ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಾವುಂಡರಾಯ 2

ವಿಕಿಸೋರ್ಸ್ದಿಂದ

ಚಾವುಂಡರಾಯ 2

ಸು. 1025. ಲೋಕೋಪಕಾರ ಎಂಬಶಾಸ್ತ್ರ ಗ್ರಂಥದ ಕರ್ತೃ. ಕಾಶ್ಯಪಗೋತ್ರದ ಬ್ರಾಹ್ಮಣ. ತಂದೆ ಭಟ್ಟಪಾರ್ಯ, ತಾಯಿ ಮಲ್ಲಿಕಬ್ಬೆ. ಚಾವುಂಡರಾಯ ಚಾಲುಕ್ಯ ಚಕ್ರವರ್ತಿಯಾದ ಇಮ್ಮಡಿ ಜಯಸಿಂಹನಲ್ಲಿ ಸರ್ವಾಧಿಕಾರಿಯಾಗಿದ್ದನೆಂದೂ ಆತನಿಂದ 'ಮಹಾಬಳಿಯ ಗ್ರಾಹಕತನ ಪಡೆದನೆಂದೂ ಗ್ರಂಥದಿಂದ ತಿಳಿದುಬರುತ್ತದೆ. ಅಚಳಿತವಚನ, ಶಿಷ್ಟಕಲ್ಪದ್ರುಮ, ಜಯಬಂಧುನಂದನ, ದಾನವಿನೋದ, ಕಾವ್ಯವಿಳಾಸ-ಮೊದಲಾದುವು ಈತನಿಗಿದ್ದ ಬಿರುದುಗಳು.

ಲೋಕೋಪಕಾರ 12 ಆಶ್ವಾಸಗಳ ಗ್ರಂಥ. ಪಂಚಾಂಗಫಲ, ನವಪಟಲ, ವಾಸ್ತುವಿಚಾರ, ಉತ್ಪಾತಶಾಂತಿ, ಉದಕಾರ್ಗಳ, ವೃಕ್ಷಾಯುರ್ವೇದ, ಸುಗಂಧವಾದ, ಸೂಪಶಾಸ್ತ್ರ, ವೈದ್ಯ, ವಿಷತತ್ತ್ವ, ಲಕ್ಷಣ, ಶಕುನ-ಇವು ಪ್ರತಿಪಾದಿತ ವಿಷಯಗಳು, ಇಲ್ಲಿ ಬಂದಿರುವುದೆಲ್ಲ ಜನಸಾಮಾನ್ಯರಿಗೆ ಅವಶ್ಯಕವಾದ ಸಂಗತಿಗಳು ಮಾತ್ರ. ಕವಿ ಎಲ್ಲವನ್ನೂ ಸಂಕ್ಷಿಪ್ತವಾಗಿ ಸಾಧ್ಯವಾದ ಮಟ್ಟಿಗೆ ತಿಳಿಗನ್ನಡ ಭಾಷೆಯಲ್ಲಿ ನಿರೂಪಿಸಿದ್ದಾನೆ. ಒಂದು ರೀತಿಯಿಂದ ಇದನ್ನು ಆ ಕಾಲದ ಸಾಮಾನ್ಯ ಗೃಹವಿಶ್ವಕೋಶವೆಂದು ಹೇಳಬಹುದು. ಅನಂತರ ಬಂದ ಶ್ರೀಧರಾಚಾರ್ಯ, ಕೀರ್ತಿವರ್ಮ ಮುಂತಾದ ಶಾಸ್ತ್ರಗ್ರಂಥಕಾರರಿಗೆ ಈತನ ಪುಸ್ತಕವೇ ಪ್ರೇರಕವಾಗಿರುವಂತೆ ತೋರುತ್ತದೆ. ಈ ಕೃತಿ ಬ್ರಾಹ್ಮಣ ಕವಿಯೊಬ್ಬನಿಂದ ಕನ್ನಡದಲ್ಲಿ ರಚಿತವಾದ ಪ್ರಥಮ ಶಾಸ್ತ್ರಕೃತಿ. (ಬಿ.ಎಸ್.ಕೆ.ಯು.)