುಣವಾಗಿ ಹಲವೆಡೆ ವ್ಯತ್ಯಾಸಗಳು ಕಂಡುಬರುತ್ತವೆ. ಚಾಳುಕ್ಯ ಕಾಲಕ್ಕೆ ಹಿಂದೆ ಶಿಲಾಶಿಲ್ಪಕಲೆ ಇಲ್ಲಿ ಅಷ್ಟಾಗಿ ಬೆಳೆಯದೆ ಇದ್ದು, ಆ ಕಾಲದಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದ್ದದ್ದರಿಂದ ಇತರ ಪ್ರದೇಶಗಳ ಶಿಲ್ಪಗಳಿಗೆ ಇಲ್ಲಿ ಪ್ರೋತ್ಸಾಹ ಸಿಕ್ಕಿರಬಹುದು. ಆ ಹೊಸ ಹುರುಪಿನ ಕಾಲದಲ್ಲಿ ಇಲ್ಲಿಯ ಶಿಲ್ಪಿಗಳೂ ಇತರ ಸಮಕಾಲೀನ ಶಿಲ್ಪಸಂಪ್ರದಾಯಗಳ ಅಂಶಗಳನ್ನು ಅಳವಡಿಸುವ ಪ್ರಯತ್ನ ಮಾಡಿದಂತೆ ತೋರುತ್ತದೆ. ಆದ್ದರಿಂದ ಸುಮಾರು ಎರಡು ಮೂರು ಶತಮಾನಗಳ ಚಾಳುಕ್ಯ ಶಿಲ್ಪಕಲೆಯಲ್ಲಿ ಅನೇಕ ಭಿನ್ನ ಶೈಲಿಗಳ ಸಂಗಮವಾಯಿತು. ಅಲ್ಲದೆ ಈ ಪ್ರದೇಶದ ಆಶಯಗಳಿಗೆ ಅನುಗುಣವಾಗಿ ಬೆಳೆಸಿದ ಸ್ಥಳಿಯ ಶೈಲಿಯೂ ಇಲ್ಲಿ ಕಂಡುಬಂದಿದೆ. ಒಟ್ಟಿನ ಶಿಲ್ಪರಾಶಿಯಲ್ಲಿ ಅನೇಕ ಉಪಪ್ರಭೇದಗಳನ್ನು ಗುರುತಿಸಬಹುದು. ಶಿಲ್ಪಿಗಳ ವ್ಯಕ್ತಿಗತ ಪ್ರತಿಭೆಯ ಮಟ್ಟದ ಅಂತರಗಳೂ ಈ ವೈವಿಧ್ಯಕ್ಕೆ ಸಹಾಯಕವಾಗಿವೆ.

ಲಾಡಖಾನ್, ಕೊಂತಿಗುಡಿ, ಹುಚ್ಚಮಲ್ಲಿ ಗುಡಿಗಳಲ್ಲಿರುವ ಶಿಲ್ಪಗಳು ಪ್ರಾಯಶಃ ಆ ಕಾಲದ ಮೊದಲ ಶಿಲ್ಪಗಳನ್ನು ಸೂಚಿಸುತ್ತದೆ. ಹುಚ್ಚಮಲ್ಲಿ ಗುಡಿಯ ಮಂಟಪದ ಚಾವಣಿಯ ಮೇಲೆ ಕೆತ್ತಿರುವ ಕಾರ್ತಿಕೇಯ ವಿಗ್ರಹ ಆ ಕಾಲದ ದೇವಶಿಲ್ಪಗಳಲ್ಲಿ ಅತ್ಯುತ್ತಮವಾದವುಗಳಲ್ಲೊಂದು. ಇತರ ಸಮಕಾಲೀನ ಶಿಲ್ಪಗಳಂತೆ ಇಲ್ಲೂ ದೇವಮೂರ್ತಿಯ ನಿರೂಪಣೆ ಬಹು ಸರಳ. ಅತಿ ಕಡಿಮೆ ಅಲಂಕರಣ, ಸುಮಾರು ದೀರ್ಘವೃತ್ತಾಕಾರದ ಹಸನ್ಮುಖ, ನೀಳವಾದ ತೆಳು ಶರೀರ-ಇವುಗಳಿಂದಾಗಿ ನಿರೂಪಣೆಯಲ್ಲಿ ದೇಹಶಕ್ತಿಗಿಂತ ದೈವೀಶಕ್ತಿ ಮತ್ತು ಕಳೆ ಎದ್ದು ಕಾಣುತ್ತವೆ. ಗುಪ್ತರ ಶೈಲಿಯ ಪ್ರಭಾವವನ್ನು ಇಲ್ಲಿ ಗುರುತಿಸಬಹುದು. ಇದೇ ಸರಳತೆ, ಕಿರುನಗೆ, ಸಹಜ ಅಂಗಾಂಗ ಪ್ರಮಾಣ-ಇವು ದೇವನ ವಾಹನವಾದ ನವಿಲಿನಲ್ಲೂ ಕಂಡುಬರುತ್ತವೆ. ಸಮತೋಲವನ್ನು ಸಾಧಿಸಲು ಮಾಡಿರುವ ಗಂಧರ್ವ ಶಿಲ್ಪಗಳ ಜೋಡಣೆ ಈ ಕೃತಿಗೆ ಶೋಭೆಯನ್ನಿತ್ತಿದೆ. ಅಲ್ಲದೆ ಇವನೂ ದೇವನ ಗಾತ್ರಕ್ಕೇ ಮಾಡಿದೆ; ಮುಂದೆ ಶಿಲ್ಪದಲ್ಲಿ ಬೆಳೆದ ತಂತ್ರ ಇನ್ನೂ ಸ್ಥಿರೀಕೃತವಾಗಿಲ್ಲದಿದ್ದ ಕಾಲವನ್ನು ಇದು ಸೂಚಿಸುತ್ತವೆ. ನವಿಲಿನ ಮೇಲೆ ಆಕಾಶದಲ್ಲಿ ಅನಾಯಾಸವಾಗಿ ಹಾರುತ್ತಿರುವ ದೇವಗಂಧರ್ವಾದಿಗಳು, ಕೆಳಗೆ ಮೃತನಾಗಿ ನಿಶ್ಚಲನಾಗಿ ಜಡನಾಗಿ ಬಿದ್ದಿರುವ ರಾಕ್ಷಸ-ಪರಸ್ವರ ವಿರುದ್ಧ ಭಾವಗಳನ್ನು ಪರಿಣಾಮಕಾರಿಯಾಗಿ ಒಂದೆಡೆಯೇ ಮೂಡಿಸಿರುವುದು ಶಿಲ್ಪಿಯ ಜಾಣ್ಮೆಯನ್ನು ತೋರಿಸುತ್ತದೆ. ರಾಕ್ಷಸತ್ವದ ಅವಸಾನ, ದೇವತ್ವದ ಸುಲಭ ಜಯ-ಇವನ್ನು ಇದಕ್ಕಿಂತ ಚೆನ್ನಾಗಿ ಶಿಲ್ಪಿಸುವುದು ಸಾಧ್ಯವಿಲ್ಲವೆಂಬಷ್ಟು ಮಟ್ಟಿಗೆ ಇದು ಯಶಸ್ವಿಯಾಗಿದೆ. ಚಾಳುಕ್ಯ ಶಿಲ್ಪಗಳಲ್ಲಿ ಇದೊಂದು ಅಪ್ರತಿಮ ಕೃತಿ. ಈ ಶಿಲ್ಪದಲ್ಲಿ ಕಂಡುಬರುವ ಸರಳತೆ ಮತ್ತು ಸಹಜತೆಗಳನ್ನು ಕೊಂತಿಗುಡಿಯಲ್ಲಿರುವ ಕೆಲವು ಮಿಥುನ ಶಿಲ್ಪಗಳಲ್ಲೂ ಕಾಣಬಹುದು. ಕಾಮಕೇಳೀರತರಾದ ದಂಪತಿಗಳ ಒಂದು ಶಿಲ್ಪದಲ್ಲಿ ಕಾಮಪೂರಿತನಾದ, ಆದರೂ ಹೆಣ್ಣಿಗೆ ಧೈರ್ಯ ನೀಡುವಂತಿರುವ ಪ್ರೌಢನ ಭಂಗಿ, ನಾಚಿಕೆಯಿಂದ ಬೆದರಿದಂತೆ ಮುದುರಿಕೊಂಡಿದ್ದರೂ ಹೃದಯದೊಳಗಿನ ಸಂತಸವನ್ನು ಮುಖದಲ್ಲಿ ವ್ಯಕ್ತಪಡಿಸುತ್ತಿರುವ ಪ್ರೌಢೆ-ಇವರು ಮನೋಜ್ಞವಾಗಿ ಶಿಲ್ಪಿತವಾಗಿದ್ದಾರೆ.

ಬಾದಾಮಿಯ ಗುಹೆಯ ಮತ್ತು ಸ್ವಲ್ಪಮಟ್ಟಿಗೆ ದುರ್ಗ ದೇವಾಲಯದ ಶಿಲ್ಪಗಳು ಹಾರುತ್ತಿರುವ ಗಂಧರ್ವನೇ ಮುಂತಾದ, ಗುಪ್ತ ಶೈಲಿಯ, ಸರಳ ಶಿಲ್ಪಗಳನ್ನು ಒಳಗೊಂಡಿದ್ದರೂ ಅಲ್ಲಿಯ ದೇವಮೂರ್ತಿಗಳಲ್ಲಿ ಹೆಚ್ಚಿನ ದೇಹಪುಷ್ಟಿ. ಶಕ್ತಿ, ನಿರೂಪಣೆಯಲ್ಲಿ ಸ್ನಿಗ್ಧತೆ ಮತ್ತು ಸಂಪ್ರದಾಯಬದ್ಧತೆ ಕಂಡುಬರುತ್ತವೆ. ಪ್ರಾಯಶಃ ಈ ಕಾಲದಲ್ಲಿ ರೂಪುಗೊಳ್ಳುತ್ತಿದ್ದ, ಚಾಳುಕ್ಯರದೇ ಆದ, ಸ್ಥಳೀಯ ಶೈಲಿಯ ಬೆಳವಣಿಗೆಯ ಮೊದಲ ಹಂತಗಳನ್ನು ಇವು ಸೂಚಿಸುತ್ತವೆ. ಉದಾಹರಣೆಗೆ ಬಾದಾಮಿಯ ಒಂದನೆಯ ಗುಹೆಯಲ್ಲಿರುವ ನಟರಾಜನನ್ನು ಗಮನಿಸಬಹುದು. ಲಲಿತಭಂಗಿಯಲ್ಲಿರುವ ದೇವ ಷೋಡಶಬಾಹುವಾಗಿದ್ದಾನೆ. ಆದರೆ ಬಾಹುಗಳ ನಿರೂಪಣೆಯಲ್ಲಿ ಸಾಮರಸ್ಯವಿಲ್ಲ. ಮುಂದಿನ ಎರಡು ಕೈಗಳನ್ನಷ್ಟೇ ಉಳಿಸಿಕೊಂಡು ದೃಷ್ಟಿಸಿದರೆ ಇದೊಂದು ಅಪೂರ್ವ ಸೌಂದರ್ಯದ ಶಿಲ್ಪ. ಆದರೆ ಇಲ್ಲಿ ಸೌಂದರ್ಯಕ್ಕಿಂತ ಶಾಸ್ತ್ರಕ್ಕೆ ಹೆಚ್ಚು ಗಮನವಿತ್ತಿರುವುದು ಕಂಡುಬರುತ್ತದೆ. ಪೌರಾಣಿಕ ಹಿಂದೂಧರ್ಮ ದಕ್ಷಿಣ ಭಾರತದಲ್ಲಿ ಪ್ರಾಯಶಃ ಮೊಟ್ಟಮೊದಲಿಗೆ ಪ್ರಭಾವ ಗಳಿಸುತ್ತಿದ್ದ ಈ ಕಾಲದಲ್ಲಿ ದೇವರನ್ನು ಅವನ ಸಕಲ ಶಕ್ತಿ, ಸಾಮಥ್ರ್ಯ ಮತ್ತು ಔನ್ನತ್ಯದ ಭಾವಗಳೊಡನೆ ರೂಪಿಸುವ ಪ್ರಯತ್ನ ಇಲ್ಲಿ ನಡೆದಿದೆಯೆಂದು ಊಹಿಸಬಹುದು. ಅಲ್ಲದೆ ಮುಖ್ಯ ದೇವರನ್ನು ದೊಡ್ಡದಾಗಿ, ಆದರೆ ಪಕ್ಕದಲ್ಲಿರುವ ಗಣಪತಿ ಮತ್ತು ವಾದ್ಯಗಾರರನ್ನು ಬಹಳ ಚಿಕ್ಕದಾಗಿ ನಿರೂಪಿಸುವುದಕ್ಕೂ ದೇವಸಾರ್ವಭೌಮತ್ವ ಪ್ರದರ್ಶನದ ಉದ್ದೇಶವೇ ಕಾರಣವಿರಬಹುದು. ಬಾದಾಮಿಯ ಮೂರನೆಯ ಗುಹೆಯಲ್ಲಿರುವ ತ್ರಿವಿಕ್ರಮ ವಿಗ್ರಹದ ಶಿಲ್ಪದಲ್ಲೂ ಇದೇ ತಂತ್ರ ಅನುಸರಿಸಲಾಗಿದೆ. ನೆಲದಿಂದ ಮಾಡಿನವರೆಗೆ ನಿಂತ ಬೃಹನ್ಮೂರ್ತಿಯಿದು. ದಪ್ಪ ಕೈಕಾಲು, ವಿಶಾಲ ಎದೆ, ಆಯುಧಗಳನ್ನು ಭದ್ರವಾಗಿ ಹಿಡಿದಿರುವ ಭಂಗಿ, ಕಾಲನ್ನು ಆಗಸದತ್ತ ಎತ್ತಿ ನಿಲ್ಲಿಸಿರುವ ರೀತಿ-ಇವುಗಳಲ್ಲಿ ದೇವರ ಅಸಾಧಾರಣ ಬಲ ಎದ್ದುಕಾಣುತ್ತದೆ. ತ್ರಿವಿಕ್ರಮನ ಎದುರಿಗೆ ಉಳಿದ ಎಲ್ಲರೂ ವಾಮನರು ಎಂಬ ಭಾವನೆಯನ್ನು ಪಕ್ಕದಲ್ಲಿ ಇವನ ಸೇವೆಯಲ್ಲಿ ನಿರತರಾಗಿರುವ ಬಲಿ ಮತ್ತು ಸಹಚರರ ತೆಳು ಕುಬ್ಜಮೂರ್ತಿಗಳು ಸೂಚಿಸುವಂತಿದೆ. ಒಂದೊಂದು ಶಿಲ್ಪವೂ ನಾಟಕದ ಸ್ತಬ್ಧ ದೃಶ್ಯದಂತೆ ತೋರುತ್ತದೆ. ಈ ಶಿಲ್ಪಶೈಲಿ ಬಾದಾಮಿಯ ಚಾಳುಕ್ಯದ ಕಾಲದಲ್ಲೇ ಅಲ್ಲದೆ ಮುಂದೆ ರಾಷ್ಟ್ರಕೂಟರ ಕಾಲದಲ್ಲೂ ಮುಂದುವರಿಯಿತು.

ಆದರೂ ಈ ಧಾರ್ಮಿಕ ಚೌಕಟ್ಟಿನ ಮಿತಿಯಲ್ಲೇ ಹಲವೆಡೆ ವ್ಯಕ್ತಿಯ ಶಕ್ತಿಯ ಭಾವಗಳ ನಿರೂಪಣೆಯಲ್ಲಿ, ಶಿಲ್ಪವಿನ್ಯಾಸದಲ್ಲಿ, ಶಿಲ್ಪಿಗಳು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಿಸಿದ್ದಾರೆ. ಈ ದೃಷ್ಟಿಯಿಂದ ಐಹೊಳೆಯ ರಾವಣಫಡಿ ಗುಹೆಯಲ್ಲಿರುವ ಶಿಲ್ಪಗಳು ಅಮೋಘವಾದವು. ಅಲ್ಲಿಯ ನಟರಾಜ ವಿಗ್ರಹಕ್ಕೆ ಹತ್ತು ಕೈಗಳಿರುವುವಾದರೂ ಹಿಂದಿನ ಕೈಗಳು ಹಿನ್ನೆಲೆಯ ಪರದೆಯ ಮೇಲಿನ ಹಾರಗಳೋ ಎಂದು ಕಾಣುವಂತೆ ಮಾಡಿ, ದೇವರನ್ನು ಅಷ್ಟೇ ಪ್ರಧಾನವಾಗಿ ತೋರಿಸಿರುವ ಜಾಣ್ಮೆ, ವಿಗ್ರಹದ ಅಂಗಾಂಗಗಳ ಸಹಜ ಪ್ರಮಾಣ, ನೃತ್ಯಭಂಗಿಗೆ ಸಹಜವಾದ ಮೈಬಾಗುಗಳು ಮುಖದಲ್ಲಿ ಎದ್ದು ಕಾಣುವ ಭಾವತನ್ಮಯತೆ-ಇವೆಲ್ಲವೂ ಮೂರ್ತಿಯ ಕಳೆಯನ್ನು ಹೆಚ್ಚಿಸಿವೆ. ಈ ವಿಗ್ರಹದ ಅಕ್ಕಪಕ್ಕದಲ್ಲಿರುವ ಅಷ್ಟಮಾತೃಕೆಯರ ಮೂರ್ತಿಗಳು ಮುಖ್ಯಮೂರ್ತಿಗೂ ಒಂದು ಕೈ ಮಿಗಿಲಾಗಿವೆ. ಇವುಗಳಲ್ಲಿರುವ ಬಳುಕು, ಕೋಮಲತೆ, ಲಾಸ್ಯ ಮತ್ತು ಆಕರ್ಷಣೆ ಅದ್ಭುತವಾದವು. ಚಿತ್ರಕಲೆ : ಈ ಕಾಲದ ಚಿತ್ರಕಲೆಯ ಅವಶೇಷಗಳು ಬಾದಾಮಿಯ 3ನೆಯ ಗುಹೆಯಲ್ಲಿ ಕಂಡುಬಂದಿವೆ. 578ರಲ್ಲಿ ನಿರ್ಮಿತವಾದ ಈ ಗುಹೆ ಪ್ರಾಯಶಃ ಪೂರ್ಣವಾಗಿ ಚಿತ್ರಾಲಂಕೃತವಾಗಿದ್ದಿರಬೇಕೆಂದು ಅನೇಕ ಸಾಂದರ್ಭಿಕ ಸಾಕ್ಷ್ಯಗಳಿಂದ ಊಹಿಸಬಹುದು. ಈಗ ಉಳಿದಿರುವುದು ಕಪೋತದ ಒಳಭಾಗದಲ್ಲಿರುವ ಕೆಲವು ತುಣುಕುಗಳು ಮಾತ್ರ. ಇವು ಭಿತ್ತಿಚಿತ್ರಗಳು; ಅಜಂತದ ಚಿತ್ರಸಂಪ್ರದಾಯವನ್ನು ಹೋಲುತ್ತವೆ. ಆದರೂ ಅಜಂತ ಚಿತ್ರಗಳ ಗುಣಮಟ್ಟ ಇವುಗಳಲ್ಲಿಲ್ಲ ಎಂಬುದು ಕಲಾಭಿಜ್ಞರ ಅಭಿಪ್ರಾಯ, ಇವುಗಳ ಬಣ್ಣಗಳು ಬಹಳವಾಗಿ ಮಾಸಿಹೋಗಿರುವುದರಿಂದ ಇವು ಸ್ಪಷ್ಟವಾಗಿಲ್ಲ. ರಾಜರಾಣಿಯರು ಆಸ್ಥಾನದಲ್ಲಿ ತಮ್ಮ ಪರಿವಾರ ಮತ್ತು ಭೃತ್ಯವರ್ಗದೊಡನೆ ನೃತ್ಯವೀಕ್ಷಣೆ ಮಾಡುತ್ತಿರುವುದು, ಇಂದ್ರನ ಆಸ್ಥಾನ, ಆಕಾಶದಲ್ಲಿ ಸಂಚರಿಸುತ್ತಿರುವ ವಿದ್ಯಾಧರ ದಂಪತಿಗಳು ಮುಂತಾದ ಚಿತ್ರಗಳಿದ್ದಂತಿವೆ. ರಚನೆಯಲ್ಲಿ ಅಥವಾ ಅವು ಉಳಿದಿರುವ ಸ್ಥಿತಿಯಲ್ಲಿ ಈ ಚಿತ್ರಗಳು ಬಹು ಉತ್ತಮವಾಗಿ ಕಾಣದಿದ್ದರೂ, ಭಾರತದಲ್ಲಿ ಕಂಡುಬಂದಿರುವ ಹಿಂದೂ ದೇವಾಲಯದ ಭಿತ್ತಿಚಿತ್ರ ಸರಣಿಯಲ್ಲಿ ಇವೇ ಪ್ರಾಚೀನವಾದವೆಂಬ ಕಾರಣದಿಂದ ಇವಕ್ಕೆ ಪ್ರಾಮುಖ್ಯವಿದೆ. (ಎಸ್.ಎನ್.)